ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ : ಅವಕಾಶ ನಿರಾಕರಿಸಿದ ಸುಪ್ರೀಂ ಕೋರ್ಟ್

  • ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿವಾದ
  • ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ
  • ಗಣೇಶ ಹಬ್ಬ ಆಚರಿಸಲು ಅನುಮತಿ ನಿರಾಕರಿಸಿದ ಸುಪ್ರೀಂಕೋರ್ಟ್

ವದೆಹಲಿ: ಬೆಂಗಳೂರು ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಚಾಮರಾಜಪೇಟೆ ಈಗ ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಹಿಂದುತ್ವ ಸಂಘಟನೆಗಳು ಬೇರೆ ಕಡೆ ಗಣೇಶೋತ್ಸವ ಆಚರಣೆ ಮಾಡಲು ಸುಪ್ರೀಂ ಕೋರ್ಟ್ ಸೂಚಿಸಿದೆ.

ಕರ್ನಾಟಕ ವಕ್ಫ್‌ ಮಂಡಳಿ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಅಭಯ್‌ ಎಸ್‌. ಓಕಾ ಹಾಗೂ ಎಂ.ಎಂ.ಸುಂದರೇಶ್ ಅವರನ್ನು ಒಳಗೊಂಡ ಪೀಠವು ಈ ಆದೇಶ ಹೊರಡಿಸಿತು.

ಕರ್ನಾಟಕ ವಕ್ಫ್‌ ಮಂಡಳಿ ಪರವಾಗಿ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದ ಮಂಡಿಸಿ, ‘ಈದ್ಗಾ ಮೈದಾನ ಮುಸ್ಲಿಮರಿಗೆ ಸೇರಿದ್ದು. ಇದೀಗ 200 ವರ್ಷಗಳ ಹಳೆಯ ಸಂಪ್ರದಾಯವನ್ನು ಬದಲಿಸುವುದು ಏಕೆ. ಈದ್ಗಾ ಮೈದಾನ ವಕ್ಫ್‌ ಮಂಡಳಿಯ ಆಸ್ತಿ. ರಾಜ್ಯ ಸರ್ಕಾರ ಇದೀಗ ಮಾಲೀಕತ್ವದ ಬಗ್ಗೆ ಪ್ರಶ್ನೆ ಮಾಡಿದೆ. ಗಣೇಶ ಉತ್ಸವಕ್ಕೆ ಅವಕಾಶ ನೀಡುವುದು ನಿಯಮಬಾಹಿರ ಎಂದು ವಾದಿಸಿದರು.

ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಮುಕುಲ್‌ ರೋಹಟಗಿ ವಾದ ಮಂಡಿಸಿ, ‘ಈ ಜಾಗ ರಾಜ್ಯ ಸರ್ಕಾರಕ್ಕೆ ಸೇರಿದ್ದು. ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಕೆಯಾಗಿದ್ದು ತಡೆಯಾಜ್ಞೆ ಅರ್ಜಿ. ಮಾಲೀಕತ್ವ ನಿರ್ಧರಿಸುವ ಅರ್ಜಿಯಲ್ಲ’ ಎಂದರು.

‘ಮೈದಾನದ ಮಾಲೀಕತ್ವ ಕಂದಾಯ ಇಲಾಖೆಗೆ ಸೇರಿದೆ‘ ಎಂಬ ಸರ್ಕಾರದ ಆದೇಶವನ್ನು ಪ್ರಶ್ನಿಸಿ ವಕ್ಫ್‌ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಮತ್ತು ಬೆಂಗಳೂರು ಜಿಲ್ಲೆ ವಕ್ಫ್‌ ಸಲಹಾ ಸಮಿತಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆ.25ರಂದು ವಿಚಾರಣೆ ನಡೆಸಿ ಮಧ್ಯಂತರ ಆದೇಶ ಹೊರಡಿಸಿತ್ತು.

‘ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ರಮ್ಜಾನ್ ಮತ್ತು ಬಕ್ರೀದ್ ದಿನದಂದು ಪ್ರಾರ್ಥನೆ ಸಲ್ಲಿಸಬಹುದು. ಈ ಎರಡು ದಿನಗಳನ್ನು ಹೊರತು ಪಡಿಸಿ ಬೇರಾವುದೇ ದಿನ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. ಬಿಬಿಎಂಪಿ ಮತ್ತು ಸರ್ಕಾರ ಮೈದಾನದಲ್ಲಿ ಗಣರಾಜೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಗೆ ಅನುಮತಿ ನೀಡಬಹುದು ಮತ್ತು ಮೈದಾನವನ್ನು ಆಟದ ಬಳಕೆಗೆ ಮಾತ್ರವೇ ಸೀಮಿತಗೊಳಿಸಬೇಕು’ ಎಂದು ಏಕಸದಸ್ಯ ನ್ಯಾಯಪೀಠ ನಿರ್ದೇಶಿಸಿತ್ತು.

ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಲಿಸಿದ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಮತ್ತು ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಆಗಸ್ಟ್‌ 26ರಂದು ವಿಚಾರಣೆ ನಡೆಸಿತ್ತು.

‘ಏಕಸದಸ್ಯ ನ್ಯಾಯಪೀಠ ನೀಡಿರುವ ನಿರ್ದೇಶನಗಳಲ್ಲಿ ಯಾವುದೇ ಬದಾಲಾವಣೆ ಇರುವುದಿಲ್ಲ. ಆದಾಗ್ಯೂ, ಈದ್ಗಾ ಮೈದಾನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ಕೋರಿ ಬೆಂಗಳೂರು ಜಿಲ್ಲಾಧಿಕಾರಿ ಸ್ವೀಕರಿಸಿರುವ ಮನವಿ ಪತ್ರಗಳನ್ನು ಇದೇ 31ರಿಂದ ಸೀಮಿತ ಅವಧಿಗೆ ಪರಿಗಣಿಸಿ ಸರ್ಕಾರ ಸೂಕ್ತ ಆದೇಶ ಹೊರಡಿಸಬಹುದು’ ಎಂದು ವಿಭಾಗೀಯ ನ್ಯಾಯಪೀಠ ಸ್ಪಷ್ಟಪಡಿಸಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ವಕ್ಫ್‌ ಮಂಡಳಿಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

Donate Janashakthi Media

Leave a Reply

Your email address will not be published. Required fields are marked *