ಎಚ್. ಆರ್. ನವೀನ್ ಕುಮಾರ್
ಎಲ್ಲರೂ ಬೆಂಗಳೂರಿಗೆ ಬಂದು ದುಡಿಮೆ ಮಾಡಿ ದುಡ್ಡುಕಟ್ಟಿಕೊಂಡು ವಾಪಸ್ ಊರಿಗೆ ಹೋದರೆ, ಇವರು ಊರಿಂದಲೇ ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರಿಗೆ ಬಂದು ತಮ್ಮ ರಕ್ತ ಬೆವರು ಸುರಿಸಿ…ಉಳ್ಳವರ ಗಂಟು ಭದ್ರಪಡಿಸಿ ತಮ್ಮ ಗಂಟುಮೂಟೆಯನ್ನ ಖಾಲಿ ಮಾಡಿಕೊಂಡು ಉದ್ಯಾನ ನಗರಿಗೆ ಬಣ್ಣದ ಬದುಕಿಗೆ ವಿದಾಯ ಹೇಳಿ ಬರಿಗೈಯಲ್ಲಿ ಊರು ಸೇರುವವರ ಸಂಖ್ಯೆಯೇ ಹೆಚ್ಚು. ಬದುಕಿನಬೆಂಗಳೂರು
ಇರುವೆಗಳ ಸಾಲಿನಂತೆ ದಂಡುಗಟ್ಟಿ ಸಾಗುತ್ತಿರುವ ಜನ, ಎಡಗೈಯಲ್ಲಿ ರೊಟ್ಟಿ ಚೀಲ, ಬಲಗೈಯಲ್ಲಿ ಮಗು, ಹೆಗಲಮೇಲೆ ಮತ್ತು ತಲೆಯ ಮೇಲೆ, ಜೋಳ, ಅಕ್ಕಿ, ಪಾತ್ರೆ ಚೀಲದ ಭಾರ ಹೊತ್ತು. ಬದುಕಿನ ಭಾರ ಇಳಿಸಲೆಂದು ಬೆಂದಕಾಳೂರಿನ ಕಡೆ ಹೆಜ್ಜೆ ಹಾಕಿದವರಿವರು.
ನಸು ಬೆಳಗಿನ ಜಾವ ಇನ್ನೂ ಆಗಸದಲ್ಲಿ ರವಿ ಮೂಡಿರಲಿಲ್ಲ. ಬೆಂಗಳೂರು ರೈಲ್ವೇ ನಿಲ್ದಾಣದಿಂದ ಬಿಎಂಟಿಸಿ ಬಸ್ ನಿಲ್ದಾಣದ ಕಡೆಗೆ ಸಂಸಾರ ಸಮೇತರಾಗಿ ಹೊರಟಿದ್ದರು…
ಇದನ್ನೂ ಓದಿ: ಚುನಾವಣೆ ಎಫೆಕ್ಟ್: 450 ರೂ.ಗೆ ಎಲ್‌ಪಿಜಿ ಸಿಲಿಂಡರ್ ನೀಡಲು ಮುಂದಾದ ಮಧ್ಯಪ್ರದೇಶದ ಬಿಜೆಪಿ ಸರ್ಕಾರ!
ಉತ್ತರ ಕರ್ನಾಟಕದ ಭಾಗಗಳಿಂದ ಉದ್ಯೋಗ ಅರಸಿ ರಾಜಧಾನಿಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತುಂಡು ಭೂಮಿಯನ್ನ ನಂಬಿ, ಕೃಷಿ ಕೂಲಿಯನ್ನು ನಂಬಿ ಬದುಕು ಸಾಗಿಸುವುದು ದುಸ್ತರವಾಗಿರುವಾಗ, ಬದುಕಿನ ಅನಿವಾರ್ಯ ಅವರನ್ನು ಇಲ್ಲಿಯವರೆಗೂ ಕರೆತಂದಿದೆ.
ಉತ್ತರ ಕರ್ನಾಟಕದ ವಿವಿಧ ಪ್ರದೇಶಗಳಿಂದ ಬರುವ ಯಾವುದೇ ರೈಲುಗಳಲ್ಲಿ ಜನ ಕಿಕ್ಕಿರಿದು ತುಂಬಿರುತ್ತಾರೆ. ಮುಂಗಡ ಟಿಕೇಟ್ ಮಾಡಿಸುವ ಶಕ್ತಿ, ಸಾಮರ್ಥ್ಯ ಎರಡೂ ಇಲ್ಲದೆ ಸಾಮಾನ್ಯ ಬೋಗಿಗೆ ಟಿಕೆಟ್ ಪಡೆದು ರೈಲು ಹತ್ತಲು ನಿಂತರೆ ಉದ್ದದ ರೈಲಿನಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಇವರುಗಳು ಹತ್ತಲು ಮುಂದೆ ಎರಡು ಹಿಂದೆ ಎರಡು ಬೋಗಿಗಳು. ಟಿಕೇಟ್ ಪಡೆದಾಗಿದೆ ಊರಲ್ಲೆಲ್ಲಾ ಬೆಂಗಳೂರಿಗೆ ಹೋಗುತ್ತೇವೆಂದು ಹೇಳಿದ್ದಾಗಿದೆ. ಬೆಂಗಳೂರಿನಲ್ಲೂ ಕೆಲವರ ಜೊತೆ ಮಾತುಕತೆ ನಡೆದಿದೆ. ಇನ್ನು ಊರಿಗೆ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ಬಂದ ಕಷ್ಟಗಳನ್ನೆಲ್ಲಾ ಸಹಿಸಿ ದೊಡ್ಡಮನಸ್ಸು ಮಾಡಿ ಹೆಚ್ಚಿನ ಸಂಖ್ಯೆಯಲ್ಲಿರುವ ರಿಸರ್ವ್ ಬೋಗಿಗಳಿಗೆ ಹತ್ತುತ್ತಾರೆ. ಇಲ್ಲಿ ಈಗಾಗಲೇ ಸೀಟು ಕಾಯ್ದಿರಿಸಿದ ಜನರಿಂದ ಕೇಳಬಾರದ್ದನ್ನೆಲ್ಲಾ ಕೇಳಿಸಿಕೊಂಡು ತಳ ಊರಲು ಸ್ವಲ್ಪ ಜಾಗ ಸಿಕ್ಕರೂ ಸಾಕು ಮೊದಲು ಅಲ್ಲಿ ತಮ್ಮ ಮೂಟೆಗಳಿಗೊಂದು ಜಾಗ ಮಾಡಿ ಸೀಟಿನ ಅಡಿಯಲ್ಲಿ ಭದ್ರಪಡಿಸುತ್ತಾರೆ.
ಆನಂತರ ಸಣ್ಣ ಮಕ್ಕಳ ಸರಿದಿ. ಅದೇ ಮೂಟೆಗಳ ಪಕ್ಕದಲ್ಲಿ ಈ ಮಕ್ಕಳಿಗೆ ಒಂದು ಪೇಪರ್ ಅಥವಾ ಲುಂಗಿಯನ್ನ ಹಾಸಿ ಮಲಗಿಸುತ್ತಾರೆ. ಮುಂಗಡ ಟಿಕೇಟ್ ಮಾಡಿಸಿದ ದರ್ಪದಲ್ಲಿ ಅಕ್ಕಪಕ್ಕದವರು ಏನಾದರೂ ಮಾತನಾಡಿದರೆ ಅದು ತಮಗೆ ಕೇಳಿಸಲೇ ಇಲ್ಲ ಎನ್ನುವಂತೆ ಇರುತ್ತಾರೆ. ಯಾಕೆಂದರೆ ಮಾತಿಗಿಳಿದರೆ ಅಂತಿಮವಾಗಿ ಅವರು ಆ ಬೋಗಿಯಿಂದ ಇಳಿಯಬೇಕಾಗುತ್ತದೆ. ಅದಕ್ಕಾಗಿ ಯಾವ ಮಾತುಗಳಿಗೂ ಗಮನ ಕೊಡದೆ ತಮ್ಮದೇ ಲೋಕದಲ್ಲಿರುತ್ತಾರೆ. ಒಂದು ವೇಳೆ ಮುಂಗಡ ಟಿಕೆಟ್ ಮಾಡಿಸಿದವರು ತುಂಬಾ ಕಿರಿಕಿರಿ ಮಾಡಿದರೆ ಆ ಸೀಟಿನ ಜಾಗದಿಂದ ಪಕ್ಕಕ್ಕೆ ಹೋಗುತ್ತಾರೆ.. ಆದರೆ ಯಾವುದೇ ಕಾರಣಕ್ಕೂ ಬೋಗಿಯನ್ನು ಬಿಟ್ಟು ಕೆಳಗಿಳಿಯುವುದಿಲ್ಲ.. ಇವರ ಗುರಿ ಇರುವುದು ಬೆಂಗಳೂರು ತಲುಪುವುದು… ಕೊನೆಗೆ ಶೌಚಾಲಯಗಳ ಅಕ್ಕಪಕ್ಕ ಸಿಕ್ಕ ಜಾಗವನ್ನೇ ತಮ್ಮ ಪ್ರಯಾಣದ ಕಾಯ್ದಿರಿಸಿದ ಜಾಗವನ್ನಾಗಿ ಪರಿವರ್ತಿಸಿಕೊಳ್ಳತ್ತಾರೆ. ಕೆಲವು ಸಲ ಸೀಟಿನ ಅಡಿಯಲ್ಲಿರುವ ಲಗೇಜಿಗು ಅಲ್ಲೇ ಮಲಗಿರುವ ಶ್ರಮಜೀವಿಗಳಿಗೂ ಯಾವ ವ್ಯತ್ಯಾಸವೂ ಇಲ್ಲದಂತಿರುತ್ತದೆ.
ಎಲ್ಲರೂ ಬೆಂಗಳೂರಿಗೆ ಬಂದು ದುಡಿಮೆ ಮಾಡಿ ದುಡ್ಡುಕಟ್ಟಿಕೊಂಡು ವಾಪಸ್ ಊರಿಗೆ ಹೋದರೆ, ಇವರು ಊರಿಂದಲೇ ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರಿಗೆ ಬಂದು ತಮ್ಮ ರಕ್ತ ಬೆವರು ಸುರಿಸಿ…ಉಳ್ಳವರ ಗಂಟು ಭದ್ರಪಡಿಸಿ ತಮ್ಮ ಗಂಟುಮೂಟೆಯನ್ನ ಖಾಲಿ ಮಾಡಿಕೊಂಡು ಉದ್ಯಾನ ನಗರಿಗೆ ಬಣ್ಣದ ಬದುಕಿಗೆ ವಿದಾಯ ಹೇಳಿ ಬರಿಗೈಯಲ್ಲಿ ಊರು ಸೇರುವವರ ಸಂಖ್ಯೆಯೇ ಹೆಚ್ಚು.
ವಿಡಿಯೋ ನೋಡಿ: ‘ಸಿನಿಮಾ’ ಸಾಮಾಜಿಕ ತಲ್ಲಣಗಳ ಪ್ರತಿಬಿಂಬ – ನಟ, ನಿರ್ದೇಶಕ ಬಿ.ಸುರೇಶ ಜೊತೆ ಮಾತುಕತೆ Janashakthi Media