ಸ್ಕಾಲರ್ಶಿಪ್ ಹೆಚ್ಚಿಸಿ ಅಂದಿದಕ್ಕೆ ಅಮಾನತ್ತಿನ ಶಿಕ್ಷೆ !? ಶಿಕ್ಷಣ ಉಳ್ಳವರ ಸೊತ್ತೆ?

ಗುರುರಾಜ ದೇಸಾಯಿ

ದೆಹಲಿಯ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದ (ಎಸ್‌ಎಯು) ಎರಡನೇ ವರ್ಷದ ಎಲ್‌ಎಲ್‌ಎಂ ವಿದ್ಯಾರ್ಥಿನಿ ಅಪೂರ್ವ ವೈಕೆ ತನ್ನ ವಿರುದ್ಧದ ಉಚ್ಚಾಟನೆ ನೋಟಿಸ್ ಅನ್ನು ಹಿಂಪಡೆಯುವಂತೆ ಒತ್ತಾಯಿಸಿ ವಾರ್ಸಿಟಿ ಗೇಟ್ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕ್ಯಾಂಪಸ್‌ ಡೆಮಾಕ್ರಸಿಯ ಮೇಲಿನ ಗದಾ ಪ್ರಹಾರ ಮುಂದು ವರೆದಿದೆ. 

ಫೆಬ್ರವರಿ 25 ರ ರಾತ್ರಿ ಅಪೂರ್ವ ಅವರನ್ನು ತನ್ನ ಹಾಸ್ಟೆಲ್‌ನಿಂದ ಹೊರಹಾಕಲಾಯಿತು ಮತ್ತು ಅಂದಿನಿಂದ ಗೇಟ್‌ನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.  ಪ್ರತಿಭಟನಾ ಸ್ಥಳಕ್ಕೆ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ನಾಯಕಿ ಆಯಿಷಿ ಘೋಷ್ ಸೇರಿದಂತೆ ಅನೇಕರು ಬೆಂಬಲ ನೀಡಿದ್ದಾರೆ.

ವೈ. ಕೆ ಅಪೂರ್ವ ಕರ್ನಾಟಕದವರಾಗಿದ್ದು, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಯರಬಹಳ್ಳಿ ಗ್ರಾಮಾದವರಾಗಿದ್ದಾರೆ.  ವಿದ್ಯಾರ್ಥಿ ವೇತನ ಹೆಚ್ಚಿಸಿ, ಗುಣಮಟ್ಟದ ಶಿಕ್ಷಣ ನೀಡಿ ಎಂದು ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಅಮಾನತ್ತಿನ ಹೆಸರಿನಲ್ಲಿ ದೌರ್ಜನ್ಯ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ, ಇದು ಶಿಕ್ಷಣ ಹಕ್ಕಿನ ಉಲ್ಲಂಘನೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸುತ್ತಿವೆ.

ಘಟನೆಗಳ ಕಾಲಾನುಕ್ರಮಣಿಕೆ ಹೀಗಿದೆ….

13ನೇ ಅಕ್ಟೋಬರ್ 2022 ರಿಂದ, ಹೊಸ ದೆಹಲಿಯ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹೆಚ್ಚಳ ಮಾಡಬೇಕು ಮತ್ತು ಲೈಂಗಿಕ ಕಿರುಕುಳದ ದೂರುಗಳ ಬಗ್ಗೆ ವ್ಯವಹರಿಸುವ ವಿಶ್ವವಿದ್ಯಾಲಯದ ದೂರುಗಳ ಸಮಿತಿಯಲ್ಲಿ ವಿದ್ಯಾರ್ಥಿಗಳ ಪ್ರಾತಿನಿಧ್ಯ ಸೇರಿದಂತೆ ವಿದ್ಯಾರ್ಥಿವೇತನ ನೀತಿಯಲ್ಲಿನ ಬದಲಾವಣೆಗಳಿಗಾಗಿ ಪ್ರತಿಭಟಿನೆ ಆರಂಭಿಸುತ್ತಾರೆ.  ವಿದ್ಯಾರ್ಥಿಗಳು ವಿವಿ ನಿಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ, ಹಾಗೂ ಗುಂಪು ಕಟ್ಟಿಕೊಂಡು ಗಲಾಟೆ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿತ್ತು.

ನವೆಂಬರ್ 1 ರಂದು, ಸಾಮಾನ್ಯ ಸಭೆಯೊಂದರಲ್ಲಿ ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಕಳವಳಗಳನ್ನು ಪರಿಹರಿಸಲು ಆಡಳಿತವು ವಿಫಲವಾದ ನಂತರ ವಿದ್ಯಾರ್ಥಿಗಳ ಅನಿರ್ದಿಷ್ಟ ಧರಣಿಯನ್ನು ಪ್ರಾರಂಭಿಸಿದರು. ಅಲ್ಲಿ ಅಮ್ಮರ್ ಅಹ್ಮದ್ ಸೇರಿದಂತೆ ವಿದ್ಯಾರ್ಥಿಗಳು ಹಣಕಾಸಿನ ತೊಂದರೆಗಳು ಮತ್ತು ಹೆಚ್ಚಿನ ಸಹಾಯದ ಅಗತ್ಯದ ಬಗ್ಗೆ ವಿವರವಾಗಿ ವಿವರಿಸಿದರು.

ನವೆಂಬರ್ 4 ರಂದು, ವಿಶ್ವವಿದ್ಯಾನಿಲಯದ ಆಡಳಿತವು ಇಬ್ಬರು ವಿದ್ಯಾರ್ಥಿಗಳನ್ನು ಹೊರಹಾಕಿತು (ಉಮೇಶ್ ಜೋಶಿಯನ್ನು, ಅಮ್ಮರ್ ಅಹ್ಮದ್) ಮತ್ತು ಒಬ್ಬ ವಿದ್ಯಾರ್ಥಿಯನ್ನು ಯಾವುದೇ ಪ್ರಕ್ರಿಯೆಗಳನ್ನು ಅನುಸರಿಸದೆ ನಿರಂಕುಶವಾಗಿ( ಭೀಮರಾಜ್ )ಅಮಾನತುಗೊಳಿಸಿತು.

ನವೆಂಬರ್ 7 ರಂದು, ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯ ಸ್ವರೂಪವನ್ನು ಬದಲಾಯಿಸಿಕೊಡರು.  ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ನಡೆಸಲು ಮುಂದಾಗುತ್ತಾರೆ. ಈ ಹಿಂದೆ ಇಟ್ಟಿದ್ದ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಅನಿಯಂತ್ರಿತ ಶಿಸ್ತು ಕ್ರಮಗಳನ್ನು ಹಿಂಪಡೆಯಬೇಕು ಎಂಬ ಆಗ್ರಹವನ್ನು ಮಾಡುತ್ತಾರೆ.

ನವೆಂಬರ್ 22ರ ರಾತ್ರಿ, ಮೊದಲ ವರ್ಷದ ಎಂ.ಎ ಸಮಾಜಶಾಸ್ತ್ರದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಅಮ್ಮರ್ ಅಹಮದ್ ಅವರು ಅನಾರೋಗ್ಯದ ಸಮಸ್ಯೆಯಿಂದ ತಮ್ಮ ಹಾಸ್ಟೆಲ್ ಕೋಣೆಯಲ್ಲಿ ಕುಸಿದುಬಿಳಿತ್ತಾರೆ.  ಮತ್ತು ಅವರನ್ನು ಚಾಣಕ್ಯಪುರಿಯ ಪ್ರಿಮಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಐಸಿಯುನಲ್ಲಿದ್ದಾಗ, ಅಮ್ಮಾರ್ ಹೃದಯ ಸ್ತಂಭನದಿಂದ ಬಳಲುತ್ತಿದ್ದ.  ನಂತರ ಅವರು ನಿರಂತರ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಾರೆ.  ಆದರೂ  ಅಮ್ಮರ್ ಸರಣಿ ಅನಾರೋಗ್ಯದ ಸಮಸ್ಯೆಗಳನ್ನು ಅನುಭವಿಸುತ್ತಾರೆ.  ಅಮ್ಮಾರ್ ತೀವ್ರ ಒತ್ತಡಕ್ಕೊಳಗಾದ ಕಾರಣ  ಮನೋವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಾರೆ. ತಮ್ಮ ಮೇಲೆ ಹೇರಲಾಗಿರುವ ಅಮಾನತ್ತಿನ ಆದೇಶವನ್ನು ಮರುಪರಿಶೀಲಿಸುವಂತೆ ಅಮ್ಮಾರ್ ಅವರು ಆಡಳಿತದ ಸದಸ್ಯರಿಗೆ, ವಿಶೇಷವಾಗಿ ಹಂಗಾಮಿ ರಿಜಿಸ್ಟ್ರಾರ್ ಪ್ರೊ. ಮೊಹಮ್ಮದ್ ಅಬುಲೈಶ್ ಅವರಿಗೆ ಪದೇ ಪದೇ ಮನವಿ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ನಿರಂತರ ಸಾಂಸ್ಥಿಕ ಕಿರುಕುಳದ ಪರಿಣಾಮವಾಗಿ, ಅಮ್ಮಾರ್ ಸಾಯಬೇಕು ಎಂದು ಪ್ರಯತ್ನಿಸುತ್ತಾನೆ.  ಅಮ್ಮಾರ್ ಮೊದಲ ತಲೆಮಾರಿನ ಕಲಿಯುವವರಾಗಿದ್ದು, ಉನ್ನತ ಶಿಕ್ಷಣವನ್ನು ಪ್ರವೇಶಿಸಲು ಹಲವಾರು ಅಡೆತಡೆಗಳನ್ನು ನಿವಾರಿಸಬೇಕಾಯಿತು. ಅವರ ಕುಟುಂಬಕ್ಕೆ ವೈದ್ಯಕೀಯ ವೆಚ್ಚ ಭರಿಸುವ ಆರ್ಥಿಕ ಸ್ಥಿತಿ ಇರಲಿಲ್ಲ.

ಇದನ್ನೂ ಓದಿಭಾರತದಲ್ಲಿ ಶಿಕ್ಷಣವೆಂಬುದು ಬಡವರಿಗೆ ಗಗನ ಕುಸುಮವಾಗುತ್ತಿದೆಯೇ?

ನವೆಂಬರ್ 23 ರಂದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಆಡಳಿತಾತ್ಮಕ ಕಛೇರಿ ಮುಂದೆ ಜಮಾಯಿಸಿ ಹಂಗಾಮಿ ಅಧ್ಯಕ್ಷರು, ಹಂಗಾಮಿ ಉಪಾಧ್ಯಕ್ಷರು ಮತ್ತು ಹಂಗಾಮಿ ರಿಜಿಸ್ಟ್ರಾರ್‌ಗೆ ಅಮ್ಮಾರ್ ಅವರ ವೈದ್ಯಕೀಯ ವೆಚ್ಚವನ್ನು ಭರಿಸಲು ಮತ್ತು ಅವರ ವಿರುದ್ಧದ ಆದೇಶವನ್ನು ಹಿಂಪಡೆಯಲು ಮನವಿ ಮಾಡಿದರು. ಆಡಳಿತವು ಅಂತಿಮವಾಗಿ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ಒಪ್ಪಿಕೊಂಡಿತು ಮತ್ತು ವೆಚ್ಚವನ್ನು ಭಾಗಶಃ ಪೂರೈಸಿತು. ಉಚ್ಚಾಟನೆ/ರಸ್ಟಿಕೇಶನ್ ಆದೇಶಗಳನ್ನು ವಾರದ ಅವಧಿಯ ಅಮಾನತುಗಳನ್ನು ಹಿಂದಕ್ಕೆ ಪಡೆದು, ಆ ಅಮಾನತು ಆದೇಶವನ್ನು ದಂಡಕ್ಕೆ ಇಳಿಸಿದರು.

ನವೆಂಬರ್ 25 ರಂದು, ಉಮೇಶ್ ಜೋಶಿ ಮತ್ತು ಭೀಮರಾಜ್ ಎಂ ಅವರಿಗೆ ಉಚ್ಚಾಟನೆಯ ನೋಟಿಸ್‌ಗಳನ್ನು ಮತ್ತೆ ನೀಡಲಾಯಿತು.

ನವೆಂಬರ್ 26 ರಂದು, ಅಪೂರ್ವ ವೈ.ಕೆ, ರೋಹಿತ್ ಕುಮಾರ್, ಪ್ರೊಚೇತಾ ಮುಖರ್ಜಿ, ಕೇಶವ್ ಸವರ್ಣ್ ಮತ್ತು ಬನ್ಯಾ ಚಕ್ರವರ್ತಿ ಎಂಬ 5 ವಿದ್ಯಾರ್ಥಿಗಳಿಗೆ  ಅಮ್ಮಾರ್ ಪರ ವಕಾಲತ್ತು ವಹಿಸಿದ್ದಾರೆ ಎಂದು ಆರೋಪಿಸಿ  ಶೋಕಾಸ್ ನೋಟಿಸ್ ನೀಡುತ್ತಾರೆ.

ಜನವರಿ 13, 2023 ಶೋಕಾಸ್ ನೋಟಿಸ್‌ಗಳನ್ನು ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಶೋಕಾಸ್ ನೋಟಿಸ್‌ಗಳಿಗೆ ಅವರ ಪ್ರತಿಕ್ರಿಯೆಗಳನ್ನು ಪಡೆಯಬೇಕು ಎಂದು ತಾತ್ಕಾಲಿಕ ಉನ್ನತ ಅಧಿಕಾರಯ ಸಮಿತಿಯನ್ನು ರಚಿಸುತ್ತಾರೆ.

17ನೇ ಫೆಬ್ರವರಿ 2023 ರಂದು, ಉನ್ನತಾಧಿಕಾರ ಸಮಿತಿಯ ಶಿಫಾರಸಿನ ಮೇರೆಗೆ ಅಪೂರ್ವ ವೈ.ಕೆ ಮತ್ತು ಪ್ರೊಚೇತಾ ಎಂ ಅವರನ್ನು ವಿವಿಯಿಂದ ಹೊರಹಾಕಲಾಗುತ್ತದೆ. ಕೇಶವ್ ಸವರ್ನ್ ಮತ್ತು ರೋಹಿತ್ ಕುಮಾರ್ ಅವರಿಗೆ ಒಂದು ವರ್ಷದವರೆಗೆ ಶಿಕ್ಷಣವನ್ನು ನಿರ್ಭಂದಿಸಲಾಗುತ್ತದೆ.  ಬನ್ಯಾ ಚಕ್ರವರ್ತಿಗೆ ದಂಡ ವಿಧಿಸಲಾಯಿತು ಮತ್ತು ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಇಂತಹ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳುತ್ತಾರೆ.

ಫೆಬ್ರವರಿ 25 ರಂದು, ವಿಶ್ವವಿದ್ಯಾಲಯದ ಅಧಿಕಾರಿಗಳು ಉಚ್ಚಾಟನೆ ಆದೇಶಗಳನ್ನು ಜಾರಿಗೊಳಿಸುತ್ತಾರೆ.  ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಹಾಸ್ಟೆಲ್ ಕೊಠಡಿಗಳನ್ನು ಖಾಲಿ ಮಾಡುವಂತೆ ಒತ್ತಾಯಿಸಿದರು.

ಹೀಗೆ ವಿವಿ  ಹಾಗೂ ಹಾಸ್ಟೇಲ್‌ ನಿಂದ ಹೊರ ಹಾಕಲ್ಪಟ್ಟ ಅಪೂರ್ವ ಇಂದಿನ ವರೆಗೆ ವಿವಿ ಮುಂಭಾಗದ ಆವರಣದಲ್ಲಿ ಅನಿರ್ದಿಷ್ಟ ಧರಣಿಯನ್ನು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ : ಆಯುಷ್ಯವಿಲ್ಲದ ಬಜೆಟ್‌ ನಲ್ಲಿ ಭರಪೂರ ಯೋಜನೆಗಳು

ಶಿಕ್ಷಣ ಉಳ್ಳವರ ಸೊತ್ತೆ? : ಶಿಕ್ಷಣ ಉಳ್ಳವರ ಸೊತ್ತು ಎಂಬುದನ್ನು ಸರಕಾರ ಪದೇ ಪದೇ ನಿರೂಪಿಸುತ್ತಿದೆ. ಹಲವು ರಾಜ್ಯಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ  ಹಣ ಕಡಿತ ಮಾಡಲಾಗುತ್ತಿದೆ.  ಫೆಲೋಶಿಪ್‌ಗಳು/ ವಿದ್ಯಾರ್ಥಿವೇತನಗಳಲ್ಲಿ ತೀವ್ರ ವಿಳಂಬ ಮಾಡಲಾಗುತ್ತಿದೆ. ಇದರಿಂದಾಗಿ ಶೋಷಿತ ಸಮುದಾಯಗಳ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ ಬಿಡಬೇಕಾದ ಪರಿಸ್ಥಿತಿಗಳು ಹೆಚ್ಚುತ್ತಿವೆ. ವಿವಿಯ ಹಾಸ್ಟೆಲ್‌ಗಳು ದುಸ್ಥಿತಿಗೆ ತಳ್ಳಿವೆ,  ಹಲವು ಕಡೆ ಮುಚ್ಚತ್ತಿರುವ ವರದಿಗಳು ಕೇಳಿ ಬರುತ್ತಿವೆ.

ರೋಹಿತ್ ವೇಮುಲಾ ಮತ್ತು ರಜಿನಿ ಕ್ರಿಷ್ ಅವರ ಸಾಂಸ್ಥಿಕ ಹತ್ಯೆಗಳ ಚಿತ್ರಣ ಇನ್ನೂ ಕಣ್ಮುಂದೆ ಇದೆ. ಆದರೆ ಆಳುವ ಸರಕಾರಕ್ಕೆ, ವಿವಿ ಆಡಳಿತ ಮಂಡಳಿಗೆ ವಿದ್ಯಾರ್ಥಿಗಳ ಹಕ್ಕುಗಳ ಬಗ್ಗೆ, ಅವರ ಶಿಕ್ಷಣದ ಬಗ್ಗೆ ಗಟ್ಟಿಯಾದ ಕಾಳಜಿ ಬರುತ್ತಿಲ್ಲ. ದಲಿತ, ಆದಿವಾಸಿ, ಹಿಂದುಳಿದ, ಅರೆ ಸಮುದಾಯಗಳಿಂದ ಬಂದಂತ ವಿದ್ಯಾರ್ಥಿಗಳು ಇಂದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆಧುನಿಕ ಶಂಬೂಕ ಮತ್ತು ಏಕಲವ್ಯರ ಹಾಗೆ ಜೀವಪರಿತ್ಯಾಗ ಮಾಡುವಂತಹ ಸನ್ನಿವೇಶವನ್ನು ಸೃಷ್ಟಿಸಲಾಗುತ್ತಿದೆ.

ಕಳೆದ ಎಂಟು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸರಕಾರವೇ ಹಲವು ಹಾವಳಿಗಳನ್ನು ಮಾಡಿದೆ. ಕ್ಯಾಂಪಸ್ ಪ್ರಜಾಪ್ರಭುತ್ವದ ಮೇಲೆ ಒಂದಾದ ಮೇಲೊಂದರಂತೆ ಹಲ್ಲೆಗಳು ನಡೆಸಿದೆ. ಇನ್ನಷ್ಟು ಕೇಂದ್ರೀಕರಣದ ಪ್ರಯತ್ನಗಳು, ಶಿಕ್ಷಣದ ಮತ್ತಷ್ಟು ಖಾಸಗೀಕರಣ/ವ್ಯಾಪಾರೀಕರಣ ಮತ್ತು ಕೇಸರೀಕರಣದ ಭಾಗವಾಗಿ ತನ್ನ ಅಜೆಂಡಾಗಳನ್ನು ಒತ್ತಾಯಪೂರ್ವಕವಾಗಿ ಜಾರಿ ಮಾಡುತ್ತಾ ಬಂದಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಕ್ಯಾಂಪಸ್‌ ಡೆಮಾಕ್ರಸಿಯನ್ನು ಉಳಿಸಬೇಕು. ವಿದ್ಯಾರ್ಥಿಗಳ ಹಕ್ಕುಗಳನ್ನು ಕಾಪಾಡಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *