ಬೆಳಗಾವಿ: ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವ ಅಮಾನವೀಯ ಅಮಾನುಷ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಮಲವ್ವ ಗಡ್ಕರಿ(42) ಎಂಬ ಮಹಿಳೆಯ ಮೇಲೆ ಯುವತಿಯ ಮನೆಯವರು ಹಲ್ಲೆ ಮಾಡಿದ್ದಾರೆ. ರಾತ್ರಿ ಇಡೀ ಕರೆಂಟ್ ಕಂಬಕ್ಕೆ ಕಟ್ಟಿ ಬೆತ್ತಲೆ ಮಾಡಿದ ದುಷ್ಕರ್ಮಿಗಳು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ.
ವಂಟಮೂರಿ ಗ್ರಾಮದ ಒಂದೇ ಸಮುದಾಯಕ್ಕೆ ಸೇರಿದ ಯುವಕ ಹಾಗೂ ಯುವತಿ ಕೆಲ ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಮದುವೆ ಎರಡೂ ಮನೆಯವರ ಒಪ್ಪಿಗೆ ಇರಲಿಲ್ಲ. ಈ ವಿಚಾರವಾಗಿ ಜಗಳಗಳೂ ಆಗಿದ್ದವು. ವಿರೋಧದ ನಡುವೆ ಯುವಕ ಹಾಗೂ ಯುವತಿ ಮದುವೆಯಾಗಲು ನಿರ್ಧಾರಕ್ಕೆ ಬಂದು ಭಾನುವಾರ ರಾತ್ರಿ ಊರು ತೊರೆದಿದ್ದರು.
ಯುವತಿ ಕಾಣೆಯಾಗುತ್ತಿದ್ದಂತೆ ಆಕ್ರೋಶಗೊಂಡ ಯುವತಿಯ ಕಡೆಯವರು ಯುವಕನ ಮನೆಗೆ ಭಾನುವಾರ ಮಧ್ಯರಾತ್ರಿಯೇ ಆಗಮಿಸಿ ಮಾಹಿತಿ ಕೇಳಿದ್ದರು. ಯುವಕನ ತಾಯಿ ಈ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದ್ದಂತೆ ನಿನ್ನ ಸಹಕಾರದಿಂದ ನಮ್ಮ ಮಗಳನ್ನು ಹೊತ್ತುಕೊಂಡು ಹೋಗಿದ್ದಾನೆ. ನಿನ್ನ ಮಗನ ಮಾಹಿತಿ ನಿನಗೆ ಇದೆ ಎಂದು ಆಕ್ರೋಶ ಹೊರ ಹಾಕಿದ್ದರು.
ಮಾಹಿತಿ ಕೊಡದಿದ್ದರೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದ ಯುವತಿ ಕಡೆಯವರು ಮಹಿಳೆಯರನ್ನು ಹೊರ ಎಳೆದುಕೊಂಡು ಬಂದು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿದ್ದರು. ಅಲ್ಲದೇ ಹಲ್ಲೆ ಕೂಡ ಮಾಡಿದ್ದರು. ಆಕೆ ಅಸ್ವಸ್ಥಳಾಗಿದ್ದಳು. ಗ್ರಾಮಸ್ಥರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಳಿಸಲಾಗಿತ್ತು.
ಘಟನೆ ಹೊರಬರುತ್ತಿದ್ದಂತೆ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಎಸ್.ಎನ್.ಸಿದ್ದರಾಮಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಮಹಿಳೆಯರು ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಯುವಕ ಮತ್ತು ಯುವತಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಗ್ರಾಮದಲ್ಲಿ 2 ಕೆಎಸ್ಆರ್ಪಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಇನ್ನು ಘಟನೆಯ ಬೆನ್ನಲ್ಲೇ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಮನೆಗೆ ಬೀಗ ಹಾಕಿ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಮತ್ತೊಂದೆಡೆ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೋಲಿಸ್ ಬಂದೋಬಸ್ತ್ ಮಾಡಿದ್ದಾರೆ.
ಈ ವಿಡಿಯೋ ನೋಡಿ : ವಿಚಾರ ಸಂಕಿರಣ : ಆಹಾರ,ಆರೋಗ್ಯ,ಶಿಕ್ಷಣಕ್ಕಾಗಿ ಇರುವ ಕೇಂದ್ರ ಪುರಸ್ಕೃತ ಯೋಜನೆಗಳ ನೌಕರರ ಪರಿಸ್ಥಿತಿ