‘ಸೌಹಾರ್ದತೆಗೆ ಸಮಾನತೆ ಅತ್ಯಗತ್ಯ’ – ‘ಸೌಹಾರ್ದ ಕರ್ನಾಟಕ’ ರಾಜ್ಯ ಸಮಾವೇಶದಲ್ಲಿ ಪ್ರೊ. ಬರಗೂರು

ಬೆಂಗಳೂರು: ಸೌಹಾರ್ದತೆ ಉಂಟಾಗಬೇಕಾದರೆ ಸಮಾನತೆ ಅತ್ಯಗತ್ಯ, ಸೌಹಾರ್ದತೆಗೂ ಸಮಾನತೆಗೂ ನಿಕಟ ಸಂಬಂಧ ಇದ್ದು, ಅವೆರಡೂ ಒಟ್ಟೊಟ್ಟಿಗೆ ಸಾಗಬೇಕಿದೆ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಗುರುವಾರ ಹೇಳಿದರು. ನಗರದ ಕಬ್ಬನ್ ಪಾರ್ಕ್‌ನ ಎಜ್‌ಜಿಒ ಹಾಲ್‌ನಲ್ಲಿ ನಡೆದ ‘ಸೌಹಾರ್ದ ಕರ್ನಾಟಕ’ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. “ಸಮಾನತೆಯ ಸಮಾಜದ ನಿರ್ಮಾಣದಲ್ಲಿ ಸೌಹಾರ್ದತೆ ಪಾತ್ರ ದೊಡ್ಡದಿದೆ. ಪರಂಪರೆ ಎಂದರೆ ಆಚರಣೆ ಅಲ್ಲ, ಪರಂಪರೆ ನಿರಂತರ ಚಲನೆ ಹೊಂದಿದ್ದು, ಕೆಡುಕುಗಳನ್ನು ಕಳೆದುಕೊಂಡು ಒಳಿತು ಮತ್ತು ವಿಕಾಸವನ್ನು ಅದು ಹೊಂದುತ್ತದೆ” ಎಂದು ಅವರು ಹೇಳಿದರು.

‘ಸೌಹಾರ್ದ ಪರಂಪರೆ ಮತ್ತು ಸಮಕಾಲಿನತೆ’ ಎಂಬ ವಿಚಾರವಾಗಿ ಮಾತನಾಡಿದ ಪ್ರೊ. ಬರಗೂರು, “ಕೋಮುವಾದ ರಾಜಕೀಯ ಪಕ್ಷಗಳ ಮೇಲಾಟವಾಗಿದ್ದು, ಯಾರು ಯಾವಾಗ ಜಾತಿವಾದಿ ಆಗುತ್ತಾರೆ, ಯಾವಾಗ ಕೋಮುವಾದಿ ಆಗುತ್ತಾರೆ ಎಂದು ಹೇಳುವುದು ಕಷ್ಟವಾಗಿದೆ. ಕೋಮುವಾದ ವಿರೋಧಿಸುವವರು ಜಾತಿವಾದವನ್ನು ವಿರೋಧಿಸುತ್ತಾರಾ ಎಂಬೆಲ್ಲ ಪ್ರಶ್ನೆಗಳಿವೆ. ಹಾಗಾಗಿ ದ್ವೇಷ ಎಂಬುದಕ್ಕೆ ಕೊನೆ ಇಲ್ಲ. ಪರಂಪರ ಪ್ರಜ್ಞೆ ಹಾಗೂ ಪ್ರಗತಿಪರ ಪ್ರಜ್ಞೆ ಒಟ್ಟಿಗೆ ಸಾಗಬೇಕಿದೆ. ಸೈದ್ದಾಂತಿಕ‌ ಸೌಹರ್ದತೆ ಬೇಕಿದೆ ಅದಕ್ಕಾಗಿ ಅಂಬೇಡ್ಕರ್, ಗಾಂಧಿ, ಕಾರ್ಲ್ ಮಾರ್ಕ್ಸ್, ಮೌಲಾನಾ ಅಬ್ದುಲ್ ಕಲಾಂರವರ ವಿಚಾರಗಳನ್ನು ಯುವಜನತೆ ಓದಿಕೊಳ್ಳಬೇಕಿದೆ. ಅವರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕಿದೆ” ಎಂದು ಹೇಳಿದರು. ಸೌಹಾರ್ದ ಕರ್ನಾಟಕ

ಇದನ್ನೂ ಓದಿ: ಉತ್ತರ ಪ್ರದೇಶ | ಅಪರಿಚಿತ ವ್ಯಕ್ತಿಗಳಿಂದ ತಾಯಿ, ಮಗಳ ಮೇಲೆ ಆಸಿಡ್ ದಾಳಿ!

“ಪಾಪ ಪ್ರಜ್ಞೆ ಮತ್ತು ಜಾಗೃತ ಪ್ರಜ್ಞೆಗಳು ಬಹಳ ಮಹತ್ವದ್ದಾಗಿದೆ. ಮೇಲ್ವರ್ಗದಲ್ಲಿ ಹುಟ್ಟಿದವರು, ನನ್ನ ವರ್ಗ ಈ ಸಮಾಜಕ್ಕೆ ಅನ್ಯಾಯ ಮಾಡಿದೆ ನಾನು ಅನ್ಯಾಯದ ವಿರುದ್ಧ ಹೋರಾಡಬೇಕು ಎಂಬ ಚೇತನಗಳು ಸಾಕಷ್ಟು ಇವೆ. ಇದು ಪಾಪ ಪ್ರಜ್ಞೆ, ನಾನು ತಳ ಸಮುದಾಯದಲ್ಲಿ ಹುಟ್ಟಿದ್ದೇನೆ, ನೋವನ್ನು ಅನುಭವಿಸಿದ್ದೇನೆ, ಇದರ ವಿರುದ್ಧ ನಿಲ್ಲಬೇಕು ಎಂಬುದು ಜಾಗೃತ ಪ್ರಜ್ಞೆಯಾಗಿದೆ” ಎಂದರು. ಸೌಹಾರ್ದ ಕರ್ನಾಟಕ

“ಭಾರತ ಸೌಹಾರ್ದ ರಾಷ್ಟ್ರ, ಆದರೆ ಈಗ ಆ ಸೌಹಾರ್ದತೆಗೆ ಧಕ್ಕೆ ಬಂದಿದೆ. ರಾಮ ಪ್ರಸಾದ್ ಬಿಸ್ಮಿಲ್ , ಅಶ್ಪಾಕ್ ಉಲ್ಲಾ ಖಾನ್, ಸಾವಿತ್ರಿಬಾಯಿ ಪುಲೆ, ಫಾತೀಮಾ ಶೇಕ್ ಇವರು ಸೌಹಾರ್ದ ಭಾರತದ ಸಂಕೇತ. ಧರ್ಮದ ಕಾರಣಕ್ಕಾಗಿ ಉಂಟಾಗಿರುವ ದ್ವೇಷವನ್ನು ವಿರೋಧಿಸೋಣ. ಪರಂಪರೆಯನ್ನು ಉಳಿಸಲು ಜನರ ನಡುವೆ ಸಾಗಬೇಕಿದೆ. ಸಾಹಿತಿಗಳು ಜನರ ಮಧ್ಯವರ್ತಿಗಳಾಗಿ ಕೆಲಸ ಮಾಡಬೇಕಿದ್ದು, ಸೌಹಾರ್ದ ಪರಂಪರೆಯ ಸತ್ಯಗಳನ್ನು ತಿಳಿಸುವ ದೊಡ್ಡ ಜವಾಬ್ದಾರಿ ಸಾಹಿತಿಗಳ ಮೇಲಿದೆ” ಎಂದು ಕರೆ ನೀಡಿದರು. ಸೌಹಾರ್ದ ಕರ್ನಾಟಕ

ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಮಾತನಾಡಿ, ಎಲ್ಲಾ ಜಾತಿಯ ಜನ, ಎಲ್ಲಾ ಧರ್ಮದ ಜನ ಹೆಗಲಿಗೆ ಹೆಗಲು ಕೊಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ಜನ ರಕ್ತ ಸುರಿಸಿ, ಹುತಾತ್ಮರಾಗಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಎಲ್ಲರೂ ಸ್ವತಂತ್ರವಾಗಿ ಭಾತೃತ್ವದಿಂದ ಬಾಳಬೇಕು ಎಂದು ಸಂವಿಧಾನ ಆಶಯ ಹೊಂದಿದೆ. ಆದರೆ ಈಗ ಧಕ್ಕೆ ಬಂದಿದೆ. ಈ ಧಕ್ಕೆ ಯಾರಿಂದ ಬಂದಿದೆ ಎಂದರೆ, ಭಯೋತ್ಪಾದನೆ, ಕೋಮುವಾದ, ಭ್ರಷ್ಟಾಚಾರ, ಮೂಲಭೂತವಾದ, ಅಪರಾಧೀಕರಣ ಇತ್ಯಾದಿಗಳಿಂದ ಬಂದಿದೆ” ಎಂದು ಹೇಳಿದರು. ಸೌಹಾರ್ದ ಕರ್ನಾಟಕ

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಹೋಗುವುದಿಲ್ಲ | ಶಂಕರಾಚಾರ್ಯರ ನಿರ್ಧಾರ

“ಸ್ವಾತಂತ್ರ್ಯ, ಸಮಾನತೆ, ಭಾತೃತ್ವಕ್ಕೆ ಧಕ್ಕೆ ಬಂದಿದೆ. ಇದರ ಅರ್ಥವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ. ಕೋಮುವಾದ ರಾರಾಜಿಸುತ್ತಿರುವ ಕಾರಣ ಹಿಂಸೆ ಹೆಚ್ಚಾಗಿದೆ. ನಂಬಿಕೆ ಸತ್ತು ಹೋಗಿದೆ. ಕಚ್ಚಾಟ ಹೆಚ್ಚಾಗಿದೆ ಇದರಿಂದಾಗಿ ಅಸಮಾನತೆ ಸೃಷ್ಟಿಯಾಗಿದೆ. ಇಂತಹ ಪ್ರದೇಶದಲ್ಲಿ ಸರ್ಕಾರ ಇಲ್ಲ ಎಂದೇ ನಾವು ನಿರ್ಧರಿಸಬೇಕಿದೆ. ಎಲ್ಲಾ ಧರ್ಮದ ಜಾತಿಗಳು ಒಂದು ವೇದಿಕೆಯಲ್ಲಿ ತಂದರೆ ಕೋಮುವಾದ ಹೊರಟು ಹೋಗುತ್ತದೆ. ಇದನ್ನು ಜಾರಿ ಮಾಡಲು ಹೋರಾಟಗಾರರು ಜನರ ನಡುವೆ ಹೋಗಬೇಕಿದೆ. ಮೂಲಭೂತವಾದ, ಕೋಮುವಾದದ ಅಪಾಯಗಳನ್ನು ಜನರಿಗೆ ತಿಳಿಸಬೇಕಿದೆ. ಅದಕ್ಕಾಗಿ ಸಾಹಿತ್ಯ ಚಟುವಟಿಕೆ, ಚರ್ಚೆ, ಸಂವಾದ, ವಿಚಾರ ಸಂಕಿರಣ ಕಾರ್ಯಕ್ರಮಗಳು ಹೆಚ್ಚಾಗಬೇಕು.‌ ಅದಕ್ಕಾಗಿ ಸಂವಿಧಾನ ದಾರಿ ಆಯ್ಕೆ ಮಾಡಿಕೊಳ್ಳಬೇಕು” ಎಂದು ಅವರು ಹೇಳಿದರು.

ಖ್ಯಾತ ಸಾಹಿತಿ ಅರವಿಂದ ಮಾಲಗತ್ತಿ ಮಾತನಾಡಿ, “ಅರಸೊತ್ತಿಗೆಯ ಕಾಲಘಟ್ಟದಲ್ಲಿ ಸರ್ವಧರ್ಮ ಸಹಿಷ್ಣುವಾಗಲು ದೊರೆ ಸಾಕಷ್ಟು ಶ್ರಮ ಹಾಕುತ್ತಿದ್ದ. ಆದರೆ ಈಗ ಆಡಳಿತ ನಡುಸುವ ರಾಜಕಾರಣಿಗಳಿಗೆ ಸರ್ವಧರ್ಮ ಸಹಿಷ್ಣುಗಳಾಗಲು ಸಿದ್ದರಿಲ್ಲ, ಅವರಿಗೆ ಆ ಪರಿಕಲ್ಪನೆಯು ಇಲ್ಲ. ಬಹುತ್ವಕ್ಕೂ ಮಿತಿಗಳಿವೆ, ಅದು ಅಂತಿಮ ಅಲ್ಲ. ಅದಕ್ಕೂ ಜಡತ್ವ ಅಂಟಿಕೊಳ್ಳುವ ಅಪಾಯಗಳಿವೆ. ಇಂತಹ ಸನ್ನಿವೇಶದಲ್ಲಿ ಸೌಹಾರ್ದತೆಯನ್ನು ಉಳಿಸಲು ವಾಸ್ತವತಾವಾದ ಮೂಲಕ ಮನವರಿಕೆ ಮಾಡಬೇಕಿದೆ. ಪರಂಪರೆಯ ವಿಚಾರಗಳು, ವರ್ತಮಾನದ ವಿಚಾರಗಳು ಒಟ್ಟೊಟ್ಟಿಗೆ ಸಾಗಬೇಕಿದೆ. ಚಲನಶೀಲತೆಯ ಮೂಲಕ ಸೌಹಾರ್ದತೆಯಡಗೆ ಸಾಗೋಣ” ಎಂದರು.

ಲೇಖಕಿಯರ ಸಂಘದ ಅಧ್ಯಕ್ಷರಾದ ಎಚ್.ಎಲ್. ಪುಷ್ಪಾ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು.‌ಬಸವರಾಜ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮತ್ತು ಕಾಂಗ್ರೆಸ್ ಮುಖಂಡ ಸಲಿಂ ಅಹ್ಮದ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಕೆ ಮರುಳಸಿದ್ದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಹೋರಾಟಗಾರಾದ ಮಾವಳ್ಳಿ ಶಂಕರ್, ಮೋಹನ್ ರಾಜ್, ಸಿದ್ದನಗೌಡ ಪಾಟೀಲ್, ಅಲ್ಲಮಪ್ರಭು ಬೆಟ್ಟದೂರು, ಸುಕನ್ಯಾ ಮಾರುತಿ, ಎಸ್.ವೈ. ಗುರುಶಾಂತ, ಬಿ. ರಾಜಶೇಖರ್ ಮೂರ್ತಿ ಸೇರಿದಂತೆ ಅನೇಕ ಜನಪರ, ಪ್ರಗತಿಪರ ಸಂಘಟನೆಗಳ ನಾಯಕರಿದ್ದರು. ಅಲ್ಲದೆ ವಿವಿಧ ಜಿಲ್ಲೆಗಳಿಂದ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಡಿಯೊ ನೋಡಿ: ನೆಮ್ಮದಿಯ ನಿವೃತ್ತಿಗೆ ಎನ್‌ಪಿಎಸ್‌ ಎಂಬ ತೂಗುಗತ್ತಿ – ಕೆ. ಮಹಾಂತೇಶ್‌ Janashakthi Media

Donate Janashakthi Media

Leave a Reply

Your email address will not be published. Required fields are marked *