ಕಳೆದ ಹಲವು ದಶಕಗಳಲ್ಲಿ ವಿಶ್ವಾಸಾರ್ಹ ನಡೆ ದಾಖಲಿಸಿದ್ದ ಕೇಂದ್ರ ಚುನಾವಣೆ ಆಯೋಗ, ಈಗ ತನ್ನ ಪ್ರತಿಷ್ಠೆ-ಘನತೆಯನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ. ಮೋದಿ ಸರ್ಕಾರ, ಈಗ ಎಲ್ಲರಿಗೂ ವಿದಿತವಾಗಿ ಬಿಟ್ಟಿರುವ ತನ್ನ ನಿರ್ದಿಷ್ಟ ಕಾರ್ಯವಿಧಾನದ ಮೂಲಕ ಚುನಾವಣೆ ಆಯೋಗವನ್ನು ‘ಪಳಗಿಸುತ್ತಿದೆ’. ಚುನಾವಣಾ ಆಯೋಗದ ನಡೆಯೇ ಸಂದೇಹಾಸ್ಪದವಾದರೆ, ಅದು ಸಂಸದೀಯ ಪ್ರಜಾಪ್ರಭುತ್ವಕ್ಕೇ ಗಂಡಾಂತರ ತರುತ್ತದೆ. ಚುನಾವಣೆ ಆಯೋಗವನ್ನು ಮೋದಿ ಸರ್ಕಾರದ ಕಪಿಮುಷ್ಠಿಯಿಂದ ಮುಕ್ತಗೊಳಿಸುವುದು ತುಂಬಾ ಮುಖ್ಯವಾಗಿದೆ. ಹಣ ಬಲ ಹಾಗೂ ಪಕ್ಷಾಂತರ ನಿಯಂತ್ರಣಕ್ಕೆ ಮತ್ತು ಚುನಾವಣಾ ವ್ಯವಸ್ಥೆಯನ್ನು ಹೆಚ್ಚು ಪ್ರಾತಿನಿಧಿಕವಾಗಿಸಲು ಚುನಾವಣಾ ಸುಧಾರಣೆಗಳು ತುರ್ತಾಗಿ ಆಗಬೇಕಿದೆ. ಆದರೆ ಈ ಎಲ್ಲ ಸುಧಾರಣೆಗಳು ಚುನಾವಣೆ ಆಯೋಗದ ಸುಧಾರಣೆಯೊಂದಿಗೇ ಆರಂಭ ಆಗಬೇಕಿದೆ ಎಂದು ಸಿಪಿಐ(ಎಂ) ಪೊಲೀಟ್ ಬ್ಯೂರೋ ಸದಸ್ಯರಾದ ಪ್ರಕಾಶ್ ಕಾರಟ್ ವಿಶ್ಲೇಷಿಸುತ್ತಾರೆ.
ನರೇಂದ್ರ ಮೋದಿ ಆಡಳಿತದಲ್ಲಿ ಸಂಸದೀಯ ಸಂಸ್ಥೆಗಳನ್ನು ಬುಡಮೇಲು ಮಾಡುವ ಪ್ರಕ್ರಿಯೆ ಬಹಳ ವೇಗದಿಂದ ಸಾಗಿದೆ. ಇದಕ್ಕೆ, ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿ) ಬಂದೆರಗಿದ ಸ್ಥಿತಿಗಿಂತ ಬೇರೆ ಉದಾಹರಣೆ ಬೇಕಿಲ್ಲ.
ಕೇರಳದಿಂದ ಖಾಲಿಯಿರುವ ಮೂರು ರಾಜ್ಯಸಭೆ ಸ್ಥಾನಗಳಿಗೆ ನಡೆಯಬೇಕಿರುವ ಚುನಾವಣೆಗೆ ಸಂಬಂಧಿಸಿದಂತೆ ಇ.ಸಿ. ತಳೆದಿರುವ ನಿಲುವು, ಚುನಾವಣೆ ಆಯೋಗವು ಮೋದಿ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ರಾಜ್ಯವೊಂದರಿಂದ ಸಂಸತ್ತಿನ ಮೇಲ್ಮನೆಯಲ್ಲಿ ಖಾಲಿಯಿರುವ ಸ್ಥಾನಗಳಿಗೆ ಚುನಾವಣೆ ನಡೆಸುವ ಮಾಮೂಲಿ ಪ್ರಕ್ರಿಯೆ ಬಗ್ಗೆ ಆಯೋಗ ತಳೆದಿರುವ ವಿಚಿತ್ರ ನಿಲುವಿನ ಬಗ್ಗೆ ಇದಕ್ಕಿಂತ ಬೇರೆ ವಿವರಣೆ ಅಗತ್ಯವಿಲ್ಲ.
2021 ಏಪ್ರಿಲ್ 12ರಂದು ಚುನಾವಣೆ ನಡೆಸಲಾಗುವುದೆಂದು ಆಯೋಗ ಮೊದಲು ಪ್ರಕಟಿಸಿತ್ತು. ಒಂದು ವಾರದ ನಂತರ, ಕಾನೂನು ಮತ್ತು ನ್ಯಾಯ ಸಚಿವಾಲಯ ಕಳಿಸಿರುವ ಒಂದು ಟಿಪ್ಪಣಿಯನ್ನು ಪರಿಶೀಲಿಸುವ ಸಲುವಾಗಿ ಚುನಾವಣೆಯನ್ನು ಸದ್ಯ ಮುಂದೂಡುವುದಾಗಿ ತಿಳಿಸಿತು. ಆಯೋಗದ ಈ ನಿರ್ಧಾರ ಪ್ರಶ್ನಿಸಿ ಕೇರಳ ವಿಧಾನಸಭೆಯ ಕಾರ್ಯದರ್ಶಿ ಮತ್ತು ಸಿಪಿಐ(ಎಂ)ನ ಶಾಸಕರೊಬ್ಬರು ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಲಿ ವಿಧಾನಸಭೆಯ ಶಾಸಕರ ಹಕ್ಕನ್ನು ಕಸಿದುಕೊಳ್ಳಲಾಗದು ಎಂದವರು ವಾದಿಸಿದ್ದಾರೆ. ಸದಸ್ಯರ ಅವಧಿ ಮುಗಿಯುವುದರೊಳಗೆ ಚುನಾವಣೆ ನಡೆಸುವುದಾಗಿ ಕೋರ್ಟ್ಗೆ ಆಶ್ವಾಸನೆ ನೀಡಿದ ಇ.ಸಿ. ವಕೀಲರು, ಆ ಹೇಳಿಕೆಯನ್ನು ದಾಖಲಿಸುವಂತೆ ಕೋರ್ಟ್ ಸೂಚಿಸಿದಾಗ ಹಿಂದೇಟು ಹಾಕಿದರು.
ನಂತರದ ವಿಚಾರಣೆಯಲ್ಲಿ, ರಾಜ್ಯದ ಜನರು ಹೊಸ ಅಸೆಂಬ್ಲಿಯನ್ನು ಚುನಾಯಿಸಲು ಏಪ್ರಿಲ್ 6ರಂದು ಮತದಾನ ಮಾಡಿದ್ದು ವಿಧಾನಸಭೆಯ ಈಗಿನ ಅವಧಿಯಲ್ಲಿ ಚುನಾವಣೆ ನಡೆಸುವುದು ಅನಗತ್ಯ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಸಲಹೆ ಮಾಡಿದೆ ಎಂದು ಆಯೋಗ ಹೇಳಿದೆ. ಸರ್ಕಾರದ ಈ ಸಲಹೆಯನ್ನು ಒಪ್ಪಿಕೊಂಡಿದ್ದಾಗಿ ಆಯೋಗ ದಾಖಲಿಸಿದಂತಾಗಿದೆ. ಇದನ್ನು ತಳ್ಳಿ ಹಾಕಿದ ಹೈಕೋರ್ಟ್, ಮೇ 2ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವುದರೊಳಗಾಗಿ ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ನಿರ್ದೇಶಿಸಿದೆ. ಈ ಮೂಲಕ, ಮೂರು ಸ್ಥಾನಗಳಲ್ಲಿ ಎರಡರಲ್ಲಿ ಗೆಲ್ಲುವ ಎಡ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್)ನ ಅವಕಾಶವನ್ನು ಕಸಿಯುವ ಮೋದಿ ಸರ್ಕಾರದ ಯತ್ನವನ್ನು ಕೋರ್ಟ್ ವಿಫಲಗೊಳಿಸಿದೆ. ಮೋದಿ ಸರ್ಕಾರದ ಆಸೆಯಂತೆ ನಡೆಯಲು ಚುನಾವಣೆ ಆಯೋಗ ಯಾವ ಮಟ್ಟಕ್ಕಾದರೂ ಇಳಿಯುತ್ತದೆ ಎನ್ನುವುದನ್ನು ಈ ಪ್ರಕರಣ ಎತ್ತಿ ತೋರಿಸಿದೆ.
ತಲೆಬಾಗುವ ಚಾಳಿ
ಸರ್ಕಾರದ ಮಾರ್ಗದರ್ಶನಗಳಿಗೆ ತಲೆಬಾಗುವ ಪ್ರಕ್ರಿಯೆಗೆ ಚುನಾವಣೆ ಆಯೋಗ ಈ ಮೊದಲೇ ಒಳಗಾಗಿತ್ತು. 2019ರ ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಗಳ ಜೊತೆಯಲ್ಲೇ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ ನಿರ್ಧಾರ ಅದಾಗಿದೆ. ಲೋಕಸಭೆ ಚುನಾವಣೆಯೊಂದಿಗೆ ಜಮ್ಮು-ಕಾಶ್ಮೀರ ಅಸೆಂಬ್ಲಿಗೆ ಆಯೋಗ ಚುನಾವಣೆ ನಡೆಸಲಿಲ್ಲ. 2018 ನವೆಂಬರ್ನಿಂದಲೂ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವಿತ್ತು. ಹೀಗಾಗಿ, ಲೋಕಸಭೆ ಚುನಾವಣೆ ಜೊತೆಯಲ್ಲೇ ಅಸೆಂಬ್ಲಿ ಚುನಾವಣೆಯೂ ನಡೆಯಲಿದೆ ಎನ್ನುವ ನಿರೀಕ್ಷೆ ಸಹಜವಾಗಿತ್ತು. ಆದರೆ ಭದ್ರತಾ ಕಾರಣಗಳಿಂದಾಗಿ ಎನ್ನುತ್ತ ಚುನಾವಣೆ ನಡೆಸಲು ಆಯೋಗ ನಿರಾಕರಿಸಿತ್ತು.
ಇದು ಭಾರಿ ದುರದೃಷ್ಟಕರವಾಗಿ ಪರಿಣಮಿಸಿತು. ಲೋಕಸಭೆ ಚುನಾವಣೆ ನಡೆದ ಮೂರೇ ತಿಂಗಳಲ್ಲಿ ಮೋದಿ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿತು ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸ್ಥಾನಮಾನವನ್ನೇ ಕಿತ್ತು ಹಾಕಿತು. ರಾಜ್ಯಪಾಲರ ಆಡಳಿತ ಇದ್ದಿದ್ದರಿಂದ, ವಿಷಯವನ್ನು ರಾಜ್ಯ ವಿಧಾನಸಭೆಯ ಪರಿಶೀಲನೆಗೆ ಒಪ್ಪಿಸುವ ಸಾಂವಿಧಾನಿಕ ಅಗತ್ಯವನ್ನು ಈ ಮೂಲಕ ಜಾಣ್ಮೆಯಿಂದ ನಿರಾಕರಿಸಲಾಯಿತು. ವಿಧಾನಸಭೆಯ ಬದಲಿಗೆ ರಾಜ್ಯಪಾಲರೊಂದಿಗೆ ಸಮಾಲೋಚಿಸಿದರೆ ಸಾಕೆಂಬ ವಾದ ಮಂಡಿಸಲಾಯಿತು. ಶುದ್ಧವಾಗಿ ಭದ್ರತಾ ಕಾರಣಗಳಿಗಾಗಿಯೇ ಚುನಾವಣೆ ಮುಂದೂಡಿದಂತಿದ್ದ ನಿರ್ಧಾರ, ಈಗ ಹಿಂದಿರುಗಿ ನೋಡುವಾಗ, ನಿಜವಾಗಿಯೂ ಮೋದಿ ಸರ್ಕಾರದ ವಿಸ್ತೃತ ಯೋಜನೆಯ ಭಾಗವಾಗಿತ್ತು ಎನ್ನುವುದು ಇದರಿಂದ ಸಾಬೀತಾಗಿದೆ.
ಚುನಾವಣಾ ಬಾಂಡ್-ಉಲ್ಟಾ ಹೊಡೆದ ಆಯೋಗ
ಚುನಾವಣಾ ಬಾಂಡ್ಗೆ ಸಂಬಂಧಿಸಿದ ಇ.ಸಿ. ನಿರ್ಧಾರವೂ ಇನ್ನೊಂದು ಉದಾಹರಣೆಯಾಗಿದೆ. 2017ರಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಸರ್ಕಾರ ರೂಪಿಸಿದಾಗ ಅದರ ಬಗ್ಗೆ ಅಭಿಪ್ರಾಯ ಸಲ್ಲಿಸುವಂತೆ ಆಯೋಗಕ್ಕೆ ಸೂಚಿಸಲಾಗಿತ್ತು. ಆಯೋಗ ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ ಬಾಂಡ್ ಯೋಜನೆ ಬಗ್ಗೆ ಪ್ರಬಲ ಆಕ್ಷೇಪ ದಾಖಲಿಸಿತ್ತು. “ರಾಜಕೀಯ ಹಣಕಾಸು/ರಾಜಕೀಯ ಪಕ್ಷಗಳ ನಿಧಿಯ ಪಾರದರ್ಶಕತೆ ವಿಚಾರದಲ್ಲಿ ಭಾರಿ ಅಡ್ಡ ಪರಿಣಾಮ ಬೀರಬಹುದು’ ಎಂದು ಆಯೋಗ ಎಚ್ಚರಿಸಿತ್ತು. ಭಾರತದಲ್ಲಿ ಕಾರ್ಯ ನಿರ್ವಹಿಸುವ ವಿದೇಶಿ ಕಂಪೆನಿಗಳು ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ಸೇರಿದಂತೆ ಯಾವುದೇ ರೀತಿಯಲ್ಲಿ ನಿಧಿ ನೀಡಲು ಅವಕಾಶ ಮಾಡಿಕೊಡುವ ಕಾನೂನು ತಿದ್ದುಪಡಿಗೂ ಚುನಾವಣೆ ಆಯೋಗ ಆಕ್ಷೇಪ ಸೂಚಿಸಿತ್ತು.
ಏಪ್ರಿಲ್ನಲ್ಲಿ ಚುನಾವಣಾ ಬಾಂಡ್ನ ಇನ್ನೊಂದು ಕಂತು ಮಾರಾಟಕ್ಕೆ ತಡೆ ನೀಡಬೇಕೆಂದು ಕೋರಿ 2021 ಮಾರ್ಚ್ನಲ್ಲಿ ಸಲ್ಲಿಸಿದ ಅರ್ಜಿ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬಂದಾಗ, ತಡೆಯಾಜ್ಞೆ ಕೊಡುವುದಕ್ಕೆ ಆಯೋಗ ವಿರೋಧ ವ್ಯಕ್ತಪಡಿಸಿತು. ಚುನಾವಣಾ ಬಾಂಡ್ಗೆ ತನ್ನ ವಿರೋಧವಿಲ್ಲ, ಆದರೆ ಪಾರದರ್ಶಕತೆಯನ್ನು ಮಾತ್ರ ತಾನು ಬಯಸುವುದಾಗಿ ಆಯೋಗ ಹೇಳಿತು. ಇಲ್ಲಿಯೂ ಚುನಾವಣೆ ಆಯೋಗ ಬಾಂಡ್ ಯೋಜನೆಗೆ ಆರಂಭದಲ್ಲಿ ದಾಖಲಿಸಿದ್ದ ಬಲಿಷ್ಠ ಆಕ್ಷೇಪದಿಂದ ಹಿಂದೆ ಸರಿದು ಉಲ್ಟಾ ಹೊಡೆದಿದೆ.
ಪಶ್ಚಿಮ ಬಂಗಾಳದ ಎಂಟು ಹಂತಗಳ ಪ್ರಸಕ್ತ ಅಸೆಂಬ್ಲಿ ಚುನಾವಣೆ ವಿಚಾರದಲ್ಲೂ ಆಯೋಗದ ನಡೆ ವಿವಾದಾತ್ಮಕವಾಗಿದೆ. ಸೀತಾಲ್ಕುಚಿಯಲ್ಲಿ ಮತದಾನ ಕೇಂದ್ರದ ಹೊರಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ನಡೆಸಿದ ಗೋಲಿಬಾರಿನಲ್ಲಿ ನಾಲ್ಕು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಆಯೋಗದ ವೀಕ್ಷಕರು ಸಲ್ಲಿಸಿದ ತಪ್ಪು ದಾರಿಗೆಳೆಯುವ ವರದಿಯ ಆಧಾರದಲ್ಲಿ ಚುನಾವಣಾ ಆಯೋಗವು ಕೇಂದ್ರೀಯ ಪಡೆಯನ್ನು ದೋಷಮುಕ್ತಗೊಳಿಸಿದೆ. ಅಲ್ಲಿ ನಿಜವಾಗಿಯೂ ಏನು ನಡೆಯಿತು ಎನ್ನುವುದನ್ನು ತಿಳಿಯಲು ಸ್ಥಳ ಪರಿಶೀಲನೆ ಕೂಡ ಮಾಡಲಿಲ್ಲ.
ನರೇಂದ್ರ ಮೋದಿ ಮತ್ತು ಅಮಿತ್ ಷಾ ನೇತೃತ್ವದಲ್ಲಿ ಬಿಜೆಪಿ ಎಗ್ಗಿಲ್ಲದೆ ಪ್ರಚೋದನಕಾರಿ ಕೋಮುವಾದಿ ಪ್ರಚಾರದಲ್ಲಿ ತೊಡಗಿದೆ. 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆದಂತೆ ಈ ಬಾರಿಯೂ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಗಾಗಿ ಬಿಜೆಪಿಯ ಯಾವೊಬ್ಬ ಉನ್ನತ ನಾಯಕನ ವಿರುದ್ಧವೂ ಮೊಕದ್ದಮೆ ದಾಖಲಾಗಿಲ್ಲ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಭಾಷಣಗಳು ಎಂಸಿಸಿಯ ಉಲ್ಲಂಘನೆ ಎಂದು ಆರೋಪಿಸಿ ಆಯೋಗ ಅವರ ಪ್ರಚಾರದ ಮೇಲೆ 24 ತಾಸಿನ ನಿಷೇಧ ಹೇರಿದೆ.
ಘನತೆ ಕಳೆದುಕೊಳ್ಳುವ ಅಪಾಯ
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಬೇಕಾದರೆ ಚುನಾವಣೆ ಆಯೋಗ ನಿಷ್ಪಕ್ಷಪಾತವಾಗಿರುವುದು ಅತ್ಯಗತ್ಯ. ಎಲ್ಲ ಪಕ್ಷಗಳಿಗೆ ಸಮಾನ ಅವಕಾಶವನ್ನು ಅದು ಖಾತರಿಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಾಗಿ ವರ್ತಿಸಬೇಕು. ಎಲ್ಲ ಮಟ್ಟಗಳಲ್ಲಿ ಕಾರ್ಯಾಂಗದ ಹಸ್ತಕ್ಷೇಪವನ್ನು ಪ್ರತಿರೋಧಿಸಬೇಕು. ಈ ಎಲ್ಲ ವಿಚಾರಗಳಲ್ಲಿ ಕಳೆದ ಹಲವು ದಶಕಗಳಲ್ಲಿ ವಿಶ್ವಾಸಾರ್ಹ ನಡೆ ದಾಖಲಿಸಿದ್ದ ಕೇಂದ್ರ ಚುನಾವಣೆ ಆಯೋಗ, ಈಗ ತನ್ನ ಪ್ರತಿಷ್ಠೆ-ಘನತೆಯನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ.
ಮೋದಿ ಸರ್ಕಾರ, ಈಗ ಎಲ್ಲರಿಗೂ ವಿದಿತವಾಗಿ ಬಿಟ್ಟಿರುವ ತನ್ನ ನಿರ್ದಿಷ್ಟ ಕಾರ್ಯವಿಧಾನದ ಮೂಲಕ ಚುನಾವಣೆ ಆಯೋಗವನ್ನು ‘ಪಳಗಿಸುತ್ತಿದೆ’. 2019ರ ಲೋಕಸಭೆ ಚುನಾವಣೆ ವೇಳೆ ಚುನಾವಣೆ ಆಯುಕ್ತರಲ್ಲಿ ಒಬ್ಬರಾದ ಅಶೋಕ್ ಲವಾಸಾ ಸ್ವತಂತ್ರ ಧೋರಣೆ ತಳೆದಿದ್ದರು. ಮಾದರಿ ಸಂಹಿತೆಯ ಉಲ್ಲಂಘನೆ ವಿಚಾರದಲ್ಲಿ ಮೋದಿ ಮತ್ತು ಷಾರನ್ನು ಆಯೋಗ ದೋಷಮುಕ್ತಗೊಳಿಸಿದ್ದ ಕನಿಷ್ಠ ಐದು ಸಂದರ್ಭಗಳಲ್ಲಿ ಲವಾಸಾ ಭಿನ್ನಮತವನ್ನು ದಾಖಲಿಸಿದ್ದರು. ಅದರ ಫಲವನ್ನು ಲವಾಸಾ ಅನುಭವಿಸಬೇಕಾಯಿತು!. ಲವಾಸಾರ ಪತ್ನಿ, ಮಗ ಮತ್ತು ಸಹೋದರಿ- ಎಲ್ಲರೂ ಆದಾಯ ತೆರಿಗೆ ಇಲಾಖೆಯ ವಿಚಾರಣೆಗ ಒಳಪಡಬೇಕಾಯಿತು. ಅದಕ್ಕೆ ಯೋಜನಾಬದ್ಧವಾಗಿ ವ್ಯಾಪಕ ಮಾಧ್ಯಮ ಪ್ರಚಾರವನ್ನೂ ನೀಡಲಾಯಿತು. ಲವಾಸಾರ ಆಸ್ತಿಪಾಸ್ತಿ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್ನಲ್ಲಿ ಉನ್ನತ ಹುದ್ದೆ ಸ್ವೀಕರಿಸಿದ ನಂತರ ಲವಾಸಾ 2020 ಜುಲೈನಲ್ಲಿ ಚುನಾವಣಾ ಕಮಿಷನರ್ ಹುದ್ದೆಗೆ ರಾಜೀನಾಮೆ ನೀಡಿದರು.
ಸಂಸದೀಯ ಪ್ರಜಾಪ್ರಭುತ್ವಕ್ಕೆ ಗಂಡಾಂತರಕಾರಿ
ಸುನಿಲ್ ಅರೋರಾ ಈಗಷ್ಟೆ ಮುಖ್ಯ ಚುನಾವಣಾ ಕಮಿಷನರ್ (ಸಿಇಸಿ) ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಒಂದು ವೇಳೆ ಲವಾಸಾ ಪದತ್ಯಾಗ ಮಾಡಿರದಿದ್ದರೆ ಅವರೇ ಹೊಸ ಸಿಇಸಿ ಆಗಬೇಕಿತ್ತು. ಒಂದು ಸ್ವತಂತ್ರ, ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿ ಚುನಾವಣೆ ಆಯೋಗದ ಕಾರ್ಯ ನಿರ್ವಹಣೆಯಲ್ಲಿನ ದೌರ್ಬಲ್ಯವನ್ನು ಈ ಪ್ರಕರಣ ಅನಾವರಣಗೊಳಿಸಿದೆ. ಸಿಇಸಿ ಮತ್ತು ಇತರ ಆಯುಕ್ತರನ್ನು ಅಂದಂದಿನ ಸರ್ಕಾರಗಳು ಆಯ್ಕೆ ಮಾಡುತ್ತವೆ. ನೇಮಕ ಪೂರ್ಣವಾಗಿ ಕಾರ್ಯಾಂಗದ ಕೈಯಲ್ಲಿರುತ್ತದೆ. ಆರಂಭದಿಂದಲೂ, ಆಡಳಿತ ಸೇವೆಯ ಅಧಿಕಾರಿಗಳು ಅಥವಾ ಸೇವೆಯಿಂದ ನಿವೃತ್ತರಾದವರನ್ನು ಆಯುಕ್ತರನ್ನಾಗಿ ನೇಮಕ ಮಾಡಲಾಗುತ್ತಿತ್ತು. ಉನ್ನತ ಕಾರ್ಯಾಂಗಕ್ಕೆ ಸುಲಭವಾಗಿ ಅಧೀನರಾಗುವ ಆಡಳಿತ ಸೇವಾ ಅಧಿಕಾರಿಗಳನ್ನು ಪಡೆಯುವುದು ಸುಲಭ. ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ನಿಯಂತ್ರಣಕ್ಕೆ ತರಲು ಮೋದಿ ಸರ್ಕಾರ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಚುನಾವಣೆ ಆಯೋಗವು ಕೇಂದ್ರ ಸರ್ಕಾರದ ಒಂದು ವಿಸ್ತರಣಾ ಭಾಗವಾಗುವ ಅಪಾಯ ಬಂದೊದಗಿದೆ.
ಚುನಾವಣೆ ಆಯೋಗಕ್ಕೆ ಸಂವಿಧಾನದ 324ನೇ ಕಲಮು ಸಂಸತ್ತು ಮತ್ತು ರಾಜ್ಯ ವಿಧಾನ ಮಂಡಲಗಳಿಗೆ ಚುನಾವಣೆಗಳ “ಉಸ್ತುವಾರಿ, ದಿಕ್ಕು ಮತ್ತು ಹತೋಟಿಯನ್ನು” ವಹಿಸಬೇಕು ಎಂದು ವಿಧಿಸುತ್ತದೆ. ಚುನಾವಣಾ ಆಯೋಗದ ನಡೆಯೇ ಸಂದೇಹಾಸ್ಪದವಾದರೆ, ಅದು ಸಂಸದೀಯ ಪ್ರಜಾಪ್ರಭುತ್ವಕ್ಕೇ ಗಂಡಾಂತರ ತರುತ್ತದೆ.
ಚುನಾವಣೆ ಆಯೋಗವನ್ನು ಮೋದಿ ಸರ್ಕಾರದ ಕಪಿಮುಷ್ಠಿಯಿಂದ ಮುಕ್ತಗೊಳಿಸುವುದು ತುಂಬಾ ಮುಖ್ಯವಾಗಿದೆ. ಅದಕ್ಕಾಗಿ, ಮೊದಲ ಹೆಜ್ಜೆಯಾಗಿ, ಚುನಾವಣಾ ಆಯುಕ್ತರ ಆಯ್ಕೆ ಮತ್ತು ನೇಮಕವು ಸಂಪೂರ್ಣವಾಗಿ ಕೇವಲ ಕಾರ್ಯಾಂಗದ ವಿಶೇಷಾಧಿಕಾರ ಆಗುವುದನ್ನು ನಿಲ್ಲಿಸುವುದು ಅಗತ್ಯವಾಗಿದೆ. ಆಯ್ಕೆಗಾಗಿ ಒಂದು ವಿಶಾಲ ನೆಲೆಯ ಸಮಿತಿ ಅಥವಾ ಕೊಲೇಜಿಯಂ ಇರಬೇಕು. ಅದರಲ್ಲಿ ಕಾರ್ಯಾಂಗ ಮಾತ್ರವಲ್ಲದೆ ಉನ್ನತ ನ್ಯಾಯಾಂಗ, ಪ್ರತಿಪಕ್ಷ ನಾಯಕ ಮತ್ತು ಪ್ರಸಿದ್ಧ ನ್ಯಾಯವಿದರು ಇರಬೇಕು. ಆಯುಕ್ತರಾಗುವ ಅರ್ಹತೆಯನ್ನು ಆಡಳಿತ ಸೇವಾ ಅಧಿಕಾರಿಗಳಿಗೆ ಮಾತ್ರವೇ ಸೀಮಿತಗೊಳಿಸಲಾಗದು; ವಿಖ್ಯಾತ ನ್ಯಾಯವಿದರು ಮತ್ತು ಇತರ ಕ್ಷೇತ್ರಗಳ ಗಣ್ಯರು ಕೂಡ ಇರುವುದು ಸಾಧ್ಯವಿದೆ.
ಆಯೋಗದ ಘನತೆಯನ್ನು ಕಾಯ್ದುಕೊಳ್ಳಬೇಕಾದರೆ, ನಿವೃತ್ತರಾಗುವ ಮುಖ್ಯ ಚುನಾವಣಾ ಆಯುಕ್ತರು ಅಥವಾ ಯಾವುದೇ ಆಯುಕ್ತರು ಯಾವುದೇ ಸರ್ಕಾರಿ-ಪ್ರಾಯೋಜಿತ ಹುದ್ದೆಗಳನ್ನು ಸ್ವೀಕರಿಸುವುದನ್ನು ನಿಷೇಧಿಸಬೇಕು. ಹಣ ಬಲ ಹಾಗೂ ಪಕ್ಷಾಂತರ ನಿಯಂತ್ರಣಕ್ಕೆ ಮತ್ತು ಚುನಾವಣಾ ವ್ಯವಸ್ಥೆಯನ್ನು ಹೆಚ್ಚು ಪ್ರಾತಿನಿಧಿಕವಾಗಿಸಲು ಚುನಾವಣಾ ಸುಧಾರಣೆಗಳು ತುರ್ತಾಗಿ ಆಗಬೇಕಿದೆ. ಚುನಾವಣೆ ಆಯೋಗದ ಸುಧಾರಣೆಯೊಂದಿಗೇ ಈ ಎಲ್ಲ ಸುಧಾರಣೆಗಳ ಆರಂಭ ಆಗಬೇಕಿದೆ.
ಅನು: ವಿಶ್ವ