- ಪ್ರಧಾನ ಪಾತ್ರದಲ್ಲಿ ಡಾ. ಮುಖ್ಯಮಂತ್ರಿ ಚಂದ್ರು, ರಚನೆ: ಡಾ. ಕೆ.ವೈ. ನಾರಾಯಣಸ್ವಾಮಿ, ನಿರ್ದೇಶನ: ಡಾ. ಬಿ.ವಿ. ರಾಜಾರಾಂ
- ಮೊದಲ ಪ್ರದರ್ಶನ : 04.04.2021, ಸಮಯ ಸಂಜೆ : 7.00 ಗಂಟೆಗೆ, ಸ್ಥಳ : ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು.
ಸುವರ್ಣ ವರ್ಷಾಚರಣೆಗೆ ಕಾಲಿಟ್ಟಿರುವ ಕಲಾ ಗಂಗೋತ್ರಿ ತಂಡಕ್ಕೆ 50ರ ವಸಂತ. ಮಕ್ಕಳಿಂದ ಹಿಡಿದು ಹಿರಿಯವರೆಗೆ ಎಲ್ಲರನ್ನು ಒಳಗೊಂಡ ಎಲ್ಲಾ ಮಾದರಿಯ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವ ತಂಡಕ್ಕೆ ಐವತ್ತು ವರ್ಷ ತುಂಬಿರುವ ಈ ಹೊತ್ತಿನಲ್ಲಿ ವಿಶೇಷ ಉತ್ಸವನ್ನು ಹಮ್ಮಿಕೊಂಡಿದೆ.
ಠಾಗೂರರ ಅಚಲಾಯತನ, ಕುವೆಂಪು ಅವರ ಶ್ಮಶಾನ ಕುರುಕ್ಷೇತ್ರ, ಬೆರಳ್ ಗೆ ಕೊರಳ್, ಕಾರಂತರ ಮೂಕಜ್ಜಿಯ ಕನಸುಗಳು, ಕೈಲಾಸಂರವರ ಟೊಳ್ಳುಗಟ್ಟಿ, ಹೋಂ ರೂಲು ಸೇರಿದಂತೆ ಹಲವಾರು ರಂಗ ಪ್ರಯೋಗಗಳನ್ನು ಮಾಡಿರುವ ಕಲಾ ಗಂಗೋತ್ರಿ ವಿ. ರಾಮಮೂರ್ತಿ ನಿರ್ದೇಶನದ ಮೂಕಿಟಾಕಿ ಮೂಕಾಭಿನಯದ 1350 ಪ್ರದರ್ಶನಗಳನ್ನು ನೀಡಿದೆ. ಎಲ್ಲಡೆ ಸಂಚರಿಗೆ ಸುಮಾರು 3000ಕ್ಕೂ ಹೆಚ್ಚಿನ ರಂಗ ಪ್ರದರ್ಶನಗಳನ್ನು ನೀಡಿದೆ. ಅಲ್ಲದೆ ಹಲವಾರು ರಂಗಕೃತಿಗಳು ಸೇರಿದಂತೆ
ಕಲಾ ಗಂಗೋತ್ರಿ ಪ್ರದರ್ಶಿಸುವ ಮುಖ್ಯಮಂತ್ರಿ ನಾಟಕ ಸುಮಾರು 735 ಪ್ರದರ್ಶನಗಳನ್ನು ಜನಪ್ರಿಯ ನಾಟಕ. 40 ವರ್ಷಗಳಿಂದ ಪ್ರದರ್ಶನ ಕಾಣುತ್ತಿರುವ ಈ ನಾಟಕದ ಪ್ರಧಾನ ವಸ್ತು ರಾಜಕೀಯ. ‘ಮುಖ್ಯಮಂತ್ರಿ ನಾಟಕ ಪ್ರದರ್ಶನ ಆರಂಭವಾದದ್ದು 1980ರಲ್ಲಿ. ಈವರೆಗೆ ಸುಮಾರು 14 ಜನ ಕರ್ನಾಟಕದ ಮುಖ್ಯಮಂತ್ರಿಗಳು ಈ ನಾಟಕ ವೀಕ್ಷಿಸಿದ್ದಾರೆ.
ಕಲಾ ಗಂಗೋತ್ರಿ ತಂಡವು ಸುವರ್ಣ ವರ್ಷಾಚರಣೆಗಾಗಿ ಮತ್ತೊಂದು ಹೊಸ ನಾಟಕವನ್ನು ಪ್ರದರ್ಶಿಸಲು ಮುಂದಾಗಿದೆ. ಅದು ʻಮತ್ತೆ ಮುಖ್ಯಮಂತ್ರಿʼ
ಮತ್ತೆ ಮುಖ್ಯಮಂತ್ರಿ
ಇದೊಂದು ರಾಜಕೀಯ ಆತ್ಮಾಲೋಕನದ ನಾಟಕ. ನಮ್ಮ ದೇಶದಲ್ಲಿ ಕಳೆದ 75 ವರ್ಷಗಳಿಂದ ನಡೆದು ಬರುತ್ತಿರುವ ರಾಜಕೀಯ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ನಡೆಸಿರುವ ಪ್ರಯತ್ನವಿದು. ಕಳೆದ ಏಳು ದಶಕಗಳಲ್ಲಿ ನಮ್ಮದೇಶ ಒಂದು ಪರಿಪೂರ್ಣ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಪರಿವರ್ತನೆಯಾಗಬೇಕಿತ್ತು ಎನ್ನುವ ಅಪೇಕ್ಷೆ ಇನ್ನೂ ನಿಜಗೊಂಡಿಲ್ಲ. ಪ್ರಪಂಚದಲ್ಲಿಯೇ ಅತ್ಯಂತ ಸಮಗ್ರವಾದ ಸಂವಿಧಾನವನ್ನು ನಾವು ಅಳವಡಿಸಿಕೊಂಡಿದ್ದರೂ ಶತಮಾನಗಳಿಂದ ನಮ್ಮನ್ನು ಕಾಡಿಸುತ್ತಿರುವ ಸಾಮಾಜಿಕ ಧಾರ್ಮಿಕ ಹಾಗೂ ಆರ್ಥಿಕ ಸಮಸ್ಯೆಗಳಿಂದ ನಾವು ಮುಕ್ತರಾಗಿಲ್ಲ. ನಮ್ಮ ಆಶಯಗಳಲ್ಲಿ ದೋಷವಿಲ್ಲ ಆದರೆ ನಮ್ಮ ಆಚರಣೆಗಳು ಮಾತ್ರ ತರತಮಗಳನ್ನು ಬಿತ್ತಿ ಬೆಳೆಯುತ್ತವೆ.
ಇದಕ್ಕೆ ಕಾರಣವೇನು ಎಂಬ ವಿಷಯ ನಿರಂತರವಾಗಿ ಕಾಡುತ್ತಿರುತ್ತದೆ. ಸಾಮಾನ್ಯ ಪ್ರಜೆಗಳ ಜೀವನದಲ್ಲಿ ಪ್ರಗತಿಕಾಣುತ್ತದೆ ಎನ್ನುವ ಭರವಸೆ ಇನ್ನೂ ಜೀವಂತವಾಗಿದೆ. ಒಂದು ವೇಳೆ ನಾವು ಕಾಣ ಬಯಸುವ ಒಬ್ಬ ಉದಾತ್ತ ನಾಯಕ ನಮ್ಮ ಮುಖ್ಯಮಂತ್ರಿಯಾಗಿದ್ದರೆ? ಎನ್ನುವ ಕಲ್ಪನೆಯ ಕಥಾನಕವೇ ʻಮತ್ತೆ ಮುಖ್ಯಮಂತ್ರಿʼ ನಾಟಕ.
ಭ್ರಷ್ಟಾಚಾರ, ಸ್ವಾರ್ಥ, ಹಗೆತನಗಳಿಂದ ತುಂಬಿಕೊಂಡಿರುವ ರಾಜಕೀಯ ವರ್ತಮಾನದಲ್ಲಿ ಪ್ರಜೆ-ಪ್ರಜಾಪ್ರತಿನಿಧಿ-ಪ್ರಭುತ್ವಗಳಲ್ಲಿ ಸ್ವಲ್ಪ ಮಟ್ಟಿಗಿನ ಪಾಪಪ್ರಜ್ಞೆಯನ್ನು ಜಾಗ್ರತಗೊಳಿಸುವ ಆಶಯ ಈ ನಾಟಕದ್ದು.
ಪ್ರಧಾನ ಪಾತ್ರದಲ್ಲಿ ಡಾ. ಮುಖ್ಯಮಂತ್ರಿ ಚಂದ್ರು
735 ಪ್ರದರ್ಶನ ಕಂಡಿರುವ ಮುಖ್ಯಮಂತ್ರಿ ನಾಟಕದಿಂದ ಜನಪ್ರಿಯರಾದ ಚಂದ್ರಶೇಖರ್ ಎಂಬ ಹೆಸರು ಹೊಂದಿದ್ದ ಮುಖ್ಯಮಂತ್ರಿ ಚಂದ್ರು ಅವರು ಮತ್ತೆ ಮುಖ್ಯಮಂತ್ರಿ ನಾಟಕದ ಪ್ರಧಾನ ಪಾತ್ರಧಾರಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸುಮಾರು ೧೦ ವರ್ಷಗಳವರೆಗೆ ವೃತ್ತಿ ಜೀವನ ಸಲ್ಲಿಸಿರುವ ಮುಖ್ಯಮಂತ್ರಿ ಚಂದ್ರು ರಂಗಭೂಮಿ, ಚಲನಚಿತ್ರ, ಕಿರುತೆರೆ ಸೇರಿದಂತೆ ರಾಜಕೀಯ ಮತ್ತು ಕನ್ನಡಕ್ಕಾಗಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರು. ಮುಖ್ಯಮಂತ್ರಿ ನಾಟಕವಲ್ಲದೆ, ಹಲವಾರು ನಾಟಕಗಳನ್ನು ಸಹ ನಿರ್ದೇಶನ ಮಾಡಿದ್ದಾರೆ ಮತ್ತು ಅಭಿನಯಿಸಿದ್ದಾರೆ.
ನಾಟಕಕಾರರು – ಡಾ. ಕೆ.ವೈ. ನಾರಾಯಣಸ್ವಾಮಿ
ಬೆಂಗಳೂರು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಕಾವ್ಯ, ನಾಟಕ, ವಿಮರ್ಶೆ ಮತ್ತು ಸಂಘಟಕರಾಗಿ ಕ್ರಿಯಾಶೀಲರಾಗಿದ್ದಾರೆ. ನೀರದೀವಿಗೆ ಜಲಸಂಸ್ಕೃತಿಯನ್ನು ಕುರಿತ ಸಂಶೋಧನಾಕೃತಿಯಾಗಿದೆ. ಪಂಪಭಾರತ, ಅನಭಿಜ್ಞ ಶಾಕುಂತಲ, ಚಕ್ರರತ್ನ, ಕಳವು, ಮಾಯಾಬೇಟೆ ಮುಂತಾದ ಯಶಸ್ವಿ ನಾಟಕಗಳನ್ನು ಬರೆದಿದ್ದಾರೆ. ಕುವೆಂಪು ಅವರು ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ೯ ಗಂಟೆಗಳ ರಂಗಕೃತಿಯಾಗಿಸಿದ್ದಾರೆ. ಇವರಿಗೆ ಹಲವು ಪ್ರಶಸ್ತಿಗಳು ಸಂದಿವೆ.
ನಿರ್ದೇಶಕರು – ಡಾ. ಬಿ.ವಿ. ರಾಜಾರಾಂ
50 ವರ್ಷಗಳ ನಿರಂತರವಾದ ರಂಗಭೂಮಿ ಅನುಭವ. 200 ಕ್ಕೂ ಹೆಚ್ಚಿನ ನಾಟಕಗಳ ನಟ, ನಿರ್ದೇಶಕ, ಸಂಘಟಕ ಮತ್ತು ರಂಗತಂತ್ರಜ್ಞ, ದೂರದರ್ಶನ ಮತ್ತು ಆಕಾಶವಾಣಿ ಕಲಾವಿದ. ಚಲನಚಿತ್ರ ಮತ್ತು ದೂರದರ್ಶನ ಧಾರವಾಹಿಗಳಲ್ಲಿ ನಟನೆ. ಕಲಾ ಗಂಗೋತ್ರಿ ತಂಡದ ಸ್ಥಾಪಕ ಅಧ್ಯಕ್ಷರು. ಅಭಿನಯದಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅಚಲಾಯತನ, ಮುಖ್ಯಮಂತ್ರಿ, ಮೂಕಜ್ಜಿಯ ಕನಸುಗಳು, ಮೈಸೂರು ಮಲ್ಲಿಗೆ, ಇನ್ನೂ ಹಲವು ನಾಟಕಗಳ ನಿರ್ದೇಶಕರು.