ಡಾ. ಕೇಶವ ಶರ್ಮ ಕೆ.
ಬೆಲ್ ಹುಕ್ಸ್ ಸ್ತ್ರೀವಾದದ ದೃಷ್ಟಿಯಿಂದ ಅತ್ಯಂತ ಮಹತ್ವದ ಲೇಖಕಿ. ಅವಳ ಪುಸ್ತಕ ‘ಫೆಮಿನಿಸ್ಟ್ ಥಿಯರಿ ಫ್ರಂ ಮಾರ್ಜಿನ್ ಟು ಸೆಂಟರ್’, “ಸ್ತ್ರೀವಾದ ಅಂಚಿನಿಂದ ಕೇಂದ್ರದೆಡೆಗೆ” ಆಗಿ ಕನ್ನಡಕ್ಕೆ ಬಂದಿದೆ. ಬೆಲ್ ಹುಕ್ಸ್ ಬರೀ ಲೇಖಕಿ ಮಾತ್ರವೇ ಅಲ್ಲ. ಆಕೆ ಹೋರಾಟಗಾರ್ತಿಯೂ ಹೌದು. ನಮಗೆ ಸ್ತ್ರೀವಾದವನ್ನು ಬೇರೆ ದಿಕ್ಕಿನಲ್ಲಿ ನೋಡಲು ಈ ಕೃತಿಯು ಸಹಾಯವನ್ನು ಮಾಡುತ್ತದೆ. ನಮಗೆ ಇದು ಅನುವಾದದ ಕೃತಿಯೆಂದು ಅನಿಸುವುದಿಲ್ಲ. ಇದರ ಮೂಲ ಕೃತಿಯು ಕೂಡಾ ಅತಿ ಗಂಭೀರವಾದ, ಹುಬ್ಬು ಗಂಟಿಕ್ಕಿ ಬರೆದ ಬರಹ ಎಂದು ಅನಿಸುವುದಿಲ್ಲ. ಇದು ನಮಗೆ ಒಂದು ಆತ್ಮಚರಿತ್ರೆ ಅಥವಾ ಕಪ್ಪು ಜನಾಂಗದ ಒಬ್ಭಳು ಮಹಿಳೆಯ ಜೀವನ ಕ್ರಮದ ಚಿತ್ರಣ ಎಂದು ಭಾಸವಾಗುತ್ತದೆ.
ಎರಡು ಅತ್ಯಂತ ಮುಖ್ಯವಾದ ಚರ್ಚೆಗಳು ಇವತ್ತು ಚಾಲ್ತಿಯಲ್ಲಿವೆ. ಒಂದನ್ನು ನಾವು ರಚನಾವಾದ ಎಂದು ಹೇಳುತ್ತೇವೆ. ಎರಡನೆಯ ಚರ್ಚೆಯನ್ನು ರಚನೋತ್ತರವಾದ ಎಂದು ಕರೆಯುತ್ತಾರೆ. ರಚನಾವಾದವನ್ನು ನಾವು ಕೇಂದ್ರ ಮತ್ತು ಪರಿಧಿಯ ಕಲ್ಪನೆಯಲ್ಲಿ ವಿವರಿಸುತ್ತೇವೆ. ಯಾವುದೇ ರಚನೆಗೆ ಒಂದು ಕೇಂದ್ರವಿರುತ್ತದೆ. ಅದಕ್ಕೆ ಅನುಸಾರವಾಗಿ ರಚನೆಯು ಇರುತ್ತದೆ. ಅದರ ರೂಪವನ್ನು ಕೂಡಾ ನಾವು ಹೀಗೆಯೇ ಗ್ರಹಿಸುವುದು ಅತ್ಯಂತ ಅಗತ್ಯ ಎಂದು ರಚನಾವಾದವು ಹೇಳುತ್ತದೆ. ಮತ್ತೊಂದು ರಚನೆಯನ್ನು ಅಲ್ಲಗಳೆಯುತ್ತದೆ. ರಚನೆಗೆ ನಾವು ಹೆಚ್ಚು ಮಹತ್ವವನ್ನು ಕೊಡಬೇಕಾಗಿಲ್ಲ ಎನ್ನುವುದು ಅದರ ವಾದ. ಇದನ್ನು ರಚನೋತ್ತರವಾದ ಎಂದು ಹೇಳಿದವರೂ ಇದ್ದಾರೆ. ಅದರ ಜೊತೆಗೆ ಕೆಲವರು ನಿರಚನೆಯ ಸಿದ್ಧಾಂತ ಕರೆದಿದ್ದಾರೆ. ಇದು ಬಹುಪಠ್ಯ ಎನ್ನುವುದಕ್ಕೆ ಹೆಚ್ಚು ಒತ್ತನ್ನು ಕೊಡುತ್ತದೆ. ಇದು ಸಾಹಿತ್ಯದಲ್ಲಿ ಇರುವ ಪ್ರಶ್ನೆ. ಇದರ ಮತ್ತೊಂದು ಆಯಾಮವನ್ನು ನಾವು ಸಮಾಜವಿಜ್ಞಾನದ ಚರ್ಚೆಯಲ್ಲಿ ಗಮನಿಸುತ್ತೇವೆ. ಒಂದು ರಚನೆಯಲ್ಲಿ ಯಾರು ಕೇಂದ್ರದಲ್ಲಿ ಇರುತ್ತಾರೆ ಮತ್ತು ಯಾರು ಅಂಚಿನಲ್ಲಿ ಇರುತ್ತಾರೆ ಎನ್ನುವುದು ಅದರ ಒಂದು ಪರಿಕಲ್ಪನೆಯು ಆಗಿದೆ. ನಮ್ಮ ಸಬಾಲ್ಟರ್ನ್ ಅಧ್ಯಯನದಲ್ಲಿ ವಿಶೇಷವಾಗಿ ಬಂದಿದೆ ಎಂದು ಗಮನಿಸಬೇಕು. ನಮ್ಮ ಅನೇಕ ಹೋರಾಟಕ್ಕೆ ಇದು ಮೂಲವಾದ ಒಂದು ತಾತ್ವಿಕ ಸಿದ್ಧತೆಯನ್ನು ಇದು ಮಾಡಿಕೊಟ್ಟಿದೆ.
ಕಳೆದ ಕೆಲವು ವರ್ಷಗಳಲ್ಲಿ ಸ್ತ್ರೀವಾದವನ್ನು ಖಚಿತವಾಗಿ ವಿವರಿಸುತ್ತಾ ಬಂದಿರುವ ಶ್ರೀಮತಿ.ಎಚ್.ಎಸ್ ಕೆಲಸವು ಅತ್ಯಂತ ಮಹತ್ವದ್ದು. ಅವರು ‘ಸೆಕೆಂಡ್ ಸೆಕ್ಸ್’ ಕೃತಿಯನ್ನು ಅನುವಾದ ಮಾಡಿದ್ದು ಒಂದು ಮಹತ್ವದ ಕೆಲಸವಾಗಿತ್ತು. ಒಂದು ಮಾತನ್ನು ಇಲ್ಲಿ ಹೇಳಿದರೆ ಅಪ್ರಸ್ತುತವಾಗದು ಎನ್ನುವ ಧೈರ್ಯದಿಂದ ಹೇಳಬಹುದು. ಕನ್ನಡದ ಅನೇಕ ಲೇಖಕರು ಮತ್ತು ಲೇಖಕಿಯರು ಚರ್ಚೆಯ ಕೇಂದ್ರಕ್ಕೆ ಬರುವುದಿಲ್ಲ. ಅವರೂ ಅಂಚಿನಲ್ಲಿಯೇ ಇರುತ್ತಾರೆ. ಚರ್ಚೆಯಾಗಬೇಕಾದ ಕೃತಿಗಳು ಆಗುವುದಿಲ್ಲ. ಅದು ಬೇರೆ ಪ್ರಶ್ನೆ. ಬೆಲ್ ಹುಕ್ಸ್ ಸ್ತ್ರೀವಾದದ ದೃಷ್ಟಿಯಿಂದ ಅತ್ಯಂತ ಮಹತ್ವದ ಲೇಖಕಿ. ಅವಳ ಪುಸ್ತಕ ‘ಫೆಮಿನಿಸ್ಟ್ ಥಿಯರಿ ಫ್ರಂ ಮಾಜಿನ್ ಟು ಸೆಂಟರ್.’ ನಮ್ಮ ಅನೇಕ ಓದುಗರು ಈ ಮಹತ್ವದ ಕೃತಿಯನ್ನು ಓದಬೇಕು. ನಮಗೆ ಇಂಗ್ಲೀಷಿನಲ್ಲಿ ಬಂದ ಪುಸ್ತಕಗಳನ್ನು ಓದಲು ಸಾಧ್ಯವಾಗುವುದಿಲ್ಲ. ನಮಗೆ ಇಂಗ್ಲೀಷ್ ಗೊತ್ತಿಲ್ಲ. ನಾವು ಅನಿವಾರ್ಯವಾಗಿ ಅನುವಾದಕ್ಕೆ ಕಾಯಬೇಕು. ಆದರೂ ಅದು ಅನುವಾದ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಹಲವು ಭಾಷೆಗಳ ಒಂದು ರೂಪವನ್ನು ಸೇರಿಸಿದರೆ ಹೇಗೆ ಇರುತ್ತದೆಯೋ ಅದೇ ರೀತಿಯಲ್ಲಿ ಇಂಗ್ಲೀಷ್ ಇದೆ. ಈ ಸನ್ನಿವೇಶದಲ್ಲಿ “ಸ್ತ್ರೀವಾದ ಅಂಚಿನಿಂದ ಕೇಂದ್ರದೆಡೆಗೆ” ಕೃತಿಯು ಕನ್ನಡಕ್ಕೆ ಬಂದಿದೆ. ಒಂದು ಮಾತನ್ನು ಮೊದಲೇ ಹೇಳಬಹುದು. ಈ ಪುಸ್ತಕವು ನಮಗೆ ಅತ್ಯಂತ ದೊಡ್ಡ ಉಪಕಾರವನ್ನು ಮಾಡಿದೆ. ಯಾಕೆ ಇದನ್ನು ಹೇಳಿದ್ದೇನೆಂದರೆ ಬೆಲ್ ಹುಕ್ಸ್ ಬರೀ ಲೇಖಕಿ ಮಾತ್ರವೇ ಅಲ್ಲ. ಆಕೆ ಹೋರಾಟಗಾರ್ತಿಯೂ ಹೌದು. ಕನ್ನಡದ ಜ್ಞಾನದ ಜಗತ್ತಿಗೆ ಇಂಥಾ ಅನೇಕ ಪುಸ್ತಕಗಳು ಬರಬೇಕಾಗಿದೆ. ಈ ಕೃತಿಯಲ್ಲಿ ನಮಗೆ ಹುಕ್ಸ್ ಹೇಳುವ ನಿಲುವು ಮುಖ್ಯವಾದ್ದು.
19ನೆಯ ಶತಮಾನದಲ್ಲಿ ನಾವು ಅನೇಕ ರೀತಿಯಲ್ಲಿ ಹೋರಾಟವನ್ನು ಮಾಡಿದ್ದೇವೆ. ಶೋಷಣೆಯನ್ನು ವಿರೋಧಿಸುವುದು ನಮ್ಮ ಗುರಿಯಾಗಿದೆ. ಅಧಿಕಾರವನ್ನು ನೋಡುವ ಕ್ರಮಗಳು ಮತ್ತು ಭಿನ್ನವಾಗುತ್ತದೆ. ಹೀಗಾಗಿ ನಾವು ಅಧಿಕಾರ ಮತ್ತು ಅದರ ಸ್ವರೂಪವನ್ನು ನೋಡುವುದು ಬೇರೆ ಕ್ರಮವೇ ಆಗುತ್ತದೆ. ವಾಸ್ತವವಾಗಿ ಹೋರಾಟವೂ ಒಂದು ದೃಷ್ಟಿಯಿಂದ ಬಹಳ ಮಹತ್ವದ ಅಭಿವ್ಯಕ್ತಿಯೇ ಆಗಿರುತ್ತದೆ. ಪ್ರಭುತ್ವವು ತನ್ನನ್ನು ತಾನೇ ನಿರ್ವಚಿಸಲು ಪ್ರಯತ್ನವನ್ನು ಮಾಡುತ್ತದೆ. ಪ್ರಭುತ್ವ ಮತ್ತು ಅದರ ರಾಜಕೀಯವಾದ ಸ್ವರೂಪವನ್ನು ಹೀಗೆ ಇದೆ ಎಂದು ಹೇಳಲು ಬರುವುದೂ ಇಲ್ಲ. ಬೇರೆ ಬೇರೆ ರೀತಿಯ ಪ್ರಭುತ್ವ ಮತ್ತು ಅದರ ಸ್ವರೂಪಗಳು ಇರುತ್ತವೆ. ಅದು ನೀತಿಯನ್ನು ಹೇಳುತ್ತದೆ ಮತ್ತು ನಮ್ಮ ನಡವಳಿಕೆಯನ್ನು ನಿರ್ಬಂಧಿಸುತ್ತದೆ. ವಾಸ್ತವವಾಗಿ ಕ್ರಿಶ್ಚಿಯಾನಿಟಿಯು ಕೆಲವು ರೀತಿಯ ನಿಯಮವನ್ನು ಹೇರಿತ್ತು. ಮತ್ತು ಈಗಲೂ ಅನೇಕ ಧರ್ಮಗಳು ಪ್ರಭುತ್ವದ ಜೊತೆಗೆ ತಮ್ಮನ್ನು ಗುರುತಿಸಿಕೊಂಡಿವೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಒಂದು ಕಾಲಕ್ಕೆ ಕ್ರಿಶ್ಚಿಯನ್ ಧರ್ಮವು ಸಮಾಜವನ್ನು ನಿಯಂತ್ರಿಸಿದ್ದವು. ಮತ್ತು ಧರ್ಮ ಹಾಗೂ ಅದರ ಲಕ್ಷಣಗಳೂ ಬೇರೆಯಾಗಿದ್ದವು. ವ್ಯಕ್ತಿ ಮತ್ತು ಅವನ ಪಾಪದ ನಿವಾರಣೆಯೇ ಧರ್ಮದ ಗುರಿಯೆಂದು ಅವುಗಳು ಹೇಳಿದ್ದವು. ತಾನು ಕಪ್ಪು ಮಹಿಳೆ ಎಂದು ಹೇಳುತ್ತಾ ನಾವು ಸಾಗಬೇಕಾದ ದಾರಿಯು ಯಾವುದು ಎಂದೂ ಸೂಚಿಸುತ್ತಾಳೆ. (ಪುಟ 91)
ನಮ್ಮ ಚರ್ಚೆಗಳ ಹಿಂದೆ ಬೇರೆ ಬೇರೆ ಒತ್ತಡಗಳೂ ಇರುತ್ತವೆ. ಹಾಗೆಯೇ ಕೆಲವೊಮ್ಮೆ ರಾಜಕೀಯ ಆಸಕ್ತಿಗಳೂ ಇರುತ್ತವೆ. ಚರ್ಚೆಗಳಿಗೆ ಇರುವ ರಾಜಕೀಯ ಆಯಾಮವು ಒಂದು ಅಧಿಕಾರದ ವಿಭಿನ್ನವಾದ ಒಂದು ನಿಲುವನ್ನು ಹೇಳುತ್ತದೆ. ಅದನ್ನು ನಾವು ಯಜಮಾನಿಕೆಯ ನಿಲುವು ಎಂದೂ ಹೇಳಬಹುದು. ಯಾವುದು ಒಂದು ದೇಶದಲ್ಲಿ ಯಜಮಾನಿಕೆಯನ್ನು ಸೂಚಿಸುತ್ತದೆಯೋ ಅದು ತನ್ನ ಹಿತಾಸಕ್ತಿಗಾಗಿ ತನ್ನದೇ ಆದ ಮೌಲ್ಯವನ್ನು ಉಳಿದವರ ಮೇಲೆ ಹೇರುತ್ತದೆ. ಆದರೆ ಸಾಮಾನ್ಯ ಮನುಷ್ಯರು ರಾಜಕಾರಣವನ್ನು ಮತ್ತು ಅಧಿಕಾರದ ಕೇಂದ್ರವನ್ನು ನೋಡುವ ಕ್ರಮಗಳು ಬೇರೆಯಾಗುತ್ತದೆ. ಅವರು ಯಾವುದೇ ವಿಮರ್ಶೆಯನ್ನು ಮಾಡುವುದಿದ್ದರೂ ಅದರ ನಿರೂಪಣೆಯು ಬೇರೆಯಾಗಿರುತ್ತದೆ. ಇದನ್ನು ಅತ್ಯಂತ ಖಚಿತವಾಗಿ ಲೇಖಕಿ ಹೇಳುತ್ತಾಳೆ. ಅವಳಲ್ಲಿ ದಮನ ಎನ್ನುವುದು ಬಹು ಆಯಾಮವನ್ನು ಕೂಡಾ ಪಡೆದಿದೆ. (ಪು.18) ಈಕೆ ಲೇಖಕಿ. ಸಾಮಾಜಿಕ ಕಾರ್ಯಕರ್ತೆ ಆದ್ದರಿಂದ ಅವಳ ಮಾತಿಗೆ ಒಂದು ವಿಶಿಷ್ಟತೆಯು ಇದೆ. (ಅಧ್ಯಾಯ 2)
ಲೇಖಕರು ಮತ್ತು ಬುದ್ಧಿಜೀವಿಗಳು ರಾಜಕಾರಣವನ್ನು ನೋಡುವ ವಿಧಾನವು ಬೇರೆಯಾಗಿರುತ್ತದೆ. ಸಾಧಾರಣ ವರ್ಗದ ಜನರು ರಾಜಕಾರಣವನ್ನು ನೋಡುವ ಕ್ರಮದಲ್ಲಿ ವ್ಯತ್ಯಾಸವಿದೆ. ಅದನ್ನು ಇನ್ನೊಂದರ ಥರ ಹೇಳುವುದು ಸಾಧ್ಯವಿಲ್ಲ. ಯಾವುದೇ ವಾಗ್ವಾದ ಮತ್ತು ಚರ್ಚೆಯಲ್ಲಿ ಅತ್ಯಂತ ಮುಖ್ಯವಾಗಿ ಇರುವುದು ಒಂದು ಸಂಗತಿ: ಅದನ್ನು ನಾವು ಹೀಗೆ ಹೇಳಬಹುದು. ಮೌಖಿಕ ಶಕ್ತಿ ಮತ್ತು ವೈಯಕ್ತಿಕವಾದ ನಿರೂಪಣೆಗಳು. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನಾವು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಇಬ್ಬರು ಚರ್ಚೆಯನ್ನು ಮಾಡುತ್ತಾರೆ ಎಂದರೆ ಅದರಲ್ಲಿ ಬರುವ ಚರ್ಚೆಗೆ ಮತ್ತು ಹೊರಗೆ ನಡೆಯುತ್ತಿರುವ ವಿದ್ಯಮಾನಕ್ಕೆ ಎಷ್ಟೋ ಸರ್ತಿ ಸಂಬಂಧವು ಇಲ್ಲದೆ ಹೋಗಬಹುದು. ಒಂದು ಅಸಂಗತವಾದ ನಾಟಕದಂತೆ ನಮಗೆ ಭಾಸವಾಗಬಹುದು. ಅಧಿಕಾರ ಎನ್ನುವುದು ಇರುವುದು ದೂರದರ್ಶನದ ಆಚೆಗೆ. ದೂರದರ್ಶನದಲ್ಲಿ ನಡೆಯುವ ಚರ್ಚೆಗಳು ಹೇಗೆ ಇರುತ್ತವೆ ಎಂದು ಪೀಟರ್ ಲಂಟ್ ಹೀಗೆ ಹೇಳುತ್ತಾನೆ: ಅದರಲ್ಲಿ ಭಾಗವಹಿಸುವವರು ಒಂದು ದೃಷ್ಟಿಯಿಂದ ಜನರ ಪ್ರತಿನಿಧಿಗಳಂತೆ ಕಾಣುಸುತ್ತಾರೆ. ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾರೆ. ರಾಜಕಾರಣಿಗಳು ಮತ್ತು ರಾಜಕೀಯವನ್ನು ಹೇಳುವಾಗ ಅವರಲ್ಲಿ ಒಂದು ಅಧಿಕೃತತೆಯು ಕಾಣುತ್ತದೆ. ಸಂವಹನದ ದೃಷ್ಟಿಯಿಂದ ಅವರಿಗೆ ಒಂದು ಅವಕಾಶವೂ ಸಿಕ್ಕಿದೆ. ಅದನ್ನು ಸಾಮಾಜಿಕ ಮತ್ತು ರಾಜಕೀಯ ಅವಕಾಶ ಎಂದೂ ಹೇಳಬಹುದು. ದೂರದರ್ಶನದಲ್ಲಿ ಕೇಳುಗರು ಇರುತ್ತಾರೆ. ಅವರು ನೋಡುಗರ ಮೇಲೆ ಒಂದು ನಿಲುವನ್ನು ಪ್ರಸ್ತುತಪಡಿಸುತ್ತಾರೆ, ಆದರೆ ಒಂದು ಸಂಗತಿಯನ್ನು ನಾವು ನಮ್ಮ ಗಮನಕ್ಕೆ ತರುವುದು ಅತ್ಯಂತ ಆವಶ್ಯಕ. ಅಧಿಕಾರ ಎನ್ನುವುದು ಒಂದು ಎಳೆಯ ಸರವಲ್ಲ. ಅದರಲ್ಲಿ ಬೇರೆ ಬೇರೆ ಎಳೆಗಳು ಇರುತ್ತವೆ. ಅದರ ರೂಪವನ್ನು ನಾವು ಒಂದು ಮುಷ್ಟಿಯಲ್ಲಿ ಹಿಡಿಯಲು ಆಗುವುದಿಲ್ಲ ಎನ್ನುವುದನ್ನು ಈ ಕೃತಿಯು ಸೂಚಿಸುತ್ತದೆ.
ಆಕೆಯು ಸಮಾಜದ ಸ್ವರೂಪವನ್ನು ಹೇಳುವುದು ಮಾತ್ರವೇ ಅಲ್ಲ, ಅದರ ಜೊತೆಗೆ ಸಮಾಜದಲ್ಲಿ ಇರುವ ಅಧಿಕಾರ ಮತ್ತು ಅದರ ರೂಪಗಳನ್ನು ಹೇಳುತ್ತಾನೆ. ಯಜಮಾನಿಕೆಯನ್ನು ವಹಿಸುವ ಗುಂಪುಗಳು ಇನ್ನೊಂದು ಗುಂಪನ್ನು ಆಳಿಸಿಕೊಳ್ಳುವ ಗುಂಪಾಗಿ ಪರಿವರ್ತನೆ ಮಾಡುತ್ತದೆ. ಅವನಲ್ಲಿ ಆಳುವ ವರ್ಗ ಮತ್ತು ಆಳಿಸಿಕೊಳ್ಳುವ ವರ್ಗವು ಸ್ಪಷ್ಟವಾಗಿ ಕಾಣುತ್ತದೆ. ಆಳುವವರು ಮತ್ತು ಆಳಿಸಿಕೊಳ್ಳುವವರು ಎನ್ನುವುದು ಇಲ್ಲಿ ಖಚಿತ. ಇದನ್ನು ಸಂವಾದಿ ಎಂದು ಹೇಳಬೇಕಾಗಿಲ್ಲ. ಆದರೆ ಇದರ ನಿಯಮ ಎನ್ನುವುದು ಬೇರೆಯಾಗುತ್ತದೆ. ಇದನ್ನು ಒಂದು ಸಾರದ ರೂಪವಾಗಿ ಆಕೆಯು ನಿರೂಪಿಸುತ್ತಾಳೆ. (ಈ ಸಂಕಲನದ ಆರನೆಯ ಲೇಖನವನ್ನು ಗಮನಿಸುವುದು ಅಗತ್ಯವಿದೆ.) ಆಳುವವರು ನಿರ್ದಿಷ್ಟವಾದ ಅಧಿಕಾರವನ್ನು ಹೊಂದಿರುತ್ತಾರೆ. ಇದರಲ್ಲಿಯೂ ಪ್ರಜಾಪ್ರಭುತ್ವವು ಇದನ್ನು ಬಹಳ ಚೆನ್ನಾಗಿ ಬಳಸುತ್ತದೆ. ಅದು ಜನರನ್ನು ಕೆಲವು ನಿಯಮಕ್ಕೆ ಒಪ್ಪುವ ಹಾಗೆ ಮಾಡುತ್ತದೆ. ಯಾವಾಗ ನಾವು ಅಧಿಕಾರವನ್ನು ಒಪ್ಪುತ್ತೇವೆಯೋ ಆಗ ಅದನ್ನು ನಾವು ಒಪ್ಪಿದ್ದೇವೆ ಮತ್ತು ಅದನ್ನು ನಾವು ಅಂಗೀಕರಿಸಿದ್ದೇವೆ ಎನ್ನುವುದೂ ನಮ್ಮ ಅರಿವಿಗೆ ಬರುವುದಿಲ್ಲ. ಆಳುವ ವರ್ಗವು ಯಾವಾಗಲೂ ಆಳಿಸಿಕೊಳ್ಳುವ ವರ್ಗಕ್ಕೆ ನಾನು ನಿನ್ನನ್ನು ಆಳು ಎಂದು ಭಾವಿಸುವುದಿಲ್ಲ ಎಂಬಂತೆ ಸೂಚಿಸುತ್ತದೆ. ಇದು ಕೇವಲ ಸೂಚನೆಯು ಮಾತ್ರವೇ. ಕಪ್ಪು ಮಹಿಳೆಯರು ಮತ್ತು ಸ್ತ್ರೀವಾದಿ ಸಿದ್ಧಾಂತವು ಈ ದೃಷ್ಟಿಯಿಂದ ಮಹತ್ವದ ಲೇಖನವೂ ಹೌದು.
ಅಧಿಕಾರ ಎನ್ನುವುದು ಒಬ್ಬರು ಅದು ಇದೇ ಎಂದು ಹೇಳದಿದ್ದರು ಇರುತ್ತದೆ. ಅದು ಒಂದು ಚಲನೆಯೂ ಆಗಿರುತ್ತದೆ. ಹಾಗೆಯೇ ಅದು ನಿರಂತರವೂ ಹೌದು. ಆದ್ದರಿಂದ ಇದನ್ನು ನಾವು ಬೇರೆ ಥರ ನೋಡಬೇಕು. ಆಳುವ ವರ್ಗವು ತನಗೆ ಬೇಕಾದ ರೀತಿಯಲ್ಲಿ ಹೇಗೆ ಕಾನೂನು ಮುಂತಾದವುಗಳನ್ನು ಚಲಾವಣೆಗೆ ತರುತ್ತದೆ ಎಂದರೆ ಇದರಲ್ಲಿ ಮೇಲು ನೋಟಕ್ಕೆ ಯಾವುದೇ ಹುಳುಕು ಕಾಣಿಸುವುದೇ ಇಲ್ಲ. ಅದು ಎಷ್ಟರ ಮಟ್ಟಿಗೆ ಇದೆ ಎಂದರೆ ಯಾವುದೋ ಒಂದು ಕ್ಷಣಕ್ಕೆ ತನ್ನ ನಿಯಮವನ್ನು ಕೂಡಾ ಮುರಿಯಬಹುದು. ಮತ್ತೊಂದು ನಿರ್ಧಾರವನ್ನು ಚಾಲ್ತಿಗೆ ತರಬಹುದು. ಇದು ವಾಸ್ತವವಾಗಿ ಸಮಸ್ಯೆ. ಇದು ನಡೆಯುವಾಗ ಒಂದು ಪ್ರಭುತ್ವವು ಆಳಿಸಿಕೊಳ್ಳುವವರ ಒಪ್ಪಿಗೆಯನ್ನು ಪಡೆದೇ ಪಡೆಯುತ್ತದೆ ಎಂದು ಅರ್ಥವಲ್ಲ. ಇದು ನಡೆಯುವಾಗ ಸಮಾಜವು ಪರಿವರ್ತನೆಯನ್ನು ಕಾಣುತ್ತದೆ. ಅದರ ಮತ್ತೊಂದು ಬಗೆಯಲ್ಲಿ ಹರಡುತ್ತದೆ. ಇದು ಅತ್ಯಂತ ಮುಖ್ಯವಾದ ಅಂಶವೂ ಹೌದು. ಆಳುವ ವರ್ಗ ಮತ್ತು ಅದರ ಯಜಮಾನಿಕೆಗೆ ಬೇಕಾದ ಪೋಲಿಸ್ ವ್ಯವಸ್ಥೆಯು ಇರುತ್ತದೆ. ಅದರ ಮೂಲಕವೇ ಒಂದು ವ್ಯವಸ್ಥೆಯು ಮತ್ತೊಂದು ವ್ಯವಸ್ಥೆಯಾಗಿಯೂ ಪಲ್ಲಟವಾಗುತ್ತದೆ. ಜನರ ಮಧ್ಯೆ ಕಾನೂನು ಇರುತ್ತದೆ. ಮತ್ತೊಂದು ಅರ್ಥದಲ್ಲಿ ಈ ಪೋಲಿಸ್ ವ್ಯವಸ್ಥೆಯೇ ಒಂದು ಸೀಮಾ ರೇಖೆಯನ್ನು ನಿರ್ಮಾಣ ಮಾಡುತ್ತದೆ. ಆಳುವವರ ಆಸೆಗಳು ಮತ್ತು ಆಳುವ ವರ್ಗದ ಹಿತಾಸಕ್ತಿಯು ಮಾತ್ರವೇ ಮುಖ್ಯವಾಗಿ ಉಳಿದ ವಿಚಾರಗಳು ಗೌಣವಾಗುತ್ತದೆ. ಸಾಮಾನ್ಯರು ಮತ್ತು ಅವರ ಬಯಕೆಗಳು ಹೇಗೆ ಇರುತ್ತವೆ ಎಂದರೆ ಅದು ಹೆಚ್ಚು ವಿಶೇಷವನ್ನು ಹೊಂದಿರುವುದು ಸಾಧ್ಯವಿಲ್ಲ. ಆದರೆ ಜನರು ಮತ್ತು ಅವರ ಬಯಕೆಗಳನ್ನು ಆಳುವ ವರ್ಗ ಸಹಿಸುವುದು ಸಾಧ್ಯವಿಲ್ಲ. ಇದರ ಅರಿವು ಲೇಖಕಿಗೆ ಇದೆ.
ರೇಮಂಡ್ ವಿಲಿಯಮ್ಸ್ ಒಂದು ಮಾತನ್ನು ಹೇಳುತ್ತಾನೆ. ವಸ್ತು ಮತ್ತು ಅದರ ಅಸ್ತಿತ್ವ ಎನ್ನುವುದು ಪರಿಪೂರ್ಣವಾದರೆ ಅದರಲ್ಲಿ ಒಂದು ರೂಪವು ಸಿದ್ಧವಾಗುತ್ತದೆ. ಮನುಷ್ಯ ಮತ್ತು ಅವನ ಸಾಮಾನ್ಯವಾದ ಸಂವೇದನೆಯು ಬೇರೆ ಬೇರೆ ಥರ ಇರುತ್ತಾರೆ. ಅನೇಕ ಜನರು ಇವತ್ತು ಸಮಾಜದಲ್ಲಿ ತಮ್ಮ ಸಂವೇದನೆಯ ಮೂಲಕ ಒಂದು ನಿರ್ಧಾರವನ್ನು ಮಾಡುತ್ತಾರೆ. ವಾಸ್ತವವನ್ನು ಅರ್ಥ ಮಾಡಿಕೊಳ್ಳಲು ನಮಗೆ ಒಂದು ಸಂವೇದನೆಯು ಇರಬೇಕಾಗುತ್ತದೆ. ಸಮಾಜ ಮತ್ತು ಅದರ ಅರ್ಥವನ್ನು ಗಮನಿಸಲು ಕೂಡಾ ನಮಗೆ ಸಂವೇದನೆಯು ಇರಬೇಕಾಗುತ್ತದೆ. ಆದ್ದರಿಂದ ತಾತ್ವಿಕ ಎನ್ನುವುದು ನಮಗೆ ಒಂದು ಅಮೂರ್ತವಾದ ಸಂಗತಿಯೂ ಆಗಿರುತ್ತದೆ. ತಾತ್ವಿಕ ಎನ್ನುವುದು ನಮ್ಮ ಅಸ್ತಿತ್ವವನ್ನು ನಿರೂಪಿಸುತ್ತದೆ. ಅದನ್ನು ನಾವು ಇನ್ನೊಂದು ಥರ ಯೋಚಿಸಬಹುದು. ಎಷ್ಟೋ ಸರ್ತಿ ನಮ್ಮ ಅನುಭವ ಎನ್ನುವುದು ಸಾಚಾ ಆಗಿರುತ್ತದೆ ಎಂದು ಹೇಳುವುದು ಅತ್ಯಂತ ಕಷ್ಟ. ನಮ್ಮ ವ್ಯಕ್ತಿತ್ವವನ್ನು ಅನೇಕ ಸಂಗತಿಗಳು ನಿರ್ಧಾರ ಮಾಡುತ್ತದೆ. ಅದರ ಮೂಲಕ ಕೆಲವನ್ನು ತರಬೇತು ಮಾಡುತ್ತದೆ. ಇದನ್ನು ನಾವು ಇನ್ನೂ ಅನೇಕ ಸಂಗತಿಗಳಲ್ಲಿ ಕಾಣುತ್ತೇವೆ. ಗುಂಪು ಮತ್ತು ಅವುಗಳ ವಿಚಾರಧಾರೆಗಳು ಬೇರೆ ಬೇರೆ ಸಂಸ್ಥೆಗಳ ಮೂಲಕ ವ್ಯಕ್ತವಾಗುತ್ತದೆ. ಶಾಲೆಗಳು, ಸಂಸತ್ತು, ಆಸ್ಪತ್ರೆಗಳು ಸಂಸ್ಕೃತಿಯ ಮೇಲೆ ಪ್ರಭಾವವನ್ನು ಬೀರುತ್ತವೆ ಎಂದು ವಿಲಿಯಮ್ಸ್ ಹೇಳುತ್ತಾನೆ.
ಯಾವುದು ಯಜಮಾನಿಕೆಯ ಪ್ರಾತಿನಿಧಿಕ ರೂಪವಾಗಿದೆಯೋ ಅದು ಸಾಂಸ್ಕೃತಿಕ ರೂಪಗಳ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಯಜಮಾನಿಕೆಯನ್ನು ವಹಿಸುವ ವರ್ಗಗಳು ರೂಪಿಸುವ ನೀತಿ ಸಂಹಿತೆಗಳು ನಮ್ಮ ಸಂಸ್ಕೃತಿಯ ಭಾಗಗಳು ಎಂದೇ ನಾವು ಭಾವಿಸುತ್ತೇವೆ. ಅನೇಕ ಸಂದರ್ಭಗಳಲ್ಲಿ ಬುದ್ಧಿಜೀವಿಗಳು ಸಾಂಸ್ಥಿಕವಾದ ಮೌಲ್ಯಗಳನ್ನು ಪ್ರಚುರಪಡಿಸುವಂತೆಯೇ ಮಾತಾಡುತ್ತಾರೆ. ಹಾಗೆ ನೋಡುವುದಿದ್ದರೆ ಆಧುನಿಕ ಯುಗದಲ್ಲಿ ಬಂದಿರುವ ಆಡಳಿತಾತ್ಮಕ ವ್ಯವಸ್ಥೆಯು ಅದರದೇ ಆದ ರಚನೆಯನ್ನು ಒಳಗೊಂಡಿದೆ. ಸಂಸ್ಕೃತಿಯ ಚರ್ಚೆಯಲ್ಲಿ ಈ ಆಡಳಿತಾತ್ಮಕ ವ್ಯವಸ್ಥೆಯು ಬಹು ದೊಡ್ಡ ಸಂಶೋಧನೆಯ ಅವಕಾಶವನ್ನೂ ಕಲ್ಪಿಸಿದೆ. ಈ ಕಾರಣದಿಂದ ನಮಗೆ ಸ್ತ್ರೀವಾದವನ್ನು ಬೇರೆ ದಿಕ್ಕಿನಲ್ಲಿ ನೋಡಲು ಈ ಕೃತಿಯು ಸಹಾಯವನ್ನು ಮಾಡುತ್ತದೆ. ಇದರ ಅನುವಾದ ಅತ್ಯಂತ ಚೆನ್ನಾಗಿದೆ. ನಮಗೆ ಇದು ಅನುವಾದದ ಕೃತಿಯೆಂದು ಅನಿಸುವುದಿಲ್ಲ. ಇದರ ಮೂಲ ಕೃತಿಯು ಕೂಡಾ ಅತಿ ಗಂಭೀರವಾದ, ಹುಬ್ಬು ಗಂಟಿಕ್ಕಿ ಬರೆದ ಬರಹ ಎಂದು ಅನಿಸುವುದಿಲ್ಲ. ಇದು ನಮಗೆ ಒಂದು ಆತ್ಮಚರಿತ್ರೆ ಅಥವಾ ಕಪ್ಪು ಜನಾಂಗದ ಒಬ್ಭಳು ಮಹಿಳೆಯ ಜೀವನ ಕ್ರಮದ ಚಿತ್ರಣ ಎಂದು ಭಾಸವಾಗುತ್ತದೆ.