ಉಪರಾಷ್ಟ್ರಪತಿ ಸ್ಥಾನಕ್ಕೆ ಧಂಕರ್ ರಾಜಿನಾಮೆ ನೀಡಿದ್ದಾರೆ. ಮುಂದೆ ಆ ಹುದ್ದೆಯನ್ನು ಯಾರು ಅಲಂಕರಿಸುತ್ತಾರೆ ಎಂಬುದರ ಕುರಿತು ಊಹಾಪೋಹಗಳು ಹೊರಹೊಮ್ಮುತ್ತಿವೆ. ಬಿಹಾರ ಚುನಾವಣೆಯಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತಪ್ಪಿಸಲು ಅವರನ್ನು ಇಲ್ಲಿಗೆ ಕರೆತರಬಹುದು, ಆಂಧ್ರಪ್ರದೇಶದ ಮುಖ್ಯಮಂತ್ರಿ ಪದವಿಗೆ ನಾರಾ ಲೋಕೇಶ್ ಅವರನ್ನು ತರಬೇಕಿರುವುದರಿಂದ, ಚಂದ್ರಬಾಬು ನಾಯ್ಡು ಅವರನ್ನು ತರಬಹುದು, ಜೆ.ಪಿ. ನಡ್ಡಾ ಅವರನ್ನು ಕೂರಿಸಬಹುದು ಹೀಗೆ ನಾನಾ ರೀತಿಯ ಕಥೆಗಳು ಹರಿದಾಡುತ್ತಿವೆ. ಎಷ್ಟೇ ಕಥೆಗಳಿದ್ದರೂ ಅಂತಿಮ ನಿರ್ಧಾರವು ಮೋದಿ ಮತ್ತು ಅಮಿತ್ ಶಾ ಅವರ ತಂತ್ರಗಳು ಮತ್ತು ಆರೆಸ್ಸೆಸ್ ನಿರ್ದೇಶನದ ಮೇಲೆ ಅವಲಂಬಿತವಾಗಿರುತ್ತದೆ. ಇದು ಏನಾಗುತ್ತದೋ ಕಾದು ನೋಡೋಣ. ಆದರೆ, ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಸರ್ವಾಧಿಕಾರಿ ಮತ್ತು ಅವಕಾಶವಾದಿಯಾಗಿ ವರ್ತಿಸುವ ನಾಯಕರಿಗೆ ವಿಫಲತೆಯು ಅನಿವಾರ್ಯ ಎನ್ನುವುದನ್ನು ಜಗದೀಪ್ ಧಂಕರ್ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ರಾಜಿನಾಮೆ
-ಸಿ. ಸಿದ್ದಯ್ಯ
2025ರ ಜುಲೈ 21 ರ ರಾತ್ರಿ ಅನಿರೀಕ್ಷಿತವಾಗಿ ರಾಷ್ಟ್ರಪತಿ ಭವನಕ್ಕೆ ಹೋಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಉಪರಾಷ್ಟ್ರಪತಿ ಜಗದೀಪ್ ಧಂಕರ್, ಅಷ್ಟೇ ಬೇಗನೆ ನಿರ್ಗಮಿಸಿದರು. ತಮ್ಮ ರಾಜೀನಾಮೆ ಕುರಿತು ಯಾರಾದರೂ ತಮ್ಮನ್ನು ಸಂಪರ್ಕಿಸುತ್ತಾರೆ ಎಂಬ ಅವರ ನಿರೀಕ್ಷೆಗಳು ಕೂಡ ಫಲಿಸಲಿಲ್ಲ ಎಂದು ಹೇಳಲಾಗುತ್ತದೆ. ‘ನೀವು ಆರೋಗ್ಯದಿಂದ ಇರಬೇಕು ಎಂದು ಬಯಸುತ್ತೇನೆ’ ಎಂದು ಪ್ರಧಾನಿ ಮೋದಿ ಟ್ವಿಟ್ ಮಾಡಿದರೇ ವಿನಃ, ರಾಜಿನಾಮೆ ವಿಚಾರವಾಗಿ ಪಶ್ಚಾತ್ತಾಪ ಪಡುವ ಲಕ್ಷಣ ಕಾಣುತ್ತಿಲ್ಲ. ರಾಜ್ಯಸಭೆಯಲ್ಲಿ ಯಾವುದೇ ಔಪಚಾರಿಕವಾಗಿ ಬೀಳ್ಕೊಡುಗೆಯೂ ನಡೆಯಲಿಲ್ಲ. ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಬೀಳ್ಕೊಡುಗೆ ವಿಷಯ ಪ್ರಸ್ತಾಪಿಸಿ, ಭೋಜನ ಕೂಟ ಆಯೋಜಿಸುವ ಹೇಳಿಕೆಗೆ ಕೇಂದ್ರ ಕಿವಿಗೊಡಲಿಲ್ಲ. ಕಾಂಗ್ರೆಸ್ಸಿನ ಈ ಪ್ರಸ್ತಾಪಕ್ಕೆ ಸಹಜವಾಗಿಯೇ ಧಂಕರ್ ಪ್ರತಿಕ್ರಿಯಿಸಲಿಲ್ಲ. ರಾಜಿನಾಮೆ
ಇದೆಲ್ಲದರಿಂದ ಅವರು ಕಷ್ಟದ ಪರಿಸ್ಥಿತಿಯಲ್ಲಿ ಮತ್ತು ಭಿನ್ನಾಭಿಪ್ರಾಯಗಳೊಂದಿಗೆ ಏಕಾಏಕಿ ನಿರ್ಗಮಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೂ, ಆಡಳಿತ ಪಕ್ಷಕ್ಕೆ ತೊಂದರೆ ಉಂಟುಮಾಡುವ ಯಾವುದನ್ನೂ ಮಾಡಲು ಅವರು ಬಯಸಲಿಲ್ಲ. ತಮ್ಮ ರಾಜೀನಾಮೆಗೆ ಕಾರಣವಾದ ಪರಿಸ್ಥಿತಿಗಳ ಕುರಿತಂತೆ ವಾಸ್ತವವನ್ನು ಹೇಳಲು ಅವರು ಸಿದ್ಧರಿರಲಿಲ್ಲ. ಈ ಹಿಂದೆ ಜನತಾ ದಳದ ಪರವಾಗಿ ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾಗಿದ್ದಧಂಕರ್ ಅವರು, ಕಾಂಗ್ರೆಸ್ ನಲ್ಲಿಯೂ ಕೆಲಸ ಮಾಡಿ, ನಂತರ ಬಿಜೆಪಿ ಸೇರಿದರು. ರಾಜಿನಾಮೆ
ನಂತರ ಬಂಗಾಳದ ರಾಜ್ಯಪಾಲರಾಗಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಮುಖಾಮುಖಿಯಾಗಿದ್ದಲ್ಲದೆ, ಅವರ ವಿರುದ್ಧ ನೇರ ದಾಳಿಗೆ ಕೂಡಾ ಇಳಿದರು. 2022 ರಲ್ಲಿ ಉಪರಾಷ್ಟ್ರಪತಿ ಆದಾಗ, ರಾಜ್ಯಸಭೆಯ ಅಧ್ಯಕ್ಷರಾಗಿ ಪ್ರತಿ ಪ್ರಮುಖ ಸಂದರ್ಭದಲ್ಲೂ ಬಿಜೆಪಿ ಸರ್ಕಾರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡರು. ಕೇಂದ್ರ ಸಚಿವರನ್ನೂ ಮೀರಿ ಪ್ರತಿ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ ಅವರು, ಮಣಿಪುರ ಬಿಕ್ಕಟ್ಟು ಮತ್ತು ಸಂಸತ್ತಿನ ಭದ್ರತೆಯ ಉಲ್ಲಂಘನೆಯ ಬಗ್ಗೆ ಚರ್ಚೆ ನಡೆಸಬೇಕೆಂದು ವಿರೋಧ ಪಕ್ಷಗಳು ಎಷ್ಟೇ ಒತ್ತಾಯಿಸಿದರೂ, ಅದನ್ನು ಒಪ್ಪಿಕೊಳ್ಳಲು ಮೊಂಡುತನದಿಂದ ನಿರಾಕರಿಸಿದರು. ಕುಸ್ತಿಪಟು ವಿನೇಶ್ ಫೋಗಟ್ ಮೇಲೆ ದೌರ್ಜನ್ಯ ನಡೆದಾಗಲೂ, ಅದನ್ನು ಚರ್ಚಿಸಲು ನಿರಾಕರಿಸಿದ್ದಲ್ಲದೆ, ನೀವು ಮಾತ್ರವೇ ಮಹಿಳಾ ಪರವಾದ ಪಕ್ಷವಲ್ಲ ಎಂದು ವಿರೋಧ ಪಕ್ಷಗಳ ಮೇಲೆ ದಾಳಿ ಮಾಡಿದರು. ಅವರು ಮೋದಿಯನ್ನು ಹೊಗಳಿದ್ದಲ್ಲದೆ, ತಮ್ಮನ್ನು ತಾವು ಆರ್‌ಎಸ್‌ಎಸ್ ಶಿಷ್ಯರೆಂದು ಘೋಷಿಸಿಕೊಂಡರು. ರಾಜಿನಾಮೆ

ಮಂಡಿನೋವು ಬಂತೇ?
ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ @ ಫೇಸ್ಬುಕ್
ಧಂಕರ್ ಮತ್ತಷ್ಟುಸುದ್ದಿ ಮಾಡಿದ್ದು ನ್ಯಾಯ ವ್ಯವಸ್ಥೆಯ ಮೇಲೆ ದಾಳಿ ಮಾಡುವುದರಲ್ಲಿ. ಸಂವಿಧಾನದ ಮೂಲಭೂತ ಸ್ವರೂಪದ ಬಗ್ಗೆ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಅವರು ಟೀಕಿಸಿದರು. ರಾಜ್ಯಪಾಲರ ನಡವಳಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸಹ ಅವರು ಟೀಕಿಸಿದರು. ಬಿಜೆಪಿಯ ಮೇಲೆ ಅಷ್ಟೊಂದು ಪ್ರಭಾವ ಹೊಂದಿದ್ದ ವ್ಯಕ್ತಿಯ ದ ನಿರ್ಗಮನ ಆಳುವವವರ ಇಂತಹ ನಿರ್ಲಕ್ಷ್ಯದೊಂದಿಗೆ ಏಕೆ ಸಂಭವಿಸಿತು? ರಾಜಿನಾಮೆ
ಹಿಂದಿನ ಅನುಭವಗಳು
ಇಂತಹ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ, ನಾವು ಸಾಂವಿಧಾನಿಕ ನಿಬಂಧನೆಗಳು, ರಾಜಕೀಯ ವಾಸ್ತವಗಳು ಅವುಗಳ ಚೈತನ್ಯವನ್ನು ಅರ್ಥಮಾಡಿಕೊಳ್ಳಬೇಕು. ಉಪರಾಷ್ಟ್ರಪತಿ ಸ್ಥಾನವು ಅಲಂಕಾರಿಕವಾಗಿದ್ದರೂ, ಅಧ್ಯಕ್ಷರಾಗಿ ರಾಜ್ಯಸಭೆಯನ್ನು ನಡೆಸುವುದು ಒಂದು ಬಹುಮುಖ್ಯ ಅಂಶವಾಗಿದೆ. ರಾಷ್ಟ್ರಪತಿಯವರ ಮರಣವೇನಾದರೂ ಸಂಭವಿಸಿದರೆ, ತಾತ್ಕಾಲಿಕವಾಗಿ ರಾಷ್ಟ್ರಪತಿಯವರ ಜವಾಬ್ದಾರಿಗಳನ್ನು ಸಹ ಆ ಪದವಿಯಲ್ಲಿ ಇರುವವರು ನಿರ್ವಹಿಸಬೇಕಾಗುತ್ತದೆ. ಹಿಂದೆ ವಿ.ವಿ. ಗಿರಿ, ಬಿ.ಡಿ. ಜತ್ತಿ ಈ ರೀತಿಯಲ್ಲಿ ರಾಷ್ಟ್ರಪತಿಗಳ ಜವಾಬ್ದಾರಿಗಳನ್ನು ನಿರ್ವಹಿಸಿದರು. ಫಕ್ರುದ್ದೀನ್ ಅಲಿ ಅಹ್ಮದ್ ಅವರ ಹಠಾತ್ ಮರಣದ ಕಾರಣ ತುರ್ತು ಪರಿಸ್ಥಿತಿಯ ನಂತರ ಜನತಾ ಸರ್ಕಾರ ರಚನೆಯಾದಾಗ, ಬಿ.ಡಿ. ಜತ್ತಿ ಆ ಜವಾಬ್ದಾರಿಗಳನ್ನು ನಿರ್ವಹಿಸಿದರು. ಅನೇಕ ಸಂದರ್ಭಗಳಲ್ಲಿ, ಉಪರಾಷ್ಟ್ರಪತಿ ಆಗಿದ್ದವರನ್ನು ಮುಂದಿನ ರಾಷ್ಟ್ರಪತಿಗಳಾಗಿ ಸರ್ವಾನುಮತದಿಂದ ಆಯ್ಕೆ ಮಾಡುವುದನ್ನು ನಾವು ನೋಡಿದ್ದೇವೆ. ರಾಜಿನಾಮೆ
ಸರ್ವಪಲ್ಲಿ ರಾಧಾಕೃಷ್ಣನ್, ಜಾಕಿರ್ ಹುಸೇನ್, ವಿ.ವಿ. ಗಿರಿ, ಆರ್. ವೆಂಕಟರಾಮನ್, ಶಂಕರ್ ದಯಾಳ್ ಶರ್ಮಾ ಅವರಂತಹ ಜನರು ಈ ರೀತಿಯಾಗಿ ಅತ್ಯುನ್ನತ ಹುದ್ದೆಗೆ ಬಂದಿದ್ದಾರೆ. ಉಪರಾಷ್ಟ್ರಪತಿ ಸ್ಥಾನವನ್ನು ಹೊಂದಿರುವವರು ಪ್ರಬುದ್ಧತೆ ಮತ್ತು ಗೌರವದಿಂದ ವರ್ತಿಸುವುದು ವಾಡಿಕೆ. ಕೆಲವೊಮ್ಮೆ ಹಿನ್ನಡೆಗಳು ಎದುರಾದಾಗಲೂ, ಆಳುವ ಸರ್ಕಾರದ ನಾಯಕರು ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಿದ್ದರು. ನೆಹರೂ ಅವರ ಅವಧಿಯಲ್ಲಿ ರಾಧಾಕೃಷ್ಣನ್ ಉಪರಾಷ್ಟ್ರಪತಿ ಆಗಿದ್ದಾಗ, ಅವರ ವಿರುದ್ದ ಕಾಂಗ್ರೆಸ್ಸಿನ ಕೆಲವು ನಾಯಕರು ಟೀಕೆ ಮಾಡಿದರು. ಅವರನ್ನು ನೆಹರೂ ಖಂಡಿಸದೇ ಇದ್ದುದಕ್ಕೆ ರಾಧಾಕೃಷ್ಣನ್ ಸ್ವಲ್ಪ ಅಸಮಾಧಾನಗೊಂಡಿದ್ದರು ಎಂಬ ವರದಿಗಳಿದ್ದವು. ಆದರೆ ನೆಹರೂ ಸಾಮಾನ್ಯ ಸಂಬಂಧಗಳನ್ನು ಉಳಿಸಿಕೊಂಡಿದ್ದಲ್ಲದೆ, ತಮ್ಮ ಸಮ್ಮುಖದಲ್ಲಿ ಯಾರೂ ಆ ರೀತಿ ಹೇಳಿಲ್ಲ ಎಂದು ಹೇಳುವ ಮೂಲಕ ತಪ್ಪುಗ್ರಹಿಕೆಯನ್ನು ನಿವಾರಿಸಿದರು. ರಾಜಿನಾಮೆ
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಅನಾಮಿಕ ದೂರುದಾರನ ಹಿನ್ನೆಲೆಗೆ ತನಿಖೆ
ಶಂಕರ್ ದಯಾಳ್ ಶರ್ಮಾ ರಾಜ್ಯಸಭೆಯ ಅಧ್ಯಕ್ಷತೆ ವಹಿಸಿದ್ದಾಗ, ಆಗಿನ ಪ್ರಧಾನಿ ರಾಜೀವ್ ಗಾಂಧಿಯವರ ಸಮ್ಮುಖದಲ್ಲಿಯೇ ಕಾಂಗ್ರೆಸ್ ನಾಯಕರ ಪ್ರತಿಭಟನೆಯನ್ನು ನೋಡಿ ಅವರು ಅಸಮಾಧಾನಗೊಂಡು ಕಣ್ಣೀರು ಹಾಕಿದರು. ಆಗಲೂ, ಕೇಂದ್ರ ನಾಯಕರು ಹೊಂದಾಣಿಕೆಗಳನ್ನು ಮಾಡಿಕೊಂಡರು ಮಾತ್ರವಲ್ಲದೆ, ನಂತರ, ಎಡ ಪಕ್ಷಗಳ ಬೆಂಬಲದೊಂದಿಗೆ ಅವರನ್ನು ರಾಷ್ಟ್ರಪತಿಯನ್ನಾಗಿಯೂ ಮಾಡಿದರು. ರಾಜಿನಾಮೆ
ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಅವಧಿಯಲ್ಲಿ ಸಂಘಪರಿವಾರದ ನಾಯಕರು ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದಾಗ, ಪ್ರಧಾನ ಮಂತ್ರಿಯವರಿಗಿಂತ ಮೊದಲೇ ಪ್ರತಿಕ್ರಿಯಿಸುವ ಮೂಲಕ ಶರ್ಮಾ ತಮ್ಮ ಸ್ಥಾನದ ಘನತೆಯನ್ನು ಕಾಪಾಡಿಕೊಂಡರು. ವಾಜಪೇಯಿ ಆಡಳಿತಾವಧಿಯಲ್ಲಿ, ಉಪರಾಷ್ಟ್ರಪತಿಯಾಗಿದ್ದ ಕೃಷ್ಣಕಾಂತ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಲು ಅವರೇ ಪ್ರಸ್ತಾಪಿಸಿದ ನಂತರ, ಹಠಾತ್ ಬದಲಾವಣೆಯಿಂದ ಅವರು ಅಸಮಾಧಾನಗೊಂಡು ಅನಾರೋಗ್ಯಕ್ಕೆ ಒಳಗಾದರು. (ಕೃಷ್ಣಕಾಂತ್ ಕೂಡ ಜುಲೈ 27, 2002 ರಂದು ಇದ್ದಕ್ಕಿದ್ದಂತೆ ನಿಧನರಾದರು). ರಾಜಿನಾಮೆ
ಹಮೀದ್ ಅನ್ಸಾರಿ ಉಪರಾಷ್ಟ್ರಪತಿ ಆಗಿದ್ದಾಗ, ಸಂಘಪರಿವಾರದ ಜನ ಅವರ ವಿರುದ್ಧ ಕೋಮುವಾದಿ ವಿಷ ಪ್ರಚಾರವನ್ನು ಮಾಡಿ ತೀವ್ರವಾಗಿ ಟೀಕಿಸಿದರು.
ವೆಂಕಯ್ಯ ನಾಯ್ಡು ಒಂದು ಹಂತದಲ್ಲಿ ಮೋದಿಗಿಂತ ಹಿರಿಯರಾಗಿದ್ದರೂ, ಆ ಸ್ಥಾನವನ್ನು ಮಾತ್ರ ಅವರು ಆನಂದಿಸಿರಲಿಲ್ಲ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳು ಎಷ್ಟೇ ಕಥೆಗಳನ್ನು ಬಿಟ್ಟರೂ, ಅವರಿಗೆ ಮುಂದಿನ ಅತ್ಯುನ್ನತ ಸ್ಥಾನ ಸಿಗಲಿಲ್ಲ. ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ರಾಮನಾಥ್ ಕೋವಿಂದ್ ಅವರಿಗೆ ‘ಏಕಕಾಲದಲ್ಲಿ ಚುನಾವಣೆ’ ವರದಿ ಮಾಡುವ ಕೆಲಸವನ್ನು ವಹಿಸುವ ಮೂಲಕ, ಮೋದಿ ತಮ್ಮ ಮಾತೇ ಕಾನೂನು ಎಂದು ಸ್ಪಷ್ಟಪಡಿಸಿದರು. ರಾಜಿನಾಮೆ
ಸಂಸತ್ತಿನ ನೂತನ ಕಟ್ಟಡಗಳ ಉದ್ಘಾಟನೆಯ ಸಮಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆಯದೇ ನಿರ್ಲಕ್ಷ್ಯ ಮಾಡಿದರು.

ನಮಸ್ಕಾರ! ವೈದ್ಯಕೀಯ ಕಾರಣಕ್ಕೆ
ವ್ಯಂಗ್ಯಚಿತ್ರ ಕೃಪೆ: ಮಂಜುಲ್ @ಫೇಸ್ಬುಕ್
ಧಂಕರ್ ಅವರ ಕಥೆ ಅದಕ್ಕೆ ವಿಭಿನ್ನವಾಗಿದೆ. ಮೋದಿಯವರ ಆಡಳಿತದಲ್ಲಿ ಎಲ್ಲ ವ್ಯವಸ್ಥೆಗಳಂತೆ ಎರಡು ಅತ್ಯುನ್ನತ ವ್ಯವಸ್ಥೆಗಳು ಕೂಡ ಅವರ ಇಚ್ಛೆಯಂತೆಯೇ ನಡೆಯಬೇಕಾಗಿದೆ ಎಂಬುದನ್ನು ಅನುಭವಗಳು ತೋರಿಸುತ್ತವೆ. ಈಗ ಉಪರಾಷ್ಟ್ರಪತಿ ಸ್ಥಾನದಿಂದ ಕೆಳಗಿಳಿದ ಧನಕರ್ ತನಗೆ ಬೇಕಾದಂತೆ ಹಾಡಿದಷ್ಟೂ ಕಾಲ ಮುಂದೆ ತಳ್ಳಿ, ಸ್ವಲ್ಪ ವ್ಯತ್ಯಾಸ ಕಂಡ ತಕ್ಷಣವೇ ಊಟದಲ್ಲಿನ ಕರಿಬೇವಿನ ಎಲೆಗಳನ್ನು ತೆಗೆದು ಎಸೆದಂತೆ ಎಸೆದರು. ಇಷ್ಟಕ್ಕೂ ಅವರ ನಡುವೆ ಯಾವ ವ್ಯತ್ಯಾಸವಿದೆ? ರಾಜಿನಾಮೆ
ಅವಕಾಶವಾದಿ ನಾಯಕರಿಗೆ ವಿಫಲತೆಯು ಅನಿವಾರ್ಯ
ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಸರ್ವಾಧಿಕಾರಿ ಮತ್ತು ಅವಕಾಶವಾದಿಯಾಗಿ ವರ್ತಿಸುವ ನಾಯಕರಿಗೆ ವಿಫಲತೆಯು ಅನಿವಾರ್ಯ ಎನ್ನುವುದನ್ನು ಜಗದೀಪ್ ಧಂಕರ್ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸ್ವತಃ ಆರ್‌ಎಸ್‌ಎಸ್ ಹಿನ್ನೆಲೆಯಿಲ್ಲದ ಅವರು ಆರೆಸ್ಸೆಸ್ ಅನ್ನು ಮೆಚ್ಚಿಸಲು ತಮ್ಮ ಶಕ್ತಿಮೀರಿ ನಡೆದುಕೊಂಡರು. ಅಲಂಕಾರಿಕವಾದ ಉಪರಾಷ್ಟ್ರಪತಿ ಸ್ಥಾನವನ್ನು ಬಹಳ ಶಕ್ತಿಶಾಲಿಯಾದುದು ಎಂದು ಭ್ರಮಿಸಿ ಹದ್ದುಮೀರಿ ವರ್ತಿಸಿದರು. ಲೋಕಸಭೆಗಿಂತ ಸ್ವಲ್ಪ ಭಿನ್ನವಾಗಿ ರಾಜ್ಯಸಭೆಯಲ್ಲಿನ ಕಾರ್ಯವಿಧಾನವು ಮಾದರಿಯಾಗಿರುತ್ತದೆ. ಆದರೆ ಹಲವು ಬಾರಿ ಅವರು ರಾಜ್ಯಸಭೆಯಲ್ಲಿ ಉದ್ವಿಗ್ನತೆಗೆ ಕಾರಣರಾಗಿದ್ದಾರೆ. ನ್ಯಾಯಾಂಗ ಮತ್ತು ಸಾಂವಿಧಾನಿಕ ಪರಿಶೀಲನಾ ಅಧಿಕಾರವನ್ನು ಸಹ ಪ್ರಶ್ನೆ ಮಾಡಿದರು. ಇದಕ್ಕೆ ಆಡಳಿತ ಪಕ್ಷದಿಂದ ಬೆಂಬಲ ಸಿಗದಿದ್ದಾಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಮೂರ್ತಿಗಳ ನೇಮಕಾತಿ, ಸುಪ್ರೀಂ ಕೋರ್ಟ್ ತೀರ್ಪುಗಳಂತಹ ವಿಷಯಗಳ ಮೇಲೆ ರಾಜಕೀಯ ತಂತ್ರಗಳನ್ನು ಮಾಡಬಹುದಾದರೂ, ನಿರಂತರ ನೇರ ದಾಳಿ ಮಾಡುವುದು ಸೂಕ್ಷ್ಮ ವಿಷಯವಾಗಿ ಮಾರ್ಪಟ್ಟಿವೆ. ಭ್ರಷ್ಟಾಚಾರಕ್ಕಾಗಿ ನ್ಯಾಯಮೂರ್ತಿ ವರ್ಮಾ ಅವರನ್ನು ದೋಷಾರೋಪಣೆ ಮಾಡಲು ಒಮ್ಮತವಿದ್ದರೂ, ವಿಶೇಷ ಕ್ರಮವನ್ನು ತೆಗೆದುಕೊಳ್ಳಲು ಅವರು ಇಷ್ಟಪಡಲಿಲ್ಲ. ಅವರು ತಮ್ಮ ಶ್ರೇಷ್ಠತೆಯನ್ನು ಪ್ರದರ್ಶಿಸಲು ಬಯಸಿದರೆ, ತಮ್ಮ ಸಮ್ಮುಖದಲ್ಲಿಯೇ ತಮ್ಮ ದೋಷಾರೋಪಣೆ ನಡೆಯಬೇಕೆಂದು ಧಂಕರ್ ಬಯಸಿದ್ದರು. ಲೋಕಸಭೆಯಲ್ಲಿ ಸರ್ಕಾರವೇ ಈ ನಿರ್ಣಯವನ್ನು ತರಬೇಕು. ರಾಜಿನಾಮೆ
ಇದನ್ನೂ ನೋಡಿ: ಪರಿಸರ ಜಾಗೃತಿ | ‘ಪ್ಲಾಸ್ಟಿಕ್ ಬಳಕೆಯಿಂದ ಜೀವರಾಶಿಗೆ ಅಪಾಯ‘ Janashakthi Media
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಭಾಷಣದೊಂದಿಗೆ ಮೊದಲ ಹೆಜ್ಜೆ ಇಡುವುದು ಮೋದಿ ಸರ್ಕಾರಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗದ ಸಂಗತಿಯಾಗಿ ಪರಿಣಮಿಸಿದೆ. ಅದನ್ನು ತಪ್ಪಿಸುವ ಮೂಲಕ, ಆ ನಿರ್ಣಯವನ್ನು ಈಗ ನಿಷ್ಪ್ರಯೋಜಕವೆಂದು ಲೋಕಸಭೆಯಲ್ಲಿಯೇ ಮಂಡಿಸುತ್ತಿದ್ದಾರೆ. ಇದೇ ಸಮಯದಲ್ಲಿ, ಬಿಜೆಪಿ ಅಧ್ಯಕ್ಷೀಯ ಚುನಾವಣೆಯ ವಿಳಂಬ, ಅಲ್ಲೊಂದು ಇಲ್ಲೊಂದು ಪ್ರಮುಖ ನಾಯಕರ ಬದಲಾವಣೆಯಿಂದ ಉಪರಾಷ್ಟ್ರಪತಿ ಹುದ್ದೆ ಖಾಲಿಯಾದರೆ ಒಳಿತೆಂದು ಅವರು ತಂತ್ರ ಹೆಣೆದಿದ್ದಾರೆ.
ಧಂಕರ್ ಅವರ ಕಾರ್ಯವೈಖರಿಯನ್ನು ದೋಷಾರೋಪಣೆಗೆ ಒಳಪಡಿಸುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಹೇಗಾದರೂ ಮಾಡಿ ಕೆಳಗಿಳಿಸುತ್ತಾರೆ, ತಾನಾಗಿಯೇ ರಾಜಿನಾಮೆ ನೀಡಿ ಗೌರವ ಕಾಪಾಡಿಕೊಳ್ಳುವುದು ಸರಿ ಎಂದು ಅವರು ಭಾವಿಸಿದ್ದಾರೆಂದು ತೋರುತ್ತದೆ. ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೂ ಏಕಪಕ್ಷೀಯ ವಿಧಾನ ಅನುಸರಿಸುತ್ತಿರುವುದು ಇಲ್ಲಿ ಕಳವಳಕಾರಿಯಾಗಿದೆ.
ಮುಂದೇನು?
ಜಗದೀಪ್ ಧಂಕರ್ ಅವರ ರಾಜೀನಾಮೆಯಿಂದ ತೆರವಾದ ಉಪರಾಷ್ಟ್ರಪತಿ ಸ್ಥಾನಕ್ಕೆ ತ್ವರಿತವಾಗಿ ಚುನಾವಣೆ ನಡೆಸುವುದಕ್ಕೆ ಚುನಾವಣಾ ಆಯೋಗವು ರಾಜ್ಯಸಭೆಯ ಕಾರ್ಯದರ್ಶಿಯನ್ನು ಉಸ್ತುವಾರಿಯಾಗಿ ನೇಮಿಸಿದೆ. ಸಂವಿಧಾನದ 63 ನೇ ವಿಧಿಯು ಉಪರಾಷ್ಟ್ರಪತಿ ಕುರಿತಂತೆ, 68 ನೇ ವಿಧಿಯು ಆ ಹುದ್ದೆಗೆ ಚುನಾವಣೆಯ ಕರಿತಂತೆ ಹೇಳುತ್ತದೆ. ಆದರೆ, ರಾಷ್ಟ್ರಪತಿಗಳ ವಿಷಯದಲ್ಲಿ ಆರು ತಿಂಗಳೊಳಗೆ ಚುನಾವಣೆಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳುವ ಸಂವಿಧಾನವು, ಉಪರಾಷ್ಟ್ರಪತಿಗಳ ವಿಷಯದಲ್ಲಿ ಸಾಧ್ಯವಾದಷ್ಟು ತ್ವರಿತವಾಗಿ (ASAP)ಎಂದು ಮಾತ್ರ ಹೇಳುತ್ತದೆ.
ಮುಂದೆ ಯಾರು ಆ ಹುದ್ದೆಯನ್ನು ಅಲಂಕರಿಸುತ್ತಾರೆ ಎಂಬುದರ ಕುರಿತು ಊಹಾಪೋಹಗಳು ಮತ್ತು ವಿಭಿನ್ನ ದೃಷ್ಟಿಕೋನಗಳು ಹೊರಹೊಮ್ಮುತ್ತಿವೆ. ಬಿಹಾರ ಚುನಾವಣೆಯಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತಪ್ಪಿಸಲು ಅವರನ್ನು ಇಲ್ಲಿಗೆ ಕರೆತರಬಹುದು ಎಂದು, ಆಂಧ್ರಪ್ರದೇಶದ ಮುಖ್ಯಮಂತ್ರಿ ಪದವಿಗೆ ನಾರಾ ಲೋಕೇಶ್ ಅವರನ್ನು ತರಬೇಕಿರುವುದರಿಂದ, ಚಂದ್ರಬಾಬು ನಾಯ್ಡು ಅವರನ್ನು ತರಬಹುದು ಎಂದು ನಾನಾ ರೀತಿಯ ಕಥೆಗಳು ಹರಿದಾಡುತ್ತಿವೆ. ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರುವ ಜೆ.ಪಿ. ನಡ್ಡಾ ಅವರನ್ನು ಕೂರಿಸಬಹುದು ಎಂದು, ಅಸಲಿಗೆ ಅದಕ್ಕಾಗಿಯೇ ಈ ಬಿಕ್ಕಟ್ಟು ಸೃಷ್ಟಿಯಾಯಿತು ಎಂಬುದು ಮತ್ತೊಂದು ಕಥನ. ಎಷ್ಟೇ ಕಥೆಗಳಿದ್ದರೂ ಅಂತಿಮ ನಿರ್ಧಾರವು ಮೋದಿ ಮತ್ತು ಅಮಿತ್ ಶಾ ಅವರ ತಂತ್ರಗಳು ಮತ್ತು ಆರೆಸ್ಸೆಸ್ ನಿರ್ದೇಶನದ ಮೇಲೆ ಅವಲಂಬಿತವಾಗಿರುತ್ತದೆ. ಎನ್‌ಡಿಎ ಪಾಲುದಾರರಿಗೆ ಯಾರಿಗೂ ಈ ಪದವಿ ನೀಡುವ ಉದ್ದೇಶ ಇಲ್ಲ, ಎಂದೂ ಬಿಜೆಪಿ ಮೂಲಗಳು ಸ್ಪಷ್ಟವಾಗಿ ಘೋಷಿಸಿವೆ.

ವೈದ್ಯಕೀಯವಾಗಿ ಅರ್ಹರಾಗಿರಬೇಕು
ಮತ್ತು ಬೆನ್ನೆಲುಬು ಬಾಗುವಂತಿರಬೇಕು
ವ್ಯಂಗ್ಯಚಿತ್ರ ಕೃಪೆ: ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್
ಈ ಹಿಂದೆ ಮೋದಿ ಜತೆ ಭಿನ್ನಾಭಿಪ್ರಾಯ ಹೊಂದಿ ಹೊರಹೋಗಿದ್ದ ಗೋವಿಂದಾಚಾರ್ಯ, ಕಲ್ಯಾಣ್ ಸಿಂಗ್, ಸತ್ಯಪಾಲ್ ಮಲಿಕ್, ಯಶವಂತ್ ಸಿನ್ಹಾ ಮತ್ತು ವೆಂಕಯ್ಯ ನಾಯ್ಡು ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿಲ್ಲ. ಮತ್ತೊಂದೆಡೆ, ಹೊರಗಿನಿಂದ ಬಂದ ವಲಸೆ ನಾಯಕರಿಗೆ ದೊಡ್ಡ ಜವಾಬ್ದಾರಿಗಳನ್ನು ನೀಡುವುದರ ಬಗ್ಗೆ ಅಸಮಾಧಾನದ ಭಾವನೆ ಇದೆ. ಇಲ್ಲದಿದ್ದರೆ, ಆರಿಫ್ ಮೊಹಮ್ಮದ್ ಖಾನ್, ಜ್ಯೋತಿರಾದಿತ್ಯ ಸಿಂಧಿಯಾ, ಹೇಮಂತ್ ಬಿಸ್ವ ಶರ್ಮಾ ಅವರಂತಹ ಜನರು ಸಹ ಚೆನ್ನಾಗಿ ಹೊಂದಿಕೊಂಡಾರು. ಈ ಲೆಕ್ಕಾಚಾರಗಳ ಆಧಾರದ ಮೇಲೆ, ಬಿಜೆಪಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಸಂಘ ಪರಿವಾರಕ್ಕೆ ನಿಷ್ಠೆ ತೋರಿಸಿದವರಿಗೆ ಹೋಗುತ್ತವೆ ಎಂದು ದೃಢವಾಗಿ ಹೇಳಬಹುದು. ಉಪರಾಷ್ಟ್ರಪತಿಯವರನ್ನು ಆಯ್ಕೆ ಮಾಡುವುದು ಉಭಯ ಸದನಗಳ ಸದಸ್ಯರು ಮಾತ್ರ. ಎನ್‌ಡಿಎ-ಬಿಜೆಪಿಗೆ ಸ್ಪಷ್ಟವಾದ ಮೇಲುಗೈ ಇದೆ.
ಅದಕ್ಕಾಗಿಯೇ ಇದು ದೊಡ್ಡ ರಾಜಕೀಯ ಸಂಚಲನವಾಗದಿರಬಹುದು. ವಿರೋಧ ಪಕ್ಷಗಳು, ವಿಶೇಷವಾಗಿಇಂಡಿಯಾ’ ವೇದಿಕೆ ಏನು ಮಾಡುತ್ತದೆ? ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. 75 ವರ್ಷಗಳ ನಿವೃತ್ತಿ ಕಥೆಗಳ ನಂತರವೂ, ಬಿಜೆಪಿಯಲ್ಲಿ ನಮೋ ಸೂತ್ರ ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಧಂಕರ್ ಪ್ರಸಂಗ ಸಾಬೀತುಪಡಿಸಿದೆ.
ಆಧಾರ: ನವತೆಲಂಗಾಣ
