- ಜೂನ್ 24 :ಅಗ್ನಿವೀರ ನೇಮಕಾತಿ ಪ್ರಕ್ರಿಯೆ ಆರಂಭವಾಗುವ ದಿನ ರಾಷ್ಟ್ರವ್ಯಾಪಿ ಪ್ರತಿಭಟನೆ ದಿನಾಚರಣೆಗೆ ಕರೆ
- ಜಿಲ್ಲಾ ಮತ್ತು ತಹಸಿಲ್ ಕೇಂದ್ರಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರ ಸಲ್ಲಿಸಲಾಗುವುದು
- ಅಗ್ನಿಪಥ ಯೋಜನೆ ರೈತರ ಮೇಲೆ ಸೇಡು ತೀರಿಸಿಕೊಳ್ಳುವ ಮತ್ತೊಂದು ತಂತ್ರ
- ಜುಲೈ 3 ರಂದು ಘಾಜಿಯಾಬಾದ್‌ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಮುಂದಿನ ರಾಷ್ಟ್ರೀಯ ಸಭೆ
ನವದೆಹಲಿ : ಸಶಸ್ತ್ರ ಪಡೆಗಳ ನೇಮಕಾತಿಗೆ ಹೊಸ ಅಗ್ನಿಪಥ್ ಯೋಜನೆ ವಿರುದ್ಧ ಯುವಕರ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ) ತನ್ನ ಬೆಂಬಲವನ್ನು ಘೋಷಿಸಿದೆ. ಪ್ರತಿಭಟನೆಯನ್ನು ಶಾಂತಿಯುತವಾಗಿಡಲು ಮನವಿ ಮಾಡಿದ ಸಂಯುಕ್ತ ರೈತ ಮೋರ್ಚಾವು ಈ ಯೋಜನೆಯನ್ನು ಸೈನ್ಯ-ವಿರೋಧಿ, ರೈತ ವಿರೋಧಿ ಮತ್ತು ದೇಶ ವಿರೋಧಿ ಎಂದು ಬಣ್ಣಿಸಿದೆ. “ಜೈ ಜವಾನ್ ಜೈ ಕಿಸಾನ್” ಘೋಷಣೆಯ ಸ್ಪೂರ್ತಿಯನ್ನು ನಾಶಮಾಡಲು ಕೇಂದ್ರ ಸರ್ಕಾರವು ಮುಂದಾಗಿರುವಾಗ, ಈ ಹೋರಾಟದಲ್ಲಿ ಯೋಧರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವುದು ರೈತ ಚಳವಳಿಯ ಕರ್ತವ್ಯವಾಗಿದೆ. ಅದರಂತೆ, ಸಂಯುಕ್ತ ಕಿಸಾನ್ ಮೋರ್ಚಾ ಈ ಶುಕ್ರವಾರ, ಜೂನ್ 24 ರಂದು ದೇಶಾದ್ಯಂತ ಪ್ರತಿಭಟನಾ ದಿನವನ್ನು ಆಚರಿಸಲಿದೆ. ಹರಿಯಾಣದ ಕರ್ನಾಲ್ ನಲ್ಲಿ ನಡೆದ ಸಂಯುಕ್ತ ಕಿಸಾನ್ ಮೋರ್ಚಾದ 7 ಸದಸ್ಯರ ಸಮನ್ವಯ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಈ ಯೋಜನೆಯು ದೇಶದ ಭವಿಷ್ಯದ ಜೊತೆ ಆಟವಾಡುತ್ತಿದೆ ಎಂದು ಬಣ್ಣಿಸಿದ ಸಂಯುಕ್ತ ಕಿಸಾನ್ ಮೋರ್ಚಾ, ಇದು ರಾಷ್ಟ್ರೀಯ ಭದ್ರತೆ ಮತ್ತು ನಿರುದ್ಯೋಗಿ ಯುವಕರ ಕನಸುಗಳೊಂದಿಗೆ ಮಾತ್ರವಲ್ಲ, ದೇಶದ ರೈತ ಕುಟುಂಬಗಳೊಂದಿಗೆ ಆಟವಾಡುತ್ತಿದೆ ಎಂದು ಹೇಳಿದರು. ಈ ದೇಶದ ಜವಾನ ಸಮವಸ್ತ್ರಧಾರಿ ರೈತ. ಬಹುತೇಕ ಸೈನಿಕರು ರೈತ ಕುಟುಂಬದವರು. ಸೇನಾ ಉದ್ಯೋಗವು ಲಕ್ಷಾಂತರ ರೈತ ಕುಟುಂಬಗಳ ಗೌರವ ಮತ್ತು ಆರ್ಥಿಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. “ಒಂದು ಶ್ರೇಣಿ ಒಂದು ಪಿಂಚಣಿ’ ಎಂಬ ಆಶ್ವಾಸನೆಯೊಂದಿಗೆ ಮಾಜಿ ಸೈನಿಕರನ್ನು ಒಗ್ಗೂಡಿಸಿ ವಿಜಯಯಾತ್ರೆ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಇದೀಗ ಈ ‘ಶ್ರೇಣಿ ಇಲ್ಲ-ಪಿಂಚಣಿ ಇಲ್ಲ’ ಯೋಜನೆಗೆ ಚಾಲನೆ ನೀಡಿರುವುದು ದೇಶಕ್ಕೆ ನಾಚಿಕೆಗೇಡಿನ ಸಂಗತಿ. ಸೇನೆಯಲ್ಲಿ ನಿಯಮಿತ ನೇಮಕಾತಿಗೆ ಭಾರೀ ಕಡಿವಾಣ ಹಾಕಿರುವುದು ಹಲವು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುವ ಕನಸನ್ನು ನನಸು ಮಾಡಿಕೊಳ್ಳವು ನಿರೀಕ್ಷೆಯಿಟ್ಟುಕೊಂಡಿದ್ದ ರೈತ ಪುತ್ರರಿಗೆ ಮಾಡಿದ ದ್ರೋಹ. ಈ ಯೋಜನೆಯಲ್ಲಿ, “ಅಖಿಲ ಭಾರತ ಅಖಿಲ ದರ್ಜೆ” ನಿಯಮದಡಿಯಲ್ಲಿ ನೇಮಕಾತಿ ಮಾಡುವುದರಿಂದ ರೈತ ಚಳುವಳಿ ಹೆಚ್ಚು ಸಕ್ರಿಯವಾಗಿರುವ ಪ್ರದೇಶಗಳ ನೇಮಕಾತಿಯಲ್ಲಿ ದೊಡ್ಡ ಕಡಿತ ಉಂಟಾಗುತ್ತದೆ ಎಂಬುದು ಕಾಕತಾಳೀಯವಲ್ಲ. ರೈತ ಚಳವಳಿಯ ಸೋಲಿನಿಂದ ಕಂಗೆಟ್ಟಿರುವ ಈ ಸರ್ಕಾರ ರೈತರ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತೊಂದು ತಂತ್ರ ಹೂಡಿದೆ ಎಂದು ಎಸ್‍ಕೆಎಂ ಹೇಳಿದೆ.
ಅಗ್ನಿವೀರ್ ನೇಮಕಾತಿ ಆರಂಭದ ದಿನವಾದ ಜೂನ್ 24 ಶುಕ್ರವಾರದಂದು ಯೋಜನೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನಾ ದಿನವನ್ನು ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ. ಅಂದು “ಜೈ ಜವಾನ್ ಜೈ ಕಿಸಾನ್” ಘೋಷಣೆಯೊಂದಿಗೆ ಎಲ್ಲಾ ಜಿಲ್ಲೆ, ತಹಸಿಲ್ ಅಥವಾ ಬ್ಲಾಕ್ ಮುಖ್ಯಕಚೇರಿಗಳಲ್ಲಿ ಶಾಂತಿಯುತ ಪ್ರದರ್ಶನಗಳನ್ನು ಆಯೋಜಿಸಿದ ನಂತರ ಭಾರತದ, ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲಾಗುವುದು ಮತ್ತು ಕೇಂದ್ರ ಸರ್ಕಾರದ ಪ್ರತಿಕೃತಿಯನ್ನು ಸುಡಲಾಗುವುದು. ಈ ಯೋಜನೆಯನ್ನು ವಿರೋಧಿಸುವ ಎಲ್ಲಾ ಯುವಕರು ಈ ಶಾಂತಿಯುತ ಪ್ರತಿಭಟನೆಯ ಘನತೆಯನ್ನು ಗೌರವಿಸುತ್ತ ಈ ಪ್ರತಿಭಟನಾ ದಿನದಲ್ಲಿ ಪಾಲ್ಗೊಳ್ಳುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಮನವಿ ಮಾಡಿದೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ದೇಶದ ಎಲ್ಲಾ ಸಾಮೂಹಿಕ ಸಂಘಟನೆಗಳು, ಜನಾಂದೋಲನಗಳು ಮತ್ತು ರಾಜಕೀಯ ಪಕ್ಷಗಳಿಗೆ ಎಸ್‍ಕೆಎಂ ಮನವಿ ಮಾಡಿದೆ.