ಶ್ರೀಲಂಕಾ ಹಿಂದೆಂದೂ ಕಾಣದ ಆರ್ಥಿಕ ಪತನವನ್ನು ಎದುರಿಸುತ್ತಿದೆ. ವಿದ್ಯುತ್ ಉತ್ಪಾದಿಸುವ ಘಟಕಗಳಿಗೆ ಇಂಧನವಿಲ್ಲ. ಹೀಗಾಗಿ ಸದಾ ಪವರ್ ಕಟ್. ಕೈಗಾರಿಕೆಗಳು ಒಂದೊಂದಾಗಿ ಬಾಗಿಲು ಹಾಕುತ್ತಿವೆ. ಅಲ್ಲಿನ ಸೆಂಟ್ರಲ್ ಬ್ಯಾಂಕ್ ದೇಶದ ನಗದಿನ ಕೈಬಿಟ್ಟಿದೆ. ಹೀಗಾಗಿ ಹಣದುಬ್ಬರ ಗಗನಕ್ಕೇರಿದೆ. ಆಹಾರ, ಪಾನೀಯ ಎಲ್ಲವೂ ಬಡವರ ಕೈಗೆಟುಕದಷ್ಟು ತುಟ್ಟಿಯಾಗಿವೆ. ಬ್ರೆಡ್, ಹಾಲಿಗೆ ಎರಡೆರಡು ಮೈಲುಗಳ ಕ್ಯೂಗಳು ನಿಂತಿವೆ. ಪೆಟ್ರೋಲ್, ಡೀಸೆಲ್ಗಳ ಪೂರೈಕೆ ಕಡಿಮೆಯಾಗಿದ್ದು, ಬಂಕ್ಗಳಲ್ಲಿ ಕಿಲೋಮೀಟರ್ಗಟ್ಟಲೆ ಉದ್ದದ ಸರತಿ ಸಾಲು ಕಾಣುತ್ತಿದೆ. ಬೇಸತ್ತ ಜನ ಗಲಭೆ ಎಬ್ಬಿಸಿದ್ದರಿಂದ, ಅವರನ್ನು ನಿಯಂತ್ರಿಸಲು ಪೆಟ್ರೋಲ್ ಬಂಕ್ಗಳಲ್ಲಿ ಮಿಲಿಟರಿ ನಿಯೋಜಿಸಲಾಗಿದೆ. ಅಕ್ಕಿಯ ಬೆಲೆ ಕಿಲೋ ಒಂದಕ್ಕೆ 500 ಶ್ರೀಲಂಕಾ ರೂಪಾಯಿ, 400 ಗ್ರಾಮ್ ಹಾಲಿನಪುಡಿಯ ದರ 790 ರೂ., ಒಂದು ಕಿಲೋ ಸಕ್ಕರೆಯ ಬೆಲೆ 290 ರೂ. ತಲುಪಿವೆ.
ಇದನ್ನೂ ಓದಿ : ಶ್ರೀಲಂಕಾದಲ್ಲಿ ಹೆಚ್ಚಿದ ಆರ್ಥಿಕ ಬಿಕ್ಕಟ್ಟು : ಪೆಟ್ರೋಲ್ ದರ 254 ರೂ, 1 ಪೌಂಡ್ ಬ್ರೆಡ್ ಬೆಲೆ 130 ರೂ
ಬಿಗಡಾಯಿಸಿದ ಸಾಲದ ಪರಿಸ್ಥಿತಿ
2020 ಮತ್ತು 2021ರಲ್ಲಿ ಕೋವಿಡ್ ಸಾಂಕ್ರಾಮಿಕದ ಪರಿಣಾಮ ಪ್ರವಾಸೋದ್ಯಮ ಸಂಪೂರ್ಣ ನಿಂತುಹೋಯಿತು. ಟೂರಿಸಂ ಶ್ರೀಲಂಕಾದ ಪ್ರಮುಖ ವಿದೇಶಿ ವಿನಿಮಯ ಗಳಿಕೆಯ ಮೂಲಗಳಲ್ಲಿ ಒಂದು. ಹೀಗಾಗಿ ಇದು ಮೊದಲೇ ಕೆಟ್ಟಿದ್ದ ದೇಶದ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಕಂಗೆಡಿಸಿತು. ಶ್ರೀಲಂಕಾವು ಪೆಟ್ರೋಲಿಯಂ, ಆಹಾರ, ಕಾಗದ, ಸಕ್ಕರೆ, ಬೇಳೆಕಾಳು, ಔಷಧಗಳು ಮತ್ತು ಸಾರಿಗೆ ಉಪಕರಣಗಳಂತಹ ಅಗತ್ಯ ವಸ್ತುಗಳಿಗೆ ಆಮದು ಮೇಲೆ ಹೆಚ್ಚು ಅವಲಂಬಿತವಾಗಿದೆ. ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ನ ವಿದೇಶಿ ವಿನಿಮಯ ಸಂಗ್ರಹ ಈಗ ಸುಮಾರು 230 ಕೋಟಿ ಡಾಲರ್ಗೆ (17,536 ಕೋಟಿ ರೂಪಾಯಿ) ಕ್ಷೀಣಿಸಿದೆ. ಇದು ಒಂದು ವರ್ಷದ ಹಿಂದೆ ಇದ್ದುದರ ಅರ್ಧದಷ್ಟು. ದೇಶದಲ್ಲಿ ಈಗ ಆಮದು ಸಾಮಗ್ರಿಗೆ ಹಣ ಪಾವತಿಸಲು ಅಥವಾ ಬಾಹ್ಯ ಸಾಲವನ್ನು ಪಾವತಿಸಲು ಹಣವಿಲ್ಲ. ದೇಶ ಈ ವರ್ಷ 700 ಕೋಟಿ ಡಾಲರ್ಗಿಂತ ಹೆಚ್ಚು ಹೊರಗಿನ ಸಾಲವನ್ನು ಮರುಪಾವತಿ ಮಾಡಬೇಕಿದೆ. ಮುದ್ರಣ ಕಾಗದದ ತೀವ್ರ ಕೊರತೆಯಿಂದಾಗಿ ಕಳೆದ ವಾರಾಂತ್ಯದಲ್ಲಿ ನಿಗದಿಯಾಗಿದ್ದ ಶಾಲಾ ಪರೀಕ್ಷೆಗಳನ್ನು ಸರಕಾರ ರದ್ದುಗೊಳಿಸಬೇಕಾಯಿತು. ದೇಶದ ಏಕೈಕ ಇಂಧನ ಸಂಸ್ಕರಣಾಗಾರದಲ್ಲಿ ಕಚ್ಚಾ ತೈಲ ಖಾಲಿಯಾಗಿದೆ. ಅಡುಗೆ ಅನಿಲದ ಅಲಭ್ಯತೆಯಿಂದಾಗಿ ದೇಶಾದ್ಯಂತ ಸುಮಾರು 1,000 ಬೇಕರಿಗಳು ಮುಚ್ಚಲ್ಪಟ್ಟಿವೆ. ಕೆಲವು ಸೀಮೆಎಣ್ಣೆಯಲ್ಲಿ ನಡೆಯುತ್ತಿವೆ. ಫೆಬ್ರವರಿಯಲ್ಲಿ ಗ್ರಾಹಕ ಮಾರುಕಟ್ಟೆ ಬೆಲೆಗಳು ಶೇ. 15ರಷ್ಟು ಏರಿಕೆಯಾಗಿವೆ.
ಭಾರತ, ಚೀನಾ ಸೇರಿದಂತೆ ಕೆಲ ದೇಶಗಳು ಶ್ರೀಲಂಕಾಕ್ಕೆ ಈ ಸಮಸ್ಯೆಯಿಂದ ಹೊರಬರಲು ನೆರವು ಮತ್ತು ಸಾಲದ ಸೌಲಭ್ಯ ಒದಗಿಸಿದೆ. ಆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಆತಂಕವಿದೆ. ಪೇಪರ್ ದೊರೆಯದೆ ಶಾಲೆಗಳು ಪರೀಕ್ಷೆ ನಡೆಯುತ್ತಿಲ್ಲ. ಊಟವಿಲ್ಲದೆ ಜನ ಸಂಕಷ್ಟ ಪಡುತ್ತಿದ್ದಾರೆ. ವಿದೇಶ ನೇರಬಂಡವಾಳದ ಹೂಡಿಕೆ, ವಾಪಸ್ಸ ಪಡೆಯುವಿಕೆ ಹಾಗೂ ಲಂಕಾ ಸರಕಾರದ ನೀತಿಗಳೇ ಕಾರಣ ಎಂದು ಪ್ರತಿಭಟನೆಗಳು ನಡೆಯುತ್ತಿವೆ.