“ಸ್ಟಾನ್‍ ಸ್ವಾಮಿಯವರ ಸಾವು ಕಸ್ಟಡಿ ಹತ್ಯೆ”- ವ್ಯಾಪಕ ಆಕ್ರೋಶ, ಖಂಡನೆ

ಫಾದರ್ ಸ್ವಾನ್‍ ಸ್ವಾಮಿಯವರ ಸಾವಿನ ಸುದ್ದಿಗೆ ಎಲ್ಲಡೆಗಳಿಂದ  ತೀವ್ರ ನೋವು ಮತ್ತು ಆಕ್ರೋಶ ವ್ಯಕ್ತಗೊಂಡಿದೆ.

ಇದು ಒಂದು ಕಸ್ಟಡಿಯಲ್ಲಿನ ಹತ್ಯೆಯಲ್ಲದೆ ಬೇರೇನೂ ಅಲ್ಲ ಎಂದು ಅಖಿಲ ಭಾರತ ಕಿಸಾನ್‍ ಸಭಾ(ಎ.ಐ.ಕೆ.ಎಸ್.) ಖಂಡಿಸಿದೆ.

ಇದನ್ನು ಎಸಗಿರುವುದು ಕೇಂದ್ರ ಸರಕಾರ ಮತ್ತು ಅದರ ಏಜೆನ್ಸಿಗಳು, ಇವು ಅವರ ನಾಜೂಕು ಆರೋಗ್ಯಸ್ಥಿತಿಯ ಬಗ್ಗೆ ತಿಳಿದಿದ್ದರೂ ಅವರನ್ನು ಬಂಧಿಸಿ , ಕಠಿಣ ಜೈಲು ಪರಿಸ್ಥಿತಿಗಳಲ್ಲಿ ಇಟ್ಟವು, ಮತ್ತೆ-ಮತ್ತೆ ಅವರ ಜಾಮೀನನ್ನು ವಿರೋಧಿಸಿದವು ಮತ್ತು ಅವರಿಗೆ ಅತ್ಯಗತ್ಯವಾಗಿದ್ದ ಶುಶ್ರೂಷೆ ಸಿಗದಂತೆ ಮಾಡಿದವು ಎನ್ನುತ್ತ ಎ.ಐ.ಕೆ.ಎಸ್.ಅವರ ಸಾವಿಗೆ ಹೊಣೆಗಾರರಾದ ಎಲ್ಲರೂ ಇದಕ್ಕೆ ಉತ್ತರ ಕೊಡುವಂತೆ ಮಾಡಬೇಕು ಮತ್ತು ಅವರ ಕ್ರಿಮಿನಲ್‍ ಕೃತ್ಯಗಳಿಗಾಗಿ ಅವರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದೆ.

ಇದನ್ನು ಓದಿ: ಭೀಮಾ ಕೋರೆಗಾಂವ್ ಮತ್ತು ಎಲ್ಗಾರ್ ಪರಿಷತ್ ಪ್ರಕರಣ ಆರೋಪಿ ಸ್ಟಾನ್ ಸ್ವಾಮಿ ನಿಧನ

ಇದಲ್ಲದೆ ಸ್ಟಾನ್‍ ಸ್ವಾಮಿಯವರ ಸಾವು ದೇಶದ ನ್ಯಾಯಾಲಯಗಳು ನಾಗರಿಕರ ಹಕ್ಕುಗಳನ್ನು ರಕ್ಷಿಸುವ ತಮ್ಮ ಸಂವಿಧಾನಿಕ ಕರ್ತವ್ಯವನ್ನು ಅರಿಯುವಂತೆ ಮಾಡಬೇಕು. ಅವು ಕಳೆದ ತಿಂಗಳು ದಿಲ್ಲಿ ಹೈಕೋರ್ಟ್ ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಮತ್ತು ಅಸಿಫ್‍ ಇಕ್ಬಾಲ್‍ ತನ್ಹಾರವರ  ಕೇಸಿನಲ್ಲಿ ಮುಂದಿಟ್ಟ ಉದಾಹರಣೆಯನ್ನು ಅನುಸರಿಸಬೇಕು  ಮತ್ತು ದೇಶದಲ್ಲಿನ ಪ್ರಜಾಪ್ರಭುತ್ವವಾದಿ ದನಿಗಳಿಗೆ ರಾಜಕೀಯ ಕಿರುಕುಳಗಳನ್ನು ಕೊನೆಗೊಳಿಸಬೇಕು ಎಂದು ಅದು ಹೇಳಿದೆ.

ದೇಶದಲ್ಲಿ ಈ ರೀತಿ ನೂರಾರು ಇತರ  ರಾಜಕೀಯ ಬಂಧಿಗಳನ್ನು ವರ್ಷಾನುಗಟ್ಟಲೆ ವಿಚಾರಣೆಯಿಲ್ಲದೆ ಜೈಲುಗಳಲ್ಲಿ ಇಡಲಾಗಿದೆ. ಅವರಲ್ಲಿ ಹೆಚ್ಚಿನವರು, ಸರಕಾರದ ಪ್ರಜಾಪ್ರಭುತ್ವ-ವಿರೋಧಿ ಧೋರಣೆಗಳ ವಿರುದ್ಧ ಗಟ್ಟಿಯಾಗಿ ಮಾತಾಡಿದ್ದರಿಂದಾಗಿ, ಕಪೋಲಕಲ್ಪಿತ ಆರೋಪಗಳನ್ನು ಎದುರಿಸುತ್ತಿದ್ದಾರೆ. ವ್ಯವಸ್ಥಿತವಾಗಿ, ಅವರಿಗೆ ಜಾಮೀನು  ನಿರಾಕರಿಸಲಾಗುತ್ತಿದೆ, ಹಾಗೂ ಮಾಧ್ಯಮಗಳನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ದುಷ್ಟರೆಂದು ಚಿತ್ರಿಸಲಾಗುತ್ತಿದೆ.

ಯುಎಪಿಎ, ರಾಜದ್ರೋಹ ಕಾಯ್ದೆ ಮತ್ತಿತರ ಕರಾಳ ಕಾಯ್ದೆಗಳ ಅಡಿಯಲ್ಲಿ ಬಂಧಿಸಿರುವ ಇಂತಹ ಎಲ್ಲ ರಾಜಕೀಯ ಬಂಧಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಅವರ ಮೇಲಿರುವ ಆರೋಪಗಳನ್ನು ಕೈಬಿಡಬೇಕು ಎಂದು ಎ.ಐ.ಕೆ.ಎಸ್. ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ಮತ್ತು ಅಧ್ಯಕ್ಷ ಅಶೋಕ ಧವಳೆಯವರು ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರ ಉತ್ತರದಾಯಿ-ಸಿಐಟಿಯು

ದೇಶದ ಒಂದು ಪ್ರಮುಖ ಕಾರ್ಮಿಕ ಸಂಘಟನೆ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಕೂಡ ಇದು ಒಂದು ಕಸ್ಟಡಿಯಲ್ಲಿನ ಸಾವು ಎಂದು ಖಂಡಿಸಿದೆ, ಈ ದುರಂತ ಘಟನೆಗೆ ಕೇಂದ್ರದಲ್ಲಿನ ಸರಕಾರವನ್ನು ಉತ್ತರದಾಯಿಯಾಗಿ ಮಾಡಬೇಕಾಗಿದೆ ಎಂದಿರುವ ಅದು,  ಈ ಘಟನೆ ಮೂಲಭೂತ ಮಾನವ ಹಕ್ಕುಗಳ ಅಮಾನವೀಯ ಮತ್ತು ಪಾಶವೀ ದಮನವನ್ನು ಬಯಲಿಗೆಳೆದಿದೆ ಎಂದಿದೆ.

ಇದನ್ನು ಓದಿ: ಸ್ಟಾನ್‍ ಸ್ವಾಮಿಯವರ ಸಾವಿಗೆ ಹೊಣೆಗಾರರನ್ನು ಶಿಕ್ಷಿಸಿ: ಸಿಪಿಐ(ಎಂ) ಪೊಲಿಟ್‍ಬ್ಯುರೊ

ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಗಂಭೀರ ಅಪಾಯದ ಸಂಕೇತ ಎನ್ನುತ್ತ ಎಲ್ಲ ರಾಜಕೀಯ ಬಂಧಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸಿಐಟಿಯು ಪ್ರದಾನ ಕಾರ್ಯದರ್ಶಿ ತಪನ್‍ ಸೆನ್‍ ಆಗ್ರಹಿಸಿದ್ದಾರೆ.

ಪ್ರಭುತ್ವ ಮಾಡಿರುವ ಹತ್ಯೆ- ಪ್ರಶಾಂತ ಭೂಷಣ್

ಇದು ಪ್ರಭುತ್ವದಿಂದ  ಒಬ್ಬ ಅತ್ಯಂತ ಸಭ್ಯ ಮತ್ತು ಕರುಣಾಮಯಿ ವ್ಯಕ್ತಿಯ ಹತ್ಯೆಯಲ್ಲದೆ ಬೇರೇನೂ ಅಲ್ಲ ಎಂದು ಪ್ರಖ್ಯಾತ ನ್ಯಾಯವಾದಿ ಪ್ರಶಾಂತ್‍ ಭೂಷಣ್ ಕೂಡ ಹೇಳಿದ್ದಾರೆ. ದುರದೃಷ್ಟವಶಾತ್ ನಮ್ಮ ನ್ಯಾಯ ವ್ಯವಸ್ಥೆಯೂ ಇದರಲ್ಲಿ ಶಾಮೀಲಾಗಿದೆ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ.

ಹೊಣೆ ನಿಗದಿಯಾಗಬೇಕು-ಸೀತಾರಾಂ ಯೆಚುರಿ

ಅಂಚಿಗೆ ತಳ್ಳಲ್ಪಟ್ಟವರಿಗೆ ನೆರವು ನೀಡಲು ಅವಿಶ್ರಾಂತವಾಗಿ ಶ್ರಮಿಸಿದ ಜೆಸುಯಿಟ್‍ ಪಾದ್ರಿ ಮತ್ತು ಸಾಮಾಜಿಕ ಹೋರಾಟಗಾರರ ಸಾವು ಅತ್ಯಂತ ನೋವು ಮತ್ತು ಆಕ್ರೋಶ ಉಂಟುಮಾಡಿದೆ ಎಂದಿರುವ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ, ಯಾವುದೇ ಆರೋಪ ಸಾಬೀತಾಗದೆ, ಕರಾಳ ಯುಎಪಿಎ ಅಡಿಯ ಕಸ್ಟಡಿಯಲ್ಲಿ ಅಕ್ಟೋಬರ್ 2020ರಿಂದ ಅಮಾನವೀಯ ವರ್ತನೆಗೆ ಗುರಿಪಡಿಸಿದ್ದ ಈ ಕಸ್ಟಡಿಯಲ್ಲಿನ ಹತ್ಯೆಗೆ ಯಾರು ಉತ್ತರದಾಯಿ ಎಂದು ನಿಗದಿಮಾಡಬೇಕು ಎಂದು ಆಗ್ರಹಿಸಿದ್ದಾರೆ.

ನಮಗೆಲ್ಲರಿಗೂ ನಾಚಿಕೆಗೇಡಿನ ಸಂಗತಿ-ಕವಿತಾ ಕೃಷ್ಣನ್

ಒಂದು ಸಾಂಕ್ರಾಮಿಕದ ಸಮಯದಲ್ಲಿ ಒಬ್ಬ 84 ವರ್ಷದ ಹಿರಿಯರಿಗೆ ಜಾಮೀನು ನಿರಾಕರಿಸುವುದೇ ಯೋಗ್ಯ ಎಂದು ನ್ಯಾಯಾಲಯಗಳು ಯೋಚಿಸಿರುವುದು ಶೋಚನೀಯ ಸಂಗತಿ. ಅವರನ್ನು ಭಾರತೀಯ ಜೈಲುಗಳಲ್ಲಿ “ಸಾಮಾನ್ಯ”ವಾಗಿರುವ ಉಡಾಫೆಯ ಮತ್ತು ವೈದ್ಯಕೀಯ ನಿರ್ಲಕ್ಷ್ಯದ ಮರ್ಜಿಗೆ ಬಿಡಲಾಯಿತು ಎಂದಿರುವ ಸಿಪಿಐ(ಎಂಎಲ್‍) ಮುಖಂಡರಾದ ಕವಿತಾ ಕೃಷ್ಣನ್ ಸಮಾಜದ ಅತ್ಯಂತ ದುರ್ಬಲರ ಸೇವೆಗೆ ಸಮರ್ಪಿತರಾಗಿದ್ದ ಒಬ್ಬ ಜೆಸುಯಿಟ್‍ ರನ್ನು ಹಿಂಸಿಸಿ ಸಾಯಿಸಲಾಗಿದೆ, ನಮಗೆಲ್ಲರಿಗೂ ನಾಚಿಕೆಯಾಗಬೇಕು ಎಂದಿದ್ದಾರೆ.

ಕಳೆದ ಶನಿವಾರವಷ್ಟೇ ಮುಂಬೈ ಹೈಕೋರ್ಟಿನಲ್ಲಿ ಫಾದರ್ ಸ್ಟಾನ್‍ ಸ್ವಾಮಿ , ಯುಎಪಿಎ ಅಡಿಯಲ್ಲಿ ಜಾಮೀನು ಕೊಡದಂತೆ  ಅಡ್ಡಿಯುಂಟುಮಾಡಿರುವ ಒಂದು ಉಪಬಂಧವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಕಳೆದ ತಿಂಗಳು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍.ಐ.ಎ)  ಅವರ ಜಾಮೀನು ಅರ್ಜಿಯನ್ನು ವಿರೋಧಿಸುತ್ತ  ಅವರ ವೈದ್ಯಕೀಯ ಕಾಯಿಲೆಗಳ ಬಗ್ಗೆ “ನಿರ್ಣಾಯಕ ಸಾಕ್ಷ್ಯ” ಇಲ್ಲ ಎಂದು ಅಫಿಡವಿಟ್ ಸಲ್ಲಿಸಿತ್ತು!.

Donate Janashakthi Media

Leave a Reply

Your email address will not be published. Required fields are marked *