ಬೆಂಗಳೂರು: ಸೌಹಾರ್ದ, ಸಮೃದ್ಧ, ಜನತಾ ಕರ್ನಾಟಕ ನಿರ್ಮಾಣಕ್ಕಾಗಿ ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಪಕ್ಷಗಳ ರಾಜ್ಯ ಮಟ್ಟದ ಸಮಾವೇಶವು ಇಂದು(ಜುಲೈ 16) ನಗರದ ಅಂಬೇಡ್ಕರ್ ಭವನದಲ್ಲಿ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಲಾಯಿತು.
ಸಮಾವೇಶದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು, ದೇಶದಲ್ಲಿ ರೈತರು, ಕೃಷಿಕಾರರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಸಮಾನತೆಯನ್ನು ನಿವಾರಿಸಲು ಆಳುವ ಸರಕಾರಗಳು ವಿಫಲವಾಗಿವೆ. ಅಲ್ಪಸಂಖ್ಯಾತರ ಮೇಲೆ, ದಲಿತರ ಮೇಲೆ ದಾಳಿ ಹೆಚ್ಚಾಗಲು ಆರ್ಥಿಕ ಅಸಮಾನತೆಯೇ ಕಾರಣ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಸ್ವಾತಂತ್ರ್ಯದ ನಂತರವೂ ಭಾರತ ನರಳುವ ಪರಿಸ್ಥಿತಿ ಎದುರಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಸಾಮಾಜಿಕ ಸಂಕಷ್ಟಗಳು ಹೆಚ್ಚಾಗುತ್ತಿವೆ. ಜಾತಿ ಅಸ್ಪೃಶ್ಯತೆ, ದೌರ್ಜನ್ಯ, ಧಾರ್ಮಿಕ ಕಲಹದಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದೆ.
75 ವರ್ಷಗಳ ನಂತರವೂ ದುಡಿಯುವ ಜನ ಬಡತನಕ್ಕೆ ತಳ್ಳಲ್ಪಟ್ಟರೆ ಕೆಲವೇ ಕೆಲವು ಮಂದಿ ಮಾತ್ರ ಶ್ರೀಮಂತರಾಗುತ್ತಿದ್ದಾರೆ. ಸರಕಾರವೇ ಬಿಡುಗಡೆ ಮಾಡುವ ಹಲವು ಅಂಕಿ-ಅಂಶಗಳೇ ನಿಜಾಂಶವನ್ನು ತೋರ್ಪಡಿಸುತ್ತಿವೆ. ಇದರಿಂದ ಆತಂಕ ಸೃಷ್ಟಿಸಿವೆ. ತಲಾ ಆದಾಯ 50 ರೂಪಾಯಿಗಿಂತ ಕಡಿಮೆ ಇದೆ. ಲಕ್ಷಾಂತರ ಕುಟುಂಬಗಳು ಇಂತಹ ಸಂಕಷ್ಟ ಎದುರಿಸುತ್ತಿದ್ದಾರೆ. ಋಣಮುಕ್ತ ಕಾಯ್ದೆ ಬರಬೇಕು ಎಂದು ಕರೆ ನೀಡಿದರು.
ಭೂ ಹೀನರಿಗೆ ಭೂಮಿ ಅಂಚಿ: ಜಿ.ಸಿ.ಬಯ್ಯಾರೆಡ್ಡಿ
ಪರ್ಯಾಯ ಕೃಷಿ ನೀತಿಗಳು, ಮೂಲಾಂಶಗಳು ವಿಷಯದ ಕುರಿತು ʻಪರ್ಯಾಯ ನಿರ್ಣಯ ಮಂಡನೆʼ ಮಾಡಿದ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ. ಬಯ್ಯಾರೆಡ್ಡಿ ಅವರು, ಭೂಸ್ವಾದೀನ ಕಾಯ್ದೆಗೆ ಗೃಹಣ ಬಡಿದಿದೆ. ತಿದ್ದುಪಡಿ ಮೂಲಕ ಆ ಕಾಯ್ದೆಯನ್ನು ಅನುಪಯುಕ್ತ ಮಾಡುವ ಕೆಲಸ ನಡೆಯುತ್ತಿದೆ. ಭೂ-ಸ್ವಾಧೀನ ಕಾಯ್ದೆಗೆ ತಂದಿರುವ ತಿದ್ದುಪಡಿ ವಾಪಸ್ಸು ಪಡೆಯಬೇಕು. ಭೂಹೀನರಿಗೆ ಭೂಮಿಯನ್ನು ಹಂಚುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕಳೆದ 75 ವರ್ಷಗಳಲ್ಲಿ ಸರಕಾರದ ನೀತಿಗಳು ರೈತ ಸಂಕಷ್ಟಕ್ಕೀಡು ಮಾಡುತ್ತಿದೆ. ದಿನನಿತ್ಯ ಕಣ್ಣೀರಲ್ಲಿ ಕೈತೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿಮೆ ಮಾಡುತ್ತಿರುವ ಕೂಲಿಕಾರರಿಗೆ ಕನಿಷ್ಠ ರೂ.600 ಕೂಲಿಯನ್ನು ನೀಡುತ್ತಿಲ್ಲ. ಯೋಜನೆಯನ್ನು ನಗರ ಪ್ರದೇಶಕ್ಕೆ ವಿಸ್ತರಿಸುವ ಪ್ರಶ್ನೆಯೂ ಹಾಗೆ ಉಳಿದಿದೆ. ನಮ್ಮ ಪಾಲಿಗೆ ಸಿಗಬೇಕಾದ ನೀರಾವರಿ ಯೋಜನೆಗಳು ಕೂಡಾ ನೆನಗುದಿಗೆ ಬಿದ್ದಿವೆ. ಎತ್ತಿನಹೊಳೆ, ಮೇಕೆದಾಟು, ಮಹದಾಯಿ ನೀರಾವರಿ ಯೋಜನೆಗಳು ಇನ್ನೂ ಜಾರಿಯಾಗಲಿಲ್ಲ.
ಎಸ್‌ಇಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಹಣವನ್ನು ಮೀಸಲಿಟ್ಟಿದ್ದಾರೆ. ಆ ಹಣ ಎಲ್ಲಿ ಹೋಗುತ್ತಿದೆ? ಯಾವುದಕ್ಕೆ ಬಳಕೆ ಆಗುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ. ದಲಿತರಿಗೆ ಭೂಮಿಯನ್ನು ನೀಡುವುದಕ್ಕಾಗಿ ಹಣವನ್ನು ತೆಗೆದಿಡುವ ಯೋಜನೆಯೂ ನೆನೆಗುದಿಗೆ ಬಿದ್ದಿದೆ. ರಸಗೊಬ್ಬರ ದುಬಾರಿಯಾಗಿದೆ. ಇನ್ನೊಂದೆಡೆ ರಸಗೊಬ್ಬರ ಕೊರತೆಯಾಗಿದೆ. ಬೀಜ ಗೊಬ್ಬರ ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ರೈತರಿಗೆ ಬ್ಯಾಂಕ್ ಸಾಲ ಸರಿಯಾಗಿ ದೊರೆಯುತ್ತಿಲ್ಲ. ಶೇ. 35 ರಷ್ಟು ಮಾತ್ರ ಗ್ರಾಮೀಣ ರೈತರಿಗರ ಬ್ಯಾಂಕ್ ಸಾಲ ದೊರಕಿದೆ ಎಂದರು.
ರೈತ ವಿರೋಧಿ ಕೃಷಿ ಕಾಯ್ದೆಗಳು: ವೀರಸಂಗಯ್ಯ
ಸ್ವರಾಜ್ ಇಂಡಿಯಾ ಪಕ್ಷದಿಂದ ಮಾತನಾಡಿದ ವೀರಸಂಗಯ್ಯ ಅವರು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆಯಲ್ಲಿ ಹೊರಗಡೆ ವ್ಯಾಪಾರ ಮಾಡಿದರೆ ತೆರಿಗೆ ಕಟ್ಟುವ ಹಾಗೇ ಇಲ್ಲ ಎಂದು ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ. ಎಲ್ಲಾದರೂ ಮಾರಾಟ ಮಾಡಿ ಎಂದು ಹೇಳುತ್ತಾರೆ, ಹಾಗೆಂದು ಬೀದಿಯಲ್ಲಿ ಮಾರಾಟ ಮಾಡಿದರೆ, ಪೊಲೀಸರನ್ನು ಬಿಟ್ಟು ದೌರ್ಜನ್ಯ ನಡೆಸುತ್ತಾರೆ. ಕೇಂದ್ರದಿಂದ ಜಾರಿತೆ ತರಲು ಹೊರಟ್ಟಿದ್ದ ಮೂರು ಕಾಯ್ದೆಗಳನ್ನು ತಡೆಹಿಡಿದಿದ್ದಿದ್ದರೂ ಅದನ್ನು ಮತ್ಯಾಗ ಜಾರಿ ಮಾಡುತ್ತಾರೋ ಗೊತ್ತಿಲ್ಲ, ಹಾಗಾಗಿ ನಮ್ಮ ಚಳುವಳಿ ಬಲಗೊಳ್ಳಬೇಕು ಎಂದು ಕರೆ ನೀಡಿದರು.
ಶಿಕ್ಷಣದ ವ್ಯಾಪಾರೀಕರಣ: ಕೆ. ಉಮಾ
ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್)-ಎಸ್‌ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಕೆ. ಉಮಾ ಅವರು ಮಾತನಾಡಿ, ಶಿಕ್ಷಣ ವ್ಯಾಪಾರೀಕರಣ ಆಗಿದೆ, ಮಾಲೀಕರು ಬೆಳೆಯುತ್ತಿದ್ದಾರೆ, ರೀಯಲ್ ಎಸ್ಟೇಟ್ ಮಾಫಿಯಾ ಬೆಳೆಯುತ್ತಿದೆ. ಶಿಕ್ಷಣ ಮಾರಾಟ ಆಗುತ್ತಿದೆ. ಮುಸ್ಲಿಂ ಚರಿತ್ರೆಯನ್ನು ಇತಿಹಾಸದಿಂದ ತೆಗೆಯುತ್ತಿದ್ದಾರೆ. ರೋಹಿತ್ ಚಕ್ರತೀರ್ಥ ಅವರಂತಹ ಮತಾಂಧನನ್ನು ಪಠ್ಯಕ್ರಮ ರಚನಾ ಸಮಿತಿ ಅಧ್ಯಕ್ಷನನ್ನಾಗಿಸಿ ಅಂಬೇಡ್ಕರ್, ಭಗತ್ ಸಿಂಗ್, ನಾರಾಯಣಗುರು, ಕುವೆಂಪುರವರ ವಿಚಾರಗಳನ್ನು ತೆಗೆದು ಕೇವಲ ಹಿಂದೂ ಧರ್ಮದ ವಿಚಾರಗಳನ್ನು ತುರುಕಿದ್ದಾರೆ. ವಿಜ್ಣಾನ, ಸಂವಿಧಾನ, ಪ್ರಜಾಸತ್ತಾತ್ಮಕ ವಿಚಾರಗಳನ್ನು ಪಠ್ಯದಿಂದ ತೆಗೆಯುವ ಹುನ್ನಾರ ನಡೆದಿತ್ತು. ವ್ಯಾಪಕ ಪ್ರತಿಭಟನೆಗಳ ಮೂಲಕ ರೋಹಿತ್ ಚಕ್ರತೀರ್ಥ ಸಮಿತಿಯನ್ನು ರದ್ದು ಮಾಡಿದರು? ಸರಕಾರ ಸೃಷ್ಟಿ ಮಾಡಿದ ಗೊಂದಲಗಳಿಗೆ ತಕ್ಕ ಪಾಠ ಕಲಿಸಬೇಕಿದೆ. ಶಿಕ್ಷಣ ತಜ್ಞರನ್ನು ಒಳಗೊಳಿಸಿ ಪಠ್ಯಕ್ರಮ ರಚಿಸಬೇಕಿದೆ ಎಂದು ಕರೆ ನೀಡಿದರು.
ಕೋವಿಡ್ ಸಾಂಕ್ರಮಿಕತೆ ಮುಂಚೆ ಇದ್ದ ನಿರುದ್ಯೋಗ ಸಮಸ್ಯೆ ಈಗ ಇನ್ನಷ್ಟು ಹೆಚ್ಚಾಗಿದೆ. ಉದ್ಯೋಗ ಸಿಗದೆ ಜನರು ಪರದಾಡುತ್ತಿದ್ದಾರೆ. ಉದ್ಯೋಗದ ಜಾಗಗಳಲ್ಲಿ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ನರೇಗಾವನ್ನು ಬಲಪಡಿಸಿ ಗ್ರಾಮೀಣ ಜನರಿಗೆ ಉದ್ಯೋಗ ನೀಡಬೇಕು. ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿ ಎಲ್ಲಿ ಹೋಯಿತು? ಇದಕ್ಕೆ ಯಾವ ಪದ ಬಳಸಬೇಕು ಎಂದು ಕುಟುಕಿದರು.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ, ಲೆನಿನ್ ವಾದಿ-ಲಿಬರೇಷನ್)-ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೊಸಾರಿಯೋ ಅವರು ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದೆ. ಸತ್ಯದ ಪರಿವಾಗಿ ಮಾತನಾಡಿದವರನ್ನು ಜೈಲಿಗೆ ಹಾಕಲಾಗುತ್ತಿದೆ. ಸ್ಟ್ಯಾನ್ ಸ್ವಾಮಿ, ಆನಂದ್ ತೇಲ್ತುಂಬ್ಡೆ, ತೀಸ್ತಾ ಸೆಟಲ್ವಾಡ್ ಹೀಗೆ ಹಲವರನ್ಮು ಜೈಲಿಗೆ ಹಾಕಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಹೇಗೆಂದರೆ ಹಾಗೆ ಕಾಯ್ದೆಗಳನ್ನು ಜಾರಿ ಮಾಡುತ್ತಿದೆ. ಅದನ್ನು ಪ್ರಶ್ನಿಸುವ ಹಾಗಿಲ್ಲ. ಕರ್ನಾಟಕದ ಸ್ಥಿತಿಯೂ ಸಂಕಷ್ಟದಲ್ಲಿದೆ. ಇದರ ವಿರುದ್ದ ವ್ಯಾಪಕ ಹೋರಾಟವನ್ನು ಬಲಗೊಳಿಸಲು ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಕೋಮುವಾದದ ವಿರುದ್ಧ ಹೋರಾಟ ಬಲಗೊಳ್ಳಲಿ: ಮೋಹನ್ ರಾಜ್
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಆರ್‌ಪಿಐದ ಮೋಹನ್ ರಾಜ್ ಅವರು ಮಾತನಾಡಿ, ದೇಶದಲ್ಲಿ ಆಳ್ವಿಕೆ ನಡೆಸುತ್ತಿರುವ ಪಕ್ಷವು ಭಾರತದ ಸಂವಿಧಾನವನ್ನು ನಾಶ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಅದರ ವಿರುದ್ಧ ಹೋರಾಟ ಬಲಗೊಳ್ಳಬೇಕಿದೆ. ಮೀಸಲಾತಿಯನ್ನು ನಾಶ ಮಾಡುವುದಕ್ಕಾಗಿ ಖಾಸಗೀಕರಣ ಜಾರಿಗೊಂಡಿವೆ. ಶೋಷಿತ ಸಮುದಾಯನ್ನು ಜೀತದಾಳುಗಳನ್ನಾಗಿಸುವ ಕೆಲಸವನ್ನು ಆಳುವ ಸರಕಾರಗಳು ಮಾಡುತ್ತಿವೆ. ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಲಾಗುತ್ತಿದೆ. ಹಿಜಾಬ್ ಹಾಕಬಾರದು, ದನ ತಿನ್ನಬಾರದು ಎಂದು ಹೇಳಲಾಗುತ್ತಿದೆ. ಕೋಮುವಾದಿ ಶಕ್ತಿಗಳ ವಿರುದ್ಧ ನಮ್ಮ ಹೋರಾಟ ಇನ್ನಷ್ಟು ಬಲಗೊಳ್ಳಬೇಕಿದೆ ಎಂದು ಕರೆ ನೀಡಿದರು.
ಕಾರ್ಮಿಕರನ್ನು ರಾಜಕೀಯವಾಗಿ ಬಲಗೊಳಿಸಬೇಕು. ಆಗ ಮಾತ್ರ ಬೂರ್ಜ್ವಾ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಸಾಧ್ಯವಾಗುತ್ತದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ-ಸಿಪಿಐ ಪಕ್ಷದ ರಾಜ್ಯ ಮುಖಂಡ ರಾಮಕೃಷ್ಣ ಹೇಳಿದರು.
ಸಾರ್ವಜನಿಕ ಆರೋಗ್ಯ, ಭ್ರಷ್ಟಾಚಾರದ ನಿಗ್ರಹ, ಆಡಳಿತ ಭಾಷೆ ಕುರಿತು ಅಖಿಲ ಭಾರತ ಫಾರ್ವರ್ಡ್ ಬ್ಲಾಕ್-ಎಐಎಫ್‌ಬಿ ರಾಜ್ಯ ಅಧ್ಯಕ್ಷ ಜಿ.ಆರ್. ಶಿವಶಂಕರ್ ಮಾತನಾಡಿದರು.
ವೇದಿಕೆಯಲ್ಲಿ ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಎಸ್.ಯು.ಸಿ.ಐ.(ಸಿ) ಪಕ್ಷದ ರಾಜ್ಯ ಮುಖಂಡ ಎಂ.ಎನ್.ಶ್ರೀರಾಮ್, ಸಿಪಿಐ(ಎಂಎಲ್) ಪಕ್ಷದ ಮೈತ್ರಿ ಕೃಷ್ಣನ್, ಎಐಎಫ್‌ಬಿ ಪಕ್ಷದ ಎಂ ಝಡ್ ಅಲಿ, ಆರ್‌ಪಿಐ ಪಕ್ಷದ ಶೇಕರ್ ಅವಾಂಜಿ ಸೇರಿದಂತೆ ಅನೇಕರಿದ್ದರು.
ಸಮಾವೇಶದಲ್ಲಿ ಪರ್ಯಾಯ ನೀತಿಗಳ ಕಿರುಪುಸ್ತಕ ಬಿಡುಗಡೆ ಮಾಡಲಾಯಿತು. ಸಮಾವೇಶದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಭಾರತ ಕಮ್ಯೂನಿಸ್ಟ್ ಪಕ್ಷ-ಸಿಪಿಐ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಡ್)-ಎಸ್‌ಯುಸಿಐ(ಸಿ), ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ, ಲೆನಿನ್ ವಾದಿ-ಲಿಬರೇಷನ್)-ಸಿಪಿಐ(ಎಂಎಲ್), ಅಖಿಲ ಭಾರತ ಫಾರ್ವರ್ಡ್ ಬ್ಲಾಕ್-ಎಐಎಫ್‌ಬಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಆರ್‌ಪಿಐ, ಸ್ವರಾಜ್ ಇಂಡಿಯಾ ರಾಜ್ಯ ಘಟಕದ ಪ್ರತಿನಿಧಿಗಳು ಭಾಗವಹಿಸಿದ್ದರು.