ಎಸ್‌ಪಿಬಿ ನೆನಪು – ಹಾಡುಗಳು ಮಾತ್ರ ಸದಾ ಸುಮಧುರ

ಭಾರತೀಯ ಚಿತ್ರರಂಗದ ಹೆಸರಾಂತ ಗಾಯಕ ಎಸ್‌ ಪಿ ಬಾಲಸುಬ್ರಹ್ಮಣ್ಯಂ ದೈಹಿಕವಾಗಿ ನಮ್ಮನ್ನಗಲಿದರೂ ಸಹ (ನಿಧನ: 25.09.2020) ಅವರು ಹಾಡಿರುವ ಸುಮಧುರ ಹಾಡುಗಳು ಸದಾ ಕಾಲ ಜೀವಂತವಾಗಿ ಉಳಿಯುವಂತಹುದು. ಬಹುಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿಯಾದ ಹಾಡುಗಾರ ಎಸ್‌.ಪಿ.ಬಾಲಸುಬ್ರಹ್ಮಣ್ಯಂ.

ಇಂದು ಎಸ್‌ಪಿಬಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಾವಿರಾರು ಅಭಿಮಾನಿಗಳು ನಮನ ಸಲ್ಲಿಸುತ್ತಿದ್ದಾರೆ. ವಿಶೇಷ ಹಾಡುಗಳ ಮೂಲಕ ಬಾಲಸುಬ್ರಹ್ಮಣ್ಯಂ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ. ಸಿನಿಸಂಗೀತ ಕ್ಷೇತ್ರದ ಹಲವರು ಟ್ವೀಟ್​ ಮಾಡಿ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಜೂನ್ 4, 1946 ರಂದು ಆಂಧ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾ ನಲ್ಲಿ ಜನಿಸಿದರು. ಹರಿಕಥೆ ಹೇಳುತ್ತಿದ್ದ ಇವರ ತಂದೆ ಎಸ್.ಪಿ.ಸಾಂಬಮೂರ್ತಿಯವರೇ ಇವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆದರು. ಮುಂದೆ ಮೇರು ಪ್ರಸಿದ್ಧಿ ಪಡೆದ ನಂತರ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದರು.

ಇಂಜಿನಿಯರಿಂಗ್ ಮಾಡಿದ್ದ ಎಸ್.ಪಿ.‌ ಬಾಲಸುಬ್ರಹ್ಮಣ್ಯಂ ಅವರು ಕಾಲೇಜು ದಿನಗಳಲ್ಲೇ ಸಂಗೀತ ಲೊಕದತ್ತ ಆಕರ್ಷಿತರಾಗಿದ್ದರು. ಕಾಲೇಜಿನಲ್ಲಿ‌ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಅವರು, ಮೊದಮೊದಲು ಪಿ.ಬಿ. ಶ್ರೀನಿವಾಸ್ ಅವರ ಹಾಡುಗಳನ್ನು ಅದ್ಭುತವಾಗಿ ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಎಸ್.ಪಿ.‌ ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಕಲೆಯನ್ನು ಮೊದಲಿಗೆ ಗುರುತಿಸಿದ್ದು ಸಂಗೀತ ನಿರ್ದೇಶಕ ಕೋದಂಡಪಾಣಿ ಅವರು.

1966ರ ವರ್ಷದಲ್ಲಿ ಬಾಲು ಅವರು, ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದರು. ಇಬ್ಬರಿಂದಲೂ ಅವರಿಗೆ ಮೆಚ್ಚುಗೆಯ ಸುರಿಮಳೆಯಾಯಿತು. ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರ ‘ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ’ದಲ್ಲಿ ಹಾಡಲು ಅವಕಾಶ ನೀಡಿದರು. ಎಸ್‌ಪಿಬಿ ಅವರು ಒಮ್ಮೆ ‘ನಾನು ಘಂಟಸಾಲ ಅವರ ಏಕಲವ್ಯ ಶಿಷ್ಯ’ ಎಂದಿದ್ದರು.

ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಮಾತುಗಾರರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲಸುಬ್ರಮಣ್ಯಂ ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾಭಿವ್ಯಕ್ತಿ ಅವರಲ್ಲಿರುವುದನ್ನು ಸುಲಭವಾಗಿ ಕಾಣಬಹುದು.

ದಕ್ಷಿಣ ಭಾರತದ ತೆಲುಗು, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅವರದ್ದು ಅದ್ವಿತೀಯ ಸಾಧನೆ. ಗಾಯನದಲ್ಲಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲಿ ಅವರು ನಿರಂತರವಾದ ಸಾಧನೆ ಮಾಡಿದ್ದವರು. 16ಕ್ಕೂ ಹೆಚ್ಚು ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಎಸ್.ಪಿ.ಬಿ ಅವರಿಗೆ ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳು ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು 25 ಬಾರಿ ಆಂಧ್ರಪ್ರದೇಶ ಸರ್ಕಾರದ ‘ನಂದಿ’ ಪ್ರಶಸ್ತಿ. 4 ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ.

ಒಂದೇ ದಿನ ತಮಿಳಿನ ವಿವಿಧ ಚಲನಚಿತ್ರಗಳ 19 ಹಾಡುಗಳಿಗೆ ಹಾಡನ್ನು ಹಾಡಿದ ಎಸ್‌ಪಿಬಿ ಅವರದು ದಾಖಲೆಯಾಗಿದೆ.  ಅದೇ ವರ್ಷ (1981ರಲ್ಲಿ) “ಏಕ್ ದುಜೆ ಕೆ‌ ಲಿಯೇ” ಸಿನಿಮಾ ಮೂಲಕ ಹಿಂದಿಗೆ ಪದಾರ್ಪಣೆ ಮಾಡಿದ್ದರು. ಆ ಸಿನಿಮಾದ “ತೆರೆ ಮೇರೆ ಬೀಚ್ ಮೆ..” ಹಾಡಿಗೆ ಮತ್ತೊಮ್ಮೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು. ಕನ್ನಡದಲ್ಲಿ ಒಂದೇ ದಿನ 17 ಗೀತೆಗಳನ್ನು ಧ್ವನಿಮುದ್ರಿಸಿದ್ದರು, ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳನ್ನು ಧ್ವನಿಮುದ್ರಿಸಿದ್ದರು. ಇದು ಎಸ್ ಪಿ ಬಿ ಅವರ ಸಾಮರ್ಥ್ಯ.

“ಹಾವಿನ ದ್ವೇಷ ಹನ್ನೆರಡು ವರುಷ” ಎಂದು ಹಾಡಿನಿಂದ ವಿಷ್ಣುವರ್ಧನ್ ರಾಮಾಚಾರಿಯಾದರು. “ಸ್ನೇಹದ ಕಡಲಲ್ಲಿ” ಎಂದು ಹಾಡಿನಿಂದ ಶ್ರೀನಾಥ್ ಗರಿಗೆದರಿಬಿಟ್ಟರು. “ಎಲ್ಲಿರುವೇ ಮನವ ಕಾಡುವ ರೂಪಸಿಯೇ” ಎಂದು ಅನಂತ್ ನಾಗ್ ಅವರು.  “ನಲಿವಾ ಗುಲಾಬಿ ಹೂವೆ” ಎಂದು ಶಂಕರ್ ಭಾವಸ್ಥರಾದರು. ದಕ್ಷಿಣ ಭಾರತದ ರಜನೀಕಾಂತ್, ಕಮಲಹಾಸನ್, ಚಿರಂಜೀವಿ ಹೀಗೆ ಎಪ್ಪತ್ತು ಎಂಭತ್ತರ ದಶಕದಿಂದ ಎರಡು ಸಾವಿರದ ದಶಕದವರೆಗಿನ ಬಹುತೇಕ ಹೀರೋಗಳ ಅಂತರ್ಧ್ವನಿ ಶಕ್ತಿ ಇವರದ್ದು.

ಇವರ ಧ್ವನಿಯ ಮೋಡಿ ಎಂ.ಜಿ. ಆರ್, ಶಿವಾಜಿ ಗಣೇಶನ್, ಎನ್ ಟಿ ರಾಮರಾವ್, ರಾಜ್ ಕುಮಾರ್, ಅಕ್ಕಿನೇನಿ ಅಂತಹ ಹಿರಿಯರಿಗೆ ಕೂಡಾ ಹಾಡುಗಳನ್ನು ಹಾಡಿದ್ದಾರೆ. ವಿಶೇಷವೆಂದರೆ ಮುದ್ದಿನಮಾವ ಕನ್ನಡ ಚಲನಚಿತ್ರ ಅಭಿನಯಿಸಿದ್ದ ಎಸ್‌ಪಿಬಿ ಅವರು, ಚಿತ್ರದಲ್ಲಿ ಅವರ ಅಭಿನಯದ ಹಾಡಿಗೆ ಡಾ.ರಾಜ್‌ಕುಮಾರ್‌ ಅವರು ಧ್ವನಿಯಾಗಿರುವುದು ಸಹ ನೆನಪಿನಲ್ಲಿ ಉಳಿಯುವಂತಹ ಹಾಡಾಗಿದೆ.

“ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ” ಚಿತ್ರಗಳ ಹಾಡುಗಳಿಗೆ  ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಪದ್ಮಶ್ರೀ, ಪದ್ಮಭೂಷಣ, ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಇನ್ನಿತರ ಗೌರವ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಎಸ್ ಪಿ ಬಿ ಅವರು ಹಾಡಿರುವ ಹಾಡುಗಳ ಸಂಖ್ಯೆ 45000 ಕ್ಕೂ ಹೆಚ್ಚು. ವಿವಿಧ ಭಾಷೆಗಳ ಪರಿಧಿಯಲ್ಲಿ ಇಷ್ಟೊಂದು ಗೀತೆಗಳನ್ನು ಹಾಡಿರುವವರು ಇವರೊಬ್ಬರೇ.

ದೂರದರ್ಶನ ಕಾರ್ಯಕ್ರಮಗಳಲ್ಲಿ ಒಂದಾದ ‘ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮವನ್ನು ಹೆಚ್ಚು ಕಾಲ ನಡೆಸಿಕೊಟ್ಟಿದ್ದಾರೆ. ಇತರ ಭಾಷೆಗಳಲ್ಲೂ ಅಂತದೇ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಅವರು ಪುಟ್ಟ ಮಕ್ಕಳಿಂದ ಹಿಡಿದು ಸಂಗೀತದ ದಿಗ್ಗಜಗಳವರೆಗೆ ಹಿರಿಯರು ಕಿರಿಯರು ಎಲ್ಲರನ್ನೂ ಗೌರವಪೂರ್ಣವಾಗಿ ನಡೆಸಿಕೊಳ್ಳುವುದನ್ನು ಕಾಣುವುದೇ ಒಂದು ಚೆಂದ ಎಂಬುದು ಅವರ ಅಭಿಮಾನಿ ವೀಕ್ಷಕರುಗಳ ನುಡಿ.  ಇವರ ಒಟ್ಟಾರೆ ಪ್ರಮುಖ ಸಾಧನೆಗಳನ್ನು ಹೇಳುವುದಾದರೆ ಅದು ಅಪರಿಮಿತವಾದುದು.

Donate Janashakthi Media

Leave a Reply

Your email address will not be published. Required fields are marked *