ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಸ್ವಲ್ಪ ಮುನ್ನಡೆ 2 : ಕರ್ನಾಟಕ, ತೆಲಂಗಾಣ, ಆಂಧ್ರ

ವಸಂತರಾಜ ಎನ್.ಕೆ

ಪ್ರಧಾನವಾಗಿ ಉತ್ತರದ ಹಿಂದಿ ಪ್ರದೇಶಗಳ ಮತ್ತು ಪಶ್ಚಿಮ ಪ್ರದೇಶದ ಪಕ್ಷವೆಂದು ಹೆಸರಾಗಿದ್ದ ಬಿಜೆಪಿ/ಎನ್.ಡಿ.ಎ ಆ ಪ್ರದೇಶಗಳಲ್ಲಿ ಪ್ರಾಬಲ್ಯ ಕಳೆದಕೊಂಡು, ದಕ್ಷಿಣ ಮತ್ತು ಪೂರ್ವದ ಪ್ರದೇಶಗಳಲ್ಲಿ ಗಮನಾರ್ಹವಾಗಿ ವಿಸ್ತರಿಸಿರುವುದು ಈ ಚುನಾವಣೆಯ ಪ್ರಮುಖ ಬೆಳವಣಿಗೆ.   ಬಿಜೆಪಿ ಮತ್ತು ಅದರ ನಾಯಕತ್ವದ  ಎನ್.ಡಿ.ಎ ಕೂಟಕ್ಕೆ ದಕ್ಷಿಣದ ರಾಜ್ಯಗಳಲ್ಲಿ ಸೀಟು ಮತ್ತು ಮತಗಳಿಕೆ ಎರಡರಲ್ಲೂ ಸ್ವಲ್ಪ ಮುನ್ನಡೆಯಾಗಿದೆ.  ವಿಶೇಷವೆಂದರೆ ಇಂಡಿಯಾ ಕೂಟ ಸಹ ಸೀಟು ಮತ್ತು ಮತಗಳಿಕೆ ಎರಡರಲ್ಲೂ ಮುನ್ನಡೆ ಕಂಡಿದೆ. ದಕ್ಷಿಣದ 

ಆದರೆ ಇವೆರಡರ ಮುನ್ನಡೆ ಪ್ರಾದೇಶಿಕ ಪಕ್ಷಗಳಾದ ಬಿ.ಆರ್.ಎಸ್ ಮತ್ತು ವೈ.ಎಸ್.ಆರ್ ಕಾಂಗ್ರೆಸ್ ಮತ್ತು ಬಿ.ಆರ್.ಎಸ್ ಪಕ್ಷಗಳ ಭಾರೀ ನಷ್ಟದಿಂದ ಬಂದಿದೆ.  ಎನ್.ಡಿ.ಎ (ತೆಲುಗು ದೇಶಂ-ಬಿಜೆಪಿ ಕೂಟ) ಗೆ ಆಂಧ್ರ ಪ್ರದೇಶದಲ್ಲಿ ಭಾರೀ ಮುನ್ನಡೆ ಆದರೆ, ತೆಲಂಗಾಣದಲ್ಲಿ ಉತ್ತಮ ಮುನ್ನಡೆಯಾಗಿದೆ. ಕೇರಳ, ತಮಿಳುನಾಡುಗಳಲ್ಲಿ ಮತಪ್ರಮಾಣ ಹೆಚ್ಚಿಸಿಕೊಂಡು ಗಮನಾರ್ಹ ಮಟ್ಟ ಮುಟ್ಟಿದೆ. ಕೇರಳದಲ್ಲಿ ಮೊದಲ ಬಾರಿ ಖಾತೆ ತೆರೆದಿದೆ. ಕರ್ನಾಟಕದಲ್ಲಿ ಮಾತ್ರ ಸೀಟು, ಮತಪ್ರಮಾಣ ಎರಡರಲ್ಲೂ  ಕಳೆದುಕೊಂಡಿದ್ದರೂ, ದೊಡ್ಡ ಕೂಟದ ಸ್ಥಾನವನ್ನು ಉಳಿಸಿಕೊಂಡಿದೆ. ದಕ್ಷಿಣದ 

ಇದನ್ನೂ ಓದಿ: ಹಾಸನ : ಹಸಿರುಭೂಮಿ ಪ್ರತಿಷ್ಠಾನದಿಂದ 250ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳ ನೆಡುವಿಕೆ ಅಭಿಯಾನ

ಇಂಡಿಯಾ ಕೂಟ ತಮಿಳುನಾಡು, ಕೇರಳಗಳಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಂಢು, ತೆಲಂಗಾಣ, ಕರ್ನಾಟಕ ಗಳಲ್ಲಿ ಅದರ ವಿಧಾನಸಬಾ ವಿಜಯದ ಮುಂದುವರಿಕೆಯಾಗಿ ನಿರೀಕ್ಷಿತವಾದಷ್ಟು ಅಲ್ಲದಿದ್ದರೂ, ಉತ್ತಮ  ಮುನ್ನಡೆ ಸಾಧಿಸಿದೆ.  ಆಂಧ್ರದಲ್ಲಿ ಸ್ಥಗಿತಗೊಂಡಿದೆ. ದಕ್ಷಿಣದ 

ದಕ್ಷಿಣದ  ರಾಜ್ಯಗಳಲ್ಲಿ ಒಟ್ಟು 131 ಸೀಟುಗಳು ಇದ್ದು, ಅದರಲ್ಲಿ  ಎನ್.ಡಿ.ಎ ಕೂಟ 2019ರಲ್ಲಿ ಗಳಿಸಿದ್ದಕ್ಕಿಂತ 16 ಹೆಚ್ಚು ಸೀಟುಗಳನ್ನು ಗಳಿಸಿ 50 ಸೀಟುಗಳಿಗೆ ಏರಿದೆ.. ಸೀಟು ಹೆಚ್ಚಳಕ್ಕೆ ಮುಖ್ಯ ಕಾರಣ ತೆಲುಗು ದೇಶಂ ಜತೆ ಮೈತ್ರಿ. ಇಂಡಿಯಾ ಕೂಟ 76 ಸೀಟುಗಳನ್ನು ಗಳಿಸಿದ್ದು 13 ಹೆಚ್ಚು ಸೀಟುಗಳನ್ನು ಗಳಿಸಿದೆ. ಎನ್.ಡಿ.ಎ ಕೂಟ ಈ ದಕ್ಷಿಣದ ರಾಜ್ಯಗಳಲ್ಲಿ ಶೇ7.6 ಮತ ಹೆಚ್ಚಿಸಿಕೊಂಡು ಶೇ.36.7 ಮತ ಗಳಿಸಿದೆ. ಇಂಡಿಯಾ ಕೂಟ ಶೇ.7.1 ರಷ್ಟು ಮತಗಳಿಕೆ ಹೆಚ್ಚಿಸಿಕೊಂಡು ಶೇ. 40.4 ಮತ ಗಳಿಸಿದೆ. ಇತರರು ಶೇ.14.7 ಮತ ಕಳೆದುಕೊಂಡು ಶೇ. 22.8 ಮತ ಗಳಿಸಿದ್ದಾರೆ. ಬಿಜೆಪಿ ದಕ್ಷಿಣದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಮುನ್ನಡೆ ಸಾಧಿಸಿದ್ದರೂ, ಇಂಡಿಯಾ ಕೂಟ ಈಗಲೂ ಅತಿ ದೊಡ್ಡ ಕೂಟವಾಗಿ ಮುಂದುವರೆದಿದೆ. ಇಲ್ಲಿ ಇತರರಲ್ಲಿ ಬಿ.ಆರ್.ಎಸ್ ಮತ್ತು ವೈ.ಎಸ್.ಆರ್ ಕಾಂಗ್ರೆಸ್ ಪ್ರಧಾನವಾಗಿ ಬರುತ್ತವೆ. ದಕ್ಷಿಣದ 

ದಕ್ಷಿಣದ  ರಾಜ್ಯಗಳ ಸೀಟು-ಮತಪ್ರಮಾಣ ಗಳಿಕೆ

 ಕರ್ನಾಟಕ

ಕರ್ನಾಟಕದಲ್ಲಿ ಲೋಕಸಭೆಯಲ್ಲಿ ಎನ್.ಡಿ.ಎ ಯ ಪ್ರಾಬಲ್ಯ 2019ಕ್ಕೆ ಹೋಲಿಸಿದರೆ, , ಸೀಟು (-7) ಮತ್ತು ಮತಪ್ರಮಾಣ  (-ಶೇ.9.4) ಎರಡರಲ್ಲೂ ಮುಂದಿದೆ.  ಬಿಜೆಪಿ 25 ಸೀಟು ಸ್ಪರ್ಧಿಸಿ 17 ಸೀಟು ಮತ್ತು ಶೇ.46.1 ಮತ ಗಳಿಸಿದರೆ, ಜೆ.ಡಿ.(ಎಸ್) 3 ಸೀಟು ಸ್ಪರ್ಧಿಸಿ 2 ಸೀಟು ಶೇ. 5.6 ಮತಗಳಿಸಿದೆ. ಕಾಂಗ್ರೆಸ್ ಎಲ್ಲ 28 ಸೀಟುಗಳಲ್ಲಿ ಸ್ಪರ್ಧಿಸಿ 8 ಸೀಟು ಮತ್ತುಶೇ. 45.4  ಮತ ಗಳಿಸಿ ಶೇ. 13.5 ಮತ ಏರಿಕೆಯೊಂದಿಗೆ ತನ್ನ ಸ್ಥಾನವನ್ನು ಉತ್ತಮಪಡಿಸಿದೆ. ಮತಗಳಿಕೆಯಲ್ಲಿ ಭಾರೀ ಹೆಚ್ಚಳ ಕಾಂಗ್ರೆಸ್ ನ ಮಹತ್ವದ ಸಾಧನೆಯೇ. ಆದರೆ ವಿಧಾನಸಭೆಯ ಸಾಧನೆಗೆ ಹೋಲಿಸಿದರೆ ಕಾಂಗ್ರೆಸ್ ನಿಂದ ಇನ್ನಷ್ಟು ಉತ್ತಮ ಸಾಧನೆ (15-18 ಸೀಟು) ನಿರೀಕ್ಷಿಸಲಾಗಿತ್ತು.

ಅದು ಸಾಧ್ಯವಾಗಿಲ್ಲ. ಆದರೆ ಮತಗಳಿಕೆಯಲ್ಲಿ 2023ರ ವಿಧಾನಸಭೆ ಚುನಾವಣೆಗಿಂತಲೂ ಸ್ವಲ್ಪ ಹೆಚ್ಚಳವಾಗಿದೆ. ಆದರೆ ಬಿಜೆಪಿ 2023ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ (ಶೇ.42.9) ಮತಗಳಿಕೆಯಲ್ಲೂ ಗಮನಾರ್ಹ ಏರಿಕೆ ಸಾಧಿಸಿದೆ. ಪ್ರಮುಖವಾಗಿ ಬಿಜೆಪಿ-ಜೆಡಿ(ಎಸ್) ಮೈತ್ರಿಕೂಟವು ಮತಗಳನ್ನು ಎನ್.ಡಿ.ಎ ಅಭ್ಯರ್ಥಿಗೆ ಕ್ರೋಡೀಕರಿಸಿದೆ. ವಿಧಾನಸಭೆ ಯಲ್ಲಿ ತಿಕೋಣ ಸ್ಪರ್ಧೆ ಕಾಂಗ್ರೆಸ್ ಗೆ ಸಹಕಾರಿಯಾಗಿತ್ತು. ಈಗ ನೇರ ಸ್ಪರ್ಧೇಯಿಂದ ನಷ್ಟ ಅನುಭವಿಸಿದೆ. ಕಾಂಗ್ರೆಸ್ ಕಲ್ಯಾಣ ಕರ್ನಾಟಕದ 6 ಸೀಟುಗಳನ್ನು ಸ್ವೀಪ್ ಮಾಡಿದರೆ, ಬಿಜೆಪಿ ಉತ್ತರ (ಮುಂಬಯಿ) ಮತ್ತು ಕರಾವಳಿ ಕರ್ನಾಟಕ ವನ್ನು (1 ಸೀಟು ಹೊರತು ಪಡಿಸಿದರೆ) ಸ್ವೀಪ್ ಮಾಡಿದೆ. ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ-ಜೆಡಿ(ಎಸ್) ಕೂಟ ಹೆಚ್ಚು ಕಡಿಮೆ ಸ್ವೀಪ್ ಮಾಢಿದೆ. ಕಾಂಗ್ರೆ್ಸ್ 2 ಸೀಟಿಗೆ ತೃಪ್ತಿ ಪಡಬೇಕಾಗಿದೆ.

ಕರ್ನಾಟಕ- ಸೀಟು-ಮತಪ್ರಮಾಣ

ಜೆ.ಡಿ(ಎಸ್) ಈ ಬಾರಿ ಬಿಜೆಪಿಯ ಜತೆ ಕೂಟದಲ್ಲಿತ್ತು. 2019ರಲ್ಲಿ ಕಾಂಗ್ರೆಸ್ ಮೈತ್ರಿಕೂಟದಲ್ಲಿತ್ತು. ಆದರೂ ಜೆ.ಡಿ.(ಎಸ್) ಸೀಟು ಮತ್ತು ಮತ ಪ್ರಮಾಣಗಳನ್ನುಎನ್.ಡಿ.ಎ ಕೂಟಕ್ಕೆ ಸೇರಿಸಲಾಗಿದೆ.  ಹಾಗಾಗಿ ಕಳೆದ ಬಾರಿಗಿಂತ ಸೀಟು, ಮತಪ್ರಮಾಣದಲ್ಲಿ ಏರಿಕೆ/ಇಳಿಕೆ ಅರ್ಥೈಸುವುದರಲ್ಲಿ ಜಾಗ್ರತೆ ವಹಿಸಬೇಕು. ಇಲ್ಲಿ ಇತರ ಎಂದರೆ ಪ್ರಮುಖವಾಗಿ ಹಾಸನದ ಸುಮಲತಾ ಮತ್ತು ಇತರ ಪಕ್ಷಗಳು. ಅವರು ಪಕ್ಷೇತರರಾಗಿ ಆರಿಸಿಬಂದು ಆಮೇಲೆ ಬಿಜೆಪಿ ಸೇರಿದ್ದರು)

ಕಾಂಗ್ರೆಸ್ ತನ್ನ ಗ್ಯಾರಂಟಿಗಳ ಜಾರಿಯು ಭಾರೀ ವಿಜಯ ತಂದುಕೊಡಬಹುದು. ಎಂಬ ಭ್ರಮೆಯಲ್ಲಿತ್ತು.  ಅದು ಸಾಧಿಸಿದ ಮುನ್ನಡೆ ಪ್ರಧಾನವಾಗಿ ಗ್ಯಾರಂಟಿಗಳಿಂದಲೇ ಆಗಿತ್ತು. ಜನರನ್ನು ಬಾಧಿಸುವ ಬೆಲೆಏರಿಕೆ, ನಿರುದ್ಯೋಗ ಇತ್ಯಾದಿ ನಿಜಸಮಸ್ಯೆಗಳು;  ರಾಜ್ಯಗಳ ದಮನ ತಾರತಮ್ಯಕ್ಕೆ ಕಾರಣವಾಗುವ ಅತಿ ಕೇಂದ್ರೀಕರಣದ  ವಿರುದ್ಧ; ಬಿಜೆಪಿ-ಮೋದಿ ನಿರಂಕುಶವಾದಿ ಆಡಳಿತದ ವಿರುದ್ಧ – ಹಿಂದೆಂದಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಸಾಕಷ್ಟು ಪ್ರಚಾರವನ್ನು ಕಾಂಗ್ರೆಸ್ ನಡಸಿತು.

ಆದರೆ – ಅಭ್ಯರ್ಥಿಗಳ ಆಯ್ಕೆಯಲ್ಲಿ ಹಲವು ಎಡವಟ್ಟುಗಳು; ಬಣ ಸಂಘರ್ಷಗಳು, ತೀವ್ರ ಸಂಘಟನಾ ಅನೈಕ್ಯತೆಅಶಿಸ್ತು; ತನ್ನ ಸಾಧನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಹೇಳುವ ಮತ್ತು ಬೆಂಬಲವನ್ನು ಮತಗಳಾಗಿ ಪರಿವರ್ತಿಸುವ ಕಾರ್ಯಕರ್ತರ ಪಡೆಯ ಅಭಾವ; ಕೋಮುವಾದದ ವಿರುದ್ಧ ದೃಢ ಸೈದ್ಧಾಂತಿಕ ನಿಲುವಿನ ಮತ್ತು ಹೋರಾಟದ ಅಭಾವ; ಬಿಜೆಪಿಯ ಕೋಮುವಾದಿ-ಫ್ಯಾಸಿಸಂ ಸೋಲಿಸಲು ಇತರ ಪ್ರಜಾಸತ್ತಾತ್ಮಕ ಪಕ್ಷ/ಶಕ್ತಿಗಳ ಹಾಗೂ ನಾಗರಿಕ ಸಮಾಜದ ಛಲ, ಉತ್ಸಾಹ, ಬೆಂಬಲಗಳನ್ನು ಕ್ರೋಡೀಕರಿಸುವುದರಲ್ಲಿ ವೈಫಲ್ಯ – ಇವೆಲ್ಲ ಕಾಂಗ್ರೆಸ್ ಸಾಧನೆಯನ್ನು ಕುಂಠಿತಗೊಳಿಸಿವೆ. ತೀವ್ರ ಸಂಘಟನಾ ಅನೈಕ್ಯತೆ ಅಶಿಸ್ತುವೊಂದೇ 2-3 ಸೀಟುಗಳ ನಷ್ಟ ತಂದಿರಬಹುದು ಎನ್ನಲಾಗಿದೆ.

ಜೆಡಿ(ಎಸ್) ಜತೆ ಮೈತ್ರಿಕೂಟ, ಕೋಮು ಧ್ರುವೀಕರಣ, ಜಾತಿ ಸಮೀಕರಣ, ರಾಜ್ಯ ಸರಕಾರಗಳ ವೈಫಲ್ಯಗಳ ಟೀಕೆ, ತನ್ನ ಸಾಧನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಹೇಳುವ ಮತ್ತು ಬೆಂಬಲವನ್ನು ಮತಗಳಾಗಿ ಪರಿವರ್ತಿಸುವ ಕಾರ್ಯಕರ್ತರ ಪಡೆ ಬಿಜೆಪಿ ಯ ಕೈ ಹಿಡಿದಿದೆ. ಕೋಮು ಧ್ರುವೀಕರಣಕ್ಕೆ ನೇಹಾ ಹಿರೇಮಠ ಕೊಲೆ ಮತ್ತಿತರ ಹಲವು ಘಟನೆಗಳ ಬಳಕೆ, ಅಪಾರ ಸಂಪನ್ಮೂಲ, ಲಿಂಗಾಯತ ಮತ್ತು ಒಕ್ಕಲಿಗ ಇವೆರಡು ಎರಡು ಪ್ರಬಲ ಸಮುದಾಯಗಳು ತಮ್ಮ ಸಂಘರ್ಷ ಪಕ್ಕಕ್ಕಿಟ್ಟು ಅಹಿಂದ ಕೂಟವನ್ನು ಹಿಮ್ಮೆಟ್ಟಿಸಲು ಒಂದಾಗಿ ಎನ್.ಡಿ.ಎ ಕೂಟವನ್ನು ಪ್ರಧಾನವಾಗಿ ಬೆಂಬಲಿಸಿದ್ದು – ಬಿಜೆಪಿ ಒಟ್ಟಾರೆ ಮೇಲುಗೈ ಗೆ ಕಾರಣವಾಯಿತು.

ತೆಲಂಗಾಣ

ತೆಲಂಗಾಣದಲ್ಲಿ ಎನ್.ಡಿ.ಎ ಅಂದರೆ ಬಿಜೆಪಿಯೇ. ಯಾವುದೇ ಕೂಟವಿಲ್ಲದೆ  ಬಿಜೆಪಿ ಸ್ವತಂತ್ರವಾಗಿ ಉತ್ತಮ ಮುನ್ನಡೆ ಸಾಧಿಸಿದೆ, 4 ಸೀಟು ಹೆಚ್ಚಿಸಿಕೊಂಡು 8 ಸೀಟು ಗಳಿಸಿದೆ. ಮತಪ್ರಮಾಣದಲ್ಲೂ ಹಿಂದಿಗಿಂತ (2019 ಲೋಕಸಭಾ)  ಶೇ. 15.3 ಹೆಚ್ಚಳ ಸಾಧಿಸಿ, ಶೇ. 35.0 ಮತ ಪಡೆದಿದೆ. ಬಿ.ಆರ್.ಎಸ್ ಅಥವಾ ತೆಲುಗು ದೇಶಂ ಪಕ್ಷಗಳ ಸಹಾಯವಿಲ್ಲದೆ ತೆಲಂಗಾಣ/ಆಂಧ್ರ ಗಳಲ್ಲಿ ಸ್ವತಂತ್ರ ಅಸ್ತಿತ್ವವಿಲ್ಲದ ಬಿಜೆಪಿ ಯ ದೃಷ್ಟಿಯಿಂದ ಇದು ದೊಡ್ಡ ಮುನ್ನಡೆಯೇ. ಇತ್ತೀಚಿನ (2023) ವಿಧಾನಸಭೆ ಮತಗಳಿಕೆ ಯನ್ನು (ಶೇ.14) ನೋಡಿದರೆ ಇನ್ನೂ ಗಮನಾರ್ಹವೇ.   ಇಲ್ಲಿ ಕಾಂಗ್ರೆಸ್ ಸಹ ಇಂಡಿಯಾ ಕೂಟದ ಇತರ ಪಕ್ಷಗಳಿಗೆ ಯಾವುದೇ ಸೀಟು ಬಿಟ್ಟು ಕೊಡದೆ ಎಲ್ಲ 17 ಸೀಟುಗಳಲ್ಲಿ ಸ್ಪರ್ಧಿಸಿತ್ತು. 5 ಸೀಟುಗಳನ್ನು ಹೆಚ್ಚಿಸಿಕೊಂಡು 8 ಸೀಟು ಗಳಿಸಿದೆ. ಕಳೆದ ಬಾರಿಗಿಂತ (2019 ಲೋಕಸಭಾ) ಶೇ.10.6 ಮತಗಳಿಕೆ ಹೆಚ್ಚಿಸಿಕೊಂಡಿತ್ತು. ಆದರೆ  2023ರ ವಿಧಾನಸಭೆ ಮತಗಳಿಕೆಗೆ (ಶೇ.39.4) ಹೋಲಿಸಿದರೆ   ಶೇ.0.7 ಮಾತ್ರ ಹೆಚ್ಚಳ ಸಾಧಿಸಿದೆ.  ಅತಿ ದೊಡ್ಡ ಪಕ್ಷವಾಗಿಯೂ, ಬಿಜೆಪಿ ಗಿಂತ ಶೇ.5 ಹೆಚ್ಚು ಮತ ಗಳಿಸಿದ್ದರೂ ಅದರಷ್ಟೇ ಸೀಟು ಗಳಿಸಿದೆ.

ತೆಲಂಗಾಣ – ಸೀಟು-ಮತಪ್ರಮಾಣ

ಹಿಂದಿನ ಆಳುವ ಪಕ್ಷವಾದ ತೆಲಂಗಾಣ/ಭಾರತ ರಾಷ್ಟ್ರ ಸಮಿತಿ (ಟಿ.ಆರ್.ಎಸ್ ಅಥವಾ ಈಗ ಬಿ.ಆರ್.ಎಸ್) ಈ ಚುನಾವಣೆಯಲ್ಲಿ ಹೆಚ್ಚು ಕಡಿಮೆ ಕರಗಿ ಹೋದದ್ದು  ಅನಿರೀಕ್ಷಿತ ಸಂಗತಿ.  ಬಿ.ಆರ್.ಎಸ್ ಹಿಂದಿನ (2019) ಬಾರಿಗೆ ಹೋಲಿಸಿದರೆ ಶೇ. 24.7 ಮತಪ್ರಮಾಣದಲ್ಲಿ ಕುಸಿತ ಕಂಡು, ಮತಗಳಿಕೆಯಲ್ಲಿ 3 ನೇ ಸ್ಥಾನಕ್ಕೆ ಹೋಗಿದೆ  ಮತ್ತು ಎಲ್ಲ 9 ಸೀಟುಗಳನ್ನು ಕಳೆದುಕೊಂಡಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಪಡೆದಿದ್ದ ಶೇ. 37.4 ಮತಪ್ರಮಾಣದಿಂದ ಸಹ ಶೇ.21 ಕಳೆದುಕೊಂಡದ್ದು ಬಿಜೆಪಿಯ ಉತ್ತಮ ಸಾಧನೆಗೆ ಹಾದಿ ಮಾಡಿಕೊಟ್ಟಿದೆ. ಇದು ರಾಜಕೀಯ ವಲಯದಲ್ಲಿ ಎಷ್ಟು ಅಚ್ಚರಿ ಮೂಡಿಸಿತ್ತೆಂದರೆ, ಬಿಜೆಪಿ ಆಮಿಷ/ಬೆದರಿಕೆ ಬಳಸಿ ಬಿ.ಆರ್.ಎಸ್ ಜತೆ ಒಳ-ಒಪ್ಪಂದ ಮಾಡಿಕೊಂಡಿದೆ ಎಂಬ ಪುಕಾರುಗಳು ಸಹ ಕೇಳಿ ಬಂದಿವೆ.

ಬಿ.ಆರ್.ಎಸ್ ಗಂಭೀರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಲಿಲ್ಲ. ಆ ಪಕ್ಷದ ನಾಯಕ ಮತ್ತು ಕಾರ್ಯಕರ್ತರಲ್ಲಿ  ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಹತಾಶೆ ಮೂಡಿಸಿರುವ ಕಾರಣದಿಂದಲೂ ಇದು ಆಗಿರಬಹುದು.  ಆದರೂ ಕೆ.ಸಿ.ಆರ್ ಹಿಂದೆ ಎನ್.ಡಿ.ಎ ಮತ್ತು ಯು.ಪಿ.ಎ ಎರಡೂ ಕೂಟದ ಭಾಗವಾಗಿದ್ದು, ಚೌಕಾಶಿ/ಸಂಘರ್ಷ ಎರಡನ್ನೂ ಮಾಡಿದ್ದು; 2022 ರಲ್ಲಿ ರಾಷ್ಟ್ರೀಯ ಪಕ್ಷವಾಗುವ ಮಹತ್ವಾಕಾಂಕ್ಷೆಯಿಂದ ಬಿ.ಆರ್.ಎಸ್ ಎಂದು ಹೆಸರು ಬದಲಾಯಿಸಿದ್ದು;  ಕಾಂಗ್ರೆಸ್-ಬಿಜೆಪೇತರ ಪ್ರಾದೇಶಿಕ ಪಕ್ಷಗಳ ಫೆಡೆರಲ್ ಫ್ರಂಟ್ ಕಟ್ಟಲು ಪ್ರಯತ್ನಿಸಿದ್ದು – ಇಂತಹ ವರ್ಣರಂಜಿತ ಚರಿತ್ರೆಯ ಪಕ್ಷ ಈ ಚುನಾವಣೆಗಳಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಲಿಲ್ಲ ಎಂಬುದು ಆಶ್ಚರ್ಯದ ವಿಷಯವೇ.

ಹಾಗಾಗಿಯೇ ಇಂತಹ ಪುಕಾರುಗಳು ಹಬ್ಬಿವೆ. ಸಾಕಷ್ಟು ವ್ಯಾಪಕ ಕಲ್ಯಾಣ ಯೋಜನೆಗಳನ್ನು ಇದು ಜಾರಿ ಮಾಡಿದ್ದರೂ ಅದರಲ್ಲಿ ಅಷ್ಟೇ ವ್ಯಾಪಕ ಭ್ರಷ್ಟಾಚಾರ;  ಅದರ ಆಡಳಿತದ ವಿರುದ್ಧ ಅತೃಪ್ತಿ, ಜನರಲ್ಲಿ ಎಬ್ಬಿಸಿದ ಅತಿಯಾದ ನಿರೀಕ್ಷೆಗಳು ಹುಸಿಯಾಗಿದ್ದು  ಮತ್ತು ಬಿಜೆಪಿ ಸರಕಾರದ ನೀತಿ ಧೋರಣೆಗಳ (ಒಟ್ಟಾರೆ ರಾಷ್ಟ್ರೀಯ ರಾಜಕಾರಣದ) ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳದ್ದು – ಇವು ಬಿ.ಆರ್.ಎಸ್ ನ ತಿರಸ್ಕಾರಕ್ಕೆ ಕಾರಣವಾಗಿರಬಹುದು.

ಎಐಎಂಐಎಂ ಅದರ ಭದ್ರಕೋಟೆಯಾದ ಹೈದರಾಬಾದಿನಲ್ಲಿ ತನ್ನ ಸೀಟು ಉಳಿಸಿಕೊಂಡಿದೆ. ಕಳೆದ ಬಾರಿ ಬಿ.ಆರ್.ಎಸ್ ಜತೆ ಸೀಟು ಹೊಂದಾಣಿಕೆಯಲ್ಲಿದ್ದ ಪಕ್ಷ ಈ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿತ್ತು.

ಕಾಂಗ್ರೆಸ್ ವಿಧಾನಸಭಾ ಚುನಾವಣಾ ಸಾದನೆಗಳ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಇದಕ್ಕಿಂತ  ಉತ್ತಮ ಸಾಧನೆ ಮಾಡಬೇಕಿತ್ತು. ಕಾಂಗ್ರೆಸ್ ಆಳುವ ಪಕ್ಷವಾದ ಕೂಡಲೇ ತನ್ನ ರಾಜಕಾರಣವನ್ನು  ಬಿಜೆಪಿ ಯ ವಿರುದ್ಧ ಆಡಳಿತ-ವಿರೋಧಿ ಅಲೆಯಿರುವ ಸನ್ನಿವೇಶದಲ್ಲಿ ಇತರ ರಾಜ್ಯಗಳಂತೆ – ಜನರ ಕಾಳಜಿಯ ವಿಷಯಗಳ ಕುರಿತು:, ಒಕ್ಕೂಟವಾದ, ಪ್ರಜಾಪ್ರಭುತ್ವ, ಜಾತ್ಯತೀತತೆಯ ಮೇಲೆ ಬಿಜೆಪಿಯ ದಾಳಿಗಳ ವಿರುದ್ಧ; ಬಿಜೆಪಿ ಗೆ ಇನ್ನೊಂದು ಅವಕಾಶ  ಕೊಟ್ಟರೆ ಫ್ಯಾಸಿಸ್ಟ್ ಅಪಾಯದ ಕುರಿತು – ಬಿರುಸಿನ ಪ್ರಚಾರ ನಡೆಸುವಲ್ಲಿ ರಾಜ್ಯ ಕಾಂಗ್ರೆಸ್ ಸೋತಿದೆ. ದಕ್ಷಿಣದ 

ಕರ್ನಾಟಕದಂತೆಯೇ, ಕಾರ್ಯಕರ್ತರ ಅಭಾವ, ಬಿಜೆಪಿಯ ಕೋಮುವಾದಿ-ಫ್ಯಾಸಿಸಂ ಸೋಲಿಸಲು ಇತರ ಪ್ರಜಾಸತ್ತಾತ್ಮಕ ಪಕ್ಷ/ಶಕ್ತಿಗಳ ಹಾಗೂ ನಾಗರಿಕ ಸಮಾಜದ ಛಲ, ಉತ್ಸಾಹ, ಬೆಂಬಲಗಳನ್ನು ಕ್ರೋಡೀಕರಿಸುವುದರಲ್ಲಿ ವೈಫಲ್ಯವೇ ಅದು ಹೆಚ್ಚಿನ ಸಾಧನೆಯಲ್ಲಿ ಸೋತಿದ್ದಕ್ಕೆ ಮುಖ್ಯ ಕಾರಣವಾಗಿರುವಂತೆ ಕಾಣುತ್ತಿದೆ. ಆಳುವ ಪಕ್ಷವಾಗಿದ್ದಾಗ ರಾಜಕೀಯ ಪಕ್ಷದಂತೆ ಕೆಲಸ ಮಾಡುವುದನ್ನು ಮರೆತು ಬಿಡುವುದು ಕಾಂಗ್ರೆಸ್ ನ ಸಾಮಾನ್ಯ ಸಮಸ್ಯೆ. ದಕ್ಷಿಣದ 

ಆಂಧ್ರ ಪ್ರದೇಶ

ಆಂಧ್ರ ಪ್ರದೇಶ ದಲ್ಲೂ ತೆಲಂಗಾಣದಂತೆ ಹಿಂದಿನ ಆಳುವ ಪಕ್ಷ (ಇಲ್ಲಿ ವೈ.ಎಸ್.ಆರ್ ಕಾಂಗ್ರೆಸ್) ಧೂಳೀಪಟವಾಗಿ , ಎನ್.ಡಿ.ಎ ಭಾರೀ ಮುನ್ನಡೆ ಸಾಧಿಸಿದೆ. ಇಂಡಿಯಾ ಕೂಟ ಶೂನ್ಯ ಸಂಪಾದನೆ ಮಾಡಿದೆ. ವೈ.ಎಸ್.ಆರ್ ಕಾಂಗ್ರೆಸ್ ಜತೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಹ ಪರಾಭವ ಹೊಂದಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ 18 ಸೀಟುಗಳನ್ನು ಕಳೆದುಕೊಂಡು ಕೇವಲ 4 ಸೀಟು ಪಡೆದಿದೆ. ಶೇ.39.5  ಮತ ಪಡೆದರೂ ಶೇ.9.6 ರಷ್ಟು ಮತಪ್ರಮಾಣ  ಕಳೆದುಕೊಂಡಿದೆ. ಕಳೆದ ಬಾರಿ ಕೇವಲ 3 ಸೀಟು ಪಡೆದಿದ್ದ ಎನ್.ಡಿ.ಎ ಈ ಬಾರಿ 21 ಸೀಟು ಗೆದ್ದಿದೆ. ದಕ್ಷಿಣದ 

ಈ ಬಾರಿ ಎನ್.ಡಿ.ಎ ಕೂಟದ ಭಾಗವಾಗಿದ್ದ ತೆಲುಗು ದೇಶಂ 17 ಸೀಟುಗಳಲ್ಲಿ ಸ್ಪರ್ಧಿಸಿ 16 ಗೆದ್ದಿದೆ.  (ಕಳೆದ ಬಾರಿ ಯಾವುದೇ ಮೈತ್ರಿಕೂಟವಿಲ್ಲದೆ 3 ಸೀಟುಗಳನ್ನು ಮಾತ್ರ ಗೆದ್ದಿತ್ತು.) ಬಿಜೆಪಿ 6 ಸೀಟುಗಳಲ್ಲಿ 3 ಸೀಟುಗಳನ್ನು ಗೆದ್ದಿದೆ. ಕಳೆದ ಬಾರಿ ಎಲ್ಲ ಸೀಟುಗಳಲ್ಲಿ ಸ್ಪರ್ಧಿಸಿ ಶೂನ್ಯ ಸಂಪಾದನೆ ಮಾಡಿತ್ತು) ಜನಸೇನಾ ಪಕ್ಷ 2 ಸೀಟುಗಳಲ್ಲಿ ಸ್ಪರ್ಧಿಸಿ ಎರಡನ್ನೂ ಗೆದ್ದಿದೆ. ಆಂಧ್ರದ ಎನ್.ಡಿ.ಎ ಕೂಟದಲ್ಲಿ ಬಿಜೆಪಿ ತನ್ನದೇ ನೆಲೆಯಿಲ್ಲದೆ ಜೂನಿಯರ್ ಪಾರ್ಟನರ್ ಆಗಿದೆ. ದಕ್ಷಿಣದ

ತೆಲುಗು ದೇಶಂ ನಾಯಕತ್ವದ ಕೂಟದಲ್ಲಿ ಅದರ ಸಾಮೂಹಿಕ ನೆಲೆಯ  ಪ್ರಯೋಜನ ಪಡೆದಿದೆ.  ಕೂಟದ ಭಾಗವಾಗಿ ಶೇ. 1 ರಿಂದ ಶೇ. 11.3 ಕ್ಕೆ ಮತಗಳಿಕೆ ಹೆಚ್ಚಿಸಿಕೊಂಡಿದೆ. ತೆಲುಗು ದೇಶಂ (ಬಹುಶಃ 25 ರ ಬದಲು 16 ಸೀಟು ಸ್ಪರ್ಧಿಸಿದ್ದ) ಶೇ. 2,4 ಮತಪ್ರಮಾಣ ಕಳೆದುಕೊಂಡು ಶೇ. 37.8 ಮತಗಳಿಸಿದೆ.. ಜನಸೇನಾ ಸಹ ಕಡಿಮೆ ಸೀಟು ಸ್ಪರ್ಧಿಸಿದ್ದರಿಂದ ಶೇ.1.6 ಮತಪ್ರಮಾಣ ಕಡಿಮೆಯಾಗಿ ಶೇ. 4.30 ಮತ ಗಳಿಸಿದೆ. ಇಂಡಿಯಾ ಕೂಟದಿಂದ ಕಾಂಗ್ರೆಸ್ 23 ಸೀಟು, ಸಿಪಿಐ, ಸಿಪಿಐ(ಎಂ) ತಲಾ 1 ಸೀಟು ಸ್ಪರ್ಧಿಸಿ ಶೇ. 3 ಮತ ಗಳಿಸಿದೆ. 25 ರಲ್ಲಿ ಕೇವಲ 5 ಸೀಟುಗಳಲ್ಲಿ ಅಂತರ 1 ಲಕ್ಷಕ್ಕಿಂತ ಕಡಿಮೆಯಿದ್ದು ಅವುಗಳಲ್ಲಿ 4 ಸೀಟುಗಳು ವೈ.ಎಸ್.ಆರ್ ಕಾಂಗ್ರೆಸ್ ಗೆದ್ದ ಸೀಟುಗಳು. ದಕ್ಷಿಣದ 

ಆಂಧ್ರ ಪ್ರದೇಶ- ಸೀಟು-ಮತಪ್ರಮಾಣ

ಆಂಧ್ರ ಪ್ರದೇಶದಲ್ಲಿ ಎನ್.ಡಿ.ಎ ಯ ಭಾರಿ ಮುನ್ನಡೆ ಮೋದಿ ಅಥವಾ ಬಿಜೆಪಿಯ ಕೇಂದ್ರದ ಆಡಳಿತದ ಅನುಮೋದನೆ ಖಂಡಿತ ಅಲ್ಲ. ತೆಲುಗು ದೇಶಂ ನೀತಿ/ಧೋರಣೆಗಳ ಸಕಾರಾತ್ಮಕ ಬೆಂಬಲವೂ ಅಲ್ಲ. ಇದು ಪ್ರಮುಖವಾಗಿ ವೈ.ಎಸ್.ಆರ್ ಕಾಂಗ್ರೆಸ್ ಆಡಳಿತ-ವಿರೋಧ ಅಲೆ ಅಥವಾ ಅದರ ವಿರುದ್ಧ ನಕಾರಾತ್ಮಕ ಪ್ರತಿಭಟನಾ ಮತ.  ಹಿಂದಿನ ತೆಲುಗು ದೇಶಂ ಆಡಳಿತದ ಜನ-ವಿರೋಧಿ ಕಾರ್ಪೊರೆಟ್-ಪರ ನೀತಿಗಳಿಂದ ಆಕ್ರೋಶಗೊಂಡಿದ್ದ ಜನತೆ, 2019ರಲ್ಲಿ ಜಗನ್ಮೋಹನ ರೆಡ್ಡಿ ಅವರ  ಚುನಾವಣಾ-ಪೂರ್ವ ಪಾದಯಾತ್ರೆ ಹಾಗೂ ಮುಖ್ಯಮಂತ್ರಿಯಾಗಿ ಜನರ ಮೆಚ್ಚುಗೆ ಗಳಿಸಿದ್ದ ಅವರ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಅವರ ಮಗ ಎಂಬ ಅನುಕಂಪದಿಂದ ಭಾರೀ ಬಹುಮತ ಕೊಟ್ಟಿದ್ದರು.

ಆದರೆ ಮುಖ್ಯಮಂತ್ರಿಯಾದ ನಂತರ ಜನರಿಂದ ಮಾತ್ರವಲ್ಲ, ಅವರದ್ದೇ ಪಕ್ಷದ ಮತ್ತು ಇತರ ಪಕ್ಷಗಳ ನಾಯಕರು, ಶಾಸಕರು, ಸ್ಥಳೀಯ ಸಂಸ್ಥೆ  ಪ್ರತಿನಿಧಿಗಳು ಹೀಗೆ ಯಾರಿಗೂ ನಿಲುಕದ ‘ಕಬ್ಬಿಣದ ಪರದೆ’ಯ ಹಿಂದಿನ ವ್ಯಕ್ತಿಯಾಗಿ ಬಿಟ್ಟಿದ್ದರು.  ಅವರ ನಿರಂಕುಶ, ಅಹಂಕಾರದ ಧೋರಣೆ, ಕೆಲವೇ ಬಂಟರ ಮೇಲೆ ಅವಲಂಬನೆ  ಅವರಿಗೆ ಮುಳುವಾಯಿತು. ಬರಿಯ ‘ನೇರ ನಗದು ವರ್ಗಾವಣೆ’ಯ ಯೋಜನೆಗಳಿಂದ ಜನರನ್ನು ತೃಪ್ತಿ ಪಡಿಸಬಹುದು.

ಮೂಲ ಸೌಕರ್ಯದ ಯೋಜನೆಗಳಿಗೆ ಸಂಪನ್ಮೂಲ ಒದಗಿಸುವಲ್ಲಿ; ಕೈಗಾರಿಕೀಕರಣ ಮತ್ತು ಖಾಲಿ ಇರುವ  ಸರಕಾರಿ ಉದ್ಯೋಗಗಳ ಭರ್ತಿ ಮೂಲಕ ನಿರುದ್ಯೋಗ ಪರಿಹಾರ ಇತ್ಯಾದಿಗಳ ಬಗ್ಗೆ ನಿರ್ಲಕ್ಷ; ದುಡಿಯುವ ಜನರ ವಿವಿಧ ಭಾಗಗಳ ಪ್ರಜಾಸತ್ತಾತ್ಮಕ ಹೋರಾಟಗಳ ದಮನ;  ತೆಲುಗು ದೇಶಂ ಇತ್ಯಾದಿ ವಿರೋಧ ಪಕ್ಷಗಳ ದಮನಕ್ಕೆ ಪ್ರಯತ್;, ಮೂರು ರಾಜಧಾನಿಗಳ ತುಗ್ಲಕ್ ಯೋಜನೆ; ರಾಜ್ಯಕ್ಕೆ ಎಷ್ಟು ದ್ರೋಹ ಮಾಡಿದರೂ, ಕೋಮುವಾದಿ-ಫ್ಯಾಸಿಸ್ಟ್ ನತ್ತ ಜಾರುತ್ತಿರುವ ಬಿಜೆಪಿ ಕೇಂದ್ರ ಸರಕಾರಕ್ಕೆ ಯಾವುದೇ ಪ್ರತಿರೋಧ ತೋರದೆ ಅಂಟಿಕೊಳ್ಳುವ ಧೋರಣೆ – ಇವೆಲ್ಲ ಜಗನ್ಮೋಹನ ರೆಡ್ಡಿ, ಅವರ ಪಕ್ಷ ಮತ್ತು ಸರಕಾರದ ವಿರುದ್ಧ ಆಕ್ರೋಶ ಮಡುಗಟ್ಟಿದ್ದು ಚುನಾವಣೆಯಲ್ಲಿ ಸ್ಫೋಟಗೊಂಡಿದೆ ಎನ್ನಬಹುದು.  ಒಟ್ಟಿಗೆ ನಡೆದ ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ರಾಜ್ಯ ಸರಕಾರದ ವೈಫಲ್ಯ ಮತ್ತು ಆಡಳಿತ ವಿರೋಧಿ ಆಕ್ರೋಶವೇ ಪ್ರಧಾನವಾಗಿದೆ.  ಕೇಂದ್ರ ಸರಕಾರದ ಸಾಧನೆ-ವೈಫಲ್ಯ , ರಾಷ್ಟ್ರೀಯ ವಿಷಯಗಳು ಗೌಣವಾದಂತಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ವೈಫಲ್ಯ ಮತ್ತು ಎರಡರ ಬಗೆಗೂ ತೀವ್ರ ಆಕ್ರೋಶ ಇರುವಾಗ ಅದನ್ನು ಬಿರುಸಿನ ಪ್ರಚಾರದ ಮೂಲಕ ಬಳಸಿಕೊಳ್ಳಲು ಇಂಡಿಯಾ ಕೂಟ ಸಹ ವಿಫಲವಾಗಿದೆ.

ಇದನ್ನೂ ನೋಡಿ: ನಿರಂಜನ್ 100| ಚಿರಸ್ಮರಣೆ – ನಿರಂಜನರ ಸಾಹಿತ್ಯ, ಹೋರಾಟ, ಮಹಿಳಾ ದೃಷ್ಟಿಕೋನJanashakthi Media

Donate Janashakthi Media

Leave a Reply

Your email address will not be published. Required fields are marked *