ನವದೆಹಲಿ: ಹರಿಯಾಣದ ಶಂಬು ಗಡಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ನಡೆಸಿದ ತೀವ್ರ ದಾಳಿಯಿಂದ ಮೃತಪಟ್ಟ ಯುವ ರೈತ ಶುಭಕರನ್ ಸಿಂಗ್ ಅವರ ಹತ್ಯೆಗೆ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಆಕ್ರೋಶ ವ್ಯಕ್ತಪಡಿಸಿದ್ದು, ಫೆಬ್ರವರಿ 23ರಂದು ‘ಆಕ್ರೋಶ ದಿನ’ವವನ್ನು ಆಚರಿಸಲು ದೇಶದ ಜನತೆಗೆ ಕರೆ ನೀಡಿದೆ. ಇಷ್ಟೆ ಅಲ್ಲದೆ, ದೆಹಲಿ ಚಲೋ ಹೋರಾಟಕ್ಕೆ, ವಿಷಯಾಧಾರಿತವಾಗಿ ಬೆಂಬಲ ನೀಡುವ ಬಗ್ಗೆ ಎಸ್‌ಕೆಎಂ ತೀರ್ಮಾನ ಕೈಗೊಂಡಿದೆ.
ಯುವ ರೈತನ ಹತ್ಯೆಯ ವಿರುದ್ಧ ದೇಶಾದ್ಯಂತ ರೈತಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ. ದೆಹಲಿ ಗಡಿಗಳಲ್ಲಿ ಒಂದು ವರ್ಷಗಳ ಕಾಲ ರೈತ ಚಳುವಳಿಯನ್ನು ಮುನ್ನಡೆಸಿದ್ದ 500 ಕ್ಕೂ ಹೆಚ್ಚು ಸಂಘಟನೆಗಳ ವೇದಿಕೆಯಾಗಿರುವ ಎಸ್‌ಕೆಎಂ ಫೆಬ್ರವರಿ 22 ರಂದು ಛತ್ತೀಸ್ಗಢದಲ್ಲಿ ಸಭೆ ಸೇರಿ ಹಲವು ಮಹತ್ತರವಾದ ತೀರ್ಮಾನಗಳನ್ನು ಕೈಗೊಂಡಿದೆ.
ಇದನ್ನೂ ಓದಿ: ಖಾಸಗಿ ಸೇರಿದಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ; ಗೊಂದಲಕ್ಕೆ ಅಂತ್ಯ ಹಾಡಿದ ಸರ್ಕಾರ
ಆಕ್ರೋಶ್ ದಿವಸ್ 23 ಫೆಬ್ರವರಿ
ಯುವ ರೈತನ ಸಾವಿಗೆ ಕಾರಣವಾದ ಪೊಲೀಸ್ ದಾಳಿಯ ವಿರುದ್ಧ ಫೆಬ್ರವರಿ 23 ರಂದು ದೇಶಾಧ್ಯಂತ ಆಕ್ರೋಶ್ ದಿವಸ್ ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ತೀರ್ಮಾನಿಸಿದೆ. ಇದೇ ಸಂದರ್ಭದಲ್ಲಿ ಹುತಾತ್ಮ ರೈತ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡಬೇಕೆಂದು ಅದು ಆಗ್ರಹಿಸಿದೆ.
ಟ್ರ್ಯಾಕ್ಟರ್ ಪೆರೇಡ್ ಫೆಬ್ರವರಿ 26
ಭಾರತ ಎಲ್ಲಾ ರೀತಿಯ ಗ್ಯಾಟ್ ಒಪ್ಪಂದಗಳಿಂದ ಹೊರಬರಬೇಕು ಮತ್ತು ಕೃಷಿಯನ್ನು ಗ್ಯಾಟ್ ಒಪ್ಪಂದದಿಂದ ಹೊರಗಿಡಬೇಕು ಎಂಬ ಬೇಡಿಕೆಯ ಆಧಾರದಲ್ಲಿ ಫೆಬ್ರವರಿ 26 ರಂದು ದೇಶಾದ್ಯಂತ ಸಾವಿರಾರು ಸಂಖ್ಯೆಯ ಟ್ರ್ಯಾಕ್ಟರ್ ಗಳ ಮೆರವಣಿಗೆಯನ್ನು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ರಸ್ತೆಯ ಒಂದು ಬದಿಯಲ್ಲಿ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ.
ಇದನ್ನೂ ಓದಿ: ಕೇರಳ | ಮಹಿಳೆಗೂ ಸಮಾನ ವೇತನ ಖಚಿತಪಡಿಸಲು ಜೆಂಡರ್ ಆಡಿಟ್ – ಸಿಎಂ ಪಿಣರಾಯಿ ವಿಜಯನ್
ನವದೆಹಲಿಯಲ್ಲಿ ಆಲ್ ಇಂಡಿಯಾ ಕಿಸಾನ್ ಮಜ್ದೂರ್ ಮಹಾ ಪಂಚಾಯತ್ 14 ಮಾರ್ಚ್
ದೇಶದ ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರನ್ನು ಒಳಗೊಂಡಂತೆ ಲಕ್ಷಾಂತರ ಸಂಖ್ಯೆಯಲ್ಲಿ ದೆಹಲಿಯ ರಾಮಲೀಲ ಮೈಧಾನದಲ್ಲಿ ಅಖಿಲ ಭಾರತ ರೈತ ಕಾರ್ಮಿಕರ ಮಹಾ ಪಂಚಾಯತ್ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ತೀರ್ಮಾನಿಸಿದೆ.
ಸ್ವಾಮಿನಾಥನ್ ವರದಿ ಜಾರಿ, ವಿದ್ಯುತ್ ಖಾಸಗೀಕರಣಕ್ಕೆ ವಿರೋಧ, ಕಾರ್ಮಿಕ ಕಾಯ್ದೆ ಬದಲಾವಣೆ ಸೇರಿ ಒಂದು ವರ್ಷದ ಹೋರಾಟದಲ್ಲಿ ಹುತಾತ್ಮರಾದ 736 ರೈತ ಕುಟುಂಬಕ್ಕೆ ಮತ್ತು ಈಗ ಹುರಾತ್ಮರಾದ 4 ಕುಟುಂಬಕ್ಕೆ ಸೇರಿ ಒಟ್ಟು 740 ಕುಟುಂಬಕ್ಕೆ ಪರಿಕಾರ ನೀಡಬೇಕು ಎಂದು ಆಗ್ರಹಿಸಿ ಹೋರಾಟ ನಡೆಸುವ ಬಗ್ಗೆ ಎಸ್‌ಕೆಎಂ ತೀರ್ಮಾನಿಸಿದೆ.
ದೇಶದ ಎಲ್ಲಾ ರೈತ ಸಂಘಟನೆಗಳು ಒಟ್ಟಾಗಿವೆ ಎಂಬ ಸಂದೇಶವನ್ನು ಪತ್ರಿಕಾಗೋಷ್ಟಿ ನಡೆಸಿ ಘೋಷಿಸುವುದರ ಜೊತೆಗೆ ರೈತ ಸಮುದಾಯದ ಐಕ್ಯತೆಯನ್ನು ಒಡೆಯಲು ಯಾವ ಶಕ್ತಿಗಳಿಗೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಎಸ್‌ಕೆಎಂ ಹೇಳಿದೆ. ಇದೇ ಸಂದರ್ಭದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಈ ಹೋರಾಟದ ಬೆಳವಣಿಗೆಗಳನ್ನು ಚರ್ಚಿಸಲು ರೈತ ಮುಖಂಡರಾದ ಹನ್ನನ್ ಮೊಲ್ಲಾ, ರಾಜೇವಾಲ್, ಯದುವೀರ್ ಸಿಂಗ್, ರವೀಂದ್ರ ಪಟಿಯಾಲ, ಉಗ್ರಾಹಾನ್ ಮತ್ತು ದರ್ಶನ್ ಪಾಲ್ ಅವರನ್ನು ಒಳಗೊಂಡ 6 ಜನರ ಸಮಿತಿಯೊಂದನ್ನು ರಚಿಸಲಾಗಿದೆ.
ವಿಡಿಯೊ ನೋಡಿ: ‘ತತ್ವಜ್ಞಾನಿ ಬಸವಣ್ಣ ಸಾಂಸ್ಕೃತಿಕ ನಾಯಕ’ ಹಿನ್ನೆಲೆ ಮತ್ತು ಆಗಬೇಕಾದ ಕೆಲಸಗಳು – ವಿಶ್ಲೇಷಣೆ : ಮೀನಾಕ್ಷಿ ಬಾಳಿ