ಭಾರತೀನಗರ: ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಾಮುಂಡೇಶ್ವರಿ ಸಕ್ಕರೆ ಕಂಪನಿ ಮುಂದೆ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು, ರೈತ ಮಹಿಳೆಯರು ಪ್ರತಿಭಟನೆ ನಡೆಸಿದರು.
ಟನ್ ಕಬ್ಬಿಗೆ ಶೇಕಡಾ 9 ರ ಇಳುವರಿ ಆಧಾರದಲ್ಲಿ 5000 ರೂ ಬೆಲೆ ನಿಗಧಿಪಡಿಸಬೇಕು. ರಾಜ್ಯ ಸರ್ಕಾರದ ಆದೇಶದಂತೆ 2022-23ರಲ್ಲಿ ಸರಬರಾಜು ಮಾಡಿದ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 100 ರೂಗಳ ಬಾಕಿ ಇರುವ ಸುಮಾರು 10 ಕೋಟಿಯಷ್ಟು ಹಣವನ್ನು ತಕ್ಷಣ ನೀಡಬೇಕು. ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಹಣ ಪಾವತಿ ಮಾಡಬೇಕೆಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್ ಎಲ್ ಭರತ್ ರಾಜ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ನಾಲ್ಕು ವರ್ಷದಲ್ಲಿ ಕಬ್ಬು ಖರೀದಿ ದರ ಕೆಜಿಗೆ ಇಪ್ಪತ್ತೈದು ಪೈಸೆ ಮಾತ್ರ ಹೆಚ್ಚಳ!
ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಭಾರತಿನಗರದ ಚಾಮುಂಡೇಶ್ವರಿ ಸಕ್ಕರೆ ಕಂಪನಿ ಮುಂದೆ ಹಮ್ಮಿಕೊಂಡಿದ್ದ ಕಬ್ಬು ಬೆಳೆಗಾರರ ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದ ಅವರು 12 ತಿಂಗಳ ಒಳಗೆ ಕಬ್ಬು ಕಟಾವು ಮಾಡಬೇಕು. ಕಬ್ಬಿನ ಉಪ ಉತ್ಪನ್ನಗಳಾದ ಮೊಲಾಸಸ್, ಕಾಕಂಬಿ, ಎಥೆನಾಲ್ , ಡಿಸ್ಟಿಲರಿಸ್, ಸಹವಿದ್ಯುತ್, ಬಯೋ ಕಾಂಪೋಸ್ಟ್, ಪಶು ಆಹಾರ, ಬಗಾಸ್ ಇತರೆ ಉಪ ಉತ್ಪನ್ನಗಳ ಲಾಭಾಂಶದಲ್ಲಿ ರೈತರಿಗೆ ಪಾಲು ನೀಡಿ ಕಟಾವು ಮತ್ತು ಸಾಗಾಣಿಕ ವೆಚ್ಚಕ್ಕೆ ಸಂಬಂಧಪಟ್ಟಂತೆ ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರ ನಡುವೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲು ಸಮಿತಿ ರಚಿಸಬೇಕು ಮತ್ತು ಸರ್ಕಾರದ ಮಾರ್ಗಸೂಚಿ ಅನುಸರಿಸಬೇಕು ಎಂದರು.
ಕರ್ನಾಟಕ ಕಬ್ಬು ಖರೀದಿ ಮತ್ತು ಸರಬರಾಜು ನಿಯಂತ್ರಣ ಅಧಿನಿಯಮ 2013 ಹಾಗೂ ತಿದ್ದುಪಡಿ ಅಧಿನಿಯಮ 14ರ ಕಲಂ 4(ಎ)ರಡಿ ಪ್ರದತ್ತವಾದ ಅಧಿಕಾರ ಬಳಸಿ ಕೇಂದ್ರ ಸರ್ಕಾರದ ಎಫ್‌ಆರ್‌ಪಿ ಜೊತೆಗೆ ಹೆಚ್ಚುವರಿಯಾಗಿ ಕಬ್ಬಿಗೆ ಬೆಲೆ ನಿಗಧಿಪಡಿಸಲು ಅವಕಾಶವಿದೆ. ಹಾಗಾಗಿ ಟೆನ್‌ಗೆ 500 ರೂಗಳ ಎಸ್ ಎಪಿ. ನಿಗಧಿಪಡಿಸಿ, ಇಲ್ಲವೇ ತಮಿಳುನಾಡು ಮಾದರಿಯಲ್ಲಿ ರಾಜ್ಯ ಸರ್ಕಾರ ಟನ್‌ಗೆ 500 ರೂ. ಪ್ರೋತ್ಸಾಹ ಧನ ನೀಡಬೇಕು. ಕೇಂದ್ರ ಸರ್ಕಾರ ಕಬ್ಬಿಗೆ 2023-24ನೇ ಸಾಲಿಗೆ ಎಫ್‌ಆರ್‌ಪಿ ದರವನ್ನು ಕೆ.ಜಿಗೆ 10 ಪೈಸೆ, ಕ್ವಿಂಟಾಲ್‌ಗೆ 10 ರೂ. ಟನ್‌ಗೆ 100 ರೂಗಳು ಮಾತ್ರ ಹೆಚ್ಚಳ ಮಾಡಿರುವುದು ರೈತ ವಿರೋಧಿಯಾಗಿದ್ದು ಇದನ್ನು ವಾಪಸ್ ಪಡೆದು ಒಟ್ಟಾರೆ ಟನ್‌ಗೆ 5000 ರೂ ಬೆಲೆ ನಿಗಧಿಪಡಿಸಬೇಕು ಎಂದು ಹೇಳಿದರು.
ಸಕ್ಕರೆ ಇಳುವರಿ: ಘೋಷಣೆಯಲ್ಲಿ ದೋಷ ಕಂಡುಬರುತ್ತಿದ್ದು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ತಜ್ಞರ ಸಮಿತಿ ರಚಿಸಿ ನೈಜ ಇಳುವರಿ ಘೋಷಣೆ ಮಾಡಿ ಅದರ ಬೆಲೆ ನಿಗಧಿಪಡಿಸಬೇಕು. ತೂಕದಲ್ಲಿ ಮೋಸ ಕಂಡುಬರುತ್ತಿದ್ದು ಅದನ್ನು ತಡೆಗಟ್ಟಲು ಆಳಕೆ ಮತ್ತು ತೂಕ ಮಾಪನ ಇಲಾಖೆಯ ಅಧಿಕಾರಿಗಳು ದಿಡೀರ್ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.
ನೊಂದಾಯಿತ ಕಬ್ಬು ಬೆಳೆಗಾರರ ಜೇಷ್ಠತೆ ಆಧಾರದ ಮೇಲೆ ಉಪವಿಭಾಗದ ಕಛೇರಿಯಲ್ಲಿ ಕಟಾವು ದಿನಾಂಕ ಪ್ರಕಟಿಸಬೇಕು. ಭೂಮಿಗೆ ಹೊಂದಿಕೊಳ್ಳುವ ಕಬ್ಬಿನ ತಳಿ ನಾಟಿ ಮಾಡಲು ರೈತನಿಗೆ ಮುಕ್ತ ಅವಕಾಶ ಇರಬೇಕು.ಎಥೆನಾಲ್ ಪ್ರಮಾಣವನ್ನು ಶೇ 25ಕ್ಕೆ ಹೆಚ್ಚಿಸಬೇಕು. ಪರ್ಮಿಟ್, ಕಟಾವು, ಸಾಗಾಣಿಕೆ ಸಂದರ್ಭದಲ್ಲಿ ಆಗುವ ತೊಂದರೆಯನ್ನು ನಿವಾರಿಸಬೇಕು. ದುಬಾರಿ ಕಟಾವು ಮತ್ತುಸಾಗಾಣಿಕೆ ವೆಚ್ಚಕ್ಕೆ ಕಡಿವಾಣ ಹಾಕಬೇಕು. ರೈತರಿಗೆ ಮಡ್ಡಿ ಹಾಗೂ ಬೂದಿಯನ್ನು ಉಚಿತವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಮಂಡ್ಯ ಉಪ ವಿಭಾಗಧಿಕಾರಿ( ಎಸಿ) ಶಿವಮೂರ್ತಿ ತಹಸೀಲ್ದಾರ್ ನರಸಿಂಹಮೂರ್ತಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾದ ಆಶೋಕ್ ಸಹಾಯಕ ನಿರ್ದೇಶಕರಾದ ಪರಮೇಶ್ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಮುಖಂಡರ, ಆಡಳಿತ ಮಂಡಳಿಯವರು ಅಧಿಕಾರಿಗಳ ಸಭೆ ಕರೆಯಲಾಗುವುದೆಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಎನ್ .ಲಿಂಗರಾಜಮೂರ್ತಿ, ಕೃಷ್ಣೇಗೌಡ, ಸಿದ್ದೇಗೌಡ, ಜವರೇಗೌಡ, ಗುರುಸ್ವಾಮಿ, ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ಸತೀಶ್ ಲಕ್ಷಣ್, ನಾಗೇಂದ್ರ, ಚಂದ್ರಶೇಖರ್, ಬೋರೇಗೌಡ,ಶಿವಲಿಂಗಯ್ಯ ದೃವ, ಶಿವರಾಮು, ಜಯರಾಮು, ರಘನಾಥ್, ಮರಿಲಿಂಗೌಡ, ಸಿದ್ದಯ್ಯ, ಮಲ್ಲೆಶ್ , ಮಹಾದೇವು, ಲಿಂಗರಾಜ್, ತಿಮ್ಮೇಗೌಡ, ಹನುಮಂತು, ನಂದೀಶ್, ಲತಾ, ಶೋಭ, ಮಂಜುಳ, ಪ್ರಮೀಳಾ, ಹನುಮೇಶ್, ಚಿಕ್ಕಣ್ಣ ಮುಂತಾದವರು ಭಾಗವಹಿಸಿದ್ದರು.