ಶೋಪಿಯಾನ್ ಎನ್​ಕೌಂಟರ್ ನಕಲಿ?: ಸಾಧ್ಯತೆ ಇದೆ ಎಂದ ಸೇನೆ

  • ಎಎಫ್ಎಸ್ಪಿ ಕಾಯ್ದೆ ಉಲ್ಲಂಘನೆ; ಶಿಸ್ತಿನ ಕ್ರಮಕ್ಕೆ ಸೇನೆ ಮುಂದು

ಶ್ರೀನಗರ: ಕಾಶ್ಮೀರದ ಶೋಪಿಯನ್ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಮೂವರು ವ್ಯಕ್ತಿಗಳನ್ನ ಹತ್ಯೆಗೈದಿದ್ದವು. ಆದರೆ, ಅದು ನಕಲಿ ಎನ್ಕೌಂಟರ್ ಎಂಬ ಆರೋಪ ಕೇಳಿಬಂದಿದ್ದವು. ಇದೀಗ ಭಾರತೀಯ ಸೇನೆ ಕೂಡ ಇದು ನಕಲಿ ಕಾರ್ಯಾಚರಣೆಯಾಗಿದ್ದಿರುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡಿದೆ.

ಮೇಲ್ನೋಟಕ್ಕೆ ಈ ಎನ್​ಕೌಂಟರ್ ಅಕ್ರಮವಾಗಿರುವಂತೆ ಕಂಡುಬಂದಿದೆ. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್​ಎಸ್​ಪಿಎ) ಅನ್ನು ದುರ್ಬಳಕೆ ಮಾಡಿಕೊಂಡಿರುವಂತೆ ತೋರುತ್ತಿದೆ ಎಂದು ಸೇನೆ ಹೇಳಿದೆ. ಈ ಎನ್​ಕೌಂಟರ್​ನಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ವಿರುದ್ಧ ಸೇನೆ ಶಿಸ್ತಿನ ಕ್ರಮ ಜರುಗಿಸುತ್ತಿದೆ. ಹಾಗೆಯೇ, ಪೂರ್ಣಪ್ರಮಾಣದಲ್ಲಿ ಘಟನೆಯ ತನಿಖೆ ನಡೆಸಲು ನಿರ್ಧರಿಸಿದೆ.

“ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯಾಚರಿಸುವಾಗ ನಿಗದಿತ ಮಾರ್ಗಸೂಚಿಗೆ ಸಂಪೂರ್ಣ ಬದ್ಧವಾಗಿರಬೇಕಾಗುತ್ತದೆ… ಈ ಘಟನೆಯನ್ನು ಬಹಳ ನ್ಯಾಯಯುತವಾಗಿ ತನಿಖೆ ನಡೆಸಿ ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುತ್ತೇವೆ” ಎಂದು ಭಾರತೀಯ ಸೇನೆ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ತಿಳಿಸಿದರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆನಲ್ಲಿರುವ ಅಮಶಿಪುರ ಗ್ರಾಮದಲ್ಲಿ ಜುಲೈ 18ರಂದು ಭದ್ರತಾ ಪಡೆಗಳ ಎನ್​ಕೌಂಟರ್​ನಲ್ಲಿ ಮೂವರು ಉಗ್ರಗಾಮಿಗಳು ಹತರಾದರು ಎಂದು ಸೇನೆ ಹೇಳಿಕೊಂಡಿತ್ತು. ಆದರೆ, ಆ ಕಾರ್ಯಾಚರಣೆಯಲ್ಲಿ ಬಲಿಯಾದ ಮೂವರು ವ್ಯಕ್ತಿಗಳು ಜಮ್ಮುವಿನ ರಜೌರಿ ಜಿಲ್ಲೆಯ ವ್ಯಕ್ತಿಗಳಾಗಿದ್ದು, ಅಮಶಿಪುರದಲ್ಲಿ ಅವರು ಕಾಣೆಯಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಬಂದಿತು. ಹಾಗೆಯೇ, ಆ ಮೂವರು ವ್ಯಕ್ತಿಗಳ ಕುಟುಂಬದವರು ಜುಲೈ 17ರಂದು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ್ದರು. ಆಗ ಸೇನೆ ಆಂತರಿಕ ತನಿಖೆ ನಡೆಸಿತು. ನಾಲ್ಕು ವಾರಗಳ ಕಾಲ ನಡೆದ ತನಿಖೆಯಲ್ಲಿ ಭದ್ರತಾ ಪಡೆಯ ತಪ್ಪು ಎದ್ದುಕಂಡಿದೆ. ಶೋಪಿಯಾನ್​ನಲ್ಲಿ ನಡೆದದ್ದು ನಕಲಿ ಎನ್​ಕೌಂಟರ್ ಎಂದು ಈ ತನಿಖೆಯಲ್ಲಿ ಸಂಶಯ ವ್ಯಕ್ತವಾಗಿದೆ.

ಶೋಪಿಯಾನ್ ಎನ್​ಕೌಂಟರ್​ನಲ್ಲಿ ಮೃತಪಟ್ಟವರನ್ನು ಇಮ್ತಿಯಾಜ್ ಅಹ್ಮದ್, ಅಬ್ರಾರ್ ಅಹ್ಮದ್ ಮತ್ತು ಮೊಹಮ್ಮದ್ ಇಬ್ರಾರ್ ಎಂದು ಗುರುತಿಸಲಾಗಿದೆ. ಈ ಮೂವರು ವ್ಯಕ್ತಿಗಳು ಭಯೋತ್ಪಾದನೆ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರಾ ಇಲ್ಲವಾ ಎಂಬುದನ್ನೂ ಸೇನೆ ಪರಿಶೀಲಿಸುತ್ತಿದೆ. ಹಾಗೆಯೇ ಅವರ ಕಾಲ್ ರೆಕಾರ್ಡ್​​ಗಳನ್ನೂ ಪರಿಶೀಲಿಸಲಾಗುತ್ತಿದೆ.

ಆ ಮೂವರು ವ್ಯಕ್ತಿಗಳು ಕೂಲಿ ಕೆಲಸಕ್ಕಾಗಿ ಅಮಶಿಪುರಗೆ ಹೋಗಿದ್ದರು. ಜುಲೈ 16ರಂದು ತಮಗೆ ಅವರು ಫೋನ್ ಮಾಡಿ ಬಾಡಿಗೆಗೆ ರೂಮು ಸಿಕ್ಕಿದೆ ಎಂದು ಹೇಳಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಎರಡು ದಿನಗಳ ಬಳಿಕ ಇದೇ ರೂಮನ್ನು ಸುತ್ತುವರಿದು ಎನ್​ಕೌಂಟರ್ ಮಾಡಿದ್ದಾರೆ. ಭದ್ರತಾ ಪಡೆಗಳ ಕಾರ್ಯಾಚರಣೆ ನಡೆಯುವಾಗ ಈ ಮೂವರು ಯುವಕರು ರೂಮಿನ ಕಿಟಕಿಯಿಂದ ಯಾಕೆ ಜಿಗಿದರು ಇತ್ಯಾದಿ ಅನುಮಾನಗಳಿಗೆ ತನಿಖೆಯಿಂದ ಉತ್ತರ ಸಿಗುವ ವಿಶ್ವಾಸದಲ್ಲಿ ಸೇನೆ ಇದೆ.

 

 

 

Donate Janashakthi Media

Leave a Reply

Your email address will not be published. Required fields are marked *