ನವದೆಹಲಿ: ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಉತ್ತರ ಪ್ರದೇಶದ ಸೀತಾಪುರದಲ್ಲಿ ಅವರ ವಿರುದ್ಧ ದಾಖಲಾದ ದೂರಿಗೆ ಸಂಬಂಧಿಸಿದಂತೆ ಈ ಜಾಮೀನು ನೀಡಲಾಗಿದೆ. ಅಲಹಾಬಾದ್ ಹೈಕೋರ್ಟಿನ ಆದೇಶ ಪ್ರಶ್ನಿಸಿ ಜುಬೇರ್ ಸಲ್ಲಿಸಿರುವ ಅರ್ಜಿಯ ಕುರಿತು ಉತ್ತರ ಪ್ರದೇಶ ಪೊಲೀಸರಿಗೆ ನೋಟಿಸು ಜಾರಿ ಮಾಡಲಾಗಿದೆ.
ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ನ್ಯಾಯಪೀಠ ಮೊಹಮ್ಮದ್ ಜುಬೇರ್ ಅವರಿಗೆ ಐದು ದಿನಗಳ ಜಾಮೀನು ನೀಡಿದೆ ಮತ್ತು ಹೆಚ್ಚಿನ ವಿಚಾರಣೆಗೆ ಸಾಮಾನ್ಯ ಪೀಠಕ್ಕೆ ವರ್ಗಾಯಿಸಿದೆ.
ಜುಬೇರ್ ಈ ಅವಧಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಟ್ವೀಟ್ ಮಾಡಕೂಡದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಬೆಂಗಳೂರು ಸೇರಿದಂತೆ ಮತ್ತಿತರ ಸ್ಥಳಗಳಲ್ಲಿ ಯಾವುದೇ ತಾಂತ್ರಿಕ ಸಾಕ್ಷ್ಯಗಳನ್ನು ನಾಶ ಮಾಡದಂತೆ ಷರತ್ತು ವಿಧಿಸಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಜುಬೇರ್ ಪರ ವಾದ ಮಂಡಿಸಿದ, ಹಿರಿಯ ವಕೀಲ ಕಾಲಿನ್ ಗೊನ್ಸಾಲ, ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಸಾಧ್ಯವಿಲ್ಲ. ಕೇವಲ ಒಂದು ಟ್ವೀಟ್ ಆಧಾರದ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ. ಪೊಲೀಸ್ ಮತ್ತು ನ್ಯಾಯಾಂಗ ಬಂಧನ ಪ್ರಶ್ನೆಗಳು ಅಪ್ರಸ್ತುತ. ನನ್ನ ಟ್ವೀಟ್ ಬಗ್ಗೆ ನಾನು ಒಪ್ಪಿಕೊಂಡಿದ್ದೇನೆ ಇದು ಅಪರಾಧವಾ? ಇದನ್ನು ತನಿಖೆ ನಡೆಸುವ ಅಗತ್ಯವಿಲ್ಲ. ಪ್ರಕರಣದ ಎಲ್ಲ ಪ್ರಕ್ರಿಯೆಗಳನ್ನು ರದ್ದು ಮಾಡಬೇಕು ಎಂದು ಮನವಿ ಮಾಡಿದರು.
ದೇಶ ಎಲ್ಲಿಗೆ ಬಂದಿದೆ ನೋಡಿ, ಸುಳ್ಳುಗಳನ್ನು ಬಹಿರಂಗಡಿಸುವ ವ್ಯಕ್ತಿಯೊಬ್ಬರು ಜೈಲಿನಲ್ಲಿದ್ದು ಜಾಮೀನಿಗಾಗಿ ಕಾಯಬೇಕಿದೆ. ದ್ವೇಷ ಪ್ರಚೋದನೆ ಮಾಡುವವರು ಸಂವಿಧಾನ ಮತ್ತು ನ್ಯಾಯಾಧೀಶರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಮೊಹಮ್ಮದ್ ಜುಬೇರ್ ಅವರು ಇಂಥಾ ವಿಷ ಕಾರುವವರನ್ನು ಬಹಿರಂಗ ಪಡಿಸಿದ್ದಾರೆ. ಆದರೆ ಇದಕ್ಕಾಗಿ ಅವರು ಜೈಲು ಶಿಕ್ಷೆ ಅನುಭವಿಸಬೇಕಾಗಿ ಬಂದಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಪೊಲೀಸರ ಪರ ವಾದ ಪ್ರತಿವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೆಳ ಹಂತದ ನ್ಯಾಯಾಲಯ ಜಾಮೀನು ರದ್ದು ಮಾಡಿದೆ. 14 ದಿನಗಳ ಕಸ್ಟಡಿ ನೀಡಿದೆ. ಆರೋಪಿ ಉದ್ದೇಶ ಪೂರ್ವಕವಾಗಿ ಟ್ವೀಟ್ ಮಾಡಿದ್ದಾರೆ. ಈ ರೀತಿಯ ಟ್ವೀಟ್‌ಗಳನ್ನು ಕೋರ್ಟ್ ಪ್ರೋತ್ಸಾಹಿಸಬಾರದು. ಮೊಹಮ್ಮದ್ ಜುಬೈದ್ ವಿರುದ್ದ 295ಎ (ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ) ಮತ್ತು 153ಎ (ಧರ್ಮ, ಜನಾಂಗ, ಜನ್ಮಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಪ್ರಾಥಮಿಕ ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನೆಲೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.
ಅಲ್ಲದೆ, ಜನರಲ್ ತುಷಾರ್ ಮೆಹ್ತಾ, ಇಲ್ಲಿರುವುದು ಟ್ವೀಟ್ ವಿಷಯ ಅಲ್ಲ. ಜುಬೇರ್ ಸಮಾಜವನ್ನು ಅಸ್ಥಿರಗೊಳಿಸಲಿರುವ ಭಾಗವಾಗಿ ಇಂಥಾ ಟ್ವೀಟ್ ಗಳನ್ನು ಮಾಡಿದ್ದಾರೆ ಎಂದು ವರದಿಯಾಗಿದೆ. ಅವರನ್ನು ಸಾಮಾನ್ಯ ಅಪರಾಧಿ ಎಂದ ಮೆಹ್ತಾ, ಈ ಪ್ರಕರಣದಲ್ಲಿ ಹಣ ವ್ಯವಹಾರದ ಬಗ್ಗೆಯೂ ಆರೋಪವಿದೆ ಎಂದಿದ್ದಾರೆ.
ಮಹಾಂತ ಬಜರಂಗ ಮುನಿ, ಯತಿ ನರಸಿಂಗಾನಂದ ಮತ್ತು ಸ್ವಾಮಿ ಆನಂದ್ ಸ್ವರೂಪ್ ಅವರನ್ನು ದ್ವೇಷ ಹರಡುವವರು ಎಂದು ಟ್ವೀಟ್ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಉತ್ತರ ಪ್ರದೇಶದ ಸೀತಾಪುರ ಪೊಲೀಸರು ಜುಬೈರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
2018ರಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ ಎಂಬ ಆರೋಪದಲ್ಲಿ ದೆಹಲಿ ಪೊಲೀಸು ಮೊಹಮ್ಮದ್ ಜುಬೇರ್ ಅವರನ್ನು ಬಂಧಿಸಿತು. ಮತ್ತೊಂದು ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮೊಹಮ್ಮದ್ ಜುಬೈರ್ ದೆಹಲಿ ಪೊಲೀಸರಿಗೆ ಶರಣಾಗಬೇಕಿದೆ.