ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವ ಶುಭಾಶಯಗಳು, ಇಂದು ನವೆಂಬರ್ 1 ರಂದು, ಕೇರಳ, ಹರಿಯಾಣ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ಕರ್ನಾಟಕ ಸೇರಿದಂತೆ ಹಲವಾರು ಭಾರತೀಯ ರಾಜ್ಯಗಳು ರಚನೆಯಾದವು. ಇದರ ನೆನಪಿಗಾಗಿ ಪ್ರತಿವರ್ಷ ಈ ದಿನದಂದು ರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ.
ವಿವಿಧ ರಾಜ್ಯಗಳ ರಚನೆಗೆ ವರ್ಷಗಳೇ ಕಳೆಯಬೇಕಾಯಿತು. ವಿಶಿಷ್ಟ ಸಂಸ್ಕೃತಿ , ಭಾಷೆ ಮತ್ತು ಜನಸಂಖ್ಯೆಗನುಗುಣವಾಗಿ, ವಿವಿಧ ಕಾಲಘಟ್ಟದಲ್ಲಿ ವಿವಿಧ ರಾಜ್ಯಗಳನ್ನು ರಚಿಸಲಾಯಿತು. ನವೆಂಬರ್ 1 ರಂದು ಕರ್ನಾಟಕ, ಆಂಧ್ರಪ್ರದೇಶ, ಹರಿಯಾಣ, ಛತ್ತಿಸಗಢ, ಕೇರಳ, ಪಂಜಾಬ್ ಮತ್ತು ಮಧ್ಯಪ್ರದೇಶ ರಾಜ್ಯಗಳು ಸ್ಥಾಪನಾ ದಿನವನ್ನು ಆಚರಿಸುತ್ತವೆ, ಇದೇ ಸಮಯದಲ್ಲಿ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ಸಿಕ್ಕ ಹಿನ್ನೆಲೆ ಪುದುಚೇರಿ ಮತ್ತು ಲಕ್ಷದ್ವೀಪಗಳಲ್ಲಿ ರಾಜ್ಯೋತ್ಸವ ಆಚರಣೆ ನಡೆಸಲಾಗುತ್ತದೆ.
ಏಳು ರಾಜ್ಯಗಳ ರಚನೆ ಹೇಗಾಯಿತು ಎಂಬುದನ್ನು ಒಂದೊಂದಾಗಿ ನೋಡೋಣ, ಮೊದಲಿಗೆ ಕರ್ನಾಟಕ ರಾಜ್ಯದ ಬಗ್ಗೆ ತಿಳಿಯೋಣ, ಕರ್ನಾಟಕ ಎಂಬ ಹೆಸರು ಸಾವಿರಾರು ವರ್ಷಗಳಿಂದ ಉಲ್ಲೇಖವಿದ್ದರೂ, ನಮ್ಮ ರಾಜ್ಯಕ್ಕೆ 1956, ನವೆಂಬರ್ 01 ರಂದು ಮೈಸೂರು ರಾಜ್ಯ ಎಂಬ ಹೆಸರನ್ನೆ ಇಡಲಾಗಿತ್ತು. 1973ರ ನವೆಂಬರ್ 01 ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
1924ರಲ್ಲಿ ಬೆಳಗಾವಿಯಲ್ಲಿ, ಕರ್ನಾಟಕ ಏಕೀಕರಣಕ್ಕೆ ಚಾಲನೆ ದೊರೆಯಿತು.ಕಾಂಗ್ರೆಸ್‌ಕಮ್ಯೂನಿಷ್ಟರು, ಸಾಹಿತಿ, ಬರಹಗಾರರು ಕರ್ನಾಟಕ ಏಕೀಕರಣಕ್ಕಾಗಿ ಜನಾಂದೋಲನವನ್ನು ಬಲಗೊಳಿಸಿದರು.ಹಾಗಾಗಿ ನವೆಂಬರ್ 1, 1956ರಂದು ಕನ್ನಡ ಭಾಷೆಯಾಡುವ ಹಲವು ಭಾಗಗಳು ಸೇರಿ ಮೈಸೂರು ರಾಜ್ಯ ಉದಯವಾಯಿತು. ಆದರೆ, ಏಕೀಕರಣ ಆದಮೇಲೂ ಪ್ರಾಚೀನ ಕಾಲದಿಂದಿದ್ದ ಕರ್ನಾಟಕ ಎಂಬ ಹೆಸರಿನ ಬದಲಾಗಿ ಮೈಸೂರು ರಾಜ್ಯವೆಂದು ಕರೆಯಲ್ಪಟ್ಟಿದ್ದು, ಹಲವರಿಗೆ ಬೇಸರ ಉಂಟುಮಾಡಿತು.ಅದಕ್ಕಾಗಿ ಹೋರಾಟಗಳು ನಡೆದವು. ಇದೇ ಕಾರಣಕ್ಕೆ 1973 ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು.
ಆಂಧ್ರ ಪ್ರದೇಶ ಕೂಡ ನವೆಂಬರ್ 01, 1956 ರಚನೆಯಾಯಿತು. ಆಗಿನ ಮದ್ರಾಸ್ ಪ್ರೆಸಿಡೆನ್ಸಿಯಿಂದ ಬೇರ್ಪಡಿಸಿ ಹೊಸ ರಾಜ್ಯವನ್ನು ರಚಿಸಲಾಯಿತು. ಆಗ ಹೈದರಾಬಾದ್ ರಾಜ್ಯದ ಭಾಗವಾಗಿದ್ದ ತೆಲಂಗಾಣ ಪ್ರದೇಶವು ನಂತರ ಆಂಧ್ರ ರಾಜ್ಯದೊಂದಿಗೆ ವಿಲೀನಗೊಂಡು ಸಂಪೂರ್ಣ ಆಂಧ್ರಪ್ರದೇಶ ರಾಜ್ಯವಾಗಿ ರೂಪುಗೊಂಡಿತು.
ಕೇರಳ ರಾಜ್ಯವು ನವೆಂಬರ್ 01, 1956ರಲ್ಲಿ ರಚನೆಯಾಯಿತು, ಆಂಧ್ರ ಪ್ರದೇಶ ಮತ್ತು ಕರ್ನಾಟಕದೊಂದಿಗೆ 1956 ರಲ್ಲಿ ರಾಜ್ಯಗಳ ಭಾಷಾವಾರು ಮರುಸಂಘಟನೆಯ ಅಂಗೀಕಾರದ ನಂತರ ಮತ್ತು ಮಲಬಾರ್, ಕೊಚ್ಚಿನ್ ಮತ್ತು ತಿರುವಾಂಕೂರು ಪ್ರಾಂತ್ಯಗಳ ವಿಲೀನದ ನಂತರ ಮದ್ರಾಸ್ ಪ್ರೆಸಿಡೆನ್ಸಿಯಿಂದ ಬೇರ್ಪಟ್ಟು ಕೇರಳ ರಾಜ್ಯವಾಗಿ ರೂಪುಗೊಂಡಿತು.
ಛತ್ತೀಸ್‌ಗಢ ರಾಜ್ಯವು 1 ನವೆಂಬರ್ 2000 ರಲ್ಲಿ ರಚನೆಯಾಯಿತು, ಮಧ್ಯಪ್ರದೇಶದ ಹತ್ತು ಛತ್ತೀಸ್‌ಗಢಿ ಮತ್ತು ಆರು ಗೊಂಡಿ ಮಾತನಾಡುವ ಆಗ್ನೇಯ ಜಿಲ್ಲೆಗಳನ್ನು ವಿಭಜಿಸುವ ಮೂಲಕ ರಾಜ್ಯವನ್ನು ರಚಿಸಲಾಯಿತು. ಆ ಮೂಲಕ ಇದು ಭಾರತದ 10 ನೇ ದೊಡ್ಡ ರಾಜ್ಯವಾಯಿತು. ಸುಲಭ ಆಡಳಿತಕ್ಕಾಗಿ ಪ್ರತ್ಯೇಕ ರಾಜ್ಯವನ್ನು ಮಾಡಲಾಯಿತು.
ಮಧ್ಯಪ್ರದೇಶ ರಾಜ್ಯವು 1 ನವೆಂಬರ್ 1956ರಲ್ಲಿ ರಚನೆಯಾಯಿತು. ರಾಜ್ಯಗಳ ಮರುಸಂಘಟನೆ ಕಾಯಿದೆಯ ಪ್ರಕಾರ, ಮಧ್ಯ ಭಾರತ, ವಿಂಧ್ಯ ಪ್ರದೇಶ ಮತ್ತು ಭೋಪಾಲ್ ರಾಜ್ಯಗಳನ್ನು ಮಧ್ಯಪ್ರದೇಶದಲ್ಲಿ ವಿಲೀನಗೊಳಿಸಲಾಯಿತು ಮತ್ತು ಮರಾಠಿ ಮಾತನಾಡುವ ದಕ್ಷಿಣ ಪ್ರದೇಶ ವಿದರ್ಭವನ್ನು ಬಾಂಬೆ ರಾಜ್ಯಕ್ಕೆ ಬಿಟ್ಟುಕೊಡಲಾಯಿತು. ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಭಾರತದ ಎರಡನೇ ಅತಿದೊಡ್ಡ ರಾಜ್ಯವಾಗಿದೆ.
ಇದನ್ನೂ ಓದಿ : ಭಾಷೆಗಳ ರಾಷ್ಟ್ರೀಯತೆಯನ್ನು ಪ್ರಾದೇಶಿಕತೆ ಎಂದು ಹೀಗಳೆದ ಮೋದಿ
ಹರಿಯಾಣ ರಾಜ್ಯವು 1 ನವೆಂಬರ್ 1966ರಲ್ಲಿ ರಚನೆಯಾಯಿತು. ಪಂಜಾಬ್ ಮರುಸಂಘಟನೆ ಕಾಯಿದೆ (1966) ಪ್ರಕಾರ ಜಸ್ಟಿಸ್ ಜೆಸಿ ಷಾ ಅವರ ಅಧ್ಯಕ್ಷತೆಯ ಆಯೋಗವು ಅಸ್ತಿತ್ವದಲ್ಲಿರುವ ಪಂಜಾಬ್ ರಾಜ್ಯವನ್ನು ವಿಭಜಿಸಿತು ಮತ್ತು ಹೊಸ ಹರಿಯಾಣ ರಾಜ್ಯದ ಗಡಿಗಳನ್ನು ನಿರ್ಧರಿಸಿತು. ಬೆಳೆ ಉತ್ಪಾದನೆಗೆ ಸಂಬಂಧಿಸಿದಂತೆ ರಾಜ್ಯವು ಹಸಿರು ಕ್ರಾಂತಿಯ ಚಳುವಳಿಯನ್ನು ಮುನ್ನಡೆಸಿದ್ದರಿಂದ ಈ ನಿರ್ಧಾರವು ದೇಶಕ್ಕೆ ವರವಾಗಿ ಪರಿಣಮಿಸಿತು.
ಪಂಜಾಬ್ ರಾಜ್ಯವು 1 ನವೆಂಬರ್ 1966 ರಲ್ಲಿ ರಚನೆಯಾಯಿತು. “ಪಂಜಾಬ್” ಎಂಬ ವಿಸ್ತೃತ ರಾಜ್ಯವನ್ನು ರೂಪಿಸಲು ಪಂಜಾಬ್ ರಾಜ್ಯವನ್ನು ಪೂರ್ವ ಪಂಜಾಬ್ ರಾಜ್ಯದೊಂದಿಗೆ ರಚಿಸಲಾಯಿತು. ಭಾಷಾವಾರು ಆಧಾರದ ಮೇಲೆ ಹರಿಯಾಣವನ್ನು ಪ್ರತ್ಯೇಕಿಸಿದ ನಂತರ, ಪಂಜಾಬಿ-ಮಾತನಾಡುವ ಜನಸಂಖ್ಯೆಯನ್ನು ಪಂಜಾಬ್ ಮರುಸಂಘಟನೆ ಕಾಯಿದೆ, 1966 ರ ಅಡಿಯಲ್ಲಿ ಪಂಜಾಬ್‌ಗೆ ವಿಲೀನಗೊಳಿಸಲಾಯಿತು.
ಇನ್ನೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ರಚನೆಯಾಗಿದ್ದು 1956, ನವೆಂಬರ್ 01 ರಂದು. 1947 ರ ಆಗಸ್ಟ್ 15 ರಂದು ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದಾಗ, ಕೆಲವು ಪ್ರದೇಶಗಳು ಇನ್ನೂ ಯುರೋಪಿಯನ್ ನಿಯಂತ್ರಣದಲ್ಲಿ ಉಳಿದಿವೆ. ಪೋರ್ಚುಗೀಸರು ಗೋವಾವನ್ನು ನಿಯಂತ್ರಿಸಿದರೆ ಫ್ರೆಂಚರು ಪುದುಚೇರಿಯ ಮೇಲೆ ಹಿಡಿತ ಸಾಧಿಸಿದ್ದರು. ಫ್ರೆಂಚ್ ತನ್ನ ನಿಯಂತ್ರಣದಲ್ಲಿದ್ದ ಪ್ರದೇಶಗಳನ್ನು 1954 ನವೆಂಬರ್ 1 ರಂದು ಭಾರತಕ್ಕೆ ವರ್ಗಾಯಿಸಿತು. ಇದರ ನೆನಪಿಗಾಗಿ ನವೆಂಬರ್ 1ರಂದು ಪುದುಚೇರಿ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ.
ಲಕ್ಷದ್ವೀಪ ಕೂಡ 1956 ರ ನವೆಂಬರ್ 1ರಂದು ಕೇಂದ್ರಾಡಳಿತ ಪ್ರದೇಶವನ್ನಾಗಿ ರಚಿಸಲಾಯಿತು ಮತ್ತು ಇದನ್ನು 1973 ರಲ್ಲಿ ಲಕ್ಷದ್ವೀಪ ಎಂದು ಹೆಸರಿಸಲಾಯಿತು. ಇದಕ್ಕೂ ಮುನ್ನ ಲಕ್ಕಾಡಿವ್, ಮಿನಿಕಾಯ್ ಮತ್ತು ಅಮಿಂಡಿವ್ ಎಂದು ಕರೆಯಲಾಗುತ್ತಿತ್ತು.
ನವೆಂಬರ್ 01 ಹಲವು ರಾಜ್ಯಗಳ ಉದಯಕ್ಕೆ ಕಾರಣವಾದ ದಿನವಾಗಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಈ ದಿನವನ್ನು ಸಂಭ್ರಮದಿಂದ ಆಚರಿಸಿದರೆ ಉಳಿದ ರಾಜ್ಯಗಳಲ್ಲಿ ಅಷ್ಟಾಗಿ ಆಚರಿಸುವುದಿಲ್ಲ. ರಾಜ್ಯೋತ್ಸವ ಎಂಬುದು ಕೇವಲ ಸಂಭ್ರಮಿಸುವ ದಿನವಷ್ಟೆ ಆಗಬಾರದು. ಅದು ಅಲ್ಲಿನ ಜನರು ಬದುಕು ಕಟ್ಟಿಕೊಳ್ಳವಂತೆ ಆಗಬೇಕು, ಅಂತಹ ವಾತಾವರಣವನ್ನು ಆಳುವ ಸರ್ಕಾರಗಳು ರೂಪಿಸಬೇಕು.
ವಿಡಿಯೋ ನೋಡಿ: ಕರ್ನಾಟಕ ರಾಜ್ಯೋತ್ಸವ : ಜನರ ಬದುಕಿನ ಪ್ರಶ್ನೆಗಳು ಯಾಕಿಲ್ಲ? – ಜಿ.ಎನ್ ನಾಗರಾಜ ಅವರ ವಿಶ್ಲೇಷಣೆ Janashakthi Media