ಸರ್ಕಾರದಿಂದ ವೃತ್ತಿಪರ ಶಿಕ್ಷಣಕ್ಕೆ ಸಿಗುವ ಆದ್ಯತೆ ಪ್ರಾಥಮಿಕ ಶಿಕ್ಷಣಕ್ಕೆ ಏಕಿಲ್ಲ: ನ್ಯಾ. ಯು ಯು ಲಲಿತ್ ಪ್ರಶ್ನೆ

ಕಲಬುರಗಿ: ಸರ್ಕಾರದ ವತಿಯಿಂದ ವೃತ್ತಿಪರ ಶಿಕ್ಷಣಕ್ಕೆ ನೀಡುತ್ತಿರುವ ಹೆಚ್ಚಿನ ಆದ್ಯತೆ ಪ್ರಾಥಮಿಕ, ಪ್ರೌಢ ಶಿಕ್ಷಣಗಳಿಗೆ ಏಕೆ ನೀಡುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಯು ಯು ಲಲಿತ್‌ ಪ್ರಶ್ನಿಸಿದರು.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕಲಬುರಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಇಲ್ಲಿನ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನು ಓದಿ: ಪೂರ್ವಗ್ರಹ ಮನಸ್ಥಿತಿಯಿಂದ ಹೊರಬನ್ನಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಛೀಮಾರಿ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಯು ಯು ಲಲಿತ್‌ ಮಾತನಾಡಿ ʻʻ“ವರ್ಗ, ಸ್ಥಾನಮಾನ, ಅಂತಸ್ತು ಅಥವಾ ಮಗು ಇರುವ ಹಂತದ ಭೇದವಿಲ್ಲದೆ ಅಭಿವೃದ್ಧಿಯ ಫಲ, ಶಿಕ್ಷಣದ ಉಪಯುಕ್ತತೆ ಸಮುದಾಯಕ್ಕೆ ಸಲ್ಲಬೇಕು ಎಂಬುದು ಸುಸ್ಥಿರ ಅಭಿವೃದ್ಧಿಯ ಗುರಿಗಳಲ್ಲಿ ಒಂದಾಗಿದೆ. ನಮ್ಮ ಶಿಕ್ಷಣ ಮಾದರಿ ಕೆಲವರಿಗೆ ಅದ್ಭುತವಾದ ಶಿಕ್ಷಣ ವ್ಯವಸ್ಥೆ ಮತ್ತು ಕೆಲವರಿಗೆ ನೆಪಮಾತ್ರದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಅನುವು ಮಾಡಿಕೊಡಬಾರದು. ನಮ್ಮ ಶಿಕ್ಷಣದ ಮಟ್ಟ ಸಮಾನ ರೂಪದಲ್ಲಿರಬೇಕು” ಎಂದು ಹೇಳಿದರು.

‘ದೇಶದಲ್ಲಿ ಎರಡು ಸಂಗತಿಗಳಿಗೆ ಆದ್ಯತೆ ನೀಡಬೇಕಾಗಿದೆ. ಮೊದಲನೇಯದು ಪ್ರಾಥಮಿಕ ಶಾಲಾ ಹಂತದಲ್ಲೇ ಮಕ್ಕಳಿಗೆ ಅವರ ಎಲ್ಲ ಸಾಮರ್ಥ್ಯವನ್ನು ಹೊರಹಾಕುವ ಅವಕಾಶವನ್ನ ನೀಡುವ ವಾತಾವರಣವನ್ನು ಸೃಷ್ಟಿಸುವುದು. ಎರಡನೇಯದು ಮಹಿಳಾ ಸಬಲೀಕರಣ. ರಾಜಸ್ಥಾನದಂತಹ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಅವಕಾಶಗಳಿಲ್ಲದ ರಾಜ್ಯದಲ್ಲಿಯೂ ಮಹಿಳೆಯರು ಉತ್ತಮ ಶಿಕ್ಷಣ ಪಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಇತ್ತೀಚೆಗೆ ರಾಜ್ಯದಲ್ಲಿ ಹೊಸದಾಗಿ 190 ಯುವ ನ್ಯಾಯಾಧೀಶರು ತರಬೇತಿ ಪಡೆಯುವಾಗ ಅವರೊಂದಿಗೆ ಸಂವಾದ ನಡೆಸಲು ಹೋಗಿದ್ದೆ. ಅಲ್ಲಿ 126 ಜನ ಮಹಿಳೆಯರೇ ಇದ್ದರು. ಉತ್ತಮ ಅವಕಾಶ ಸಿಕ್ಕರೆ ಹೆಣ್ಣುಮಕ್ಕಳು ಮುಖ್ಯವಾಹಿನಿಗೆ ಬರುವುದರಲ್ಲಿ ಸಂಶಯವೇ ಇಲ್ಲ’ ಎಂದರು.

ಇದನ್ನು ಓದಿ: 13 ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು

“ವೃತ್ತಿಪರ ಶಿಕ್ಷಣದ ವಿಚಾರಕ್ಕೆ ಬಂದಾಗ ಉದಾಹರಣೆಗೆ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಐಐಟಿ ಮುಂಚೂಣಿಯಲ್ಲಿದೆ ಅಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ಏಮ್ಸ್‌ ರೀತಿಯ ಅದ್ಭುತ ಸಂಸ್ಥೆಗಳಿವೆ. ಹಾಗೆಯೇ ವಾಸ್ತುಶಿಲ್ಪ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜೆಜೆ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ ಇದೆ. ಆದರೆ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇಂತಹ ಸಂಸ್ಥೆಗಳು ಏಕೆ ಇಲ್ಲ ಎಂಬುದು ಆತಂಕಕಾರಿ ವಿಚಾರ. ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುವುದು ಅಪಮಾನಕರ ಎಂದು ಭಾವಿಸಲಾಗುತ್ತಿದೆ ಏಕೆ? ವೃತ್ತಿಪರ ಶಿಕ್ಷಣದ ವಿಚಾರದಲ್ಲಿ ಉತ್ತಮವಾದುದನ್ನು ಮಾಡಲು ಸಾಧ್ಯವಿರುವಾಗ ಪ್ರಾಥಮಿಕ ಅಥವಾ ಪ್ರೌಢ ಶಿಕ್ಷಣದ ಹಂತದಲ್ಲಿ ಏಕೆ ಇಲ್ಲ? ಇಲ್ಲೇನೋ ಕಳೆದುಹೋಗಿದೆ ಎಂದು ಅನ್ನಿಸುತ್ತಿದೆ. ಇದು ಚಿಂತನಾರ್ಹ ವಿಚಾರ ” ಎಂದು ಅವರು ಅಭಿಪ್ರಾಯಪಟ್ಟರು.

ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಹದಿನೇಳು ಅಂಶಗಳಿದ್ದು ಅವುಗಳಲ್ಲಿ ಎರಡನೆಯದು ಮಹಿಳೆಯರ ಸಬಲೀಕರಣ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

“ಮಗುವಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಈ ಹಿಂದೆ ಹೇಳಿದಂತೆ ಎಲ್ಲರೂ ಉತ್ತಮ ಗುಣಮಟ್ಟದ ಕಾನೂನು ನೆರವು ಪಡೆಯಬೇಕಿದೆ.” ಎಂದ ಅವರು ಇದಕ್ಕಾಗಿ ಹಿರಿಯ ವಕೀಲರು ಸೇರಿದಂತೆ ನ್ಯಾಯವಾದಿ ವರ್ಗ ಇದನ್ನು ತಮ್ಮ ಆಯ್ಕೆಯ ಕ್ಷೇತ್ರವನ್ನಾಗಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. “ಬಡವರಿಗೆ ಕಾನೂನು ನೆರವು ಎಂಬುದು ಬಡ ಕಾನೂನು ನೆರವು ಎಂದಾಗಬಾರದು. ಉತ್ತಮ ಗುಣಮಟ್ಟದ, ಉತ್ತಮ ಮಾನದಂಡದ ಹಾಗೂ ಉತ್ತಮ ಹಂತದ ನೆರವು ದೊರೆಯಬೇಕು” ಎಂದರು.

ಗೌರವ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಮಾತನಾಡಿ “ಕೋವಿಡ್‌–19 ಸೋಂಕಿನ ಎರಡನೇ ಅಲೆಯು ಜನತೆಯನ್ನು ಸಾಕಷ್ಟು ಸಂಕಟಕ್ಕೀಡು ಮಾಡಿದ್ದು, ನ್ಯಾಯವನ್ನು ಪಡೆಯಲು ಬೇಕಾದ ಸಂಪನ್ಮೂಲ ಅವರ ಬಳಿ ಇಲ್ಲವಾಗಿದೆ. ಹೀಗಾಗಿ, ಸಮಾಜದಲ್ಲಿ ಅತ್ಯಂತ ಹಿಂದುಳಿದಿರುವ ಜನತೆಗೂ ಕಾನೂನು ಸೇವಾ ಪ್ರಾಧಿಕಾರವು ನೆರವಿಗೆ ಬರಬೇಕಾದ ಅಗತ್ಯವಿದೆ. ಅಲ್ಲದೆ, ದೇಶಾದ್ಯಂತ ಕಾನೂನು ಜಾಗೃತಿ ಅಭಿಯಾನ ಎಂಬುದು ನ್ಯಾ. ಲಲಿತ್‌ ಅವರ ಕನಸಿನ ಕೂಸಾಗಿದೆ. ಇದು ಕಾನೂನು ಸೇವಾ ಸಂಸ್ಥೆಗಳ ಇತಿಹಾಸದಲ್ಲಿ ಒಂದು ಮೈಲಿಗಲ್ಲು” ಎಂದು ಶ್ಲಾಘಿಸಿದರು.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಯು.ಯು. ಲಲಿತ್ ಹಾಗೂ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರು ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಕೆಳಗಿಳಿದು ಬಂದು ಸಭಿಕರ ಸಾಲಿನಲ್ಲಿ ಬಂಜಾರ ಪೋಷಾಕು ಧರಿಸಿ ಕುಳಿತಿದ್ದ ಮಹಿಳೆಯರನ್ನು ಭೇಟಿ ಮಾಡಿದರು. ಅವರ ಆಚಾರ, ವಿಚಾರಗಳನ್ನು ತಿಳಿದುಕೊಂಡರು.

ಕಾರ್ಯಕ್ರಮದ ವೇದಿಕೆಗೆ ಬರುವ ಸಂದರ್ಭದಲ್ಲಿ ಬಂಜಾರ ಮಹಿಳೆಯರು ಹಾಡು ಹಾಡುತ್ತಾ ನ್ಯಾಯಮೂರ್ತಿಗಳನ್ನು ಸ್ವಾಗತಿಸಿದರು.

Donate Janashakthi Media

Leave a Reply

Your email address will not be published. Required fields are marked *