- ಏಕಕಾಲಕ್ಕೆ 68 ನೂತನ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸ್ಸು
- ಹೆಸರುಗಳನ್ನು ಶಿಫಾರಸ್ಸು ಮಾಡಿದ ಸುಪ್ರೀಂ ಕೋರ್ಟ್ ಕೊಲಿಜಿಯಂ
- ಅಲಹಾಬಾದ್ ಹೈಕೋರ್ಟ್‌ಗೆ 16 ಮಂದಿ
- ಕರ್ನಾಟಕ ಹೈಕೋರ್ಟ್‌ಗೆ ಇಬ್ಬರು
- ಉಚ್ಛನ್ಯಾಯಾಲಯಗಳಲ್ಲಿ 60 ಲಕ್ಷ ಪ್ರಕರಣಗಳು ಬಾಕಿ
ನವದೆಹಲಿ: ಕರ್ನಾಟಕ, ಕೊಲ್ಕತ್ತಾ, ಮದ್ರಾಸ್, ಅಸ್ಸಾಂ, ಪಂಜಾಬ್, ಕೇರಳ ಸೇರಿದಂತೆ ದೇಶದ 12 ರಾಜ್ಯಗಳ ಉಚ್ಛ ನ್ಯಾಯಾಲಯಗಳಿಗೆ 68 ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಕೊಲಿಜಿಯಂ ಸಮಿತಿಯು ಹೆಸರುಗಳನ್ನು ಶಿಫಾರಸ್ಸು ಮಾಡಿದೆ.
ಇದೇ ಮೊದಲ ಬಾರಿಗೆ ಅತ್ಯಧಿಕ ಸಂಖ್ಯೆಗಳಲ್ಲಿ ವಿವಿದ ರಾಜ್ಯಗಳಲ್ಲಿನ ಉಚ್ಛ ನ್ಯಾಯಾಲಯಗಳಲ್ಲಿ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳಲಿದ್ದಾರೆ. ಈ ಬಗ್ಗೆ ಇಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆ ಮೇಲೂ ಪುನರುಚ್ಛಾರ ಮಾಡಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನಾವು ನೀಡಿರುವ ಶಿಫಾರಸುಗಳನ್ನು ಶೀಘ್ರದಲ್ಲೇ ಕೇಂದ್ರ ಸರ್ಕಾರ ಜಾರಿಗೆ ತರಲಿದೆ ಎಂಬ ವಿಶ್ವಾಸವಿದೆ ಎಂದರು ಹೇಳಿದರು.
ಇದನ್ನು ಓದಿ: ಕರ್ನಾಟಕ ಹೈಕೋರ್ಟ್‌ನ 6 ಮಂದಿ ನ್ಯಾಯಮೂರ್ತಿಗಳನ್ನು ಖಾಯಂಗೊಳಿಸಿದ ಸುಪ್ರೀಂ ಕೋರ್ಟ್ ಕೊಲಿಜಿಯಂ
ಅಲ್ಲದೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕದ ಸಂದರ್ಭದಲ್ಲೇ 68 ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯನ್ನು ಕೂಡ ಪೂರ್ಣಗೊಳಿಸುವ ವಿಶ್ವಾಸವಿದೆ. ಇದೇ ವೇದಿಕೆಯಲ್ಲಿ ಕೇಂದ್ರ ಕಾನೂನು ಸಚಿವ ಕಿರೆಣ್ ರಿಜಿಜು ಕೂಡ ಇದ್ದಾರೆ. ಅವರು ಈ ಕುರಿತು ಶೀಘ್ರದಲ್ಲೇ ಕ್ರಮ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಬಹಳ ಕಿರಿಯ ಮತ್ತು ಪ್ರತಿಭಾವಂತ ಕಾನೂನು ಸಚಿವರಾದ ಕಿರಣ್ ರಿಜಿಜು ಅವರನ್ನು ಮೊದಲ ಬಾರಿಗೆ ನಾನು ಭೇಟಿ ಮಾಡಿದಾಗ ಅವರು ಕಾಲೇಜು ವಿದ್ಯಾರ್ಥಿ ಎಂದುಕೊಂಡಿದ್ದೆ. ಅವರು ನೋಡಲು ಇನ್ನೂ ವಿದ್ಯಾರ್ಥಿಯಂತೇ ಇದ್ದಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ತಮಾಷೆ ಮಾಡಿದರು.
ಕರ್ನಾಟಕ, ಅಲಹಾಬಾದ್, ರಾಜಸ್ಥಾನ, ಕೊಲ್ಕತ್ತಾ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಮದ್ರಾಸ್, ಮಧ್ಯಪ್ರದೇಶ, ಪಂಜಾಬ್ ಮತ್ತು ಹರಿಯಾಣ, ಕೇರಳ, ಛತ್ತಿಸ್ಗಢ ಮತ್ತು ಅಸ್ಸಾಂ ಹೈಕೋರ್ಟ್ ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಶಿಫಾರಸು ಮಾಡಲಾಗಿದೆ.
ಇದನ್ನು ಓದಿ: ಕೋಮುಸೌಹಾರ್ದತೆಗೆ ಧಕ್ಕೆ ತರಲು ಸುಳ್ಳು ಸುದ್ದಿ ಹರಡುವಿಕೆ: ಸುಪ್ರೀಂ ಕೋರ್ಟ್ ಕಳವಳ
ಆಗಸ್ಟ್ 25 ಮತ್ತು ಸೆಪ್ಟೆಂಬರ್ 1 ರಂದು ನಡೆದ ಕೊಲಿಜಿಯಂ ಪರಿಶೀಲನೆಯಲ್ಲಿ 100 ಮಂದಿಯ ಹೆಸರುಗಳಿದ್ದವು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ಮೂರು ಜನರ ಕೊಲಿಜಿಯಂ ಏಕಕಾಲದಲ್ಲಿ 68 ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಿತ್ತು. ಈ 68 ನ್ಯಾಯಮೂರ್ತಿಗಳ ಪೈಕಿ 10 ಮಹಿಳಾ ನ್ಯಾಯಮೂರ್ತಿಗಳ ಹೆಸರನ್ನು ಕೂಡ ಶಿಫಾರಸು ಮಾಡಲಾಗಿತ್ತು. ಇದರಲ್ಲಿ ಬಾರ್ ಅಸೋಸಿಯೇಷನ್ನಿಂದ ಬಂದ 44 ಹೆಸರುಗಳು, ನ್ಯಾಯಾಂಗ ಸೇವೆಯಿಂದ ಬಂದ 24 ಹೆಸರುಗಳಿದ್ದವು.
ಅತಿಹೆಚ್ಚು ಸಂಖ್ಯೆಯ ನ್ಯಾಯಮೂರ್ತಿಗಳನ್ನು ಅಲಾಹಾಬಾದ್ ಹೈಕೋರ್ಟ್‌ಗೆ ಶಿಫಾರಸು ಮಾಡಲಾಗಿದೆ. ಅವರಲ್ಲಿ 13 ವಕೀಲರು 3 ನ್ಯಾಯಮೂರ್ತಿಗಳು ಸೇರಿದ್ದಾರೆ. 10 ಹೆಸರುಗಳನ್ನು ಕಲ್ಕತ್ತಾ ಹೈಕೋರ್ಟ್‌ಗೆ ಶಿಫಾರಸು ಮಾಡಲಾಗಿದೆ. 8 ನ್ಯಾಯಮೂರ್ತಿಗಳನ್ನು ಕೇರಳ ಹೈಕೋರ್ಟ್‌ಗೆ, ಕೊಲ್ಕತ್ತ ಹಾಗೂ ರಾಜಸ್ಥಾನಕ್ಕೆ ತಲಾ 6, ಗುಜರಾತ್ ಮತ್ತು ಜಾರ್ಖಾಂಡ್‌ಗೆ ತಲಾ 5, ಪಂಜಾಬ್, ಹರಿಯಾಣ, ಮದ್ರಾಸ್‌ಗೆ ತಲಾ 4, ಛತ್ತೀಸ್‌ಗಡಕ್ಕೆ ಇಬ್ಬರು, ಮಧ್ಯಪ್ರದೇಶಕ್ಕೆ ಒಬ್ಬರು ನ್ಯಾಯಮೂರ್ತಿಗಳನ್ನು ನೇಮಿಸುವಂತೆ ಒಕ್ಕೂಟ ಸರ್ಕಾರಕ್ಕೆ ಸೂಚಿಸಿದೆ. ಕರ್ನಾಟಕಕ್ಕೆ ಇಬ್ಬರು ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ. ರಮಣ, ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್ ಅವರನ್ನೊಳಗೊಂಡ ಕೊಲಿಜಿಯಂ ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸು ಮಾಡಿದೆ. ಹೈಕೋರ್ಟ್ಗಳಲ್ಲಿ ಸುಮಾರು 60 ಲಕ್ಷ ಕೇಸುಗಳ ವಿಚಾರಣೆ ಬಾಕಿ ಉಳಿದಿರುವುದರಿಂದ ತ್ವರಿತವಾಗಿ ನ್ಯಾಯಮೂರ್ತಿಗಳ ನೇಮಕಗೊಳ್ಳಬೇಕಾಗಿದೆ.