ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಬಂಧನ ಖಂಡಿಸಿ ಕಳೆದ ಆರು ದಿನಗಳಿಂದ ಬುಗಿಲೆದ್ದಿರುವ ಹಿಂಸಾಚಾರಕ್ಕೆ ಇದುವರೆಗೆ ಸುಮಾರು 220ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ. ಅದರಲ್ಲಿ ಸುಮಾರು 70 ಮಂದಿ ಭಾರತೀಯರು ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಜೋಕೋಬ್ ಜೂಮಾ ನ್ಯಾಯಾಂಗ ನಿಂದನೆ ಮಾಡಿದ್ದ ಕಾರಣಕ್ಕಾಗಿ ಅಲ್ಲಿನ ಸುಪ್ರೀಂಕೋರ್ಟ್ ಆದೇಶದಂತೆ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಹಿಂದ ತಲ್ಲಣಗೊಂಡ ಕೆಲವರು ಶುರುಮಾಡಿದ ಹಿಂಸಾಚಾರ ದಕ್ಷಿಣ ಆಫ್ರಿಕಾದಲ್ಲಿ ಬಿಗುವಿನ ವಾತಾವರಣೆ ನಿರ್ಮಾಣವಾಗಿದೆ.
ಜಾಕೋಬ್ ಜುಮಾ (79) ಅಧ್ಯಕ್ಷರಾಗಿದ್ದಾಗ ನಡೆದಿದ್ದ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಒದಗಿಸಲು ಕೋರ್ಟ್ ಆದೇಶ ನೀಡಿತ್ತು. ಅದನ್ನು ಉಲ್ಲಂಘಿಸಿದ ಜುಮಾರಿಗೆ 15 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅವರನ್ನು ಬಂಧನಕ್ಕೆ ಒಳಪಡಿಸುತ್ತಿದ್ದಂತೆ ಹಿಂಸಾಚಾರ ಆರಂಭವಾಯಿತು.
ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯ ಮೂಲದವರು ಸಹಾಯಕ್ಕಾಗಿ ಮನವಿ ಮಾಡಿದ ಬೆನ್ನಲ್ಲೇ ಅವರ ಸಹಾಯಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಮುಂದಾಗಿದೆ.
ಗಲಭೆ ನಡೆಯುತ್ತಿರುವ ಪ್ರದೇಶಗಳಾದ ಡರ್ಬನ್, ಪೀಟರ್ಮರಿಟ್ಜ್ಬರ್ಗ್, ಜೊಹಾನ್ಸ್ಬರ್ಗ್ಗಳಲ್ಲಿ ಭಾರತೀಯರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಈ ಪ್ರದೇಶಗಳನ್ನೇ ಗಲಭೆಕೋರರು ಗುರಿಯಾಗಿಸಿಕೊಂಡಿದ್ದಾರೆ. ಭಾರತೀಯ ವಲಸಿಗರು, ಭಾರತೀಯ ಒಡೆತನದ ವ್ಯವಹಾರಗಳು, ಭಾರತೀಯ ಮೂಲದ ದಕ್ಷಿಣ ಆಫ್ರಿಕನ್ನರ ಮೇಲೆಯೇ ದಾಳಿ ನಡೆಯುತ್ತಿದೆ. ಗಲಭೆಯಲ್ಲಿ ಸಣ್ಣಪುಟ್ಟ ಅಂಗಡಿಗಳು, ರೇಡಿಯೋ ಕೇಂದ್ರಗಳು, ಮಾಲ್ಗಳು ಧ್ವಂಸಗೊಂಡಿವೆ. ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಪರಿಸ್ಥಿತಿ ತೀರ ಹದಗೆಟ್ಟಿದ್ದು, ಶಾಂತಿ ಮರುಸ್ಥಾಪನೆಗೆ ಸರಕಾರ ತೀವ್ರ ಪ್ರಯತ್ನ ಮಾಡುತ್ತಿದೆ.
ಕಳೆದ ಆರು ದಿನಗಳಿಂದ ಸುಮಾರು 78 ಔಷಧಿ ಅಂಗಡಿಗಳು, ಸುಮಾರು 300ಕ್ಕೂ ಹೆಚ್ಚು ಸೂಪರ್ ಮಾರುಕಟ್ಟೆಗಳನ್ನು ನಾಶಪಡಿಸಲಾಗಿದೆ. ರಾಜಕೀಯ ಪ್ರಚೋದನೆಗೆ ಒಳಗಾದ ಗುಂಪು ಮಾರಕಾಸ್ತ್ರಗಳನ್ನಿಡಿದುಕೊಂಡು ರಸ್ತೆಗಳಲ್ಲಿ ಓಡಾಡುತ್ತಿದ್ದು, ಕೈಗೆ ಸಿಕ್ಕವರನ್ನು ಕೊಲ್ಲುತ್ತಿದ್ದಾರೆ.
ಮಾರುಕಟ್ಟೆ, ಔಷ ಅಂಗಡಿ, ಮಾಲ್ಗಳು, ವ್ಯಾಪಾರ ಮಳಿಗೆಗಳನ್ನು ದೋಚಿ ನಾಶ ಮಾಡಲಾಗುತ್ತಿದೆ. ಹಿಂಸಾಚಾರ ಕಳೆದ ಆರು ದಿನಗಳಿಂದ ನಡೆಯುತ್ತಿದ್ದು ದಕ್ಷಿಣ ಆಫ್ರಿಕಾ ಸರ್ಕಾರ ಪರಿಸ್ಥಿತಿಯನ್ನು ಹತೋಟಿಗೆ ತರಲು ಎರಡೂವರೆ ಸಾವಿರ ಸೈನಿಕರನ್ನು ನೇಮಿಸಿತ್ತು.
ಒಂದಷ್ಟು ಅಂದಾಜಿನ ಪ್ರಕಾರ, ಡರ್ಬನ್ನಲ್ಲಿ ಮಾಲ್ಗಳು, ಕಾರ್ಖಾನೆಗಳು ಮತ್ತು ಕೆಲವು ಕೈಗಾರಿಕೆಗಳು ಸಂಪೂರ್ಣವಾಗಿ ಸುಟ್ಟುಹೋಗಿದೆ. ಇದರಿಂದ 1,29,000 ಉದ್ಯೋಗಗಳು ನಷ್ಟವಾಗಿವೆ. ಹೆಚ್ಚಿನ ಕಾರ್ಮಿಕರು ಇಲ್ಲಿನ ಕಂಪನಿಗಳ ಮೇಲೆಯೇ ಅವಲಂಬಿತರಾಗಿದ್ದರು. ದೇಶದಲ್ಲಿ ಈಗಾಗಲೇ ಗಗನಕ್ಕೇರುತ್ತಿರುವ ನಿರುದ್ಯೋಗ ಅಂಕಿಅಂಶಗಳನ್ನು ಗಲಭೆಯಿಂದಾಗಿ ಮತ್ತಷ್ಟು ಹೆಚ್ಚಿಸುತ್ತದೆ.
ಸ್ಥಳೀಯರು ಸ್ವಯಂ ರಕ್ಷಣೆಗಾಗಿ ನಾಗರಿಕ ಪಡೆಗಳನ್ನು ರಚಿಸಿಕೊಂಡು ಕಾವಲಿಗೆ ನಿಂತಿದ್ದಾರೆ. ಆದರೆ, ಏಕಾಏಕಿ 500 ರಿಂದ 600 ಮಂದಿಯ ಗುಂಪು ದಾಳಿ ನಡೆಸುತ್ತಿರುವುದರಿಂದ ಪರಿಸ್ಥಿತಿ ನಿಯಂತ್ರಣ ಕಷ್ಟಸಾಧ್ಯವಾಗುತ್ತಿದೆ. ಪೆಟ್ರೋಲ್ ಬಾಂಬ್ಗಳನ್ನು ಎಸೆಯುವುದು, ಗುಂಡು ಹಾರಿಸುವುದು, ಮಾರಕಾಯುಧಗಳಿಂದ ಕಗ್ಗೊಲೆ ಮಾಡುವುದು, ಏಕಾಏಕಿ ನುಗ್ಗಿ ಲೂಟಿ ಮಾಡುವುದು ನಡೆಯುತ್ತಿದೆ.
ಆರ್ಥಿಕ ಪ್ರಭಾವದ ಪ್ರಾಥಮಿಕ ಅಂದಾಜಿನ ಪ್ರಕಾರ, ಅಶಾಂತಿಯಿಂದಾಗಿ ನಷ್ಟದ ಅಂದಾಜು ಆರ್1 ಬಿಲಿಯನ್ ಮತ್ತು ಆಸ್ತಿ ಮತ್ತು ವಸ್ತುಗಳು ಹಾನಿಯಾಗಿವೆ. ಸುಮಾರು 15 ಬಿಲಿಯನ್ ಡಾಲರ್ನಷ್ಟು ವೆಚ್ಚವಾಗಲಿದೆ. 5,000 ಅನೌಪಚಾರಿಕ ವ್ಯಾಪಾರಿಗಳು ಒಳಗೊಂಡ ಸುಮಾರು 45,000 ವ್ಯವಹಾರಗಳು ಗಲಭೆಯಿಂದ ತೀವ್ರವಾಗಿ ಹಾನಿಯಾಗಿವೆ. ಸಣ್ಣ ಉದ್ಯಮಗಳು ಈ ದಂಗೆಯಿಂದ ಎಂದಿಗೂ ಚೇತರಿಸಿಕೊಳ್ಳದ ಪರಿಸ್ಥಿತಿಗೆ ಹಾನಿಯಾಗಿವೆ.
ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಪ್ರದೇಶದಲ್ಲಿ ರಕ್ಷಣಾ ಪಡೆಗಳ ಸಂಖ್ಯೆ ಸಾಲದಾದ್ದರಿಂದ ಮತ್ತೆ ಹೊಸದಾಗಿ 25 ಸಾವಿರ ಯೋಧರನ್ನು ನಿಯೋಜಿಸುವುದಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಂಪೋ ಸಾ ಘೋಷಿಸಿದ್ದಾರೆ. ಹಾಲಿ ಮತ್ತು ಮಾಜಿ ಅಧ್ಯಕ್ಷರು ಆಫ್ರಿಕಾ ನ್ಯಾಷನಲ್ ಕಾಂಗ್ರೆಸ್ ಪಕ್ಷದವರಾಗಿದ್ದು, ಇಬ್ಬರ ಪ್ರತಿಷ್ಠೆಯಿಂದಾಗಿ ರಾಜಕೀಯ ಸಂಘರ್ಷಗಳು ತೀವ್ರವಾಗಿವೆ.
ಆದರೆ, ದಕ್ಷಿಣ ಆಫ್ರಿಕಾ ದೇಶ ಸಚಿವರು ಜಾಕೋಬ್ ಜುಮಾ ಬಂಧನಕ್ಕೂ, ಈಗ ನಡೆಯುತ್ತಿರುವ ಪ್ರತಿಭಟನೆಗಳಿಗೂ ಸಂಬಂಧವೇ ಇಲ್ಲ. ಇದು ದೇಶದ ಆರ್ಥಿಕತೆಯನ್ನು ನಾಶಗೊಳಿಸಲು ಮಾಡುತ್ತಿರುವ ಸಂಘಟಿತ ಯತ್ನವಾಗಿದೆ ಎಂದು ರಕ್ಷಣಾ ಖಾತೆಯ ಡೆಪ್ಯುಟಿ ಸಚಿವ ಝಿಝಿ ಕೊಡ್ವಾ, ಖನಿಜ ಮತ್ತು ಇಂಧನ ಸಚಿವ ಗ್ವೆಡೆ ಮಂಟಾಶೆ ಹೇಳಿದ್ದಾರೆ.