ಮಂಗಳೂರು : “ಭಾರತವನ್ನು ಪಾಕಿಸ್ತಾನದಂತಹ ರಾಷ್ಟ್ರವನ್ನಾಗಿಸಲು ನಾವು ಅವಕಾಶ ನೀಡಬಾರದು. ನಮ್ಮ ದೇಶದಲ್ಲಿ ಜಾತ್ಯಾತೀತಯೇ ನಮ್ಮ ಜೀವವಾಯು, ಜಾತ್ಯತೀತತೆ ಇಲ್ಲವಾದರೆ ಭಾರತ ಇಲ್ಲವಾಗುತ್ತದೆ,” ಎಂದು ಕೇರಳದ ಮಾಜಿ ಉನ್ನತ ಶಿಕ್ಷಣ ಸಚಿವರಾದ ಡಾ.ಕೆ.ಟಿ.ಜಲೀಲ್ ಹೇಳಿದರು.
ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜಾತ್ಯಾತೀತತೆ, ಸಬಲೀಕರಣ ಮತ್ತು ಮುನ್ನಡೆ’ ಎಂಬ ಘೋಷಣೆಯಡಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ್ದ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದೇಶ ಜಾತ್ಯಾತೀತ ರಾಷ್ಟ್ರವಾಗಿದೆ. ಎಲ್ಲವನ್ನು ಭಾರತ ಒಳಗೊಳ್ಳುತ್ತಿದೆ. ಈ ಜಾತ್ಯಾತೀತತೆಯ ಸಂಪ್ರದಾಯವೇ ಪ್ರಜಾಪ್ರಭುತ್ವವನ್ನು ಕಾಯುತ್ತಿರುವುದು. ದೇಶದ ಅಭಿವೃದ್ದಿಗೆ ಎಲ್ಲಾ ಜನಾಂಗಗಳೂ ಕೊಡುಗೆ ನೀಡಿದೆ. ಯಾವುದೇ ಒಂದು ಸಮುದಾಯವನ್ನು ದೂರವಿಟ್ಟು, ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಹೇಳಿದರು.
“ನಮ್ಮ ದೇಶ ಜಾತ್ಯತೀತ ರಾಷ್ಟ್ರವಾಗಿದೆ. ಎಲ್ಲವನ್ನು ಭಾರತ ಒಳಗೊಳ್ಳುತ್ತಿದೆ. ಈ ಜಾತ್ಯಾತೀತತೆಯ ಸಂಪ್ರದಾಯವೇ ಪ್ರಜಾಪ್ರಭುತ್ವವನ್ನು ಕಾಯುತ್ತಿರುವುದು. ನಮ್ಮ ದೇಶವು ಯಾವುದೇ ಧರ್ಮವನ್ನು ಯಾವುದೇ ಕಾಲದಲ್ಲಿ ನಿರಾಕರಿಸಿಲ್ಲ. ಹಿಂದೂ ಧರ್ಮದ ಅಶೋಕ ಚಕ್ರವರ್ತಿ ಕಳಿಂಗ ಯುದ್ದದ ನಂತರ ಬೌಧ್ಧ ಧರ್ಮ ಪಾಲಿಸಿದರು. ಅವರು ಬೌದ್ಧ ಧರ್ಮ ಸ್ವೀಕರಿಸಿದ ನಂತರ ಅವರನ್ನು ಯಾರೂ ಪ್ರಶ್ನಿಸಿಲ್ಲ. ಮುಸ್ಲಿಂ ರಾಜರು 900 ವರ್ಷಗಳ ಕಾಲ ಆಡಳಿತ ನಡೆಸಿದರು. ಒಂದು ವೇಳೆ ಅವರು ಧರ್ಮವನ್ನು ಆಡಳಿತದಲ್ಲಿ ಜೊತೆಯಾಗಿಸಿದ್ದರೆ ಇಷ್ಟೊಂದು ಧೀರ್ಘ ಕಾಲ ಆಡಳಿತ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ ಬಹದ್ದೂರೂ ಶಾ ಜಫಾರ್ ದೇಶದ ಬಹಸಂಖ್ಯಾತ ಹಿಂದೂಗಳು ತಮ್ಮ ನಾಯಕರಾಗಿ ಆಯ್ಕೆ ಮಾಡಿದ್ದರು,” ಎಂದರು.
“ದೇಶವನ್ನು 16 ವರ್ಷ ಆಡಳಿತದಲ್ಲಿ ಯಾವುದೇ ಧರ್ಮ ಆಚರಿಸದ ನೆಹರೂ ಅವರನ್ನು ಯಾರೂ ಪ್ರಶ್ನಿಸಿಲ್ಲ. ಬಾಕ್ರಾ-ನಂಗಲ್ ಉದ್ಘಾಟನೆ ಮಾಡಿದ ನೆಹರೂ ಈ ಅಣೆಕಟ್ಟನ್ನು ತೋರಿಸಿ ಇದು ‘ಭಾರತದ ದೇವಾಲಯ’ ಎಂದು ಹೇಳಿದ್ದರು. ಆದರೆ ವರ್ತಮಾನ ಕಾಲದಲ್ಲಿ ಕಾಂಗ್ರೆಸ್‌ನ ಮೃದು ಹಿಂದುತ್ವ ಕಾಣುವಾಗ ಬೇಸರವಾಗುತ್ತದೆ. ವಾಜಪೇಯಿ ಆಡಳಿತ ಮಾಡಬೇಕಾದರೆ ಭಾರತ ಇಷ್ಟು ಮಟ್ಟದಲ್ಲಿ ಕೋಮುದೃವೀಕರಣಗೊಂಡಿರಲಿಲ್ಲ. ವಾಜಪೇಯಿ ಈ ರೀತಿ ಕೋಮದೃವೀಕರಣ ಮಾಡಿರಲಿಲ್ಲ. ಸಹಿಷ್ಣುತೆ, ಜಾತ್ಯಾತೀತೆಗೆ ವಾಜಪೇಯಿ ಬದ್ಧರಾಗಿದ್ದರು. ವಾಜಪೇಯಿ ನಂತರ ಬಂದ ನರೇಂದ್ರ ಮೋದಿ ಸರ್ಕಾರವು ನಿರಂತರವಾಗಿ ಒಂದು ಸರ್ಕಾರವನ್ನು ತಿರಸ್ಕಾರ ಮಾಡುತ್ತಾ ಬಂದಿದೆ,” ಎಂದು ತಿಳಿಸಿದರು.
“ನರೇಂದ್ರ ಮೋದಿ ಸರ್ಕಾರದ ಧಮನಕಾರಿ ಕ್ರಮ ಅಪಾಯಕಾರಿ. ಅದನ್ನು ನಾವು ಪರಾಭವಗೊಳಿಸಬೇಕು. ಎಲ್ಲಾ ಧರ್ಮಗಳು ಬೇರೆ ಬೇರೆಯಾದರೂ ಒಂದೇ ಜಾತ್ಯತೀತ ನಂಬಿಕೆ ಹೊಂದಿದೆ. ಬೈಬಲ್, ಕುರಾನ್, ಭಗವದ್ಗೀತೆ ಒಂದೇ ಭಾವೈಕತೆಯನ್ನು ಸಾರುತ್ತದೆ. ನೂರಾರು ವರ್ಷ ಕಾಲ ಆಳಿದ ಬ್ರಿಟಿಷರನ್ನು ಸೋಲಿಸಲು ಸಾಧ್ಯವಾಗುತ್ತದೆ ಎಂದಾದರೆ ಕೇವಲ ಎಂಟು ವರ್ಷ ಆಳಿದ ಮೋದಿ ಸರ್ಕಾರವನ್ನು ಕೂಡಾ ಸೋಲಿಸಲು ನಮಗೆ ಸಾಧ್ಯವಾಗಲಿದೆ,” ಎಂದು ಹೇಳಿದರು.
“ದೇಶದಲ್ಲಿ ಗೋಮಾಂಸದ ವಿಚಾರದಲ್ಲಿ ಅದೆಷ್ಟೋ ಜನರ ಮೇಲೆ ದಾಳಿ ನಡೆಯುತ್ತಿದೆ. ಒಂದು ವೇಳೆ ಈ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಎಲ್ಲಾ ಮುಸ್ಲಿಮರನ್ನು ಈ ದೇಶದಲ್ಲಿ ಇಲ್ಲವಾಗಿಸಿದರೆ ಇಲ್ಲಿ ನಡೆಯುವ ಎಲ್ಲಾ ದಾಳಿಗಳು ಮುಗಿಯುತ್ತದೆಯೇ?, ದೇಶದಲ್ಲಿ ಮುಸ್ಲಿಮರು ಇಲ್ಲವಾದರೆ, ದಲಿತ ಮತ್ತು ಹಿಂದುಳಿದ ವರ್ಗಗಳ ಮೇಲಿನ ದಾಳಿಯು ಮುಂದುವರಿಯುತ್ತದೆ. ಯಾವುದೇ ಜನಾಂಗದ ಹಕ್ಕುಗಳನ್ನು ನಿರಾಕರಿಸಿ ಭಾರತ ಮುನ್ನಡೆಯಲು ಸಾಧ್ಯವಿಲ್ಲ,” ಎಂದು ತಿಳಿಸಿದರು.
“ಈ ದೇಶದಲ್ಲಿ ಏನು ತಿನ್ನಬೇಕು, ಏನನ್ನು ಧರಿಸಬೇಕು ಎನ್ನುವುದು ಅವರ ಸ್ವಂತ ಆಯ್ಕೆ. ಅದರ ನಡುವೆ ಪ್ರಭುತ್ವ ಯಾಕೆ ಬರಬೇಕು? ಮಹಿಳೆಯರು ತಮಗೆ ಬೇಕಾದ ಬಟ್ಟೆ ಧರಿಸುವುದು ಅವರ ಆಯ್ಕೆಯಾಗಿದೆ. ಹಿಜಾಬೋ ಇತ್ಯಾದಿ ಆಯ್ಕೆ ಮಹಿಳೆಯದ್ದು. ಅದರ ನಡುವೆ ಆಡಳಿತ ಬರಬಾರದು,” ಎಂದು ಹೇಳಿದ ಜಲೀಲ್, “ಈ ಹಿಂದೆ ಉತ್ಸವ, ಉರೂಸುಗಳ ನೆಪದಲ್ಲಿ ದೇಶದ ಎಲ್ಲರೂ ಒಟ್ಟಿಗೆ ಸೇರುತ್ತಿದ್ದರು. ಎಲ್ಲರೂ ಜೊತೆಯಾಗಿ ಸೇರಲೆಂದೇ ಪೂರ್ವಜರು ಈ ಉತ್ಸವ, ಉರೂಸುಗಳನ್ನು ಆರಂಭ ಮಾಡಿರುವುದು. ವಿಶ್ವದ ಬೇರೆ ಎಲ್ಲೂ ಕೂಡಾ ಇಂತಹ ಆಚರಣೆಗಳು ಇಲ್ಲ. ಈಗ ಬೇರೆ ಧರ್ಮದ ವ್ಯಕ್ತಿ ವ್ಯಾಪಾರಕ್ಕೆ ಬರಬಾರದು ಎಂಬ ರಾಜಕೀಯ ನಡೆಸಲಾಗುತ್ತಿದೆ. ಧರ್ಮದ ವ್ಯಕ್ತಿ ವ್ಯಾಪಾರಕ್ಕೆ ಬಂದರೆ ಸಮಸ್ಯೆ ಏನು? ಯೂರೋಪ್ , ಮದ್ಯಪ್ರಾಚ್ಯ ದೇಶಗಳು ಕೂಡಾ ಅದನ್ನೇ ಮಾಡಿದರೆ ವಿಶ್ವದ ಪರಿಸ್ಥಿತಿ ಎಲ್ಲಿಗೆ ತಲುಪುತ್ತದೆ,” ಎಂದು ಪ್ರಶ್ನಿಸಿದರು.
ಹಿಂದೂ ಕೋಮುವಾದಕ್ಕೆ, ಮುಸ್ಲಿಂ ಕೋಮುವಾದ ಉತ್ತರವಲ್ಲ
“ಎಲ್ಲಾ ರೀತಿಯ ಕೋವುವಾದದ ವಿರುದ್ದ ಸಿಪಿಐಎಂ ಹೋರಾಡುತ್ತದೆ. ಎಲ್ಲಾ ಜಾತಿ ಮತಗಳನ್ನು ಸಿಪಿಐಎಂ ಗೌರವಿಸುತ್ತದೆ. ಜಾಹಗೀರ್ ಪುರಿಯಲ್ಲಿ ಬೃಂದಾ ಕಾರಟ್ ಅದನ್ನೇ ಮಾಡಿದ್ದಾರೆ. ಬಾಬರಿ ಮಸೀದಿಯಲ್ಲಿ ಮೂರ್ತಿ ಉಂಟಾಗಿದೆ ಎಂದು ತಿಳಿಸಿದಾಗ ಅಂದಿನ ಯುಪಿ ಮುಖ್ಯಮಂತ್ರಿಗೆ ಪ್ರಧಾನಿ ನೆಹರೂ ಅದನ್ನು ಸರಯೂ ನದಿಯಲ್ಲಿ ಬಿಡುವಂತೆ ಹೇಳಿದರು. ಈ ರೀತಿಯ ದಿಟ್ಟ ನಿಲುವುಗಳನ್ನು ಕಾಂಗ್ರೆಸ್ ಇತ್ತೀಚೆಗೆ ತೆಗೆದುಕೊಳ್ಳುತ್ತಿಲ್ಲ. ಕಾಂಗ್ರೆಸ್ ಬಿಜೆಪಿಯ ಜೊತೆ ಸ್ಪರ್ಧಿಸಲು ತಾನು ಕೂಡಾ ಕಾವಿ ತೊಡಲು ಮುಂದಾಗಿದೆ,” ಎಂದು ವಿಷಾದಿಸಿದರು. “ಕೇರಳದಲ್ಲಿ ಹಿಂದೂ ಮುಸ್ಲಿಮರ ಪ್ರತ್ಯೇಕ ಗಲ್ಲಿಗಳು ಉಲ್ಲ. ಯಾವುದೇ ಜಾತಿಯ ಬೀದಿಗಳು ಇಲ್ಲ. ನಾವು ಒಂದು ಧರ್ಮ ಜಾತಿಗೆ ಒಂದು ಬೀದಿ ಎಂಬ ಚಿಂತನೆಯನ್ನು ದೂರಮಾಡಬೇಕು. ಹಿಂದೂ ಕೋಮುವಾದಕ್ಕೆ ಮುಸ್ಲಿಂ ಕೋಮುವಾದ ಉತ್ತರವಲ್ಲ.” ಎಂದರು.
ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ, “ದೇಶದಲ್ಲಿ ನಿರಂತರವಾಗಿ ಮುಸ್ಲಿಮರನ್ನು ಗುರಿಯಾಗಿಸಲಾಗುತ್ತಿದೆ. ಮುಖ್ಯವಾಗಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರ ಮೇಲಿನ ದಾಳಿಯು ಹೆಚ್ಚಾಗಿದೆ. ಅದರಲ್ಲೂ ಕಳೆದ ಎರಡು ವರ್ಷಗಳಿಂದ ಇಡೀ ವ್ಯವಸ್ಥೆಯೇ ಮುಸ್ಲಿಮರ ವಿರುದ್ಧವಾಗಿದೆ. ಮುಸ್ಲಿಮರ ವಿರುದ್ಧವಾಗಿ ಏನೇ ಹೇಳಿದರೂ ಅದು ಸತ್ಯ ಎಂಬಂತೆ ಮಾಧ್ಯಮಗಳು ಕೂಡಾ ಬಿಂಬಿಸುತ್ತಿರುವುದು ಖೇಧಕರ ಮುಸ್ಲಿಂ ಸಮುದಾಯವು ಧಮನಿತ ವರ್ಗವಾಗಿದೆ. ಧಮನಿತ, ಕಾರ್ಮಿಕರ ಪರವಾಗಿ ನಿಲ್ಲುವ ಪಕ್ಷವಾದ ಕಮ್ಯೂನಿಸ್ಟ್ ಪಕ್ಷ ಈ ಸಂದರ್ಭದಲ್ಲಿ ದಾಳಿಗೆ ಒಳಗಾಗುತ್ತಿರುವ ಮುಸ್ಲಿಮರ ಪರವಾಗಿ ನಿಲ್ಲಬೇಕಾಗಿದೆ,” ಎಂದು ತಿಳಿಸಿದರು.
“ಸಾಚಾರ್ ವರದಿಯ ಜಾರಿಗೆ ಬದಲಿಗೆ ಮುಸ್ಲಿಮರ ವಿರುದ್ಧ ದಾಳಿಗಳು ನಡೆಯುತ್ತಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಲ್ಲ ಕ್ಷೇತ್ರದಲ್ಲೂ ಮುಸ್ಲಿಮರ ಸಂಖ್ಯೆ ಕಡಿಮೆಯಾಗಿದೆ. ಖೇಧಕರ ಸ್ಥಿತಿಯಲ್ಲಿ ಮುಸ್ಲಿಂ ಸಮುದಾಯವಿದೆ. ಮುಸ್ಲಿಮರು ಪ್ರತ್ಯೇಕತಾ ಮನಸ್ಥಿತಿಗೆ ತಲುಪಬಾರದು, ಮುಸ್ಲಿಮರನ್ನು ಜಾತ್ಯಾತೀತ ಶಕ್ತಿಗಳೊಂದಿಗೆ ಒಟ್ಟಿಗೆ ಕೊಂಡೊಯ್ಯವುದು ಈ ಸಮಾವೇಶದ ಮುಖ್ಯ ಉದ್ಧೇಶವಾಗಿದೆ. ಇದು ಮುಸ್ಲಿಮರ ಸಮಾವೇಶವಲ್ಲ, ಮುಸ್ಲಿಂ ಸಮಾವೇಶ ಎಂದರು.
ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಮಾವಳ್ಳಿ ಶಂಕರ್ ಮಾತನಾಡುತ್ತಾ ಸಿದ್ದಲಿಂಗಯ್ಯ ಅವರ ಕಾಲದಲ್ಲಿ ಮಂಗಳೂರಿಗೆ ಬಂದಾಗ ದಕ್ಷಿಣ ಕನ್ನಡ ಇಡೀ ಕೆಂಬಾವುಟ ಹಾರಾಡುತ್ತಿತ್ತು. ಆದರೆ ಈಗ ಮಂಗಳೂರಿನಲ್ಲಿ ಕೇಸರಿ ಭಾವುಟ ಎಲ್ಲೆಡೆ ಹಾರುವಂತಹ ಕೆಳಮಟ್ಟಕ್ಕೆ ಇಳಿದಿದೆ. ದಲಿತರ ಬದುಕಿಗೆ ಬೆಳಕುಕೊಟ್ಟ ಕುದ್ಮುಲ್ ರಂಗರಾವ್ ಮತ್ತು ನಾರಾಯಣ ಗುರು ಹುಟ್ಟಿದ ಊರು ಕರಾವಳಿ. ಸದ್ಯ ಸರ್ಕಾರವು ನಾರಾಯಣ ಗುರು ಟ್ಯಾಬ್ಲೋಗೆ ಅವಕಾಶ ನೀಡದಂತಹ ಕೆಳಮಟ್ಟಕ್ಕೆ ಇಳಿದಿದೆ. ಜನರು ಸರ್ಕಾರದ ಈ ನಡೆಯ ವಿರುದ್ಧವಾಗಿ ಧ್ವನಿ ಎತ್ತಿದಾಗ ಸರ್ಕಾರವು ಜನರನ್ನು ಬೇರೆಡೆ ಸೆಳೆಯಲೆಂದು ಹಿಜಾಬ್ ವಿಚಾರವನ್ನು ಮುನ್ನಲೆಗೆ ತಂದಿದೆ,” ಎಂದು ಆರೋಪ ಮಾಡಿದರು.
“ದೇಶದ ಸ್ವಾತಂತ್ಯದ ಬಳಿಕ ದೇಶವನ್ನು ಲೂಟಿ ಹೊಡೆಯುವವರಿಗೆ ಈ ದೇಶದ ಆಡಳಿತ ಹೋಗಬಾರದು ಎಂಬುವುದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಆಶಯವಾಗಿತ್ತು. ಇದು ಬಸವಣ್ಣನ ನೆಲ, ಪಂಪ ಮನುಜ ಜಾತಿ ತಾನೊಂದೇ ವಲಂ ಎಂದು ಹೇಳುತ್ತಾರೆ, ಕುವೆಂಪು ಇದು ಸರ್ವ ಜನಾಂಗದ ತೋಟ ಎಂದು ಹೇಳಿದ್ದಾರೆ. ನಾವಿಂದು ಇದನ್ನು ಉಳಿಸಬೇಕಾಗಿದೆ. ಈ ದೇಶವನ್ನು ಅಶಾಂತಿಯ ಬೀಡನ್ನಾಗಿ ಮಾಡಲು ಹೊರಟವರಿಗೆ ನಾವು ತಕ್ಕ ಪಾಠ ಕಲಿಸಬೇಕಾಗಿದೆ. ಇಲ್ಲಿನ ದಲಿತ, ಮುಸ್ಲಿಂ, ಮಹಿಳೆಯರು ಸಮಾನವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ದೇಶದಲ್ಲಿ ದಲಿತ ಮತ್ತು ಮುಸ್ಲಿಂ ಸಮುದಾಯಗಳ ಹತ್ಯಾಕಾಂಡಗಳು ನಡೆದಿದೆ. ಇಲ್ಲಿನ ವೈದಿಕವಾದಿಗಳು ದಾಳಿಯನ್ನು ಮಾಡಿದ್ದಾರೆ,” ಎಂದರು.
“ಪ್ರಸ್ತುತ ಗೋವನ್ನು ಪವಿತ್ರ ಎಂದು ಹೇಳುತ್ತಾರೆ. ಹಾಗೆ ಹೇಳುವವರು ಕೋಳಿ, ಕುರಿ ಯಾಕೆ ಪವಿತ್ರ ಎಂದು ಹೇಳುವುದಿಲ್ಲ. ಗೋವನ್ನು ನಮ್ಮ ದೇಶದಲ್ಲಿ ತಿನ್ನಬಾರದು ಎಂದು ಹೇಳುತ್ತಾರೆ. ಆದರೆ ಟನ್‌ಗಟ್ಟಲೆ ಗೋ ಮಾಂಸವನ್ನು ಹೊರದೇಶಕ್ಕೆ ರಫ್ತು ಮಾಡುತ್ತಾರೆ. ಕರ್ನಾಟಕದ ಪಠ್ಯ ಪುಸ್ತಕದಲ್ಲಿ ಕೂಡಾ ಹಲವಾರು ಬದಲಾವಣೆ ಮಾಡಲಾಗಿದೆ. ಬರಗೂರು ರಾಮಚಂದ್ರಪ್ಪ ಎಂಬ ಚಿಂತಕರನ್ನು ಹೊರಗಿಟ್ಟು, ಕುವೆಂಪು ಮತ್ತು ನಾಡಗೀತೆಯನ್ನು ನಿಂದಿಸಿದ ನಾಡದ್ರೋಹಿಯನ್ನು ಸಮಿತಿ ಅಧ್ಯಕ್ಷರಾನ್ನಾಗಿ ಮಾಡಲಾಗಿದೆ. ಹೆಡ್ಗೇವಾರ್ ಮತ್ತು ಸೂಲಿಬೆಲೆ ಪಾಠವನ್ನು ಹಾಕಲಾಗಿದೆ. ಒಂದೇ ಸಮುದಾಯದ ಪಠ್ಯವನ್ನು ಹಾಕಲಾಗಿದೆ. ಈ ಮೂಲಕ ರಾಜ್ಯವನ್ನು ದಿಕ್ಕುದೆಸೆಯಿಲ್ಲದ ವಾತಾವರಣ ಸೃಷ್ಟಿ ಮಾಡಲಾಗುತ್ತದೆ. ನಾವು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕಾಗಿದೆ. ನಾವೆಲ್ಲರೂ ಸರ್ಕಾರದ ಈ ಕೋಮುದ್ರುವೀಕರಣದ ವಿರುದ್ಧ ಹೋರಾಟ ಮಾಡಬೇಕಾಗಿದೆ,” ಎಂದು ತಿಳಿಸಿದರು.
ಮತ್ತೋರ್ವ ಅತಿಥಿಗಳಾಗಿ ಭಾಗವಹಿಸಿದ್ದ ಸಾಹಿತಿ ಕೆ.ಷರಿಫಾರವರು “ಮುಸ್ಲಿಮರ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಎಷ್ಟು ದಿನ ತಾಳ್ಮೆಯಿಂದ ಕೂರಲು ಸಾಧ್ಯ?. ಒಂದಲ್ಲ ಒಂದು ದಿನ ತಿರುಗಿ ಬೀಳುತ್ತಾರೆ. ಆದರೂ ಮುಸ್ಲಿಮರು ಈವರೆಗೆ ತಾಳ್ಮೆಯಿಂದ ಇರುವುದಕ್ಕೆ ಧನ್ಯವಾದಗಳು. ಮಹಿಳೆಯು ತಾವು ಯಾವ ಬಟ್ಟೆ ಹಾಕಬೇಕು ಎಂಬುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ಅದು ಮಹಿಳೆಯ ಹಕ್ಕಾಗಿದೆ. ಹಿಂದೂ ಮುಸ್ಲಿಂ ಎಂಬ ವಿಚಾರದಲ್ಲೇ ನಾವು ವಾಗ್ವಾದ, ದಾಳಿ ಪ್ರತಿ ದಾಳಿಗಳನ್ನು ಮಾಡುತ್ತಾ ಕೂತರೆ ನಾವು ಪ್ರಗತಿಯನ್ನು ಸಾಧಿಸಲು ಸಾಧ್ಯವೇ,?” ಎಂದು ಪ್ರಶ್ನಿಸಿದರು. “ಹಿಜಾಬಿನ ವಿಚಾರದಲ್ಲಿ ದೇಶದ ಮರ್ಯಾದೆಯಲ್ಲಿ ಜಗತ್ತಿನಲ್ಲಿ ಹರಾಜಾಗಿದೆ. ಸರ್ಕಾರವು ಕ್ರೂರ ವ್ಯಕ್ತಿಗಳಿಗೆ ರಕ್ಷಣೆಯನ್ನು ನೀಡುತ್ತದೆ. ರಾಜಕೀಯ ಹಾಗೂ ಆರ್ಥಿಕ ವಿಚಾರದಲ್ಲಿ ಮುಸ್ಲಿಮರು ಎದ್ದು ನಿಲ್ಲಬೇಕಾಗಿದೆ. ರಾಜ್ಯದಲ್ಲಿ ಎಂಬತ್ತು ಲಕ್ಷ ಮುಸ್ಲಿಮರಿದ್ದು ಅವರಿಗೆ ಸಿಗಬೇಕಾದ ಸವಲತ್ತು ಲಭ್ಯವಾಗುತ್ತಿಲ್ಲ. ಎರಡು ಶೇಕಡ ಇರುವ ಬ್ರಾಹ್ಮಣರಿಗೆ ಹತ್ತು ಶೇಖಡ ಮತ್ತು ಹದಿನಾಲ್ಕು ಶೇಕಡ ಇರುವ ಮುಸ್ಲಿಮರಿಗೆ ನಾಲ್ಕು ಶೇಕಡ ಮೀಸಲಾತಿ ಇದೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ಮಹಿಳೆಯರು, ಶೋಷಿತರು ಎಲ್ಲರೂ ಸೇರಿ ಭಾರತವನ್ನು ಕಟ್ಟಬೇಕು,” ಎಂದು ಕರೆ ನೀಡಿದರು.
ಮತ್ತೋರ್ವ ಅತಿಥಿಗಳಾಗಿ ಭಾಗವಹಿಸಿದ್ದ ಸಿಪಿಯೆಮ ರಾಜ್ಯ ಕಾರ್ಯದರ್ಶಿಯಾದ ಯು. ಬಸವರಾಜರವರು ಮಾತನಾಡಿ, “ಬೆಂಗಳೂರಿನಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯದುವೀರ್ ಸಿಂಗ್ ಮೇಲೆ ನಡೆದ ದಾಳಿಯನ್ನು ಖಂಡಿಸಿದರು. ಕೇಂದ್ರ ಸರ್ಕಾರ ರೈತರ ಮುಂದೆ ಮಂಡಿಯೂರಿ ಕೃಷಿ ಕಾಯ್ದೆಯನ್ನು ವಾಪಾಸು ಪಡೆದಿದೆ. ಆದರೆ ರಾಜ್ಯದಲ್ಲಿ ರೈತ ಕಾಯ್ದೆ ವಾಪಾಸು ಪಡೆಯದೆ, ರೈತ ಮತ್ತು ಕಾರ್ಮಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಹಿಜಾಬ್ ಮತ್ತು ಕೋಮುದೃವೀಕರಣ ಮಾಡುತ್ತಿದೆ. ಹಿಂದುತ್ವವಾದಿ ಶಕ್ತಿಗಳು ಮುಸಲಿಂ ಮತ್ತು ಕ್ರಿಶ್ಚಿಯನ್ ವಸಮುದಾಯದ ಮೇಲೆ ದಾಳಿ ನಡೆಸುತ್ತಿರುವಾಗ ಈ ಸಮುದಾಯಗಳು ಜಾತ್ಯಾತೀತ ಶಕ್ತಿಗಳೊಂದಿಗೆ ಸೇರದಂತೆ ಕಾರ್ಪೋರೇಟ್ ಶಕ್ತಿಗಳು ನೊಡಿಕೊಳ್ಳುತ್ತಿವೆ,” ಎಂದು ತಿಳಿಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಯ್ಯದ್ ಮುಜೀಬ್ ಅವರು ಮಾತನಾಡಿ, “ಮುಸ್ಲಿಮರನ್ನು ಎರಡನೇ ದರ್ಜೆಯನ್ನಾಗಿ ಮಾಡುತ್ತಿರುವ ಸಂದರ್ಭದಲ್ಲಿ ಈ ಸಮಾವೇಶ ಅರ್ಥಪೂರ್ಣವಾಗಿದೆ. ನಮ್ಮ ವ್ಯವಸ್ಥೆಯು ಮುಸ್ಲಿಂ ದ್ವೇಷ ರಾಜಕಾರಣವನ್ನು ಮುಂದಿಟ್ಟು ಅಧಿಕಾರ ಗಿಟ್ಟಿಸುವಲ್ಲಿಗೆ ಬಂದಿದೆ. ಕಾಂಗ್ರೆಸ್ ಮುಸ್ಲಿಮರನು ಓಲೈಸುತ್ತದೆ ಎಂದು ಬಿಜೆಪಿ ಹೇಳುತ್ತದೆ, ಆದರೆ ಕಾಂಗ್ರೆಸ್ ಮುಸ್ಲಿಮರಿಗೆ ಏನು ನೀಡಿದೆ ಎಂದು ಸಾಚಾರ್ ವರದಿ ಹೇಳಿದೆ. ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಅಭಿವೃದಿ ಸಾಧ್ಯವಿಲ್ಲ ಎಂಬುವುದನ್ನು ಸರ್ಕಾರ ಮನಗಾಣಬೇಕು. ಪಂಪನಿಂದ ಪ್ರಾರಂಭವಾಗಿ ಕುವೆಂಪು ಆದಿಯಾಗಿ ಗೋಪಾಲ ಕೃಷ್ಣ ಅಡಿಗರವರೆಗೆ ಮನುಷ್ಯರ ನಡುವಿನ ತಾರತಮ್ಯದ ವಿರುದ್ಧ ನಮ್ಮ ಪರಂಪರೆ ಮಾತನಾಡಿದೆ,”ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಅವರ “ನೇತ್ರಾವತಿಯಲ್ಲಿ ನೆತ್ತರು”, ಸಾಹಿತಿ ಬಿಎಂ ಹನೀಫ್ ಅವರ “ಸೆಕ್ಯೂಲರ್ ಸೇನಾನಿ ಸುಭಾಸ್ ಚಂದ್ರ ಬೋಸ್” ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯಾಧ್ಯಕ್ಷರು ಮಾವಳ್ಳಿ ಶಂಕರ್, ಹಿರಿಯ ಸಾಹಿತಿ ಡಾ| ಕೆ ಷರೀಫಾ, ಸಿಪಿಐಎಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಯು ಬಸವರಾಜು, ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ ಯಾದವ್ ಶೆಟ್ಟಿ, ಸಾಹಿತಿ ಕೆ ನೀಲಾ, ರಾಜ್ಯ ಮುಖಂಡರು ಎಸ್ ವರಲಕ್ಷ್ಮೀ, ಕೆ.ಪ್ರಕಾಶ್, ಅಕ್ರಂ ಪಾಶ ಬಾಗೇಪಳ್ಳಿ, ಶೇಖ್ ಷಾ ಖಾದ್ರಿ, ಖಾಸಿಂ ಸರ್ದಾರ್ ರಾಮದುರ್ಗ, ಖಾಸಿಂ ಕೊಪ್ಪಳ, ಉಪಸ್ಥಿತರಿದ್ದರು. ಸಿಪಿಐಎಂನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಸಯ್ಯದ್ ಮುಜೀಬ್ ಅಧ್ಯಕ್ಷತೆ ವಹಿಸಿದ್ದರು.