ಮೀಸಲಾತಿ ಕುರಿತು ನಿರ್ಧಾರವಾಗುವವರೆಗೂ ನೀಟ್ ಸ್ನಾತಕೋತ್ತರ ಸಮಾಲೋಚನೆ ಪ್ರಕ್ರಿಕೆ ಇಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಅಖಿಲ ಭಾರತ ಕೋಟಾ ವೈದ್ಯಕೀಯ ಸೀಟುಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಮೀಸಲಾತಿ ನೀಡುವ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇತ್ಯರ್ಥವಾಗುವವರೆಗೂ 2021ನೇ ಸಾಲಿನ ನೀಟ್‌ ಸ್ನಾತಕೋತ್ತರ ಸಮಾಲೋಚನೆ ಪ್ರಕ್ರಿಯೆ ಆರಂಭ ಮಾಡುವುದಿಲ್ಲವೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸಮಾಲೋಚನಾ ಪ್ರಕ್ರಿಯೆ ಬಗ್ಗೆ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ಬಿ.ವಿ.ನಾಗರತ್ನ ನೇತೃತ್ವದ ನ್ಯಾಯಪೀಠದ ಎದುರು ಹಿರಿಯ ವಕೀಲ ಅರವಿಂದ ದಾತಾರ್ ಪ್ರಸ್ತಾಪಿಸಿದ ನಂತರ ಕೇಂದ್ರ ಸರ್ಕಾರದ ಕಾನೂನು ಅಧಿಕಾರಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ನ್ಯಾಯಪೀಠದ ಮುಂದೆ ಮೇಲಿನಂತೆ ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ: ಯುಪಿಎಸ್‍ಸಿ, ನೀಟ್‍ ಆಯ್ತು, ಈಗ ಬ್ಯಾಂಕಿಂಗ್ ಪರೀಕ್ಷೆಗೂ ಕನ್ನಡವಿಲ್ಲ

“ಇದೇ ಅಕ್ಟೋಬರ್ 24ರಿಂದ 29ರವರೆಗೆ ಈಗಾಗಲೇ ವೇಳಾಪಟ್ಟಿ ಹೊರಡಿಸಲಾಗಿದೆ. ಇದರರ್ಥ ಎಲ್ಲವೂ ಮುಗಿದಿದೆ” ಎಂದು ದಾತಾರ್ ಆತಂಕ ವ್ಯಕ್ತಪಡಿಸಿದರು. “ನೀವು ಹಿಡಿದಿರುವ ನೋಟಿಸ್‌ ಕೇವಲ ಸೀಟುಗಳ ಪರಿಶೀಲನೆಗಾಗಿ ಅದನ್ನು ಕಾಲೇಜುಗಳಿಗೆ ನೀಡಿರುವ ನೋಟಿಸ್‌ ಆಗಿದೆ” ಎಂದು ನಟರಾಜ್‌ ಹೇಳಿದರು.

“ನಾನು ಆರೋಗ್ಯ ಸೇವೆಗಳ ನಿರ್ದೇಶನಾಲಯದಿಂದ ಮಾಹಿತಿ ಪಡೆದುಕೊಂಡಿದ್ದೇನೆ” ಎಂದು ದಾತಾರ್ ಹೇಳಿದರು.

ಈ ಮಧ್ಯೆ ಮಧ್ಯಪ್ರವೇಶಿಸಿದ ನ್ಯಾಯಪೀಠ ಸಮಾಲೋಚನೆ ಪ್ರಕ್ರಿಯೆ ಆರಂಭವಾಗುವುದಿಲ್ಲ ಎಂದು ಭರವಸೆ ನೀಡಲು ಸಾಧ್ಯವೇ ಎಂದು ಕೆ ಎಂ ನಟರಾಜ್‌ ಅವರನ್ನು ಪ್ರಶ್ನಿಸಿತು. ಜೊತೆಗೆ “ನಾವು ಪ್ರಕರಣ ನಿರ್ಧರಿಸುವವರೆಗೆ ಸಮಾಲೋಚನೆ ಪ್ರಕ್ರಿಯೆಯನ್ನು ಆರಂಭವಾಗುವುದಿಲ್ಲ ಎನ್ನುವುದಕ್ಕೆ ನಿಮ್ಮ ಮಾತಿನ ಭರವಸೆಯನ್ನು ನಾವು ತೆಗೆದುಕೊಳ್ಳುತ್ತೇವೆ” ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಹೇಳಿದರು.

“ಖಂಡಿತವಾಗಿಯೂ ಹಾಗೆ ಮಾಡಬಹುದು. ಯಾವುದೇ ತೊಂದರೆ ಎದುರಾದಲ್ಲಿ ದಾತಾರ್‌ ಅವರು ನನ್ನನ್ನು ನೇರವಾಗಿ ಸಂಪರ್ಕಿಸಬಹುದು” ಎಂದು ನಟರಾಜ್ ಪ್ರತಿಕ್ರಿಯಿಸಿದರು.

ನ್ಯಾಯಪೀಠವು ಆಶ್ವಾಸನೆಯನ್ನು ದಾಖಲಿಸಿದೆ ಮತ್ತು ನ್ಯಾಯಾಲಯವು ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಾಲೋಚನಾ ಪ್ರಕ್ರಿಯೆ ನಡೆದರೆ “ವಿದ್ಯಾರ್ಥಿಗಳು ಗಂಭೀರ ಸಮಸ್ಯೆಯಲ್ಲಿರುತ್ತಾರೆ” ಎಂದು ಗಮನಿಸಿದೆ.

ಇದನ್ನು ಓದಿ: ತಮಿಳುನಾಡು ವಿಧಾನಸಭೆಯಲ್ಲಿ ನೀಟ್ ವಿರುದ್ಧ ನಿರ್ಣಯ ಮಂಡನೆ

ಸ್ನಾತಕೋತ್ತರ ವೈದ್ಯಕೀಯ ಪ್ರವೇಶಾತಿಗೆ ಅಖಿಲ ಭಾರತ ಕೋಟಾ ಸೀಟುಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ. 27 ಮೀಸಲಾತಿ ಮತ್ತು ಇಡಬ್ಲ್ಯೂಎಸ್‌ಗೆ ಶೇ 10 ಮೀಸಲಾತಿ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಮೀಸಲಾತಿ ನೀಡುವ ಬಗ್ಗೆ ಕೇಂದ್ರ ಮತ್ತು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ(ಎಂಸಿಸಿ) ಜುಲೈ 29 ರ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

ಇಡಬ್ಲ್ಯೂಎಸ್‌ಗೆ ವಾರ್ಷಿಕ ಆದಾಯ ಮಾನದಂಡವಾಗಿ ರೂ. 8 ಲಕ್ಷವನ್ನು ನಿಗದಿಪಡಿಸುವ ಹಿಂದಿನ ತಾರ್ಕಿಕತೆ ಬಗ್ಗೆ ಸುಪ್ರೀಂ ಕೋರ್ಟ್ ಈ ಹಿಂದೆ ಪ್ರಶ್ನಿಸಿ, ಕೇಂದ್ರದ ಪ್ರತಿಕ್ರಿಯೆಯನ್ನು ಕೋರಿತ್ತು.

ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಮುಂದಿನ ಆದೇಶದವರೆಗೆ ನೀಟ್‌ ಸ್ನಾತಕೋತ್ತರ ಸಮಾಲೋಚನೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *