ನವದೆಹಲಿ: 2017 ಮತ್ತು 2021 ರ ನಡುವೆ ದೇಶಾದ್ಯಂತ ಜೈಲುಗಳಲ್ಲಿ ವರದಿಯಾದ 817 ಅಸ್ವಾಭಾವಿಕ ಸಾವುಗಳಲ್ಲಿ ಆತ್ಮಹತ್ಯೆ ಪ್ರಕರಣಗಳೆ ಅತೀ ಹೆಚ್ಚಿವೆ ಎಂದು ”ಜೈಲ್ ಸುಧಾರಣೆಗಳ ಸುಪ್ರೀಂ ಕೋರ್ಟ್ ಸಮಿತಿ”ಯ ವರದಿಯ ಹೇಳಿದ್ದು, ”ಜೈಲ್‌ಗಳಲ್ಲಿ ಆತ್ಮಹತ್ಯೆ ನಿರೋಧಕ ಬ್ಯಾರಕ್‌ಗಳನ್ನು ನಿರ್ಮಿಸುವ ಅಗತ್ಯವನ್ನು ಸಮಿತಿಯು ಸುಪ್ರೀಂ ಕೋರ್ಟ್‌ಗೆ ಒತ್ತಿ ಹೇಳಿದೆ. 2017 ಮತ್ತು 2021 ರ ಅವಧಿಯಲ್ಲಿ ಉತ್ತರ ಪ್ರದೇಶವೊಂದರಲ್ಲೆ 101 ಆತ್ಮಹತ್ಯೆಗಳು ದಾಖಲಾಗಿವೆ ಎಂದು ಸಮಿತಿ ಹೇಳಿದೆ.
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಮಿತವ ರಾಯ್ ನೇತೃತ್ವದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು 817 ಅಸಹಜ ಸಾವುಗಳಲ್ಲಿ 660 ಆತ್ಮಹತ್ಯೆಗಳಾಗಿದೆ ಎಂದು ಹೇಳಿದೆ. “ಜೈಲಿನ ಒಳಗಡೆ ಆತ್ಮಹತ್ಯೆ ಮಾಡಲು ಸಾಧ್ಯವಾಗುವ ಸ್ಥಳಗಳನ್ನು ಗುರುತಿಸುವ ಅವಶ್ಯಕತೆಯಿದೆ. ಆತ್ಮಹತ್ಯೆ ನಿರೋಧಕ ಸೆಲ್‌ಗಳು ಹಾಗೂ ಬ್ಯಾರಕ್‌ಗಳನ್ನು ನಿರ್ಮಿಸುವ ಅವಶ್ಯಕತೆಯಿದೆ” ಎಂದು ಸಮಿತಿಯು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ವರದಿಗಳ ಅಂತಿಮ ಸಾರಾಂಶದಲ್ಲಿ ಹೇಳಿದೆ.
ಇದನ್ನೂ ಓದಿ: ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮರುನಾಮಕರಣಕ್ಕೆ ರಾಷ್ಟ್ರಪತಿ ಮುರ್ಮು ಒಪ್ಪಿಗೆ
ವರದಿಗಳ ಅಂತಿಮ ಸಾರಾಂಶವು ಜೈಲುಗಳಲ್ಲಿನ ಅಸಹಜ ಸಾವುಗಳು, ಮರಣದಂಡನೆ ಶಿಕ್ಷೆಗೊಳಗಾದವರು ಮತ್ತು ಭಾರತೀಯ ಜೈಲ್‌ಗಳಲ್ಲಿನ ಹಿಂಸಾಚಾರ ಸೇರಿದಂತೆ ಒಂಬತ್ತು ಅಧ್ಯಾಯಗಳನ್ನು ಒಳಗೊಂಡಿದೆ. ಸೆಪ್ಟೆಂಬರ್ 2018 ರಲ್ಲಿ, ಜೈಲ್ ಸುಧಾರಣೆಗಳನ್ನು ಒಳಗೊಂಡಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಲು ಹಾಗೂ ಜೈಲ್‌ಗಳಲ್ಲಿ ಜನದಟ್ಟಣೆ ಸೇರಿದಂತೆ ಹಲವಾರು ಅಂಶಗಳ ಕುರಿತು ಶಿಫಾರಸುಗಳನ್ನು ಮಾಡಲು ನ್ಯಾಯಮೂರ್ತಿ (ನಿವೃತ್ತ) ರಾಯ್ ನೇತೃತ್ವದ ಮೂರು ಸದಸ್ಯರ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತ್ತು.
“ಜೈಲುಗಳಲ್ಲಿ ಅಸ್ವಾಭಾವಿಕ ಸಾವುಗಳು” ಎಂಬ ಶೀರ್ಷಿಕೆಯ ಅಧ್ಯಾಯದಲ್ಲಿ, ಸಮಿತಿಯು ಕಸ್ಟಡಿಯಲ್ಲಿನ ಚಿತ್ರಹಿಂಸೆ ಅಥವಾ ಕಸ್ಟಡಿಯಲ್ ಸಾವು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು “ಮಾನವನ ಘನತೆಗೆ ಧಕ್ಕೆ” ತರುವಂತದ್ದಾಗಿದೆ ಎಂದು ಹೇಳಿದೆ.
“ಸಮಿತಿಯು ಭಾರತದ ಕಾರಾಗೃಹಗಳಲ್ಲಿನ ಸಾವುಗಳಿಗೆ (ನೈಸರ್ಗಿಕ ಮತ್ತು ಅಸ್ವಾಭಾವಿಕ) ಸಂಬಂಧಿಸಿದ ಪಿಎಸ್ಐ ಡೇಟಾವನ್ನು ವಿಶ್ಲೇಷಿಸಿದೆ. ಜೊತೆಗೆ 2019 ರಿಂದ ಕಸ್ಟಡಿಯಲ್ ಸಾವುಗಳ ಸಂಖ್ಯೆಯು ಸ್ಥಿರವಾದ ಏರಿಕೆಯನ್ನು ಕಂಡಿದೆ. 2021ರಿಂದ ಇದುವರೆಗಿನ ಅತಿ ಹೆಚ್ಚು ಸಾವುಗಳಾಗಿದ್ದು, ಅದಲ್ಲಿ ಅಸ್ವಾಭಾವಿಕ ಸಾವುಗಳೆ ಹೆಚ್ಚಾಗಿವೆ. ಅದರಲ್ಲೂ ಆತ್ಮಹತ್ಯೆ 80% ಪ್ರಕರಗಳು ಇವೆ” ಎಂದು ವರದಿ ಹೇಳಿದೆ.
ಇದನ್ನೂ ಓದಿ: ಒಂದು ದೇಶ, ಒಂದು ಚುನಾವಣೆ ಸಾಧಕ-ಭಾದಕ ತಿಳಿಯಲು ಸಮಿತಿ ರಚನೆ
2017 ರಿಂದ 2021 ರವರೆಗಿನ ಐದು ವರ್ಷಗಳಲ್ಲಿ ವೃದ್ಧಾಪ್ಯದ ಕಾರಣ 462 ಸಾವುಗಳು ಸಂಭವಿಸಿವೆ. 7,736 ಖೈದಿಗಳು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ. “2017-2021ರ ನಡುವೆ ಭಾರತದ ಕಾರಾಗೃಹಗಳಲ್ಲಿ ಸಂಭವಿಸಿದ ಒಟ್ಟು 817 ಅಸಹಜ ಸಾವುಗಳಲ್ಲಿ, 660 ಆತ್ಮಹತ್ಯೆಗಳು ಮತ್ತು 41 ಕೊಲೆಗಳು ಜೈಲುಗಳಲ್ಲಿ ನಡೆದಿವೆ. ಈ ಅವಧಿಯಲ್ಲಿ 46 ಸಾವುಗಳು ಆಕಸ್ಮಿಕ ಸಾವುಗಳಾಗಿದ್ದು, ಕ್ರಮವಾಗಿ ಹೊರಗಿನ ದಾಳಿ ಮತ್ತು ಜೈಲ್ ಸಿಬ್ಬಂದಿಯ ನಿರ್ಲಕ್ಷ್ಯ ಅಥವಾ ಮಿತಿಮೀರಿದ ಕಾರಣದಿಂದ ತಲಾ ಏಳು ಕೈದಿಗಳು ಸಾವನ್ನಪ್ಪಿದ್ದಾರೆ” ಎಂದು ವರದಿ ಹೇಳಿದೆ.
“ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳನ್ನು (101) ದಾಖಲಿಸಿದೆ. ಅಂದರೆ 2017 ರಿಂದ 2021 ರವರೆಗೆ ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕ್ರಮವಾಗಿ 63 ಮತ್ತು 60 ಕೈದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿಯಲ್ಲೆ ಅತಿ ಹೆಚ್ಚು 40 ಆತ್ಮಹತ್ಯೆಗಳನ್ನು ದಾಖಲಾಗಿದೆ” ಎಂದು ವರದಿ ಹೇಳಿದೆ.
ಸಾಧ್ಯವಾದಷ್ಟು ಮಟ್ಟಿಗೆ ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತ ಖೈದಿಗಳನ್ನು ನ್ಯಾಯಾಲಯದಲ್ಲಿ ವಿಡಿಯೊ ಕಾನ್ಫರೆನ್ಸಿಂಗ್ ಮಾಧ್ಯಮದ ಮೂಲಕ ಹಾಜರುಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. “ಕೈದಿಗಳ ಅಸ್ವಾಭಾವಿಕ ಸಾವಿಗೆ ಆತ್ಮಹತ್ಯೆ ಪ್ರಮುಖ ಕಾರಣವಾಗಿದೆ. ಖಿನ್ನತೆ ಮತ್ತು ಅಸಹಜ ವರ್ತನೆಗಳನ್ನು” ಗುರುತಿಸಲು ಜೈಲು ಸಿಬ್ಬಂದಿಗೆ ಅಗತ್ಯವಾದ ತರಬೇತಿಯನ್ನು ನಿಯಮಿತವಾಗಿ ಒದಗಿಸಬೇಕು ಮತ್ತು ಜೈಲುಗಳಲ್ಲಿ ಜೀವಗಳನ್ನು ರಕ್ಷಿಸಲು ಸೂಕ್ತ ಕಾರ್ಯವಿಧಾನಗಳನ್ನು ರೂಪಿಸಬೇಕು” ಎಂದು ಸಮಿತಿ ಹೇಳಿದೆ.
ಯಾರಾದರೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆಯಲ್ಲಿದ್ದರೆ, ಅವರಿಗೆ ದಯವಿಟ್ಟು ಸಹಾಯವನ್ನು ಒದಗಿಸಿ. ಇಂತಹ ವ್ಯಕ್ತಿಗಳಿಗೆ ಮತ್ತು ಕುಟುಂಬಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುವ ಆತ್ಮಹತ್ಯೆ ತಡೆಗಟ್ಟುವಿಕೆ ಸಂಸ್ಥೆಗಳ ಕೆಲವು ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104
ವಿಡಿಯೊ ನೋಡಿ: ನಿರುಪಯೋಗಿ ಸುರತ್ಕಲ್ ಟೋಲ್ ಬೂತ್ ತೆರವುಗೊಳಿಸಿ, ಮತ್ತೆ ಟೋಲ್ ಸಂಗ್ರಹದ ಭಂಡ ಧೈರ್ಯ ಬೇಡ..! Janashakthi Media