ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ, ಕೊಬ್ಬರಿ ಖರೀದಿ ಕೇಂದ್ರಗಳಿಗೆ ಒತ್ತಾಯಿಸಿ ಯಶಸ್ವಿ ತೆಂಗು ಬೆಳೆಗಾರರ ವಿಧಾನ ಸೌಧ ಚಲೋ

ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 16730 ರೂ ಬೆಂಬಲ ಬೆಲೆಗೆ ಆಗ್ರಹಿಸಿ, ಕೇಂದ್ರ ಸರ್ಕಾರದ ತಪ್ಪು ಆಮದು ನೀತಿ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ವಿರೋಧ ಸೇರಿದಂತೆ ತೆಂಗು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಕರ್ನಾಟಕ ಪ್ರಾಂತ ರೈತ ಸಂಘ ( KPRS) ಹಾಗೂ ತೆಂಗು ಬೆಳೆಗಾರರ ಹೋರಾಟ ಸಮಿತಿ ನಡೆಸಿದ ಪ್ರತಿಭಟನೆಗಳ ಕುರಿತು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ರವರಿಂದ ವರದಿ.

” ತೆಂಗು “ಬೆಳೆಯನ್ನು ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ. ಆದರೆ ರೈತರ ಪಾಲಿಗೆ ತೆಂಗು ಇಂದು ಕಲ್ಪವೃಕ್ಷವಾಗಿ ಉಳಿದಿಲ್ಲ. ಕರ್ನಾಟಕದ ಪ್ರಮುಖ ತೋಟಗಾರಿಕೆ ಬೆಳೆಯಾದ ತೆಂಗು ಮತ್ತು ಕೊಬ್ಬರಿ ಬೆಲೆಯು ಹಿಂದೆಂದೂ ಕೇಳಿರದ ಪ್ರಮಾಣದಲ್ಲಿ ಕ್ವಿಂಟಾಲ್‌ಗೆ 6-7 ಸಾವಿರ ರೂ ಗೆ ಕುಸಿದಿದೆ. ಎರಡು ವರ್ಷದ ಹಿಂದೆ ಕ್ವಿಂಟಾಲ್ 18 ಸಾವಿರ ರೂ ನಿಂದ 20 ಸಾವಿರ ರೂಗಳವರೆಗೆ ಇದ್ದ ಕೊಬ್ಬರಿ ಬೆಲೆ ಪಾತಾಳಕ್ಕೆ ಇಳಿದಿರುವುದು ತೆಂಗು ಬೆಳೆಗಾರರಲ್ಲಿ ಭಾರಿ ಆತಂಕಕ್ಕೆ ಈಡು ಮಾಡಿದೆ.

ಪ್ರಪಂಚದಲ್ಲೇ ಅತಿ ದೊಡ್ಡ ತೆಂಗು ಉತ್ಪಾದನೆಯ ದೇಶವಾಗಿರುವ ಭಾರತದ ಪಾಲು ಶೇ 31 ರಷ್ಟು ಇದೆ. ದಕ್ಷಿಣ ಭಾರತದ ಕೇರಳ, ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ ಈ ನಾಲ್ಕು ರಾಜ್ಯಗಳು ನಮ್ಮ ದೇಶದ ತೆಂಗು ಉತ್ಪಾದನೆಯ ಶೇ 90 ರಷ್ಟು ಪಾಲನ್ನು ಹೊಂದಿವೆ. ಕರ್ನಾಟಕವು ದೇಶದಲ್ಲೇ ಎರಡನೇ ಅತಿದೊಡ್ಡ ತೆಂಗು ಬೆಳೆಯುವ ರಾಜ್ಯವಾಗಿ ಒಟ್ಟು 6.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ವಾರ್ಷಿಕ ಕೊಬ್ಬರಿ ಉತ್ಪಾದನೆ 2.18 ಲಕ್ಷ ಮೆಟ್ರಿಕ್ ಟನ್ ನಷ್ಟಿದೆ.

ಕೊಬ್ಬರಿಗೆ ಏಕೆ ಈ ಬೆಲೆ ಕುಸಿತ

ಖಾದ್ಯ ತೈಲಕ್ಕೆ ಬಳಕೆಯಾಗುವ ದೇಶದ ಒಟ್ಟು ಉತ್ಪಾದನೆಯ ಕೊಬ್ಬರಿಯಲ್ಲಿ ಕರ್ನಾಟಕದ ಪಾಲು ಶೇ 65.5 ರಷ್ಟಿದೆ. ದೇಶದಲ್ಲೇ ತೆಂಗು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿ ಇರುವ ಕೇರಳವು ಖಾದ್ಯ ತೈಲಕ್ಕೆ ಬಳಕೆಯಾಗುವ ಕೊಬ್ಬರಿಯಲ್ಲಿ ಶೇಕಡಾ 13.5 ಮಾತ್ರ ಪಾಲನ್ನು ಹೊಂದಿದೆ. ಅಂದರೆ ರಾಜ್ಯದ ಕೊಬ್ಬರಿಯ ಬೇಡಿಕೆ ,ಖಾದ್ಯ ತೈಲದ ದೇಶೀಯ ಉತ್ಪಾದನೆ ಜೊತೆ ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿದೆ. ಈ ತೈಲವು ಸಾಬೂನು ಮತ್ತು ಡಿಟರ್ಜೆಂಟ್ ಮತ್ತಿತರ ಕೊಳೆ ತೊಳೆಯುವ ಸರಕು ಉತ್ಪಾದನೆಯಲ್ಲಿ ಬಳಕೆಯಾಗುವ ಪ್ರಮುಖ ಕಚ್ಛಾ ವಸ್ತುವಾಗಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅಗ್ನೇಯ ಏಷ್ಯಾ ದೇಶಗಳಾದ ಮಲೆಷ್ಯಾ, ಥೈಲ್ಯಾಂಡ್ ಮುಂತಾದ ದೇಶಗಳ ಜೊತೆ ಮಾಡಿಕೊಂಡ ಮುಕ್ತ ವ್ಯಾಪಾರ ಒಪ್ಪಂದದ ಭಾಗವಾಗಿ, ತಾಳೆ ಎಣ್ಣೆಯು ಸುಂಕ ರಹಿತವಾಗಿ ಯಾವುದೇ ಪ್ರಮಾಣ ನಿರ್ಬಂಧವಿಲ್ಲದೇ ಆಮದಾಗುತ್ತಿದೆ. ಕೊಬ್ಬರಿ ತೈಲಕ್ಕೆ ಬೇಡಿಕೆ ಕುಸಿದು ರಾಜ್ಯದ ಕೊಬ್ಬರಿ ಬೆಲೆ ಕ್ವಿಂಟಾಲ್ ಗೆ 20 ಸಾವಿರ ರೂ ನಿಂದ 6500 ರೂಗಳಿಗೆ ಕುಸಿದಿದೆ.

ಬೆಂಬಲ ಬೆಲೆ ನಿಗದಿಯಲ್ಲೂ ಮೋಸ, ಖರೀದಿ ಕೇಂದ್ರದಲ್ಲೂ ಅನ್ಯಾಯ

ರಾಜ್ಯದ ತೋಟಗಾರಿಕಾ ಇಲಾಖೆಯು ಕೇಂದ್ರ ಸರ್ಕಾರದ ಕೃಷಿ ವೆಚ್ಚ ಮತ್ತು ದರ ಆಯೋಗ ( CACP) ಕ್ಕೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 16730 ರೂಗಳನ್ನು ಬೆಂಬಲ ಬೆಲೆಯಾಗಿ ನೀಡುವಂತೆ ಉತ್ಪಾದನಾ ವೆಚ್ಚದ ಆಧಾರದಲ್ಲಿ ಶಿಪಾರಸ್ಸು ಮಾಡಿತ್ತು. (ವಾಸ್ತವವಾಗಿ ಉತ್ಪಾದನಾ ವೆಚ್ಚ ತೋಟಗಾರಿಕಾ ಇಲಾಖೆಯ ಅಂದಾಜಿಗಿಂತ ಹೆಚ್ಚು ಇದೆ) ರಾಜ್ಯ ಸರ್ಕಾರದ ಇಲಾಖೆಯ ಅಧಿಕೃತ ಶಿಪಾರಸ್ಸನ್ನು ಕಡೆಗಣಿಸಿ, ಕೇಂದ್ರ ಸರ್ಕಾರ , ಕೇವಲ 11750 ರೂ ಮಾತ್ರ ನಿಗದಿ ಮಾಡಿದೆ. ಮಾತ್ರವಲ್ಲ; ಇದು ಉತ್ಪಾದನಾ ವೆಚ್ಚದ ಶೇಕಡಾ ಐವತ್ತು ರಷ್ಟು ಹೆಚ್ಚು ಎಂದು ಜಂಭ ಕೊಚ್ಚಿಕೊಳ್ಳುತ್ತಿದೆ. ಇದೊಂದು ಪರಮ ಅಷಾಢಭೂತಿತನದ ಸರ್ಕಾರವೇ ಸರಿ! .ತೆಂಗು ಬೆಳೆಯುವ ಪ್ರಮುಖ ರಾಜ್ಯದ ಸರ್ಕಾರಿ ತೋಟಾಗಾರಿಕೆ ಇಲಾಖೆಯ ಶಿಪಾರಸ್ಸನ್ನು ಒಪ್ಪದೇ ಇರಲು ಯಾವುದೇ ಕಾರಣ ನೀಡದೇ ಬೆಂಬಲ ಬೆಲೆ ನಿಗದಿಯಲ್ಲಿ ಭಾರೀ ಮೋಸವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ.

ಬೆಂಬಲ ಬೆಲೆಯಲ್ಲಿ ಮಾತ್ರವಷ್ಟೇ ಅಲ್ಲ , ಖರೀದಿ ವ್ಯವಸ್ಥೆಯಲ್ಲೂ ತೆಂಗು ಬೆಳೆಗಾರರ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನೇ ಮಾಡಿದೆ. ಬೆಂಬಲ ಬೆಲೆ 11750 ರೂ ಇದ್ದರೂ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಪೆಡೆರೇಷನ್ ( NAFED) ಮೂಲಕ ಖರೀದಿ ಕೇಂದ್ರ ತೆರೆಯಬೇಕಾದರೆ ಗರಿಷ್ಠ ಕೊಬ್ಬರಿ ಬೆಲೆ 10 ಸಾವಿರ ರೂಗಿಂತ ಕಡಿಮೆ ಗೆ ಮಾರಾಟ ಆಗಬೇಕು ಎಂದು ಷರತ್ತನ್ನು ವಿಧಿಸಿದೆ. ಈ ಕಾರಣದಿಂದಾಗಿ ಸುಮಾರು ಒಂದು ವರ್ಷಗಳ ಕಾಲ ರೈತರು ,ಖರೀದಿ ಕೇಂದ್ರ ವಿಲ್ಲದೇ ತಮ್ಮ ಉತ್ಪನ್ನಗಳನ್ನು ಕಳೆದುಕೊಂಡಿದ್ದಾರೆ.

9 ಸಾವಿರ ರೂ ಗಿಂತ ಕೆಳಗೆ ಕುಸಿದ ನಂತರ ಖರೀದಿ ಕೇಂದ್ರಗಳನ್ನು ತೆರೆಯಲಾಯಿತು. ಆದರೆ ಖರೀದಿ ನಡೆಸಲು ಬೇಕಾದ ಹಣವನ್ನು ನಪೇಡ್ ಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿಲ್ಲ. ಖರೀದಿ ವೇಗವನ್ನು ಬಹಳ ನಿಧಾನಗೊಳಿಸಲಾಯಿತು. ಈ ಎಲ್ಲದರ ಪರಿಣಾಮವಾಗಿ ರೈತರ ಆಕ್ರೋಶ ಕಟ್ಟೆ ಒಡೆಯಿತು. ತಿಪಟೂರು ಸೇರಿದಂತೆ ರಾಜ್ಯದ ಎಲ್ಲಾ ಕೊಬ್ಬರಿ ಪ್ರದೇಶಗಳಲ್ಲಿ ತೀವ್ರವಾದ ಪ್ರತಿಭಟನೆಗಳು ನಡೆದವು. ಏಷ್ಯಾದ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ಯಾಗಿರುವ ತಿಪಟೂರಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ( KPRS) ಸೇರಿದಂತೆ ಹಲವು ರೈತ ಸಂಘಗಳು ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಿದವು. ಇದರ ಪರಿಣಾಮವಾಗಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತೆಂಗು ಬೆಳೆ ಪ್ರದೇಶದ ಬಿಜೆಪಿ ಅಭ್ಯರ್ಥಿಗಳು ಹೀನಾಯವಾಗಿ ಸೋತರು

ಒಂದೆಡೆ ಸರಿಯಾಗಿ ಮಳೆ ಇಲ್ಲದೇ ,ಮತ್ತೊಂದೆಡೆ ವಿಪರೀತ ಹೆಚ್ಚಳವಾಗಿರುವ ಉತ್ಪಾದನಾ ವೆಚ್ಚವನ್ನು ನಿಭಾಯಿಸಿ ತೆಂಗು ಬೆಳೆ ರೈತನ ಕೈಗೆ ಫಸಲಾಗಿ ಸಿಗಲು ಕನಿಷ್ಠ ಹತ್ತು ವರ್ಷಗಳು ಬೇಕು . ನುಸಿ ಪೀಡೆ,ಬರಗಾಲ-ಅಂತರ್ಜಲ ಮಟ್ಟ ಕುಸಿತ ಮುಂತಾದ ಹಲವಾರು ಸವಾಲುಗಳ ನಡುವೆಯೂ ತೆಂಗು ಬೆಳೆ ಬೆಳೆಯಲಾಗುತ್ತಿದೆ. ಇಂತಹ ಕಷ್ಟದ ರೈತರನ್ನು ಉತ್ಪಾದನಾ ವೆಚ್ಚವೂ ಸಿಗದಂತಹ ಮಾರುಕಟ್ಟೆ ಪರಿಸ್ಥಿತಿ ಗೆ ತಳ್ಳಲಾಗಿದೆ. ಬೆಲೆ ಹೆಚ್ಚಳಗೊಳ್ಳುವ ನಿರೀಕ್ಷೆಯಲ್ಲಿ ಹಲವಾರು ರೈತರು ,ಫಸಲು ಮಾರದೇ ದಾಸ್ತಾನು ಇಟ್ಟುಕೊಂಡಿದ್ದರು.ತಿಂಗಳುಗಟ್ಟಲೆ ಕಳೆದರೂ ಬೆಲೆ ಹೆಚ್ವಳಗೊಳ್ಳಲಿಲ್ಲ. ಬದಲಿಗೆ ದಾಸ್ತಾನು ಮಾಡಿದ್ದ ಕೊಬ್ಬರಿ ಮೇಲೆ ಫಂಗಸ್ ಬೆಳೆಯುವ ಆತಂಕದಲ್ಲಿ ಸಿಕ್ಕಷ್ಟು ಬೆಲೆಗೆ ಮಾರಾಟಕ್ಕೆ ಇಟ್ಟಾಗ ಕೊಬ್ಬರಿ ಬೆಲೆ ಮತ್ತಷ್ಟು ಕುಸಿಯಿತು. ಕ್ವಿಂಟಾಲ್ ಗೆ 8 – 9 ಸಾವಿರ ರೂ ಇದ್ದ ಕೊಬ್ಬರಿ ಕಳೆದ ಒಂದು ತಿಂಗಳಿಂದ 6500 ರೂ ಗೆ ಕುಸಿಯಿತು. ಇದರಿಂದ ಮತ್ತಷ್ಟು ಕಂಗಾಲಾದ ರೈತ ಮತ್ತೇ ಬೀದಿಗಿಳಿದ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ದಲ್ಲಿ KPRS ನೇತೃತ್ವದಲ್ಲಿ ತೆಂಗು ಬೆಳೆಗಾರರ ತಾಲ್ಲೂಕು ಸಮಾವೇಶ ನಡೆದು ತಹಶಿಲ್ದಾರ್ ಕಛೇರಿ ಮುಂದೆ ಪ್ರತಿಭಟನೆ ನಡೆಯಿತು. ನಾಗಮಂಗಲ ತಾಲ್ಲೂಕು ಕದಬಳ್ಳಿ ಯಲ್ಲಿ ಹಾಸನ,ತುಮಕೂರು, ಮಂಡ್ಯ ಮೂರು ಜಿಲ್ಲೆಯ ಸಾವಿರಾರು ತೆಂಗು ಬೆಳೆಗಾರರು ದಿನಾಂಕ 15-7-2023 ರಂದು ಬೃಹತ್ ಪ್ರತಿಭಟನಾ ಸಭೆ ನಡೆಸಿದರು. ಹೀಗೆ ಕೊಬ್ಬರಿ ಬೆಳೆಗಾರರ ಕೂಗು ವಿಧಾನ ಸಭೆಯಲ್ಲಿ ಪ್ರತಿಧ್ವನಿಸಿತು. ರಾಜ್ಯ ಸರ್ಕಾರ ಕ್ವಿಂಟಾಲ್ ಕೊಬ್ಬರಿಗೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಜೊತೆಗೆ 1250 ರೂ ಗಳ ಪ್ರೊತ್ಸಾಹ ಧನ ಪ್ರಕಟಿಸಿತು.

ಆದರೆ ರೈತರು ಸಂತೋಷ ಪಡುವಂತಿರಲಿಲ್ಲ ಏಕೆಂದರೆ ಕೊಬ್ಬರಿ ಖರೀದಿ ಏಜೆನ್ಸಿ ನಪೇಡ್ ಅಧಿಕಾರಿಗಳು ಜುಲೈ 26,2023 ಕ್ಕೆ ಈ ವರ್ಷದ ಖರೀದಿ ಮುಕ್ತಾಯಗೊಳಿಸಲಾಗುವುದು ಎಂದು ಪ್ರಕಟಿಸಿದ್ದರು. ಈ ವರ್ಷದ ಕೊಬ್ಬರಿ ಉತ್ಪಾದನೆ 2.18 ಲಕ್ಷ ಮೆಟ್ರಿಕ್ ಟನ್ ನಲ್ಲಿ ಕೇವಲ 47 ಸಾವಿರ ಟನ್ ಅಂದರೆ ಸುಮಾರು ಕಾಲುಬಾಗ ಮಾತ್ರ ನಪೇಡ್ ಖರೀದಿಸಿತ್ತು. ಇನ್ನೂ ನಾಲ್ಕನೇ ಮೂರರಷ್ಟು ಕೊಬ್ಬರಿ ರೈತರ ಬಳಿಯೇ ಮಾರಾಟ ಆಗದೇ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ( KPRS) ರಾಜ್ಯ ಸಮಿತಿ

ಇದನ್ನೂ ಓದಿ:ಜುಲೈ 19 ರಂದು ಕ್ವಿಂಟಾಲ್ ಕೊಬ್ಬರಿಗೆ ಬೆಂಬಲ ಬೆಲೆ ಖರೀದಿಗೆ ಒತ್ತಾಯಿಸಿ:ತೆಂಗು ಬೆಳೆಗಾರರ ವಿಧಾನಸೌಧ ಚಲೋ

• ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಕರ್ನಾಟಕ ಕೃಷಿ ಬೆಲೆ ಆಯೋಗದ ಶಿಫಾರಸ್ಸಿನಂತೆ ಕೂಡಲೇ ಒಂದು ಕ್ವಿಂಟಾಲ್ ದುಂಡು ಕೊಬ್ಬರಿಯ ಬೆಲೆ 16730 ರೂ ನಿಗದಿಯಾಗಬೇಕು. ರಾಜ್ಯ ಸರ್ಕಾರ ಕನಿಷ್ಟ 5000 ರೂ ಸಹಾಯಧನ ಘೋಷಣೆ ಮಾಡಬೇಕು. ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.

• ತೆಂಗಿನ ಬೆಲೆಯೂ ಮಾರುಕಟ್ಟೆಯಲ್ಲಿ ವಿಪರೀತ ಕುಸಿತವನ್ನು ಕಂಡಿರುವುದರಿಂದ ಕೃಷಿ ತಜ್ಞ ಡಾ.ಎಂ.ಎಸ್.ಸ್ವಾಮಿನಾಥನ್‌ರವರ ಆಯೋಗದ ಶಿಫಾರಸ್ಸಿನಂತೆ ಉತ್ಪಾದನಾ ವೆಚ್ಚಕ್ಕೆ ಶೇ 50 ರಷ್ಟು ಲಾಭಾಂಶವನ್ನು ಸೇರಿಸಿ ಬೆಲೆ ನಿಗದಿ ಮಾಡಬೇಕು. ತೆಂಗು ಮತ್ತು ಕೊಬ್ಬರಿಯನ್ನು ಎಪಿಎಂಸಿ ಮಾರುಕಟ್ಟೆಯ ಮೂಲಕ ಸರ್ಕಾರವೇ ಖರೀದಿಸಬೇಕು.

• ನಫೆಡ್‌ (NAFED) ಮೂಲಕ ನಡೆಯುವ ಕೊಬ್ಬರಿ ಖರೀದಿಯನ್ನು ಬಲಪಡಿಸಬೇಕು ಹಾಗೂ ವಿಸ್ತರಿಸಬೇಕು.

• ನೀರಾವರಿ ಪಂಪ್‌ಸೆಟ್‌ಗಳಿಗೆ ಡಿಜಿಟಲ್ ಮೀಟರ್ ಅಳವಡಿಕೆಯನ್ನು ಕೈಬಿಡಬೇಕು, ಹಾಗೂ ಪಂಪ್‌ಸೆಟ್‌ಗಳ ಆ‌ರ್ ಆರ್ ನಂಬರ್ ಮತ್ತು ಆಧಾರ್ ಕಾರ್ಡ್ ಜೋಡಣೆಯನ್ನು ಕೈಬಿಡಬೇಕು. ರೈತರಿಗೆ ಅನುಕೂಲವಾಗುವಂತೆ ಎಪಿಎಂಸಿ ಮಾರುಕಟ್ಟೆ ಬಲಪಡಿಸಿ, ಭ್ರಷ್ಟಾಚಾರ ತಡೆಗಟ್ಟಬೇಕು. ಮಾರುಕಟ್ಟೆಯ ಪ್ರಾಂಗಣದಲ್ಲಿ ರೈತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.

• ತೆಂಗಿನ ಉತ್ಪನ್ನ ಮತ್ತು ಉಪ ಉತ್ಪನ್ನಗಳ ಮೌಲ್ಯವರ್ಧನೆಗೆ ಅಗತ್ಯವಾದ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು.

• ತೆಂಗು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ತೆಂಗು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮತ್ತು ರೈತ ಸಂಘಟನೆಗಳನ್ನು ಒಳಗೊಂಡ ಜಂಟಿ ಸಭೆಯನ್ನು ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಸಬೇಕು. ಎಂಬ ಆಗ್ರಹಗಳನ್ನು ಇಟ್ಟುಕೊಂಡು ಜುಲೈ 19,2023 ರಂದು ತೆಂಗು ಬೆಳೆಗಾರರ ವಿಧಾನ ಸೌಧ ಚಲೋ ಪ್ರತಿಭಟನೆ ನಡೆಸಿತು.

ರೈತ ಮುಖಂಡರೊಂದಿಗೆ ಕೃಷಿ ಮಾರುಕಟ್ಟೆ ಸಚಿವರ ಜಂಟಿ ಪತ್ರಿಕಾಗೋಷ್ಠಿ

ರೈತರ ಆಕ್ರೋಶಕ್ಕೆ ಮಣಿದು KPRS ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ,ಹಣಕಾಸು ಕಾರ್ಯದರ್ಶಿ ಹೆಚ್ ಆರ್ ನವೀನ್ ಕುಮಾರ್ ನೇತೃತ್ವದ ರೈತ ಮುಖಂಡರೊಂದಿಗೆ ಕೃಷಿ ಮಾರುಕಟ್ಟೆ ಸಚಿವರು ತಮ್ಮ ಕೊಠಡಿಯಲ್ಲಿ ಸಭೆ ನಡೆಸಿ ,ನಮ್ಮ ಆಹವಾಲುಗಳನ್ನು ಕೇಳಿದರು ಮತ್ತು ನಮ್ಮ ಎಲ್ಲಾ ಬೇಡಿಕೆಗಳು ನ್ಯಾಯಯುತವಾಗಿ ಇವೆ ಎಂದು ಒಪ್ಪಿಕೊಂಡರು. ರೈತ ಸಂಘದ ಆಗ್ರಹದಂತೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ತಿಳಿಸಿ ಈ ಬಗ್ಗೆ ಮಾಹಿತಿ ನೀಡಲು ಮರು ದಿನವೇ ಅಂದರೆ ಜುಲೈ 20,2023 ರಂದು ವಿಧಾನ ಸೌಧದಲ್ಲಿ ರೈತ ಮುಖಂಡರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ,ಕೇಂದ್ರ ಸರ್ಕಾರಕ್ಕೆ ,16730 ರೂಗೆ ಬೆಂಬಲ ಬೆಲೆ ಹೆಚ್ಚಳ ಮಾಡುವಂತೆ ,ಖರೀದಿ ಕೇಂದ್ರ ದ ಅವಧಿ ವಿಸ್ತರಿಸುವಂತೆ, ಹೊಸದಾಗಿ ರೈತರ ನೊಂದಣಿ ಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಪತ್ರಿಕಾಗೋಷ್ಠಿ ಯಲ್ಲಿ KPRS ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ಹಣಕಾಸು ಕಾರ್ಯದರ್ಶಿ ಹೆಚ್ ಆರ್ ನವೀನ್ ಕುಮಾರ್, ತುಮಕೂರು ಜಿಲ್ಲೆಯ ಆರ್ ಎಸ್ ಚನ್ನಬಸವಣ್ಣ, ಹಾಸನ ಜಿಲ್ಲೆಯ ಹೆಚ್ ಎಸ್ ಮಂಜುನಾಥ್, ರಾಮಚಂದ್ರ ರವರು ರೈತ ಸಂಘದ ಪರವಾಗಿ ಇದ್ದರು

Donate Janashakthi Media

Leave a Reply

Your email address will not be published. Required fields are marked *