ಉಡುಪಿ: ‘ಸಮುದಾಯ ಕರ್ನಾಟಕ’ದ 8ನೇ ರಾಜ್ಯ ಸಮ್ಮೇಳನ ಡಿಸೆಂಬರ್ 16 ಮತ್ತು 17ರ ಶನಿವಾರ ಮತ್ತು ಭಾನುವಾರ ಜಿಲ್ಲೆಯ ಕುಂದಾಪುರದದಲ್ಲಿ ನಡೆಯಿತು. ಈ ವೇಳೆ ಸಾಂಸ್ಕೃತಿಕ ಸಂಘಟನೆಯ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದು, ಸಮ್ಮೇಳನವು ಯಶಸ್ವಿಯಾಗಿ ಸಮಾರೋಪಗೊಂಡಿತು. ಸಮ್ಮೇಳನದ ಮೊದಲನೇ ದಿನವಾದ ಶನಿವಾರ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಆಡಿದ ಪ್ರಾಸ್ತವಾವಿಕ ಭಾಷಣದ ಲಿಖಿತ ರೂಪ ಇಲ್ಲಿದೆ.
“ಸಮುದಾಯದ ಕರ್ನಾಟಕದ ಎಂಟನೇ ರಾಜ್ಯಸಮ್ಮೇಳನಕ್ಕೆ ನಾಡಿನ ಎಲ್ಲ ಕಡೆಗಳಿಂದ ಆಗಮಿಸಿರುವ ತಮ್ಮೆಲ್ಲರನ್ನೂ ನಾನು ಸಮ್ಮೇಳನದ ಸ್ವಾಗತ ಸಮಿತಿಯ ಪರವಾಗಿ ಪ್ರೀತಿಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ” ರಾಜಾರಾಂ ತಲ್ಲೂರು
“ಘನತೆಯ ಬದುಕು: ಸಾಂಸ್ಕೃತಿಕ ಮಧ್ಯಪ್ರವೇಶ” ಎಂಬ ಶೀರ್ಷಿಕೆಯಡಿ ಈ ಸಮ್ಮೇಳನ ನಡೆಯುತ್ತಿದೆ. ಈ ಎರಡೂ ದಿನಗಳ ಸಮ್ಮೇಳನ ಸುಸೂತ್ರವಾಗಲಿ ಮತ್ತು ಸಮುದಾಯದ ಮುಂದಿನ ದಿನಗಳ ಚಟುವಟಿಕೆಗಳಿಗೆ ಈ ಸಮ್ಮೇಳನ ಹೊಸ ಚೈತನ್ಯ ತುಂಬಲಿ. ಕರಾವಳಿ ತೀರದ ಈ ಐತಿಹಾಸಿಕ ಪಟ್ಟಣ ಕುಂದಾಪುರದಲ್ಲಿ ನಿಮ್ಮ ಎರಡು ದಿನಗಳ ವಾಸ್ತವ್ಯ ನೆನಪಿನಲ್ಲಿ ಉಳಿಯುವಂತಾಗಲಿ ಅಂತ ಆಶಿಸುತ್ತೇನೆ. ಕಾರ್ಯಕ್ರಮಕ್ಕೆ ಬಂದಿರುವ ಅತಿಥಿಗಳು, ಆಸಕ್ತರು ಮತ್ತು ಮಾಧ್ಯಮದವರಿಗೆ ಕೂಡ ಸ್ವಾಗತ.
ಇದನ್ನೂ ಓದಿ: ಬೆಂಗಳೂರು ಚಿತ್ರೋತ್ಸವಕ್ಕೆ ಸೂಕ್ತ ಶಾಶ್ವತ ರೂಪ ನೀಡಿ – ರಾಜ್ಯ ಸರ್ಕಾರಕ್ಕೆ ‘ಸಮುದಾಯ ಕರ್ನಾಟಕ’ ಒತ್ತಾಯ
ಸಮ್ಮೇಳನಕ್ಕೆ ಪ್ರವೇಶಿಕೆಯ ರೂಪದಲ್ಲಿ ನನ್ನ ಸ್ವಾಗತದ ಮಾತುಗಳು ಇರಬೇಕು ಎಂದು ನನಗೆ ಸೂಚಿಸಿದ್ದಾರೆ.
ನಾನು ನನ್ನ ಮಾತುಗಳನ್ನು ಸ್ವಲ್ಪ ಹಳೆಯ ಕಥೆಯಿಂದ ಆರಂಭ ಮಾಡುತ್ತೇನೆ. ಕರಾವಳಿಯ “ಘನತೆಯ ಬದುಕಿನ ಬಯಕೆ” ಎಲ್ಲಿಂದ ಹೊರಟಿತು, ನಾವಿವತ್ತು ಎಲ್ಲಿಗೆ ಬಂದು ತಲುಪಿದ್ದೇವೆ ಎನ್ನುವ ಚರಿತ್ರೆಯನ್ನು ನಾವು ಈಗ ನೆನಪು ಮಾಡಿಕೊಳ್ಳಬೇಕಾಗಿದೆ. ನಾವು ಎಲ್ಲಿಂದ ಹೊರಟೆವು, ಅಲ್ಲಿಂದ ವೃತ್ತಾಕಾರವಾಗಿ ಒಂದು ಸುತ್ತು ಪೂರ್ಣಗೊಳಿಸಿ, ಹೇಗೆ ಹೊರಟಲ್ಲಿಗೇ ವಾಪಸ್ ತಲುಪುತ್ತಿದ್ದೇವೆ ಎಂಬ ಸಂಗತಿ ನಮಗೆ ಗೊತ್ತಾಗಬೇಕಾಗಿದೆ. ರಾಜಾರಾಂ ತಲ್ಲೂರು
ಘನತೆಯ ಬದುಕು ಏನು? ಅದರ ಮಹತ್ವ ಏನು ಎನ್ನುವುದು ಕರಾವಳಿಯವರಿಗೆ ಹೊಸದಲ್ಲ.
ಚಾರಿತ್ರಿಕವಾಗಿ ಉದ್ದಾನುದ್ದಕ್ಕೂ ಕರಾವಳಿಯು ಪ್ರಭುತ್ವದಿಂದ ದೂರವೇ ಇದ್ದ ಭೂಪ್ರದೇಶ.
ಬ್ರಿಟಿಷ್ ಆಳ್ವಿಕೆಯ ಕಾಲದಲ್ಲೂ ಅತ್ತ ಮದರಾಸು ಪ್ರಾಂತ್ಯ; ಇತ್ತ ಮುಂಬಯಿ ಪ್ರಾಂತ್ಯಗಳೆರಡರಿಂದಲೂ ನಾವು ದೂರ. ಈ ದೂರದ ಕಾರಣದಿಂದಾಗಿಯೇ ಹೆಚ್ಚಿನಂಶ ಕರಾವಳಿಗೆ ಒಂದು “ಎಂಟರ್‌ಪ್ರೈಸಿಂಗ್” ಗುಣ ಬೆಳೆದುಕೊಂಡು ಬಂದಿದೆ. 1960ರ ದಶಕದಲ್ಲಿ ಭೂಸುಧಾರಣಾ ಕಾಯಿದೆ ಬರುವುದಕ್ಕೆ ಮೊದಲೆ ಇಲ್ಲಿನ ಜನ ತಮ್ಮ ಶಿಕ್ಷಣ ಮತ್ತು ಎಂಟರ್‌ಪ್ರೈಸಿಂಗ್ ಸಾಮರ್ಥ್ಯದ ಬಲದಿಂದ ಮುಂಬಯಿಯತ್ತ, ಬೆಂಗಳೂರಿನತ್ತ ಮುಖ ಮಾಡಿದ್ದರು. ಭೂ ಮಾಲಕರ, ಒಡೆಯರ, ಜಮೀನ್ದಾರರ ಬಿಗಿ ಹಿಡಿತದ ಅನುಭವ ಆದವರು ತಮ್ಮ ಮಕ್ಕಳನ್ನು ದೂರ ಕಳಿಸಿ, ಲೋಟೆ ತೊಳೆದಾದರೂ ಬದುಕಿಕೊಳ್ಳಿ. ಗುಲಾಮಗಿರಿ ನಮ್ಮ ಕಾಲಕ್ಕೆ ಸಾಕು ಎಂದು ಉಸಿರು ಬಿಗಿಹಿಡಿದು ಕಳುಹಿಸಿಕೊಟ್ಟಿದ್ದರು.
ಅನ್ನ ವಿಕ್ರಯ ಪಾಪದ ಕೆಲಸ ಅನ್ನುವ ನಂಬಿಕೆ ಇದ್ದ ಆ ಕಾಲದಿಂದ, ಘನತೆಯ ಬದುಕನ್ನು ಹುಡುಕಿಕೊಳ್ಳುವ ತೀವ್ರತೆ ಎಷ್ಟು ಬದಲಾವಣೆ ತಂದಿತೆಂದರೆ ಜಗತ್ತಿನಾದ್ಯಂತ ಉಡುಪಿ ಹೊಟೇಲುಗಳು ತೆರೆದುಕೊಂಡವು. ಕರಾವಳಿಯ ಬ್ಯಾಂಕುಗಳು ದೇಶದಾದ್ಯಂತ ಸದ್ದು ಮಾಡತೊಡಗಿದವು.
ಹಾಗಾಗಿ, ಅಂದಿನ ಕರಾವಳಿ, “ಮನಿ ಆರ್ಡರ್ ಆರ್ಥಿಕತೆ” ಅಂತ ಕರೆಸಿಕೊಳ್ತಾ ಇತ್ತು. ಕ್ರಮೇಣ ಉದಾರೀಕರಣಗೊಂಡ ಜಗತ್ತು ಸಣ್ಣದಾಗುತ್ತಾ ಹೋದಂತೆ ಗಲ್ಫು, ಅಮೆರಿಕ, ಯುರೋಪುಗಳು ಕರಾವಳಿಗರ ವಲಸೆ ಜಾಗಗಳ ಪಟ್ಟಿಯಲ್ಲಿ ಸೇರಿಕೊಳ್ಳತೊಡಗಿದವು. ರಾಜಾರಾಂ ತಲ್ಲೂರು
ಇದನ್ನೂ ಓದಿ: ಸಮುದಾಯ ರಾಜ್ಯ ಸಮ್ಮೇಳನ | ಸಂವಿಧಾನವೇ ನಮಗೆ ರಾಷ್ಟ್ರೀಯತೆ – ಪುರುಷೋತ್ತಮ ಬಿಳಿಮಲೆ
ಕೂಡು ಕುಟುಂಬಗಳು ಇದ್ದಾಗ ಸುಖದ್ದೋ – ಕಷ್ಟದ್ದೋ… ಒಟ್ಟಿನಲ್ಲಿ ಒಗ್ಗಟ್ಟಿನ ಬಲದ ಬದುಕು ಬದುಕುವುದು ಆವತ್ತು ಸಾಧ್ಯ ಆಗುತ್ತಿತ್ತು. ಆದರೆ ಕಳೆದ 60-70 ವರ್ಷಗಳಲ್ಲಿ ನಿಧಾನಕ್ಕೆ ಮನಿಆರ್ಡರ್ ಆರ್ಥಿಕತೆ ತಂದಿತ್ತ ಹೊಸ ಆರ್ಥಿಕ ಬಲವು ಒದಗಿಸಿ ಕೊಟ್ಟ ಅತಿಯಾದ ಸ್ವಾವಲಂಬನೆ, ಆರತಿಗೊಂದು – ಕೀರುತಿಗೊಂದು ಎಂಬ ಘೋಷಣೆಯಡಿ ಬಂದ ಕುಟುಂಬ ಯೋಜನೆ ಹಾಗೂ ಭೂಸುಧಾರಣೆಯ ಮೂಲಕ ದೊರೆತ ಭೂಮಿಯಲ್ಲಾದ ವಿಘಟನೆ – ಅದರ ಫಲವಾದ ಆಸ್ತಿ ಮತ್ತು ಕೌಟುಂಬಿಕ ಪಾಲುಪಟ್ಟಿಗಳು ಕರಾವಳಿಯ ಚಹರೆಯನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ,ಸಾಂಸ್ಕೃತಿಕವಾಗಿ ಬದಲಾಯಿಸುತ್ತಾ ಬಂದಿವೆ.
ಇಂತಹ ಬದಲಾವಣೆಗಳ ಒಟ್ಟು ಪರಿಣಾಮ ಏನಾಗಿದೆ ಎಂದರೆ, ಈವತ್ತು ಕರಾವಳಿ ಉದ್ದಾನುದ್ದಕ್ಕೂ “ವೃದ್ಧಾಶ್ರಮ” ಆಗಿ ಏದುಸಿರು ಬಿಡುತ್ತಿದೆ. ಇಲ್ಲಿನ ಸಣ್ಣ ಸಂಸಾರ – ಸುಖೀ ಸಂಸಾರದ ಎಳೆಯರು ಈಗ ಜಗತ್ತಿನಾದ್ಯಂತ ಐಟಿ ಕೂಲಿಗಳಾಗಿ ವಲಸೆ ಹೋಗಿದ್ದಾರೆ. ಅಲ್ಲಿ ಬಿಲ್‌ಗೇಟ್ಸ್, ಎಲಾನ್ ಮಸ್ಕ್ ಅಥವಾ ಮಾರ್ಕ್‌ಜುಕರ್ ಬರ್ಗ್ ಅವರಂತಹ “ನವ ವರ್ಚುವಲ್ ಜಗತ್ತಿನ” ಮಾಲಿಕರ ಚಾಕರಿ ಮಾಡಿಕೊಂಡು, 45 ವರ್ಷ ಪ್ರಾಯಕ್ಕೆಲ್ಲ ವೃದ್ಧಾಪ್ಯಕ್ಕೆ ತಲುಪಿ ಬಿಡುವ ಗಡಿಬಿಡಿಯಲ್ಲಿದ್ದಾರೆ.
ಅಲ್ಲಿಗೆ ಹೋಗಲಾಗದಿದ್ದವರು, ಹೋದ ಅಣ್ಣನೋ, ತಮ್ಮನೋ, ಭಾವನೋ ಮನಿ ಆರ್ಡರ್ ಮಾಡಿ ಅಥವಾ ಈಗೀಗ ವೈರ್ ಮಾಡಿ ಕಳುಹಿಸಿದ ಕಾಸಿನಲ್ಲಿ, ಇಲ್ಲಿ ಊರಲ್ಲಿ ತಮ್ಮ ತಮ್ಮ ಧರ್ಮಗಳನ್ನು ರಕ್ಷಿಸಿಕೊಳ್ಳುವ ದರ್ದಿನಲ್ಲಿ ಮುಳುಗಿ ಹೋಗಿದ್ದಾರೆ. ದು ಎಷ್ಟ ವಿಕೋಪಕ್ಕೆ ಹೋಗಿದೆಯೆಂದರೆ, ಕರಾವಳಿಯ ಸಾಮಾಜಿಕ ಬದುಕು ಈಗ ದಿನ ಬೆಳಗಾದರೆ ಆತಂಕವನ್ನು ಎದುರು ನೋಡಬೇಕಾಗಿದೆ. ಉಣ್ಣುವ ಅನ್ನ, ಹಾಕುವ ಬಟ್ಟೆ, ಜೀವನೋಪಾಯದ ಕಸುಬು… ಎಲ್ಲವೂ ಸಾಮರಸ್ಯದ ಬದುಕಿಗೆ ಆತಂಕ ಆಗಬಹುದು ಎಂಬುದನ್ನು ನಾವು ಕಂಡುಕೊಂಡೀದ್ದೇವೆ. ಈ ಆತಂಕದ ನಡುವೆ ವಯಸ್ಕರು ಸಂಪೂರ್ಣವಾಗಿ ತಮ್ಮ ತಮ್ಮ ಮನೆಗಳನ್ನೇ ವೃದ್ಧಾಶ್ರಮ ಮಾಡಿಕೊಂಡು ತಮ್ಮ ಕೊನೆಯ ದಿನಕ್ಕಾಗಿ ಕಾಯುತ್ತಿದ್ದಾರೆ. ರಾಜಾರಾಂ ತಲ್ಲೂರು
ಆರ್ಥಿಕ ಸ್ವಾವಲಂಬನೆ ಮತ್ತು ಬೆಚ್ಚನೆಯ ಬದುಕು ನಮ್ಮನ್ನು ಎಷ್ಟು ತಣ್ಣಗೆ ಮಾಡಿಬಿಟ್ಟಿದೆ ಎಂದರೆ, ನಮ್ಮೆದುರೇ, ನಮಗೇ ಅನ್ಯಾಯ ಆದರೂ ಅದು ಯಾಕೆ ಎಂದು ಪ್ರಶ್ನಿಸುವ ಬದಲು “ಅದು ನಮಗ್ಯಾಕೆ, ಸುಮ್ಮನೇ ರಿಸ್ಕ್ ತಗೊಳ್ಳೋದು ಯಾಕೆ” ಎಂದು ನಮ್ಮೊಳಗೆ ನಾವೇ ಪ್ರಶ್ನಿಸಿಕೊಂಡು, ಇದ್ದಷ್ಟು ದಿನ ಆರಾಮವಾಗಿ ಕಳೆದು ಹೋಗಿಬಿಡುವ ಎಂಬ ವಾರ್ಧಕ್ಯದ, ವಾನಪ್ರಸ್ಥದ ವೈರಾಗ್ಯ ಪ್ರತಿಯೊಬ್ಬರಲ್ಲಿ ಮೂಡಿಕೊಂಡುಬಿಟ್ಟಿದೆ.
ಇದನ್ನೂ ಓದಿ: ಪ್ಯಾಲೆಸ್ತೀನ್ ಕಲಾವಿದರಿಗೆ ಬೆಂಬಲ | ಸಮುದಾಯ ಕರ್ನಾಟಕ 8 ನೇ ರಾಜ್ಯ ಸಮ್ಮೇಳನ ನಿರ್ಣಯ
ಈ ಚಿತ್ರಣವನ್ನು ನಾನು ನಿಮ್ಮ ಎದುರು ಬಿಡಿಸಿ, (ಬೇಕಿದ್ದರೆ ಸ್ವಲ್ಪ ಉಬ್ಬಿಸಿಯೇ ಅಂತ ಇಟ್ಟುಕೊಳ್ಳಿ.) ಹೇಳುತ್ತಿರುವುದಕ್ಕೆ ಕಾರಣ ಇದೆ.
60ರ ದಶಕದ ಮುನ್ನ ಇಲ್ಲಿ ಆರ್ಥಿಕವಾದಂತಹ, ಸಾಮಾಜಿಕವಾದಂತಹ ಅಸಮತೋಲನ ಕಣ್ಣಿಗೆ ರಾಚುವಷ್ಟಿತ್ತು. ಬೆರಳೆಣಿಕೆಯ ಕುಟುಂಬಗಳು ಭೂಮಾಲಕರಾಗಿದ್ದರು. ಭೂಮಿಯ ಹಕ್ಕು ಇಲ್ಲದಿದ್ದವರು ಒಡೆಯರ ಮನೆಯಲ್ಲಿ ಒಕ್ಕಲುಗಳಾಗಿ ಮೈಮುರಿದು ದುಡಿದು, ಅವರು ಕೊಟ್ಟದ್ದನ್ನು ಉಂಡು, ಒಡೆಯರ ಮನೆಯ ಚಾಕರಿಗೆ ಸಾಕಾಗುವಷ್ಟು ಚೈತನ್ಯ ಸಂಪಾದಿಸಿಕೊಳ್ಳುತ್ತಿದ್ದರು. ಒಡೆಯರದೇ ಭೂಮಿ, ಒಡೆಯರದೇ ಬೆಳೆ, ಅವರೇ ಕೊಟ್ಟ ಕೂಲಿ-ಕೊಚ್ಚು, ಅವರದೇ ಅನ್ನ, ಅವರದೇ ಚಾಕರಿ… ಇಂತಹ ಕೆಟ್ಟಸ್ಥಿತಿ ನಮ್ಮ ಮಕ್ಕಳಿಗೆ ಬರುವುದು ಬೇಡ ಎಂಬುದು ಆಗ ಜೀತದ ಬದುಕು ಅನುಭವಿಸಿದ್ದ ಎಲ್ಲರ ಆಸೆ ಆಗಿತ್ತು. ಆ ಸನ್ನಿವೇಶದಲ್ಲಿ ಹಂತ ಹಂತವಾಗಿ ಹುಟ್ಟಿಕೊಂಡ ಶಿಕ್ಷಣ-ಸಾಂಸ್ಕೃತಿಕ ಎಚ್ಚರಗಳ ಉದ್ದೇಶ ಇದ್ದದ್ದು ಸಾಮಾಜಿಕವಾಗಿ – ಆರ್ಥಿಕವಾಗಿ ಸಮಾನತೆ ತರುವುದಾಗಿತ್ತು.
ಈ 60 ವರ್ಷಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಎಚ್ಚರಗಳ ಕಾರಣದಿಂದಾಗಿ ಹಲವು ಸಾಮಾಜಿಕ ಪಲ್ಲಟಗಳು ಸಂಭವಿಸಿವೆ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸಮಾನತೆಯ, ಒಳಗೊಳ್ಳುವಿಕೆಯ ಕನಸು ಹೊತ್ತು 60-70 ವರ್ಷ ಸಾಗಿ ಬಂದಿರುವ ನಾವು, ಈಗ ಎಲ್ಲಿಗೆ ಬಂದು ತಲುಪಿದ್ದೇವೆ ಎನ್ನುವುದನ್ನು ಒಮ್ಮೆ ನಿಂತು ನೋಡಿಕೊಳ್ಳುವ ಸಮಯ ಬಂದಿದೆ. ಹಾಗಾಗಿ ನಾನು ಈ ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ರಾಜಾರಾಂ ತಲ್ಲೂರು
ಇಲ್ಲಿ ನಾನು ನಾಡಿನ ಕರಾವಳಿಯ, ನನ್ನ ಕಣ್ಣೆದುರು ನಡೆದಿರುವ ಸಂಗತಿಗಳನ್ನು ಮಾತ್ರ ನಿಮ್ಮೆದುರು ತೆರೆದಿಡುತ್ತಿದ್ದೇನೆ. ಆದರೆ ಇದು ಕೇವಲ ಕರಾವಳಿಯ ಕತೆ ಅಲ್ಲ. ಈ ನಾಡಿನ, ಈ ದೇಶದ ಕತೆ ಕೂಡ ಇದಕ್ಕಿಂತ ಭಿನ್ನ ಆಗಿಲ್ಲ.
ಹಾಗಾದ್ರೆ ಏನಾಗಿದೆ? ಒಂದು ಸಣ್ಣ ಪಟ್ಟಿಯನ್ನು ನಿಮ್ಮ ಮುಂದಿಡುತ್ತೇನೆ.
ಅಭಿವೃದ್ಧಿಯ ಹೆಸರಲ್ಲಿ, ಇಲ್ಲಿ ನಾವು ನಮಗೆ ಬೇಕೆಂದು ಕೇಳಿರದ, ನಮಗೆ ಖಂಡಿತಾ ಬೇಡದ ಮತ್ತು ಇಂತಹ ಜನಸಾಂದ್ರತೆಯ ಜಾಗಗಳಲ್ಲಿ ಹಾಕಬಾರದ ಕೈಗಾರಿಕೆಗಳು, ಉದ್ದಿಮೆಗಳನ್ನು ಇಲ್ಲಿ ತುಂಬಲಾಗಿದೆ. ಮೊದಮೊದಲು ಅವು ಬರುವಾಗ ಕರಾವಳಿಯ ಧಾರಣ ಸಾಮರ್ಥ್ಯ, ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರ ಅಂತೆಲ್ಲ ಚರ್ಚೆ ಆಗುತ್ತಿತ್ತು, ಮಾಧ್ಯಮಗಳೂ ಕರಾವಳಿಯ ಪರವಾಗಿ ನಿಂತಿದ್ದವು. ಆದರೆ ಈಗ ಆ ಉದ್ಯಮಗಳು ಇಲ್ಲಿ ವಾತಾವರಣಕ್ಕೆ ವಿಷ ಹರಿಸುತ್ತಿವೆ, ಜನ ಕ್ಯಾನ್ಸರ್, ಶ್ವಾಸಕೋಶ – ಚರ್ಮದ ತೊಂದರೆಗಳಿಂದ ಆರೋಗ್ಯ ಕೆಟ್ಟು, ನರಳಿ ಸಾಯುತ್ತಿದ್ದಾರೆ. ಇದೆಲ್ಲಾ ಆಗಿರುವುದು ಹೌದು ಎಂದು ಸ್ವತಃ ಸುಪ್ರೀಂಕೋರ್ಟಿನ ದರ್ಜೆಯ ಹಸಿರು ಪೀಠ (ಗ್ರೀನ್ ಟ್ರಿಬ್ಯೂನಲ್) ತಪ್ಪಿತಸ್ಥರಿಗೆ ದಂಡ ವಿಧಿಸಿದೆ. ಆದರೆ ಇನ್ನೂ ಯಾರೆಂದರೆ ಯಾರೂ ಮಾತನಾಡುತ್ತಿಲ್ಲ.
ಇದನ್ನೂ ಓದಿ: ಪತ್ರಿಕಾ ಹೇಳಿಕೆ, ಫ್ಯಾಕ್ಟ್‌ಚೆಕ್ ಮತ್ತು ಪೊಲೀಸ್ ದೂರಿನ ನಡುವೆಯು ಎಸ್‌ಎಫ್‌ಐ ಬಗ್ಗೆ ಸುಳ್ಳು ಪ್ರಕಟಿಸಿದ ಹೊಸದಿಗಂತ ಪತ್ರಿಕೆ!
ಬ್ಯಾಂಕಿಂಗಿನ ತೊಟ್ಟಿಲು, ಶಿಕ್ಷಣದ ಮೆಟ್ಟಿಲು, ಎಂದೆಲ್ಲ ಒಂದು ಕಾಲದಲ್ಲಿ ಪ್ರಭಾವಳಿ ಕಟ್ಟಿಕೊಂಡಿದ್ದ ಕರಾವಳಿಯ ಜನರು ಮೀನು ತಿಂದು ಚುರುಕು ಬುದ್ದಿಯವರೆಂದು ನಾಡು ನಮ್ಮನ್ನು ಇತ್ತೀಚೆಗಿನ ತನಕವೂ ಗುರುತಿಸುತ್ತಿತ್ತು. ಆದರೆ, ದುರದೃಷ್ಟ ವಶಾತ್ ಈವತ್ತು ನಮ್ಮ ಬ್ಯಾಂಕಿಂಗಿನ ತೊಟ್ಟಿಲು, ಶಿಕ್ಷಣದ ಮೆಟ್ಟಲು ಹೋಗಿ ಹೋಗಿ ಕರಾವಳಿ ಕಾರ್ಪೋರೇಟ್ ಬಿಳಿಯಾನೆಗಳ ಬಟ್ಟಲು ಆಗಿ ಕುಳಿತು ಬಿಟ್ಟಿದೆ.
- ಕರ್ನಾಟಕದ ಸುಮಾರು 300 ಕಿ.ಮೀ. ಕರಾವಳಿಯಲ್ಲಿ ಅರ್ಧಕ್ಕರ್ಧ ಭಾಗವನ್ನು ಡಿಫೆನ್ಸ್, ಬಂದರು, ಕ್ರೂಸ್, ಟೂರಿಸಂ, ಹೆಸರಿನ ಯೋಜನೆಗಳು ಆವರಿಸಿಕೊಂಡು ಬಿಟ್ಟಿವೆ. ಇಲ್ಲಿನ ಸಾಂಪ್ರದಾಯಿಕ ಮೀನುಗಾರರ ಜಾಗದಲ್ಲಿ ಟ್ರಾಲ್‌ಬೋಟುಗಳು, ಡೀಪ್ ಸೀ ಫಿಷಿಂಗ್ ಸಂಸ್ಥೆಗಳು, ಫಿಶ್ ಎಕ್ಸ್ ಪೋರ್ಟರುಗಳು ಬಂದು ಕುಳಿತಿದ್ದಾರೆ. ಎಷ್ಟು ಟನ್ ಮೀನು ಹಿಡಿದು, ಎಷ್ಟು ರಫ್ತಾಗಬೇಕೆಂಬುದು ದಿಲ್ಲಿಯಲ್ಲಿ ನಿರ್ಧಾರ ಆಗ್ತದೆ. ಇಲ್ಲಿ ಟಾರ್ಗೆಟ್ ತಲುಪುವುದು ಮಾತ್ರ ಕೆಲಸ. ಸಾಂಪ್ರದಾಯಿಕ ಮೀನುಗಾರರು ಬಿಡಿ, ಅವರನ್ನು ಬದಿಗೆ ತಳ್ಳಲಾಗಿದೆ. ನಾವು ಜನಸಾಮಾನ್ಯರು ಬೀಚ್‌ಗೆ ಹೋಗಿ ಸೂರ್ಯಾಸ್ತದ ಸೌಂದರ್ಯ ಆನಂದಿಸುವುದಕ್ಕೂ ಯಾವುದೋ ಕಲರಿನ ಫ್ಲ್ಯಾಗ್ ಬೀಚ್‌ನಲ್ಲಿ ದುಡ್ಡುಕೊಟ್ಟು ಒಳಗೆ ತೆರಳಿ, ಸಮಯ ಮುಗಿದ ತಕ್ಷಣ ಹೊರಗೆ ತಳ್ಳಿಸಿಕೊಳ್ಳುವ ಸನ್ನಿವೇಶಕ್ಕೆ ಹತ್ತಿರ ಆಗುತ್ತಿದ್ದೇವೆ.
- ಸಮುದ್ರ ತೀರದ್ದು ಆ ಕಥೆಯಾದರೆ, ಘಟ್ಟದ ಕೆಳಗಿನ ಉಳಿದ ಭಾಗಗಳು ಕಲ್ಲಿದ್ದಲು, ಸಿಮೆಂಟು, ಧಾನ್ಯಗಳ ದಾಸ್ತಾನಿಗೆ ಸಜ್ಜಾಗುತ್ತಿವೆ ಮತ್ತು ನಮ್ಮ ಹೊಳೆಗಳು ಸ್ಟೋರೇಜಿನಿಂದ ಬಂದರಿಗೆ ತಲುಪುವ ಜಲ ಹಾದಿಗೆ, ಅವರ ವಿದ್ಯುತ್ತಿಗೆ ಸಿದ್ಧಗೊಳ್ಳುತ್ತಿವೆ. ಕಡಲ ತಡಿಯಲ್ಲಿರುವ ನಮಗೆ ಒಂದು ದಶಕದಿಂದೀಚೆಗೆ, ಬೇಸಗೆಯಲ್ಲಿ ಕುಡಿಯಲು ಟ್ಯಾಂಕರಿನಲ್ಲಿ ಬಂದ ಚರಂಡಿ ನೀರೇ ಗತಿ. ಒಂದು ಜಿಲ್ಲೆ ಒಂದು ಕೈಗಾರಿಕೆ, ಒಂದು ಜಿಲ್ಲೆ ಒಂದು ಬೆಳೆ… ಎಂದೆಲ್ಲ ನಿಯಮಗಳು ಹೊರಡುತ್ತಿವೆ. ಒಟ್ಟಿನಲ್ಲಿ ನಮ್ಮದಾಗಿದ್ದ ನೆಲ, ಜಲ, ಆಕಾಶ ಮೂರೂ ನಮ್ಮ ಕೈ ತಪ್ಪಿ, ನವ ಕಾರ್ಪೋರೇಟ್ ಮಾಲಕ ವರ್ಗದ ಕೈಗೆ ಸೇರಿಕೊಳ್ಳುತ್ತಿವೆ. ನಮ್ಮ ನೆಲ-ಜಲ-ಆಕಾಶ ಯಾವುದರಲ್ಲಿ ಕೈ ಆಡಿಸುವುದಕ್ಕೂ ಈಗ ನಮ್ಮ ಮಾತು ಕೇಳಬೇಕಾಗಿಲ್ಲ.
- ಶಿಕ್ಷಣ ಮತ್ತು ಆರೋಗ್ಯ ಈಗ ಕಾಸುಕೊಟ್ಟರೆ ಮಾತ್ರ ಸಿಗುವ ವ್ಯಾಪಾರ ಆಗಿವೆ. ಎಚ್ಚರ ಕೊಡಬೇಕಾದ ಶಿಕ್ಷಣ ನಿದ್ದೆಹೋಗಿದೆ. ಬ್ಯಾಂಕಿಂಗಿನ ತೊಟ್ಟಿಲಿನಲ್ಲಿ ಈವತ್ತು ನಮ್ಮದೇ ಬ್ಯಾಂಕಿನ ಒಳಗೆ ಹೋದರೆ “ಕ್ಯಾ ಚಾಹಿಯೇ” ಅಂತ ಕೇಳಿಸಿಕೊಳ್ಳಬೇಕಾದ ಸ್ಥಿತಿ ಇದೆ.
- ಕರಾವಳಿಯ ಧಾರ್ಮಿಕ, ಸಾಂಸ್ಕೃತಿಕ ಸಾಮರಸ್ಯ ಕೆಟ್ಟಿದ್ದು, ಕರಾವಳಿಗೆ “ಪ್ರಯೋಗಶಾಲೆ” ಎಂಬ ಬಿರುದು ದೊರೆತು ಹಳೆಯದಾಗಿದೆ. ನಾವು ಪ್ರಯೋಗ ಶಾಲೆಯ ಇಲಿಗಳಾಗಿ ಬಿಟ್ಟಿದ್ದೇವೆ. ಇಲ್ಲಿನ ನೆಲದ ಸಂಸ್ಕೃತಿ-ಸಾಮಾಜಿಕ ಬದುಕನ್ನು ಆಧುನೀಕರಣದ ಹೆಸರಿನಲ್ಲಿ ಒಂದು ದೇಶ – ಒಂದು ಸಂಸ್ಕೃತಿಯ ಕಡೆಗೆ ದೂಡಲಾಗುತ್ತಿದೆ. ಸರಳವಾದ ಸಮೀಕರಣಗಳನ್ನ ತಲೆಗೆ ತುಂಬಿ ತಮ್ಮದೇ ಬದುಕುವ ಜಂಜಾಟದಲ್ಲಿರುವ ಕಾರಣಕ್ಕೆ ಯೋಚನೆ ಮಾಡ ಬಯಸದ ಮನಸ್ಸುಗಳಿಗೆ ವಿಷ ತುಂಬಿಸಲಾಗುತ್ತಿದೆ. ನಮ್ಮ ಬದುಕನ್ನು ಇಂಚಿಂಚೂ ನಿಗಾ ಇಟ್ಟು, ಯಾವುದೇ ಖಾಸಗಿತನ ಉಳಿಯದಂತೆ ನೋಡಿಕೊಳ್ಳುವ ಪ್ರಭುತ್ವ ಈಗ ನಮ್ಮ ಆಯ್ಕೆ ಆಗಿದೆ.
ಇದನ್ನೂ ಓದಿ:ಬಿಜೆಪಿ 40 ಪರ್ಸೆಂಟ್ ಕಮಿಷನ್ ಪ್ರಕರಣ; ವರದಿ ಸಲ್ಲಿಸಲು ಡೆಡ್ಲೈನ್ ನೀಡಿದ ಹೈಕೋರ್ಟ್
- ಕುಟುಂಬಗಳು ವಿಘಟನೆಗೊಂಡು ಸಾಮಾಜಿಕ ಬದುಕು ಛಿದ್ರವಾಗಿದೆ. ಭೂಸುಧಾರಣೆಯ ಕಾಲದಲ್ಲಿ ಪಾಲುಪಟ್ಟಿಗಾಗಿ ವ್ಯಾಜ್ಯ ಮಾಡಿಕೊಳ್ಳುತ್ತಿದ್ದ ಜನ, ಈಗ ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯಗಳಲ್ಲಿ ಕಿಕ್ಕಿರಿದಿದ್ದಾರೆ. ನಮ್ಮೂರ ನ್ಯಾಯಾಲಯದಲ್ಲಿ ಈಗ ಪಾಲುಪಟ್ಟಿ ವ್ಯಾಜ್ಯದ್ದು ಒಂದು ಪಾಲಾದರೆ ವಿವಾಹ ವಿಚ್ಛೇದನದ್ದು ಉಳಿದ ಒಂಭತ್ತು ಪಾಲು!
- 60 ರ ದಶಕದ ಆಸುಪಾಸಿನಲ್ಲಿ ಆರ್ಥಿಕವಾಗಿ ಸೋತಿರುವ ಒಂದು ಕುಟುಂಬ ಇದ್ದರೆ ಅವರ ಅನ್ನ-ವಸನ-ವಸತಿಗಳಿಗೆ ಕೊರತೆ ಆಗದಂತೆ ಅವರನ್ನು ಕಾಪಾಡುವುದು ಸಾಮಾಜಿಕ ಹೊಣೆ ಎಂದು ಪ್ರತಿಯೊಬ್ಬರೂ ತಿಳಿದಿದ್ದರು. ಸಾವಿನ ಮನೆಗೆ ಹೊರೆ ಹೋಗುತ್ತಿತ್ತು. ಹಸಿದವರ ಮನೆಗೆ ತಿಂಗಳಿಗಾಗುವಷ್ಟು ಮುಡಿ ಅಕ್ಕಿ, ಸಾಮಾನು ಹೋಗುತ್ತಿತ್ತು. ಈವತ್ತು ಕೈಯಲ್ಲಿ ಕಾಸು ಇಲ್ಲ ಎಂದರೆ ಮರ್ಯಾದೆಯ ಪ್ರಶ್ನೆ, ಆತ್ಮಹತ್ಯೆ ಒಂದೇ ದಾರಿ ಎಂಬ ಸನ್ನಿವೇಶ ಇದೆ. ಕೋವಿಡ್ ಬಳಿಕ ಈ ಸನ್ನಿವೇಶ ಎಷ್ಟು ಗಂಭೀರವಾಗಿದೆ ಎಂಬುದನ್ನು ನಾವೆಲ್ಲ ಕಂಡಿದ್ದೇವೆ. ಆದರೆ ಈ ಯಾವುದೇ ಸಾವು ಯಾರನ್ನೂ ಕಾಡುತ್ತಿಲ್ಲ. ಎಲ್ಲವೂ ಪತ್ರಿಕೆಗಳ ಬುಡ ಮೂಲೆಯಲ್ಲಿ ಕ್ರೈಂ ನ್ಯೂಸ್ ಅಷ್ಟೇ. ಇದು ಈಗೀಗ ಕೆಲವರಿಗಂತೂ ಪಾಪ್ಯುಲೇಷನ್ ಕಂಟ್ರೋಲಿನ ಸಹಜ ಹಾದಿ ಅನ್ನಿಸಿಕೊಳ್ಳುತ್ತಿದೆ.
- ರಾಜಕೀಯ-ಸಾಮಾಜಿಕ ನೇತೃತ್ವಕ್ಕೆ ಈಗ ಜಾತಿಯ ಜೊತೆ ದುಡ್ಡು ಸೇರಿಕೊಂಡಿದೆ. ಕರಾವಳಿಯಲ್ಲೂ ಈಗ ಪರ್ಸಂಟೇಜ್ ಅಭಿವೃದ್ಧಿ ಶುರುವಾಗಿ 25 ವರ್ಷ ದಾಟಿದೆ. ಹಾಗಾಗಿ ನದಿ ಒಣಗಿದ ಜಾಗದಲ್ಲೂ ಕಿಂಡಿ ಅಣೆಕಟ್ಟುಗಳು ಬರುತ್ತಿವೆ. ಊರ ತುಂಬೆಲ್ಲ ಸರ್ಕಾರಿ ಸಭಾಭವನ-ಹಾಲುಗಳು ಪಾಳುಬೀಳತೊಡಗಿವೆ. ವರ್ಷಕ್ಕೊಮ್ಮೆ ಕಡಲಿಗೆ ಕಲ್ಲು ಹಾಕದಿದ್ದರೆ ಕಡಲು ಕೊರೆತ ನಿಲ್ಲುವುದಿಲ್ಲ. ಅಭಿವೃದ್ಧಿ ಎಂದರೆ ಮೇಲಿಂದ ಉದುರುವುದು ಮತ್ತು ಉದುರಿಸಿಕೊಳ್ಳುವ ತಾಕತ್ತಿರುವವರಿಗೆ “ಕಮಿಷನ್” ಗಿಟ್ಟಿಸಿಕೊಳ್ಳುವ ವ್ಯವಹಾರ ಆಗಿಬಿಟ್ಟಿದೆ. ವಿಷನ್ ಇರುವ ರಾಜಕೀಯ-ಸಾಮಾಜಿಕ ನಾಯಕತ್ವ ಯಾರಿಗೂ ಬೇಡವಾಗಿದೆ. ಮೂಲೆ ಸೇರಿದೆ.
ಇಂತಹದನ್ನು ನಾನು ಒಂದು ದಿನ ಇಡೀ ಕುಳಿತು ಅಂಕಿ ಸಂಖ್ಯೆ ಸಹಿತ ಪಟ್ಟಿ ಮಾಡಬಲ್ಲೆ. ಆದರೆ ಇಲ್ಲಿಗೆ ನಿಲ್ಲಿಸ್ತೇನೆ. ಒಟ್ಟಿನಲ್ಲಿ ಹೇಳಬೇಕಾಗಿರುವುದು ಏನೆಂದರೆ – 60 ವರ್ಷಗಳ ಹಿಂದೆ ಭೂಮಿ, ಬದುಕು ಇಲ್ಲದಿರುವಾಗ ಮೂಡಿದ ಎಚ್ಚರದ ಕಾರಣದಿಂದಾಗಿ ಘನತೆಯ ಬದುಕು ಅರಸಿಕೊಂಡು ಹೊರಟ ನಾವು ಈಗ ಮತ್ತೆ ಎಲ್ಲಿಗೆ ತಲುಪಿದ್ದೇವೆ ಅಂದರೆ ಅದೇ ಭೂಮಿ, ಬದುಕು, ಅನ್ನ ಎಲ್ಲವನ್ನೂ ಬಟ್ಟಲು ಸಹಿತ ಹೊಸ ಮತ್ತು ಬಲಾಢ್ಯ, ಜಾಗತಿಕ ಮಟ್ಟದ ಧಣಿಗಳಿಗೆ ಒಪ್ಪಿಸಿಕೊಟ್ಟು, ಅವರ ಜೀತವನ್ನು ಮತ್ತೆ ಒಪ್ಪಿಕೊಳ್ಳುವ ಹಂತ ತಲುಪಿದ್ದೇವೆ.
ಈವತ್ತು ಮತ್ತೆ ಅದೇ ಹೊಸ ಧಣಿಗಳ ನೆಲ-ಜಲ- ಆಕಾಶ, ಅವರದೇ ಗದ್ದೆ, ಕಾರ್ಖಾನೆ, ಡೀಪ್ ಸೀ ಫಿಷಿಂಗ್ ಬೋಟು, ಸಿಲೊ, ಅವರದೇ ಸಂಬಳಕ್ಕೆ ದುಡಿಮೆ, ಅವರದೇ ಮಾಲ್‌ನಲ್ಲಿ ಖರೀದಿ, ಅವರದೇ ಮೊಬೈಲ್ ಫೋನಿನಲ್ಲಿ ಅವರದೇ ಇಂಟರ್ನೆಟ್ ಬಳಸಿ ಸಮಯ ಯಾಪನೆ ಅಥವಾ ವರ್ಕ್ ಫ್ರಂ ಹೋಂ, ಅವರದ್ದೇ ಅನ್ನ ಮತ್ತು ಅವರದ್ದೇ ಋಣ.
ಹೀಗೆ ನಾವು ಒಂದು ಸುತ್ತು ಪೂರ್ಣಗೊಳಿಸಿದ್ದೇವೆ. ಹೊರಟಲ್ಲಿಗೇ ವಾಪಸ್ ಬಂದು ತಲುಪಲಾರಂಭಿಸಿದ್ದೇವೆ. ಹಾಗಾಗಿ ಈಗ ಮತ್ತೆ ಸಹಜವಾಗಿಯೇ ಘನತೆಯ ಬದುಕಿನ ಪ್ರಶ್ನೆ ಎದ್ದಿದೆ. ನಮಸ್ಕಾರ.
ವಿಡಿಯೊ ನೋಡಿ: ಪಿಚ್ಚರ್ ಪಯಣ – 144ಸಿನೆಮಾ : ಈ ಬಂಧನನಿರ್ದೇಶನ : ವಿಜಯಲಕ್ಷ್ಮಿ ಸಿಂಗ್‌ಕಥೆ ಹೇಳುವವರು: ಭಾವನಾ ಮರಾಠೆ