ಅಂಗನವಾಡಿಗಳನ್ನು ಬಲಗೊಳಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು – ಕರೆಮ್ಮ ನಾಯಕ್‌

ಬೆಂಗಳೂರು : ಅಂಗನವಾಡಿ ಕೇಂದ್ರಗಳನ್ನು ಬಲಗೊಳಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಅದಕ್ಕಾಗಿ ಪ್ರಬಲ ಒತ್ತಡ ಹಾಕುವ ಅಗತ್ಯವಿದೆ ಎಂದು ದೇವದುರ್ಗ‌ ಕ್ಷೇತ್ರದ ಜೆ.ಡಿ.ಎಸ್‌. ಶಾಸಕಿ ಕರೆಮ್ಮ ನಾಯಕ್‌ ಕರೆ ನೀಡಿದರು.

ಐಸಿಡಿಎಸ್‌ ಉಳಿಸಿ- ಮಕ್ಕಳನ್ನು ರಕ್ಷಿಸಿ ವೇದಿಕೆ ಹಮ್ಮಿಕೊಂಡಿದ್ದ ಐಸಿಡಿಎಸ್ ಯೋಜನೆ ಮತ್ತು ರಾಜಕೀಯ ಪಕ್ಷಗಳ ನಿಲುಮೆ” ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅಂಗನವಾಡಿ ಕೇಂದ್ರಗಳನ್ನು ಬಲಗೊಳಿಸುವ ದೊಡ್ಡ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಆದರೆ ಅದು ಯೋಜನೆಗೆ ಹಣವನ್ನು ಕಡಿತ ಮಾಡುತ್ತಿದೆ. ಇದರಿಂದ ಯೋಜನೆ ದುರ್ಬಲವಾಗುತ್ತದೆ.

ಕೋವಿಡ್‌ ಸಮಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ದುಡಿದ ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಿಸಬೇಕು. ಹಾಗೂ ಅಂಗನವಾಡಿ ಕೇಂದ್ರಗಳನ್ನು ಬಲಗೊಳಿಸುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ವಹಿಸಬೇಕು ಎಂದರು.

ಅಂಗನವಾಡಿ ಕಾರ್ಯಕರ್ತರನ್ನು ದುರುಪಯೋಗ ಪಡಸಿಕೊಳ್ಳುವ ಕೆಲಸ ನಡೆಯುತ್ತಿದೆ. ಇದರ ವಿರುದ್ದ ಹೋರಾಟ ಇನ್ನಷ್ಟು ಗಟ್ಟಿಯಾಗಬೇಕು. ಅಂಗನವಾಡಿಗಳಲ್ಲಿಯೇ ಎಲ್‌.ಕೆ. ಜಿ. ಆರಂಭಿಸಬೇಕು ಎಂಬುದು ನನ್ನ ವಾದ, ನಾನು ಸರ್ಕಾರದ ಜೊತೆಯೂ ಈ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ನಿಮ್ಮ ಹೋರಾಟಗಳಿಗೆ ನಾನು ಜೊತೆಯಾಗಿರುತ್ತೇನೆ. ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಿತಿಯ ಸದಸ್ಯಳಾಗಿ ಅಂಗನವಾಡಿ ಕೇಂದ್ರಗಳನ್ನು ಬಲಗೊಳಿಸಲು ನಾನು ಸದನದೊಳಗೆ ಹೋರಾಡುತ್ತೇನೆ ಎಂದರು.

ಇದನ್ನು ಓದಿ : ಪೂರ್ವ ಪ್ರಾಥಮಿಕ ಶಿಕ್ಷಣ ಬಲಗೊಂಡರೆ ಭಾರತದ ಭವಿಷ್ಯ ಉತ್ತಮಗೊಳ್ಳಲಿದೆ – ಜಸ್ಟೀಸ್‌ ಮುರಳಿಧರ

ಅಂಗನವಾಡಿಗಳನ್ನು ಬಲಗೊಳಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು - ಕರೆಮ್ಮ ನಾಯಕ್‌
ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿ, ಅಪೌಷ್ಟಿಕತೆಯಿಂದ ನಿಮಿಷಕ್ಕೆ 12 ಜನ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ 65% ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಇಂತಹ ಮಹಿಳೆಯರ ರಕ್ಷಣೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಐ.ಸಿ.ಡಿ. ಎಸ್‌. ಯೋಜನೆ ಬಲಗೊಳ್ಳಬೇಕು. ಜನಪರವಾದ ಕಾಳಜಿ ಇಲ್ಲದ ಸರ್ಕಾರಗಳು ಈ ಯೋಜನೆಯನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಶಿಕ್ಷಣವನ್ನು ಖಾಸಗೀಕರಣಗೊಳಿಸುತ್ತಿವೆ. ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಿದ ಸರ್ಕಾರಗಳು ಈಗ ಅಂಗನವಾಡಿಯನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿವೆ ಎಂದು ಆರೋಪಿಸಿದರು.

ಎನ್‌.ಇ. ಪಿ. ಹೆಸರಿನಲ್ಲಿ ಮೂರು ವರ್ಷದ ಮಕ್ಕಳನ್ನು ಐ.ಸಿ.ಡಿ.ಎಸ್‌.ನಿಂದ ದೂರ ಮಾಡುವ ಪ್ರಯತ್ನ ನಡೆದಿತ್ತು. ಅಂಗನವಾಡಿ ಸಂಘಟನೆಗಳು ನಡೆಸಿದ ಹೋರಾಟದಿಂದ ಸರ್ಕಾರ ಜಾರಿ ಮಾಡಲಿಲ್ಲ. ದೇಶದ ಮಕ್ಕಳು ,ಬಾಣಂತಿಯರು ಅಪೌಷ್ಟಿಕತೆಯಿಂದ ನರಳುವಂತೆ ಮಾಡುವುದು ಆಳುವ ಸರ್ಕಾರಗಳ ಉದ್ದೇಶ ಇದ್ದಂತೆ ಕಾಣುತ್ತಿದೆ. ಬಡವರ ಕಲ್ಯಾಣದ ಬಗ್ಗೆ ಇವರಿಗೆ ಯೋಚನೆಗಳು ಇಲ್ಲ, ಶ್ರೀಮಂತರನ್ನು ಶ್ರೀಮಂತರನ್ನಾಗಿಸುವ ಕೆಲಸಗಳು ಹಲವು ವರ್ಷದಿಂದ ನಡೆಯುತ್ತಿವೆ.

ಖಾಸಗೀ ಬಂಡವಾಳದಾರರಿಗೆ 80 ಲಕ್ಷ ಕೋಟಿಯಷ್ಟು ಸಬ್ಸಿಡಿ ನೀಡುವ ಸರ್ಕಾರ ಐ.ಸಿ.ಡಿಎಸ್‌. ಯೋಜನೆಗೆ ಹಣ ಇಲ್ಲ ಎನ್ನುತ್ತದೆ. ಜಿಂದಾಲ್‌ ಕಂಪನಿಗೆ ಕಡಿಮೆ ದರದಲ್ಲಿ ರೈತರ ಭೂಮಿಯನ್ನು ಕಿತ್ತುಕೊಂಡು ನೀಡುತ್ತಿದೆ. ಅದೆಷ್ಟು ಜನ ಅಂಗನವಾಡಿಗಳಿಗೆ ಮತ್ತು ಅಂಗನವಾಡಿಯಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ವಸತಿ ಮನೆ ಇಲ್ಲದೆ ಪರದಾಡುತ್ತಿದ್ದಾರೆ, ಆದರೆ ಅವರಿಗೆ ಮನೆ ಕಟ್ಟಿಸಿ ಕೊಡುವುದಿಲ್ಲ ಇದು ಈ ರಾಜ್ಯದ ದುರಂತ. ನಮ್ಮ ತೆರೆಗೆಯ ಹಣವನ್ನು ಲೂಟಿಕೋರ ಕಂಪನಿಗಳಿಗೆ ನೀಡುತ್ತಿರುವುದರ ವಿರುದ್ಧ ಪ್ರಬಲ ಚಳವಳಿ ರೂಪಗೊಳ್ಳಬೇಕಿದೆ. ನಿಮ್ಮ ಚಳವಳಿಯ ಜೊತೆಗೆ ಸಿ.ಪಿ.ಐ.ಎಂ ನಿಲ್ಲುತ್ತದೆ ಎಂದರು.

ಐ.ಸಿ.ಡಿಎಸ್‌. ಯೋಜನೆಯ ನಿರ್ದೇಶಕರಾದ ಸಿದ್ದೇಶ್ವರ ರವರು ಸರ್ಕಾರದ ಪರವಾಗಿ ಭಾಗವಹಿಸಿ ಎರಡು ದಿನಗಳ ಕಾರ್ಯಕ್ರಮದ ನಿರ್ಣಯಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಈ ವೇಳೆ ಐ.ಸಿ.ಡಿ.ಎಸ್ ಉಳಿಸಿ ಮಕ್ಕಳನ್ನು ರಕ್ಷಿಸಿ ವೇದಿಕೆಯ ಸಂಚಾಲಕರಾದ ಎಸ್‌ ವರಲಕ್ಷ್ಮಿ, ಬಿ.ಶ್ರೀಪಾದ ಭಟ್, ವೇದಿಕೆಯ ಸದಸ್ಯರಾದ ಕೆ.ಎಸ್.ವಿಮಲಾ, ಶಂಶಾಂಕ್‌ ಎಸ್‌ .ಆರ್‌, ಕಾತ್ಯಾಯಿನಿ ಚಾಮರಾಜ್‌, ವಿನಯ್‌ ಶ್ರೀನಿವಾಸ್‌, ಡಾ.ಸಬೀಹಾ ಭೂಮಿಗೌಡ ಅಂಗನವಾಡಿ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷರಾದ ಶಾಂತಾ , ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಸುನಂದ ಮುಖಂಡರಾದ ಯಮುನಾ ಗಾಂವ್ಕರ್‌, ಸೇರಿದಂತೆ ಅನೇಕರಿದ್ದರು.

ಇದನ್ನು ನೋಡಿ : ಜಾತಿಗಣತಿ ಜಾರಿಗೆ ಸಿಎಂ ಸಿದ್ದರಾಮಯ್ಯ ಮೀನಮೇಷ ಎಣಿಸುತ್ತಿದ್ದಾರೆ : Janashakthi Media

Donate Janashakthi Media

Leave a Reply

Your email address will not be published. Required fields are marked *