ಪ್ರೊ. ಪ್ರಭಾತ್ ಪಟ್ನಾಯಕ್
ಇದೀಗ ರಾಷ್ಟ್ರೀಯ ಶಿಕ್ಷಣ ಆಯೋಗವು ಭಾರತದ ಮತ್ತು ವಿದೇಶಿ ವಿಶ್ವವಿದ್ಯಾಲಯಗಳ ಕೋರ್ಸ್‌ಗಳ ಮತ್ತು ಪಠ್ಯಕ್ರಮಗಳ ನಡುವೆ ಸಮನ್ವಯವಿರಬೇಕು ಎಂದು ಹೇಳುವ ಮೂಲಕ ವಸಾಹತೀಕೃತ ಮಾನಸಿಕತೆಯನ್ನು ಸಂಪೂರ್ಣವಾಗಿ ಸಂಸ್ಥೀಕರಿಸಿದೆ. ವಸಾಹತೀಕರಣಗೊಂಡ ಮಾನಸಿಕತೆಯನ್ನು ಬದಲಿಸಿಕೊಳ್ಳಬೇಕು ಎಂದರೆ, ಅದರ ಸ್ಥಾನದಲ್ಲಿ ದುರಭಿಮಾನದ ಹಿಂದುತ್ವ ಮಾನಸಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದರ್ಥವಲ್ಲ. ಇವೆರಡರ ಪ್ರಪಂಚಗಳೇ ಬೇರೆ ಬೇರೆ. ಹಿಂದುತ್ವವು ವಸಾಹತುಶಾಹಿ ಮಾನಸಿಕತೆಯನ್ನು ಬಲಪಡಿಸುತ್ತದೆ. ಸತ್ಯವನ್ನು ಮಬ್ಬುಗವಿಸುವುದು ಮುಂದುವರೆದ ಪಾಶ್ಚಿಮಾತ್ಯ ದೇಶಗಳ ಸಮಾಜ ವಿಜ್ಞಾನಗಳ ಒಂದು ಹೆಗ್ಗುರುತಾಗಿದ್ದರೂ, ಈ ಬಗ್ಗೆ ಹಿಂದುತ್ವಕ್ಕೆ ಕಾಳಜಿಯೇ ಇಲ್ಲ. ಹಿಂದುತ್ವದ ಏಕೈಕ ಕಾಳಜಿ ಎಂದರೆ, ಆ ದೇಶಗಳ ಸಮಾಜ ವಿಜ್ಞಾನಗಳನ್ನು ರೂಪಿಸಿದ ಸಿದ್ಧಾಂತಗಳು ಪ್ರಾಚೀನ ಭಾರತದಲ್ಲೇ ಹುಟ್ಟಿದವು ಎನ್ನುವಂಥಹ ಎಂಥದ್ದೊ ಒಂದು ಪ್ರಮಾಣ ಪತ್ರವನ್ನು ಅವರಿಂದ ಪಡೆಯುವುದೇ ಆಗಿದೆ! ಯಾವುದನ್ನೋ ಸಮರ್ಥಿಸಿಕೊಳ್ಳುವ ಬದಲು ನೈಜ ಸಮಾಜ ವಿಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವುದು ವಸಾಹತೀಕರಣಕ್ಕೆ ಗುರಿಯಾದವರ ದೃಷ್ಟಿಕೋನದಿಂದ ಮಾತ್ರವೇ…
ಸಾಮ್ರಾಜ್ಯಶಾಹಿ ವ್ಯವಸ್ಥೆಯ ಒಂದು ಬಹಳ ಮುಖ್ಯವಾದ ಸಂಗತಿ ಎಂದರೆ, ತನ್ನ ಸಮರ್ಥನೆಗಾಗಿ ಅದು ಮೂರನೇ ಜಗತ್ತಿನ ಮಾನಸಿಕತೆಯನ್ನು ಪರಿವರ್ತಿಸುತ್ತದೆ. ಈ ರೀತಿಯ ವಸಾಹತುಶಾಹಿ ಮಾನಸಿಕತೆಯು ವ್ಯಾಪಕವಾಗಿ ಹರಡಿದೆ. ಅದೇನೇ ಇರಲಿ, ಸಮಾಜ ವಿಜ್ಞಾನಗಳ ವಲಯದ ಅಕೆಡೆಮಿಕ್ ವಸಾಹತುಶಾಹಿ ಮಾನಸಿಕತೆಯ ಬಗ್ಗೆ ಮಾತ್ರ ನಾವೀಗ ಚರ್ಚಿಸೋಣ.
ಸಮಾಜ ವಿಜ್ಞಾನಗಳು ಬಹಳ ಮುಖ್ಯವಾಗುತ್ತವೆ. ಏಕೆಂದರೆ, ಮೂರನೆಯ ಜಗತ್ತಿನ ಸಮಾಜಗಳನ್ನು ಬಾಧಿಸುವ ಸಮಸ್ಯೆಗಳು ಎಲ್ಲಕ್ಕಿಂತ ಮಿಗಿಲಾಗಿ ಸಾಮಾಜಿಕ ಸಮಸ್ಯೆಗಳೇ. ಆದರೆ, ಈ ವಸಾಹತುಶಾಹಿ ಮಾನಸಿಕತೆಯು ಸಾಮಾಜಿಕ ಸಮಸ್ಯೆಗಳಿಗೂ ಮತ್ತು ವಸಾಹತುಶಾಹಿ ಕಾಲದ ಸಾಮ್ರಾಜ್ಯಶಾಹಿಗೂ ಸಂಬಂಧವಿಲ್ಲ ಎಂಬ ನಂಬಿಕೆಯನ್ನು ಜನರಲ್ಲಿ ಪರಿಣಾಮಕಾರಿಯಾಗಿ ಬೆಳೆಸಿದೆ, ಮಾತ್ರವಲ್ಲ, ಈ ಸಮಸ್ಯೆಗಳನ್ನು ತಕ್ಕ ಮಟ್ಟಿಗೆ ಪರಿಹರಿಸಿದೆ ಎಂದೇ ನಂಬಿಸಿದೆ ಕೂಡ ಮತ್ತು ಸಾಮ್ರಾಜ್ಯಶಾಹಿಯು ಅಸ್ತಿತ್ವದಲ್ಲಿಲ್ಲದ ಪ್ರಸಕ್ತ ಕಾಲಮಾನದಲ್ಲಿ, ಈ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಚಿಂತಿಸದಂತೆ ಜನರನ್ನು ಮರುಳುಗೊಳಿಸಿದೆ.
ವಸಾಹತುಶಾಹಿ-ಪರವಾಗಿ ಜನ ಮನವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಇಡುವ ಆರಂಭಿಕ ಹೆಜ್ಜೆ ಎಂದರೆ, ಸಾಮಾಜಿಕ ಅಭಿವೃದ್ಧಿಯ ಬಗ್ಗೆ ಒಂದು ಕಥನವನ್ನು ಹೆಣೆಯಲಾಗುತ್ತದೆ. ಈ ಕಥನದ ಪ್ರಕಾರ, ಅಭಿವೃದ್ಧಿಗೂ ಮತ್ತು ವಸಾಹತುಶಾಹಿಗಾಗಲಿ ಅಥವಾ ಸಾಮ್ರಾಜ್ಯಶಾಹಿಗಾಗಲಿ ಸಂಬಂಧವೇ ಇಲ್ಲ. ಈ ಮಾತು ವಸಾಹತು ದೇಶಗಳಿಗೆ ಮಾತ್ರವಲ್ಲ, ಮೆಟ್ರಾಪಲಿಸ್ (metropolis) ದೇಶಗಳಿಗೂ ಅನ್ವಯಿಸುತ್ತದೆ. ಅರ್ಥಶಾಸ್ತ್ರದ ಒಂದು ದೃಷ್ಟಾಂತವು ಈ ಅಂಶವನ್ನು ಸ್ಪಷ್ಟಪಡಿಸುತ್ತದೆ. ಎಂಐಟಿಯ (ಮ್ಯಾಸಚೂಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ) ರಾಬರ್ಟ್ ಸೋಲೋ ಎಂಬುವರು ಅಭಿವೃದ್ಧಿಪಡಿಸಿದ “ಮುಖ್ಯಧಾರೆ” ಅರ್ಥಶಾಸ್ತ್ರದ ಅತ್ಯಂತ ಪ್ರಭಾವಶಾಲಿ ಸಿದ್ಧಾಂತವು, ಬಂಡವಾಳಶಾಹಿಯಡಿಯಲ್ಲಿ ಬೆಳವಣಿಗೆಯು ಸ್ವತಂತ್ರವಾಗಿ ಬೆಳೆಯುವ ಆಂತರಿಕ ಶ್ರಮಶಕ್ತಿಯ ಬೆಳವಣಿಗೆ ದರದಿಂದ ನಿಬಂಧಿಸಲ್ಪಟ್ಟಿದೆ ಮತ್ತು ದೀರ್ಘಾವಧಿಯಲ್ಲಿ ಶ್ರಮಶಕ್ತಿಯ ಬೆಳವಣಿಗೆ ದರಕ್ಕೆ ಸಮಾನವಾಗಿರುತ್ತದೆ. ಈ ಸಿದ್ಧಾಂತದ ಸಿಂಧುತ್ವವು, ಬೆಳವಣಿಗೆಯ ಬಗ್ಗೆ ಕೆಲವು ಹೊಸ ವಿಧಾನಗಳ ಹೊರತಾಗಿಯೂ (ಸಾಮ್ರಾಜ್ಯಶಾಹಿಯ ಬಗ್ಗೆ ಇವುಗಳಲ್ಲಿ ಇನ್ನೂ ಉಲ್ಲೇಖವಿಲ್ಲ), ಪ್ರಬಲವಾಗಿಯೇ ಮುಂದುವರೆದಿದೆ. ಥಾಮಸ್ ಪಿಕೆಟ್ಟಿ ಅವರಂಥಹ ಅರ್ಥಶಾಸ್ತ್ರಜ್ಞರೂ ಸಹ, ವ್ಯಾಪಕ ಮೆಚ್ಚುಗೆ ಪಡೆದ ತಮ್ಮ ಇತ್ತೀಚಿನ ಪುಸ್ತಕ ’ಕ್ಯಾಪಿಟಲ್ ಇನ್ ದಿ ಟ್ವೆಂಟಿ-ಫಸ್ಟ್ ಸೆಂಚುರಿ’ಯಲ್ಲಿ ಈ ಸಿದ್ಧಾಂತವನ್ನೇ ಅಳವಡಿಸಿಕೊಂಡಿದ್ದಾರೆ.
ಬೆಳವಣಿಗೆಯ ಈ ಸಿದ್ಧಾಂತವು ಒಂದೇ ಏಟಿನಲ್ಲಿ 19ನೇ ಶತಮಾನದ ಮೊದಲಾರ್ಧದಲ್ಲಿ ಆಫ್ರಿಕಾದಿಂದ “ಹೊಸ ಜಗತ್ತಿಗೆ” ಕನಿಷ್ಠ ಎರಡು ಕೋಟಿ ಗುಲಾಮರ ಬೃಹತ್ ಚಲನೆಯನ್ನು ಅರ್ಥಮಾಡಿಕೊಳ್ಳಲಾರದಂತೆ ಮಾಡುತ್ತದೆ. “ಸುದೀರ್ಘ ಹತ್ತೊಂಬತ್ತನೇ ಶತಮಾನದ” ಉತ್ತರಾರ್ಧದಲ್ಲಿ (1850 ಮತ್ತು 1914ರ ನಡುವೆ) ಚೀನಾದಿಂದ ಮತ್ತು ಭಾರತದಿಂದ ಕೂಲಿ ಮತ್ತು ಕರಾರು ಕೂಲಿ ಕಾರ್ಮಿಕರ ಬೃಹತ್ ಸ್ಥಳಾಂತರವನ್ನು ಇದು ಅಗ್ರಾಹ್ಯಗೊಳಿಸುತ್ತದೆ. ಭಾರತ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್‌ನಿಂದ ಎರಡನೇ ಮಹಾಯುದ್ಧದ ನಂತರದ ಅವಧಿಯಲ್ಲಿ ಬ್ರಿಟನ್‌ಗೆ ನಡೆದ, ಅಲ್ಜೀರಿಯಾ ಮತ್ತು ಫ್ರಾನ್ಸಿನ-ಹಿಂದಿನ ಇತರ ವಸಾಹತುಗಳಿಂದ ಫ್ರಾನ್ಸ್‌ಗೆ ಮತ್ತು ಟರ್ಕಿಯಿಂದ ಜರ್ಮನಿಗೆ, ಮುಂತಾದ ನಡೆದ ಕಾರ್ಮಿಕರ ಬೃಹತ್ ಚಲನೆಯನ್ನು ಈ ಸಿದ್ಧಾಂತದಿಂದ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಐತಿಹಾಸಿಕವಾಗಿ ಬಂಡವಾಳವು ತನ್ನ ಶ್ರಮ-ಶಕ್ತಿಯ ಅಗತ್ಯವನ್ನು ಪೂರೈಸಿಕೊಳ್ಳಲು ಕೋಟ್ಯಂತರ ಜನರನ್ನು ಪ್ರಪಂಚದಾದ್ಯಂತ ಒಂದೆಡೆಯಿಂದ ಮತ್ತೊಂದೆಡೆಗೆ ಚಲಿಸುವಂತೆ ಪ್ರೇರೇಪಿಸಿದೆ. ತನ್ನ ಗಡಿಯೊಳಗೆ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಬಂಡವಾಳವು ತನ್ನ ಸಂಚಯವನ್ನು ಕೆಳಮುಖವಾಗಿ ಸರಿಹೊಂದಿಸುತ್ತಾ ಮನೆಯಲ್ಲಿ ಸುಮ್ಮನೆ ಕೂರುವುದಿಲ್ಲ. ಆದರೂ “ಮುಖ್ಯವಾಹಿನಿ” ಬೆಳವಣಿಗೆ ಸಿದ್ಧಾಂತವು ನಮಗೆ ಹೇಳುವುದು ಈ ಸಿದ್ಧಾಂತವನ್ನೇ.
ಹಾಸ್ಯಾಸ್ಪದ “ಮುಖ್ಯಧಾರೆ”
ಸದಾ ಕಾಲವೂ ಬಂಡವಾಳಶಾಹಿ ವ್ಯವಸ್ಥೆಯು ಕಾರ್ಮಿಕರ ಮೀಸಲು ಪಡೆಯನ್ನು ಸಜ್ಜಾಗಿಟ್ಟಿರುತ್ತದೆ ಎಂಬ ಅಂಶವನ್ನು ಬದಿಗಿಟ್ಟು ನೋಡಿದರೂ ಸಹ, ತನಗೆ ಶ್ರಮಶಕ್ತಿಯ ಅಗತ್ಯವಿದ್ದಾಗಲೆಲ್ಲಾ ಬಂಡವಾಳಶಾಹಿಯು ವಿಶ್ವದ ಎಲ್ಲೆಡೆಯಿಂದಲೂ ಕಾರ್ಮಿಕರನ್ನು ಸೆಳೆದುಕೊಂಡಿದೆ ಎಂಬುದನ್ನು ಎಲ್ಲರೂ ಬಲ್ಲರು. ಈ ಹಿನ್ನೆಲೆಯಲ್ಲಿ, ಆಂತರಿಕ ಶ್ರಮಶಕ್ತಿಯು ಸಾಕಷ್ಟು ವೇಗವಾಗಿ ಬೆಳೆಯದ ಕಾರಣದಿಂದಾಗಿ ಅದರ ಬೆಳವಣಿಗೆ ಕುಂಠಿತಗೊಂಡಿದೆ ಎನ್ನುವ ಬಂಡವಾಳಶಾಹಿಯ ಅಭಿಪ್ರಾಯವು ಹಾಸ್ಯಾಸ್ಪದವಾಗಿ ತೋರುತ್ತದೆ. ಆದರೂ, “ಮುಖ್ಯವಾಹಿನಿ” ಅರ್ಥಶಾಸ್ತ್ರವು ಇದೇ ಶಂಖವನ್ನೇ ಊದುತ್ತದೆ.
ಹೀಗೆ, ಅರ್ಥಶಾಸ್ತ್ರದ ಈ ಅತ್ಯಂತ ಪ್ರಭಾವಶಾಲಿ “ಮುಖ್ಯಧಾರೆ” ಬೆಳವಣಿಗೆ ಸಿದ್ಧಾಂತಕ್ಕೂ ಮತ್ತು ವಾಸ್ತವಾಂಶಗಳು ಹಾಗೂ ಬಂಡವಾಳಶಾಹಿ ಉತ್ಪಾದನಾ ವಿಧಾನದ ಇತಿಹಾಸಕ್ಕೂ ವ್ಯತ್ಯಾಸವಿರುವುದು ಅತ್ಯಂತ ಸ್ಪಷ್ಟವಾಗಿ ಕಾಣುತ್ತದೆ. ಈ ವ್ಯತ್ಯಾಸವು ಉದ್ಧಟತನದಿಂದ ಕೂಡಿದೆ ಮತ್ತು ಅದು ನಿರ್ಲಜ್ಜವೂ ಹೌದು. ಹೀಗಾಗುವುದು ಹೇಗೆ ಸಾಧ್ಯ? ನಿಸ್ಸಂಶಯವಾಗಿ, ಈ ಸಿದ್ಧಾಂತವು “ಅಂಗೀಕಾರಾರ್ಹವಾಗಿದೆ. ಏಕೆಂದರೆ, ಅದು ಬಂಡವಾಳಶಾಹಿಯ ಬಗ್ಗೆ ಒಂದು ಅಂದ-ಚಂದಗೊಳಿಸಿದ ಚಿತ್ರಣವನ್ನು ಕೊಡುತ್ತದೆ. ಈ ಚಿತ್ರಣದಲ್ಲಿ ಸಾಮ್ರಾಜ್ಯಶಾಹಿ, ಯುದ್ಧ, ವಿಜಯ, ವಶಪಡಿಸಿಕೊಳ್ಳುವಿಕೆ ಅಥವಾ ಹಿಂಸಾಚಾರಗಳಿಗೆ ಅವಕಾಶವಿಲ್ಲ. ಅಂದ ಚಂದಗೊಳಿಸಿದ ಈ ಚಿತ್ರಣವು ಈ ಒಂದು ಸಿದ್ಧಾಂತಕ್ಕೆ ಮಾತ್ರವಲ್ಲ, ಬಂಡವಾಳಶಾಹಿಯ ಕಾರ್ಯಾಚರಣೆಯನ್ನು ನಿರೂಪಿಸುವ ಅರ್ಥಶಾಸ್ತ್ರದ ಎಲ್ಲ “ಮುಖ್ಯವಾಹಿನಿ” ಸಿದ್ಧಾಂತಗಳಿಗೂ ಅನ್ವಯಿಸುತ್ತದೆ. ಹಾಗಾಗಿ, “ಅಂಗೀಕಾರಾರ್ಹತೆಯ ಕಾರಣದಿಂದ ಈ ಸಿದ್ಧಾಂತಗಳು ಚಾಲ್ತಿಯಲ್ಲಿವೆ; ಅವುಗಳ ವಿವರಣೆಗಳು ಹೊಂದಿರುವ ಬಲದಿಂದಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಚಾಕಚಕ್ಯತೆಗೆ ಕುರುಡಾಗಬಾರದು
ಈ ಸಿದ್ಧಾಂತಗಳನ್ನು ನಿರೂಪಿಸುವಲ್ಲಿ ಕಂಡುಬರುವ ಅಸಾಧಾರಣ ಚಾಕಚಕ್ಯತೆ ಮತ್ತು ಅವುಗಳ ತಳದಲ್ಲಿರುವ ಉತ್ಕೃಷ್ಟ ಪ್ರತಿಭೆಯು ನಮ್ಮನ್ನು ವಾಸ್ತವಕ್ಕೆ ಕುರುಡಾಗಿಸಬಾರದು. ಈ ಎಲ್ಲಾ ಚಾಕಚಕ್ಯತೆ, ಪ್ರತಿಭೆ ಮತ್ತು ಬೆರಗುಗೊಳಿಸುವ ತಾಂತ್ರಿಕ ಸಾಮರ್ಥ್ಯದ ಹೊರತಾಗಿಯೂ, ಈ ಸಿದ್ಧಾಂತಗಳ ವಿವರಣಾತ್ಮಕ ಶಕ್ತಿಯು ಸಂಪೂರ್ಣವಾಗಿ ಟೊಳ್ಳುತನದಿಂದ ಕೂಡಿದೆ.
ಇಷ್ಟಾಗಿಯೂ, ಇಂತಹ ಸಿದ್ಧಾಂತಗಳು ಚಾಲ್ತಿಯಲ್ಲಿರುವುದಾದರೂ ಹೇಗೆ? ಈ ಸಿದ್ಧಾಂತಗಳ ಕರ್ತೃಗಳು ಪ್ರಜ್ಞಾಪೂರ್ವಕ ಅಪ್ರಾಮಾಣಿಕರೂ ಅಲ್ಲ ಅಥವಾ ಅವರೇ ಹೆಣೆದ ಕಥನಗಳು ಸಮರ್ಥಿಸಿಕೊಳ್ಳುವ ಪಾರ ವಹಿಸುತ್ತಿರುವ ಬಗ್ಗೆ ಅವರಿಗೇ ಅರಿವಿಲ್ಲ. ಹಾಗಾಗಿ, “ವಸಾಹತೀಕರಣಗೊಂಡ ಮಾನಸಿಕತೆ” (colonised minds) ಎಂಬ ಪದವು ಕೇವಲ ಮೂರನೇ ಜಗತ್ತಿನ ಮನಸ್ಸುಗಳಿಗೆ ಮಾತ್ರ ಅನ್ವಯಿಸುವುದಿಲ್ಲ; ಮೆಟ್ರಾಪಲಿಸ್ (ಕೈಗಾರೀಕೃತ)ದೇಶಗಳಿಗೂ ಅನ್ವಯಿಸುತ್ತದೆ. ಒಂದು ವೇಳೆ ಯಾರಾದರೂ ಸತ್ಯವನ್ನು ಅನ್ವೇಷಿಸುವ ಧೈರ್ಯ ಮಾಡಿದರೆ ಅಥವಾ ಸಹಿಸಿಕೊಳ್ಳಬಹುದಾದ ಮಿತಿಯನ್ನು ಮೀರಿದರೆ, ಅಕೆಡೆಮಿಕ್ ನೇಮಕಾತಿಗಳು, ಬಡ್ತಿಗಳು, ಪ್ರೌಢ ಪ್ರಬಂಧಗಳ ಪ್ರಕಟಣೆ, ಸಾಧನೆಯ ಪಾರಿತೋಷಕಗಳು ಮತ್ತು ಕೀರ್ತಿ-ಖ್ಯಾತಿಗಳಿಂದ ಹೊರಗಿಡುವ ಬೆದರಿಕೆಯನ್ನು ಈ ಸೊಬಗರ ಮುಂದೆ ಹಿಡಿದರೆ, ಅವರು ತೆಪ್ಪಗೆ ದಾರಿಗೆ ಬರುತ್ತಾರೆ. ಇವೆಲ್ಲ ಪರಿಣಾಮಗಳನ್ನೂ ಹಳಬರಿಂದ ಕೇಳಿಸಿಕೊಂಡು ಭಯಭೀತರಾದ ಹೊಸಬರಂತೂ ತಾವು ಈ ಲಕ್ಷ್ಮಣ “ರೇಖೆ”ಯನ್ನು ಉಲ್ಲಂಘಿಸುವುದಿಲ್ಲ ಮಾತ್ರವಲ್ಲ, ಇತರರನ್ನು ನಿಬಂಧಿಸುವ ಅಭ್ಯಾಸವನ್ನೂ ಬೆಳೆಸಿಕೊಳ್ಳುತ್ತಾರೆ. ಈ ಎಲ್ಲದರಲ್ಲಿ ಯಾವ ದುರುದ್ದೇಶವೂ ಇಲ್ಲ. ಹಾಗಾಗಿ, ಅದು ಒಂದು “ಸಂಪ್ರದಾಯ”ವೇ ಆಗುತ್ತದೆ.
ಮಾಸಿಕ ಮರುವಸಾಹತೀಕರಣ ಏಕೆ?
ಇವೆಲ್ಲವೂ ಮೆಟ್ರಾಪಲಿಸ್ ದೇಶಗಳ ಮಟ್ಟಿಗೆ ಒಪ್ಪಬಹುದಾದರೂ, ಮೂರನೇ ಜಗತ್ತಿನ ಅಕೆಡಿಮಿಕ್‌ಗಳೂ ಸಹ ಇದೇ “ದಾರಿ”ಯನ್ನು ತುಳಿಯುತ್ತಾರಲ್ಲ ಅದನ್ನು ವಿವರಿಸುವುದು ಹೇಗೆ? ಹೇಳಿ ಕೇಳಿ ವಸಾಹತುಶಾಹಿ-ವಿರೋಧಿ ಹೋರಾಟದ ಸಮಯದಲ್ಲಿ, ಎಷ್ಟೇ ಅರೆಮನಸ್ಸಿನಿಂದಾಗಲಿ ಮತ್ತು ಎಷ್ಟೇ ಹಿಂಜರಿಕೆ ಇದ್ದರೂ ಸಹ ಜನರು “ವಸಾಹತುಶಾಹಿ ಮಾನಸಿಕತೆ”ಯಿಂದ ಹೊರಬಂದರು. ಮಾನಸಿಕತೆಯಲ್ಲಿ ಈ ಬದಲಾವಣೆ ಆಗದಿದ್ದರೆ ವಸಾಹತುಶಾಹಿ ವಿರೋಧಿ ಹೋರಾಟವೇ ಜರುಗುತ್ತಿರಲಿಲ್ಲ. ಹಾಗಾದರೆ, ಮೂರನೆಯ ಜಗತ್ತಿನ ಮಾನಸಿಕ ಮರು-ವಸಾಹತೀಕರಣವನ್ನು ವಿವರಿಸುವುದಾದರೂ ಹೇಗೆ?
ಒಂದು ಪ್ರಮುಖ ಕಾರಣವನ್ನು ಹೀಗೆ ಹೇಳಬಹುದು: ಮಹಾ ಯುದ್ಧ-ಪೂರ್ವ ದಿನಗಳಲ್ಲಿ ಮೆಟ್ರೋಪಾಲಿಟನ್ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ವಿರಳವಾಗಿದ್ದ ಬೋಧಕ ಹುದ್ದೆಗಳಿಗೆ ಮೂರನೇ ಜಗತ್ತಿನ ಶಿಕ್ಷಣ ತಜ್ಞರನ್ನು ದೊಡ್ಡ ಪ್ರಮಾಣದಲ್ಲಿ ನೇಮಿಸಿಕೊಳ್ಳಲಾಗುತ್ತಿತ್ತು. ಇಂತಹ ನೇಮಕಾತಿಗಳು ಅಥವಾ ನೇಮಕಾತಿ ಸಾಧ್ಯತೆಯ ಪ್ರಲೋಭನೆಗಳೇ ಮೂರನೇ ಜಗತ್ತಿನ ಅನೇಕ ಶಿಕ್ಷಣ-ತಜ್ಞರನ್ನು ಜೊಲ್ಲು ಸುರಿಸುವಂತೆ ಮಾಡಿದವು. ಅದರ ಜೊತೆಯಲ್ಲಿ, ನಿರ್ವಸಾಹತೀಕರಣದ (decolonisation) ನಂತರ ಈ ಮಾಜಿ ವಸಾಹತುಶಾಹಿ ದೇಶಗಳಲ್ಲಿ ಉನ್ನತ ಶಿಕ್ಷಣ ಅಧ್ಯಾಪಕ-ತರಪೇತಿ ಪಡೆದವರ ಸಂಖ್ಯೆಯ ಹೆಚ್ಚಳವೂ ಒಂದು ಅಂಶವಾಗಿ ಪ್ರಭಾವ ಬೀರಿತು. ಅದೂ ಅಲ್ಲದೆ, ತಜ್ಞ-ಬೋಧಕರ ಪ್ರಾಬಲ್ಯ ಮುಂದುವರಿಯುತ್ತಿರುವ ಮೆಟ್ರೋಪಾಲಿಟನ್ ದೇಶಗಳ ಶೈಕ್ಷಣಿಕ ವಲಯದಲ್ಲಿ ಅಧ್ಯಾಪಕ “ವೃತ್ತಿ” ಗಿಟ್ಟಿಸಿಕೊಂಡು ಅವರಿಂದ ಮನ್ನಣೆ ಸಂಪಾದಿಸುವ ಸ್ವಾಭಾವಿಕ ಹಂಬಲವೂ ಸೇರಿಕೊಂಡು, ಈ ಮಾಜಿ ವಸಾಹತುಶಾಹಿ ದೇಶಗಳ “ತರಪೇತಿ” ಪಡೆದವರನ್ನು ಮೆಟ್ರೋಪಾಲಿಟನ್ ಸಿದ್ಧಾಂತಗಳಿಗೆ ಅಪ್ರಜ್ಞಾಪೂರ್ವಕವಾಗಿ ಮಾರುಹೋಗುವಂತೆ ಮಾಡಿತು.
ಈ ವಿದ್ಯಮಾನವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ರಾಜಕೀಯ ನಿರ್ವಸಾಹತೀಕರಣವು ವೃತ್ತಿಯೊಳಗಿನ ಅಧಿಕಾರ-ಸಂಬಂಧಗಳನ್ನು ಬದಲಾಯಿಸಲಿಲ್ಲ. ಶೈಕ್ಷಣಿಕ ವಲಯದಲ್ಲಿ ಅದೇ ಮೆಟ್ರೋಪಾಲಿಟನ್ ಶಿಕ್ಷಣ-ತಜ್ಞ ಪ್ರಾಬಲ್ಯವೇ ಮುಂದುವರೆಯಿತು. ಅಧಿಕಾರ ಸಂರಚನೆಯ ಈ ಪರಿಸರದಲ್ಲಿ ತಮ್ಮ ವೃತ್ತಿ ಜೀವನದ ಮುನ್ನಡೆಗಾಗಿ ಪ್ರಚಲಿತ ಮೆಟ್ರೋಪಾಲಿಟನ್ ಸಿದ್ಧಾಂತಗಳನ್ನು ಹಿಂದುಮುಂದು ನೋಡದೆ ಒಪ್ಪಿಕೊಳ್ಳುವಂತೆ ಮಾಡಿತು. ಪರಿಣಾಮವಾಗಿ, ವಸಾಹತುಶಾಹಿ ವಿರೋಧಿ ಹೋರಾಟದ ಸಮಯದಲ್ಲಿ ಉಂಟಾಗಿದ್ದ ಹಿಂಜರಿಕೆಯ ವಸಾಹತಿ-ವಿರೋಧಿ ಮನೋಭಾವವು ಉಂಟಾಗಿದ್ದರೂ ಹಲವರಲ್ಲಿ ಅದು ಹಿಂಜರಿಕೆಯಿಂದ ಕೂಡಿತ್ತು. ನಂತರ ಅದೂ ತಿರುಗುಮುರುಗಾಯ್ತು.
ವಸಾಹತೀಕೃತ ಮಾನಸಿಕತೆಯ ಸಂಸ್ಥೀಕರಣ
ನವಉದಾರೀಕರಣದ ಇಂದಿನ ಕಾಲಮಾನದಲ್ಲಿ, ವಸಾಹತುಶಾಹಿ ಮಾನಸಿಕತೆಯ ಸಮಸ್ಯೆಯ ಇರವು ಬರವುಗಳೇ ಗೊತ್ತಾಗುತ್ತಿಲ್ಲ. ತದ್ವಿರುದ್ಧವಾಗಿ, ಅಕೆಡೆಮಿಕ್ ವೃತ್ತಿಯು ಸಂಪೂರ್ಣವಾಗಿ ಏಕರೂಪದ ಚಟುವಟಿಕೆಯಾಗಿ ಬದಲಾಗುತ್ತಿದೆ ಎಂಬುದನ್ನು ಗಮನಿಸಬಹುದು: ಅರ್ಥಶಾಸ್ತ್ರದಂತಹ ಒಂದು ವಿಷಯದಲ್ಲಿ ಮೆಟ್ರಾಪಲಿಸ್‌ನಲ್ಲಿ ಚಾಲ್ತಿಯಲ್ಲಿರುವುದಕ್ಕಿಂತ ಭಿನ್ನವಾದ ಒಂದು ಅಭಿಪ್ರಾಯವನ್ನು ಮೂರನೇ ಜಗತ್ತಿನ ದೇಶವೊಂದು ತಳೆಯಬಹುದು ಎಂಬ ಭಾವನೆಯೇ ಮೂರನೇ ಜಗತ್ತಿನದೇ ಆದ ಶೈಕ್ಷಣಿಕ ಸಂಸ್ಥೆಗೂ ತೀರಾ ವಿಲಕ್ಷಣವಾಗಿಯೇ ತೋರುತ್ತದೆ. ಒಂದು ಉದಾಹರಣೆಯಾಗಿ ಹೇಳುವುದಾದರೆ, ವಸಾಹತುಶಾಹಿ ಶೋಷಣೆಯ ಕಾರ್ಯವಿಧಾನವನ್ನು ಕರಾರುವಾಕ್ಕಾಗಿ ಪರಿಶೀಲಿಸಿದ ದಾದಾಭಾಯಿ ನವರೋಜಿಯವರ ಅಥವಾ ರೋಮೇಶ್ ಚಂದರ್ ದತ್ ಅವರ ಅಭಿಪ್ರಾಯಗಳನ್ನು ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯಗಳಲ್ಲಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ, ಅವುಗಳು ಅಲ್ಲಿ ಕೇಳಬರುವುದೂ ಇಲ್ಲ. ಏಕೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ, ಒಂದು ಅಧ್ಯಯನ ಶಿಸ್ತನ್ನು ನಾವು ಏಕರೂಪದೆಂದು ಕಲ್ಪಿಸಿಕೊಂಡರೆ, ಆಗ ನಾವೂ ಸಹ ಮೆಟ್ರಾಪಲಿಸ್‌ನ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಆದರೆ, ಮೆಟ್ರಾಪಲಿಸ್ ಹೇಳಿದ್ದೇ ವೇದವಾಕ್ಯ. ಹಾಗಾಗಿ, ವಸಾಹತುಶಾಹಿ ಮಾನಸಿಕತೆಯ ಸ್ಥಿತಿಗೆ ಮರಳುತ್ತೇವೆ. ಇದೀಗ ರಾಷ್ಟ್ರೀಯ ಶಿಕ್ಷಣ ಆಯೋಗವು ಭಾರತದ ಮತ್ತು ವಿದೇಶಿ ವಿಶ್ವವಿದ್ಯಾಲಯಗಳ ಕೋರ್ಸ್‌ಗಳ ಮತ್ತು ಪಠ್ಯಕ್ರಮಗಳ ನಡುವೆ ಸಮನ್ವಯವಿರಬೇಕು ಎಂದು ಹೇಳುವ ಮೂಲಕ ವಸಾಹತೀಕೃತ ಮಾನಸಿಕತೆಯನ್ನು ಸಂಪೂರ್ಣವಾಗಿ ಸಂಸ್ಥೀಕರಿಸಿದೆ.
ವಸಾಹತುಶಾಹಿ ಮಾನಸಿಕತೆಯನ್ನು ಬದಲಿಸಿಕೊಳ್ಳಬೇಕು ಎಂದರೆ, ಅದರ ಸ್ಥಾನದಲ್ಲಿ ದುರಭಿಮಾನದ ಹಿಂದುತ್ವ ಮಾನಸಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂಬುದು ಅದರ ಅರ್ಥವಲ್ಲ. ಇವೆರಡರ ಪ್ರಪಂಚಗಳೇ ಬೇರೆ ಬೇರೆ. ಹಿಂದುತ್ವವು ವಸಾಹತುಶಾಹಿ ಮಾನಸಿಕತೆಯನ್ನು ಬಲಪಡಿಸುತ್ತದೆ. ಮೆಟ್ರೋಪಾಲಿಟನ್ ಸಮಾಜ ವಿಜ್ಞಾನಗಳ ಒಂದು ಹೆಗ್ಗುರುತಾದ ಸತ್ಯವನ್ನು ಮಬ್ಬುಗವಿಸುವ ಬಗ್ಗೆ ಹಿಂದುತ್ವಕ್ಕೆ ಕಾಳಜಿಯೇ ಇಲ್ಲ. ಹಿಂದುತ್ವದ ಏಕೈಕ ಕಾಳಜಿ ಎಂದರೆ, ಈ ಮೆಟ್ರೋಪಾಲಿಟನ್ ಸಮಾಜ ವಿಜ್ಞಾನಗಳನ್ನು ರೂಪಿಸಿದ ಸಿದ್ಧಾಂತಗಳು ಪ್ರಾಚೀನ ಭಾರತದಲ್ಲೇ ಹುಟ್ಟಿದವು ಎನ್ನುವಂಥಹ ಏಂಥದ್ದೊ ಒಂದು ಪ್ರಮಾಣ ಪತ್ರವನ್ನು ಮೆಟ್ರಾಪಲಿಸ್‌ನಿಂದ ಪಡೆಯುವುದೇ ಆಗಿದೆ! ವಾಸ್ತವವಾಗಿ, ದೇಶದ ಹಿಂದಿನ ಸರ್ಕಾರಗಳು ಸ್ಥಾಪಿಸಿದ ಉನ್ನತ ಶಿಕ್ಷಣದ ಉಪಯುಕ್ತ ಸಂಸ್ಥೆಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸುವ ಅದರ ಅಪ್ರೌಢತೆ ಸ್ಪಷ್ಟವಾಗಿ ವ್ಯಕ್ತಗೊಂಡಿದೆ. ಈ ತೆರನಾಗಿ, ತನಗೆ ಡೊಗ್ಗು ಸಲಾಮು ಹೊಡೆಯದ ಯಾವುದೇ ಸೃಜನಶೀಲತೆಯನ್ನು ನಿರರ್ಥಕಗೊಳಿಸುವ ಹಿಂದುತ್ವವು, ವಾಸ್ತವವಾಗಿ, ಮೆಟ್ರೋಪಾಲಿಟನ್ ವಿಚಾರಗಳ ಆಮದನ್ನು, ಯಾವ ಟೀಕೆ ಟಿಪ್ಪಣಿಗಳೂ ಇಲ್ಲದೆ, ಪ್ರೋತ್ಸಾಹಿಸುತ್ತದೆ ಮತ್ತು ಆ ಮೂಲಕ ಮೆಟ್ರೋಪಾಲಿಟನ್ ಆಧಿಪತ್ಯವನ್ನು ಒಪ್ಪಿಕೊಳ್ಳುತ್ತದೆ.
ಆದ್ದರಿಂದ, ವಸಾಹತುಶಾಹಿ ಮಾನಸಿಕತೆಯನ್ನು ಬದಲಿಸಿಕೊಳ್ಳಬೇಕು ಎಂದಾದರೆ, ಶಿಕ್ಷಣ-ವಿಷಯವಾಗಿ (ಒಂದು ಶಿಸ್ತಾಗಿ) ಸಮಾಜ ವಿಜ್ಞಾನಗಳನ್ನು ತಿರಸ್ಕರಿಸುವ ಅಗತ್ಯವಿಲ್ಲ. ಬದಲಿಗೆ, ಸಾಮ್ರಾಜ್ಯಶಾಹಿಯು ಮಬ್ಬುಗೊಳಿಸಿದ ಕಳಂಕಿತ ಮೆಟ್ರೋಪಾಲಿಟನ್ “ಸಮಾಜ ವಿಜ್ಞಾನಗಳಿಗೆ” ವಿರುದ್ಧವಾಗಿ, ಒಂದು ಶೈಕ್ಷಣಿಕ ಶಿಸ್ತಾಗಿ ಯಾವ ಅಂಜು-ಅಳುಕುಗಳೂ ಇಲ್ಲದೆ ಸಮಾಜ ವಿಜ್ಞಾನಗಳನ್ನು ಬೋಧಿಸುವ ಅಗತ್ಯವಿದೆ. ಒಂದು ಆರಂಭಿಕ ಅವಧಿಯ ನಂತರ, ಬೂರ್ಜ್ವಾವರ್ಗಕ್ಕೆ ಅಗತ್ಯವಾಗುವುದು ಆರ್ಥಿಕ ವಿಜ್ಞಾನವಲ್ಲ; ಅದರ ಅಗತ್ಯವೆಂದರೆ, ಆರ್ಥಿಕ ವಿಜ್ಞಾನ ಪ್ರಪಂಚದ ಒಂದು ಸಿದ್ಧಾಂತ. ತದನಂತರ, ಆ ವೈಜ್ಞಾನಿಕ ಚಟುವಟಿಕೆಗಳನ್ನು ಶ್ರಮಜೀವಿ ವರ್ಗ ದೃಷ್ಟಿಕೋನದಿಂದ ಮಾತ್ರ ನಡೆಸಬಹುದು ಎಂಬುದಾಗಿ ಕಾರ್ಲ್ ಮಾರ್ಕ್ಸ್ ನಂಬಿದ್ದರು. ಸಮಾಜ ವಿಜ್ಞಾನಗಳ ಬಗ್ಗೆ ಕೈಗಾರೀಕೃತ ಕೇಂದ್ರಗಳ ಮನೋಭಾವದ ಬಗ್ಗೆಯೂ ಇದೇ ಮಾತನ್ನೇ ಹೇಳಬಹುದು. ವಸಾಹತೀಕರಣಕ್ಕೆ ಗುರಿಯಾದವರ ದೃಷ್ಟಿಕೋನದಿಂದ ಮಾತ್ರವೇ, ಯಾವುದನ್ನೋ ಸಮರ್ಥಿಸಿಕೊಳ್ಳುವ ಬದಲು ನೈಜ ಸಮಾಜ ವಿಜ್ಞಾನಗಳನ್ನು ಅಭಿವೃದ್ಧಿಪಡಿಸಬಹುದು.
ಅನು: ಕೆ.ಎಂ. ನಾಗರಾಜ್