ನವದೆಹಲಿ : ₹500 ಹಾಗೂ ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಕಟಿಸಿದೆ. ನೋಟು ಅಮಾನ್ಯಗೊಳಿಸಿದ ಸರ್ಕಾರದ ನಿರ್ಧಾರವನ್ನು 4-1ರ ಬಹುಮತದ ತೀರ್ಪಿನೊಂದಿಗೆ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠದ ತೀರ್ಪನ್ನು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಬಿ.ವಿ.ನಾಗರತ್ನ ಅವರು ಪ್ರತ್ಯೇಕವಾಗಿ ಪ್ರಕಟಿಸಿದರು.
ನ್ಯಾಯಮೂರ್ತಿಗಳಾದ ಎಸ್.ಎ. ನಜೀರ್, ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಒಮ್ಮತದ ತೀರ್ಪು ಪ್ರಕಟಿಸಿದರೆ, ನ್ಯಾಯಮೂರ್ತಿ ನಾಗರತ್ನ ಭಿನ್ನಮತದ ತೀರ್ಪು ನೀಡಿದರು.
ಆರ್‌ಬಿಐ ಕಾಯ್ದೆಯ ಸೆಕ್ಷನ್ 26 (2)ರ ಅಡಿಯಲ್ಲಿ ಕೇಂದ್ರಕ್ಕಿರುವ ಅಧಿಕಾರದ ಅಂಶವನ್ನು ಪರಿಗಣಿಸಿ ಬಹುಮತದ ತೀರ್ಪಿಗೆ ಭಿನ್ನವಾದ ನಿಲುವನ್ನು ಅವರು ತಳೆದಿದ್ದಾರೆ. ₹500 ಮತ್ತು ₹1,000 ನೋಟುಗಳ ರದ್ದತಿಯನ್ನು ಶಾಸನಬದ್ಧವಾಗಿ ಜಾರಿಗೆ ತರಬೇಕಿತ್ತೇ ಹೊರತು ಅಧಿಸೂಚನೆಯ ಮೂಲಕ ಅಲ್ಲ’ ಎಂದು ಅವರು ಹೇಳಿದ್ದಾರೆ.
‘ನೋಟು ಅಮಾನ್ಯೀಕರಣದ ಕುರಿತು, ಅದರ ಕಾನೂನಾತ್ಮಕ ಅಂಶಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಬೇಕಿತ್ತು. ಗೆಜೆಟ್ ನೋಟಿಫಿಕೇಷನ್ ಮೂಲಕ ಅದನ್ನು ಜಾರಿ ಮಾಡಬಾರದಿತ್ತು. ಇಂತಹ ನಿರ್ಣಾಯಕ, ಪ್ರಮುಖ ವಿಷಯದಲ್ಲಿ ಸಂಸತ್ತನ್ನು ದೂರವಿಟ್ಟು ನಿರ್ಧಾರ ಮಾಡುವುದು ಸಾಧ್ಯವಿಲ್ಲ‘ ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದಿಂದ ನೋಟು ರದ್ದತಿಗೆ ಸಂಬಂಧಿಸಿದಂತೆ ಸ್ವತಂತ್ರವಾದ ಯಾವುದೇ ಅರ್ಜಿ ಸಲ್ಲಿಕೆಯಾಗಿರಲಿಲ್ಲ. ಅಮಾನ್ಯಕ್ಕೆ ಕೇವಲ ಅದರ ಅಭಿಪ್ರಾಯವನ್ನು ಮಾತ್ರ ಪಡೆಯಲಾಗಿತ್ತು. ಅದನ್ನು ಶಿಫಾರಸು ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದೂ ಅವರು ತಮ್ಮ ತೀರ್ಪಿನಲ್ಲಿ ಬರೆದಿದ್ದಾರೆ.
ಇದನ್ನು ಓದಿ: ನೋಟುರದ್ಧತಿ ಅಫಿಡವಿಟ್‌ಗಳು: ಸರಕಾರ ಮತ್ತು ಆರ್‌ಬಿಐ ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳದಿರುವುದೆಷ್ಟು?
ನ್ಯಾಯಮೂರ್ತಿಗಳಾದ ಎಸ್.ಎ. ನಜೀರ್, ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಒಮ್ಮತದ ತೀರ್ಪು ನೀಡಿದರು. ಅವರ ತೀರ್ಪು ಈ ರೀತಿ ಇದೆ. ಕೇಂದ್ರದ ನೋಟು ಅಮಾನ್ಯೀಕರಣ ನೀತಿಯನ್ನು ದೃಢಪಡಿಸಿದ ಸುಪ್ರೀಂ ಕೋರ್ಟ್ ನಿರ್ಣಯ ಪ್ರಕ್ರಿಯೆಯಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿದರು.
ಈ ನಿರ್ಧಾರ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಪ್ರಮಾಣಾನುಗುಣವಾದ ಆಧಾರದ ಮೇಲೆ ನೋಟು ಅಮಾನ್ಯೀಕರಣವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ, ನೋಟುಗಳ ವಿನಿಮಯಕ್ಕೆ ನೀಡಿದ 52 ದಿನಗಳ ಅವಧಿಯು ಅಸಮಂಜಸವಲ್ಲ ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ನೋಟು ಅಮಾನ್ಯೀಕರಣ ನೀತಿಯನ್ನು ಪ್ರಶ್ನೆ ಮಾಡಿ, ಸುಮಾರು 58 ಅರ್ಜಿಗಳು ಸಲ್ಲಿಕೆಯಾಗಿದ್ದವು. ನೋಟುಗಳನ್ನು ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿಸಲಾಗಿತ್ತು. ಈ ಕ್ರಮದಿಂದಾಗಿ 10 ಲಕ್ಷ ಕೋಟಿ ರೂಪಾಯಿ ರಾತ್ರೋರಾತ್ರಿ ಚಲಾವಣೆಯಿಂದ ನಾಶವಾಯಿತು. ಇದು ಸರ್ಕಾರದ ಪರಿಗಣಿತ ನಿರ್ಧಾರವಲ್ಲ ಮತ್ತು ನ್ಯಾಯಾಲಯದ ಮೂಲಕ ಅದನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ವಾದಿಸಿದ್ದರು.
ಈ ಬಗ್ಗೆ ಸರ್ಕಾರ ಸರಿಯಾದ ವಿಚಾರಣೆ ನಡೆಸದೆ ಯಾವುದೇ ಸ್ಪಷ್ಟವಾದ ಪರಿಹಾರವನ್ನು ನೀಡಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಉಲ್ಲೇಖಗೊಂಡಿತು. ನೋಟು ಅಮಾನ್ಯೀಕರಣವು ಉತ್ತಮವಾಗಿ ಪರಿಗಣಿಸಲ್ಪಟ್ಟ ನಿರ್ಧಾರವಾಗಿದೆ ಮತ್ತು ನಕಲಿ ಹಣ, ಭಯೋತ್ಪಾದಕ ಹಣಕಾಸು, ಕಪ್ಪುಹಣ ಮತ್ತು ತೆರಿಗೆ ವಂಚನೆಯ ಬೆದರಿಕೆಯನ್ನು ಎದುರಿಸಲು ಒಂದು ದೊಡ್ಡ ಕಾರ್ಯತಂತ್ರದ ಭಾಗವಾಗಿದೆ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿತು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಅರ್ಜಿದಾರರ ಪರ ಹಾಜರಿದ್ದ ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಪಿ.ಚಿದಂಬರಂ, ನೋಟುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ, ಸ್ವಯಂ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಆರ್‌ಬಿಐನ ಕೇಂದ್ರೀಯ ಮಂಡಳಿಯ ಶಿಫಾರಸ್ಸುಗಳ ಅನ್ವಯ ಮಾತ್ರವೇ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಬಹುದು. ಹೀಗಾಗಿ 2016ರಲ್ಲಿ ಕೇಂದ್ರ ತೆಗೆದುಕೊಂಡ ಕ್ರಮ ತಪ್ಪು ನಿರ್ಧಾರ ಎಂದು ವಾದಿಸಿದ್ದರು.
ಮತ್ತೊಂದೆಡೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ಈ ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಸರಿಯಲ್ಲ ಎಂದಿತ್ತು. ಇದು ಸಾಕಷ್ಟು ಯೋಚಿಸಿ ಕೈಗೊಂಡ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿತ್ತು. ನೋಟು ನಿಷೇಧದಿಂದ ನಾಗರೀಕರು ಕೆಲ ಕಾಲ ಸಮಸ್ಯೆಗಳನ್ನು ಎದುರಿಸಿದ್ದರು, ಆದರೆ ದೇಶಕಟ್ಟುವ ಕೆಲಸದಲ್ಲಿ ಇದು ಅನಿವಾರ್ಯ. ನಂತರ ಶೀಘ್ರದಲ್ಲಿಯೇ ಲಭ್ಯ ವ್ಯವಸ್ಥೆಯ ಮೂಲಕ ಪರಿಹರಿಸಲಾಯಿತು. ಭಾರತೀಯ ರಿಸರ್ವ್ ಬ್ಯಾಂಕ್, ನ್ಯಾಯಾಲಯಕ್ಕೆ ಮಾಹಿತಿ ನೀಡಿತು.