ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿರುವುದಾಗಿ ಸಚಿವ ಸುರೇಶ್ ಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದೆ. ಪ್ರಥಮ ಪಿಯುಸಿ ಫಲಿತಾಂಶದ ಆಧಾರದ ಮೇಲೆ ಗ್ರೇಡಿಂಗ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ. SSLC ಪರೀಕ್ಷೆಗಳನ್ನು ರದ್ದು ಮಾಡುತ್ತಿಲ್ಲ, ಬದಲಾಗಿ ಗಣಿತ, ವಿಜ್ಞಾನ, ಇಂಗ್ಲಿಷ್ ಪರೀಕ್ಷೆಗಳನ್ನು ಸೂಕ್ತ ಕೋವಿಡ್ ನಿಯಮ ಹಾಗೂ ಸುರಕ್ಷತೆಗಳೊಂದಿಗೆ ನಡೆಸುವುದಾಗಿ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೋವಿಡ್ ಕಾರಣದಿಂದ ಈಗಾಗಲೇ ಕೇಂದ್ರ ಮಟ್ಟದ ಸಿಬಿಎಸ್ ಇ ಮತ್ತು ಐಸಿಎಸ್‌ಇಯ 10ನೇ ಹಾಗೂ 12ನೇ ತರಗತಿ ಪರೀಕ್ಷೆಗಳು ರದ್ದಾಗಿದೆ. ರಾಜ್ಯದಲ್ಲಿ ನಡೆಯುವ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಗಳ ಬಗ್ಗೆಯೂ ಗೊಂದಲಗಳು ತಲೆದೋರಿದ್ದರಿಂದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪತ್ರಿಕಾಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಶಿಕ್ಷಣ ತಜ್ಞರು, ಅಧಿಕಾರಿಗಳು, ಪೋಷಕರು, ಶಿಕ್ಷಕರು ಹಾಗೂ ಖಾಸಗಿ ಶಾಲಾ ಸಂಘಟನೆಗಳು ಮಾತ್ರವಲ್ಲದೆ ಮುಖ್ಯಮಂತ್ರಿಗಳು,ಶಾಸಕ, ಸಚಿವರು, ಪ್ರಮುಖ ಜನಪ್ರತಿನಿಧಿಗಳಿಂದ ಅಭಿಪ್ರಾಯವನ್ನು ಸುರೇಶ್ ಕುಮಾರ್ ಸಂಗ್ರಹಿಸಿದ್ದರು.
ಈ ವರ್ಷ ಪರಿಸ್ಥಿತಿ ತುಂಬಾ ವಿಭಿನ್ನವಾಗಿದೆ. ಮಕ್ಕಳ ಯೋಗಕ್ಷೇಮ ಮತ್ತು ಶೈಕ್ಷಣಿಕ ಭವಿಷ್ಯ ಇದನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಈಗ ನಡೆಸುವುದಿಲ್ಲ. ಬದಲಾಗಿ ಪರೀಕ್ಷೆ ಇಲ್ಲದೆ ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಗ್ರೇಡಿಂಗ್ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ 2021ರ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ದೇಶದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ಕೇರಳ ಮೊದಲು
SSLC ಪರೀಕ್ಷೆ ರದ್ದು ಇಲ್ಲ ಬದಲಿಗೆ ಹೊಸ ಮಾರ್ಗ : SSLC ಪರೀಕ್ಷೆ ವಿಚಾರವಾಗಿ ಪ್ರತಿಕ್ರಿಯಿಸಿ, 8 ಲಕ್ಷ 75 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಪರೀಕ್ಷೆ ಇಲ್ಲದೆ ಅವರ ಕಲಿಕಾ ಮಟ್ಟ ನಿರ್ಧಾರವಾಗೋದು ಕಷ್ಟ. ಕಳೆದ ವರ್ಷ 9 ನೇ ತರಗತಿ ಪರೀಕ್ಷೆ ನಡೆದಿಲ್ಲ. CBSE ನಲ್ಲಿ ಮೂರು ತಿಂಗೊಳಿಗೊಮ್ಮ ವಿದ್ಯಾರ್ಥಿಗಳ ಇವಾಲ್ಯುವೇಷನ್ ನಡೆಯುತ್ತೆ. ನಮ್ಮಲ್ಲಿ ಅ ಪದ್ಧತಿ ಇಲ್ಲ ಎಂದಿದ್ದಾರೆ.
SSLC ಪರೀಕ್ಷೆಗಳಲ್ಲಿ ಎರಡು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ. ಸಮಾಜ ವಿಜ್ಞಾನ, ಗಣಿತ, ವಿಜ್ಞಾನ ಈ ಮೂರು ವಿಷಯ ಸೇರಿ ಒಂದು ಪ್ರಶ್ನೆ ಪತ್ರಿಕೆ ಇರಲಿದೆ. ಪ್ರಶ್ನೆಗಳು ಸರಳವಾಗಿದ್ದು ನೇರವಾಗಿರಲಿದೆ. ಬಹು ಆಯ್ಕೆ ಪ್ರಶ್ನೆಗಳು ಇರುತ್ತವೆ
ಯಾರೂ ಫೇಲ್ ಆಗಲ್ಲ: ಯಾರನ್ನ ಕೂಡ ನಪಾಸ್ ಮಾಡುವ ಕಾರ್ಯ ನಡೆಯುವುದಿಲ್ಲ. ಇಲ್ಲಿ ಕೂಡ A+, B+, ಅಂತ ಗ್ರೇಡ್ ನೀಡುತ್ತೇವೆ. ಜುಲೈ ಮೂರನೇ ವಾರದಲ್ಲಿ SSLC ಪರೀಕ್ಷೆ ನಡೆಯಲಿದ್ದು, ಪರೀಕ್ಷೆ 20 ದಿನ ಮುಂಚೆ ದಿನಾಂಕ ಪ್ರಕಟವಾಗಲಿದೆ. ಕೋವಿಡ್ ಕಾರಣದಿಂದ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗಿದೆ.
6000 ಸಾವಿರ ಪರೀಕ್ಷಾ ಕೇಂದ್ರ: ಈ ಭಾರಿ 6000 ಸಾವಿರ ಪರೀಕ್ಷಾ ಕೇಂದ್ರ ಇರಲಿದ್ದು, ಕಳೆದ ವರ್ಷ ಮೂರು ಸಾವಿರ ಮಾತ್ರ ಇತ್ತು. ಒಂದು ಡೆಸ್ಕ್ ನಲ್ಲಿ ಒಬ್ಬ ವಿದ್ಯಾರ್ಥಿ ಕೂರಲಿದ್ದಾನೆ.
ಒಂದು ರೂಮ್ ನಲ್ಲಿ 10 ರಿಂದ 12 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಇರಲಿದೆ.
ಆರೋಗ್ಯ ಇಲಾಖೆಯಿಂದ SOP ಬಿಡುಗಡೆ: ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡುತ್ತೇವೆ. ಬಿಇಒಗಳ ಮೂಲಕ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆ ಮಾಡುತ್ತಿದ್ದಾರೆ. ವಾಟ್ಸಪ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಬಹು ಆಯ್ಕೆ ಪ್ರಶ್ನೆ ಪತ್ರಿಕೆಯಲ್ಲಿ ಮೂರು ವಿಷಯಗಳು ಇರುತ್ತೆ. ಪ್ರತಿ ವಿಷಯಕ್ಕೆ 40 ಅಂಕಗಳು ಇರಲಿವೆ. ಮೂರು ವಿಷಯಗಳ ಪ್ರಶ್ನೆ ಪತ್ರಿಕೆ ಸೇರಿ 120 ಅಂಕಗಳು ಇರುತ್ತೆ. ಒಟ್ಟು ಮೂರು ಗಂಟೆ ಅವಧಿ ಪರೀಕ್ಷೆ ನಡೆಯಲಿದೆ. ಪ್ರತಿಯೊಬ್ಬರು ಪರೀಕ್ಷಾ ಸಿಬ್ಬಂದಿಗಳು ವ್ಯಾಕ್ಸಿನ್ ಹಾಕಬೇಕೆಂದು ಕಡ್ಡಾಯ ಮಾಡಲಾಗಿದೆ.
ಕನ್ನಡ ,ಇಂಗ್ಲೀಷ್ ಹಾಗೂ ಹಿಂದಿ ವಿಷಯ ಸೇರಿ ಒಂದು ಪ್ರಶ್ನೆ ಪತ್ರಿಕೆಗೆ ಒಟ್ಟು 120 ಅಂಕಗಳು ಇರಲಿದೆ. ಕೇವಲ ಗಣಿತ, ವಿಜ್ಞಾನ ಅಲ್ಲ. ಬೇರೆ ಮೂರು ವಿಷಯ ಸೇರಿ ಹೀಗೆ ಪರೀಕ್ಷೆ ಮಾಡುತ್ತಾರೆ. ಜುಲೈ ಅಥವಾ ಆಗಸ್ಟ್ ಮೊದಲ ವಾರದಲ್ಲಿ SSLC ಫಲಿತಾಂಶ ಪ್ರಕಟ ಮಾಡುತ್ತೇವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥುಗಳಿಗೆ ಈ ಬಾರಿ ಅಂಕಗಳು ಇರುವುದಿಲ್ಲ. ಇದೇ ಮೊದಲ ಬಾರಿಗೆ ಗ್ರೇಡಿಂಗ್ ನೀಡಲಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಬಂದ ಮೇಲೆ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸುತ್ತೇವೆ. ಅವರಿಗೂ ಗ್ರೇಡಿಂಗ್ ನೀಡುತ್ತೇವೆ ಎಂದು ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಹೇಳಿದ್ದಾರೆ.
SSLC ಪರೀಕ್ಷೆಗೂ ಗ್ರೇಡಿಂಗ್ ಕೊಡಲಾಗುತ್ತದೆ. SSLC ಪರೀಕ್ಷೆಯಲ್ಲಿ ಯಾರನ್ನು ಕೂಡ ಫೇಲ್ ಮಾಡುವುದಿಲ್ಲ. ಜೂನ್ 15 ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಜೂನ್ 15 ರಿಂದ ದಾಖಲಾತಿ ಪ್ರಕ್ರಿಯೆ ಶುರುವಾಗಲಿದೆ.