ಮುನೀರ್ ಕಾಟಿಪಳ್ಳ
ಮೂಳೆ ಮುರಿತ ಇಲ್ಲದ, ಐದಾರು ಹೊಲಿಗೆ ಹಾಕುವ ಸಾಮಾನ್ಯ (ಸ್ವಲ್ಪ ಆಳದ ಗಾಯ ಇರಬಹುದು) ಗಾಯಕ್ಕೆ ಆಪರೇಷನ್ ಥೇಟರ್‌ನಲ್ಲಿ ಅನಸ್ತೇಶಿಯಾ ನೀಡಿ ಸರ್ಜರಿಯ ಅವಶ್ಯಕತೆ ಇತ್ತೆ, ಬೆನ್ನು ಮೂಳೆಯ ಬಳಿ ಅನಸ್ತೇಶಿಯಾ ನೀಡುವ ಪ್ರಕರಣವೇ ಇದು, ಅನಸ್ತೇಶಿಯಾ ನೀಡಿದ ಒಂದು ತಾಸಿನ ಒಳಗಡೆ ಆರೋಗ್ಯವಂತ ಬಾಲಕ ಪ್ರಾಣ ಕಳೆದುಕೊಳ್ಳುವುದು ಅಂದರೆ, ಅನಸ್ತೇಶಿಯಾ ಓವರ್ ಡೋಸ್ ಆಗಿರುವ ಪ್ರಮಾಣ ಎಷ್ಟಿರ ಬಹುದು ? ಹುಡುಗ ಅನಸ್ತೇಶಿಯಾ ನೀಡಿ ಎರಡೇ ನಿಮಿಷದಲ್ಲಿ ಪಲ್ಸ್ ಹಲವು ಪಟ್ಟು ಏರು ಪೇರಾಗಿದ್ದರು, ಅದರ ತುರ್ತು ಚಿಕಿತ್ಸೆಯ ಬದಲಿಗೆ ಸರ್ಜರಿ (ಗಾಯಕ್ಕೆ ಹೊಲಿಗೆ ಹಾಕುವ) ಮುಂದುವರಿಸಿದ್ದು ಯಾಕೆ ? ಎಂಬ ಕುಟುಂಬಸ್ಥರ ಪ್ರಶ್ನೆಗಳಿಗೆ ಆಸ್ಪತ್ರೆಯ ಆಡಳಿತದ ಬಳಿ ಸಮರ್ಪಕ ಉತ್ತರ ಇಲ್ಲ. ಖಾಸಗಿ
ಖಾಸಗಿ ಆಸ್ಪತ್ರೆಗಳೆಂಬ ವ್ಯಾಪಾರಿ ಕೇಂದ್ರಗಳಲ್ಲಿ ಗ್ರಾಹಕರಾಗಿ ಬದಲಾಗಿರುವ ರೋಗಿಗಳ ಹಕ್ಕುಗಳನ್ನು ಇಂದು ಕೇಳುವವರೆ ಇಲ್ಲ ಎಂಬಂತಾಗಿದೆ.
“ಖಾಸಗಿ ಆಸ್ಪತ್ರೆಗಳ ಕಾಶಿ” ಎಂದು ಕರೆಯಲ್ಪಡುವ ಮಂಗಳೂರಿನಲ್ಲಂತು ಚಿಕಿತ್ಸೆಗೆ ತೆರಳುವ ಜನಸಾಮಾನ್ಯರ ಪಾಡು ಹೇಳಿ ತೀರದು. ಅನಗತ್ಯ ಪರೀಕ್ಷೆ, ದುಬಾರಿ ದರ ಒಂದು ಸಮಸ್ಯೆಯಾದರೆ, ವೈದ್ಯರ, ಆಸ್ಪತ್ರೆಗಳ ನಿರ್ಲಕ್ಷ್ಯ (ಮೆಡಿಕಲ್ ನೆಗ್ಲಿಜೆನ್ಸಿ) ಕ್ಕೆ ಬಲಿಯಾಗುವ ಅಮಾಯಕ ಜನರ ಸಂಕಟಗಳಿಗೆ ಇಲ್ಲಿ ಉತ್ತರವೇ ಇಲ್ಲ. ನಿರ್ಲಕ್ಷ್ಯದ ಚಿಕಿತ್ಸೆಗೆ ಸಾಲು ಸಾಲು ಬಲಿಗಳಾಗಿದ್ದರೂ, ಸರಿಯಾದ ತನಿಖೆ, ತಪ್ಪಿತಸ್ಥರಿಗೆ ಶಿಕ್ಷೆ, ಬಲಿಪಶುಗಳಿಗೆ ಪರಿಹಾರ ಎಂಬುದು ಮಂಗಳೂರು ಎಂಬ “ಆಸ್ಪತ್ರೆಗಳ ನಗರ” ದಲ್ಲಿ ಮರೀಚಿಕೆಯೇ ಆಗಿ ಉಳಿದಿದೆ.
ಇದರಿಂದ ಇಲ್ಲಿ ಖಾಸಾಗಿ ಮೆಡಿಕಲ್ ಲಾಬಿ ಆಡಿದ್ದೇ ಆಟ. ಇಂತಹ ಮೆಡಿಕಲ್ ನೆಗ್ಲಿಜೆನ್ಸಿಗೆ ಹೊಸ ಬಲಿಪಶು ಕುಳಾಯಿ ಗ್ರಾಮದ ಪ್ರಥಮ ಪಿ ಯು ವಿದ್ಯಾರ್ಥಿ, 16 ವರ್ಷದ ಮೊಯ್ದಿನ್ ಫರ್ಹಾನ್. ಅಚಾತುರ್ಯವೊಂದರಲ್ಲಿ ಕಾಲಿನ ಪಾದಕ್ಕೆ ಸಣ್ಣ ಗಾಯ (ಹೆಚ್ಚೆಂದರೆ ಆರು ಹೊಲಿಗೆ ಹಾಕುವಷ್ಟು) ಮಾಡಿಕೊಂಡಿದ್ದ ಬಾಲಕ ಫರ್ಹಾನ್ ನನ್ನು ಆತನ ಪೋಷಕರು ಉತ್ತಮ ಚಿಕಿತ್ಸೆ ಸಿಗಲಿ ಎಂಬ ಆಸೆಯಿಂದ ಮೂಳೆ ಚಿಕಿತ್ಸೆ(ಆರ್ಥೋ) ಗೆ ಮೀಸಲಾಗಿರುವ ಸುರತ್ಕಲ್ ಅಥರ್ವಾ ಆಸ್ಪತ್ರೆಗೆ ಸೇರಿಸಿದ್ದಾರೆ. ಹೆಚ್ಚೆಂದರೆ ಗಾಯಗೊಂಡಿರುವ ಪಾದವನ್ನು ನಿಸ್ತೇಜಗೊಳಿಸಿ ಕ್ಯಾಸುವಲ್ಟಿಯಲ್ಲಿಯೆ ಹೊಲಿಗೆ ಹಾಕಿ ಕಳಿಸಬೇಕಾದ ಪ್ರಕರಣದಲ್ಲಿ ಅಥರ್ವದ ಮೂಳೆ ತಜ್ಞ ವೈದ್ಯರು ಆಪರೇಷನ್ ನಡೆಸಬೇಕಾಗಿದೆ ಎಂದು ರಾತ್ರಿಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾರೆ.
ಬೆಳಗ್ಗೆ ಆಪರೇಷನ್ ನಡೆಸಿ ಎರಡು ತಾಸಿನಲ್ಲಿ ಮನೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಅಷ್ಟಕ್ಕೆ 35 ಸಾವಿರ ರೂಪಾಯಿ ಪ್ಯಾಕೇಜ್ ಮಾತಾಡಿ ಫಿಕ್ಸ್ ಮಾಡಿಕೊಂಡಿದ್ದಾರೆ. (ಹಿಂದೆಲ್ಲಾ ಇಂತಹ ಪ್ರಕರಣಗಳಲ್ಲಿ ಸುರತ್ಕಲ್ ನ MBBS ವೈದ್ಯರುಗಳು ತಮ್ಮ ಕ್ಲಿನಿಕ್ ನಲ್ಲೆ ಹೊಲಿಗೆ ಹಾಕಿ, ನೋವಿನ ಮಾತ್ರೆ ನುಂಗಿಸಿ ಕಳುಹಿಸುತ್ತಿದ್ದರು) ಬೆಳಿಗ್ಗೆ 10 ಗಂಟೆಗೆ ನಗು ನಗುತ್ತಾ ತಾಯಿ ಹಾಗೂ ಮುದ್ದಿನ ಅಜ್ಜನೊಂದಿಗೆ ಹರಟೆ ಹೊಡೆಯುತ್ತಿದ್ದ ಫರ್ಹಾನ್ ನನ್ನು ಅರ್ಧ ಗಂಟೆಯಲ್ಲಿ ವಾಪಾಸ್ ಕರೆತರುತ್ತೇವೆ ಎಂದು ತಾಯಿ ಹಾಗು ಅಜ್ಜನಿಗೆ ಹೇಳಿ ಆಪರೇಷನ್ ಕೋಣೆಗೆ ಕರೆದೊಯ್ದ ವೈದ್ಯರು ಎರಡು ಗಂಟೆಯ ನಂತರ ಹೊರ ತಂದ್ದದ್ದು ಹೆಣವಾಗಿ. ಹೊರಗಡೆ ತಿಂಡಿ ಹಿಡಿದು ಕಾಯುತ್ತಿದ್ದ ಹೆತ್ತ ತಾಯಿ, ಹೆಗಲಲ್ಲಿ ಹೊತ್ತು ಸಾಕಿದ ಅಜ್ಜನಿಗೆ ಹೇಗಾಗಬೇಡ !
ಆಸ್ಪತ್ರೆಯ ಆಡಳಿತದ ಹೇಳಿಕೆಯ ಪ್ರಕಾರವೆ “ಕಾಲಿನ ಪಾದದ ಚರ್ಮ ಹರಿದು ಮಾಂಸ ಹೊರ ಬಂದಿದೆ, ಮೂಳೆಗೆ ಯಾವುದೇ ಹಾನಿ ಆಗಿಲ್ಲ, ಗಾಯವನ್ನು ತೊಳೆದು ಸರಿಪಡಿಸಿ ಹೊಲಿಗೆ ಹಾಕುವ ಸಣ್ಣ ಸರ್ಜರಿ ಮಾಡಬೇಕಿತ್ತು. ಹೆಚ್ಚೆಂದರೆ 8 ರಿಂದ 10 ನಿಮಿಷದ ಕೆಲಸ. ಅದಕ್ಕಾಗಿ ಸರ್ಜರಿಗೆ ಮುನ್ನ ಅನಸ್ತೇಶಿಯಾ ತಜ್ಞರು ಬೆನ್ನು ಮೂಳೆ ಬಳಿ ಅನಸ್ತೇಶಿಯಾ ಇಂಜಕ್ಷನ್ ನೀಡಿದ್ದಾರೆ. ಅದಾಗಿ ಎರಡು ನಿಮಿಷದಲ್ಲೇ ಬಾಲಕನಿಗೆ ಫಿಟ್ಸ್ ತರ ಕಾಣಿಸಿಕೊಂಡಿದೆ, ಪಲ್ಸ್ ವಿಪರೀತ ಏರುಪೇರಾಗಿದೆ. ಇದರ ನಡುವೆಯೂ ನಾವು ಸರ್ಜರಿ (ಹೊಲಿಗೆ ಹಾಕುವುದು) ಮುಗಿಸಿದೆವು. ಆತನ ಆರೋಗ್ಯ ಸ್ಥಿರಗೊಳಿಸಲು ಎಲ್ಲಾ ಪ್ರಯತ್ನ ಪಟ್ಟೆವು, ವೆಂಟಿಲೇಟರ್ ಹಾಕಿದೆವು, ಆದರೆ ಹುಡುಗ ಸಹಜ ಸ್ಥಿತಿಗೆ ಬರಲಿಲ್ಲ. ದುರಾದೃಷ್ಟ, ಪ್ರಾಣ ಹೋಗಿದೆ. ಯಾಕೆ ಹೀಗಾಯ್ತು ಅಂತ ತಿಳಿಯುತ್ತಿಲ್ಲ” ಎಂದು ವಿವರಿಸುತ್ತಾರೆ.
ಮೂಳೆ ಮುರಿತ ಇಲ್ಲದ, ಐದಾರು ಹೊಲಿಗೆ ಹಾಕುವ ಸಾಮಾನ್ಯ (ಸ್ವಲ್ಪ ಆಳದ ಗಾಯ ಇರಬಹುದು) ಗಾಯಕ್ಕೆ ಆಪರೇಷನ್ ಥೇಟರ್‌ನಲ್ಲಿ ಅನಸ್ತೇಶಿಯಾ ನೀಡಿ ಸರ್ಜರಿಯ ಅವಶ್ಯಕತೆ ಇತ್ತೆ, ಬೆನ್ನು ಮೂಳೆಯ ಬಳಿ ಅನಸ್ತೇಶಿಯಾ ನೀಡುವ ಪ್ರಕರಣವೇ ಇದು, ಅನಸ್ತೇಶಿಯಾ ನೀಡಿದ ಒಂದು ತಾಸಿನ ಒಳಗಡೆ ಆರೋಗ್ಯವಂತ ಬಾಲಕ ಪ್ರಾಣ ಕಳೆದುಕೊಳ್ಳುವುದು ಅಂದರೆ, ಅನಸ್ತೇಶಿಯಾ ಓವರ್ ಡೋಸ್ ಆಗಿರುವ ಪ್ರಮಾಣ ಎಷ್ಟಿರ ಬಹುದು ? ಹುಡುಗ ಅನಸ್ತೇಶಿಯಾ ನೀಡಿ ಎರಡೇ ನಿಮಿಷದಲ್ಲಿ ಪಲ್ಸ್ ಹಲವು ಪಟ್ಟು ಏರು ಪೇರಾಗಿದ್ದರು, ಅದರ ತುರ್ತು ಚಿಕಿತ್ಸೆಯ ಬದಲಿಗೆ ಸರ್ಜರಿ (ಗಾಯಕ್ಕೆ ಹೊಲಿಗೆ ಹಾಕುವ) ಮುಂದುವರಿಸಿದ್ದು ಯಾಕೆ ? ಎಂಬ ಕುಟುಂಬಸ್ಥರ ಪ್ರಶ್ನೆಗಳಿಗೆ ಆಸ್ಪತ್ರೆಯ ಆಡಳಿತದ ಬಳಿ ಸಮರ್ಪಕ ಉತ್ತರ ಇಲ್ಲ.
ಇದನ್ನೂ ಓದಿ: ಸರ್ಕಾರದ ಅಸಂಬದ್ಧ ಧೋರಣೆಗಳಿಂದ ಹೆಚ್ಚುತ್ತಿರುವ ನಿರುದ್ಯೋಗದ ಬಿಕ್ಕಟ್ಟು
ಇಂತಹ ಗಂಭೀರ ಮೆಡಕಲ್ ಲೋಪಕ್ಕೆ ಈಗ ಸಂತ್ರಸ್ತ ಕುಟುಂಬ ತಮ್ಮ ಮುದ್ದಿನ ಮಗುವನ್ನು ಕಳೆದು ಕೊಂಡು ರೋಧಿಸುತ್ತಿದೆ. ಇಂತಹ ಹತ್ತಾರು ಪ್ರಕರಣಗಳು ಮಂಗಳೂರಿನ ಬಲಾಢ್ಯ ಖಾಸಗಿ ಆಸ್ಪತ್ರೆಗಳಲ್ಲಿ ವರದಿ ಆಗುತ್ತಲೆ ಇವೆ. ಕೆಲವು ಪ್ರಕರಣಗಳಲ್ಲಿ ಒಂದಿಷ್ಟು ಗದ್ದಲ ನಡೆದು ಸುದ್ದಿಯಾಗುತ್ತದೆ, ಅಲ್ಲಿಗೇ ಮುಚ್ಚಿ ಹೋಗುತ್ತದೆ. ಸರಿಯಾದ ತನಿಖೆ, ಕಾನೂನಾತ್ಮಕ ಕ್ರಮಗಳು ಜರುಗುವುದೇ ಇಲ್ಲ. ಒಂದು, ಖಾಸಾಗಿ ಮೆಡಿಕಲ್ ಲಾಬಿ ಜಿಲ್ಲಾಡಳಿತ, ಜಿಲ್ಲೆಯ ರಾಜಕಾರಣವನ್ನು ತನ್ನ ತಾಳಕ್ಕೆ ಕುಣಿಸುವಷ್ಟು ಬಲಾಢ್ಯ. ಮತ್ತೊಂದು, ಖಾಸಾಗಿಯಾಗಿ ಇಂತಹ ಅನ್ಯಾಯದ ವಿರುದ್ದ ಹೋರಾಡುವಷ್ಟು ಶಕ್ತಿ, ವೈದ್ಯಕೀಯ ಕಾನೂನು, ನಿಯಮಗಳ ಸೂಕ್ಷತೆಯ ಅರಿವು ಸಾಮಾನ್ಯ ಜನತೆಗೆ ಇಲ್ಲ. ಇಂತಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಚಿಕಿತ್ಸೆಯಲ್ಲಿರುವ ಆಗಿರುವ ಲೋಪ, ನಡೆಸಬೇಕಾದ ಕ್ರಮಗಳ ಕುರಿತು ಮಾರ್ಗದರ್ಶನ ಮಾಡುವ ವೈದ್ಯರು, ಕಾನೂನು ತಜ್ಞರೂ ಸಂತ್ರಸ್ತರಿಗೆ ಸಿಗುವುದಿಲ್ಲ.
ಇದೆಲ್ಲದರಿಂದ ಖಾಸಗಿ ಆಸ್ಪತ್ರೆಗಳು ಆಡಿದ್ದೇ ಅಟ ಎಂಬುದು ಮಂಗಳೂರಿನ ಮಟ್ಟಿಗೆ ಅಕ್ಷರಶಃ ಸತ್ಯ. ಇಂತಹ ಪರಿಸ್ಥಿತಿಯಲ್ಲಿ ಫರ್ಹಾನ್ ಸಾವಿಗೆ ಕಾರಣವಾದ ವೈದ್ಯಕೀಯ ಲೋಪದ ಪತ್ತೆ ಆಗಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಿದೆ. ಸಂತ್ರಸ್ತ ಕುಟುಂಬಕ್ಕೆ ಒಂದಿಷ್ಟು ನ್ಯಾಯವಾದರು ದೊರಕಬೇಕಿದೆ. ಈ ರೀತಿಯ ವೈದ್ಯಕೀಯ ನಿರ್ಲಕ್ಷ್ಯ, ಅನಗತ್ಯ ಚಿಕಿತ್ಸೆಗಳಿಗೆ ಕಡಿವಾಣ ಹಾಕುವ ಕೆಲಸ ಸರಕಾರದ ಕಡೆಯಿಂದ ಆಗಬೇಕಿದೆ
ಫರ್ಹಾನ್ ಪ್ರಕರಣದಲ್ಲಿ ಅಂತಹ ಒಂದು ಪ್ರಯತ್ನ ಜಾರಿಯಲ್ಲಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ (ಹೊಸದಾಗಿ ಬಂದಿರುವ ಈ ಅಧಿಕಾರಿ ಒಂದಿಷ್ಟು ಜನಪರ ಕಾಳಜಿ ಹೊಂದಿದ್ದಾರೆ) ಅಧ್ಯಕ್ಷತೆಯಲ್ಲಿ ಈ ಪ್ರಕರಣದ ವೈದ್ಯಕೀಯ ಲೋಪದ ಪತ್ತೆಗಾಗಿ ಹನ್ನೊಂದು ತಜ್ಞ ವೈದ್ಯರ ತಂಡ ರಚನೆ ಗೊಂಡಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಫರ್ಹಾನ್ ಪೋಷಕರು ವೈದ್ಯರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಅದು FIR ಆಗಿದೆ.
ಸುರತ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಆಸ್ಪತ್ರೆಯ ಆಪರೇಷನ್ ಕೋಣೆಯನ್ನು ಸೀಜ಼್ ಮಾಡಿ ಒಂದಿಡೀ ದಿನ ಪೂರ್ತಿ ಯಾವುದೆ ಲೋಪ ಆಗದಂತೆ ಮಹಜರು, ತನಿಖೆ ನಡೆಸಿದ್ದಾರೆ. ದಾಖಲೆಗಳನ್ನು, ಸಾಕ್ಷ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿ ಹಾಗೂ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ತೆಗೆದುಕೊಂಡಿರುವ ಕಾಳಜಿ, ತನಿಖೆಯ ವಿಧಾನ ಕುಟುಂಬಸ್ಥರಲ್ಲಿ, ಗ್ರಾಮಸ್ಥರಲ್ಲಿ ನಂಬಿಕೆ ಮೂಡಿಸಿದೆ.
ಆರೋಗ್ಯ ಸಚಿವರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಪ್ರಕರಣದ ಮೇಲೆ ನಿಗಾ ಇಟ್ಟಿದ್ದಾರೆ ಎಂಬುದೂ ಆಶಾದಾಯಕ ಅಂಶ. ಒಟ್ಟು, ಫರ್ಹಾನ್ ಪ್ರಕರಣದಲ್ಲಾದರು ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣದ ತನಿಖೆ ತಾರ್ಕಿಕ ಅಂತ್ಯ ಕಾಣಬೇಕು, ಅದೊಂದು ಮಾದರಿ, ಪಾಠ ಆಗಬೇಕು. ನಾವಂತೂ ನಾಗರಿಕ ಜವಾಬ್ದಾರಿಯೊಂದಿಗೆ ಸಂತ್ರಸ್ಥ ಕುಟುಂಬದ ಜೊತೆಗಿದ್ದೇವೆ. ಜಿಲ್ಲಾಡಳಿತ ನೇಮಕ ಮಾಡಿರುವ ತಜ್ಞರ ಸಮಿತಿಯ ತನಿಖೆ, ವರದಿಗಾಗಿ ಕಾಯುತ್ತಿದ್ದೇವೆ. “ಪ್ರಭಾವ” ಗಳ ಕೈ ಮೇಲಾದರೆ ಹೋರಾಟ ನಡೆಸುವುದು ಇದ್ದೇ ಇದೆ.
ವಿಡಿಯೋ ನೋಡಿ: ನೇಜಾರು ಹತ್ಯೆ ಪ್ರಕರಣ :ಕೊಲೆಗಾರನ ಹಿನ್ನೆಲೆ ತನಿಖೆಯಾಗಲಿ, ಕೋಮುವಾದದ ವಾಸನೆಯೂ ಬಡಿಯುತ್ತಿದೆ Nejaru murder case