ಆರೋಗ್ಯ ಬಜೆಟಿನಲ್ಲಿ ನಿರ್ದಯ ವಂಚನೆ

ಸಾರ್ವಜನಿಕ ಆರೋಗ್ಯದ ಘೋರ ನಿರ್ಲಕ್ಷ್ಯವನ್ನು ಗುರುತಿಸಲು ಸರಕಾರ ನಿರಾಕರಿಸುತ್ತಿರುವುದು  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2021-22ನೇ ಸಾಲಿನ ಬಜೆಟ್ನಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದೆ. ಆದರೂ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಬಜೆಟ್ ಹಣ ನೀಡಿಕೆಯಲ್ಲಿ ಶೇಕಡ 137 ಹೆಚ್ಚಳವಾಗಿದೆ ಎಂಬ ಅಪ್ಪಟ ಮೋಸದ ದಾವೆಯನ್ನು ಅವರು ಮಾಡಿದ್ದಾರೆನ್ನುವುದು ಇನ್ನೂ ಕೊಳಕು ವಿಚಾರವಾಗಿದೆ. ಸತ್ಯದ ತಲೆ ಮೇಲೆ ಹೊಡೆಯುವಂಥ ಇಂಥ ಸುಳ್ಳಿಗೆ ಲೆಕ್ಕವೇ ಇಲ್ಲ ಸರ್ಕಾರದಲ್ಲಿ. ಎಲ್ಲ ಸಮಸ್ಯೆಗಳಿಗೆ ಖಾಸಗೀಕರಣವೇ ಮದ್ದು ಎಂಬ ಆಳವಾದ ನಂಬಿಕೆಯೇ ಸಾರ್ವಜನಿಕ ಆರೋಗ್ಯ ಕ್ಷೇತ್ರ ಕುರಿತ ಮೋದಿ ಸರಕಾರದ ನಿರ್ದಯ ಧೋರಣೆಗೆ ಕಾರಣವಾಗಿದೆ

ಪ್ರಕಾಶ್ ಕಾರಟ್

ಇಡೀ ಜಗತ್ತನ್ನು ತಲ್ಲಣಗೊಳಿಸಿದ ಕೊವಿಡ್-19 ಮಹಾಸೋಂಕು ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕೆಟ್ಟ ಮುಖವನ್ನು ಬೆತ್ತಲುಗೊಳಿಸಿದ ನಂತರವಾದರೂ ಸರ್ಕಾರ ಕೆಲವು ಪಾಠಗಳನ್ನು ಕಲಿತೀತು ಎಂದು ಯಾರಾದರೂ ನಿರೀಕ್ಷಿಸಿದ್ದರೆ ಅದು ತಪ್ಪಲ್ಲ. ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಅತಿ ಕಡಿಮೆ ಖರ್ಚು ಮಾಡುವ ಜಗತ್ತಿನ ಹಲವು ದೇಶಗಳಲ್ಲಿ ಭಾರತವೂ ಒಂದು. 2019ರಲ್ಲಿ ಅದು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡ 1.3ನ್ನು ಆರೋಗ್ಯಕ್ಕೆ ವೆಚ್ಚ ಮಾಡಿತ್ತು.

1991ರ ಉದಾರೀಕರಣ ನೀತಿಯೊಂದಿಗೆ ಆರಂಭವಾದ ಆರೋಗ್ಯ ಕ್ಷೇತ್ರದ ಸೇವೆಗಳ ಖಾಸಗೀಕರಣ ಪ್ರಕ್ರಿಯೆಯನ್ನು ಮೋದಿ ಸರಕಾರ ದೊಡ್ಡ ಪ್ರಮಾಣದಲ್ಲಿ ಮುಂದೊತ್ತಿದೆ. ಕಾರ್ಪೊರೇಟ್‍ಗಳು ನಡೆಸುವ ಆಸ್ಪತ್ರೆಗಳು, ಖಾಸಗಿ ನರ್ಸಿಂಗ್ ಹೋಮ್‍ಗಳು, ಕ್ಲಿನಿಕ್‍ಗಳು ಮತ್ತು ಡಯಾಗ್ನಸ್ಟಿಕ್(ರೋಗ ಪರೀಕ್ಷಣಾ) ಕೇಂದ್ರಗಳನ್ನು ಆರೋಗ್ಯ ವ್ಯವಸ್ಥೆಯಲ್ಲಿ ಹುಲುಸಾಗಿ ಬೆಳೆಸಿರುವ ಒಂದು ಆರೋಗ್ಯ ವ್ಯವಸ್ಥೆ ಬೆಳೆದಿದೆ. ಇವುಗಳಲ್ಲಿ ಹೆಚ್ಚಿನವು ಜನಸಾಮಾನ್ಯರ ಕೈಗೆಟುಕದ ಶುಲ್ಕಗಳನ್ನು ವಿಧಿಸಿ ಲಾಭ ಗಳಿಸುವ ಸೂತ್ರದಂತೆ ನಡೆಯುತ್ತಿವೆ. ಇವುಗಳ ಜೊತೆಯಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿವೆ. ಇವಕ್ಕೆ ಸಾಕಷ್ಟು ಹಣ ನೀಡುತ್ತಿಲ್ಲ, ಸಿಬ್ಬಂದಿ ಕೊರತೆ ಕಾಡುತ್ತಿದೆ ಹಾಗೂ ಗುಣಮಟ್ಟವೂ ಕಳಪೆಯಾಗಿದೆ. ಅದರ ಪರಿಣಾಮವಾಗಿ ಜನರು ಒಟ್ಟು ಆರೋಗ್ಯಕ್ಕಾಗಿ ತಮ್ಮ ಆದಾಯಗಳಿಂದಲೇ ಮಾಡಬೇಕಾದ ಒಟ್ಟು ಆಹಾರ ವೆಚ್ಚದಲ್ಲಿ ಶೇಕಡ 62ರಷ್ಟಾಗಿದ್ದು ಬಡವರು ಹಾಗೂ ಮಧ್ಯಮ ವರ್ಗಗಳ ಜನರ ಮೇಲೆ ಭಾರೀ ಹೊರೆಯಾಗಿದೆ.

ದೇಶ ಅಭೂತಪೂರ್ವ ಕೊವಿಡ್ ಸವಾಲನ್ನು ಎದುರಿಸಿದ್ದು ಇಂಥದ್ದೊಂದು ಆರೋಗ್ಯ ವ್ಯವಸ್ಥೆಯೊಂದಿಗೆ. ಇದುವರೆಗೆ ಕೊವಿಡ್  ಸೋಂಕಿನ ಪ್ರಕರಣಗಳಲ್ಲಿ ಭಾರತ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ, ಮತ್ತು ಕರೊನಾ ಸಾವಿನ ಪ್ರಮಾಣದಲ್ಲಿ ಮೂರನೇ ಸ್ಥಾನದಲ್ಲಿದೆ.

ವಿವಿಧ ರಾಜ್ಯಗಳಲ್ಲಿ ಕೊವಿಡ್ ಸಾಂಕ್ರಾಮಿಕತೆ ಶಿಖರಕ್ಕೇರಿದಾಗಲೆಲ್ಲ ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಂದ ಗಿಜಿಗುಟ್ಟಿದ್ದನ್ನು ನೋಡಿದ್ದೇವೆ. ಆರೋಗ್ಯ ಸಿಬ್ಬಂದಿಗೆ ಅಗತ್ಯವಾದ ಪಿಪಿಇ ಕಿಟ್‍ಗಳಿರಲಿಲ್ಲ, ಸೋಂಕಿತರ ಸಂಪರ್ಕ ಪತ್ತೆಗೆ ಪರಿಣಾಮಕಾರಿ ವ್ಯವಸ್ಥೆಯಿರಲಿಲ್ಲ. ವೈದ್ಯರು, ದಾದಿಯರು ಮತ್ತು ಇತರ ಸರ್ಕಾರಿ ಆಸ್ಪತ್ರೆಗಳಲ್ಲಿನ ಅರೆ-ವೈದ್ಯಕೀಯ  ಸಿಬ್ಬಂದಿಗಳ ಉತ್ತಮ ಪ್ರಯತ್ನಗಳ ಹೊರತಾಗಿಯೂ ಹಲವು ವೈಫಲ್ಯಗಳು ಎದ್ದು ಕಂಡವು.

ಕಳೆದ ಒಂದು ತಿಂಗಳಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಯುರೋಪ್ ನಲ್ಲಾದಂತೆ ಭಾರತದಲ್ಲೂ ಎರಡನೇ ಅಲೆ ಎದುರಾಗುವ ಭೀತಿ, ಅನುಮಾನ ಉಂಟಾಗಿದೆ.

ಸಾರ್ವಜನಿಕ ಆರೋಗ್ಯ ವಲಯವನ್ನು ನಿರ್ಲಕ್ಷಿಸಲಾಗಿದೆ ಎಂಬ ಕಟು ವಾಸ್ತವವನ್ನು ಒಪ್ಪಿಕೊಳ್ಳುವ ಹಾಗೂ ಅದಕ್ಕೆ ಪರಿಹಾರ ಹುಡುಕುವ ಬದಲು ಮೋದಿ ಸರ್ಕಾರ ಭಾರತದಲ್ಲಿ ವೈರಸ್‍ ಅನ್ನು ಭಾರತದಲ್ಲಿ ಹೇಗೆ ಪರಿಣಾಮಕಾರಿಯಾಗಿ ಎದುರಿಸಲಾಯಿತು ಎಂಬ  ಸ್ವಯಂ ಬೆನ್ನು ತಟ್ಟಿ ಕೊಳ್ಳುವ ಪ್ರಚಾರದಲ್ಲಿ ಮುಳುಗಿದೆ.

ವ್ಯಂಗ್ಯಚಿತ್ರ: ಮುಂಜುಲ್

ಆರೋಗ್ಯ ಬಜೆಟಿನಲ್ಲಿ ಕಡಿತ

ಸಾರ್ವಜನಿಕ ಆರೋಗ್ಯದ ಈ ಘೋರ ನಿರ್ಲಕ್ಷ್ಯವನ್ನು ಗುರುತಿಸಲು ಸರಕಾರ ನಿರಾಕರಿಸುತ್ತಿರುವುದು  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2021-22ನೇ ಸಾಲಿನ ಬಜೆಟ್‍ನಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದೆ. ಆದರೂ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಬಜೆಟ್ ಹಣ ನೀಡಿಕೆಯಲ್ಲಿ ಶೇಕಡ 137 ಹೆಚ್ಚಳವಾಗಿದೆ ಎಂಬ ಅಪ್ಪಟ ಮೋಸದ ದಾವೆಯನ್ನು ಅವರು ಮಾಡಿದ್ದಾರೆನ್ನುವುದು ಇನ್ನೂ ಕೊಳಕು ವಿಚಾರವಾಗಿದೆ. ಸತ್ಯದ ತಲೆ ಮೇಲೆ ಹೊಡೆಯುವಂಥ ಇಂಥ ಸುಳ್ಳಿಗೆ ಲೆಕ್ಕವೇ ಇಲ್ಲ ಈ ಸರ್ಕಾರದಲ್ಲಿ.

ಸರ್ಕಾರದ ಹೇಳಿಕೆ ಎಷ್ಟು ಪೊಳ್ಳು ಎಂಬುದನ್ನು ಬಜೆಟ್ ಭಾಷಣದೊಂದಿಗೆ ಒದಗಿಸಿರುವ  ಅಡಕಗಳಲ್ಲಿನ ಅಂಕೆ-ಸಂಖ್ಯೆಗಳೇ  ಸಾಬೀತುಪಡಿಸುತ್ತವೆ.

2020-21ನೇ ಸಾಲಿನ ಬಜೆಟ್ ಅಂದಾಜಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒಟ್ಟು 69,234 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಆಯುಷ್ ಸಚಿವಾಲಯ ಮತ್ತು ಆರೋಗ್ಯ ಸಂಶೋಧನಾ ಇಲಾಖೆಗೆ ಹಣ ನೀಡಿಕೆಗಳೂ ಅದರಲ್ಲಿ ಸೇರಿವೆ.

ಕೇವಲ ಕೈಚಳಕ

ಪರಿಷ್ಕೃತ ಅಂದಾಜಿನ ಪ್ರಕಾರ, 2020-21ರ ಈ ಬಾಬ್ತುಗಳಲ್ಲಿ ನಿಜವಾದ ಖರ್ಚು 85,250 ಕೋಟಿ ರೂಪಾಯಿ.

ಆದರೆ, 2021-22ನೇ ಸಾಲಿನ ಆಯವ್ಯಯ ಪತ್ರದಲ್ಲಿ ಈ ಬಾಬ್ತುಗಳಿಗೆ ನಿಗದಿ ಪಡಿಸಿರುವುದು  ಒಟ್ಟು 76,907 ಕೋಟಿ ರೂಪಾಯಿ.  ಅಂದರೆ, ಆರೋಗ್ಯ ಕ್ಷೇತ್ರಕ್ಕೆ ಕಳೆದ ವರ್ಷ ವೆಚ್ಚ ಮಾಡಿದ್ದಕ್ಕಿಂತ ಈ ಬಾರಿ ಶೇಕಡ 11ರಷ್ಟು ಹಣ ಕಡಿಮೆಯಾಗಿದೆ ಎಂದೇ ಇದರ ಅರ್ಥವಾಗಿದೆ.

“ಆರೋಗ್ಯ ಮತ್ತು ಯೋಗಕ್ಷೇಮಕ್ಕೆ’ 2,23,846 ಕೋಟಿ ರೂಪಾಯಿಗಳ ಭಾರೀ ಮೊತ್ತವನ್ನು ಒದಗಿಸಲಾಗಿದೆ ಎಂಬ ಅಬ್ಬರದ ಹೇಳಿಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮೋದಿ ಸರ್ಕಾರದ ಕೈಚಳಕ ಅನಾವರಣಗೊಳ್ಳುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಯುಷ್ ಹಾಗೂ ಆರೋಗ್ಯ ಸಂಶೋಧನಾ ವಲಯಕ್ಕೆ ಒದಗಿಸಿರುವ ಮೊತ್ತಗಳಿಗೆ ಕುಡಿಯುವ ನೀರು ಹಾಗೂ ನೈರ್ಮಲ್ಯದ 60,000 ಕೋಟಿ ರೂಪಾಯಿ ನೀಡಿಕೆಯನ್ನು ಕೂಡ ಸೇರಿಸಲಾಗಿದೆ. ಹಣಕಾಸು ಆಯೋಗವು ನೀರು ಮತ್ತು ನೈರ್ಮಲ್ಯಕ್ಕೆ ಒದಗಿಸಿದ 36,000 ಕೋಟಿ ರೂ. ಹಾಗೂ ಪೌಷ್ಟಿಕತೆಗೆ ಕೊಟ್ಟ 2,700 ಕೋಟಿ ರೂಪಾಯಿ ಅನುದಾನಗಳನ್ನು ಕೂಡ ಇದಕ್ಕೆ ಸೇರಿಸಿ ಗಾತ್ರವನ್ನು ಹಿಗ್ಗಿಸಿ ತೋರಿಸಲಾಗಿದೆ. ಪೌಷ್ಟಿಕತೆಗೆ ನಿಗದಿ ಮಾಡಿರುವ ಮೊತ್ತ ಕೂಡ ಕಳೆದ ವರ್ಷದ್ದಕ್ಕಿಂತ ಶೇಕಡ 30 ಕಡಿಮೆಯಾಗಿದೆ ಎನ್ನುವುದು ಗಮನಾರ್ಹ.

ಲಸಿಕೀಕರಣಕ್ಕೆ ಕೊಟ್ಟಿರುವ ಹಣ

ಇದಲ್ಲದೆ ಆರೋಗ್ಯ ಕ್ಷೇತ್ರಕ್ಕೆ ಹಣಕಾಸು ಆಯೋಗ ಕೊಡಬೇಕಿದ್ದ  13,192 ಕೋಟಿ ರೂಪಾಯಿ ಅನುದಾನ ಮತ್ತು ಲಸಿಕೆಗಳಿಗೆಂದೇ ಪ್ರತ್ಯೇಕವಾಗಿ ನಿಗದಿಪಡಿಸಿದ 35,000 ಕೋಟಿ ರೂಪಾಯಿಗಳು ಕೂಡ ಇದರಲ್ಲಿ ಸೇರ್ಪಡೆಯಾಗಿದೆ. ಸಾಗಾಟ, ಸಂಗ್ರಹ ಮತ್ತು ಲಸಿಕೆ  ಹಾಕಲು ಬಳಸುವ ಇತರ ವಸ್ತುಗಳ ವೆಚ್ಚವನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ ಈ ಹಣದಿಂದ ಸುಮಾರು 70 ಕೋಟಿ ಜನರಿಗೆ ಲಸಿಕೆ ಹಾಕಬಹುದಾಗಿದೆ. ಈ ಎಲ್ಲ ವೆಚ್ಚಗಳನ್ನು   ಸೇರಿಸಿದರೆ ಆ ಹಣದಲ್ಲಿ ಕೇವಲ 40 ಕೋಟಿ ಜನರಿಗೆ ಲಸಿಕೆ ಹಾಕಬಹುದು. ರಾಜ್ಯಗಳೊಂದಿಗೆ ವೆಚ್ಚವನ್ನು ಹೇಗೆ ಹಂಚಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಕೇಂದ್ರ ಸರ್ಕಾರದ ಧೋರಣೆ ಅಪಾರದರ್ಶಕವಾಗಿದೆ. ಏನೇ ಇರಲಿ, ಉಚಿತ ಸಾರ್ವತ್ರಿಕ ಲಸಿಕೀಕರಣಕ್ಕೆ ಸರ್ಕಾರ ಹಣ ತೆಗೆದಿರಿಸಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ.

“ಆತ್ಮನಿರ್ಭರ್ ಸ್ವಾಸ್ಥ್ಯ ಭಾರತ್ ಯೋಜನಾ” ಎಂಬ ಕೇಂದ್ರ ಪ್ರಾಯೋಜಿತ ಹೊಸ ಯೋಜನೆಯೊಂದನ್ನು ಪ್ರಕಟಿಸಿರುವುದು ಬಜೆಟ್‍ನಲ್ಲಿ ಆರೋಗ್ಯ ವಲಯದ ಮತ್ತೊಂದು  ಅಂಶವಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಬಜೆಟ್‍ಗೆ ಹೆಚ್ಚುವರಿಯಾಗಿ ಮುಂದಿನ ಆರು ವರ್ಷಗಳಲ್ಲಿ 64,180 ಕೋಟಿ ರೂಪಾಯಿ ವೆಚ್ಚ ಮಾಡುವುದು ಈ ಯೋಜನೆಯ ಗುರಿಯಾಗಿದೆ. ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಮಟ್ಟಗಳ ಆರೋಗ್ಯ ವ್ಯವಸ್ಥೆಗಳ ಸಾಮಥ್ರ್ಯವನ್ನು ಬೆಳೆಸುವುದು, ವೈದ್ಯಕೀಯ, ಸಂಶೋಧನೆ, ಪ್ರಯೋಗಾಲಯಗಳು ಮತ್ತಿತರ ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. .

ಆದರೆ, ಈ ಯೋಜನೆಗಾಗಿ ಬಜೆಟ್‍ನಲ್ಲಿ ಪ್ರತ್ಯೇಕವಾಗಿ ಹಣ ನೀಡಿಕೆ ಮಾಡಿಲ್ಲ. ಇದೊಂದು ಕೇವಲ ಘೋಷಣೆಯಾಗಿದ್ದು ಪ್ರಸಕ್ತ ಹಣಕಾಸು ವರ್ಷದಲ್ಲಂತೂ ಅದರ ಅನುಷ್ಠಾನದ ಮಾತಿಲ್ಲ.

ಖಾಸಗೀಕರಣದ ಮಂತ್ರ

ಎಲ್ಲ ಸಮಸ್ಯೆಗಳಿಗೆ ಖಾಸಗೀಕರಣವೇ ಮದ್ದು ಎಂಬ ಆಳವಾದ ನಂಬಿಕೆಯೇ ಸಾರ್ವಜನಿಕ ಆರೋಗ್ಯ ಕ್ಷೇತ್ರ ಕುರಿತ ಈ ನಿರ್ದಯ ಧೋರಣೆಗೆ ಕಾರಣವಾಗಿದೆ. ಸಾರ್ವಜನಿಕ ಕ್ಷೇತ್ರದ ಉದ್ಯಮಗಳು ಮತ್ತು ಹಣಕಾಸು ಸಂಸ್ಥೆಗಳ ಭಾರೀ ಪ್ರಮಾಣದಲ್ಲಿ ಖಾಸಗೀಕರಣವನ್ನು ಹೆಚ್ಚಿಸುವ ಬಜೆಟ್‍ನ ದೃಷ್ಟಿಕೋನವೇ ಆರೋಗ್ಯ ಕ್ಷೇತ್ರದ ವಿಚಾರದಲ್ಲೂ ಢಾಳಾಗಿ ಕಂಡು ಬರುತ್ತದೆ.

ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ವೆಚ್ಚವನ್ನು ಜಿಡಿಪಿಯ ಶೇಕಡ 1 ರಿಂದ ಶೇ. 2.5-3ರವರೆಗೆ ಏರಿಸಬೇಕೆಂದು ಆರ್ಥಿಕ ಸಮೀಕ್ಷೆ ಸಲಹೆ ಮಾಡಿತ್ತು. ಆದರೆ ಕೇಂದ್ರ ಸರ್ಕಾರದ ಆರೋಗ್ಯ ಬಜೆಟ್ ನೀಡಿಕೆ ಈ ನಿಟ್ಟಿನಲ್ಲಿ ಒಂದು ಪ್ರತಿಗಾಮಿ ಹೆಜ್ಜೆಯಾಗಿದೆ.

ಸಾರ್ವಜನಿಕ ಆರೋಗ್ಯವನ್ನು ಜನರ ಪ್ರಶ್ನೆಯನ್ನಾಗಿ ಮಾಡಬೇಕಾದುದುರ ಅಗತ್ಯದತ್ತ ಈ ಆರೋಗ್ಯ ಬಜೆಟ್ ಬೆಳಕು ಚೆಲ್ಲುತ್ತದೆ. ಎಲ್ಲ ಪ್ರಜಾಪ್ರಭುತ್ವವಾದಿ ರಾಜಕೀಯ ಶಕ್ತಿಗಳು ತಮ್ಮ ರಾಜಕೀಯ ಅಜೆಂಡಾದಲ್ಲಿ ಇದಕ್ಕೆ ಆದ್ಯತೆ ನೀಡಬೇಕು.

       ಅನು: ವಿಶ್ವ

ಕೈಚಳಕದ ವಿವರ

ಸಚಿವಾಲಯ/ಇಲಾಖೆ ಸಚಿವಾಲಯ/ಇಲಾಖೆ 2020-21ರ            2021-22ರ
ಬಜೆಟ್‍ನಲ್ಲಿ      ಬಜೆಟ್‍ನಲ್ಲಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ 65,012                    71,269
ಆರೋಗ್ಯ ಸಂಶೋಧನೆ                2,100                        2,663
ಆಯುಷ್ ಸಚಿವಾಲಯ 2,122                       2,970

 

                  ಒಟ್ಟು                                    69,234                    76,902

ಕೊವಿಡ್‍ಸಂಬಂಧಿತ ವಿಶೇಷ ಹಂಚಿಕೆ                          

ಕುಡಿಯುವ ನೀರು ಮತ್ತು ನೈರ್ಮಲ್ಯ

21,518                 60,030

 

ಪೌಷ್ಟಿಕತೆ 3,700                        2,700

ಒಟ್ಟು                                                    94,452                 1,39,632

ಲಸಿಕೀಕರಣ                                                       35,000
ನೀರು ಮತ್ತು ನೈರ್ಮಲ್ಯಕ್ಕೆ ಹಣಕಾಸು

ಅಯೋಗದ ಅನುದಾನ

                                                       36,022
ಆರೋಗ್ಯಕ್ಕೆ ಹಣಕಾಸು ಅಯೋಗದ ಅನುದಾನ                                                       13,192

 ಒಟ್ಟು                                                       94,452                 2,23,846

  1. ಜಾಗತಿಕವಾಗಿ ಆರೋಗ್ಯ ಲೆಕ್ಕಾಚಾರದ ವಿಧಾನ (ಎಸ್.ಹೆಚ್.ಎ.)ದ ಚೌಕಟ್ಟಿನ ಪ್ರಕಾರ ಪೌಷ್ಟಿಕತೆ, ನೀರು ಪೂರೈಕೆ ಮತ್ತು ನೈರ್ಮಲ್ಯವನ್ನು ಆರೋಗ್ಯಪಾಲನೆ ವೆಚ್ಚ ಎಂದು ಪರಿಗಣಿಸಲಾಗುವುದಿಲ್ಲ. ಭಾರತದಲ್ಲೂ ಇದುವರೆಗಿನ ಹಣಕಾಸು ಮಂತ್ರಿಗಳೂ ಇದೇ ವಿಧಾನವನ್ನು ಬಳಸುತ್ತ ಬಂದಿದ್ದಾರೆ.  ಆ ಪ್ರಕಾರ ಆರೋಗ್ಯವೆಚ್ಚದಲ್ಲಿ ಆಗಿರುವ ಹೆಚ್ಚಳ ಕೇವಲ 11%. *ವಾಸ್ತವವಾಗಿ 2020-21ರ ಪರಿಷ್ಕೃತ ಅಂದಾಜು 82928 ಕೋಟಿ ರೂ. ಇದಕ್ಕೆ ಹೋಲಿಸಿದರೆ ಆರೋಗ್ಯದ ಬಾಬ್ತಿಗೆ ಬಜೆಟ್‍ ನೀಡಿಕೆಯಲ್ಲಿ  7% ಕಡಿತವೇ ಆಗಿದೆ.
  2. ಈ ಬಜೆಟಿನಲ್ಲಿ ಪೌಷ್ಟಿಕತೆ, ನೀರು ಪೂರೈಕೆ ಮತ್ತು ನೈರ್ಮಲ್ಯವನ್ನು ಸೇರಿಸಿದ್ದಲ್ಲದೆ ಲಸಿಕೀಕರಣದ ವೆಚ್ಚ ರೂ.35,000 ಕೋಟಿ , ಜತೆಗೆ ಹಣಕಾಸು ಆಯೋಗದ ಅನುದಾನಗಳನ್ನೂ (ಒಟ್ಟು 49,212 ಕೋಟಿ) ಸೇರಿಸಲಾಗಿದೆ. ವಾಸ್ತವವಾಗಿ ಇದು ಕೇಂದ್ರ ಸರಕಾರದ ವೆಚ್ಚ ಎಂದು ಪರಿಗಣಿಸಲ್ಪಡುವುದಿಲ್ಲ.
  3. ಇವನ್ನು ಬಿಟ್ಟರೆ ಹೆಚ್ಚಳದ ಪ್ರಮಾಣ 48% ಆಗುತ್ತದೆ. ಇದರಲ್ಲಿಯೂ ಬಹುಪಾಲು ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ನೀಡಿದ ಸುಮಾರು 39,000 ಕೋಟಿ ರೂ. ಅಂದರೆ 179% ಹೆಚ್ಚಳವೇ.

     4.  ಪೌಷ್ಟಿಕತೆಗೆ 27% ಇಳಿಕೆಯಾಗಿರುವುದನ್ನು  ಇಲ್ಲಿ  ಗಮನಿಸಬಹುದು.

 

Donate Janashakthi Media

Leave a Reply

Your email address will not be published. Required fields are marked *