ಗುರುರಾಜ ದೇಸಾಯಿ
ರಾಜ್ಯದ ಪದವಿ ಕಾಲೇಜುಗಳಲ್ಲಿ ಕನ್ನಡವನ್ನು ಒಂದು ಭಾಷಾ ವಿಷಯವಾಗಿ ಕಲಿಯುವುದನ್ನು ಕಡ್ಡಾಯಗೊಳಿಸಿ ಹೊರಡಿಸಿದ ಆದೇಶವನ್ನು ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ. ಹೈ ಕೋರ್ಟ್ ಈ ರೀತಿ ತಾಕೀತು ಮಾಡಲು ಕಾರಣವಿದೆ.
ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಹಯಗ್ರೀವ ಟ್ರಸ್ಟ್ ಮತ್ತು ವ್ಯೋಮಾ ಭಾಷಾ ಪ್ರಯೋಗಾಲಯಗಳ ಪ್ರತಿಷ್ಠಾನ ಈ ನಾಲ್ಕು ಸಂಸ್ಥೆಗಳು ಉನ್ನತ ಶಿಕ್ಷಣ ಇಲಾಖೆಯಿಂದ ಹೊರಡಿಸಲಾದ ಆಗಸ್ಟ್ 7 ಮತ್ತು ಸೆಪ್ಟೆಂಬರ್ 15, 2021 ರ ಸರ್ಕಾರಿ ಆದೇಶಗಳನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿವೆ. ಈ ಕಾರಣಕ್ಕಾಗಿ ಕೋರ್ಟ್ ಈ ರೀತಿ ಹೇಳಿಕೆ ನೀಡಿದೆ. ಕೋರ್ಟ್ ಇಲ್ಲಿ ಬೇರೆ ರಾಜ್ಯ ಅಥವಾ ಬೇರೆ ಪ್ರದೇಶದಿಂದ ಬಂದ ವ್ಯಕ್ತಿಗಳಿಗೆ ಕನ್ನಡ ಕಲಿಕೆಯ ಹೇರಿಕೆ ಮಾಡಬೇಡಿ ಎಂಬ ನಿಲುವನ್ನು ಒಪ್ಪಿಕೊಳ್ಳೋಣ. ಆದರೆ ಆ ವಿದ್ಯಾರ್ಥಿಗಳು ಬೇರೆ ಭಾಷೆಯನ್ನಾಗಿ ಇಂಗ್ಲೀಷ್ ಆಯ್ಕೆ ಮಾಡಿಕೊಂಡರೆ ಇಲ್ಲವೆ ಅವರದ್ದೆ ಮಾತೃ ಭಾಷೆಯನ್ನು ಆಯ್ಕೆ ಮಾಡಿಕೊಂಡರೆ ಕೋರ್ಟ್ ನಿಲುವು ಸರಿ ಎನ್ನಬಹುದು. ಆದರೆ ಅವರು ಆಯ್ಕೆ ಮಾಡಿಕೊಳ್ಳ ಬಯಸುವ ವಿಷಯ ಸಂಸ್ಕೃತವಾಗಿರುತ್ತದೆ ಎಂಬುದನ್ನು ಗುರುತಿಸಿದಷ್ಟು ಕಿವುಡಾಗಿ ಬಿಟ್ಟಿದೆಯಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಭಾಷೆ ವಿಚಾರದಲ್ಲಿ ಅಡ್ಡಗೋಡೆ ಮೇಲೆ ದೀಪ ಇಡುವ ಕೋರ್ಟ್ : ನಮ್ಮಲ್ಲಿ ಕಲಿಕಾ ಮಾಧ್ಯಮದ ಬಗ್ಗೆ ಸರ್ಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ಸ್ಪಷ್ಟತೆಯೇ ಇಲ್ಲ. 2008ರಲ್ಲಿ ಕರ್ನಾಟಕ ಹೈಕೋರ್ಟ್ ಹಾಗೂ 2014ರಲ್ಲಿ ಸುಪ್ರೀಂ ಕೋರ್ಟ್ ‘ಮಗುವಿನ ಕಲಿಕಾ ಮಾಧ್ಯಮದ ಆಯ್ಕೆ ಪೋಷಕರಿಗೆ ಬಿಟ್ಟದ್ದು’ ಎಂದು ಹೇಳಿವೆ. ಪರಿಣಾಮವಾಗಿ, ಇಂಗ್ಲಿಷ್‌ನ ಯಜಮಾನಿಕೆಯು ಗಟ್ಟಿಗೊಳ್ಳುತ್ತಿದೆ. ಸುಪ್ರೀಂ ಕೋರ್ಟ್ ಈ ಕುರಿತು ವಿವಿಧ ರಾಜ್ಯಗಳ ಅಭಿಪ್ರಾಯವನ್ನು ಕೇಳದೆ, ಕರ್ನಾಟಕದ ಅಭಿಪ್ರಾಯವನ್ನಷ್ಟೇ ಪರಿಗಣಿಸಿ ಈ ತೀರ್ಪು ನೀಡಿದೆ. ಇದು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಈಗ ಹೈಕೋರ್ಟ್ ಕೂಡಾ ಇಂತಹದ್ದೆ ನಡೆ ಅನುಸರಿಸುತ್ತದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ರಾಜ್ಯ ಸರಕಾರಿ ತರಾತುರಿಯಲ್ಲಿ ಜಾರಿ ಮಾಡುವಾಗ ಬಹಳಷ್ಟು ಜನ ಶಿಕ್ಷಣ ತಜ್ಞರು ” ಸಂಸ್ಕೃತ” ಹೇರಿಕೆಯನ್ನು ಇದು ತೋರಿಸುತ್ತದೆ ಎಂಬ ಅಪಾಯವನ್ನು ಹೇಳಿದ್ದರು. ಈಗ ಅದು ನಿಜವಾಗುತ್ತಿದೆ. ಕೋರ್ಟ್ ಹೇಳಿದ ಮೇಲೆ ಅದನ್ನು ಪ್ರಶ್ನಿಸುವ ಅಥವಾ ತನ್ನ ನಿಲುವನ್ನು ಸಮರ್ಥಿಸಿ ಕೊಳ್ಳುವ ದೈರ್ಯವನ್ನು ಸರಕಾರ ಮಾಡುವುದಿಲ್ಲ. ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಬೇಕೆಂಬ ಆಸೆ ಮರೀಚಿಕೆಯಾಗಲಿದೆ.
ಕನ್ನಡ ಯಾಕೆ ಕಲಿಸಬೇಕು : ಪದವಿ ಶಿಕ್ಷಣದಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಆಡುವುದಕ್ಕೂ ಒಂದು ಅರ್ಥವಿದೆ. ರಾಜ್ಯಕ್ಕೆ ಅಧ್ಯಯನ ಮಾಡುಲು ಬರುವ ಬಹುತೇಕರು ಇಲ್ಲಿಯೇ ಉದ್ಯೋಗಗಳನ್ನು ನೋಡಿಕೊಳ್ಳುತ್ತಾರೆ. ಇಂದು ಬ್ಯಾಂಕ್ ಇತ್ಯಾದಿ ಕ್ಷೇತ್ರಗಳಲ್ಲಿ ಕನ್ನಡ ಬಾರದವರ ಜೊತೆ ಗ್ರಾಹಕರು ವ್ಯವಹರಿಸಲು ಅನುಭವಿಸುತ್ತಿರುವ ಕಷ್ಟಗಳನ್ನು ನಿತ್ಯ ನೋಡುತ್ತಿದ್ದೇವೆ. ಹಾಗಾಗಿ ಕನ್ನಡ ಕಲಿಯುವುದರಿಂದ ರಾಜ್ಯದಲ್ಲಿ ಉದ್ಯೋಗ ಪಡೆಯುವುದಕ್ಕೆ ಸಹಕಾರಿಯಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಮಸ್ಯೆಯಾದರೆ ಶಿಕ್ಷಕರು, ವಿದ್ಯಾರ್ಥಿಗಳು ನ್ಯಾಯಾಲಯದ ಮುಂದೆ ಬರಬೇಕು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ರೂಪದಲ್ಲಿ ಪ್ರಶ್ನಿಸಲಾಗದು. ಇದು ಅರ್ಜಿಗೆ ನಮ್ಮ ಪ್ರಾಥಮಿಕ ಆಕ್ಷೇಪಣೆಯಾಗಿದೆ’ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳಲು ಅಡ್ವೋಕೇಟ್ ಜನರಲ್ ಪ್ರಯತ್ನಿಸಿದ್ದರಾದರೂ ಇದು ಎಷ್ಟರ ಮಟ್ಟಿಗೆ ಯಶಸ್ಸು ಸಿಗಬಿಲ್ಲದು ಎಂಬುದು ಪ್ರಶ್ನೆಯಾಗಿ ಕಾಡಲಿದೆ.
ಕನ್ನಡ ಕಲಿಕೆಗೆ ಆಸಕ್ತಿ ತೋರಬೇಕಿದೆ : ಇಂದು ಕನ್ನಡ ಕಲಿಕೆಯೆ ಗೇಲಿಗೆ, ಅಲಕ್ಷ್ಯಕ್ಕೆ ಗುರಿಯಾಗುತ್ತಿದೆ! ಕನ್ನಡಿಗರಿಂದಲೆ ಕನ್ನಡವನ್ನು ರಕ್ಷಿಸಬೇಕಾದ ಸ್ಥಿತಿ ಬಂದಿದೆ. ಮೇಲ್ ಮದ್ಯಮ ವರ್ಗದವರಿಗೆ ತಮ್ಮ ವ್ಯವಹಾರ ಮತ್ತು ವ್ಯಾಪಾರಗಳಿಗೆ ಇಂಗ್ಲಿಷ್ ಮಾದ್ಯಮ ಆಗಿದೆ. ಇನ್ನು ಕೆಳ ಮದ್ಯಮ ಮತ್ತು ಬಡವರ್ಗದ ಜನ ನಾವು ಮಾತ್ರವೆ ಕನ್ನಡವನ್ನು ಉಳಿಸುವ ಹೊಣೆ ಹೊರಬೇಕಾ? ಕೀಳರಿಮೆಯ ಗುರುತು ಆಗಿರುವ ಕನ್ನಡವನ್ನು ನಾವೇಕೆ ಹೊರಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಕನ್ನಡದವರೆ ಜಾತಿ, ಭಾಷೆ ಮತ್ತು ಶೋಷಣೆಯ ಪ್ರಶ್ನೆಗಳನ್ನು ಸಮೀಕರಿಸಿಲಾಗುತ್ತಿದೆ. ಇದನ್ನು ಅರಿತ ಸರಕಾರ ತಾನೇ ಇಂಗ್ಲಿಷ್ ಮಾದ್ಯಮವನ್ನು ಜಾರಿ ಮಾಡಿದೆ (ಕರ್ನಾಟಕ ಪಬ್ಲಿಕ್ ಶಾಲೆಗಳು) ಹೀಗಾಗಿ ಕನ್ನಡ ಕಲಿಕೆ ಅಪ್ರಸ್ತುತ ಆಗುವ ಕಾಲ ಸನ್ನಿಹಿತ ಆದಂತೆ ಅನ್ನಿಸುತ್ತಿದೆ. ಖಾಸಗಿಯವರ ಮಾತನ್ನಂತು ಹೇಳುವಂತೆಯೆ ಇಲ್ಲ. ಅವರು ಜೋರು ವ್ಯಪಾರ ಮಾಡಲು ಸುಪ್ರೀಂ ಕೋರ್ಟನ್ನೆ ದಿಕ್ಕು ತಪ್ಪಿಸಬಲ್ಲವರು. ಇಂಗ್ಲೀಷ್‌ನ್ನು ಮಾರುವ ಸರಕನ್ನಾಗಿ ದಿನೇ ದಿನೇ ಸಮಾಜದಲ್ಲಿ ರೂಪಿಸಲಾಗುತ್ತಿದೆ. ಆಂಗ್ಲ ಶಾಲೆಗಳಲ್ಲಿ ಅದು ಅತಿಶಯದ ಸರಕಾಗಿ ಮಾರಲ್ಪಡುತ್ತಿದೆ. ಕೊಳ್ಳುವ ಶಕ್ತಿ ಇಲ್ಲದವರು, ಕೆಲವೆ ಹಠವಾದಿಗಳು, ನೀತಿವಾದಿಗಳು, ಮತ್ತು ಗ್ರಾಮೀಣರು ಮಾತ್ರ ಕನ್ನಡವನ್ನು ಆತುಕೊಳ್ಳುತ್ತಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲೆ ಕನ್ನಡ ಕಲಿಯುವವರ ಪ್ರಮಾಣ ಕ್ರಮೇಣ ಇಳಿಕೆ ಕಾಣುತ್ತಿದೆ. ಇನ್ನು ಪದವಿ ಕಲಿಕೆಯಲ್ಲಿ ಇದು ಬಿಂಬಿತ ಆಗದೆ ಇರುತ್ತದೆಯೆ?
ಬಹುಪಾಲು ದೇಶಗಳು ಮಾತೃಭಾಷೆಯಲ್ಲೇ ಶಿಕ್ಷಣ ನೀಡುತ್ತಿವೆ. ಇದರ ಭಾಗವಾಗಿ ಅವು ಅಭಿವೃದ್ಧಿ ಪಥದತ್ತ ಸಾಗುತ್ತಿರುವುದನ್ನು ನೋಡಬಹುದಾಗಿದೆ. ಚೀನಾ, ಜಪಾನ್, ವಿಯೆಟ್ನಾಂ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಮಾತೃಭಾಷೆಯಲ್ಲೇ ಕಲಿಸುತ್ತಿರುವ ಬಗ್ಗೆ ನಮ್ಮ ಸರ್ಕಾರಗಳು ಅಧ್ಯಯನ ಮಾಡಬೇಕಿದೆ.
ಕುವೆಂಪು ಅವರು ‘ಮಾತೃಭಾಷಾ ಶಿಕ್ಷಣ ಸಂಪೂರ್ಣ ಯಶಸ್ವಿಯಾಗುವವರೆಗೂ ಸ್ಥಳೀಯರಿಗೆ ಉದ್ಯೋಗ ದೊರೆಯುವುದು ಕಷ್ಟವಾಗುತ್ತದೆ. ಇಂಗ್ಲಿಷ್ ಮೂಲಕ ಪಡೆಯುವ ಶಿಕ್ಷಣ ಗಾಳಿಗೋಪುರವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ನಾನು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ಬದಲು ನನ್ನ ಮಾತೃಭಾಷೆಯಲ್ಲಿ ಪಡೆದಿದ್ದರೆ ಇನ್ನಷ್ಟು ಉತ್ತಮ ಕವಿತೆಗಳನ್ನು ಬರೆಯುತ್ತಿದ್ದೆ’ ಎಂದು ಕವಿ ರವೀಂದ್ರನಾಥ ಟ್ಯಾಗೋರ್ ಅಭಿಪ್ರಾಯಪಟ್ಟಿದ್ದಾರೆ.
ಹೊರ ರಾಜ್ಯದವರು ಎಂಬುದು ನೆಪವಷ್ಟೆ : ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆಯನ್ನು ಹೇರುವುದು ಸರಿಯಲ್ಲ ಎಂಬುದು ಕೇವಲ ನೆಪವಷ್ಟೆ, ಸ್ಥಳೀಯರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕೆಲ ಸಂಸ್ಥೆಗಳು ಇದನ್ನು ಪ್ರಶ್ನಿಸುತ್ತಿವೆ. ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಬೆರಳಣಿಕೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರಿಗೆ ಬೇಕಾದರೆ ಅವರು ಇಚ್ಛೆ ಪಡುವ ಭಾಷೆಯನ್ನೆ ಮೊದಲ ಭಾಷೆಯಾಗಿ ಇಲ್ಲವೆ ಎರಡನೇ ಭಾಷೆಯಾಗಿ ಕಲಿಸಲಿ, ಆದರೆ ಹೆಚ್ಚಿನ ಅಂಕ ಪಡೆಯಬೇಕು ಎಂಬ ಕಾರಣದಿಂದ ಸ್ಥಳೀಯರು ಸಂಸ್ಕೃತವನ್ನು ಕಲಿಯಬೇಕು ಎಂಬ ಹುನ್ನಾರ ಅಡಿಗಿದೆ. ಮುಖ್ಯವಾಗಿ ಸಂಸ್ಕೃತ ಅಧ್ಯಾಪಕರ ವೇದಿಕೆಯ ಉದ್ದೇಶವೂ ಇದೇ ಆಗಿದೆ.
ಹಾಗಾಗಿ ನ್ಯಾಯಾಲಯಗಳು ಮಾತೃಭಾಷೆ/ ಇಲ್ಲವೆ ಆ ರಾಜ್ಯದ ಶಿಕ್ಷಣ ಭಾಷೆಯಲ್ಲಿನ ಕಲಿಕೆಯನ್ನು ಪ್ರೋತ್ಸಾಹಿಸಬೇಕು. ಈಗಾಗಲೇ ಹಿಂದಿ, ಇಂಗ್ಲೀಷ್ ಹೆರಿಕೆ ಮಾಡಿದಂತೆ ಸಂಸ್ಕೃತವನ್ನು ಅನೇಕ ಕಡೆಗಳಲ್ಲಿ ಹೇರಲಾಗುತ್ತಿದೆ. ನ್ಯಾಯಲಯ ಅದನ್ನು ಅರಿಯದಿದ್ದರೂ ಸಂಸ್ಕತ ಹೇರಿಕೆಯೂ ಕಡ್ಡಾಯವಾಗಿ ಬಿಡಬಹುದು. ಕನ್ನಡ ಕಲಿಕೆಯನ್ನು ಪ್ರಶ್ನಿಸಿರುವ ಆ ಎಲ್ಲಾ ಸಂಸ್ಥೆಗಳು ಈಗಾಗಲೆ ಸಂಸ್ಕೃತವನ್ನು ಕಲಿಸುತ್ತಿವೆ. ಸಂಸ್ಕೃತವನ್ನು ಕಲಿಸುವುದು ಭಾಷಾ ಪ್ರೇಮಕ್ಕಾಗಿ ಅಲ್ಲ ಬದಲಿಗೆ ಅಂಕ ಕಲಿಕೆಗಾಗಿ ಎಂಬುದು ವಾಸ್ತವ ಸಂಗತಿ. ಸುಲಭವಾಗಿ 90 ರಿಂದ 95 ಅಂಕಗಳನ್ನು ಸಂಸ್ಕೃತದಲ್ಲಿ ಪಡೆಯಬಹುದು ಎಂದು ವಿದ್ಯಾರ್ಥಿಗಳಲಲ್ಲಿ ಹೇಳಿ ಅದನ್ನೆ ಕಡ್ಡಾಯ ಮಾಡುವ ಹುನ್ನಾರವನ್ನು ಈ ಸಂಸ್ಥೆಗಳು ಹೊಂದಿವೆ. ಹಾಗಾಗಿ ಪದವಿಯಲ್ಲಿ ಕನ್ನಡ ಕಲಿಕೆ ಇಲ್ಲವೆ ಮಾತೃಭಾಷಾ ಕಲಿಕೆಗೆ ಅವಕಾಶವನ್ನು ನೀಡುವುದು ಒಳಿತು. ಆ ನಿಟ್ಟಿನಲ್ಲಿ ನ್ಯಾಯಾಲಯ ಮತ್ತು ಸರಕಾರಗಳು ಯೋಚಿಸುವಂತಾಗಲಿ.