ಬೆಂಗಳೂರು: ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಅಮಾನುಷ ಅತಿದಾಳಿಗೆ ಒಂದು ವರ್ಷ. ಈ ಕರಾಳ ಕೃತ್ಯವನ್ನು ಖಂಡಿಸಿ ಇಂದು ಬೆಂಗಳೂರಿನಲ್ಲಿ ಎಡ ಪಕ್ಷಗಳ ಜಂಟಿ ಕ್ರಿಯಾ ಸಮಿತಿಯಿಂದ ಪ್ಯಾಲೆಸ್ಟೈನ್ ಬೆಂಬಲಿಸಿ ಪ್ರದರ್ಶನ ನಡೆಸಲಾಯಿತು. ನಗರದ ಫ್ರೀಡಮ್ ಪಾರ್ಕ್‌ನಲ್ಲಿ ಸಿ.ಪಿ.ಐ(ಎಂ), ಸಿ.ಪಿ.ಐ, ಸಿ.ಪಿ.ಐ(ಎಂಎಲ್), ಎ.ಐ.ಎಫ್.ಬಿ ಮತ್ತು ಎಸ್.ಯು.ಸಿ.ಐ(ಸಿ) ಪಕ್ಷದ ಜಿಲ್ಲಾ ಮುಖಂಡರು ಕಾರ್ಯಕರ್ತರು ಸುರಿಯುವ ಮಳೆಯಲ್ಲಿಯೇ ಪ್ಯಾಲೆಸ್ಟೈನ್ ಜನತೆಗೆ ಬೆಂಬಲ ಸೂಚಿಸಿ ಪ್ರದರ್ಶನ ನಡೆಸಿದರು. ಪ್ರದರ್ಶನಕಾರರನ್ನು ಉದ್ದೇಶಿಸಿ ಸಿ.ಪಿ.ಐ ಮುಖಂಡ ಸತ್ಯಾನಂದ ಮಾತನಾಡಿ ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದರು ಎಂದು ಬಿ.ಎನ್.ಮಂಜುನಾಥ್ ತೀಳಿಸಿದ್ದಾರೆ. ಕ್ರಿಯಾ
ಎಸ್.ಯು.ಸಿ.ಐ(ಸಿ) ಮುಖಂಡರಾದ ರವಿ ಮಾತನಾಡುತ್ತ ಯುದ್ಧದಾಹಿ ಸಾಮ್ರಾಜ್ಯಶಾಹಿಗಳು ಇಸ್ರೇಲ್‌ಗೆ ಬೆಂಬಲಿಸುತ್ತಿರುವುದನ್ನು ಖಂಡಿಸಿದರು. ಸೋವಿಯತ್ ರಷ್ಯಾದ ಪತನದ ನಂತರ ಈ ಶಕ್ತಿಗಳು ಪ್ಯಾಲೆಸ್ಟೈನ್ ದೇಶದ ಮೇಲೆ ಆಕ್ರಮಣ ಮಾಡುವ ಸಾಹಸಕ್ಕೆ ಇಳಿದಿದ್ದನ್ನು ವಿವರಿಸಿ ಸಾಮ್ರಾಜ್ಯಶಾಹಿ ಅಮೆರಿಕಾ ಇಸ್ರೇಲ್‌ನ ಬೆನ್ನಿಗೆ ಇರುವ ಕಾರಣದಿಂದಲೆ ಇಸ್ರೇಲ್ ಇಷ್ಟು ಮುಂದುವರೆದಿದೆ ಎಂದು ವಿವರಿಸಿದರು. ಅಮೆರಿಕಾದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಹಣ ಬಿಡುಗಡೆ ಮಾಡದ ಸರಕಾರ ಇಸ್ರೇಲ್ ಗೆ ಯುದ್ಧ ಮಾಡಲು ಸಹಾಯಕ್ಕೆ ಸಾವಿರಾರು ಬಿಲಿಯನ್ ಡಾಲರ್‌ಗಳ ಸಹಾಯ ಕೊಡುತ್ತಿರುವುದನ್ನು ಅಂಕಿ ಅಂಶಗಳ ಸಹಿತ ವಿವರಿಸಿದರು.
ಇದನ್ನು ಓದಿ : ಪ್ರೊ. ಜಿ.ಎನ್. ಸಾಯಿಬಾಬಾ ಸಾವು; ಪ್ರಜಾಪ್ರಭುತ್ವದ ಮೇಲೊಂದು ಕಪ್ಪು ಚುಕ್ಕೆ
ಸಿ.ಪಿ.ಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ.ಕೆ.ಪ್ರಕಾಶ್ ಮಾತನಾಡಿ ಒಂದು ಸ್ವತಂತ್ರ ರಾಷ್ಟ್ರವಾಗಿದ್ದ ಪ್ಯಾಲೆಸ್ಟೈನ್‌ನ್ನು ಇಬ್ಬಾಗ ಮಾಡಿದ ಚರಿತ್ರೆಯನ್ನು ತಿಳಿಸಿದರು. ಜಗತ್ತಿನ ವಿವಿಧ ಭಾಗಗಳಲ್ಲಿ ವಾಸವಾಗಿದ್ದ ಯಹೂದಿಗಳನ್ನು ತಂದ ಇಂಗ್ಲೆಂಡ್ ಅವರಿಗಾಗಿಯೇ ಇಸ್ರೇಲ್ ಎಂಬ ದೇಶವನ್ನೇ ಸೃಷ್ಟಿಸಿ ಪ್ಯಾಲೆಸ್ಟೈನ್ ಜನರನ್ನು ತೊಂದರೆಗೆ ಈಡು ಮಾಡಿದ ಇತಿಹಾಸ, ಮತ್ತು ಹಾಗೆ ಜಾಗ ಪಡೆದ ಇಸ್ರೇಲ್ ಇಂದು ಅಮೆರಿಕದ ಕುಮ್ಮಕ್ಕಿನಿಂದಾಗಿ ಇಡೀ ಪ್ಯಾಲೆಸ್ಟೈನ್ ಜನರನ್ನೇ ನಿರ್ನಾಮ ಮಾಡುವ ಘೋರ ಕೃತ್ಯಕ್ಕೆ ಇಳಿದ ಸಂಗತಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ಲೆಬನಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿ ಸಂರಕ್ಷಣಾ ಪಡೆಯ ಆವಾಸದ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ವಿವರಿಸಿ ಅಮೆರಿಕಾ ಇದರ ಹಿಂದಿಲ್ಲದೇ ಇಷ್ಟು ಧೈರ್ಯ ಇಸ್ರೇಲ್ ಗೆ ಬರಲು ಸಾಧ್ಯವಿಲ್ಲ ಎಂದರು. ಭಾರತದ ಸರಕಾರ ಕೂಡಾ ತನ್ನ ಮೂಲ ನಿಲುವಿಗೆ ವ್ಯತಿರಿಕ್ತವಾಗಿ ವಿಶ್ವಸಂಸ್ಥೆಯಲ್ಲಿ ತಟಸ್ಥ ಧೋರಣೆಯನ್ನು ಅನುಸರಿಸುವ ಮೂಲಕ ಪರೋಕ್ಷವಾಗಿ ಇಸ್ರೇಲ್ ಪರ ನಿಂತ ಬಗೆ, ಹಾಗೂ ಇದು ಇಸ್ರೇಲ್‌ನಲ್ಲಿ ವ್ಯಾಪಾರ ವ್ಯವಹಾರ ಹೊಂದಿರುವ ಅದಾನಿಯ ಹಿತ ರಕ್ಷಣೆಯ ಉದ್ದೇಶದಿಂದ ಎಂಬುದು ಸ್ಪಷ್ಟ ಎಂದರು.
ಸಿ.ಪಿ.ಎಂ.ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೋಪಾಲಕೃಷ್ಣ ಹರಳಹಳ್ಳಿಯವರು ಪ್ಯಾಲೆಸ್ಟೈನ್ ಕುರಿತ ಕವನ ವಾಚನ ಮಾಡಿದರು. ಸಿ.ಪಿ.ಎಂ.ಪಕ್ಷದ ಉತ್ತರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಹುಳ್ಳಿ ಉಮೇಶ್ ರವರು ಕಾರ್ಯಕ್ರಮ ನಿರೂಪಿಸಿದರು.
ಇದನ್ನು ನೋಡಿ : ಪ್ಯಾಲೆಸ್ಟೀನ್ ಪರವಾಗಿ ಧ್ವನಿಯೆತ್ತುವುದು ಅಪರಾಧವೇ? ಪ್ರತಿಭಟನೆಕಾರರ ಪ್ರಶ್ನೆ Janashakthi Media