ಹೆಣ್ಣಿನ ಒಡಲಾಳದ ಧಾವಂತದ ಕಥೆಗಳು

– ಎಂ. ಜವರಾಜ್

‘ಹುಣಸೇ ಚಿಗುರು’ – ಇದು ದೀಪದ ಮಲ್ಲಿ ಅವರ ಮೊದಲ ಕಥಾ ಸಂಕಲನ. ಈ ಸಂಕಲನದಲ್ಲಿರುವ ಕಥೆಗಳನ್ನು ಓದುತ್ತಾ, ಇದು ಅವರ ಮೊದಲ ಸಂಕಲನವೇ..? ಇಲ್ಲ, ಇದು ಹತ್ತಾರು ಕೃತಿ ಬರೆದಿರುವ ನುರಿತ ಬರಹಗಾರರ ಅನುಭವಿ ಬರಹಗಳಂತೆ ಇಲ್ಲಿನ ಕಥೆಗಳು ಓದುಗನನ್ನು ಕಾಡುತ್ತವೆ ಎಂಬುದರಲ್ಲಿ ಯಾವ ಅನುಮಾನವೂ ಬೇಡ, ಅಷ್ಟು ಗಟ್ಟಿಯಾದ ನಿರೂಪಣೆಯ ಕಥೆಗಳು. ಹೆಣ್ಣಿನ

ಇಲ್ಲಿ ಒಟ್ಟು ಹತ್ತು ಕಥೆಗಳಿವೆ. ಈ ಹತ್ತೂ ಕಥೆಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಅದರಲ್ಲು ಜಾಕ್ಸನ್ ತಿಪ್ಪೇಸ್ವಾಮಿ, ಹುಣಸೇ ಚಿಗುರು, ಮೌನಂ ನ ಸಮ್ಮತಿ ಲಕ್ಷಣಂ, ಮುಳ್ಕಟ್ಟಮ್ಮನ ಆಶೀರ್ವಾದ, ಮಿಸೆಸ್ ರೀನಾ ರವೀಶ್ – ಕಥೆಗಳಲ್ಲಿ ಗುರುತಿಸಬಹುದು. ‘ಭಿನ್ನ’ ಹೇಗೆ ಅಂದರೆ ದೀಪಾ ಅವರು ಕಥೆ ಹೇಳಿರುವ ಸ್ಟೈಲ್. ಕಥೆಗೆ ಆಯ್ದುಕೊಂಡಿರುವ ವಸ್ತು. ಪ್ರತೀ ಕಥೆಗಳಲ್ಲಿ ಬಳಸಿರುವ ಭಾಷೆ / ಪ್ರಯೋಗ. ಪದಗಳ ಮಿತಿ. ಪದ ಮಿತಿಗೆ ಹಾಕಿಕೊಂಡಿರುವ ಪೂರಕ ಚೌಕಟ್ಟು. ತುಂಡು ತುಂಡು ಮಾತು. ಸನ್ನಿವೇಶಗಳ ಕಥಾ ಆವರಣ. ಅಕ್ಷರಗಳ ಜಿಪುಣತನ/ಜಿಗುಟುತನವೇ ಕಥನ ತಂತ್ರದ ಭಾಗವಾಗಿಸಿದ ಕಥಾ ಹೆಣಿಗೆ. ಈತರದ (ಪದ ಜಿಪುಣತನ/ ಜಗುಟು) ಪ್ರಯೋಗಾತ್ಮಕ ಕಥನ ತಂತ್ರ ದೇವನೂರರ ಬಹುತೇಕ ರಚನೆಯಲ್ಲಿವೆ. ಇಂಥವು ಓದುಗನನ್ನು ನಾಟುತ್ತವೆ. ಕಾಡಿ ಬಿಡುತ್ತವೆ. ಹೆಣ್ಣಿನ

ಇಲ್ಲಿನ ‘ಮೌನಂ ನ ಸಮ್ಮತಿ ಲಕ್ಷಣಂ’ ಕಥೆಯಲ್ಲಿ ಶ್ಲಾಘ್ಯಾ “ಅವಳಿಗೆ ಅಪ್ಪ ಅಂದ್ರೆ ಆಕಾಶ. ಅವಳು “ಆಗಲ್ಲ” ಅನ್ನುವ ಮಾತೆಲ್ಲಿಯದು?” ಮಾತಲ್ಲಿ “ಆಗಲ್ಲ” ಎಂಬುದು. ಹಾಗೆ “ಅಪ್ಪನ ಫೋಟೋ. ಬಹುಶಃ ಕಳೆದ ವರ್ಷಾಭ್ದಿಕದ್ದು. ಅದರ ಕೆಳಗೊಂದು ಕ್ಯಾಪ್ಷನ್ ಮತ್ತು ನಮಸ್ಕಾರದ ಇಮೋಜಿ” – ಇಲ್ಲಿ ‘ನಮಸ್ಕಾರದ ಇಮೋಜಿ’ ಮತ್ತು ಕಡೆಗೆ “Beware of Men” ಮೆಸೇಜ್ – ಇದು ಕಥೆಯ ಒಟ್ಟು ಆಳ ಅಗಲವನ್ನು ಅಳೆದು ತೂಗಿ ಒಂದು ಕಡೆ ಬಿಸಾಕಿ ಬಿಡುತ್ತದೆ. ಹೆಣ್ಣಿನ

ಇದನ್ನೂ ಓದಿ: ಮೈಸೂರು| ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ಪ್ರೊ. ವಿ.ಕೆ. ನಟರಾಜ್ ನಿಧನ

ಇನ್ನೊಂದು “ಮುಳ್ಕಟ್ಟಮ್ಮನ ಆಶೀರ್ವಾದ” ಕಥೆ – ಈ ಕಥೆಯ ಮೊದಲ ಸಾಲು “ಕಾಳೇಗೌಡರು ಊಟ ಬಿಟ್ಟು ಇಂದಿಗೆ ಮೂರು ದಿವಸ” ಹಾಗು ಕಥೆಯ ಕೊನೇ ಪ್ಯಾರದಲ್ಲಿ “ಒಂದು ತಿಳ್ಕ ಕಮ್ಲೀ, ಇದು ಮುಳ್ಕಟ್ಟಮ್ಮುಂದೇ ಇಚ್ಚೆ. ಅವ್ಳು ಗುಡಿಲೇ ಕಂಕಣ ಕಟ್ಟಿಸೌಳೆ ಅಂತ ಕಾಣ್ದದೆ. ಗಂಡೂ ಹೆಣ್ಣು ಆಮೇಕೆ. ಜೊತ್ಗೆ ಬದ್ಕೋರು ಮನುಸ್ರುತರ ಬದುಕ್ಬೇಕು. ನಾಯಿಗಳ್ ತರ ನಡುಸ್ಕಾಬಾರ್ದು ತಿಳ್ಳ” ಅನ್ನುವ ಲಕ್ಷ್ಮಮ್ಮನ ಆತಂಕ! ಆ ಆತಂಕದ ಭಾರವನ್ನು ಹೊರ ಹಾಕಿ ಅದನ್ನು ಭಾಗಶಃ ಇಳಿಸಿಕೊಂಡವಳಂತೆ ಫೋನ್ ಇಡುವ ಬಗೆ. ಅದರೊಳಗಿನ ಗೂಢಾರ್ಥವು ಲೌಕಿಕ ಬದುಕಿನ ಗಂಭೀರತೆಯನ್ನು ಕಟ್ಟಿ ಕೊಡುವಲ್ಲಿ ಕಥೆಯ ನಿರೂಪಣೆಯಲ್ಲಿ ಒಂದು ಅಗಾಧತೆಯ ಗಟ್ಟಿತನವಿದೆ. ಹಾಗೆ ಮಿಸೆಸ್ ರೀನಾ ರವೀಸ್ ಬದುಕಿನ ಪರಿ. ಹೆಣ್ಣಿನ

ಎಲ್ಲೆಗಳ ಮೀರುವ ಪ್ರಯತ್ನ. ಆ ಪ್ರಯತ್ನಗಳ ಸಫಲತೆಯಲ್ಲಿ ಕಾಣುವ ಸ್ವಾಭಿಮಾನ ತುಂಬಿದ ಬದುಕಿನ ಸೌಂದರ್ಯದೊಳಗೆ ಇಣುಕುವ ನೋವಿನ ಗೆರೆಗಳು ಓದುಗನೆದುರು ತೆರೆದುಕೊಳ್ಳುತ್ತವೆ. ಜಾಕ್ಸನ್ ತಿಪ್ಪೇಸ್ವಾಮಿ, ಮನುಷ್ಯ ಲೋಕದ ನಿಕೃಷ್ಠ ಜೀವನ ವಿಧಾನವನ್ನು ಹೇಳುವ ಕಥೆ. ಕಸದ ಗುಡ್ಡೆಯ ಪ್ರಪಂಚದಲ್ಲಿ ಜಾಕ್ಸನ್ ಹೆಜ್ಜೆ ಗುರುತುಗಳಲ್ಲಿ ಅನುಮಾನಿತ ಸತ್ಯಗಳಿವೆ. ಅವನ ಸಾವಿನ ಸುತ್ತ ಹರಡುವ ಸುದ್ದಿ. ಆ ಸುದ್ದಿ ಬೆನ್ನಿಡಿದು ಹೋದರೆ ಪ್ರಾಪಂಚಿಕ ವ್ಯಾವಹಾರಿಕ ವಂಚನೆಯ ಸಂಕ್ಷಿಪ್ತ ರೂಪದ ದೃಶ್ಯ ಕಾಣುತ್ತದೆ.

‘ಹುಣಸೇ ಚಿಗುರು’ ಒಂದು ಗಂಭೀರ ಕಥೆ. ಇದರ ನಿರೂಪಣೆಯೇ ವಿಶೇಷವಾಗಿದೆ. ನಿರೂಪಕಿಯೇ ಇಲ್ಲಿನ ಪ್ರಧಾನ ಪಾತ್ರ. ಅವಳು ತನ್ನ ಬದುಕಿನ ಪುಟಗಳನ್ನು ವಿವರಿಸುವಲ್ಲಿ ಅಸ್ಸಹಾಯಕತೆಯ ಸಂಕಟವಿದೆ. ಸಿಟ್ಟಿದೆ. ಬದುಕಿನ ಮಗ್ಗುಲಲ್ಲಿ ಅನೈತಿಕತೆ ಸಂಬಂಧದ ನಾಜೂಕುತನ. ಅದರ ಮೇರೆ. ಅದನ್ನು ಪ್ರಶ್ನಿಸಲಾಗದ ಮನುಷ್ಯನ ದುರ್ಬಲ ಸ್ಥಿತಿ. ಈ ಎಲ್ಲ ನಿಗೂಢ ನಡೆಯಲ್ಲಿ ‘ಬಾಲೆ’ಯ ಚಿಗುರು ಬಾಳು ಅವಸಾನ ಅಂಚಿಗೆ ತಲುಪಿ ಮರುಗುವ ಧಾರುಣತೆ ಓದುಗನ ಮನ ಕಲಕುತ್ತದೆ. ದೀಪಾ ಅವರ ಈ ಹುಣಸೇ ಚಿಗುರು ಈಚೆಗೆ ಬಂದ ಗಂಗಪ್ಪ ತಳವಾರರ ‘ಧಾವತಿ’ ಯನ್ನು ಕ್ಷಣ ನೆನಪಿಗೆ ತರಿಸಿತು ಎಂಬುದರಿಂದ ಹುಣಸೇ ಚಿಗುರಿನಲ್ಲಿ ಹೆಣ್ಣಿನ ಒಡಲಾಳದ ಧಾವಂತದೊಳಗೆ ನೋವಿನ ಕೀವು ಒಸರುತ್ತ ವಾಸನೆಯ ಪಸರಿನ ಒಗರಿದೆ.

ಕಥೆಗಾರ್ತಿ ದೀಪಾ ಕಟ್ಟಿಕೊಟ್ಟಿರುವ ಈ ಎಲ್ಲ ಕಥೆಗಳ ಆಳದೊಳಗೆ ಅಗಾಧ ನೋವಿದೆ ಸಿಟ್ಟಿದೆ ಅನೈತಿಕತೆಯಂಥ ಗಬ್ಬುತನವಿದೆ. ಅದು ಇಲ್ಲಿ ಎಲ್ಲೆ ಮೀರಿದೆ. ಈ ಮೀರುವ ಗುಣದಲ್ಲು – ಮಗಳು, ಮಗನ ರಕ್ತ ಸಂಬಂಧವಿದೆ. ಇದರ ಜೊತೆಗೆ ಬೆರೆತುಕೊಂಡ ‘ದೇವರಂಥ’ ತಂದೆಯ ‘ಭಿನ್ನಮುಖ’ವೂ ಕಾಣುತ್ತದೆ. ಹೀಗೆ ಅನೇಕ ಸಂಗತಿಗಳ ವಸ್ತುವಿಷಯ ಆಯ್ದು ಮೈಚಳಿ ಬಿಟ್ಟು ಲೀಲಾಜಾಲವಾಗಿ ಲವಲವಿಕೆಯಿಂದ ಕಥೆಗಳನ್ನು ರಚಿಸಿರುವ ದೀಪಾ ಅವರಿಂದ ಇನ್ನಷ್ಟು ರಚನೆಗಳು ಬರಲಿ.

ಇದನ್ನೂ ನೋಡಿ: ಪಿಚ್ಚರ್ ಪಯಣ :153, ಚಿತ್ರ : ಆಲ್ ವಿ ಇಮ್ಯಾಜಿನ್ ಆಸ್ ಲೈಟ್ , ALL WE IMAGINE AS LIGHT

Donate Janashakthi Media

Leave a Reply

Your email address will not be published. Required fields are marked *