ಕೇರಳದ ತ್ರಿಶೂರಿನಲ್ಲಿ ಸ್ಫೂರ್ತಿದಾಯಕವಾಗಿ ನಡೆದ ಎಐಕೆಎಸ್ 35ನೇ ರಾಷ್ಟ್ರ ಸಮ್ಮೇಳನ

ಎಚ್.ಆರ್. ನವೀನ್ ಕುಮಾರ್, ಹಾಸನ

ಭಾರತದಲ್ಲಿ 1 ಕೋಟಿ 37 ಲಕ್ಷ ರೈತರ ಸದಸ್ಯತ್ವವನ್ನು ಹೊಂದಿರುವ ದೇಶದ ಅತಿ ದೊಡ್ಡ ರೈತ ಸಂಘಟನೆ ʻಅಖಿಲ ಭಾರತ ಕಿಸಾನ್ ಸಭಾʼ ಎಐಕೆಎಸ್ ನ 35ನೇ ರಾಷ್ಟ್ರ ಸಮ್ಮೇಳನವು 2022 ಡಿಸೆಂಬರ್ 13 ರಿಂದ 16 ವರೆಗೆ ಕೇರಳದ ಸಾಂಸ್ಕೃತಿಕ ರಾಜಧಾನಿ ತ್ರಿಶೂರಿನಲ್ಲಿ  ಕೆ.ವರದರಾಜನ್‌ ರವರ ನಗರದಲ್ಲಿ ಯಶಸ್ವಿಯಾಗಿ ನಡೆಯಿತು. ದೆಹಲಿಯ ಗಡಿಗಳಲ್ಲಿ ನಡೆದ ಐತಿಹಾಸಿಕ ರೈತ ಚಳುವಳಿಯ ಯಶಸ್ವಿಯ ನಂತರ ಈ ರೈತ ಸಮ್ಮೇಳನ ಸೇರುತ್ತಿರುವುದು ಮಹತ್ತರವಾಗಿದೆ. ಮಾತ್ರವಲ್ಲ, ಈ ಚಳುವಳಿಯನ್ನು ಯಶಸ್ವಿಗೊಳಿಸಲು ಶ್ರಮಿಸಿದ ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಎಐಕೆಎಸ್ ತನ್ನ ಅನುಭವದ ಭುತ್ತಿಯನ್ನು ಹೊತ್ತು ತಂದಿದೆ.

 

ಎಐಕೆಎಸ್‌ ನ ಅಖಿಲ ಭಾರತ ಅಧ್ಯಕ್ಷರಾದ ಡಾ. ಅಶೋಕ್ ದವಳೆ ಯವರು ಕಿಸಾನ್ ಸಭಾದ ಕೆಂಬಾವುಟವನ್ನು ಹಾರಿಸುವ ಮೂಲಕ ಸಮ್ಮೇಳನಕ್ಕೆ ಅಧಿಕೃತ ಚಾಲನೆ ನೀಡಿದರು. ನಂತರ ಈ ಅವಧಿಯಲ್ಲಿ ಸಮಾಜಕ್ಕಾಗಿ ದುಡಿದು ಅಗಲಿದ ಹುತಾತ್ಮರಿಗೆ ಮತ್ತು ಗಣ್ಯರಿಗೆ ನಮಿಸಲಾಯಿತು. ಸಮ್ಮೇಳನದ ಉಧ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ಮಾತುಗಳನ್ನಾಡಿದ ಡಾ. ಅಶೋಕ್ ದವಳೆಯವರು ಈ ನಡುವೆ ಕೋವಿಡ್‌ನಿಂದಾಗಿ ಸುಮಾರು 64 ಕೋಟಿಯಷ್ಟು ಜನ ತೊಂದರೆಗೊಳಗಾಗಿದ್ದಾರೆ, ಸುಮಾರು 66 ಲಕ್ಷ ಜನ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಜಾಗತಿಕವಾಗಿ ಕೋವಿಡ್‌ಗೆ ಲಸಿಕೆಯನ್ನು ವಿತರಿಸುವಲ್ಲಿ ವಿಪರೀತ ತಾರತಮ್ಯವನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಕೋವಿಡನ್ನು ನಿಯಂತ್ರಿಸುವಲ್ಲಿ ಮತ್ತು ಸಂಕಷ್ಟದಲ್ಲಿರುವ ಜನತೆಯನ್ನು ರಕ್ಷಿಸುವಲ್ಲಿ ಸಮಾಜವಾದಿ ರಾಷ್ಟ್ರಗಳು ಮತ್ತು ಬಂಡವಾಳಶಾಹಿ ರಾಷ್ಟ್ರಗಳ ನಡುವಿನ ವ್ಯತ್ಯಾಸ ಜಗಜ್ಜಾಹಿರಾಗಿದ್ದು, ಮತ್ತೊಮ್ಮೆ ಸಮಾಜವಾಧಿ ರಾಷ್ಟ್ರಗಳು ಜನಪರವಾಗಿಯೂ ಬಂಡವಾಳಶಾಹಿ ರಾಷ್ಟ್ರಗಳು ಜನವಿರೋಧಿಯಾಗಿಯೂ ಕೆಲಸ ಮಾಡಿರುವುದು ಸ್ಪಷ್ಟವಾಗಿ ಗೋಚರಿಸಿದೆ.

ಜಾಗತಿಕ ಹವಾಮಾನ ಬದಲಾವಣೆಗಳಿಂದಾಗಿ ವಾತಾವರಣದಲ್ಲಿ ವಿಪರೀತ ಬದಲಾವಣೆಗಳು ಸಂಭವಿಸಿ ಕೃಷಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಒಂದೆಡೆ ಜನರು ಸಂಕಷ್ಟದಲ್ಲಿರುವಾಗ ಭಾರತದಲ್ಲಿ ಅದಾನಿಯಂತಹ ಉದ್ಯಮಿಪತಿಗಳು ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಈ ವೈರುದ್ಯವನ್ನು ನಾವುಗಳು ಅರ್ಥಮಾಡಿಕೊಳ್ಳಲು ಸಾಧ್ಯವಾಗಬೇಕು. ಇದಕ್ಕೆ ಮುಖ್ಯವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಉದಾರವಾದಿ ಆರ್ಥಿಕ ನೀತಿಗಳೇ ಕಾರಣ ಎಂದರು.

ಇದನ್ನು ಓದಿ: ಡಿ.13-16 : ಕೇರಳದ ತ್ರಿಶೂರ್‌ ನಲ್ಲಿ ಎಐಕೆಎಸ್‌ ಅಖಿಲ ಭಾರತ ಸಮ್ಮೇಳನ

ಹಿಸಾರ್‌ನಲ್ಲಿ ನಡೆದ 34ನೇ ಅಖಿಲ ಭಾರತ ಸಮ್ಮೇಳನದ ನಂತರ ಕಳೆದ 5 ವರ್ಷಗಳ ಅವಧಿಯಲ್ಲಿನ ದೇಶದ ಕೃಷಿ ಬಿಕ್ಕಟ್ಟು, ರೈತರ ಸಮಸ್ಯೆಗಳು, ಇದಕ್ಕೆ ಕಾರಣವಾಗಿರುವ ಆಳುವ ಸರ್ಕಾರಗಳ ನೀತಿಗಳ ಕುರಿತು ವಿವಿರವಾಗಿ ಚರ್ಚಿಸಲು ಅನುಕೂಲವಾಗುವಂತೆ ಲಿಖಿತ ಕರಡು ವರದಿಯನ್ನು ಸಮ್ಮೇಳನದ ಮುಂದೆ ಎಐಕೆಎಸ್‌ನ ಪ್ರಧಾನ ಕಾರ್ಯದರ್ಶಿ ಹನ್ನನ್ ಮುಲ್ಲಾ ಮಂಡಿಸಿದರು. ಈ ವರದಿಯ ಮೇಲೆ 29 ರಾಜ್ಯಗಳನ್ನು ಪ್ರತಿನಿಧಿಸಿ 62 ಜನ ಪ್ರತಿನಿಧಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.

ಸಮ್ಮೇಳನದ ಮುಂದೆ ಮಂಡಿಸಲಾಗಿದ್ದ ಕರಡು ವರದಿ ಮತ್ತು ಪ್ರತಿನಿಧಿಗಳ ಚರ್ಚೆಯಲ್ಲಿ ಬಂದ ಪ್ರಮುಖ ಅಂಶಗಳೆಂದರೆ, ಕಳೆದ ಸಮ್ಮೇಳನದ ನಂತರದ 5 ವರ್ಷಗಳ ಈ ಅವಧಿಯಲ್ಲಿರುವ ನರೇಂದ್ರ ಮೋದಿಯವರ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರವಾಗಿದೆ. ಸ್ವಾತಂತ್ರ್ಯದ ನಂತರ ಸಂಸತ್ತಿನ ಮೇಲೆ, ಸಂವಿಧಾನದ ಮೇಲೆ, ಶಿಕ್ಷಣ ಕ್ಷೇತ್ರದ ಮೇಲೆ, ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಗಳು ಹೆಚ್ಚಾಗಿವೆ. ಕಾರ್ಪೊರೇಟ್ ಮತ್ತು ಕೋಮುವಾದಿ ಸಖ್ಯತೆಯ ಸರ್ಕಾರವನ್ನು ಆರ್‌ಎಸ್‌ಎಸ್ ನಿಯಂತ್ರಿಸುತ್ತಿದೆ.

ದೇಶದ ಆರ್ಥಿಕತೆ ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿದ್ದು ಕಳೆದ 45 ವರ್ಷಗಳಲ್ಲಿ ಇಲ್ಲದಷ್ಟು ನಿರುದ್ಯೋಗ ಈ ಅವಧಿಯಲ್ಲಿ ಹೆಚ್ಚಳವಾಗಿದೆ. ಒಂದೆಡೆ ಬೆಲೆ ಏರಿಕೆ ಮತ್ತೊಂದೆಡೆ ಆದಾಯದಲ್ಲಿ ಕುಸಿತ, ಬಡತನ ಹೆಚ್ಚಳ, ಭಾರತದ ಹಸಿವಿನ ಸೂಚ್ಯಾಂಕದಲ್ಲಿ ಏರಿಕೆ ಕಂಡುಬಂದಿದೆ. ದೇಶದ ಸಾರ್ವಜನಿಕ ಸಂಪತ್ತನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಎಲ್ಲಾ ನೀತಿಗಳು ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿ, ಅದಾನಿ ಮತ್ತು ಅಂಬಾನಿ ಕಂಪನಿಗಳಿಗೆ ಲೂಟಿ ಹೊಡೆಯಲು ಅವಕಾಶ ಕಲ್ಪಿಸಿ ಕೊಡುವುದರ ಜೊತೆಗೆ, ದೇಶದ ಸಂಪತ್ತನ್ನ ದಾರೆಯೆರೆಯಲಾಗುತ್ತಿದೆ.

ಇದನ್ನು ಓದಿ: ಬೇಡಿಕೆ ಈಡೇರಿಕೆಯ ಉಲ್ಲಂಘನೆ: ದೇಶದಾದ್ಯಂತ ನವೆಂಬರ್ 26ರಿಂದ ರಾಜಭವನಗಳಿಗೆ ರೈತರ ಮೆರವಣಿಗೆ

ಈ ಅವಧಿಯಲ್ಲಿ ನವಉದಾರೀಕರಣ ನೀತಿಗಳ ಜಾರಿ ಅತ್ಯಂತ ರಭಸದಿಂದ ಸಾಗಿದ್ದು ಇದರ ಪರಿಣಾಮವನ್ನು ಕೃಷಿ ಕ್ಷೇತ್ರ ನೇರವಾಗಿ ಅನುಭವಿಸುತ್ತಿದೆ. ಕೃಷಿಯು ಲಾಭದಾಯಕ ಕ್ಷೇತ್ರವಾಗಿ ಉಳಿದಿಲ್ಲ, ಸರ್ಕಾರ ಕೃಷಿ ಕ್ಷೇತ್ರದ ಮೇಲಿನ ಸಬ್ಸಿಡಿಗಳನ್ನು ಕಡಿತಗೊಳಿಸುವ ಮೂಲಕ ತನ್ನ ವೆಚ್ಚವನ್ನ ಕಡಿಮೆ ಮಾಡಿಕೊಂಡಿದೆ ಇದರಿಂದಾಗಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಬೆಲೆಗಳು ಗಗನಕ್ಕೇರಿ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಮತ್ತೊಂದೆಡೆ ವಿಶ್ವಬ್ಯಾಂಕ್ ಮತ್ತು ವಿಶ್ವ ವ್ಯಾಪಾರ ಸಂಗಟನೆಗಳೊಂದಿಗಿನ ಒಪ್ಪಂದದಿಂದಾಗಿ ನೂರಾರು ಕೃಷಿ ಉತ್ಪನ್ನಗಳು ಸಲೀಸಾಗಿ ಗಡಿದಾಟಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿ ಅತ್ಯಂತ ಕಡಿಮೆ ಬೆಲೆಗೆ ತಮ್ಮ ಕೃಷಿ ಉತ್ಪನ್ನಗಳನ್ನು ಬಿಕರಿ ಮಾಡುತ್ತಿವೆ. ಇದರಿಂದ ಭಾರತದ ರೈತರ ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆಯೂ ಇಲ್ಲದೆ, ಸರಿಯಾದ ಬೆಲೆಯೂ ಸಿಗದೆ, ಮಾಡಿದ ಸಾಲವನ್ನೂ ತೀರಿಸಲಾಗದ ರೈತ ಆತ್ಯಹತ್ಯೆಗೆ ಶರಣಾಗುತ್ತಿದ್ದಾನೆ.

ರೈತರ ಕೈಯಿಂದ ಕೃಷಿ ಭೂಮಿಯನ್ನು ಕಿತ್ತು ಕಾರ್ಪೊರೇಟ್‌ಗಳಿಗೆ ವರ್ಗಾಯಿಸಲಾಗುತ್ತಿದೆ. ಇದರಿಂದ ದಿನದಿಂದ ದಿನಕ್ಕೆ ಭಾರತದಲ್ಲಿ ಭೂರಹಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇವುಗಳಿಗೆ ಪೂರಕವಾಗಲೆಂದೇ ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಕಾರ್ಪೊರೇಟೀಕರಣಗೊಳಿಸಬೇಕೆನ್ನುವ ಉದ್ದೇಶದಿಂದಲೇ ಮೋದಿ ಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಪ್ರಯತ್ನಿಸಿತು. ದೇಶದಲ್ಲಿ ಸುಮಾರು 66 ಲಕ್ಷ ಆದಿವಾಸಿಗಳು ತಮ್ಮ ಭೂಮಿಯ ಹಕ್ಕಿಗಾಗಿ ಕಾಯುತ್ತಿದ್ದಾರೆ.

ಇದನ್ನು ಓದಿ: ಮತ್ತೆ ರೈತರಿಗೆ ಕೇಂದ್ರ ಸರ್ಕಾರದ ಎಂಎಸ್‍ಪಿ ವಂಚನೆ – ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಎಐಕೆಎಸ್ ಕರೆ

ಜಗತ್ತಿನ ಗಮನ ಸೆಳೆದ, ಅತ್ಯಂತ ಸ್ಪೂರ್ತಿದಾಯಕ 384 ದಿನಗಳ ಕಾಲ ದೆಹಲಿಯ ಗಡಿಗಳಲ್ಲಿ ನಡೆದ ರೈತ ಚಳುವಳಿಯಿಂದಾಗಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರೂ ರೈತರ ಇನ್ನೂ ಪ್ರಮುಖ ಪ್ರಶ್ನೆಗಳು ಹಾಗೆಯೇ ಉಳಿದಿವೆ. ಅದರಲ್ಲಿ ಬಹಳ ಮುಖ್ಯವಾದದ್ದು ಕನಿಷ್ಟ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸುವ ಕಾನೂನನ್ನು ಮಾಡುವುದು. ಇದಕ್ಕಾಗಿ ದೇಶಾದ್ಯಂತ ರೈತ ಚಳುವಳಿಯನ್ನು ಸ್ವತಂತ್ಯವಾಗಿ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ಮುಂದುವರೆಸಬೇಕಾಗಿದೆ.

ಕೃಷಿ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೇರಳದ ಎಡರಂಗ ಸರ್ಕಾರದ ನೀತಿಗಳು ಮತ್ತು ಅದರ ಕೆಲಸ ಮಾದರಿಯಾಗಿವೆ. ಕೇರಳದಲ್ಲಿ ಕೃಷಿ ಉತ್ಪನ್ನಗಳಿಗೆ ನೀಡುತ್ತಿರುವ ಬೆಂಬಲ ಬೆಲೆ, ಇಲ್ಲಿನ ಪಡಿತರ ವ್ಯವಸ್ಥೆಯಲ್ಲಿ ನೀಡುತ್ತಿರುವ ಅಗತ್ಯ ವಸ್ತುಗಳು, ಕಾರ್ಮಿಕರಿಗೆ ಮತ್ತು ಕೂಲಿಕಾರರಿಗೆ ದೇಶದಲ್ಲೇ ಅತಿ ಹೆಚ್ಚು ಕೂಲಿ ನಿಗದಿಪಡಿಸಿರುವುದು, ಭತ್ತ ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ನೀಡುತ್ತಿರುವ ಪ್ರೋತ್ಸಾಹ ರೈತರನ್ನು ಆತ್ಮಹತ್ಯೆಯ ದಾರಿಯಿಂದ ವಾಪಸು ಕರೆತಂದು ಕೃಷಿಯನ್ನು ಲಾಭದಾಯಕವನ್ನಾಗಿ ಪರಿವರ್ತಿಸುತ್ತಿದೆ. ಈ ರೀತಿಯ ಜನಪರ ಮಾದರಿಗಳೇ ನಮ್ಮ ಮುಂದಿರುವ ಪರ್ಯಯಗಳು ಎಂದು ಸಮ್ಮೇಳನ ಅಭಿಪ್ರಾಯಪಟ್ಟಿದೆ.

ಇದರ ಜೊತೆಗೆ ಚಳುವಳಿಗಳು ಮತ್ತು ಸಂಘಟನಾ ಬೆಳವಣಿಗೆಗಳ ಕುರಿತು ಚರ್ಚಿಸಿದ ಸಮ್ಮೇಳನವು ದೇಶದ ಜನತೆ ಮತ್ತು ಕೃಷಿ ಕ್ಷೇತ್ರದ ಮುಂದಿರುವ ಸವಾಲುಗಳನ್ನು ಎದುರಿಸಿ ಜನಪರ ನೀತಿಗಳು ಜಾರಿಯಾಗಬೇಕಾದರೆ ಅದಕ್ಕಾಗಿ ಸ್ವತಂತ್ರ್ಯ ಚಳುವಳಿಯನ್ನು ಬಲಗೊಳಿಸುವ ಜೊತೆಗೆ ವಿಷಯಾಧಾರಿತವಾಗಿ ಜಂಟಿ ಚಳುವಳಿಯನ್ನು ಸಂಘಟಿಸಬೇಕಾದ ತುರ್ತು ಅಗತ್ಯವಿದೆ. ಈ ಅವಧಿಯಲ್ಲಿ ಈ ಕೆಲಸ ಅತ್ಯುತ್ತಮವಾಗಿ ಮೂಡಿಬಂದಿದೆ. ಮೊದಲ ಹಂತದಲ್ಲಿ ಸುಮಾರು 50 ಸಂಘಟನೆಗಳನ್ನು ಒಳಗೊಂಡ ʻʻಭೂಮಿ ಅಧಿಕಾರ್ ಆಂದೋಲನʼʼ ವೇದಿಕೆಯ ನೇತೃತ್ವದಲ್ಲಿ ರೈತರ ಭೂಮಿಯನ್ನು ಕಬಳಿಸುವ ಕರಾಳ ಭೂಸ್ವಾಧೀನ ಕಾಯ್ದೆಯ ವಿರುದ್ದ ದೇಶಾದ್ಯಂತ ನಿರಂತರ ಚಳುವಳಿಯನ್ನು ನಡೆಸಲಾಗಿದೆ. ನಂತರ ಎರಡನೇ ಹಂತದಲ್ಲಿ ಸುಮಾರು 250 ಕ್ಕೂ ಹೆಚ್ಚು ಸಂಘಟನೆಗಳನ್ನು ಒಳಗೊಂಡು ʻಅಖಿಲ ಭರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿʼ ರಚಿಸಿ ಕೇಂದ್ರ ರಾಜ್ಯ ಸರ್ಕಾರಗಳ ಕೃಷಿ ನೀತಿಗಳ ವಿರುದ್ದ ಹೋರಾಟಗಳನ್ನು ರೂಪಿಸಲಾಗಿದೆ. ಅಂತಿಮವಾಗಿ ಮೋದಿ ಸರ್ಕಾರ ಜಾರಿಗೆ ತರಲು ಮುಂದಾದ ಮೂರು ಕರಾಳ ಕೃಷಿ ಕಾಯ್ದೆಗಳ ವಿರುದ್ದ ಸುಮಾರು 500ಕ್ಕೂ ಹೆಚ್ಚು ರೈತ, ಕಾರ್ಮಿಕ, ಕೂಲಿಕಾರ ಸಂಘಟನೆಗಳನ್ನು ಒಳಗೊಂಡ ವಿಶಾಲ ವೇದಿಗೆ ʻಸಂಯುಕ್ತ ಕಿಸಾನ್ ಮೋರ್ಚಾʼ ರಚಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸುಧೀರ್ಘವಾಗಿ ಮತ್ತು ಯಶಸ್ವಿಯಾಗಿ ಮಾದರಿ ರೈತ ಚಳುವಳಿಗೆ ಎಸ್‌ಕೆಎಂ ನಾಯಕತ್ವ ನೀಡಿದೆ.

ಇದನ್ನು ಓದಿ: ದೇಶದ ರೈತ ಬಾಂಧವರಿಗೆ ಪ್ರಧಾನಿ ನೀಡಿದ ಭರವಸೆ ಇನ್ನೂ ಈಡೇರಿಲ್ಲ: ಸಂಯುಕ್ತ ಕಿಸಾನ ಮೋರ್ಚಾ

ಈ ಅನುಭವಗಳ ಆಧಾರದಲ್ಲಿ ಒಂದೆಡೆ ಸ್ವತಂತ್ರ ಶಕ್ತಿಯನ್ನು ವಿಸ್ತರಿಸಿ ಕ್ರೋಢೀಕರಿಸುತ್ತಾ, ಮತ್ತೊಂದೆಡೆ ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ರೈತ ಚಳುವಳಿಯನ್ನು ಬಲಗೊಳಿಸುತ್ತಾ ಭಾರತದ ರೈತಾಪಿ ಕೃಷಿಯನ್ನು ಉಳಿಸಲು ಮೋದಿ ಸರ್ಕಾರದ ಕಾರ್ಪೊರೇಟ್ ಪರ ನೀತಿಗಳನ್ನು ಹಿಮ್ಮೆಟ್ಟಿಸುವುದೇ ನಮ್ಮ ಮುಂದಿರುವ ಅತಿ ದೊಡ್ಡ ಸವಾಲು ಎಂದು ಅಖಿಲ ಭಾರತ ಕಿಸಾನ್ ಸಭಾದ 35 ನೇ ಸಮ್ಮೇಳನ ಅಭಿಪ್ರಾಯಪಟ್ಟಿತು.

ಸಮ್ಮೇಳನದ ಎರಡನೇ ದಿನ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖ ಭಾಗಿದಾರ ಸಂಘಟನೆಗಳ ವಿಶೇಷ ಅಧಿವೇಶನವನ್ನು ಸಂಘಟಿಸಲಾಗಿತ್ತು. ಇದರಲ್ಲಿ ಭಾರತೀಯ ಕಿಸಾನ್ ಯೂನಿಯನ್‌ನ ರಾಕೇಶ್ ಟಿಕಾಯತ್, ಅಖಿಲ ಭಾರತ ಕಿಸಾನ್ ಸಭಾದ ಅತುಲ್ ಅಂಜನ್ ಮತ್ತು ಅಖಿಲ ಭಾರತ ಕಿಸಾನ್ ಮುಜ್ದೂರ್ ಸಂಘದ ರಾಜಾರಾಮ್ ಸಿಂಗ್ ಜೊತೆಗೆ ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನ್ನನ್ ಮುಲ್ಲಾ ಮತ್ತು ರಾಷ್ಟ್ರೀಯ ಅಧ್ಯಕ್ಷರಾದ ಡಾ. ಅಶೋಕ್ ದವಳೆಯವರು ಉಪಸ್ಥಿತರಿದ್ದರು. ಈ ವಿಶೇಷ ಅಧಿವೇಶನದಲ್ಲಿ ದೆಹಲಿ ರೈತ ಚಳುವಳಿಯ ಅನುಭವಗಳು ಮತ್ತು ಧೀರ್ಘಾವಧಿ ಹೋರಾಟವನ್ನು ಕಟ್ಟಿದ ರೀತಿ ಜೊತಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ನಿರ್ಣಾಯಕ ಹೋರಾಟಗಳನ್ನು ಕಟ್ಟುವುದರ ಜೊತೆಗೆ ಜಂಟಿ ವಿಷಯಾಧಾರಿತವಾದ ಜಂಟಿ ಚಳುವಳಿಯನ್ನು ದೇಶದಲ್ಲಿ ಎಲ್ಲಾ ಹಂತಗಳಲ್ಲೂ ಬಲಗೊಳಿಸಬೇಕೆಂದು ಅಭಿಪ್ರಾಯಪಟ್ಟರು. ವೇದಿಕೆಯ ಮೇಲೆ ವಿವಿಧ ಸಂಘಟನೆಗಳನ್ನು ಪ್ರತಿನಿಧಿಸಿದ ಎಸ್‌ಕೆಎಂನ ನಾಯಕತ್ವ ಪರಸ್ಪರ ಕೈಹಿಡಿದು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತಿದ್ದರೆ ದೆಹಲಿಯ ಐತಿಹಾಸಿಕ ರೈತ ಚಳುವಳಿ ಕಣ್ಮುಂದೆ ಬಂದದ್ದು ಮಾತ್ರವಲ್ಲ ದೇಶದ ಕೃಷಿ ಮತ್ತು ರೈತರನ್ನು ಉಳಿಸಲು ಸಂಯುಕ್ತ ಕಿಸಾನ್ ಮೋರ್ಚಾದ ಅಗತ್ಯವನ್ನು ಸಾರಿ ಸಾರಿ ಹೇಳುವಂತಿತ್ತು.

ಸಮ್ಮೇಳನದ ಮೂರನೇ ದಿನ ಭಾಗವಹಿಸಿದ್ದ 756 ಪ್ರತಿನಿಧಿಗಳನ್ನು ಮೂರು ತಂಡಗಳಾಗಿ ವಿಭಾಗಿಸಿ 1. ಗ್ರಾಮೀಣ ಭಾರತದಲ್ಲಿ ಬೆಳೆದು ಬರುತ್ತಿರುವ ಭೂಮಿಯ ಪ್ರಶ್ನೆಗಳ ಕುರಿತು  2. ಕನಿಷ್ಟ ಬೆಂಬಲ ಬೆಲೆಯನ್ನು ಶಾಸನಬದ್ಧವಾಗಿ ಖಾತ್ರಿಗೊಳಿಸುವ ಕುರಿತು  3. ಕೃಷಿ ಕ್ಷೇತ್ರದ ಮೇಲೆ ಕಾರ್ಪೊರೇಟ್ ಮತ್ತು ಹಣಕಾಸು ಬಂಡವಾಳದ ಪ್ರಭಾವದ ಕುರಿತು ಒಟ್ಟು ಮೂರು ಆಯೋಗಗಳನ್ನು ರಚಿಸಿ ಪತ್ಯೇಕವಾಗಿ ಲಿಖಿತ ಟಿಪ್ಪಣಿಯ ಆಧಾರದಲ್ಲಿ ಚರ್ಚೆಗಳನ್ನು ನಡೆಸಲಾಗಿದೆ. ಸಮ್ಮೇಳನದಲ್ಲಿ ಒಟ್ಟು 15 ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಇದನ್ನು ಓದಿ: ಚಳುವಳಿ ಜೊತೆಗೆ ಸಹಕಾರಿ ಕೃಷಿ ಮಾತ್ರವೇ ರೈತರನ್ನು ಉಳಿಸಲು ಸಾಧ್ಯ – ಕೃಷ್ಣಪ್ರಸಾದ್

ಸಮ್ಮೇಳನವು ಅಂತಿಮವಾಗಿ 149 ಜನರ ಅಖಿಲ ಭಾರತ ಕಿಸಾನ್ ಕೌನ್ಸಿಲ್, 77 ಜನರ ಸೆಂಟ್ರಲ್ ಕಿಸಾನ್ ಕಮಿಟಿ, 21 ಜನರ ಪಧಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಖಿಲ ಭಾರತ ಕಿಸಾನ್ ಸಭಾದ ನೂತನ ಅಧ್ಯಕ್ಷರಾಗಿ ಡಾ.ಅಶೋಕ್ ದವಳೆಯವರು ಪುನರಾಯ್ಕೆಯಾದರು,  ವಿಜೂ ಕೃಷ್ಣನ್ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು  ಪಿ.ಕೃಷ್ಣ ಪ್ರಸಾದ್ ಹಣಕಾಸು ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷರಾದ  ಜಿ.ಸಿ. ಬಯ್ಯಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ  ಟಿ.ಯಶವಂತ ಸಿಕೆಸಿಗೆ ಮತ್ತು ರಾಜ್ಯ ಉಪಾಧ್ಯಕ್ಷರಾದ  ಜಿ.ನಾಗರಾಜ ಮತ್ತು ರಾಜ್ಯ ಜಂಟಿ ಕಾರ್ಯದರ್ಶಿ ಎಚ್.ಆರ್.ನವೀನ್‌ಕುಮಾರ್ ಎಐಕೆಸಿಗೆ ಆಯ್ಕೆಯಾದರು.

ಹಲವು ಧಿರೋದ್ಧಾತ ರೈತ ಚಳುವಳಿಯನ್ನು ನಡೆಸಿರುವ ಮತ್ತು ಪ್ರಜಾಸತ್ತಾತ್ಮಕ ಚಳುವಳಿ ಬಲವಾಗಿರುವ ಕೇರಳದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರ ಸಮ್ಮೇಳನ ನಡೆಯುತ್ತದೆ ಎಂದು ನಿರ್ಧಾರವಾದಾಗಲೇ ದೇಶಾದ್ಯಂತ ನಿರೀಕ್ಷೆಗಳು ಹೆಚ್ಚಾಗಿದ್ದವು. ಅದರಂತೆ ತ್ರಿಶೂರು ಜಿಲ್ಲೆಯ ಸ್ಥಳೀಯ ಸ್ವಾಗತ ಸಮಿತಿಯು ನಾಲ್ಕು ದಿನಗಳ ಈ ಮಹತ್ವದ ರೈತ ಸಮ್ಮೇಳನವನ್ನು ಯಾವುದೇ ಕುಂದು ಕೊರತೆಗಳು ಬಾರದಂತೆ ಮಾತ್ರವಲ್ಲ, ಕಿಸಾನ್ ಸಭಾವನ್ನು ದೇಶಾದ್ಯಂತ ಬಲಿಷ್ಟವಾಗಿ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಸ್ಫೂರ್ತಿ ನೀಡುವಂತೆ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ್ದರು. ಸಮ್ಮೇಳನದ ಅಂಗವಾಗಿ ವಿವಿಧ ವಿಷಯಗಳ ಮೇಲೆ 18ಕ್ಕೂ ಹೆಚ್ಚು ವಿಚಾರ ಸಂಕಿರಣಗಳು, ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ರಾಜ್ಯದ ರೈತರನ್ನು ಮತ್ತು ಎಲ್ಲ ವಿಭಾಗದ ಜನರನ್ನು ಇದರಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗವಹಿಸುವ ರೀತಿಯಲ್ಲಿ ಮಾಡಲಾಗಿತ್ತು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಸಮ್ಮೇಳನದ ಕೊನೆಯ ದಿನ ಸುಮಾರು 25 ಸಾವಿರಕ್ಕೂ ಹೆಚ್ಚು ರೈತರ ಬೃಹತ್ ಬಹಿರಂಗಸಭೆಯನ್ನು ತ್ರಿಶೂರಿನಲ್ಲಿ ಏರ್ಪಡಿಸಲಾಗಿತ್ತು. ಈ ಬಹಿರಂಗ ಸಭೆಯನ್ನು ಉದ್ಘಾಟಿಸಿ ಕೇರಳ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿದರು.

Donate Janashakthi Media

Leave a Reply

Your email address will not be published. Required fields are marked *