ಬೆಂಗಳೂರು: ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ನಲ್ಲಿ ಹಿಂದುಳಿದ ವರ್ಗದವರಿಗೆ ಚುನಾವಣೆಯಲ್ಲಿ ಮೀಸಲಾತಿ ಕುರಿತು ಇಂದು(ಮಾ.31) ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ನಾಯಕರ ಸಭೆ ನಡೆಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡುವ ಸಂಬಂಧ ಉಂಟಾಗಿರುವ ಗೊಂದಲವನ್ನು ಸರಿಪಡಿಸಲು ರಾಜ್ಯ ಸರ್ಕಾರ ಆಯೋಗ ರಚಿಸುವ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ ಎಂದು ತಿಳಿಸಿದರು.
ಇಂದು ಸರ್ವ ಪಕ್ಷಗಳ ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎಂಬುದರ ಬಗ್ಗೆ ಸಕಾರಾತ್ಮಕವಾದ ಚರ್ಚೆ ನಡೆದಿದೆ. ಇದರೊಂದಿಗೆ, ಸಾಧಕ-ಬಾಧಕಗಳ ಬಗ್ಗೆ ಆಯೋಗ ರಚಿಸಿ ವರದಿ ನೀಡಬೇಕೆಂಬ ತೀರ್ಮಾನಕ್ಕೆ ಸಭೆ ಬಂದಿದೆ ಎಂದು ಹೇಳಿದರು.
ಸರ್ವಪಕ್ಷಗಳ ಸಭೆಯಲ್ಲಿ ಹಿಂದುಳಿದ ವರ್ಗದವರಿಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ಸಂಬಂಧ ಆಯೋಗವನ್ನು ರಚಿಸಲು ಸಭೆಯು ಒಮ್ಮತದ ತೀರ್ಮಾನ ಕೈಗೊಂಡಿತು. ಆಯೋಗಕ್ಕೆ ಎಷ್ಟು ಕಾಲಾವಕಾಶ ನೀಡಬೇಕು, ಎಷ್ಟು ದಿನದಲ್ಲಿ ವರದಿ ನೀಡಬೇಕು, ಇದಕ್ಕೆ ಯಾರ‍್ಯಾರನ್ನೂ ನೇಮಿಸಬೇಕು ಸೇರಿದಂತೆ ಇತ್ಯಾದಿಗಳ ಕುರಿತು ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡದೆ ಚುನಾವಣೆ ನಡೆಸಲು ಸರ್ಕಾರಕ್ಕೆ ಇಷ್ಟವಿಲ್ಲ. ಅವರಿಗೆ ಅನ್ಯಾಯ ಮಾಡಿ ಚುನಾವಣೆ ನಡೆಸುವುದು ಸಾಧುವೂ ಅಲ್ಲ. ಹೀಗಾಗಿ ಏನೆಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಬೇಕಾಗಿದೆ. ಆಯೋಗ ವರದಿ ನೀಡಿದ ನಂತರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಇಂದಿರಾ ಸಹಾನಿ ಪ್ರಕರಣದಲ್ಲಿ ಶೇ.50ರಷ್ಟು ಮೀಸಲಾತಿ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಇದೀಗ ಕೇಂದ್ರ ಸರ್ಕಾರ ಮೀಸಲಾತಿ ನಿಗದಿಪಡಿಸುವ ಅಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಆಯೋಗದ ವರದಿ ಬಂದ ನಂತರ ಅಡ್ವೋಕೇಟ್ ಜನರಲ್ ಅವರು ಅಭಿಪ್ರಾಯವನ್ನು ಪಡೆದು ನಂತರದಲ್ಲಿ ನಂತರ ಸುಪ್ರೀಂಕೋರ್ಟ್‍ಗೆ ಅಫಿಡೆವಿಟ್ ಸಲ್ಲಿಸುವುದಾಗಿ ಹೇಳಿದರು.
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಒಬಿಸಿಗಳಿಗೆ ಮೀಸಲಾತಿ ಇಟ್ಟು ಚುನಾವಣೆ ಮಾಡಬೇಕು ಎಂಬುದು ಎಲ್ಲ ಪಕ್ಷಗಳ ಅಭಿಪ್ರಾಯವಾಗಿದೆ. ಹಾಗಾಗಿ ಆಯೋಗ ನೇಮಕ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದಷ್ಟು ಬೇಗ ಆಯೋಗ ರಚನೆ ಮಾಡಲಾಗುವುದು. ಎಂದರು.
ಗ್ರಾಮ ಪಂಚಾಯತಿ ಚುನಾವಣೆ ಮುಗಿಯುತ್ತಿದ್ದಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೆವು. ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ನಾವು ಸಿದ್ದರಿದ್ದೆವು. ಆದರೆ 2600ಕ್ಕೂ ಹೆಚ್ಚು ಆಕ್ಷೇಪಗಳು ಬಂದಿದ್ದವು. ಈ ನಿಟ್ಟಿನಲ್ಲಿ ವಿಶೇಷ ಸಮಿತಿ ನೇಮಕ ಮಾಡಲಾಗಿತ್ತು. ಸಮಿತಿಯ ವರದಿ ಕೊಡುವ ಸಮಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಸುಪ್ರೀಂ ಕೋರ್ಟ್ ಸಮಾಧಾನ ಆಗಬೇಕು ಹಾಗೂ ಹಿಂದುಳಿದ ವರ್ಗಕ್ಕೂ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸರ್ವ ಪಕ್ಷದ ಸಭೆಯಲ್ಲಿ ಆಯೋಗ ರಚನೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಶೇ.50ರಷ್ಟು ಮೀಸಲಾತಿ ಪ್ರಮಾಣವನ್ನು ನೀಡುವಂತಿಲ್ಲ. ಈ ಹಿಂದೆ ಮಹಾರಾಷ್ಟ್ರ ಸರ್ಕಾರ ಇದನ್ನು ಮೀರಿ ಚುನಾವಣೆ ನಡೆಸಿದ್ದನ್ನೇ ನ್ಯಾಯಾಲಯ ರದ್ದುಪಡಿಸಿದೆ. ತಮಿಳುನಾಡು ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿರುವುದು ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ.
ಮೀಸಲಾತಿ ಕಲ್ಪಿಸದೆ ಸ್ಥಳೀಯ ಸಂಸ್ಥೆ ಚುನಾವಣೆ ಮಾಡಬಾರದು
ಮೀಸಲು ಸೌಲಭ್ಯ ಕಲ್ಪಿಸದೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದರೆ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈಗ ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ಕಗ್ಗಂಟಾಗಿ ಪರಿಣಮಿಸಿದೆ. ಹೀಗಾಗಿ ಮೀಸಲು ಸೌಲಭ್ಯ ಒದಗಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಕಾನೂನಾತ್ಮಕವಾಗಿ ಪರಿಶೀಲಿಸಬೇಕು ಎಂದರು.
ಮೀಸಲು ಸೌಲಭ್ಯ ಒದಗಿಸುವ ಮುನ್ನ ಸಮೀಕ್ಷೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಈಗಾಗಲೇ ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದೆ. ಆ ವರದಿಯನ್ನು ಪರಿಗಣಿಸುವ ಸಾಧ್ಯತೆ ಕುರಿತಾಗಿಯೂ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಸಚಿವರಾದ ಗೋವಿಂದ ಕಾರಜೋಳ, ಕೋಟಾ ಶ್ರೀನಿವಾಸ ಪೂಜಾರಿ, ಬೈರತಿ ಬಸವರಾಜ್, ಎಂ.ಟಿ.ಬಿ. ನಾಗರಾಜ್ ಮತ್ತಿತರರು ಸಭೆಯಲ್ಲಿದ್ದರು.