ಬೆಂಗಳೂರು : ಉತ್ತರ ಕರ್ನಾಟಕದ ಪ್ರಮುಖ ಪ್ರಶ್ನೆಯಾದ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆತ್ತಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ರಾಜ್ಯ ಸಮಿತಿ ಮುಖಂಡರು ಮುಖ್ಯಮಂತ್ರಿಯವರಿಗೆ ಬಹಿರಂಗ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ರಾಜ್ಯ ಘಟಕದ ಗೌರವಾಧ್ಯಕ್ಷ ಯು.ಬಸವರಾಜ ಅವರು, ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಲು ಡಿಸೆಂಬರ್ 5 ಮತ್ತು 6 ಎರಡು ದಿನಗಳ ಕಾಲ ಸಮಯ ನಿಗದಿಪಡಿಸಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಆದರೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘವು ಉತ್ತರ ಕರ್ನಾಟಕ ಭಾಗದಲ್ಲಿ ನೆನೆಗುದಿಗೆ ಬಿದ್ದಿರುವ ಅನೇಕ ಸಮಸ್ಯೆಗಳ ಕುರಿತು ಒಕ್ಕೂಟ ಹಾಗೂ ರಾಜ್ಯ ಸರಕಾರಗಳಿಂದ ಉಪೇಕ್ಷೆಗೊಳಗಾದ ದೌರ್ಜನ್ಯ, ದೇವದಾಸಿ ಪದ್ದತಿಯ ಕುರಿತು ಸದನದ ಗಮನ ಸೆಳೆಯಲು ಬಯಸುತ್ತೇವೆ ಮತ್ತು ಇದನ್ನು ಪ್ರಮುಖವಾಗಿ ಚರ್ಚಿಸಲು ಅನುವಾಗುವಂತೆ ಅಗತ್ಯ ಕ್ರಮವಹಿಸಲು ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಉತ್ತರ ಕರ್ನಾಟಕದ ಪ್ರಮುಖ ಪ್ರಶ್ನೆಗಳಲ್ಲೊಂದಾದ ದೌರ್ಜನ್ಯದ ದೇವದಾಸಿ ಪದ್ಧತಿಯು ಈಗಲೂ ಪರಿಶಿಷ್ಠ ಜಾತಿ ಹಾಗೂ ಪಂಗಡ ಮತ್ತು ಒಂದೆರಡು ಹಿಂದುಳಿದ ಜಾತಿ ಸಮುದಾಯಗಳ ಬಾಲಕಿಯರನ್ನು ಹಾಗೂ ಮಹಿಳೆಯರನ್ನು ತೀವ್ರವಾಗಿ ಬಾಧಿಸುತ್ತಲೆ ಇದೆ ಎಂದರು.
ಇದನ್ನೂ ಓದಿ:ದೇವದಾಸಿ ಮಹಿಳೆಯರ ಸಮೀಕ್ಷೆಗೆ ಸರ್ಕಾರದ ನಿರ್ಧಾರ: ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಸ್ವಾಗತ
ಉತ್ತರ ಕರ್ನಾಟಕದ ಸುಮಾರು14 ಜಿಲ್ಲೆಗಳ ಈ ಸಮುದಾಯಗಳ ಮಹಿಳೆಯರು ಮತ್ತು ಅವರ ಕುಟುಂಬದ ಸದಸ್ಯರು ಸುಮಾರು 4 ಲಕ್ಷಕ್ಕೂ ಅಧಿಕ ಕುಟುಂಬಗಳು ಬಾಧೆಗೊಳಗಾಗಿ ಸೋಂಕಿತರಾಗಿದ್ದಾರೆ. ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯಾಚರಣೆಯ ಭಾಗವಾಗಿ ಸಾವಿರಾರು ವರ್ಷಗಳಿಂದ ಈ ಸಾಮಾಜಿಕ ದೌರ್ಜನ್ಯದ ಪದ್ದತಿ ಮುಂದುವರೆದಿದೆ. ಇದರಿಂದ ಬಾಧಿತರು ದಲಿತ ಹಾಗೂ ಹಿಂದುಳಿದ ಸಮುದಾಯಗಳಾದರೆ ಇದರ ಫಲಾನುಭವಿಗಳು ಮೇಲ್ಜಾತಿಗಳ ಹಾಗೂ ಮೇಲ್ವರ್ಗಗಳ ಜನರಾಗಿದ್ದಾರೆ ಎಂದು ಹೇಳಿದರು.
ಸ್ವಾತಂತ್ರ್ಯ ದ ಪೂರ್ವದಲ್ಲಿಯೇ ಈ ಸಾಮಾಜಿಕ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ನಿಷೇಧಿಸಲಾಗಿದೆ. ಅದೇ ರೀತಿ ಕರ್ನಾಟಕ ಸರಕಾರವೂ 1984 ರಲ್ಲಿ ಮಗದೊಮ್ಮೆ ಕಾನೂನಿನ ಮೂಲಕ ನಿಷೇಧಿಸಿದೆ. ಆದಾಗಲೂ ಇದು ಮತ್ತು ಇದರ ಸೋಂಕು ಮುಂದುವರೆದಿರುವುದು ಸ್ಪಷ್ಟವಾಗಿ ಕಾನೂನಿನೊಳಗಿರುವ ದೋಷವನ್ನು ಮತ್ತು ಕೇವಲ ಕಾನೂನು ಮಾತ್ರವೇ ಇದನ್ನು ನಿವಾರಿಸದೆಂಬುದನ್ನು ಸಾಬೀತು ಪಡಿಸುತ್ತದೆ.
ಶತ ಶತಮಾನಗಳಿಂದ ಈ ಕೆಳ ಸಮುದಾಯಗಳ ಮೇಲೆ ಹೇರಿರುವ ಸಾಮಾಜಿಕ ದೌರ್ಜನ್ಯವೆಂದು ರಾಜ್ಯ ಸರಕಾರ ಪರಿಗಣಿಸದೆ, ಕೇವಲ ಅದು ಅನಿಷ್ಟ ಪದ್ಧತಿಯೆಂದು ಕರೆಯುವ ಮೂಲಕ ಸಮಸ್ಯೆಯನ್ನು ಕೀಳಂದಾಜು ಮಾಡಿರುವುದು ಮತ್ತು ದೇವದಾಸಿ ಮಹಿಳೆಯರು ಅವರ ಕುಟುಂಬದವರದೇ ತಪ್ಪು ಎಂಬಂತೆ ಕ್ರಮವಹಿಸಿರುವುದು ಮಾತ್ರವಲ್ಲಾ, ನಗೆ ಪಾಟಲಿನ ಪುನರ್ವಸತಿಗೆ ಕ್ರಮವಹಿಸಿರುವುದು ಕೂಡಾ ಈ ಸಮಸ್ಯೆ ಮುಂದುವರೆಯಲು ಕಾರಣವಾಗಿದೆ ಎಂದರು.
ಈಗಲಂತು ಒಂದಷ್ಠು ಹಣದ ಸಹಾಯ ನೀಡಿ, ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಿಕೊಡುವ ಮೂಲಕ ಹೊಣೆಗಾರಿಕೆಯಿಂದ ನುಸುಳಿಕೊಳ್ಳುವ ಕೆಲಸದಲ್ಲಿ ತೊಡಗಿಕೊಂಡಿರುವುದು ತೀವ್ರ ಖಂಡನೀಯವಾಗಿದೆ ಎಂದು ದೂರಿದರು.
ಇದನ್ನೂ ಓದಿ:ದೇವದಾಸಿಯರ ಮಕ್ಕಳಿಗೆ ವಸತಿ ಶಾಲೆಯಲ್ಲಿ ಶಿಕ್ಷಣ ನೀಡಿ: ನಾಗಮೋಹನ್ ದಾಸ್ ಆಗ್ರಹ
ದೇಶ ವ್ಯಾಪಿಯಾಗಿರುವ ಇವೆಲ್ಲಾದನ್ನೂ ಪರಿಗಣಿಸದೇ ಉಪೇಕ್ಷೆ ಮಾಡುತ್ತಿರುವುದು ಒಕ್ಕೂಟ ಸರಕಾರದ ನಿರ್ಲಕ್ಷ್ಯತನವನ್ನು ತೋರುತ್ತಿದೆ. ಗ್ರಾಮದ ಸೇವೆಗಾಗಿ ಸಿಡಿಯಾಡುವುದು, ಬೆತ್ತಲೆ ಸೇವೆ ಹಾಗೂ ಬೇವಿನುಡುಗೆ ಸೇವೆ ಮಾಡುವುದು, ಒಇಕುಳಿಕೊಂಡದ ಓಕುಳಿಯಲ್ಲಿ ತೊಡಗುವುದು, ಬರಗಾಲದ ನಿವಾರಣೆ ಹೆಸರಿನಲ್ಲಿ ಬಾಲಕಿಯರನ್ನು ದೌರ್ಜನ್ಯದ ಪದ್ಧತಿಗೆ ದೂಡುವುದು, ದೇವಸ್ಥಾನಗಳಲ್ಲಿ ನೃತ್ಯ, ಪೂಜೆ, ಗಾಯನ ಹಾಗೂ ಪರಿಚಾರಿಕೆಯರ ಕೆಲಸದಲ್ಲಿ ತೊಡಗಿಸುವುದು ಈ ಎಲ್ಲವೂ ಸಾಮಾಜಿಕ ದೌರ್ಜನ್ಯದ ಭಾಗವಾಗಿವೆ. ಮದುವೆಯಾದ ಹೆಣ್ಣುಮಕ್ಕಳು ತಾಯಿ ದೇವದಾಸಿ ಎಂಬ ಕಾರಣಕ್ಕೆ ಪರಿತ್ಯಕ್ತೆಯರಾಗುವುದು. ಗಂಡು ಮಕ್ಕಳು ಸೇರಿದಂತೆ ತಂದೆಯ ಹೆಸರೇಳಲಾಗದೆ ಅಪಮಾನಿತರಾಗುವುದು, ಸರಕಾರದ ಸೌಲಭ್ಯಗಳಿಂದ ವಂಚಿತರಾಗುವುದು ಎಲ್ಲವೂ ಸಾಮಾಜಿಕ ದೌರ್ಜನ್ಯಕ್ಕೆ ಹಿಡಿದ ಕನ್ನಡಿಗಳಾಗಿವೆ ಎಂದರು.
ದಲಿತ ಹಾಗೂ ಶೂದ್ರ ಸಮುದಾಯಗಳಿಗೆ ಆಸ್ತಿ ಹಾಗೂ ಭುಇಮಿ ಹಕ್ಕು, ಶಿಕ್ಷಣದ ಹಕ್ಕುಗಳನ್ನು ಶತಮಾನಗಳಿಂದ ವಂಚಿಸಿರುವುದು. ಅಸ್ಪೃಶ್ಯರು ಹಾಗೂ ಕೀಳು ಜಾತಿಯವರೆಂಬ ಕಾರಣಕ್ಕೆ ಮನೆಗೆಲಸಗಳ ಕೆಲಸಕ್ಕೆ ಕರೆಯದಿರುವುದು, ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಕೃಷಿರಂಗದಲ್ಲಿ ಕೆಲಸವಿರದಿರುವುದು. ದೇವರ ಹೆಸರಿನಲ್ಲಿ ಸಮನಸಾರದಲ್ಲಿ ಭಾಗಿಯಾಗುವ ಪುರುಷನಿಗೆ ಕುಟುಂಬದ ಹಾಗೂ ಮಕ್ಕಳ ಪಾಲನೆಯಲ್ಲಿ ಕರ್ತವ್ಯಗಳಿರದಿರುವುದು ಎಲ್ಲವೂ ಸಾಮಾಜಿಕ ದೌರ್ಜನ್ಯದ ಭಾಗವಾಗಿವೆ ಎಂದು ಹೇಳಿದರು.
ಸರಕಾರಗಳ ವಶದಲ್ಲಿ ದಶಲಕ್ಷಾಂತರ ಎಕರೆ ಜಮೀನು ವಶದಲ್ಲಿದ್ದರೂ ಮತ್ತು ದಲಿತರ ಅಭಿವೃದ್ಧಿಯ ಹೆಸರಿನಲ್ಲಿ ಪ್ರತಿ ವರ್ಷ 30,000 ಕೋಟಿ ರೂ ಗಳಿಗೂ ಅಧಿಕ ಮೊತ್ತ ಹೊಂದಿದ್ದರು ಈ ದೌರ್ಜನ್ಯದ ದೇವದಾಸಿ ಪದ್ಧತಿಯು ಅದರ ಸೋಂಕು ಈಗಲೂ ಮುಂದುವರೆಯಿತ್ತಿರುವುದಕ್ಕೆ ಅವುಗಳ ಮೇಲ್ಜಾತಿ ಹಾಗೂ ಮೇಲ್ವರ್ಗಗಳ ಪರವಾದ ರಾಜಕಾರಣವೇ ಕಾರಣವಾಗಿದೆ ಆರೋಪಿಸಿದರು.
ತಕ್ಷಣವೇ ಸರಕಾರ ತಮ್ಮ ಹಳೆಯ ಹಳಸಲು ನಿಲುಮೆಯನ್ನು ಕೈಬಿಟ್ಟು ಸಮಯ ಮಿತಿಯೊಳಗೆ ದೌರ್ಜನ್ಯದ ದೇವದಾಸಿ ಪದ್ಧತಿ ಬೇರು ಸಮೇತ ನಿರ್ಮೂಲನೆ ಮಾಡಲು ಗಂಭೀರ ಕ್ರಮವಹಿಸುವಂತೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಬಲವಾಗಿ ಒತ್ತಾಯಿಸುತ್ತದೆ. ದೌರ್ಜನ್ಯದ ನಿರ್ಮೂಲನೆಗಾಗಿ ಕೆಳಕಂಡ ಹಕ್ಕೊತ್ತಾಯಗಳನ್ನು ಸದನ ಪರಿಗಣಿಸುವಂತೆ ಮನವಿ ಮಾಡುತ್ತೇವೆ ಎಂದರು.
ಇದನ್ನೂ ಓದಿ:ದೇವದಾಸಿ ಅನಿಷ್ಟ ಪದ್ದತಿಯಿಂದ ಹೊರ ಬಂದು ಚೆಂದದ ಬದುಕು ಕಟ್ಟಿಕೊಂಡ ಮಂಜುಳ ಮಾಳ್ಗಿ
ಹಕ್ಕೊತ್ತಾಯಗಳು :
1) ಸಾಮಾಜಿಕ ದೌರ್ಜನ್ಯದ ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ಈ ಕೆಳಕಂಡ ಅಂಶಗಳ ಆಧಾರದಲ್ಲಿ ತಿದ್ದುಪಡಿ ಮಾಡಬೇಕು.
ಅ) ಈಗಾಗಲೇ ದೇವದಾಸಿ ಮಹಿಳೆಯರ ಜೊತೆ ಸಂಸಾರ ನಡೆಸಿದ್ದು ಅವರ ಸಂತಾನಕ್ಕೆ ಕಾರಣರಾದವರಿಗೆ ಹೊಣೆಗಾರಿಕೆ ನಿಗದಿಸಬೇಕು. ಅವರುಗಳ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ದೊರೆಯುವಂತೆ ಕ್ರಮವಹಿಸಬೇಕು. ಈ ವಿಚಾರದ ದೂರುಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಣೆಗಾರಿಕೆ ವಹಿಸಿ ಕ್ರಮವಹಿಸುವುದಾಗಬೇಕು.
ಆ) ಇನ್ನು ಮುಂದೆ ಯಾವುದೇ ದೌರ್ಜನ್ಯದ ದೇವದಾಸಿ ಪದ್ಧತಿಯ ಫಲಾನುಭವಿಯಾಗುವ ವ್ಯಕ್ತಿಯು, ದುರುದ್ದೇಶದಿಂದ ಈ ದೌರ್ಜ್ಯನಕ್ಕೆ ಕ್ರಮವಹಿಸುವ ಫಲಾನುಭವಿಯನ್ನು ಮುಖ್ಯ ಅಪರಾಧಿಯನ್ನಾಗಿಸಿ ಬಂಧಿಸಬೇಕು.
2) ಇದುವರೆಗಿನ ಎಲ್ಲ ವಯೋಮಾನದ ದೇವದಾಸಿ ಮಹಿಳೆಯರನ್ನು ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ಆ ಕುಟುಂಬದ ಪರಿತ್ಯಕ್ತ ಮಹಿಳೆಯರನ್ನು ಪ್ರತ್ಯೇಕವಾಗಿ ಗಣತಿ ಮಾಡಿ ಪುನರ್ವಸತಿಗೆ ಕ್ರಮವಹಿಸಬೇಕು. ವಯೋಮಾನ ಭೇದವಿಲ್ಲದೆ ಮಾಸಿಕ ಸಹಾಯಧನವಾಗಿ ತಲಾ 5,000 ರೂ ಒದಗಿಸಬೇಕು.
3) ಕೃಷಿಯಲ್ಲಿ ತೊಡಗಲು ಬಯಸುವ ಎಲ್ಲ ಮಹಿಳೆಯರಿಗೆ ಮತ್ತು ದಲಿತ ಕುಟುಂಬಗಳಿಗೆ ಮುಂದಿನ ಹತ್ತು ವರ್ಷಗಳೊಳಗೆ ಪ್ರತಿ ಕುಟುಂಬಕ್ಕೆ ಕನಿಷ್ಠ ತಲಾ ಐದು ಎಕರೆ ನೀರಾವರಿ ಜಮೀನನ್ನು ಒದಗಿಸಲು ಯೋಚಿಸಬೇಕು. ಇದಕ್ಕಾಗಿ ಪ್ರತಿಯೊಂದು ಗ್ರಾಮದಲ್ಲಿ ಹೆಚ್ಚು ಭೂಮಿ ಹೊಂದಿರುವವರ ಜಮೀನುಗಳನ್ನು ಭೂ ಸ್ವಾಧೀನ ಮಾಡಬೇಕು.
4) ಕನಿಷ್ಠ ಒಂದು ಲಕ್ಷ ರೂ ಸಹಾಯಧನವಿರುವ ಎರಡು ಲಕ್ಷ ರೂಗಳ ಸ್ವಯಂ ಉದ್ಯೋಗದ ಸಾಲ ಸೌಲಭ್ಯ ಸರಕಾರದ ಗ್ಯಾರಂಟಿಯೊಂದಿಗೆ ಐದು ವರ್ಷಗಳ ಬಡ್ಡಿರಹಿತ ಸಾಲ ಒದಗಿಸಬೇಕು.
5) ದೇವದಾಸಿ ಮಹಿಳೆಯರ ಮಕ್ಕಳು ಅವರ ನಡುವೆ ವಿವಾಹವಾದರೂ ತಲಾ ಮೂರು ಲಕ್ಷರೂ ಸಹಾಯ ಒದಗಿಸಬೇಕು.
ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ಮಾಸಿಕ ತಲಾ10,000 ರೂ ನಿರುದ್ಯೋಗ ಭತ್ಯೆಒದಗಿಸಬೇಕು.
6) ಪುನರ್ವಸತಿ ಯೋಜನೆಯನ್ನು ಯಾವುದೇ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಿಕೊಡಬಾರದು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ನಡೆಸಬೇಕು. ಗಣತಿಪಟ್ಟಿಯಲ್ಲಿರುವ ಮಹಿಳೆಯರ ವಯೋ ಹಿರಿತನದ ಆಧಾರದಲ್ಲಿ ಎಲ್ಲಾ ಸೌಲಭ್ಯಗಳು ಕನಿಷ್ಟ 10 ವರ್ಷದ ಕಾಲ ಮಿತಿಯೊಳಗೆ ಯಾವುದೇ ಅರ್ಜಿಗಳನ್ನು ಪಡೆಯದೇ ಅವರ ಬ್ಯಾಂಕ್ ಖಾತೆಗೆ ನೇರ ಸೌಲಭ್ಯ ವಿತರಿಸಲು ಕ್ರಮ ವಹಿಸಬೇಕು ಮತ್ತು ಆ ಮೂಲಕ ಭ್ರಷ್ಠಾಚಾರವನ್ನು ತಡೆಯಬೇಕು ಎಂದರು.
ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ರಾಜ್ಯ ಘಟಕದ ಗೌರವಾಧ್ಯಕ್ಷ ಯು.ಬಸವರಾಜ, ರಾಜ್ಯ ಅಧ್ಯಕ್ಷೆ ಶ್ರೀಮತಿ ಹುಲಿಗೆಮ್ಮ ಗಂಗಾವತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ.ಬಿ.ಮಾಳಮ್ಮ, ರಾಜ್ಯ ಉಪಾದ್ಯಕ್ಷ ಜಿ.ನಾಗರಾಜ , ಗದಗ ಜಿಲ್ಲಾ ಗೌರವಾದ್ಯಕ್ಷರು ಬಾಳು ರಾಠೋಡ್ ವಕೀಲರು , ಗದಗ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ದೇವಮ್ಮ , ಗದಗ ಜಿಲ್ಲಾ ಖಜಾಂಚಿ ಶ್ರಿಮತಿ ಹುಲಿಗೆಮ್ಮ, ಗದಗ ಜಿಲ್ಲಾ ಮುಖಂಡರು ಶ್ರೀಮತಿ ಪಕ್ಕೀರಮ್ಮ ಉಪಸ್ಥಿತರಿದ್ದರು.
ವಿಡಿಯೋ ನೋಡಿ:ದೇವದಾಸಿ ಪದ್ದತಿ ಹುಟ್ಟಿದ್ದು ಸನಾತನ ಧರ್ಮದಿಂದ – ಬಿ. ಮಾಳಮ್ಮ Janashakthi Media