ಬೆಂಗಳೂರಿನಲ್ಲಿ 16.6 ಕಿಮೀ ಉದ್ದದ ಸುರಂಗ ಮಾರ್ಗ ಬಳಕೆಗೆ 330 ರೂಪಾಯಿ ಟೋಲ್!!
ಮೂಲಭೂತ ಸೌಕರ್ಯ ಅಭಿವೃದ್ಧಿ ಎಂದರೆ ಖಾಸಗಿ ಸಹಭಾಗಿತ್ವವೇ ಅಗಿರಬೇಕೆ? ಎಲ್ಲರೂ ಸುಂಕ, ಟೋಲ್, ಸೇವಾ ಶುಲ್ಕ ಹೆಸರಿನಲ್ಲಿ ಹಣ ಕೊಟ್ಟು ಮೂಲಸೌಕರ್ಯಗಳ ಪ್ರಯೋಜನಗಳನ್ನು ಪಡೆಯಬೇಕೇ? ಮೂಲಭೂತ ಸೌಕರ್ಯ ಎಂದರೆ ಹಣವುಳ್ಳವರಿಗೆ ಮಾಡುವ ಸೌಕರ್ಯಗಳೇ? ಶಿಕ್ಷಣ, ಆರೋಗ್ಯ ರಕ್ಷಣೆ ವ್ಯಾಪಾರದ ಸರಕುಗಳಂತಾಬೇಕೆ? ರಾಜಸ್ವ ಸಂಗ್ರಹ ಮತ್ತು ಹೂಡಿಕೆ ಹೆಚ್ಚಿಸಲು ಸಾರ್ವಜನಿಕ ಆಸ್ತಿಗಳ ನಗದೀಕರಣ ಮಾಡಬೇಕೆ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ಗಳನ್ನು ಅವಲೋಕಿಸಿದರೆ ಇಂತಹ ಪ್ರಶ್ನೆಗಳು ಮೂಡುತ್ತವೆ. ಕರ್ನಾಟಕ ರಾಜ್ಯ ಬಜೆಟ್ ಪ್ರಸ್ತಾಪದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಯೋಜನೆಗಳ ಪ್ರಸ್ತಾಪಗಳನ್ನು ನೋಡಿದರೆ, ಇದು ಸರಕಾರದ ಬಜೆಟ್ ಅಲ್ಲ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಬಜೆಟ್ ಆಗಿದೆ ಎಂಬುದನ್ನು ತೋರಿಸುತ್ತವೆ.
-ಸಿ. ಸಿದ್ದಯ್ಯ
ರಾಜ್ಯದಲ್ಲಿನ ಹಲವು ಮೂಲಸೌಕರ್ಯ ಯೋಜನೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಬಜೆಟ್ ನಲ್ಲಿ ಹೇಳಲಾಗಿದೆ. ಬಜೆಟ್ ಗೂ ಮುನ್ನ 2025ರ ಜನವರಿ 30ರಂದು ಮೂಲಸೌಕರ್ಯ ಯೋಜನೆಗಳಿಗಾಗಿ ರಾಜ್ಯ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ನೀತಿ – 2025 ಅನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ. ಇದು ಕೃಷಿ-ಮೂಲಸೌಕರ್ಯ, ಶಿಕ್ಷಣ, ಇಂಧನ, ಆರೋಗ್ಯ ರಕ್ಷಣೆ, ಪ್ರವಾಸೋದ್ಯಮ, ವಸತಿ, ನಗರ ಮೂಲಸೌಕರ್ಯ, ದೂರಸಂಪರ್ಕ, ಅರಣ್ಯ/ವನ್ಯಜೀವಿಗಳಂತಹ 15 ವಲಯಗಳಿಗೆ ಅನ್ವಯಿಸುತ್ತದೆ. ಮತ್ತೊಂದಡೆ, ‘ಒಂದು ಲಕ್ಷ ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸುವ ಉದ್ದೇಶದಿಂದ ಒಟ್ಟು 13,692 ಕೋಟಿ ರೂ. ಆರ್ಥಿಕ ನೆರವು ಮತ್ತು ಸಹಾಯಧನವನ್ನು ಒದಗಿಸಲಾಗುತ್ತದೆ’ ಎಂದು ಈ ಬಜೆಟ್ ನಲ್ಲಿ ಹೇಳಲಾಗಿದೆ.
ಸಾರ್ವಜನಿಕ ಆಸ್ತಿಗಳ ನಗದೀಕರಣ
ರಾಜಸ್ವ ಸಂಗ್ರಹ ಮತ್ತು ಹೂಡಿಕೆ ಹೆಚ್ಚಿಸಲು ಸಾರ್ವಜನಿಕ ಆಸ್ತಿಗಳ ನಗದೀಕರಣ (Monetization of public assets) ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಅಂದರೆ, ಸರ್ಕಾರವು ತನ್ನ ಆಸ್ತಿಗಳಿಂದ – ಭೂಮಿ, ಕಟ್ಟಡಗಳು, ಪೈಪ್ ಲೈನ್ ಗಳು, ರಸ್ತೆಗಳು ಮುಂತಾದವುಗಳಿಂದ ಆದಾಯವನ್ನು ಗಳಿಸುವ ಉದ್ದೇಶ ಹೊಂದಿದೆ.
ಆಗಸ್ಟ್ 2024ರಲ್ಲಿ, ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಕೆ.ಪಿ. ಕೃಷ್ಣನ್ ಅವರ ನೇತೃತ್ವದಲ್ಲಿ ಆಸ್ತಿ ಹಣಗಳಿಕೆ ಸೇರಿದಂತೆ ವಿವಿಧ ಸಂಪನ್ಮೂಲ ಕ್ರೋಢೀಕರಣ ಆಯ್ಕೆಗಳನ್ನು ಅನ್ವೇಷಿಸಲು ಒಂದು ಸಮಿತಿಯನ್ನು ರಚಿಸಿತ್ತು. ಈ ನೀತಿಯು ಆಸ್ತಿ ನಗದೀಕರಣನ್ನು “ಒಂದು ಇಲಾಖೆ ಅಥವಾ ಸರ್ಕಾರಿ ಸಂಸ್ಥೆಯು ಹೊಂದಿರುವ ಆಸ್ತಿಯನ್ನು ಖಾಸಗಿ ವಲಯದ ಭಾಗವಹಿಸುವವರಿಗೆ ಮುಂಗಡ ಅಥವಾ ಆವರ್ತಕ ಪರಿಗಣನೆಗಾಗಿ ಅಥವಾ ಎರಡರ ಸಂಯೋಜನೆಗಾಗಿ ಸೀಮಿತ ಅವಧಿಯ ಪರವಾನಗಿ/ಗುತ್ತಿಗೆ” ಎಂದು ವ್ಯಾಖ್ಯಾನಿಸುತ್ತದೆ. ಬೆಂಗಳೂರಿನಲ್ಲಿ ಬಿಡಿಎ ಕಾಂಪ್ಲೆಕ್ಸ್ ಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಖಾಸಗಿ ಬಿಲ್ಡರ್ಸ್ ಗಳಿಗೆ ಬಿಟ್ಟುಕೊಟ್ಟಿರುವುದು ಆಸ್ತಿ ನಗದೀಕರಣ ನೀತಿಯ ಭಾಗವಾಗಿದೆ.
ಇದನ್ನೂ ಓದಿ: ಬೆಂಗಳೂರು| ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಶಾಸಕರ ಡಿನ್ನರ್ ಮೀಟಿಂಗ್
ಎಲ್.ಪಿ.ಜಿ. ನೀತಿಗಳಿಗೆ ಜೋತು ಬಿದ್ದು ಪಿಪಿಪಿ ಯೋಜನೆ
ರಾಜ್ಯದಲ್ಲಿ ವ್ಯಾಪಕವಾದ ಖಾಸಗೀಕರಣ ಯೋಜನೆಯನ್ನು ಪಿಪಿಪಿ ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರ ಹೊರಟಿದೆ. ರಾಜ್ಯದ ಮೂಲಸೌಕರ್ಯ ಯೋಜನೆಗಳನ್ನು ಖಾಸಗಿ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲು ಈಗಿರುವ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ನೀತಿ – 2018 ಅನ್ನು ಮಧ್ಯಂತರ ಪರಿಷ್ಕರಣೆ ಮಾಡುವುದಾಗಿ ಕಳೆದ ವರ್ಷ ಸರ್ಕಾರ ಪ್ರಕಟಿಸಿತ್ತು. ಈ ಸರ್ವಾಂಗೀಣ ಖಾಸಗೀಕರಣದ ಯೋಜನೆಯು ಸರ್ಕಾರದ ದುರ್ಬಲ ಆರ್ಥಿಕ ಸ್ಥಿತಿಯನ್ನು ಮತ್ತು ನವ-ಉದಾರವಾದಿ ನೀತಿಗಳಿಗೆ ಮಣೆ ಹಾಕಿರುವುದನ್ನು ಸೂಚಿಸುತ್ತದೆ.
ಸುರಂಗ ಮಾರ್ಗ; ಕಿಮೀಗೆ 20 ರೂ ಟೋಲ್!!
ಬೆಂಗಳೂರು ನಗರದಲ್ಲಿ 40,000 ಕೋಟಿ ವೆಚ್ಚದಲ್ಲಿ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಸುರಂಗ ಮಾರ್ಗದ ಕಾರಿಡಾರ್ ಗಳನ್ನು ಕೈಗೊಳ್ಳಲಾಗುತ್ತದೆ. ಇದು 2025-26ನೇ ಸಾಲಿನ ಬಜೆಟ್ ನಲ್ಲಿನ ಒಂದು ಯೋಜನೆ. ಬೆಂಗಳೂರಿಗರಿಗೆ, ಅದರಲ್ಲೂ ಸ್ವಂತ ವಾಹನಗಳನ್ನು ಹೊಂದಿರುವ ಜನರಿಗೆ ಇದು ಎಷ್ಟೊಂದು ಖುಷಿಯ ವಿಷಯವಲ್ಲವೇ? ಸಿಗ್ನಲ್ ಗಳಿಲ್ಲದೆ, ಸಂಚಾರ ಒತ್ತಡವಿಲ್ಲದೆ, ತಲುಪಬೇಕಾದ ಸ್ಥಳಕ್ಕೆ ಬೇಗ ತಲುಪಬಹುದು ಎಂದು ಖುಷಿಯಾಗುತ್ತದೆ ಅಲ್ಲವೇ.
ಆದರೆ, ಇದನ್ನು ಉಚಿತವಾಗಿ ಬಳಸುವಂತಿಲ್ಲ. ಏಕೆಂದರೆ, ಈ ಯೋಜನೆಯ ಎಲ್ಲಾ ಹಣವನ್ನು ಸರ್ಕಾರ ಕೊಡುವುದಿಲ್ಲ. ಸರ್ಕಾರ ಶೇಕಡಾ 30ರಷ್ಟು ಅನುದಾನ ಕೊಡುತ್ತದೆ ಎಂದು ಹೇಳುತ್ತದೆಯಾದರೂ, ಅದನ್ನೂ ಸಹಾ ರಾಜ್ಯ ಸರ್ಕಾರ ಕೊಡುವುದಿಲ್ಲ. ಬದಲಾಗಿ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೊಡುತ್ತದೆ. ಅಷ್ಟೊಂದು ಹಣ ಬಿಬಿಎಂಪಿ ಬಳಿ ಇದೆಯೇ? ಇಲ್ಲ. ಅದಕ್ಕಾಗಿ ಬಿಬಿಎಂಪಿ 19,000 ಕೋಟಿ ರೂ.ಗಳನ್ನು ಸಾಲ ಮಾಡುತ್ತದೆ. ಸಾಲಕ್ಕೆ ಗ್ಯಾರಂಟಿಯನ್ನು ರಾಜ್ಯ ಸರ್ಕಾರ ಒದಗಿಸುತ್ತದೆಯಷ್ಟೆ.
ಈ ಸುರಂಗ ರಸ್ತೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ, ನಿರ್ಮಾಣ-ನಿರ್ವಹಣೆ-ವರ್ಗಾವಣೆ (BOT) ಮಾದರಿಯನ್ನು ಅವಲಂಬಿಸಿ ನಿರ್ಮಾಣವಾಗುತ್ತದೆ. ಅಂದರೆ, ಈಗ ಟೋಲ್ ರಸ್ತೆಗಳಾಗಿರುವ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ ಮತ್ತು ಅಭಿವೃದ್ಧಿ ರೀತಿಯಲ್ಲಿ, ಬೆಂಗಳೂರು ನಗರದ ಸುರಂಗ ರಸ್ತೆ 30 ವರ್ಷಗಳ ರಿಯಾಯಿತಿ ಅವಧಿಯೊಂದಿಗೆ BOT ಮಾದರಿಯಾಗಿದೆ. ನಿರ್ಮಾಣಕ್ಕೆ ಐದು ವರ್ಷಗಳು (61 ತಿಂಗಳುಗಳು) ಬೇಕಾಗುತ್ತದೆ. ಆ ನಂತರದ 25 ವರ್ಷಗಳು ಸುರಂಗ ರಸ್ತೆಯನ್ನು ಈ ಖಾಸಗಿ ಸಂಸ್ಥೆಗಳೇ ನಿರ್ವಹಿಸುತ್ತವೆ. ಈ ಸಮಯದಲ್ಲಿ ಸುರಂಗ ರಸ್ತೆ ಬಳಕೆ ಮಾಡುವ ವಾಹನಗಳಿಂದ ಟೋಲ್ ಸಂಗ್ರಹ ಮಾಡಿ ಖಾಸಗಿ ಸಂಸ್ಥೆಯು ಆದಾಯ ಗಳಿಸುತ್ತದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಕಟಿಸಿದ ಗೆಜೆಟ್‌ನ ಆಧಾರದ ಮೇಲೆ, ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ನಡುವಿನ ಬೆಂಗಳೂರಿನ ಅವಳಿ-ಟ್ಯೂಬ್ ಸುರಂಗ ರಸ್ತೆಯ ವಿವರವಾದ ಯೋಜನಾ ವರದಿ (ಡಿಪಿಆರ್) 16.6 ಕಿಮೀ ದೂರಕ್ಕೆ ರೂ. 330 ಟೋಲ್ ಅಂದಾಜು ಮಾಡಿದೆ. ಅಂದರೆ, ಈ ರಸ್ತೆಯನ್ನು ಬಳಕೆ ಮಾಡುವ ವಾಹನಗಳು ಕಿಮೀ ಗೆ 20 ರೂಪಾಯಿ ಟೋಲ್ ಕಟ್ಟಬೇಕು. “ಟೋಲ್ ಶುಲ್ಕಗಳು ಕೇವಲ ಪ್ರಾಥಮಿಕ ಅಂದಾಜುಗಳಾಗಿದ್ದು, ಯೋಜನೆ ಮುಂದುವರೆದಂತೆ ನಾವು ಅವುಗಳನ್ನು ಅಂತಿಮಗೊಳಿಸುತ್ತೇವೆ” ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಯೊಬ್ಬರು.
ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನಗಳಿಗೆ ಪ್ರವೇಶವಿಲ್ಲ(?)
ಸುರಂಗ ರಸ್ತೆ ಬಳಕೆ ಮಾಡಲು ಆಟೋ ಮತ್ತು ದ್ವಿಚಕ್ರ ವಾಹನಗಳಿಗೆ ಅವಕಾಶ ಇದೆಯೇ? ಇವುಗಳಿಗೆ ಅವಕಾಶ ನೀಡುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಯೊಬ್ಬರು, ಅದು ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರವಾಗಿದೆ ಎನ್ನುತ್ತಾರೆ. ಆದರೆ, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಈ ವಾಹನಗಳಿಗೆ ಪ್ರವೇಶವಿಲ್ಲ ಎಂಬುದನ್ನು ನೋಡಿದರೆ, ಸುರಂಗ ರಸ್ತೆಯಲ್ಲಿ ಖಂಡಿತಾ ಈ ವಾಹನಗಳಿಗೆ ಅವಕಾಶ ಕೊಡುವುದಿಲ್ಲ. ಅಂದರೆ, ಉಳ್ಳವರ ಅನುಕೂಲಕ್ಕಾಗಿ ಈ ಯೋಜನೆ ನಿರ್ಮಾಣ ಮಾಡುತ್ತಿದ್ದಾರೆ.
ಸಿಂಧನೂರು-ರಾಯಚೂರು ರಸ್ತೆ
ಸಿಂಧನೂರು- ರಾಯಚೂರು ನಡುವಿನ 78.45 ಕಿಮೀ ಉದ್ದದ ರಸ್ತೆಯನ್ನು ಹೈಬ್ರಿಡ್ ವರ್ಷಾಶನ ಯೋಜನೆಯಡಿ (HAM) ಅಭಿವೃದ್ಧಿ ಕಾಮಗಾರಿಯನ್ನು ರೂ.1695.85 ಕೋಟಿಗಳ ಯೋಜನಾ ಮೊತ್ತದಲ್ಲಿ ಪಿಪಿಪಿ ಆಧಾರದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.
ದೇವನಹಳ್ಳಿ- ಮಾಲೂರು- ತಮಿಳುನಾಡು ರಸ್ತೆ
ರೂ. 3190 ಕೋಟಿ ಯೋಜನಾ ಮೊತ್ತದಲ್ಲಿ ದೇವನಹಳ್ಳಿ-ವಿಜಯಪುರ-ಹೆಚ್.ಕ್ರಾಸ್-ವೇಮಗಲ್-ಮಾಲೂರು-ತಮಿಳುನಾಡು ಗಡಿವರೆಗೆ 123 ಕಿ.ಮೀ ಉದ್ದದ ರಸ್ತೆಯನ್ನು HAM ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಈ ರಸ್ತೆಗಳ ನಿರ್ಮಾಣ ಮೊತ್ತದ ಶೇ. 40 ರಷ್ಟನ್ನು ಸರ್ಕಾರ ಕೊಡುತ್ತದೆ. ಉಳಿದ ಹಣವನ್ನು ಖಸಗಿ ಕಂಪನಿಗಳು ಭರಿಸುತ್ತವೆ. 15 ವರ್ಷಗಳ ಬಿಒಟಿ ಆಧಾರದಲ್ಲಿ ಈ ಕಂಪನಿಗಳು ರಸ್ತೆ ನಿರ್ವಹಣೆ ಮಾಡಿ ಟೋಲ್ ಸಂಗ್ರಹಿಸುತ್ತವೆ. ಅಂದರೆ, ಈ ರಸ್ತೆಗಳನ್ನು ಬಳಕೆ ಮಾಡಲು ಟೋಲ್ ಕೊಡಬೇಕಾಗುತ್ತದೆ.
ಖಾಸಗಿಯವರ ತೆಕ್ಕೆಗೆ ಮೆಜೆಸ್ಟಿಕ್ ಮತ್ತು ಕೆ.ಆರ್,ಪುರ ಬಸ್ ನಿಲ್ದಾಣಗಳು
ಮೆಜೆಸ್ಟಿಕ್ ಬಸ್ ನಿಲ್ದಾಣದ ಜಾಗವನ್ನು ‘ಪ್ರಾಜೆಕ್ಟ್ ಮೆಜೆಸ್ಟಿಕ್’ ಯೋಜನೆಯಡಿ ಪಿಪಿಪಿ ಆಧಾರದ ಮೇಲೆ ಪುನ್ ಅಭಿವೃದ್ದಿಪಡಿಸಿ, ವಾಣಿಜ್ಯ ಸಂಕೀರ್ಣದೊಂದಗೆ ಸಾರಿಗೆ ಹಬ್ ನಿರ್ಮಿಸಲು ಉದ್ದೇಶಿಸಲಾಗಿದೆ. ಕೆ.ಆರ್. ಪುರಂನಲ್ಲಿ ಪಿಪಿಪಿ ಆಧಾರದಲ್ಲಿ ಹೊಸ ಸ್ಯಾಟಲೈಟ್ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು.
ಅಂದರೆ, ಸಾರ್ವಜನಿಕರ ಸ್ವತ್ತಾದ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಜಾಗವನ್ನು ಖಾಸಗಿಯವರ ತೆಕ್ಕೆಗೆ ಒಪ್ಪಿಸಲಾಗುತ್ತದೆ ಎಂದರ್ಥ. ಮತ್ತು ಕೆ.ಆರ್.ಪುರದಲ್ಲಿ ನಿರ್ಮಾಣವಾಗಲಿರುವ ಹೊಸ ಸ್ಯಾಟಲೈಟ್ ಬಸ್ ನಿಲ್ದಾಣವನ್ನು ಖಾಸಗಿಯವರಿಗೆ ಒಪ್ಪಿಸುವುದು ಎಂದರ್ಥ.
ಈ ಎರಡೂ ಬಸ್ ನಿಲ್ದಾಣಗಳ ನಿರ್ಮಾಣ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣಗಳು ತಲೆ ಎತ್ತುತ್ತವೆ. ಬಂಡವಾಳ ಹೂಡಿಕೆ ಮಾಡುವ ಖಾಸಗಿಯವರು ಅವುಗಳನ್ನು ಬಾಡಿಗೆಗೆ ಕೊಟ್ಟು ಲಾಭ ಮಾಡಿಕೊಳ್ಳಲು ತೊಡಗುತ್ತಾರೆ. ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣ ಪ್ರವೇಶ ಮಾಡುವ ಬಸ್ಸುಗಳಿಗೆ, ಪ್ರಯಾಣಿಕರಿಗೆ ಪ್ರವೇಶ ಶುಲ್ಕ ಅಥವಾ ಸೇವಾ ಶುಲ್ಕ ವಿಧಿಸಲೂಬಹುದು. ಇದನ್ನು ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಕಾಣುತ್ತಿದ್ದೇವೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬಸ್ ನಿಲ್ದಾಣಗಳು ಅಭಿವೃದ್ದಿಯಾಗಬೇಕೆ ವಿನಃ, ಅವುಗಳು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿ, ವಾಣಿಜ್ಯ ಚಟುವಟಿಕೆ ನಡೆಸುವ ಜಾಗವಾಗಬಾರದು. ಒಂದು ವೇಳೆ, ಅದೂ ಕೂಡ ಬಸ್ ಪ್ರಯಾಣಿಕರ ಅನುಕೂಲಕ್ಕೆ ಅವಶ್ಯಕತೆ ಇದೆ ಎನ್ನುವುದಾದರೆ, ಅದನ್ನು ಸರ್ಕಾರವೇ ಬಂಡವಾಳ ಹೂಡಿಕೆ ಮಾಡಿ ಆ ಕೆಲಸ ಮಾಡಬಹುದಲ್ಲವೇ? ಅದರಿಂದ ಬರುವ ಲಾಭವನ್ನು ಸರ್ಕಾರವೇ ಗಳಿಸಬಹುದಲ್ಲವೇ?
14,750 ಹೊಸ ವಿದ್ಯುತ್ ಚಾಲಿತ ಬಸ್ಸುಗಳ ಸೇರ್ಪಡೆ
2025-26ರಲ್ಲಿ PM E-DRIVE, PM-eBus Sewa ಮತ್ತು ಬಾಹ್ಯ ನೆರವಿನ ಯೋಜನೆಯಡಿ ಒಟ್ಟಾರೆ 14,750 ಹೊಸ ವಿದ್ಯುತ್ ಚಾಲಿತ ಬಸ್ಸುಗಳನ್ನು ಸೇರ್ಪಡೆ ಮಾಡುವು ಗುರಿ ಹೊಂದಿದ್ದು, ಇದರಲ್ಲಿ 9,000 ಬಸ್ಸುಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರ್ಪಡೆ ಮಾಡಲು ಉದ್ದೇಶಿಸಲಾಗಿದೆ. (ಕೇಂದ್ರ ಸರ್ಕಾರದ ವಿದ್ಯುತ್ ವಾಹನ ಸಬ್ಸಿಡಿ ಯೋಜನೆ FAME-3 ಅನ್ನು PM E-ಡ್ರೈವ್ ಯೋಜನೆ ಎಂಬ ಹೊಸ ಕಾರ್ಯಕ್ರಮದಿಂದ ಬದಲಾಯಿಸಲಾಗಿದೆ. ಬೃಹತ್ ಕೈಗಾರಿಕಾ ಸಚಿವಾಲಯವು 2024ರ ಸೆಪ್ಟೆಂಬರ್ 29ರಂದು PM ಎಲೆಕ್ಟ್ರಿಕ್ ಡ್ರೈವ್ ರೆವಲ್ಯೂಷನ್ ಇನ್ ಇನ್ನೋವೇಟಿವ್ ವೆಹಿಕಲ್ ಎನ್ಹ್ಯಾನ್ಸ್ಮೆಂಟ್ ಯೋಜನೆ (PM Electric Drive Revolution in Innovative Vehicle Enhancement (PM E-DRIVE) Scheme)ಯನ್ನು ಪ್ರಕಟಿಸಿದೆ.)
ರಾಜ್ಯದ ವಿವಿಧ ಸಾರಿಗೆ ನಿಗಮಗಳಲ್ಲಿ 1,000 ಹೊಸ ಡೀಸೆಲ್ ಬಸ್ಸುಗಳನ್ನು ಒಟ್ಟು ವೆಚ್ಚ ಒಪ್ಪಂದ (GCC) ಆಧಾರದಲ್ಲಿ ಸೇರ್ಪಡೆಗೊಳಿಸಲಾಗುವುದು. ವಿದ್ಯುತ್ ಚಲನಶೀಲತೆ ಇನ್ನೂ ಆಕರ್ಷಣೆಯನ್ನು ಪಡೆಯದ ಪ್ರದೇಶಗಳಲ್ಲಿ ಜಿಸಿಸಿ ಮಾದರಿಯಲ್ಲಿ ಡೀಸೆಲ್ ಬಸ್ಸುಗಳನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರ್ಪಡೆಗೊಳಿಸಲಾಗುತ್ತದೆ. ಜಿಸಿಸಿ ಎಂಬುದು ಒಂದು ರೀತಿಯ ಪಿಪಿಪಿ ಮಾದರಿ ಇದ್ದಂತೆ.
ಈ ಎಲೆಕ್ಟ್ರಿಕ್ ಬಸ್ಸುಗಳು ಮತ್ತು ಜಿಸಿಸಿ ಆಧಾರದಲ್ಲಿ ಸೇರ್ಪಡೆಗೊಳ್ಳುವ ಬಸ್ಸುಗಳು ಖಾಸಗಿ ಮಾಲೀಕರದ್ದಾಗಿರುತ್ತವೆ. ವಿದ್ಯುತ್ ಚಾಲಿತ ಬಸ್ಸುಗಳ ಖಾಸಗಿ ಮಾಲೀಕರಿಗೆ ಕೇಂದ್ರ ಸರ್ಕಾರ ಫೇಮ್-2 ಯೋಜನೆಯಡಿ ತಲಾ ಒಂದು ಬಸ್ಸಿಗೆ 50 ಲಕ್ಷ ರೂಪಾಯಿ ಸಹಾಯಧನ ಕೊಡುತ್ತಿತ್ತು. ಈ ಬಸ್ಸುಗಳ ಚಾಲಕರು ಖಾಸಗಿ ಮಾಲೀಕರ ನೌಕರರಾಗಿದ್ದರೆ, ಕಂಡಕ್ಟರ್ ಗಳು ರಾಜ್ಯ ಸಾರಿಗೆ ಸಂಸ್ಥೆ ಅಥವಾ ಬಿಎಂಟಿಸಿ ನೌಕರರಾಗಿರುತ್ತಾರೆ. ರಾಜ್ಯ ಸಾರಿಗೆ ಸಂಸ್ಥೆಗಳು ಈ ಬಸ್ಸುಗಳ ಕಾರ್ಯಾಚರಣೆಗೆ ಕಿಮೀ ಒಂದಕ್ಕೆ 50 ರೂ. ದರ ನಿಗದಿ ಮಾಡಿವೆ. ಪ್ರಯಾಣಿಕರ ಕೊರತೆಯಿಂದ ಈ ಬಸ್ಸುಗಳಿಂದ ಕಡಿಮೆ ಆದಾಯ ಬಂದರೂ, ಒಪ್ಪಂದದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಬಿಎಂಟಿಸಿ ಹಣ ಕೊಡಬೇಕು.
1,000 MWh ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆ
ನವೀಕರಿಸಬಹುದಾದ ಮೂಲಗಳಿಂದ ಉತ್ಪಾದನೆಯಾಗುವ ಇಂಧನದ ಶೇಖರಣೆಗಾಗಿ, ಕೆಪಿಟಿಸಿಎಲ್ ಮೂಲಕ ಏಳು ಸಬ್ ಸ್ಟೇಷನ್ ಗಳಲ್ಲಿ 1,000 ಮೆಗಾವ್ಯಾಟ್ ಅವರ್ (MWh) ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯನ್ನು 1,846 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ.
ಸೋಲಾರ್ ಮೈಕ್ರೋ-ಗ್ರಿಡ್ ಗಳ ಸ್ಥಾಪನೆ
ಸೌರಶಕ್ತಿಯನ್ನು ಬಳಸಿ ಗ್ರಾಮ ಪಂಚಾಯತಿಗಳ ವಿದ್ಯುತ್ ಬಿಲ್ಲಿನ ಹೊರೆಯನ್ನು ತಗ್ಗಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸೋಲಾರ್ ಮೈಕ್ರೋ-ಗ್ರಿಡ್ ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ.
ಗೋದ್ನಾ ಶಾಖೋತ್ಪನ್ನ ವಿದ್ಯುತ್ ಸ್ಥಾವರ
ಗೋದ್ನಾ ಶಾಖೋತ್ಪನ್ನ ವಿದ್ಯುತ್ ಸ್ಥಾವರವನ್ನು ಟಿಬಿಸಿಬಿ (Tariff based competitive bidding- ಸುಂಕ ಆಧಾರಿತ ಸ್ಪರ್ಧಾತ್ಮಕ ಹರಾಜು) ಮಾದರಿಯಲ್ಲಿ ಕಾರ್ಯಗತಗೊಳಿಸಲು ನಿರ್ಧಾರ ಮಾಡಲಾಗಿದೆ. ಸ್ಪರ್ಧಾತ್ಮಕ ಬಿಡ್ಡಿಂಗ್ ಮಾರ್ಗಸೂಚಿಗಳನ್ನು ವಿದ್ಯುತ್ ಸಚಿವಾಲಯವು 2003 ರ ವಿದ್ಯುತ್ ಕಾಯ್ದೆಯ ಸೆಕ್ಷನ್ 63 ರ ಪ್ರಕಾರ ರೂಪಿಸಿದೆ. ಈ ಮಾರ್ಗಸೂಚಿಗಳು ಸ್ಪರ್ಧೆಯನ್ನು ಉತ್ತೇಜಿಸುವುದು, ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿವೆ ಎಂದು ಹೇಳಲಾಗಿದೆ. ಅಂದರೆ, ಟಿಬಿಸಿಬಿ ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣದ ಒಂದು ಭಾಗವಾಗಿದೆ.
ವಿದ್ಯುತ್ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಸಂಗ್ರಹಣೆಯಲ್ಲಿ ಖಾಸಗಿಯವರಿಗೆ ಅವಕಾಶ ಕೊಡುವ ಇಂತಹ ಪಿಪಿಪಿ ಯೋಜನೆಗಳು, ಸಾರ್ವಜನಿಕ ವಿದ್ಯುತ್ ವಲಯವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ನೀತಿಗಳ ಭಾಗವಾಗಿ ರಾಜ್ಯ ಸರ್ಕಾರ ಇದನ್ನು ಮಾಡುತ್ತಿದೆ. ಇದು ವಿದ್ಯುತ್ ದರ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ.
ಮಂಗಳೂರಿನಲ್ಲಿ ಜಲಸಾರಿಗೆ ಸಂಗ್ರಹಾಲಯ
ರಾಜ್ಯ ಸರ್ಕಾರವು ಪಿಪಿಪಿ ಮಾದರಿಯಲ್ಲಿ ಮಂಗಳೂರಿನಲ್ಲಿ ಜಲ ಸಾರಿಗೆ ವಸ್ತುಸಂಗ್ರಹಾಲಯ ಮತ್ತು ಅನುಭವ ಕೇಂದ್ರವನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಬಜೆಟ್ ನಲ್ಲಿ ಹೇಳಲಾಗಿದೆ. ಕರ್ನಾಟಕ ಕಡಲ ಮಂಡಳಿ (ಕೆಎಂಬಿ) ಹೊಯಿಗೆಬಜಾರ್ ನಲ್ಲಿರುವ ಐತಿಹಾಸಿಕ ದೀಪಸ್ತಂಭದ ಬಳಿಯ ತನ್ನ 1.5 ಎಕರೆ ಭೂಮಿಯಲ್ಲಿ ಪಾರಂಪರಿಕ ಕಡಲ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗುತ್ತದೆ. ಇದರ ಅಂದಾಜು ಯೋಜನಾ ವೆಚ್ಚ 23 ಕೋಟಿ ರೂ. ಎಂದು ಈ ಹಿಂದೆ ಸಚಿವರು ಹೇಳಿದ್ದರು.
ಸಮುದ್ರಯಾನದ ಶ್ರೀಮಂತ ಇತಿಹಾಸದ ಹೊರತಾಗಿಯೂ, ಕಡಲ ವಸ್ತು ಸಂಗ್ರಹಾಲಯವಿಲ್ಲದ ಭಾರತದ ಏಕೈಕ ಕರಾವಳಿ ರಾಜ್ಯ ಕರ್ನಾಟಕ ಎಂಬುದು ನಿಜ. ಪ್ರಸ್ತಾವಿತ ವಸ್ತುಸಂಗ್ರಹಾಲಯವು ಕಡಲ ಕಲಾಕೃತಿಗಳು, ಕಥೆಗಳು ಮತ್ತು ಸಂಪ್ರದಾಯಗಳ ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕೆ? ಸರ್ಕಾರ ಇಷ್ಟು ಹಣ ವೆಚ್ಚಮಾಡಿ ತಾನೇ ವಸ್ತು ಸಂಗ್ರಹಾಲಯ ಸ್ಥಾಪಿಸಿ, ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡಬಹುದಲ್ಲವೇ?
ಕೋಲಾರ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಪಾರ್ಕ್
ಕೋಲಾರ ಜಿಲ್ಲೆಯ ಶಿವಾರ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಮಲ್ಟಿ ಸೆಕ್ಟರ್ ನೆಟ್ ಜೀರೋ ಸಸ್ಟೈನಬಿಲಿಟಿ ಇಂಡಸ್ಟ್ರಿಯಲ್ ಪಾರ್ಕ್ ಅನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.
ತೊಟಗಾರಿಕಾ ಪ್ರವಾಸೋದ್ಯಮವನ್ನು ಉತ್ತೇಜಿಸಲು
ತೋಟಗಾರಿಕೆ ಇಲಾಖೆಯ ಅಧೀನದ ಆಯ್ದ ಕ್ಷೇತ್ರಗಳು ಮತ್ತು ನರ್ಸರಿಗಳಡಿ ಪಿಪಿಪಿ ಮಾದರಿಯಲ್ಲಿ ಹೂ-ಕೃಷಿ, ಅಲಂಕಾರಿಕ ಸಸ್ಯಗಳು, ಔಷಧೀಯ ಸಸ್ಯಗಳನ್ನು ಬೆಳೆಸಲು ಹಾಗೂ ತೊಟಗಾರಿಕಾ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕಾರ್ಯಕ್ರಮಗಳನ್ನು ರೂಪಿಸಿಲಾಗುವುದು.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ “ಮಲ್ಟಿ-ಲೆವೆಲ್” ವ್ಯವಸ್ಥೆ
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ವಾಹನ ದಟ್ಟಣೆಯನ್ನು ನಿರ್ವಹಿಸಲು “ಮಲ್ಟಿ-ಲೆವೆಲ್” ವ್ಯವಸ್ಥೆಯನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗುವುದು.
ಕೃಷಿ ಉತ್ಪನ್ನ ಮಾರುಕಟ್ಟೆ
ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆಯನ್ನು ಹಾಗೂ ಕೆಜಿಎಫ್ ನಲ್ಲಿ ರೈತರ ಆಧುನಿಕ ಮಾರುಕಟ್ಟೆಯನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗುವುದು.
ವೈದ್ಯಕೀಯ ಕಾಲೇಜು
ಬಾಗಲಕೋಟೆಯಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಘಟಕ ವೈದ್ಯಕೀಯ ಕಾಲೇಜನ್ನು ಹಾಗೂ ಕೋಲಾರದಲ್ಲಿ ಪಿಪಿಪಿ ಆಧಾರದ ಮೇಲೆ ವೈದ್ಯಕೀಯ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ.
ಸರ್ಕಾರ ಮಾಡಬೇಕಾದ ರಸ್ತೆ ಅಭಿವೃದ್ದಿ, ಕೃಷಿ-ಮೂಲಸೌಕರ್ಯ, ಶಿಕ್ಷಣ, ಇಂಧನ, ಆರೋಗ್ಯ ರಕ್ಷಣೆ, ಪ್ರವಾಸೋದ್ಯಮ, ವಸತಿ, ನಗರ ಮೂಲಸೌಕರ್ಯ, ದೂರಸಂಪರ್ಕ, ಅರಣ್ಯ/ವನ್ಯಜೀವಿಗಳ ರಕ್ಷಣೆಯಂತಹ ಜವಾಬ್ಧಾರಿಗಳನ್ನು ಖಾಸಗಿಯರಿಗೆ ಒಪ್ಪಿಸಲಾಗುತ್ತಿದೆ. ಜನರು ಟೋಲ್ ಕೊಟ್ಟು ರಸ್ತೆಯಲ್ಲಿ ಸಂಚರಿಸಬೇಕಾದ ವ್ಯವಸ್ಥೆ ನಮಗೆ ಬೇಕೆ? ಶಿಕ್ಷಣ, ಆರೋಗ್ಯ ರಕ್ಷಣೆ ಇವುಗಳನ್ನು ಒಂದು ವ್ಯಾಪಾರದ ಸರಕನ್ನಾಗಿ ಮಾಡುವುದು ಸರಿಯೇ? ಆಸ್ತಿ ನಗದೀಕರಣ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ಕೊಡುವುದು ಸರಿಯೇ? ಇಂತಹ ಪ್ರಶ್ನೆಗಳನ್ನು ಎತ್ತಬೇಕಾದ ವಿರೋಧ ಪಕ್ಷ ಬಿಜೆಪಿ ನಾಯಕರು, ಹಲಾಲ್ ಬಜೆಟ್ ಎನ್ನುತ್ತಾ, ಜನರು ಈ ಕುರಿತು ಚರ್ಚಿಸದಂತೆ ಮಾಡಿದ್ದಾರೆ. ಜನರಿಂದ ಆಯ್ಕೆಯಾದ ಶಾಸಕರುಗಳು ಜನರ ಬದುಕಿಗೆ ಸಂಬಂಧಿಸಿದ ಇಂತಹ ವಿಷಯದ ಕುರಿತು ಚರ್ಚೆ ಮಾಡುತ್ತಿಲ್ಲ. ಜನರು ಹೆಚ್ಚೆತ್ತುಕೊಂಡು ಇಂತಹ ಉದಾರೀಕರಣ, ಖಾಸಗೀಕರಣ, ಜಾಗತೀಕರಣ (ಎಲ್.ಪಿ.ಜಿ.) ನೀತಿಗಳನ್ನು ಹಿಮ್ಮೆಟ್ಟಿಸಲು ಪಣತೊಡಬೇಕಿದೆ.
ಇದನ್ನೂ ನೋಡಿ: Karnataka Legislative Assembly Live Day 08 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ