2023 -24 ರ ರಾಜ್ಯ ಬಜೆಟ್ ಸುತ್ತ – ಮುತ್ತ

ಎಂ.ಚಂದ್ರ ಪೂಜಾರಿ

ಜಿಡಿಪಿ ಹೆಚ್ಚಿಸುವಲ್ಲಿ ಜನರ ಪಾಲೇನು? ಹೆಚ್ಚಿದ ಜಿಡಿಪಿಯಲ್ಲಿ ಜನರ ಪಾಲೇನು? ಎಂತಹ ಉದ್ಯೋಗ ಸೃಷ್ಟಿಯಾಗುತ್ತದೆ? ತೆರಿಗೆ ಯಾರಿಂದ ಸಂಗ್ರಹ ವಾಗುತ್ತದೆ? ಸಂಗ್ರಹವಾದ ತೆರಿಗೆ ಯಾರ ಆಸಕ್ತಿಗೆ ಬಳಕೆ ಆಗುತ್ತಿದೆ? ಇತ್ಯಾದಿ ಪ್ರಶ್ನೆಗಳು ಮುಂಚೂಣಿಗೆ ಬರುವುದಿಲ್ಲ. ಹಲವು ದಶಕಗಳಿಂದ
ಇದೇ ಜಿಡಿಪಿಗೆ ಒತ್ತು ಕೊಡುವ ಅಭಿವೃದ್ಧಿ ಮಾದರಿ ಪ್ರಪಂಚದ ಬಹುತೇಕ ದೇಶಗಳಲ್ಲಿ ಕಾರುಬಾರು ಮಾಡುತ್ತಿದೆ. ಆದರೆ ಇದು ಬಡತನ ನಿವಾರಿಸಿಲ್ಲ.
ನಿವಾರಿಸುವ ಬದಲು ಹಲವು ದೇಶಗಳಲ್ಲಿ ಬಡವರ ಸ್ಥಿತಿ ಚಿಂತಾಜನಕವಾಗಿದೆ.

ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳನ್ನು ಗ್ಯಾರಂಟಿಗೊಳಿಸುವ ಬಜೆಟ್ ಇದು. ಈ ಗ್ಯಾರಂಟಿಗಳನ್ನು ಅಭಿವೃದ್ಧಿ ದೃಷ್ಟಿಯಿಂದ ನೋಡಿದರೆ ಇದೊಂದು
ಆದರ್ಶ ಅಭಿವೃದ್ಧಿ ಮಾದರಿ ಎನ್ನುವುದು ಕಷ್ಟ. ಆದಾಗ್ಯೂ ಈ ಕೆಳಗಿನ ಕಾರಣಗಳಿಗೆ ಗ್ಯಾರಂಟಿಗಳು ಮಹತ್ವ ಪಡೆದಿವೆ. ಒಂದು, ಬೆಲೆ ಏರಿಕೆ – ಎವ್ರಿ ಬಡಿ ಲೌವ್ಸ್ ಎ ಗುಡ್ ಡ್ರೌಟ್ ಎನ್ನುವ ರೀತಿಯಲ್ಲಿ ಎವ್ರಿ ಬಡಿ ಲೌವ್ಸ್ ಎ ಗುಡ್ ಇನ್‌ಫ್ಲೇಶನ್ ಎನ್ನುವಂತಾಗಿದೆ. ಏಕೆಂದರೆ ಸಾಮಾನ್ಯ ಗ್ರಾಹಕರು ಬಿಟ್ರೆ ಉಳಿದ ಎಲ್ಲರಿಗೂ ಇದರಿಂದ ಲಾಭ ಇದೆ. ಸರಕಾರಕ್ಕೆ ಜಿಎಸ್‌ಟಿ ಸಂಗ್ರಹ ಹೆಚ್ಚಾಗುತ್ತದೆ. ವ್ಯಾಪಾರಿ ಉದ್ದಿಮೆಗಳಿಗೆ ಹೆಚ್ಚಿನ ವಿನಿಯೋಜನೆ ಇಲ್ಲದೆ ಲಾಭ ಗಳಿಸಲು ಅವಕಾಶ ಮಾಡಿಕೊಡುತ್ತದೆ.

ಸರಕಾರಿ ನೌಕರರ ಡಿಎ ಹೆಚ್ಚಾಗುತ್ತದೆ. ಆದಾಯ ಹೆಚ್ಚಿಸಿಕೊಳ್ಳುವ ಏನೇನೂ ದಾರಿಗಳಿಲ್ಲದ – ಸಣ್ಣ ಅತೀ ಸಣ್ಣ ಕೃಷಿಕರು, ವ್ಯಾಪಾರಿ ಉದ್ದಿಮೆಗಳು, ಈ ಕ್ಷೇತ್ರದಲ್ಲಿ ದುಡಿಯವ ಕೆಲಸಗಾರರು – ಇವರಿಗೆ ಮಾತ್ರ ಬೆಲೆ ಏರಿಕೆ ಶಾಪ. ಕರ್ನಾಟಕ ಸರಕಾರದ ಗ್ಯಾರಂಟಿಗಳು ಇವರನ್ನು ತಲುಪುವ ಸವಲತ್ತುಗಳು. ಎರಡು, ನಿರುದ್ಯೋಗ – ಸರಕಾರದ ನಿರುದ್ಯೋಗ ಶೇ.8, ಶೇ.9 ಅಂಕಿಅಂಶಗಳು ನಂಬಲು ಯೋಗ್ಯವಲ್ಲ. ಏಕೆಂದರೆ ನಮ್ಮಲ್ಲಿ ಶೇ.52ರಷ್ಟು ಸೆಲ್ಪ್ ಎಂಪ್ಲಾಯಿಡ್, ಶೇ.24 ಉದ್ಯೋಗಿಗಳು ಅರೆಬರೆ ಸೋಶಿಯಲ್ ಸೆಕ್ಯುರಿಟಿ ಇರುವ ಉದ್ಯೋಗಗಳು, ಶೇ.24 ಏನೇನೂ ಸೆಕ್ಯುರಿಟಿ ಇಲ್ಲದ ಉದ್ಯೋಗಗಳು. ಅಂದರೆ ಹೆಚ್ಚು ಕಡಿಮೆ ಶೆ.76 ಆದಾಯ ಮೂಲಗಳು ಅತ್ಯಂತ ಅಭದ್ರತೆ ಇರುವ ಆದಾಯ ಮೂಲಗಳು.

ಮೂರು, ಬಡವರ ಕಷ್ಟಗಳನ್ನು ಸ್ಪಂದಿಸಿದ ಕೇಂದ್ರದ ಪಾಲಿಸಿಗಳು. ಕರ್ನಾಟಕದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನಿರಾಕರಿಸಿರುವುದು ಇತ್ತೀಚಿನ ಉದಾಹರಣೆ. ಕೇಂದ್ರ ಸರಕಾರದ ಸೂಚನೆ ಮೇರೆಗೆ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ ಅಕ್ಕಿ ಪೂರೈಕೆ ನಿರಾಕರಿಸಿದೆ. ಇದೇ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ ವಾಹನ ಓಡಿಸುವ ಇಂಧನ ಉತ್ಪಾದನೆಗೆ ಕಡಿಮೆ ಬೆಲೆಗೆ (ರೂ.20ಕ್ಕೆ) ಧಾರಾಳ ಅಕ್ಕಿ ಪೂರೈಕೆ ಮಾಡುತ್ತಿದೆ, ಖಾಸಗಿ ವ್ಯಾಪಾರಸ್ಥರಿಗೂ ಪೂರೈಕೆ ಮಾಡುತ್ತಿದೆ. ಆದರೆ ರಾಜ್ಯ ಸರಕಾರ ಕೆಜಿಗೆ ರೂ.34 ಕೊಡಲು ಸಿದ್ದವಾಗಿದ್ದರೂ ಅಕ್ಕಿ ಪೂರೈಸಲು ಕೇಂದ್ರ ನಿರಾಕರಿಸಿದ. ಇತ್ತೀಚನ ವರ್ಷಗಳಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯೋಗ ಕೇಳುವವರ ಸಂಖ್ಯೆ ಹೆಚ್ಚಾಗಿದೆ.

ಆದರೆ ಪ್ರತಿ ಬಜೆಟ್‌ಲ್ಲಿ ಈ ಯೋಜನೆಗೆ ಎಲೋಕೇಟ್ ಮಾಡುವ ಸಂಪನ್ಮೂಲ ಬೇಡಿಕೆಗಿಂತ ಕಡಿಮೆ ಇದೆ. ಇದರಿಂದಾಗಿ ಹೊಟ್ಟೆಪಾಡಿಗಾಗಿ ದುಡಿಯುವವರು ಕೂಡ ಸಂಬಳಕ್ಕೆ ಎರಡು ಮೂರು ತಿಂಗಳು ಕಾಯುವ ಸ್ಥಿತಿ ನಿರ್ಮಾಣ ಆಗಿದೆ. ಯುಕ್ರೇನ್ ಯುದ್ಧ ಶುರುವಾದ ನಂತರ ರಷ್ಯಾದಿಂದ ಅತೀ ಕಡಿಮೆ ಬೆಲೆಗೆ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಈ ಕಚ್ಚಾ ತೈಲಗಳನ್ನು ಖಾಸಗಿ ಕಂಪೆನಿಗಳು ರಿಫೈನ್ ಮಾಡಿ ಪರದೇಶಕ್ಕೆ ಮಾರಿ ಕೋಟಿಗಟ್ಟಲೆ ಲಾಭ ಗಳಿಸುತ್ತಿದ್ದಾರೆ. ಒಂದು ವೇಳೆ ಇದೇ ಕಡಿಮೆ ಬೆಲೆಯ ತೈಲವನ್ನು ಕಡಿಮೆ ಬೆಲೆಗೆ ನಮ್ಮ ದೇಶದ ಜನರಿಗೆ ಮಾರುತ್ತಿದ್ದರೆ ಬೆಲೆ ಏರಿಕೆ ಕಡಿಮೆ ಆಗುತ್ತಿತ್ತು. ಇವೆಲ್ಲ ಕಾರಣಗಳು ಗ್ಯಾರಂಟಿಗಳ ಮಹತ್ವವನ್ನು ಹೆಚ್ಚಿಸಿವೆ.  ಇದೇ ಕಾರಣದಿಂದ ಗ್ಯಾರಂಟಿಗಳಿಗೆ  ಎಷ್ಟು ಮೊತ್ತ ತೆಗೆದಿಡಲಾಗಿದೆ? ಅದು ಎಲ್ಲಿಂದ ಬರುತ್ತದೆ? ಎನ್ನುವುದೇ ಮೇಜರ್ ಫೋಕಸ್ ಆಫ್ ದಿ ಬಜೆಟ್ ಕೂಡ ಆಗಿದೆ.

ಗ್ಯಾರಂಟಿಗಳಿಗೆ 52000 (16%) ಕೋಟಿ ತೆಗೆದಿಟ್ಟ ಕೂಡಲೇ ಕ್ಯಾಪಿಟಲ್ ಫೋರ್ಮೇಶನ್‌ಗೆ ತೊಂದರೆ ಆಗುತ್ತದೆ, ಅಭಿವೃದ್ಧಿಗೆ ಪೂರಕವಾಗಿಲ್ಲ
ಇತ್ಯಾದಿ ಕಮೆಂಟ್‌ಗಳು ಬಂದವು. ಎಲ್ಲೂ ಸವಲತ್ತಿಗೂ ಅಭಿವೃದ್ದಿಗೂ ಸಂಬಂಧ ಇದೆಯೇ? ಎನ್ನುವ ಚರ್ಚೆ ಮುಂಚೂಣಿಗೆ ಬರಲೇ ಇಲ್ಲ್ಲ. ಇದಕ್ಕೆ ಬಹುಮುಖ್ಯ ಕಾರಣ ಮುಖ್ಯವಾಹಿನಿಯ ಅಭಿವೃದ್ಧಿ ಚಿಂತನೆಯಲ್ಲಿ ಜಿಡಿಪಿ ಗ್ರೋಥ್ ಅಥವಾ ಸರಕುಸೇವೆಗಳ ಉತ್ಪಾದನೆ ಹೆಚ್ಚಿಸುವುದು ಮಹತ್ವ ಪಡೆದಿರುವುದು. ಎಲ್ಲ ರಾಜಕೀಯ ಪಕ್ಷಗಳು ಜಿಡಿಪಿ ಗ್ರೋಥ್ ಹೆಚ್ಚಿಸುವುದಕ್ಕೆ ಹೆಚ್ಚು ಮಹತ್ವ ನೀಡುತ್ತಿವೆ. ಸರಕುಸೇವೆಗಳ ಪೂರೈಕೆ ಹೆಚ್ಚಿದರೆ ಬಡವರು ಖರೀದಿಸಿ ಅನುಭವಿಸಬಹುದು, ಇದರಿಂದ ಬಡತನ ನಿವಾರಣೆ ಆಗುತ್ತದೆ, ಉತ್ಪಾದನೆಗೆ ಫೋಕಸ್ ನೀಡುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ, ತೆರಿಗೆ ಸಂಗ್ರಹ ಹೆಚ್ಚುತ್ತದೆ, ಹೆಚ್ಚಿದ ತೆರಿಗೆ ಸಂಗ್ರಹವನ್ನ ಶಿಕ್ಷಣ, ಆರೋಗ್ಯಗಳ ಮೇಲೆ ಕರ್ಚು ಮಾಡಬಹುದು ಇತ್ಯಾದಿ ನಿಯೋ ಲಿಬರಲ್ ಥಿಯರಿಯ ಗ್ರಹಿಕೆಗಳನ್ನು ಬಿಜೆಪಿ ಮುಖಬೆಲೆಯಲ್ಲಿ ಸ್ವೀಕರಿಸಿದೆ. 

ಜಿಡಿಪಿ ಹೆಚ್ಚಿಸುವಲ್ಲಿ ಜನರ ಪಾಲೇನು? ಹೆಚ್ಚಿದ ಜಿಡಿಪಿಯಲ್ಲಿ ಜನರ ಪಾಲೇನು? ಎಂತಹ ಉದ್ಯೋಗ ಸೃಷ್ಟಿಯಾಗುತ್ತದೆ? ತೆರಿಗೆ ಯಾರಿಂದ ಸಂಗ್ರಹ
ವಾಗುತ್ತದೆ? ಸಂಗ್ರಹವಾದ ತೆರಿಗೆ ಯಾರ ಆಸಕ್ತಿಗೆ ಬಳಕೆ ಆಗುತ್ತಿದೆ? ಇತ್ಯಾದಿ ಪ್ರಶ್ನೆಗಳು ಮುಂಚೂಣಿಗೆ ಬರುವುದಿಲ್ಲ. ಹಲವು ದಶಕಗಳಿಂದ ಇದೇ ಜಿಡಿಪಿಗೆ ಒತ್ತು ಕೊಡುವ ಅಭಿವೃದ್ಧಿ ಮಾದರಿ ಪ್ರಪಂಚದ ಬಹುತೇಕ ದೇಶಗಳಲ್ಲಿ ಕಾರುಬಾರು ಮಾಡುತ್ತಿದೆ. ಆದರೆ ಇದು ಬಡತನ ನಿವಾರಿಸಿಲ್ಲ. ನಿವಾರಿಸುವ ಬದಲು ಹಲವು ದೇಶಗಳಲ್ಲಿ ಬಡವರ ಸ್ಥಿತಿ ಚಿಂತಾಜನಕವಾಗಿದೆ. ಜಿಡಿಪಿಗೆ ಮಹತ್ವ ನೀಡುವ ಅಭಿವೃದ್ಧಿಯ ಈ ಎಲ್ಲ ಕೊರತೆಗಳ ಹಿನ್ನೆಲೆಯಲ್ಲಿ ಬದಲೀ ಅಭಿವೃದ್ಧಿ ಮಾದರಿಗಳು ಮುಂಚೂಣಿಗೆ ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ಮಾನವ ಅಭಿವೃದ್ಧಿ, ಜನರ ಸಾಮರ್ಥ್ಯ ವೃದ್ಧಿಸುವ ಅಭಿವೃದ್ಧಿ, ಜನರ
ಸ್ವಾತಂತ್ರ್ಯ ವೃದ್ಧಿಸುವ ಅಭಿವೃದ್ಧಿ ಇತ್ಯಾಗಳು.

ಎಲ್ಲ ಅಭಿವೃದ್ದಿ ಪ್ರಯತ್ನಗಳ ಅಂತಿಮ ಗುರಿ ಜನಸಾಮಾನ್ಯರು. ಅವರ ಬದುಕಿನ ಗುಣಮಟ್ಟ ಸುಧಾರಿಸುವುದು. ಗುಣಮಟ್ಟ ಸುಧಾರಿಸಬೇಕಾದರೆ ಆಹಾರ, ವಸತಿ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಉದ್ಯೋಗಗಳು ಬೇಕು. ಇವನ್ನು ಕೊಡುವ ಅಭಿವದ್ಧಿ ಇಂದಿನ ಅಗತ್ಯ. ಜನಸಾಮಾನ್ಯರಿಗೆ ನೇರವಾಗಿ ಕೊಡುವ  ಸವಲತ್ತುಗಳು ಕೂಡ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತವೆ. ಜನ ಸಾಮಾನ್ಯರ ಸ್ವಾಧೀನ ಬರುವ ಹೆಚ್ಚಿನ ಸಂಪನ್ಮೂಲವನ್ನು ಅವರು ಸ್ವಿಸ್ ಬ್ಯಾಂಕ್‌ಲ್ಲಿ ಇಡುವುದಿಲ್ಲ. ಅದು ನೇರವಾಗಿ ಆರ್ಥಿಕ ಚಟುವಿಕೆಗಳಿಗೆ ಬರುತ್ತದೆ. ಹಣ ಮಾರುಕಟ್ಟೆಗೆ ಬರುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ರಾಜ್ಯದ ಜಿಡಿಪಿ ಕೂಡ ಹೆಚ್ಚಾಗಬಹುದು. ಅತೀ ಹೆಚ್ಚು ಸವಲತ್ತು ಕೊಡುವ ರಾಜ್ಯಗಳು ಸವಲತ್ತು ಕೊಡದಿರುವ ರಾಜ್ಯಕ್ಕಿಂತ ಉತ್ತಮ ಸಾಧನೆ ಮಾಡಿವೆ.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ ಸಂಕ್ಷಿಪ್ತ ಮಾಹಿತಿ

ಅಭಿವೃದ್ಧಿಯ ಎಲ್ಲ ಸೂಚ್ಯಾಂಕಗಳಲ್ಲೂ ಸವಲತ್ತುಗಳನ್ನು ನೀಡುವ ದಕ್ಷಿಣದ ರಾಜ್ಯಗಳು ಈ ಬಗೆಯ ಸವಲತ್ತುಗಳನ್ನು ನೀಡದಿರುವ ಉತ್ತರದ ರಾಜ್ಯಗಳಿಂದ ತುಂಬಾ ಮುಂದಿವೆ. ಶಿಕ್ಷಣ, ಆರೋಗ್ಯ ಮತ್ತು ಆದಾಯಗಳನ್ನು ಮಾಪನ ಮಾಡುವ ಮಾನವ ಅಭಿವೃದ್ಧಿಯಲ್ಲಿ ಕೇರಳ 1ನೇ, ತಮಿಳುನಾಡು 13ನೇ ಮತ್ತು ಕರ್ನಾಟಕ 17ನೇ ಸ್ಥಾನದಲ್ಲಿವೆ. ಸವಲತ್ತುಗಳನ್ನು ನೀಡದ ಬಿಹಾರ 34ನೇ, ಮಧ್ಯಪ್ರದೇಶ 31ನೇ ಮತ್ತು ಉತ್ತರಪ್ರದೇಶ 32ನೇ ಸ್ಥಾನದಲ್ಲಿವೆ.

ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಗ್ರಾಮೀಣಾಭಿವೃದ್ಧಿ ಸೂಚ್ಯಾಂಕಗಳನ್ನು ಬಳಸಿಕೊಂಡು ದೇಶದ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿಯನ್ನು ಮಾಪನ ಮಾಡುತ್ತಿದೆ. ಈ ಇಲಾಖೆಯ 2022-23 ರ ಮಾಪನ ಪ್ರಕಾರ ಗ್ರಾಮೀಣಾಭಿವೃದ್ಧಿಯಲ್ಲಿ ತಮಿಳುನಾಡು 1ನೇ, ಕರ್ನಾಟಕ 4ನೇ ಮತ್ತು ಕೇರಳ 16ನೇ ಸ್ಥಾನದಲ್ಲಿದ್ದರೆ ಉತ್ತರ ಪ್ರದೇಶ 8ನೇ, ಮಧ್ಯಪ್ರದೇಶ 21ನೇ ಮತ್ತು ಬಿಹಾರ 29ನೇ ಸ್ಥಾನದಲ್ಲಿವೆ. ಸುಸ್ಥಿರ ಅಭಿವೃದ್ಧಿಯನ್ನು ಮಾಪನ ಮಾಡಲು ನೀತಿ ಆಯೋಗ 17 ಸೂಚ್ಯಾಂಕಗಳನ್ನು ಬಳಸಿಕೊಂಡು ಇಂಡೆಕ್ಸ್ ಒಂದನ್ನು ಸಿದ್ಧಪಡಿಸಿದೆ.

2020-21ರಲ್ಲಿ ಸುಸ್ಥಿರ ಅಭಿವೃದ್ಧಿಯ ಬಹುತೇಕ ಸೂಚ್ಯಾಂಕಗಳಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ ತಮಿಳುನಾಡು ಮತ್ತು ಕರ್ನಾಟಕಗಳು ಕೂಡ ಸಾಕಷ್ಟು ಸಾಧನೆ ಮಾಡಿವೆ. ಆದರೆ ಉತ್ತರದ ಮಧ್ಯಪ್ರದೇಶ, ಬಿಹಾರ ಮತ್ತು ಉತ್ತರಪ್ರದೇಶಗಳು ಸುಸ್ಥಿರ ಅಭಿವೃದ್ದಿಯನ್ನು ಸಾಧಿಸುವಲ್ಲಿ ತುಂಬಾ ಹಿಂದಿವೆ. ಹೀಗೆ ಅಭಿವೃದ್ಧಿಯ ಬಹುತೇಕ ಸೂಚ್ಯಾಂಕಗಳಲ್ಲಿ – ತಲಾ ಆದಾಯ, ಸಾಕ್ಷರತೆ, ಆರೋಗ್ಯ, ಲಿಂಗ ಸಮಾನತೆ ಮುಂತಾದವುಗಳಲ್ಲಿ ಸವಲತ್ತುಗಳನ್ನು ನೀಡುವ ದಕ್ಷಿಣದ ರಾಜ್ಯಗಳು ಸವಲತ್ತುಗಳನ್ನು ನೀಡದ ಉತ್ತರದ ರಾಜ್ಯಗಳಿಂದ ಮುಂದೆ ಇವೆ.

ಬಜೆಟ್ ಅಂದರೆ ಎಲ್ಲಿಂದ ಆದಾಯ ಬರುತ್ತದೆ? ಮತ್ತು ಎಲ್ಲಿ ವಿನಿಯೋಜನೆ ಆಗುತ್ತದೆ? ಪ್ರಶ್ನೆಗಳು ಇರಲೇಬೇಕು. ಎಲ್ಲ ಬಜೆಟ್‌ನಂತೆ ಈ ಬಜೆಟ್‌ಲ್ಲೂ ಹೆಚ್ಚಿನ ಆದಾಯ ಬರುವುದು ಜನಸಾಮಾನ್ಯರಿಂದಲೇ. 2023-24ರ ಬಜೆಟ್ ಪ್ರಕಾರ ಶೇ.54 ಸ್ವಂತ ತೆರಿಗೆ, ಶೇ.4 ತೆರಿಗೆಯೇತರ ಆದಾಯ, ಶೇ.26 ಸಾಲ. ಈ ಮೂರನ್ನು ಸೇರಿಸಿದರೆ ಶೇ.84 ಕೂಡ ರಾಜ್ಯದ ಜನ ಸಾಮಾನ್ಯರು ಕಟ್ಟುವ ತೆರಿಗೆ. ಏಕೆಂದರೆ ಇವೆಲ್ಲ ಬಂದಿರುವುದು -1) ಶೇ. 58
ವಾಣಿಜ್ಯ ತೆರಿಗೆಯಂದ (ವ್ಯಾಟ್, ರಾಜ್ಯ ಜಿಎಸ್‌ಟಿ, ಮನೋರಂಜನ, ಲಕ್ಸುರಿ, ಪ್ರೊಫೇಶನ್, ಟ್ರೇಡ್, ಬೆಟ್ಟಿಂಗ್ ಇತ್ಯಾದಿ ತೆರಿಗೆಗಳಿಂದ) 2) ಶೇ.20 ಅಬಕಾರಿಯಿಂದ, 3) ಶೇ.14 ಸ್ಟಾಂಪ್ಸ್ ಅಂಡ್ ಡ್ಯೂಟೀಸ್ ಆನ್ ರಿಜಿಸ್ಟ್ರೇಶನ್‌ ಮತ್ತು 4) ಶೇ.7 ಮೋಟರ್ ರಿಜಿಸ್ಟ್ರೇಶನ್‌ನಿಂದ. ಕೇಂದ್ರದ ಪಾಲು – ಗ್ರಾಂಟ್ಸ್ ರೂ.13005 ಮತ್ತು ತೆರಿಗೆ ಪಾಲು ರೂ.37252 ಕೋಟಿ. ಕೇಂದ್ರ ಸಂಗ್ರಹಿಸುವ ಆದಾಯ ತೆರಿಗೆ, ಕಾರ್ಪೋರೇಟ್ ತರಿಗೆ, ಎಕ್ಸೈಸ್, ಕಸ್ಟಮ್ಸ್ ಎಲ್ಲವೂ ರಾಜ್ಯದಿಂದಲೇ ಹೋಗುವುದು.

ಪ್ರತಿ ಲೀಟರ್ ಪೆಟ್ರೋಲ್‌ನ ಮೂಲ ಬೆಲೆ ರೂ.57 ಮತ್ತು ಡೀಲರ್ ಕಮಿಶನ್ ರೂ.3.5 ಇದ್ದರೆ ಕೇಂದ್ರದ ಸೆಂಟ್ರಲ್ ಎಕ್ಸೈಸ್ ರೂ.20, ರಾಜ್ಯದ ವ್ಯಾಟ್ ರೂ.21ಇದೆ. ಅಂದರೆ ಪ್ರತಿ ಲೀಟರ್ ಪೆಟ್ರೋಲ್ ತುಂಬಿಸುವಾಗ ಪ್ರತಿಯೊಬ್ಬರು 41 ರೂಪಾಯಿ ತೆರಿಗೆ ಸಂದಾಯವಾಗುತ್ತದೆ. ಹೀಗೆ ಆದಾಯದ ಮೂಲ ಜನಸಾಮಾನ್ಯರೇ. ಪ್ರತಿಬಾರಿ ಜನಸಾಮಾನ್ಯರು ನೂರು ರೂಪಾಯಿಯಷ್ಟು ತೆರಿಗೆ ಕಟ್ಟಿದರೆ ಐದು ರೂಪಾಯಿಯಷ್ಟು ಸವಲತ್ತುಗಳು ಬರುತ್ತಿದ್ದವು. ಈ ಬಾರಿ ಈ ಗ್ಯಾರಂಟಿಗಳ ದಿಶೆಯಿಂದ ಹದಿನೈದರಿಂದ ಇಪ್ಪತ್ತು ರೂಪಾಯಿಗಳಷ್ಟು ಸಂಪನ್ಮೂಲ ಜನಸಾಮಾನ್ಯರಿಗೆ ವರ್ಗಾವಣೆ ಆಗುತ್ತಿದೆ.

ಈ ಹೆಚ್ಚಳವನ್ನು ಅನುಕೂಲಸ್ಥರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಜನಸಾಮಾನ್ಯರಿಗೆ ಹೆಚ್ಚು ಸಂಪನ್ಮೂಲ ವರ್ಗಾವಣೆ ನಡೆದರೆ ಎಲ್ಲಿ ನಮ್ಮ ಪಾಲಿಗೆ ಕತ್ತರಿ ಬೀಳುತ್ತದೋ ಎನ್ನುವ ಭಯ ಅವರದ್ದು. ಅನುಕೂಲಸ್ಥರ ಸಂಖ್ಯೆ ಕಡಿಮೆ ಇದೆ. ಆದರೆ ಇವರು ಟಿವಿ, ಪೇಪರ್, ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದುದರಿಂದ ಇವರ ಸಮಸ್ಯೆಯನ್ನು ನಮ್ಮ ರಾಜ್ಯದ ಸಮಸ್ಯೆಯೆಂದು ಮಂಡಿಸುತ್ತಾರೆ. ತಮ್ಮ ಆತಂಕವನ್ನು ಬೇರೆ ಬೇರೆ ರೂಪಗಳಲ್ಲಿ ಹೊರಹಾಕುತ್ತಾರೆ.

ಸವಲತ್ತುಗಳ ವಿರುದ್ದ ಪ್ರಚಾರ ಮಾಡುವುದು, ಇವುಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಪುಕಾರೆಬ್ಬಿಸುವುದು ನಡೆಯುತ್ತಿದೆ. ಕೆಲವು ಬಾರಿ ಸವಲತ್ತು
ಪಡೆಯುವವರು ಕೂಡ ಅನುಕೂಲಸ್ಥರ ಪ್ರಚಾರಕ್ಕೆ ಬಲಿಯಾಗುತ್ತಾರೆ. ಅವರಂತೆ ಮಾತಾಡಲು ಶುರು ಮಾಡುತ್ತಾರೆ. ಹಾಗೆಂದು ಈ ಬಜೆಟ್‌ಲ್ಲಿ ಸಮಸ್ಯೆಯೇ ಇಲ್ಲ ಎಂದಲ್ಲ. ಎಲ್ಲ ಬಜೆಟ್‌ಗಳ ರೀತಿಯಲ್ಲಿ ಇದರಲ್ಲೂ ಸಾಕಷ್ಟು ಸಮಸ್ಯೆಗಳಿವೆ. ನಿಯೋ ಲಿಬರಲ್ ಆರ್ಥಿಕ ನೀತಿಗಳು ಜಾರಿಗೆ ಬಂದ ನಂತರ ನಮ್ಮ ದೇಶವನ್ನು ಸೇರಿಸಿಕೊಂಡು ಪ್ರಪಂಚದ ಎಲ್ಲ ದೇಶಗಳಲ್ಲೂ ಅಸಮಾನತೆ, ನಿರುದ್ಯೋಗ, ಬಡತನಗಳು ಹೆಚ್ಚಾಗುತ್ತಿವೆ. ಎಲ್ಲ ದೇಶಗಳಲ್ಲೂ ಬಲಪಂಥೀಯ ಪಕ್ಷಗಳು ಬಲಗೊಳ್ಳುತ್ತಿವೆ. ಏಕೆಂದರೆ ಮೇಲಿನ ಎಲ್ಲ ಸಮಸ್ಯೆಗಳಿಗೆ ನಮ್ಮಲ್ಲಿ ಮುಸ್ಲಿಮರು, ಅಲ್ಪಸಂಖ್ಯಾತರನ್ನು ತೋರಿಸಿದಂತೆ ಪಶ್ಚಿಮ ದೇಶಗಳಲ್ಲಿ ವಲಸಿಗರನ್ನು, ಕಪ್ಪು ಜನರನ್ನು ಕಾರಣವೆಂದು ತೋರಿಸುತ್ತಿದ್ದಾರೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಡಪಂಥೀಯರು ಮೂಲೆಗುಂಪಾಗಿದ್ದಾರೆ. ಕೋಮುವಾದಿಗಳಲ್ಲದ ಲಿಬರಲ್ ಪಕ್ಷಗಳು ಬಲಪಂಥೀಯ ಫೇಸಿಸ್ಟ್ ರಾಜಕೀಯವನ್ನು ಎದುರಿಸಲು ಪರದಾಡುತ್ತಿವೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಅಲ್ಪಸ್ವಲ್ಪ ಖರೀದಿಸುವ ಶಕ್ತಿ ನೀಡುವ ಸವಲತ್ತುಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಿವೆ. ಇವು ಒಂದು ಕಡೆಯಲ್ಲಿ ರಾಜಕೀಯ ಚರ್ಚೆಯನ್ನು ಕೋಮು ವಿಚಾರಗಳಿಂದ ಆರ್ಥಿಕ ವಿಚಾರಗಳತ್ತ ತಿರುಗಿಸುತ್ತಿವೆ ಮತ್ತೊಂದೆಡೆ ಎಡಪಂಥೀಯರಿಗೂ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ಸೃಷ್ಟಿಸುತ್ತಿದೆ. ಇದೇ ಸಂದರ್ಭದಲ್ಲಿ ಇಂತಹ ಸವಲತ್ತುಗಳು ನಿಯೋ ಲಿಬರಲ್ ಆರ್ಥಿಕ ನೀತಿಯನ್ನು ಪ್ರಶ್ನಿಸುತ್ತಿಲ್ಲ ಎನ್ನುವುದು ಕೂಡ ಅಷ್ಟೇ ಮುಖ್ಯ.

 

 

Donate Janashakthi Media

Leave a Reply

Your email address will not be published. Required fields are marked *