ಸಿಪಿಐ(ಎಂ)ನ ಅತ್ಯುನ್ನತ ನಾಯಕ, ಎಡ ಪಂಥೀಯ ಚಳುವಳಿಯ ಅತ್ಯುತ್ತಮ ನಾಯಕ ಮತ್ತು ಸುಪ್ರಸಿದ್ಧ ಮಾರ್ಕ್ಸ್ವಾದಿ ಸಿದ್ಧಾಂತಿ
ಈಗಾಗಲೇ ವರದಿಯಾಗಿರುವಂತೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಸೆಪ್ಟೆಂಬರ್ 12 ರಂದು ಮಧ್ಯಾಹ್ನ 3.03 ಕ್ಕೆ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಯಲ್ಲಿ ನಿಧನರಾಗಿದ್ದಾರೆ.
ಅವರು ಶ್ವಾಸನಾಳದ ಸೋಂಕಿನಿಂದ ಬಳಲುತ್ತಿದ್ದು, ಅದರಿಂದ ಉಂಟಾದ ತೊಡಕುಗಳಿಂದ ನಿಧನರಾದರು. ಅವರಿಗೆ ಏಮ್ಸ್ ನಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆತಿದ್ದು ಇದಕ್ಕಾಗಿ ಅಲ್ಲಿನ ವೈದ್ಯರು, ನರ್ಸಿಂಗ್ ಸಿಬ್ಬಂದಿ ಮತ್ತು ಸಂಸ್ಥೆಯ ನಿರ್ದೇಶಕರಿಗೆ ಸಿಪಿಐ(ಎಂ) ಧನ್ಯವಾದಗಳನ್ನು ಅರ್ಪಿಸಿದೆ.
ಸಾರ್ವಜನಿಕ ವೀಕ್ಷಣೆ ಮತ್ತು ಶ್ರದ್ಧಾಂಜಲಿ ಸಲ್ಲಿಸಲು ಅನುವಾಗುವಂತೆ ಸಪ್ಟಂಬರ್ 13ರಂದು ಅವರ ಮೃತ ದೇಹವನ್ನುಸಿಪಿಐ(ಎಂ) ಕೇಂದ್ರ ಸಮಿತಿಯ ಕಚೇರಿ ಎ.ಕೆ.ಗೋಪಾಲನ್ ಭವನದಲ್ಲಿ ಇಡಲಾಗುವುದು. ನಂತರ ದೇಹವನ್ನು ಏಮ್ಸ್‍ಗೆ ಒಯ್ದು ಯೆಚುರಿಯವರ ಇಚ್ಛೆಯಂತೆ ವೈದ್ಯಕೀಯ ಸಂಶೋಧನೆಗೆ ದಾನವಾಗಿ ನೀಡಲಾಗುವುದು ಎಂದು ಸಿಪಿಐ(ಎಂ) ಹೇಳಿದೆ.
ಈ ಸಂದರ್ಭದಲ್ಲಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಶ್ರದ್ಧಾಂಜಲಿ ಹೇಳಿಕೆಯಲ್ಲಿ ಸೀತಾರಾಮ್ ಯೆಚೂರಿಯವರ ನಿಧನಕ್ಕೆ ತನ್ನ ಆಳವಾದ ದುಃಖವನ್ನು ವ್ಯಕ್ತಪಡಿಸುತ್ತ ಅವರು ಸಿಪಿಐ(ಎಂ)ನ ಅತ್ಯುನ್ನತ ನಾಯಕರಾಗಿದ್ದರು, ಎಡ ಪಂಥೀಯ ಚಳುವಳಿಯ ಒಬ್ಬ ಅತ್ಯುತ್ತಮ ನಾಯಕ ಮತ್ತು ಸುಪ್ರಸಿದ್ಧ ಮಾರ್ಕ್ಸ್ವಾದಿ ಸಿದ್ಧಾಂತಿಯಾಗಿದ್ದರು ಎಂದು ವರ್ಣಿಸಿದೆ.
ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿನ್ನು ಪ್ರಥಮ ದರ್ಜೆಯಲ್ಲಿ ಗಳಿಸಿದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. 1974 ರಲ್ಲಿ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಚಳುವಳಿಗೆ ಸೇರಿದರು ಮತ್ತು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ(ಎಸ್ ಎಫ್ ಐ)ದ ಒಬ್ಬ ನಾಯಕರಾದರು ಅವರು ಜೆಎನ್ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಎರಡು ವರ್ಷಗಳ ಅವಧಿಯಲ್ಲಿ ಮೂರು ಬಾರಿ ಆಯ್ಕೆಯಾದರು. 1984 ರಿಂದ 1986 ರ ವರೆಗೆ ಎಸ್ ಎಫ್ ಐ ನ ಅಖಿಲ ಭಾರತ ಅಧ್ಯಕ್ಷರಾಗಿದ್ದ ಅವರು ವಿದ್ಯಾರ್ಥಿ ಸಂಘಟನೆಯನ್ನು ಒಂದು ಅಖಿಲ ಭಾರತ ಶಕ್ತಿಯಾಗಿ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸೀತಾರಾಮ್ ಯೆಚೂರಿ 1975 ರಲ್ಲಿ ಸಿಪಿಐ(ಎಂ) ಸೇರಿದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಜಕೀಯ ಚಟುವಟಿಕೆಗಳಿಗಾಗಿ ಅವರನ್ನು ಬಂಧಿಸಲಾಯಿತು. ಅವರು 1985 ರಲ್ಲಿ 12 ನೇ ಮಹಾಧಿವೇಶನದಲ್ಲಿ ಪಕ್ಷದ ಕೇಂದ್ರ ಸಮಿತಿಗೆ ಆಯ್ಕೆಯಾದರು ಮತ್ತು ಇದುವರೆಗೂ ಕೇಂದ್ರ ಸಮಿತಿಯಲ್ಲಿದ್ದರು. 1989 ರಲ್ಲಿ ಅವರು ಕೇಂದ್ರ ಕಾರ್ಯದರ್ಶಿ ಮಂಡಳಿಗೆ ಮತ್ತು 1992 ರಲ್ಲಿ ಪಕ್ಷದ 14 ನೇ ಮಹಾಧಿವೇಶನದಲ್ಲಿ ಪೊಲಿಟ್ ಬ್ಯೂರೋಗೆ ಆಯ್ಕೆಯಾದರು.
ಅವರು 2015 ರಲ್ಲಿ 21 ನೇ ಮಹಾಧಿವೇಶನದಲ್ಲಿ ಸಿಪಿಐ(ಎಂ) ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು, ಈ ಸ್ಥಾನದಲ್ಲಿ ಅವರು ಇಲ್ಲಿಯವರೆಗೂ ಮುಂದುವರೆದಿದ್ದರು. ಮೂರು ದಶಕಗಳ ಕಾಲ ಪಕ್ಷದ ಕೇಂದ್ರದಲ್ಲಿ ನಾಯಕತ್ವ ತಂಡದ ಭಾಗವಾಗಿ, ಕಾಲಕಾಲಕ್ಕೆ ಪಕ್ಷದ ರಾಜಕೀಯ ನಿಲುವುಗಳನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಸೀತಾರಾಂ ಒಂದು ವಿಶಿಷ್ಟ ಪಾತ್ರ ವಹಿಸಿದ್ದು ವೈಚಾರಿಕ ಕ್ಷೇತ್ರದಲ್ಲಿ . ಪಕ್ಷವು 14 ನೇ ಮಹಾಧಿವೇಶನದಲ್ಲಿ “ಕೆಲವು ಸೈದ್ಧಾಂತಿಕ ಪ್ರಶ್ನೆಗಳ ಕುರಿತು” ನಿರ್ಣಯವನ್ನು ಅಂಗೀಕರಿಸಿತು, ಇದು ಸಮಾಜವಾದದಕ್ಕಾದ ಹಿನ್ನಡೆಯ ಸಂದರ್ಭದಲ್ಲಿ ಪಕ್ಷದ ಸೈದ್ಧಾಂತಿಕ ನಿಲುವುಗಳನ್ನು ರೂಪಿಸಿತು. ಈ ನಿರ್ಣಯವನ್ನು ಕಾಮ್ರೇಡ್ ಸೀತಾರಾಂ ಅವರು ಮಹಾಧಿವೇಶನದಲ್ಲಿ ಮಂಡಿಸಿದರು. ತರುವಾಯ, 2012 ರಲ್ಲಿ ಪಕ್ಷದ 20 ನೇ ಮಹಾಧಿವೇಶನದಲ್ಲಿ ಅಂಗೀಕರಿಸಿದ ಸೈದ್ಧಾಂತಿಕ ನಿಲುವುಗಳನ್ನು ಸಮಕಾಲಿಕಗೊಳಿಸಿದ ನಿರ್ಣಯವನ್ನು ಪ್ರಧಾನ ವಾಗಿ ಮಂಡಿಸಿದವರು ಅವರೇ ಎಂದು ಅವರ ಸೈದ್ಧಾಂತಿಕ ಕೊಡುಗೆಗಳನ್ನು ಪೊಲಿಟ್ ಬ್ಯುರೊ ನೆನಪಿಸಿದೆ.
ಕೇಂದ್ರ ಸಮಿತಿಯ ಅಂತರರಾಷ್ಟ್ರೀಯ ವಿಭಾಗದ ಮುಖ್ಯಸ್ಥರಾಗಿ, ಅವರು ಕಮ್ಯುನಿಸ್ಟ್ ಮತ್ತು ಪ್ರಗತಿಪರ ಶಕ್ತಿಗಳ ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾಗವಹಿಸಿದರು ಮತ್ತು ಸಮಾಜವಾದಿ ದೇಶಗಳೊಂದಿಗೆ ಸಂಬಂಧಗಳನ್ನು ಹಾಗೂ ಸಾಮ್ರಾಜ್ಯಶಾಹಿ ವಿರೋಧಿ ಚಳುವಳಿಗಳೊಂದಿಗೆ ಸೌಹಾರ್ದವನ್ನು ಬಲಪಡಿಸಿದರು.
ಸೀತಾರಾಮ್ ಯೆಚೂರಿ ಅವರು ಎರಡು ದಶಕಗಳ ಕಾಲ ಪಕ್ಷದ ವಾರಪತ್ರಿಕೆ ‘ಪೀಪಲ್ಸ್ ಡೆಮಾಕ್ರಸಿ’ಯ ಸಂಪಾದಕರಾಗಿದ್ದರು. ಅವರು ಸಮೃದ್ಧ ಬರಹಗಾರರೂ ಆಗಿದ್ದರು. ಸೈದ್ಧಾಂತಿಕ ಕ್ಷೇತ್ರದಲ್ಲಿ ಅವರ ಇನ್ನೊಂದು ಮುಖ್ಯ ಕೊಡುಗೆಯೆಂದರೆ ಹಿಂದುತ್ವದ ವಿಮರ್ಶೆ, ಇದು ಅವರ “ಹಿಂದೂ ರಾಷ್ಟ್ರ‘ ಎಂದರೇನು?” ಮತ್ತು “ಕೋಮುವಾದ vs ಸೆಕ್ಯುಲರಿಸಂ” ಪುಸ್ತಕಗಳಲ್ಲಿ ಪ್ರಕಟವಾಯಿತು.
2005 ರಿಂದ 2017 ರವರೆಗೆ ಎರಡು ಅವಧಿಗೆ ರಾಜ್ಯಸಭೆಯ ಸದಸ್ಯರಾಗಿದ್ದ ಸೀತಾರಾಮ್ ಯೆಚೂರಿ ಸಿಪಿಐ(ಎಂ) ಗುಂಪಿನ ನಾಯಕರಾಗಿ ಸೇವೆ ಸಲ್ಲಿಸಿದರು ಮತ್ತು ಒಬ್ಬ ಪರಿಣಾಮಕಾರಿ ಸಂಸದರಾಗಿದ್ದರು. ಅವರಿಗೆ 2017 ರಲ್ಲಿ ಅತ್ಯುತ್ತಮ ಸಂಸದ ಪ್ರಶಸ್ತಿ ನೀಡಲಾಯಿತು.
ಇತ್ತೀಚಿನ ಅವಧಿಯಲ್ಲಿ, ಸೀತಾರಾಂ ಯೆಚೂರಿ ಜಾತ್ಯತೀತ ವಿರೋಧ ಪಕ್ಷಗಳ ವಿಶಾಲ ಏಕತೆಯನ್ನು ರೂಪಿಸಲು ಸಾಕಷ್ಟು ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಿದರು, ಅದು ‘ಇಂಡಿಯ’ಬಣದ ಸ್ವರೂಪವನ್ನು ಪಡೆದುಕೊಂಡಿತು. ಸಿಪಿಐ(ಎಂ) ಬೆಂಬಲಿಸುತ್ತಿದ್ದ ಸಂಯುಕ್ತ ರಂಗ ಸರ್ಕಾರದ ಅವಧಿಯಲ್ಲಿ ಮತ್ತು ನಂತರದ ಯುಪಿಎ ಸರ್ಕಾರದ ಅವಧಿಯಲ್ಲಿ, ನಡೆದ ಸಂವಾದಗಳಲ್ಲಿ ಸಿಪಿಐ(ಎಂ) ಪರವಾಗಿ ಪ್ರಮುಖವಾಗಿ ಭಾಗವಹಿಸುತ್ತಿದ್ದವರಲ್ಲಿ ಸೀತಾರಾಮ್ ಒಬ್ಬರು.
ಅವರ ಸ್ನೇಹಪರ ಮನೋಧರ್ಮದಿಂದಾಗಿ, ಅವರು ಎಲ್ಲ ಬಣ್ಣಗಳ ರಾಜಕೀಯ ವಲಯಗಳಲ್ಲಿ ವ್ಯಾಪಕವಾದ ಸ್ನೇಹಿತ-ವಲಯವನ್ನು ಹೊಂದಿದ್ದರು. ಅವರ ರಾಜಕೀಯ ಸಮಗ್ರತೆ ಮತ್ತು ಬದ್ಧತೆಗಾಗಿ ಅವರನ್ನು ಎಲ್ಲರೂ ಗೌರವಿಸುತ್ತಿದ್ದರು ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ನಮ್ಮ ರಾಷ್ಟ್ರ ರಾಜಕಾರಣದ ಈ ನಿರ್ಣಾಯಕ ಘಟ್ಟದಲ್ಲಿ ಸೀತಾರಾಮ್ ಯೆಚೂರಿಯವರ ಅಕಾಲಿಕ ನಿಧನವು ಸಿಪಿಐ(ಎಂ)ಗೆ ದೊಡ್ಡ ಏಟು ಮತ್ತು ಎಡ, ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಶಕ್ತಿಗಳಿಗೆ ದುರ್ಭರ ನಷ್ಟವಾಗಿದೆ ಎಂದು ಹೇಳಿದೆ.
ಪಕ್ಷದ ಎಲ್ಲ ಕಾರ್ಯಕರ್ತರು ಒಟ್ಟುಗೂಡಿ ಒಂದು ಶೋಷಣಾ–ಮುಕ್ತ ಸಮಾಜಕ್ಕಾಗಿ ಹೋರಾಟವನ್ನು ಮುಂದೊಯ್ಯಲು ಇನ್ನಷ್ಟು ಕಠಿಣವಾಗಿ ಶ್ರಮಿಸಬೇಕು ಎಂದು ಕರೆ ನೀಡುತ್ತ ಪೊಲಿಟ್ ಬ್ಯೂರೋ ಇದು ಅವರಿಗೆ ಸಲ್ಲಿಸಬಹುದಾದ ಅತ್ಯುತ್ತಮ ಶ್ರದ್ಧಾಂಜಲಿ ಎಂದಿದೆ.
ಅವರ ಪತ್ನಿ ಸೀಮಾ, ಪುತ್ರಿ ಅಖಿಲಾ, ಪುತ್ರ ದಾನಿಶ್, ಸಹೋದರ ಶಂಕರ್ ಮತ್ತು ಕುಟುಂಬದ ಇತರ ಎಲ್ಲ ಸದಸ್ಯರಿಗೆ ಪೊಲಿಟ್ ಬ್ಯೂರೋ ತನ್ನ ಆಳವಾದ ಸಹಾನುಭೂತಿ ಮತ್ತು ಸಂತಾಪವನ್ನು ವ್ಯಕ್ತಪಡಿಸಿದೆ.