ಸರಕಾರದಿಂದ ಔಪಚಾರಿಕ ಆಶ್ವಾಸನೆ ಸಿಗುವ ವರೆಗೆ ರೈತರ ಚಳುವಳಿ ಮುಂದುವರೆಯುತ್ತದೆ – ಎಸ್ ಕೆ ಎಂ

ಸರಕಾರದೊಂದಿಗೆ ವ್ಯವಹರಿಸಲು ಐವರು ಸದಸ್ಯರ ಸಮಿತಿ ರಚನೆ-ಸಂಯುಕ್ತ ಕಿಸಾನ್ ಮೋರ್ಚಾ

ನವದೆಹಲಿ : ಸಂಯುಕ್ತ ಕಿಸಾನ್ ಮೋರ್ಚಾ ಡಿಸೆಂಬರ್ 4ರಂದು ಒಂದು  ಮಹತ್ವದ ಸಭೆಯನ್ನು ನಡೆಸಿತು. ರೈತ ಆಂದೋಲನದ ಬಾಕಿ ಇರುವ ಬೇಡಿಕೆಗಳು ಮತ್ತು ಭಾರತ ಸರ್ಕಾರದಿಂದ ಔಪಚಾರಿಕ ಪ್ರತಿಕ್ರಿಯೆಯ ಕೊರತೆಯ ಬಗ್ಗೆ ಚರ್ಚಿಸಲು ನಡೆದ ಈ ಸಭೆ ಭಾರತ ಸರ್ಕಾರದಿಂದ ಔಪಚಾರಿಕ ಮತ್ತು ತೃಪ್ತಿಕರ ಪ್ರತಿಕ್ರಿಯೆಗಳು ಬರುವವರೆಗೆ ರೈತರ ಆಂದೋಲನವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗುವುದು ಎಂದು ಸರ್ವಾನುಮತದಿಂದ ನಿರ್ಧರಿಸಿತು. ನವೆಂಬರ್ 19 ರಂದು 3 ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನ ಮಂತ್ರಿಗಳು ಪ್ರಕಟಿಸಿದ ನಂತರ ನವಂಬರ್ 21ರಂದು  ಎಸ್.ಕೆ.ಎಂ. ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ಆರು ಬೇಡಿಕೆಗಳನ್ನು ಮುಂದಿಡಲಾಗಿತ್ತು.

ಕೇಂದ್ರ ಸರಕಾರ ಈ ಪತ್ರಕ್ಕೆ ಸ್ಪಂದಿಸುವ ಬದಲು ಅನೌಪಚಾರಿಕವಾಗಿ ಕೆಲಸ ಮಾಡಲು ಬಯಸುವಂತಿದೆ ಮತ್ತು ರೈತರು ಎತ್ತಿರುವ ಪ್ರಶ‍್ನೆಗಳಿಗೆ ಚೂರು-ಚೂರಾಗಿ ಪ್ರತಿಕ್ರಿಯಿಸುತ್ತಿದೆ. ರೈತ ಸಂಘಟನೆಗಳು ಅಲ್ಪ-ಸ್ವಲ್ಪ ಮೌಖಿಕ ಭರವಸೆಗಳನ್ನು ನಂಬಿಕೊಂಡು ಚಳುವಳಿಯನ್ನು ಹಿಂತೆಗೆದುಕೊಂಡ ನಂತರ ಸರಕಾರ ಹಿಂದೇಟು ಹಾಕಿರುವ ಕಹಿ ಅನುಭವದಿಂದಾಗಿ,  ತಾವು ಎತ್ತಿದ ಪ್ರತಿಯೊಂದು ಪ್ರಶ್ನೆಗೆ ಔಪಚಾರಿಕ ಸ್ಪಂದನೆ ದೊರೆಯದೆ ಈ ಹೋರಾಟವನ್ನು ನಿಲ್ಲಿಸುವುದಿಲ್ಲ, ಮತ್ತು ಈ ಆಂದೋಲನದ ಭಾಗವಾಗಿ ರೈತರು ಹಾಗೂ ಅವರ ಬೆಂಬಲಿಗರ ವಿರುದ್ಧ ಹೂಡಿರುವ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವ ಭರವಸೆ  ಔಪಚಾರಿಕವಾಗಿ ಬರಬೇಕು  ಎಂದು ಸಭೆಯ ನಂತರ ಎಸ್‌ಕೆಎಂ ಮುಖಂಡರು ಹೇಳಿದ್ದಾರೆ.

ಈ  ಸಭೆಯಲ್ಲಿಬಾಕಿ ಇರುವ ಪ್ರಶ್ನೆಗಳನ್ನು ಕುರಿತಂತೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಅಶೋಕ್ ಧವಳೆಬಲ್ಬೀರ್ ಸಿಂಗ್ ರಾಜೇವಾಲ್ಗುರ್ನಾಮ್ ಸಿಂಗ್ ಚದುನಿಶಿವ ಕುಮಾರ್ ಕಕ್ಕಾಜಿ ಮತ್ತು ಯುಧ್ವೀರ್ ಸಿಂಗ್ ಒಳಗೊಂಡ 5 ಸದಸ್ಯರ ಸಮಿತಿಯನ್ನು ಎಸ್‌ಕೆಎಂ ರಚಿಸಿದೆ.

ರೈತರ ಚಳುವಳಿ  ಈ ಮೊದಲೇ ಎಂಎಸ್‍ಪಿ ಗೆ ಕಾನೂನಿನ ಖಾತ್ರಿ, ವಿದ್ಯುತ್‍ ತಿದ್ದುಪಡಿ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ದೆಹಲಿ ವಾಯು ಗುಣಮಟ್ಟ ನಿಯಂತ್ರಣಕ್ಕಾಗಿ ಆಯೋಗವನ್ನು ಸ್ಥಾಪಿಸಲು ಸಂಬಂಧಿಸಿದ ಕಾನೂನಿನಲ್ಲಿ ಸೆ.ಕ್ಷನ್‍ 15ನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿತ್ತು. . ಉಳಿದ ಮೂರು ಆಗ್ರಹಗಳು ಈ ಚಳುವಳಿ ಕುರಿತಂತೆ ಸರಕಾರದ ದುರಹಂಕಾರದ ವರ್ತನೆಯಿಂದ ಉಂಟಾದ ಪ್ರಶ್ನೆಗಳು- ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಚಂಡೀಗಢ, ಮಹಾರಾಷ್ಟ್ರ, ರಾಜಸ್ಥಾನ ಇತ್ಯಾದಿ ವಿವಿಧ ರಾಜ್ಯಗಳಲ್ಲಿ ಪ್ರತಿಭಟನಾ ನಿರತ ರೈತರು ಮತ್ತು ಅವರ ಬೆಂಬಲಿಗರ ಮೇಲೆ ಹೂಡಲಾದ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಈಗ ಸುಮಾರು 708 ರಷ್ಟಿರುವ ಚಳವಳಿಯ ಹುತಾತ್ಮರ ಬಂಧುಗಳಿಗೆ ಪುನರ್ವಸತಿ ಮತ್ತು ಈ ಹುತಾತ್ಮರ  ಸ್ಮಾರಕಕ್ಕಾಗಿ ಭೂಮಿ ಹಂಚಿಕೆ; ಹಾಗೂ ಲಖಿಂಪುರ ಖೇರಿ ರೈತರ ಹತ್ಯಾಕಾಂಡದಲ್ಲಿ ಅಜಯ್ ಮಿಶ್ರಾ ಟೆನಿಯ ಬಂಧನ ಮತ್ತು ವಜಾ ಆಗಬೇಕು ಎಂದು ಎಸ್ ಕೆ ಎಂ ಆಗ್ರಹಿಸಿದೆ.

ಎಸ್‍ಕೆಎಂ ಈ ಸಭೆಯಲ್ಲಿ ರಚಿಸಿದ ಸಮಿತಿ  ಈ ವಿಷಯಗಳ ಕುರಿತು ಕೆಲವು ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸಬೇಕಾದ ರಾಜ್ಯ ಮಟ್ಟದ ತಂಡಗಳನ್ನು ಸಹ ನಿರ್ಧರಿಸುತ್ತದೆ ಎಂದಿರುವ ಎಸ್‍ಕೆಎಂ, ಮುಂದಿನ ಎರಡು ದಿನಗಳನ್ನು ಭಾರತ ಸರ್ಕಾರದ ಪ್ರತಿಕ್ರಿಯೆಗೆ ಮತ್ತು ಎಸ್‍ಕೆಎಂ ರಚಿಸಿರುವ ಸಮಿತಿಯೊಂದಿಗೆ ಮಾತುಕತೆ ನಡೆಸಿ ಒಂದು ಇತ್ಯರ್ಥಕ್ಕೆ ಬರಲು ಅನುವು ಮಾಡಿಕೊಡಲು ಬಿಟ್ಟು, ಮುಂದಿನ ಸಭೆಯನ್ನು ಡಿಸೆಂಬರ್ 7 ಕ್ಕೆ ನಿಗದಿಪಡಿಸಿದೆ ಎಂದು  ಬಲ್ಬೀರ್ ಸಿಂಗ್ ರಾಜೇವಾಲ್, ಡಾ ದರ್ಶನ್ ಪಾಲ್, ಗುರ್ನಾಮ್ ಸಿಂಗ್ ಚಾರುನಿ, ಹನ್ನನ್ ಮೊಲ್ಲಾ, ಜಗಜಿತ್ ಸಿಂಗ್ ದಲ್ಲೆವಾಲ್, ಜೋಗಿಂದರ್ ಸಿಂಗ್ ಉಗ್ರಹನ್, ಶಿವಕುಮಾರ್ ಶರ್ಮಾ ‘ಕಕ್ಕಾಜಿ’, ಯುದ್ವೀರ್ ಸಿಂಗ್, ಮತ್ತು  ಯೋಗೇಂದ್ರ ಯಾದವ್ ಸಂಯುಕ್ತ ಕಿಸಾನ್‍ ಮೋರ್ಚಾದ ಪರವಾಗಿ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *