ಬೆಂಗಳೂರು: ಮಾಜಿ ಸಚಿವರೊಬ್ಬರ ಅಶ್ಲೀಲ ಸಿಡಿ ಹೊರ ಬರುತ್ತಿದ್ದಂತೆ ಅನೇಕ ಸಚಿವರಿಗೆ, ಶಾಸಕರಿಗೆ ಭೀತಿ ಶುರುವಾಗಿದ್ದು, ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ವಲಸೆ ಬಂದ 6 ಜನ ಸಚಿವರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ನಾರಾಯಣಗೌಡ, ಭೈರತಿ ಬಸವರಾಜ್ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕೆಂದು ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಆರು ಸಚಿವರಿಗೆ ಭೀತಿ ಹುಟ್ಟಿರುವುದು ಏಕೆ? ಇದ್ದಕ್ಕಿಂದ್ದಂತೆ ಯಾಕೆ ಕೋರ್ಟ್ ಮೊರೆ ಹೋಗಿದ್ದಾರೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಸೃಷ್ಟಿಸಿದೆ.
ದಿನೇಶ್ ಕಲ್ಲಳ್ಳಿ ಇನ್ನೂ 6 ಜನರ ಸಿಡಿ ನನ್ನ ಬಳಿ ಇದೆ ಎಂದು ಹೇಳುತ್ತಿದ್ದಂತೆ, ಇತ್ತ 6 ಸಚಿವರು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವುದು ಎಲ್ಲವನ್ನೂ ಸ್ಪಷ್ಟವಾಗಿ ತೆರದಿಟ್ಟಂತಾಗಿದೆ.
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಬಂಡಾಯವೆದ್ದು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರವನ್ನು ಬೀಳಿಸಿದ್ದರು. ಬಳಿಕ ಬಿಜೆಪಿ ಸರ್ಕಾರ ರಚನೆಗೆ ನೆರವಾಗಿ, ಹಾಲಿ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರ ಮುಂದಾಳತ್ವ ವಹಿಸಿದ್ದ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಅಶ್ಲೀಲ ಸಿಡಿ ಬಿಡುಗಡೆಗೊಂಡಿತ್ತು. ಆ ಬಳಿಕ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿಡಿ ಬಿಡುಗಡೆಗೆ ಪ್ರಮುಖ ಕಾರಣಕರ್ತರಾದ ದಿನೇಶ್ ಕಲ್ಲಹಳ್ಳಿ ಅವರು ತಮ್ಮ ಬಳಿ ಇನ್ನೂ ಆರು ಸಚಿವರ ಸಿಡಿಗಳಿವೆ ಎಂದು ಹೇಳಿಕೆ ನೀಡುವ ಮೂಲಕ ಮತ್ತಷ್ಟು ಸಂಚಲನ ಮೂಡಿಸಿದ್ದರು.
ಸರ್ಕಾರದಲ್ಲಿ ಮಿತ್ರಮಂಡಳಿಯ ನಾಯಕರಾಗಿದ್ದ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ಉಳಿದ ಸಚಿವರ ಸ್ಥಾನಮಾನಕ್ಕೆ ಧಕ್ಕೆ ಬರಬಹುದಾ ಎಂಬ ಆತಂಕ ಕೂಡ ವಲಸೆ ಸಚಿವರಲ್ಲಿ ಮೂಡಿದೆ. ಅಲ್ಲದೇ ಈಗಾಗಲೇ ಮೂಲ ಬಿಜೆಪಿಗರು, ವಲಸಿಗರ ಮೇಲೆ ಸಿಟ್ಟಿರುವ ಹಿನ್ನಲೆಯಲ್ಲಿ ತಮ್ಮ ಪ್ರಾಬಲ್ಯ ಕಡಿಮೆಯಾಗುತ್ತದೆ ಎಂಬ ಅನುಮಾನ ವ್ಯಕ್ತವಾಗಿದೆ. ಮಿತ್ರಮಂಡಳಿಯ ಯಾವುದೇ ಸಮಸ್ಯೆ ಬಗೆಹರಿಸುತ್ತಿದ್ದ ರಮೇಶ್ ನಾಯಕತ್ವ ಈಗ ಎದ್ದು ಕಾಣುತ್ತಿದ್ದು ಮುಂದೆ ನಮ್ಮ ಅಹವಾಲುಗಳನ್ನು ಯಾರ ಬಳಿ ಚರ್ಚಿಸುವುದು ಎಂಬ ಚಿಂತೆ ನಾಯಕರಲ್ಲಿ ಶುರವಾಗಿದೆ. ಜೊತೆಗೆ ತಮ್ಮ ವಿರುದ್ಧದ ಯಾವುದಾದರೂ ಮಾನಹಾನಿಯಾಗುವಂತಹ ಸುದ್ದಿ ಇರಬಹುದೇ ಎಂಬೆಲ್ಲಾ ವಿಚಾರಗಳ ಕುರಿತು ಮಿತ್ರಮಂಡಳಿ ಸಚಿವರು ಗುರುವಾರ ಸಂಜೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.