ಬೆಂಬಲ ಬೆಲೆ ಖರೀದಿ ಇಲ್ಲದೇ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ರಕ್ಷಿಸಲು ಕೂಡಲೇ ಭತ್ತ, ಮೆಣಸಿನಕಾಯಿ, ಹತ್ತಿ ,ಸಜ್ಜೆ,ಶೇಂಗಾ ಮುಂತಾದ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಇದನ್ನು ಓದಿ :-ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತೆಯರು
ಅವರು ಶಹಾಪುರ ಪಟ್ಟಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (KPRS) ತಾಲ್ಲೂಕು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಳೆದ ಹತ್ತು ವರ್ಷಗಳಿಂದಲೂ ಭತ್ತದ ಬೆಲೆ ಹೆಚ್ಚಳ ವಾಗಿಲ್ಲ, ಮೆಣಸಿನಕಾಯಿ ಧಾರಣೆ 40 ಸಾವಿರದಿಂದ 8 ಸಾವಿರಕ್ಕೆ ಕುಸಿದಿದೆ, ಜೋಳ ಮತ್ತು ಸಜ್ಜೆ ಕೂಡ ಬೆಲೆ ಇಳಿಕೆ ಕಾಣುತ್ತಿವೆ. ಸುಗ್ಗಿಯಲ್ಲಿ ರೈತರ ಹಿತರಕ್ಷಣೆ ಮಾಡದೇ ವ್ಯಾಪಾರಿಗಳ ಲಾಭಕ್ಕೆ ಬಲಿ ಕೊಡಲಾಗುತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಆತ್ಮಹತ್ಯೆ ತಡೆಗಟ್ಟುವುದಾಗಿ , ಎಲ್ಲಾ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿ ನರೇಂದ್ರ ಮೋದಿ ರವರು ಅಧಿಕಾರಕ್ಕೆ ಬಂದ ಈ ಹತ್ತು ವರ್ಷಗಳಲ್ಲಿ ನಾಲ್ಕು ಲಕ್ಷ ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ರಾಜ್ಯದ ಸಿದ್ದರಾಮಯ್ಯ ಸರ್ಕಾರ ಮೋದಿ ಸರ್ಕಾರದ ಎಲ್ಲಾ ರೈತ ವಿರೋಧಿ ಕ್ರಮ ಹಾಗೂ ನಿರ್ಣಯಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ. ಕರಾಳ ಕೃಷಿ ಕಾಯ್ದೆಗಳು ,ಭೂ ಸ್ವಾಧೀನ ಕಾಯ್ದೆ,ಕೃಷಿ ಮಾರುಕಟ್ಟೆ ವಿಷಯಗಳಲ್ಲಿ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಸಹಕಾರ ನೀಡಿದೆ. ಈ ನೀತಿಗಳ ವಿರುದ್ಧ ಮೇ 20,2025 ರಂದು ಕಾರ್ಮಿಕರ ಅಖಿಲ ಭಾರತ ಮುಷ್ಕರ ಕರೆ ನೀಡಿದ್ದು, ರೈತರು ಹಾಗೂ ಕೂಲಿಕಾರರು ಬೃಹತ್ ರಸ್ತೆ ತಡೆ-ಜೈಲ್ ಭರೋ ಗ್ರಾಮೀಣ ಹರತಾಳ ನಡೆಸುವ ಮೂಲಕ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿ :-ರಬ್ಬರ್ ಮಂಡಳಿಯ ಜೀಯೋ ಮ್ಯಾಪಿಂಗ್ ವೆಚ್ಚಕ್ಕೆ ರಬ್ಬರ್ ಬೆಳೆಗಾರರಿಗೆ ಸಬ್ಸಿಡಿ ನೀಡುವಂತೆ KPRS ಆಗ್ರಹ
ಕರ್ನಾಟಕ ಪ್ರಾಂತ ರೈತ ಸಂಘ (KPRS) ಯಾದಗಿರಿ ಜಿಲ್ಲಾಧ್ಯಕ್ಷ ಚನ್ನಪ್ಪ ಆನೇಗುಂದಿ ರವರು ಮಾತಾನಾಡುತ್ತಾ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳು ಹಾಗೂ ವಲಸೆ ತೀವ್ರ ವಾಗಿ ಹೆಚ್ಚುತ್ತಿದೆ. ವಲಸೆ ತಡೆಗಟ್ಟುವ ಉದ್ದೇಶದ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. ಉದ್ಯೋಗ ಖಾತರಿ ಕಾನೂನು ಜಾರಿ ಆಗಿ ಇಪ್ಪತ್ತು ವರ್ಷಗಳೇ ಕಳೆದರೂ ತಾಲ್ಲೂಕಿನ ನೂರಾರು ಕೂಲಿಕಾರರು ಹಾಗೂ ಬಡರೈತರಿಗೆ ಜಾಬ್ ಕಾರ್ಡ್ ಕೂಡ ಸಿಕ್ಕಿಲ್ಲ. ಉದ್ಯೋಗ ಒದಗಿಸುವಂತೆ ಒತ್ತಾಯಿಸುವ ರೈತ ಸಂಘದ ಕಾರ್ಯಕರ್ತರ ಮೇಲೆ ಪಂಚಾಯತಿ ಪಿಡಿಓಗಳು ಸ್ಥಳೀಯ ಪಟ್ಟಭದ್ರರ ಜೊತೆ ಸೇರಿ ಗೂಂಡಾಗಿರಿ ಹಲ್ಲೆ ಬೆದರಿಕೆ ಹಾಕುತ್ತಿದ್ದಾರೆ. ಇಂತಹ ದೌರ್ಜನ್ಯ ವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಸಭೆ ಅಧ್ಯಕ್ಷತೆಯನ್ನು ಶಹಾಪುರ ತಾಲ್ಲೂಕು KPRS ಅಧ್ಯಕ್ಷ ಭೀಮಣ್ಣ ಟಪೇದಾರ್ ವಹಿಸಿದ್ದರು, ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಸ್ ಎಂ ಸಾಗರ್ , ತಾಲ್ಲೂಕು ಕಾರ್ಯದರ್ಶಿ ಭೀಮರಾಯ ಪೂಜಾರಿ ,ತಾಲ್ಲೂಕು ಪದಾಧಿಕಾರಿಗಳಾದ ದೇವೆಂದ್ರ ಕುಮಾರ್ ಮಲ್ಲಿಕಾರ್ಜುನ ಟೋಕಾಪುರ, ಭಾಗಣ್ಣ ಇಟಗಿ, ಯಂಕಮ್ಮ, ಮಲ್ಲಮ್ಮ ಮುಂತಾದವರು ಭಾಗವಹಿಸಿದ್ದರು