ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯ ಸೆಕ್ಷನ್ 66ಎ ಅನ್ನು ರದ್ದುಪಡಿಸಲಾಗಿದ್ದರೂ ಸಹ ಅದೇ ಸೆಕ್ಷನ್ ಅಡಿಯಲ್ಲಿ ಮತ್ತೆ ಮತ್ತೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಇಂದು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಂಬಂಧಿತ ಇಲಾಖೆಗಳಿಗೆ ಹಾಗೂ ರಾಜ್ಯ ಹೈಕೋರ್ಟ್‌ಗಳಿಗೆ ನೋಟಿಸ್ ಜಾರಿ ಮಾಡಿದೆ.
ಸರ್ಕಾರೇತರ ಸಂಘಟನೆ ಆದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (ಪಿಯುಸಿಎಲ್) ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆಯಲ್ಲಿ ಪೊಲೀಸ್ ವ್ಯಾಪ್ತಿಯ ವಿಷಯವು ರಾಜ್ಯಗಳಿಗೆ ಸಂಬಂಧಿಸುವುದಾದ್ದರಿಂದ ನ್ಯಾಯಮೂರ್ತಿಗಳಾದ ಆರ್.ಎಫ್.ನರೀಮನ್ ಮತ್ತು ಬಿ.ಆರ್.ಗವಾಯಿ ಅವರಿದ್ದ ನ್ಯಾಯಪೀಠವು ನೋಟಿಸ್ ಜಾರಿಗೊಳಿಸಿತು. ‘ನಾವು ಇದರ ಬಗ್ಗೆ ಒಂದು ಸಮಗ್ರ ಆದೇಶವನ್ನು ಹೊರಡಿಸಿ ವಿಷಯವನ್ನು ಶಾಶ್ವತವಾಗಿ ಕೊನೆಗೊಳಿಸಬಹುದಾಗಿದೆ’ ಎಂದು ಪೀಠ ಹೇಳಿದೆ.
ಇದನ್ನು ಓದಿ: ರದ್ದಾದ ಸೆಕ್ಷನ್ 66ಎ ಪ್ರಕರಣದಡಿ 1000 ಹೆಚ್ಚು ಮಂದಿ ಬಂಧನ: ಕೇಂದ್ರಕ್ಕೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್
ನೋಟಿಸಿನ ಬಗ್ಗೆ ನಾಲ್ಕು ವಾರದೊಳಗೆ ಉತ್ತರಿಸಬೇಕೆಂದು ನ್ಯಾಯಾಲಯ ಸೂಚನೆ ನೀಡಿದೆ.
ಸುಪ್ರೀಂ ನಲ್ಲಿ ಕೇಂದ್ರ ಸರಕಾರವು ಪ್ರಮಾಣಪತ್ರ ಸಲ್ಲಿಸಿ ಸಂವಿಧಾನದಲ್ಲಿನ ನಿಯಮಗಳ ಅನುಸಾರ ‘ಪೊಲೀಸ್’ ಮತ್ತು ‘ಸಾರ್ವಜನಿಕ ಆದೇಶ’ಗಳು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ವಿಷಯಗಳಾಗಿದ್ದು, ‘ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ರದ್ದುಗೊಳಿಸಿ ಆದೇಶಿಸಿರುವ 2015ರ‘ ತೀರ್ಪನ್ನು ಜಾರಿಗೊಳಿಸುವ ಪ್ರಾಥಮಿಕ ಜವಾಬ್ದಾರಿ ರಾಜ್ಯ ಸರಕಾರಗಳ ಕಾನೂನು ಜಾರಿ ಸಂಸ್ಥೆಗಳ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೇಳಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ದುರ್ಬಳಕೆಯಾಗುತ್ತಿದೆ. ಈ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ ಎಂದು ಆರೋಪಿಸಿ ಪಿಯುಸಿಎಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿ ಪ್ರತಿಕ್ರಿಯಿಸಲು ಕೋರಿತ್ತು.
ಇದನ್ನು ಓದಿ: ಕಲಂ 66ಎ ಅಡಿ ಪ್ರಕರಣ ದಾಖಲಿಸಲು ಅವಕಾಶವಿಲ್ಲ: ಕೇಂದ್ರ ಗೃಹ ಇಲಾಖೆ ನಿರ್ದೇಶನ
2015 ರ ಮಾರ್ಚ್ 24 ರಂದು ಸೆಕ್ಷನ್ 66ಎ ನ್ನು ರದ್ದುಗೊಳಿಸಿತ್ತು. ಈ ಸೆಕ್ಷನ್ ಅಡಿಯಲ್ಲಿ ಅನವಶ್ಯಕವಾಗಿ ಏಕಾಏಕಿಯಾಗಿ ಬಂಧಿಸುವ ಅವಕಾಶ ಸೆಕ್ಷನ್ 66ಎ ಅಡಿಯಲ್ಲಿ ಇತ್ತು. ಸೆಕ್ಷನ್ ರದ್ದತಿ ಬಗ್ಗೆ ಕೋರ್ಟ್ ಆದೇಶ ನೀಡಿತ್ತು. ಆದೇಶದ ಬಗ್ಗೆ ಪೊಲೀಸ್ ಸಿಬ್ಬಂದಿಗಳಿಗೆ ಅರಿವು ಮೂಡಿಸುವುದಕ್ಕೆ ಫೆಬ್ರವರಿ 15, 2019 ರಂದು ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಿತ್ತು.
ರದ್ದಾಗಿರುವ ಸೆಕ್ಷನ್ ಅಡಿಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರಮಣಕಾರಿ ಸಂದೇಶಗಳನ್ನು ಪೋಸ್ಟ್ ಮಾಡುವ ವ್ಯಕ್ತಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಮತ್ತು ದಂಡ ವಿಧಿಸಬಹುದಾಗಿತ್ತು.