-ನಾ ದಿವಾಕರ
( ಕಾಂಗ್ರೆಸ್ ಸರ್ಕಾರದ ಆಯ್ಕೆಗಳೂ ಜನಸಾಮಾನ್ಯರ ಆದ್ಯತೆಗಳೂ- ಆಡಳಿತ ಜವಾಬ್ದಾರಿಯೂ ಸಾರ್ವಜನಿಕ ಹಿತಾಸಕ್ತಿಯೂ- ಸಾಂಸ್ಥಿಕ ಸವಾಲುಗಳೂ ಸಾಂಸ್ಕೃತಿಕ ಸಮನ್ವಯತೆಯೂ- ಲೇಖನಗಳ ಮುಂದುವರೆದ ಭಾಗ)
2023ರ ನಿರ್ಣಾಯಕ ಚುನಾವಣೆಗಳಲ್ಲಿ ಕರ್ನಾಟಕದ ಮತದಾರರು ಅಭೂತಪೂರ್ವ ಎನ್ನಬಹುದಾದ ತೀರ್ಪು ನೀಡುವ ಮೂಲಕ, ರಾಷ್ಟ್ರ ರಾಜಕಾರಣದಲ್ಲಿ ಶಿಥಿಲವಾಗುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸುವ ರೀತಿಯಲ್ಲಿ ಬಹುಮತವನ್ನು ಕಲ್ಪಿಸಿದ್ದಾರೆ. ಈ ಚುನಾವಣೆಯ ಫಲಿತಾಂಶಗಳಲ್ಲಿ ಪ್ರತಿಫಲಿತವಾಗಿರುವ ಸುಡು ವಾಸ್ತವಗಳೆಂದರೆ ಕರ್ನಾಟಕದಲ್ಲಿ ತಳಮಟ್ಟದ ಜನಸಾಮಾನ್ಯರ ಬದುಕು ದುಸ್ತರವಾಗಿದೆ, ಪ್ರಾದೇಶಿಕ ಅಸಮಾನತೆ ಪರಾಕಾಷ್ಠೆ ತಲುಪಿದೆ, ದುಡಿಯುವ ವರ್ಗಗಳು ತಮ್ಮ ಜೀವನ ಹಾಗೂ ಜೀವನೋಪಾಯಕ್ಕಾಗಿ ಪರದಾಡುವ ಸ್ಥಿತಿಯನ್ನು ಎದುರಿಸುತ್ತಿದ್ದಾರೆ, ತಮ್ಮ ನಿತ್ಯ ಜೀವನ ನಿರ್ವಹಣೆಗೆ ಅಗತ್ಯವಾದ ಆದಾಯದ ಕೊರತೆಯನ್ನು ಎದುರಿಸುತಿದ್ದಾರೆ. ಈ ಬಡಜನತೆಯ ಆಕ್ರೋಶ, ಹತಾಶೆ ಮತ್ತು ಮಡುಗಟ್ಟಿದ ನಿರಾಸೆ ಬಿಜೆಪಿ ಸರ್ಕಾರದ ಸೋಲಿಗೆ ಪ್ರಮುಖ ಕಾರಣವಾಗಿದೆ. ಹಾಗಾಗಿಯೇ ಬಿಜೆಪಿಯ ಭಜರಂಗಬಲಿಯಾಗಲೀ, ಪ್ರಧಾನಿ ಮೋದಿಯವರ ಪ್ರಭಾವಳಿಯಾಗಲೀ ಅಥವಾ ಮತೀಯವಾದದ ಪ್ರಚೋದನೆಯಾಗಲೀ ಫಲಕಾರಿಯಾಗಿಲ್ಲ.
ಚುನಾವಣೆಗಳಲ್ಲಿ ಮತದಾರರ ಆಯ್ಕೆಗೂ ಮತದಾನ ವ್ಯವಸ್ಥೆಯ ಆಚೆಗಿರುವ ಜನಸಮುದಾಯಗಳ ನಿತ್ಯ ಬದುಕಿನ ಸಮಸ್ಯೆಗಳಿಗೂ ನೇರವಾದ ಸೂಕ್ಷ್ಮ ಸಂಬಂಧಗಳಿರುವಂತೆಯೇ, ಮುಕ್ತ ರಾಜಕೀಯ ಸಂಕಥನದಲ್ಲಿ ವ್ಯಕ್ತವಾಗದ ಅನೇಕ ಸಂಗತಿಗಳು ಸಾರ್ವಜನಿಕ ಬದುಕಿನಲ್ಲಿ ಪ್ರಕಟವಾಗುತ್ತಿರುತ್ತವೆ. ಅಂತಹ ಸಂಗತಿಗಳಲ್ಲಿ ಬಹುಮುಖ್ಯವಾದುದು ತಳಮಟ್ಟದ ಜನತೆ ಎದುರಿಸುವ ಕೊರತೆಗಳು. ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯ, ಮೂಲ ಸೌಕರ್ಯಗಳು, ನಿತ್ಯ ಬದುಕಿಗೆ ಅವಶ್ಯವಾದ ಕನಿಷ್ಠ ಆದಾಯ ಮತ್ತು ಜೀವನೋಪಾಯದ ಮಾರ್ಗಗಳು. ಈ ಜಟಿಲ ಸಿಕ್ಕುಗಳ ನಡುವೆಯೇ ಜನಸಾಮಾನ್ಯರು ಆಡಳಿತ ವ್ಯವಸ್ಥೆಯ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಹಿಸಿಕೊಳ್ಳುತ್ತಲೇ ಬದುಕು ಸವೆಸುವುದು ಭಾರತದಲ್ಲಂತೂ ಅನಿವಾರ್ಯವಾಗಿ ಬಿಟ್ಟಿದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಬಡ ಜನತೆಗೆ ಗ್ಯಾರಂಟಿಗಳನ್ನು ನೀಡುವುದರೊಂದಿಗೇ ತಳಮಟ್ಟದ ಈ ಸಮಸ್ಯೆಗಳನ್ನು ನಿವಾರಿಸಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆಯನ್ನೂ ನೀಡಿದೆ. ಗ್ಯಾರಂಟಿಗಳು ಅಥವಾ ಉಚಿತಗಳು ಬಡತನವನ್ನು ನಿವಾರಿಸುವುದಿಲ್ಲ, ಬಡತನದ ನಿರ್ವಹಣೆಗೆ ಪೂರಕವಾಗಿರುತ್ತವೆಯಷ್ಟೆ.
ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆ
ಹಿಂದಿನ ಸರ್ಕಾರ ಒದಗಿಸಿದ ಅಂಕಿಅಂಶಗಳ ಪ್ರಕಾರವೇ ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ 2,08,168 ರಿಂದ 1,99,057ಕ್ಕೆ ಕುಸಿದಿರುವುದು ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಬಹುದಾದ ವ್ಯತ್ಯಯಗಳ ಸೂಚನೆಯಾಗಿದೆ. 13,800 ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 25ಕ್ಕಿಂತಲೂ ಕಡಿಮೆ ಇದೆ. 1800 ಶಾಲೆಗಳಲ್ಲಿ ಹತ್ತಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಹೆಚ್ಚಾಗಿದೆ ಎಂಬ ಆಶಾದಾಯಕ ವರದಿಯ ನಡುವೆಯೇ ಹೊಸ ಸರ್ಕಾರ ಗಮನಿಸಬೇಕಿರುವುದು ಈ ಶಾಲೆಗಳಲ್ಲಿ ಲಭ್ಯವಿರುವ ಮೂಲ ಸೌಕರ್ಯಗಳ ಬಗ್ಗೆ. ಒಂದು ವರದಿಯ ಪ್ರಕಾರ ರಾಜ್ಯದ 1001 ಶಾಲೆಗಳಲ್ಲಿ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಶೌಚಾಲಯಗಳಿಲ್ಲ, 75,919 ಹೆಣ್ಣುಮಕ್ಕಳ ಶಾಲೆಗಳ ಪೈಕಿ 1570 ಶಾಲೆಗಳಲ್ಲಿ ಬಳಕೆಗೆ ಯೋಗ್ಯವಾದ ಶೌಚಾಲಯವಿಲ್ಲ. 328 ಶಾಲೆಗಳು ಶೌಚಾಲಯ ರಹಿತವಾಗಿವೆ, 714 ಶಾಲೆಗಳು ವಿದ್ಯುಚ್ಚಕ್ತಿ ರಹಿತವಾಗಿವೆ, 220 ಶಾಲೆಗಳಲ್ಲಿ ಕುಡಿಯುವ ನೀರು ಲಭ್ಯವಿರುವುದಿಲ್ಲ, 8153 ಶಾಲೆಗಳಲ್ಲಿ ಕೈತೊಳೆಯುವ ಸೌಲಭ್ಯವಿಲ್ಲ. 22,616 ಶಾಲೆಗಳಲ್ಲಿ ವಿಕಲಚೇತನ ಮಕ್ಕಳಿಗೆ ಅವಶ್ಯವಾದ ಇಳಿಜಾರು ಹಾದಿ (Ramp) ಸೌಲಭ್ಯ ಒದಗಿಸಲಾಗಿಲ್ಲ. 12,442 ಶಾಲೆಗಳಲ್ಲಿ ಮಕ್ಕಳಿಗೆ ಪ್ರಾಥಮಿಕ ವೈದ್ಯಕೀಯ ತಪಾಸಣೆ ನಡೆಸಲಾಗಿಲ್ಲ. ರಾಜ್ಯದ ಒಟ್ಟು ಶಾಲೆಗಳ ಪೈಕಿ ಶೇ 23ರಷ್ಟರಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ.
ಇಷ್ಟೆಲ್ಲಾ ಕೊರತೆಗಳ ನಡುವೆಯೂ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿದೆ ಎಂದರೆ ಹೆಚ್ಚಿನ ಸಂಖ್ಯೆಯ ಜನರಿಂದ ಖಾಸಗಿ ಶಿಕ್ಷಣದ ದುಬಾರಿ ವೆಚ್ಚವನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದೇ ಅರ್ಥ ಅಲ್ಲವೇ ? 2021-22ರ ಶೈಕ್ಷಣಿಕ ವರ್ಷದಲ್ಲೇ, ಕೋವಿದ್ ಸಾಂಕ್ರಾಮಿಕದ ನಂತರ, ಸರ್ಕಾರಿ ಶಾಲೆಗಳ ದಾಖಲಾತಿಯು 50 ಲಕ್ಷದಿಂದ 54 ಲಕ್ಷಕ್ಕೆ ಏರಿಕೆಯಾಗಿದೆ. ಪ್ರತಿಯೊಂದು ಸಣ್ಣ ಊರುಗಳಲ್ಲೂ, ಹೋಬಳಿ ಕೇಂದ್ರಗಳಲ್ಲೂ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗುತ್ತಿದ್ದರೂ, ತಳಮಟ್ಟದ ಸಮಾಜದಲ್ಲಿ ಜನತೆ ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿರುವುದನ್ನು ಗಮನಿಸಿದಾಗ, ಖಾಸಗಿ ಶಾಲೆಗಳ ದುಬಾರಿ ಶುಲ್ಕ ಮತ್ತು ಡೊನೇಷನ್ ಹಾವಳಿಯೇ ನಿರ್ಣಾಯಕವಾಗುತ್ತಿರುವುದನ್ನು ಗ್ರಾಮೀಣ ಪ್ರದೇಶಗಳಲ್ಲಿ ಗುರುತಿಸಬಹುದು. ಈ ಕೊರತೆಗಳ ನಡುವೆಯೇ ಶಾಲಾ ಹಂತದಲ್ಲಿ ಶಿಕ್ಷಕರ ಕೊರತೆಯೂ ಅಗಾಧವಾಗಿದೆ. ಕೆಂದ್ರ ಮಾನವ ಸಂಪನ್ಮೂಲ ಸಚಿವಾಲಯದ ವರದಿಯ ಅನುಸಾರ ರಾಜ್ಯದ 14937 ಮಾಧ್ಯಮಿಕ ಶಾಲೆಗಳಲ್ಲಿ ಶೇ 5.3ರಷ್ಟು , 4614 ಸರ್ಕಾರಿ ಸೆಕಂಡರಿ ಶಾಲೆಗಳಲ್ಲಿ ಶೇ 7.2ರಷ್ಟು ಶಾಲೆಗಳು ಮಾತ್ರ ಐದು ಮುಖ್ಯ ಪಠ್ಯಗಳನ್ನೂ ಬೋಧಿಸುವ ಶಿಕ್ಷಕರನ್ನು ಹೊಂದಿವೆ.
ಸರ್ಕಾರಿ ಶಾಲೆಗಳಲ್ಲಿ 16,039 ಶಿಕ್ಷಕರ, ಅನುದಾನಿತ ಶಾಲೆಗಳಲ್ಲಿ 14,944 ಶಿಕ್ಷಕರ ಕೊರತೆ ಇದೆ. ಇನ್ನೂ ಚಿಂತೆಗೀಡುಮಾಡುವ ವಿಚಾರ ಎಂದರೆ ಶೇ 65.6ರಷ್ಟು ಸೆಕಂಡರಿ ಶಾಲಾ ಶಿಕ್ಷಕರು ಎಲ್ಲ ವಿಷಯಗಳನ್ನೂ ಬೋಧಿಸುತ್ತಿದ್ದಾರೆ. ಇದು ಶೈಕ್ಞಣಿಕ ಗುಣಮಟ್ಟದ ಮೇಲೆ ಬೀರುವ ಪರಿಣಾಮವನ್ನು ಸುಲಭವಾಗಿ ಊಹಿಸಬಹುದು. ರಾಜ್ಯದ ಶಿಕ್ಷಣ ಇಲಾಖೆಯ ದತ್ತಾಂಶಗಳ ಅನುಸಾರವೇ 41 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ. ಪ್ರಾಥಮಿಕ ಶಾಲೆಗಳಲ್ಲಿ 25 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡುವುದಷ್ಟೇ ಅಲ್ಲದೆ, ಹಿಂದಿನ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದ ಶಾಲೆಗಳ ವಿಲೀನ ಮಾಡುವ ಯೋಜನೆಯನ್ನು ಸರ್ಕಾರ ಕೈಬಿಡಬೇಕಿದೆ. ಬದಲಾಗಿ ತಳಮಟ್ಟದ ಜನತೆಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಲೂಟಿಯಿಂದ ತಪ್ಪಿಸಿ, ಪ್ರತಿಯೊಂದು ಗ್ರಾಮದಲ್ಲೂ ಪ್ರಾಥಮಿಕ ಶಿಕ್ಷಣವನ್ನು ಒದಗಿಸಬೇಕಿದೆ. ಶಾಲೆಗಳಿಲ್ಲದ ಹಳ್ಳಿಗಳಿಂದ ಸಮೀಪದ ಸರ್ಕಾರಿ ಶಾಲೆಗೆ ಸೂಕ್ತ ಸಾರಿಗೆ ವ್ಯವಸ್ಥೆಯನ್ನೂ ಸಹ ಒದಗಿಸಬೇಕಿದೆ. ಆರೋಗ್ಯಕರ ಸಮಾಜದ ಬುನಾದಿಯಾಗಿರುವ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಗಳು ನಿರ್ಲಕ್ಷಿಸುತ್ತಿರುವುದು ನವ ಉದಾರವಾದಿ ಆರ್ಥಿಕ ನೀತಿಯ ಪರಿಣಾಮವೇ ಆಗಿದ್ದು, ಶಿಕ್ಷಣದ ವಾಣಿಜ್ಯೀಕರಣ ಪ್ರಕ್ರಿಯೆಯ ಒಂದು ಭಾಗವೂ ಆಗಿದೆ.
ಅನಾದರಕ್ಕೊಳಗಾದ ಅತಿಥಿಗಳು
ಈ ತಳಮಟ್ಟದಲ್ಲಿ ಜನಸಾಮಾನ್ಯರ ನಡುವೆ ಸ್ಫೋಟಿಸುವ ಅಸಮಾಧಾನಗಳನ್ನು, ಅತೃಪ್ತಿಯನ್ನು ಶಮನ ಮಾಡಲೆಂದೇ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಅನುಸರಿಸಲಾಗುವ ಜನಕಲ್ಯಾಣ ನೀತಿಗಳು ಒಂದು ಹಂತದವರೆಗೆ ಜನತೆಗೆ ಸಾಂತ್ವನ-ಸಹಕಾರ ನೀಡುತ್ತದೆ. ಅದರಿಂದಾಚೆಗೆ ದುಡಿಯುವ ವರ್ಗಗಳ ಬದುಕನ್ನು ಸುಸ್ಥಿರಗೊಳಿಸಲು ಸರ್ಕಾರಗಳು ಉನ್ನತ ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಬೇಕಿದೆ. ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ದುಡಿಯುತ್ತಿರುವ 32 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಕೇವಲ ಮಾಸಿಕ 8000/- ರೂ ವೇತನ ಪಡೆದು ಬದುಕು ಸವೆಸುತ್ತಿರುವುದು ಶತಮಾನದ ದುರಂತ ಅಲ್ಲವೇ ? ನರೇಗಾ ಯೋಜನೆಯಲ್ಲಿ ದಿನಗೂಲಿ ಪಡೆಯುವವರೂ ಇಡೀ ತಿಂಗಳು ದುಡಿದರೆ ಇದಕ್ಕಿಂತಲೂ ಹೆಚ್ಚು ಸಂಪಾದಿಸುತ್ತಾರೆ. ರಾಜ್ಯದ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಶೇ 70ರಷ್ಟು ಬೋಧಕ ಹುದ್ದೆಯನ್ನು ಅತಿಥಿ ಉಪನ್ಯಾಸಕರ ಮೂಲಕವೇ ಭರ್ತಿ ಮಾಡಲಾಗುತ್ತಿದ್ದು 14 ಸಾವಿರ ಅತಿಥಿ ಉಪನ್ಯಾಸಕರು ತಮ್ಮ ವೇತನ ಹೆಚ್ಚಳಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಈ ಅತಿಥಿ ಉಪನ್ಯಾಸಕರು ಮಾಸಿಕ 15 ಸಾವಿರದಿಂದ 32 ಸಾವಿರ ರೂ ವೇತನಕ್ಕಾಗಿ ದುಡಿಯುತ್ತಿದ್ದಾರೆ. ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೇ 90ರಷ್ಟು ಬೋಧಕ ವೃಂದ ಅತಿಥಿ ಉಪನ್ಯಾಸಕರನ್ನೇ ಹೊಂದಿದೆ. ವರ್ಷಕ್ಕೆ ಹತ್ತು ತಿಂಗಳು ಮಾತ್ರ ಮಾಸಿಕ 9500/- ರೂ ವೇತನ ಪಡೆಯುವ ಈ ಬೋಧಕರು ಶಾಶ್ವತ ನೌಕರಿಯ ಭರವಸೆಯೇ ಇಲ್ಲದೆ ಹತ್ತಾರು ವರ್ಷಗಳ ಸೇವೆ ಸಲ್ಲಿಸಿದ್ದಾರೆ.
ಶೈಕ್ಷಣಿಕ ವ್ಯವಸ್ಥೆಯ ಈ ದುರವಸ್ಥೆಯ ನಡುವೆಯೇ ಭ್ರಷ್ಟಾಚಾರದ ಬಾಹುಗಳು ಅತಿಥಿ ಉಪನ್ಯಾಸಕರನ್ನೂ ಕಾಡುತ್ತಿವೆ. ಪಿಹೆಚ್‌ಡಿ ಪದವಿಯಿಂದ ಉಪನ್ಯಾಸಕ ಹುದ್ದೆಯವರೆಗೆ, ಉನ್ನತ ಹುದ್ದೆಯ ಬಡ್ತಿ ಪ್ರಕ್ರಿಯೆಯನ್ನೂ ದಾಟಿ, ವಿಶ್ವವಿದ್ಯಾಲಯದ ಕುಲಪತಿಗಳ ಹುದ್ದೆಯವರೆಗೂ ಭ್ರಷ್ಟಾಚಾರದ ಜಾಲ ಹಬ್ಬಿಕೊಂಡಿದೆ. ಕಾಂಗ್ರೆಸ್ ತನ್ನ ಚುನಾವಣಾ ಜಾಹೀರಾತುಗಳಲ್ಲಿ ಪ್ರಕಟಿಸಿದ್ದ ಭ್ರಷ್ಟಾಚಾರದ ದರಪಟ್ಟಿ ಶಿಕ್ಷಣ ಕ್ಷೇತ್ರವನ್ನೂ ವ್ಯಾಪಿಸಿದ್ದು, ಆರೋಗ್ಯಕರ ಸಮಾಜಕ್ಕೆ ಅಡಿಪಾಯ ಹಾಕುವ ನೈತಿಕ ಜವಾಬ್ದಾರಿ ಇರುವ ಒಂದು ವಲಯವೇ ಭ್ರಷ್ಟಾಚಾರದ ಕೂಪಗಳಂತಾದರೆ ನಾಡಿನ ಭವಿಷ್ಯವೇನು ಎಂಬ ಚಿಂತೆ ಪ್ರಜ್ಞಾವಂತ ಜನತೆಯನ್ನು ಕಾಡುವಂತೆಯೇ ಜನಪ್ರತಿನಿಧಿಗಳನ್ನೂ ಕಾಡಬೇಕಿದೆ. ತಳಮಟ್ಟದ ಅರಾಜಕತೆ ಮತ್ತು ಮೇಲ್ಮಟ್ಟದ ಭ್ರಷ್ಟಾಚಾರ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಒಂದು ಆಧುನಿಕ ಷಾಪಿಂಗ್ ಮಾಲ್‌ನಂತೆ ಪರಿವರ್ತಿಸಿದೆ. ಈ ಷಾಪಿಂಗ್ ಮಾಲ್‌ನ ಶಾಖೆಗಳನ್ನು ಖಾಸಗಿ ಶಾಲಾ ಕಾಲೇಜುಗಳ ಮೂಲಕ ನೋಡಬಹುದು. ಎಲ್‌ಕೆಜಿ ಇಂದ ಪಿಯುಸಿವರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಉನ್ನತ ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಲಕ್ಷಾಂತರ ರೂಗಳ ಶುಲ್ಕ ಮತ್ತು ಡೊನೇಷನ್ ಸಂಗ್ರಹ ಮಾಡುತ್ತಿರುವುದು ಪ್ರತ್ಯಕ್ಷವಾಗಿ ಕಾಣುತ್ತಿದೆ. ಖಾಸಗಿ ಕೋಚಿಂಗ್ ಸೆಂಟರ್‌ಗಳು ಈ ಮಾಲ್‌ನಲ್ಲಿರುವ ಸ್ಟಾಲ್‌ಗಳಂತೆ ವ್ಯಾಪಾರದಲ್ಲಿ ತೊಡಗಿವೆ.
ಭ್ರಷ್ಟತೆಯ ಬೇರುಗಳು
ಮನುಷ್ಯನಲ್ಲಿ ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆ, ಸೌಜನ್ಯ, ಸಂಯಮ ಮತ್ತು ಸಜ್ಜನಿಕೆಯ ಗುಣಗಳನ್ನು ರೂಪಿಸುವುದರಲ್ಲಿ ಶಿಕ್ಷಣ ಮತ್ತು ಶೈಕ್ಷಣಿಕ ಮಾರ್ಗಗಳು ಪ್ರಧಾನ ಪಾತ್ರ ವಹಿಸುತ್ತವೆ. ಭಾರತದ ಪ್ರಸ್ತುತ ಸಂದರ್ಭದಲ್ಲಿ ಭ್ರಷ್ಟಾಚಾರ ಮತ್ತು ಅಪ್ರಾಮಾಣಿಕತೆಯ ಬೇರುಗಳು ಕೌಟುಂಬಿಕ ನೆಲೆಯಿಂದಲೇ ತಮ್ಮ ನೆಲೆ ಕಂಡುಕೊಳ್ಳುವುದನ್ನು ಗಂಭೀರವಾಗಿ ಗಮನಿಸಬೇಕಿದೆ. ಸುಖಕರ ಬದುಕು, ಆರಾಮದಾಯಕ ಜೀವನ ಮತ್ತು ಹಿತಕರ ಪಯಣಕ್ಕೆ ಅನುಕೂಲಕರವಾದ ಸುಗಮ ಮಾರ್ಗಗಳನ್ನು ಕಂಡುಕೊಳ್ಳುವ ಭರಾಟೆಯಲ್ಲಿ ಸಮಾಜದ ಒಂದು ವರ್ಗ ತನ್ನ ಸುತ್ತಲಿನ ಭ್ರಷ್ಟತೆಯ ಕರಾಳ ವಾತಾವರಣವನ್ನೂ ಗಮನಿಸದಂತೆ ಮುನ್ನಡೆಯುತ್ತಿರುವುದು 21ನೆಯ ಶತಮಾನದ ಭಾರತದಲ್ಲಿ ಕಾಣಬಹುದಾದ ಒಂದು ಚಿತ್ರಣ. ಸಮಾಜದ ಎಲ್ಲ ವಲಯಗಳಲ್ಲೂ ವ್ಯಾಪಿಸಿರುವ ಈ ಭ್ರಷ್ಟತೆಯ ಬೇರುಗಳಿಗೆ ನೀರೆರೆದು ಪೋಷಿಸುವ ಒಂದು ವರ್ಗವನ್ನು ಇದೇ ಶಿಕ್ಷಣ ವ್ಯವಸ್ಥೆಯೇ ರೂಪಿಸುತ್ತಿರುವುದು ದುರಂತವಲ್ಲವೇ ? ವೈದ್ಯಕೀಯ ಕಾಲೇಜಿನ ಸೀಟು ಪಡೆಯಲು ಕೋಟ್ಯಂತರ ರೂ ಡೊನೇಷನ್ ನೀಡುವವರಾಗಲೀ, ಕುಲಪತಿಗಳ/ಬೋಧಕರ/ಪ್ರೊಫೆಸರ್‌ಗಿರಿಯ ಹುದ್ದೆಗಳಿಗೆ ಲಕ್ಷಾಂತರ ರೂ ನೀಡುವ ಶೈಕ್ಷಣಿಕ ಪರಿಚಾರಕರಾಗಲೀ, ಅಧಿಕಾರಶಾಹಿಯ ಉನ್ನತ ಹುದ್ದೆಗಳಿಗೆ ನಿಗದಿತ ಹಣ ಲಂಚ ನೀಡುವ ಅಧಿಕಾರಿಗಳಾಗಲೀ, ಇದೇ ಭ್ರಷ್ಟ ವ್ಯವಸ್ಥೆಯಲ್ಲಿ ತಮ್ಮ ಭದ್ರಕೋಟೆಗಳನ್ನು ಕಟ್ಟಿಕೊಳ್ಳಲಿಚ್ಚಿಸುತ್ತಾರೆ.
ಯಾವ ಪಕ್ಷದ ಸರ್ಕಾರ ಎಷ್ಟು ಪರ್ಸೆಂಟ್ ಲಂಚ ನಿಗದಿ ಮಾಡುತ್ತದೆ ಎನ್ನುವುದಕ್ಕಿಂತಲೂ ಮುಖ್ಯವಾಗಿ ಯೋಚಿಸಬೇಕಾದ ವಿಚಾರವೆಂದರೆ, ಬಂಡವಾಳಶಾಹಿ ಆರ್ಥಿಕತೆಯು ಆಂತರಿಕ ಭ್ರಷ್ಟಾಚಾರ ಇಲ್ಲದೆ ಊರ್ಜಿತವಾಗುವುದಿಲ್ಲ. ಮಾರುಕಟ್ಟೆಯನ್ನು ಪೋಷಿಸಲು ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವ ಸೇವಾಕರ್ತರು, ಅಂದರೆ ಇಡೀ ಔದ್ಯಮಿಕ ವಲಯ, ಶಿಕ್ಷಣ-ಆರೋಗ್ಯ-ಸಾರಿಗೆ-ಹಣಕಾಸು ಮತ್ತು ಇತರ ಎಲ್ಲ ಸೇವಾ ಕ್ಷೇತ್ರಗಳಲ್ಲೂ ತನ್ನ ಭ್ರಷ್ಟತೆಯ ಕೂಪಗಳನ್ನು ಸೃಷ್ಟಿಸುತ್ತಲೇ ಇರುತ್ತದೆ. ಇಲ್ಲಿ ವ್ಯತ್ಯಾಸ ಕಾಣುವುದು ಭ್ರಷ್ಟಾಚಾರದ ಪ್ರಮಾಣದಲ್ಲಷ್ಟೇ. ಈ ಭ್ರಷ್ಟ ವ್ಯವಸ್ಥೆಯನ್ನು ಹೋಗಲಾಡಿಸಬೇಕೆಂದರೆ ಸಮಾಜವನ್ನು ಲಾಭಕೋರ ಮಾರುಕಟ್ಟೆಯಿಂದ ಮುಕ್ತಗೊಳಿಸಬೇಕು. ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ತಮ್ಮ ಮಕ್ಕಳಿಗೆ ಅಕ್ರಮವಾಗಿ ಡೊನೇಷನ್ ನೀಡುತ್ತಲೇ ಪೋಷಿಸುವ ಪೋಷಕರು ಒಂದು ನೆಲೆಯಲ್ಲಿ ಈ ಕೂಪವಾಸಿಗಳಾದರೆ, ತಮ್ಮ ಶೈಕ್ಷಣಿಕ ಪಯಣದಲ್ಲಿ ಹೂಡಿದ ಬಂಡವಾಳವನ್ನು ಲಾಭದ ಸಮೇತ ಮರುಸಂಪಾದಿಸಲು ವೈದ್ಯರು, ಇಂಜಿನಿಯರುಗಳು, ಅಧಿಕಾರಶಾಹಿಗಳು, ಕಾನೂನು ಪಾಲಕರು ಮತ್ತು ಬೋಧಕರೂ ಸಹ ಇದೇ ಭ್ರಷ್ಟ ಕೂಪದಲ್ಲಿ ತಮ್ಮದೇ ಆದ ಗೂಡುಗಳನ್ನು ಕಟ್ಟಿಕೊಳ್ಳುತ್ತಿರುತ್ತಾರೆ.
ಸಮಾಜದ ಉನ್ನತಿಗಾಗಿ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕಾದ ಶಿಕ್ಷಣ ಕ್ಷೇತ್ರದಲ್ಲೇ ಅಡಿಯಿಂದ ಮುಡಿಯವರೆಗೆ ಭ್ರಷ್ಟಾಚಾರದ ಬೇರುಗಳು ವ್ಯಾಪಿಸಿರುವಾಗ, ಸಾರ್ವಜನಿಕ ಆಡಳಿತ ವಲಯದಲ್ಲಿ ಈ ಬೇರುಗಳನ್ನು ಕಿತ್ತುಹಾಕುವುದಾದರೂ ಹೇಗೆ ? ಈ ಜಟಿಲ ಪ್ರಶ್ನೆಗೆ ನಾಗರಿಕ ಸಮಾಜವೂ ಉತ್ತರ ಶೋಧಿಸಬೇಕಿದೆ. ಶಾಶ್ವತ ನೌಕರಿಯ ಭರವಸೆ ಇಲ್ಲದಿದ್ದರೂ ಲಕ್ಷಾಂತರ ರೂಗಳ ಲಂಚ ನೀಡಿ, ಕಡಿಮೆ ವೇತನದ ಉದ್ಯೋಗ ಪಡೆಯುವ ವಿಶ್ವವಿದ್ಯಾಲಯದ, ಸರ್ಕಾರಿ ಕಾಲೇಜುಗಳ ಬೋಧಕ ವೃಂದ ಸಹಜವಾಗಿಯೇ ಖಾಸಗಿ ಕೋಚಿಂಗ್ ಸೆಂಟರ್‌ಗಳಲ್ಲಿ ದುಡಿಯುವ ಮೂಲಕ ತಮ್ಮ ಜೀವನ ನಿರ್ವಹಣೆ ಮಾಡುವುದನ್ನು ಅಪರಾಧ ಎನ್ನುವುದಾದರೂ ಹೇಗೆ ? ನಾಯಿಕೊಡೆಗಳಂತೆ ಬೀದಿಬೀದಿಯಲ್ಲೂ ತಲೆಎತ್ತಿರುವ ಟ್ಯೂಷನ್/ಕೋಚಿಂಗ್ ಕೇಂದ್ರಗಳು ಮಧ್ಯಮವರ್ಗಗಳ ರಕ್ತ ಹೀರುವ ಜಿಗಣೆಗಳಂತೆ ಕಾಣುತ್ತವೆ. ಈ ಸಂಸ್ಥೆಗಳನ್ನು ಪೋಷಿಸಬೇಕಾದ ಜನಸಾಮಾನ್ಯರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿನ ಭ್ರಷ್ಟಾಚಾರದ ಹೊಳೆಯಲ್ಲಿ ಮೀನು ಹಿಡಿಯಲು ಮುಂದಾಗುತ್ತಾರೆ. ಆಡಳಿತ ವ್ಯವಸ್ಥೆಯಲ್ಲಿ ನಾವು ಕಾಣುತ್ತಿರುವ ಭ್ರಷ್ಟಾಚಾರದ ವಿರಾಟ್ ಸ್ವರೂಪದ ಹಿಂದೆ ತಳಮಟ್ಟದಿಂದಲೂ ಬೆಳೆದುಬರುವ ಒಂದು ಪರಂಪರೆ ಅಥವಾ ಶಿಸ್ತುಬದ್ಧ ವ್ಯವಸ್ಥೆ ಇರುವುದನ್ನು ಗಮನಿಸಬೇಕಿದೆ. ಬಂಡವಾಳಶಾಹಿ ಆರ್ಥಿಕತೆ ಮತ್ತು ಅದರ ಭಾಗಿದಾರ ಉದ್ಯಮ ವಲಯ ಅಧಿಕಾರ ರಾಜಕಾರಣದ ಮುಖಾಂತರವೇ ಈ ವ್ಯವಸ್ಥೆಯನ್ನು ಕಾಪಾಡುತ್ತಿರುತ್ತದೆ. ಗ್ರಾಮಲೆಕ್ಕಿಗನೊಬ್ಬ ಅರ್ಜಿನಮೂನೆಗಳಿಗಾಗಿ ಪಡೆಯುವ ಅತ್ಯಲ್ಪ ಲಂಚದಿಂದ ಬೋಫೋರ್ಸ್-ರಾಫೆಲ್‌ವರೆಗೂ ಭ್ರಷ್ಟಾಚಾರದ ತಂತುಗಳನ್ನು ಈ ಬಂಡವಾಳಶಾಹಿ ಆರ್ಥಿಕತೆಯೇ ಕಾಪಾಡುತ್ತಿರುತ್ತದೆ.
ಇದೇ ಬಂಡವಾಳಶಾಹಿ ಮಾರುಕಟ್ಟೆಯನ್ನು ಪೋಷಿಸುವ ಸರ್ಕಾರಗಳು ತಳಮಟ್ಟದ ಜನಸಾಮಾನ್ಯರ ಅತೃಪ್ತಿ ಅಸಮಾಧಾನಗಳನ್ನು ತಣಿಸಲು ಕಲ್ಯಾಣ ರಾಜ್ಯದ ಸೌಕರ್ಯ ಸವಲತ್ತುಗಳನ್ನು, ಕೆಲವೊಮ್ಮೆ ಉಚಿತ ಸೌಲಭ್ಯಗಳನ್ನು, ಒದಗಿಸುವಂತೆಯೇ ಮೇಲ್ಮಟ್ಟದಲ್ಲಿ ಉದ್ಯಮಿಗಳನ್ನು ಸಂತೃಪ್ತಿಪಡಿಸಲು ಶಿಕ್ಷಣ-ಆರೋಗ್ಯ-ಸಾರಿಗೆ ಮತ್ತಿತರ ಸಾರ್ವಜನಿಕ ಸೌಕರ್ಯಗಳ ವಾಣಿಜ್ಯೀಕರಣ ಮತ್ತು ಖಾಸಗೀಕರಣದ ಮಾರ್ಗವನ್ನು ಅನುಸರಿಸುತ್ತವೆ. ಅಂತಿಮವಾಗಿ ಈ ವಾಣಿಜ್ಯೀಕರಣಗೊಂಡ ಖಾಸಗಿ ಔದ್ಯಮಿಕ ಜಗತ್ತಿನ ಮೂಲಕವೇ ತಳಮಟ್ಟದ ಜನಸಾಮಾನ್ಯರೂ ಸಹ ತಮ್ಮ ಜೀವನೋಪಾಯದ ಮಾರ್ಗಗಳನ್ನು, ಶೈಕ್ಷಣಿಕ ಪ್ರಗತಿಯನ್ನು, ಆರೋಗ್ಯ ರಕ್ಷಣೆಯನ್ನು ನಿರ್ವಹಿಸಬೇಕಾಗುತ್ತದೆ. ಉಚಿತಗಳನ್ನು ಲೇವಡಿ ಮಾಡುವ ಸುಶಿಕ್ಷಿತ ಹಿತವಲಯವೇ ಈ ಮೇಲ್ಮಟ್ಟದ ಭ್ರಷ್ಟ ಕೂಪಗಳ ಸಮರ್ಥಕರೂ ಆಗಿರುವುದು ವಿಡಂಬನೆ ಅಲ್ಲವೇ ?
ಭ್ರಷ್ಟಾಚಾರ ಮತ್ತು ಅಪ್ರಾಮಾಣಿಕತೆಯ ಈ ವಿಷವರ್ತುಲವು ಮಿತಿಮೀರಿ ಹೋಗದಂತೆ ಎಚ್ಚರವಹಿಸಲು ಸರ್ಕಾರಗಳು ಲೋಕಾಯುಕ್ತದಂತಹ ಸಂಸ್ಥೆಗಳನ್ನು ನಿಯೋಜಿಸುತ್ತವೆ. ಕಳೆದ ಬಾರಿಯ ಅಧಿಕಾರಾವಾಧಿಯಲ್ಲಿ ಬಲಿಷ್ಟವಾಗಿದ್ದ, ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದ ಅಪಕೀರ್ತಿಯನ್ನು ಹೊತ್ತುಕೊಂಡೇ ಈ ಬಾರಿ ಆಯ್ಕೆಯಾಗಿರುವ ಕಾಂಗ್ರೆಸ್ ಸರ್ಕಾರ, ಭ್ರಷ್ಟಾಚಾರದ ವಿಷವರ್ತುಲವು ಇನ್ನೂ ಆಳಕ್ಕೆ ಇಳಿಯದಂತೆ ಕಾಪಾಡುವ ನೈತಿಕ ಜವಾಬ್ದಾರಿಯನ್ನು ಹೊತ್ತಿದೆ. ಲೋಕಾಯುಕ್ತವನ್ನು ಬಲಪಡಿಸುವುದರೊಂದಿಗೇ ಶಿಕ್ಷಣ, ಆರೋಗ್ಯ ಮತ್ತು ವೈದ್ಯಕೀಯ ವಲಯದಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬೇರುಗಳನ್ನು ಕಿತ್ತೊಗೆಯಬೇಕಿದೆ. ಮಾಡ್ರಹಳ್ಳಿಯ ಗಣಿ ದುರಂತ, ಚಾಮರಾಜನಗರದ ಆಕ್ಷಿಜನ್ ದುರಂತಗಳು ಈ ಭ್ರಷ್ಟ ವ್ಯವಸ್ಥೆಯ ಪ್ರತಿಬಿಂಬಗಳಾಗಿ ಇಂದಿಗೂ ಪ್ರಜ್ಞಾವಂತ ಸಮಾಜವನ್ನು ಕಾಡುತ್ತಲೇ ಇದೆ. ಬಿಕರಿಯಾಗಿರುವ ಜ್ಞಾನಾರ್ಜನೆಯ ಮಾರ್ಗಗಳನ್ನು, ಮಾರಾಟವಾಗುತ್ತಿರುವ ಪದವಿ/ಹುದ್ದೆ/ಪಿಎಚ್‌ಡಿಗಳನ್ನು, ಹರಾಜು ಕಟ್ಟೆಯಲ್ಲಿರುವ ಸರ್ಕಾರಿ ನೌಕರಿಯ ಉನ್ನತ ಹುದ್ದೆಗಳನ್ನು, ಸಮಾಜದಲ್ಲಿರುವ ಅರ್ಹ ನಿರುದ್ಯೋಗಿಗಳಿಗೆ ಎಟುಕುವಂತೆ ಮಾಡುವ ನೈತಿಕ ಜವಾಬ್ದಾರಿಯನ್ನು ಹೊಸ ಕಾಂಗ್ರೆಸ್ ಸರ್ಕಾರ ಹೊತ್ತುಕೊಳ್ಳಲು ಸಾಧ್ಯವೇ ?
ಪಾರದರ್ಶಕ-ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂಬ ಆಶ್ವಾಸನೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಐದು ವರ್ಷದ ಆಳ್ವಿಕೆಯಲ್ಲಿ ಈ ನಿಟ್ಟಿನಲ್ಲಿ ಆಶಾಭಾವನೆಯನ್ನಾದರೂ ಮೂಡಿಸಿದರೆ ಸಾರ್ಥಕವಾದೀತು. ಕಾದು ನೋಡೋಣ.