ಬೆಂಗಳೂರು: ನಮ್ಮ ಮಕ್ಕಳ ದಾರಿ ತಪ್ಪಿಸುವವರ ವಿರುದ್ದ ಮಾತನಾಡಿದೆ. ಚಿಕ್ಕಪ್ಪ, ಅಣ್ಣ, ಹಿತಚಿಂತಕನಾಗಿ ಉತ್ತರಕರ್ನಾಟಕ ಭಾಷೆಯಲ್ಲಿ ಮಾತನಾಡಿದ್ದು ತಪ್ಪೇ?. ಸಿ.ಟಿ.ರವಿ ಅವರು ಅಪ್ಪನಿಗೆ ಹುಟ್ಟಿದ್ದರೇ ಎನ್ನುವ ಮಾತನ್ನು ಆಡಿದ್ದಾರೆ. ನಾನು ಸಹ ಯಾರಿಗೆ ಹುಟ್ಟಿದ್ದೀರಿ ಎಂದು ಕೇಳಬಹುದಿತ್ತು. ಆದರೆ ಅವರಷ್ಟು ಕೆಳಮಟ್ಟಕ್ಕೆ ನಾನು ಇಳಿಯಲು ಇಷ್ಟಪಡುವುದಿಲ್ಲ. ಮಾತನಾಡುವ ಸಂಸ್ಕೃತಿ ನಿಮ್ಮಿಂದ ಕಲಿಯಬೇಕಿಲ್ಲ ಎಂದು ಸಚಿವ ಶಿವರಾಜ ತಂಗಡಿಗೆ ಸಿ.ಟಿ ರವಿಗೆ ಟಾಂಗ್ ನೀಡಿದ್ದಾರೆ.
ನಾವು ಯಾರಿಗೆ ಹುಟ್ಟಿದ್ದೇವೆ ಎಂದು ನಮ್ಮ ತಾಯಂದಿರಿಗೆ ಗೊತ್ತಿರುತ್ತದೆ. ನೀವು ಸವಾಲಿಗೆ ಸಿದ್ದರಿದ್ದರೆ ನನ್ನ ತಾಯಿಯನ್ನು ಬಿಜೆಪಿ ಕಚೇರಿಗೆ ಕರೆದುಕೊಂಡು ಬರುತ್ತೇನೆ, ತಯಾರಿದ್ದೀರಾ?. ದಿನಾಂಕ ಹೇಳಿದರೆ ನಾನು ಕರೆದುಕೊಂಡು ಬರಲು ತಯಾರಿದ್ದೇನೆ. 2 ಕೋಟಿ ಉದ್ಯೋಗ, ನರೇಗಾ ಅನ್ಯಾಯದ ಬಗ್ಗೆ ಉತ್ತರ ಕೊಡಲು ಸಿದ್ದರಿದ್ದೀರಾ?
ಬಿಜೆಪಿಯವರು ಸುಳ್ಳು, ಕಪಟ, ಮೋಸ ಮಾಡುವುದರ ಜೊತೆಗೆ ನಮ್ಮ ಯುವಕರ, ಮಕ್ಕಳ ಹಾದಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ನಾನು ಕಾರಟಗಿಯಲ್ಲಿ ಹೇಳಿದ ಹೇಳಿಕೆಗೆ ಬದ್ದನಾಗಿದ್ದೇನೆ. ಮಾಧ್ಯಮದವರು ನನ್ನ ಭಾಷಣದ ಪೂರ್ಣಪಾಠವನ್ನು ಹಾಕಿ, ಕೇವಲ ತುಣುಕನ್ನು ಮಾತ್ರ ಏಕೆ ಹಾಕಿದ್ದೀರಿ?.
ಬಿಜೆಪಿಯವರು 2014 ರ ಲೋಕಾಸಭಾ ಚುನಾವಣೆ ವೇಳೆ ಮಾಡಿದ ಭಾಷಣಗಳನ್ನು ಅವರೇ ಕೇಳಲಿ. ಅವರ ಭಾಷಣ ಕೇಳಿ ಅವರೇ ಬಿಜೆಪಿಗೆ ಮತ ನೀಡುವುದಿಲ್ಲ. 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು, ಎರಡು ಕೋಟಿ ಉದ್ಯೋಗ ನೀಡಲಾಗಿದೆಯೇ? 10 ವರ್ಷದಲ್ಲಿ ಒಂದೇ ಒಂದು ಉದ್ಯೋಗ ನೀಡಿಲ್ಲ. ಸ್ಮಾರ್ಟ್ ಸಿಟಿ ಎಷ್ಟು ಅಭಿವೃದ್ದಿ ಮಾಡಿದ್ದಾರೆ ಉತ್ತರಿಸಲಿ.
ಇದನ್ನೂ ಓದಿ : ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್
ನರೇಗಾ ಯೋಜನೆಯ ಅಡಿ ಬರ ಪರಿಸ್ಥಿತಿ ವೇಳೆ 140 ಮಾನವ ದಿನ ಉದ್ಯೋಗ ನೀಡಿ ಎಂದರೂ ನೀಡುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಈ ಹಿಂದೆ ನೆರೆ ಬಂದು ಮನೆ, ಬೆಳೆ ಸೇರಿದಂತೆ ಎಲ್ಲಾ ಹಾಳಾಯಿತು. ಆಗ ಮೋದಿಯವರು ಬರಲೇ ಇಲ್ಲ. ಈಗ ಚುನಾವಣೆ ಹೊತ್ತಲ್ಲಿ ಬಂದರೆ ಏನು ಪ್ರಯೋಜನ? ಎಷ್ಟು ರೈತರ ಸಾಲ ಮನ್ನಾ ಮಾಡಿದ್ದಾರೆ. ಎಷ್ಟು ಅಣೆಕಟ್ಟು ಕಟ್ಟಿದ್ದಾರೆ. ಅಭಿವೃದ್ದಿ ವಿಚಾರ ಬೇಡ ಎಂದರೆ ಎಷ್ಟು ಕಂಪೆನಿಗಳನ್ನು ಮಾರಿದ್ದಾರೆ, ಈ ಬಗ್ಗೆಯಾದರೂ ಮಾಹಿತಿ ನೀಡಲಿ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡದೆ ಮೋಸ ಮಾಡಿದ್ದರಲ್ಲಾ ಇದರ ಬಗ್ಗೆ ಮಾತನಾಡಲಿ.
ನಮ್ಮ ಪಾಲಿನ ಹಣ ಕೇಳಿದರೆ ಆರೋಪ ಮಾಡುತ್ತಾರೆ. ಬರ ಪರಿಹಾರ ನೀಡುತ್ತಿಲ್ಲ. ಬರ ಅಧ್ಯಯನ ತಂಡಗಳು ಬಂದು ಹೋದರು ಹಣ ನೀಡುತ್ತಿಲ್ಲ. ಸಿದ್ದರಾಮಯ್ಯ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಬಿಜೆಪಿಯವರು ನೂರಾರು ಬಾರಿ ಕೆಟ್ಟದಾಗಿ ಮಾತನಾಡಿದ್ದಾರೆ.
ಬಿಜೆಪಿ ಪಕ್ಷದ ಅನುರಾಗ್ ಠಾಕೂರ್ ಹೇಳುತ್ತಾರೆ ʼಮೋದಿ ವಿರುದ್ದ ಮಾತನಾಡಿದವರಿಗೆ ಗುಂಡಿಕ್ಕಿ ಕೊಲ್ಲಿʼ ಎಂದು ಜವಾಬ್ದಾರಿಯುತ ಸಚಿವರ ಮಾತೇ ಅದು. ಅವರನ್ನು ವಜಾ ಮಾಡುವ ಶಕ್ತಿ ನಿಮ್ಮ ಬಳಿ ಇಲ್ಲವೇ? ಪ್ರಜ್ಞಾಸಿಂಗ್ ಠಾಕೂರ್ ಶಿವಮೊಗ್ಗಕ್ಕೆ ಬಂದಾಗ “ನಿಮ್ಮ ಮನೆಯ ಚಾಕೂ ಚೂರಿ, ಬಂದೂಕು ತಯಾರು ಮಾಡಿಟ್ಟುಕೊಳ್ಳಿʼ ಎಂದಿದ್ದರು. ನಿಮ್ಮದು ಸಂಸ್ಕೃತಿಯ ಮಾತೆ?.
ನನಗೆ ಬಿಜೆಪಿಯ ಭಾಷೆಯಲ್ಲೂ ಮಾತನಾಡಲು ಬರುತ್ತದೆ. ಕನ್ನಡ ಸಂಸ್ಕೃತಿ ಸಚಿವನಾದ ನನಗೆ ನನ್ನ ತಂದೆ- ತಾಯಿ ಒಳ್ಳೆಯ ಸಂಸ್ಕಾರ ಕಲಿಸಿದ್ದಾರೆ ಲೂಟಿ ರವಿ ಅವರೆ. ಸಿದ್ದರಾಮಯ್ಯ ಅವರು, ಶಿವಕುಮಾರ್ ಅವರು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ನನಗೆ ಸಂಸ್ಕೃತಿ ಕಲಿಸಿದ್ದಾರೆ.
ಬಿಜೆಪಿಯವರು ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಾ ಇದ್ದಾರೆ ಎಂದು ಯುವಕರ ಪರವಾದ ಕಾಳಜಿ ಇಟ್ಟುಕೊಂಡು ಮಾತನಾಡಿದ್ದೇನೆ. ತ್ರಿಶೂಲ, ಕತ್ತಿ, ಚಾಕು, ಚೂರಿ ಇಟ್ಟುಕೊಂಡು ಎಷ್ಟೋ ಕಾರ್ಯಕ್ರಮದಲ್ಲಿ ಪ್ರದರ್ಸನ ಮಾಡಿದ್ದೀರಿ. ನಾವು ಸತ್ಯವನ್ನು ಹೇಳಿದರೆ ನಿಮಗೆ ಉರಿ ಬೀಳುತ್ತದೆ. ಮೆಣಸಿಕಾಯಿ ಇಟ್ಟುಕೊಂಡಂತೆ ಆಗುತ್ತದೆ.
10 ವರ್ಷದ ನಿಮ್ಮ ಸಾಧನೆಯ ಪಟ್ಟಿಕೊಡಿ. ಮೋದಿ ಎಂದು ದಾರಿ ತಪ್ಪಿಸುತ್ತಾ ಇದ್ದೀರಿ. ಭಾವನಾತ್ಮಕ ವಿಷಯ ಇಟ್ಟುಕೊಂಡು ಯುವಕರ ದಾರಿ ತಪ್ಪಿಸುತ್ತಿದ್ದೀರಿ. ಯುವಕರಿಗೆ ಬುದ್ದಿ ಹೇಳಿ ಎಂದು ಹೇಳಿದ್ದೇನೆ. ನಾನು ಅವಾಚ್ಯ ಶಬ್ದಗಳನ್ನು ಬಳಸಿಲ್ಲ. ಬಿಜೆಪಿಯವರು ನುಡಿದಂತೆ ನಡೆದಿದ್ದರೇ ಮೋದಿಗೆ ನಾನೂ ಜೈ ಎನ್ನುತ್ತೇನೆ.
ಕಾರಟಗಿಯ ಕಾರ್ಯಕ್ರಮದ ಸಂಪೂರ್ಣ ಭಾಷಣ ಕೇಳಿ. ನಾನು ಸಂವಿಧಾನ ಬದಲಾವಣೆ ಹೇಳಿಕೆ ವಿರುದ್ದ ಮಾತನಾಡಿದ್ದೇನೆ. ನೂರಾರು ಯುವಕರು ನನ್ನ ಮಾತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾನು ಬಳಸಿದ್ದು ಉತ್ತರ ಕರ್ನಾಟಕದ ಸಹಜವಾದ ಭಾಷೆ. ಪ್ರೀತಿಯಿಂದ ಮಾತನಾಡುವಾಗ ಬಳಿಸ ಮಾತು. ನಾನು ಬಿಜೆಪಿಯವರಿಗೆ, ಸಿ.ಟಿ.ರವಿ ಅವರ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದ್ದೇನೆಯೇ?. ಬಿಜೆಪಿಯವರೇ ನನ್ನ ಭಾಷಣವನ್ನು ಪೂರ್ತಿ ಕೇಳಿ ನಂತರ ಮಾತನಾಡಲಿ.
2008 ರಲ್ಲಿ ನಾನು ಸೇರಿ ಐದು ಮಂದಿ ಸಹಾಯ ಮಾಡಿದರೂ ಅವಮಾನ ಮಾಡಿದ್ದರು. ಇದರ ಬಗ್ಗೆ ಮಾತನಾಡಿ. ನಾವು ಬರದೇ ಇದ್ದಿದ್ದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಎಲ್ಲಿ ಇರುತ್ತಿತ್ತು. ಐದು ಮಂದಿಯನ್ನು ಸುಪ್ರೀಂಕೋರ್ಟಿಗೆ ಕಳುಹಿಸಿದ್ದೀರಲ್ಲ ಇದರ ಬಗ್ಗೆ ಮಾತನಾಡಿ. ಈ ದೇಶ, ರಾಜ್ಯದಲ್ಲಿ ಯಾರೂ ಮಾಡದ ಅವಾಂತರ ನೀವು ಮಾಡಿದ್ದೀರಿ. ಎಂದಾದರೂ ಕರ್ನಾಟಕದಲ್ಲಿ ಬಹುಮತ ಪಡೆದಿದ್ದೀರಾ ನೀವು? ನಿಮ್ಮ ಮನಸ್ಸಿನ ಮೇಲೆ ಕೈಯಿಟ್ಟು ತಂಗಡಗಿಗೆ ಅನ್ಯಾಯ ಮಾಡಿದ್ದೀರಿ ಎಂದು ಹೇಳುವ ಧೈರ್ಯ ನಿಮಗೆ ಇದೆಯಾ? ಎಂದು ಕುಟುಕಿದರು.