ಕೇರಳದಲ್ಲೂ, ಅದೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಪ್ರಕ್ರಿಯೆಯ ನಡುವೆಯೇ ಎಸ್ಐಆರ್ ಪ್ರಕ್ರಿಯೆ ಆರಂಭವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ಕರ್ತವ್ಯದಲ್ಲಿರುವವರು ಸಹ ಎಸ್ಐಆರ್ ಪ್ರಕ್ರಿಯೆಯ ಭಾಗವಾಗಿರುವುದು ಆಡಳಿತಾತ್ಮಕ ಅಡಚಣೆಗೆ ಕಾರಣವಾಗುತ್ತದೆ. ಒತ್ತಡದ ಕಾರಣದಿಂದ ಕೇರಳದಲ್ಲಿ ಒಬ್ಬರು, ಬಿಎಲ್ಒ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್ಐಆರ್ ನಡೆಯುತ್ತಿರುವ ತರೆಡೆಗಳಿಂದಲೂ ಕೆಲಸದ ತ್ತಡದ ವರದಿಗಳು ಬರುತ್ತಿವೆ. ರಾಜಸ್ಥಾನದಲ್ಲಿಯೂ ಒಬ್ಬರು ಬಿಎಲ್ಒ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಕುಸಿದು ಬಿದ್ದ ಪ್ರಕರಣಗಳು ಕೆಲವು ರಾಜ್ಯಗಳಿಂದ ವರದಿಯಾಗಿವೆ.
-ಸಿ. ಸಿದ್ದಯ್ಯ
ವಿಧಾನಸಭಾ ಚುನಾವಣೆಗೂ ಮುನ್ನ ಬಿಹಾರದಲ್ಲಿ ತರಾತುರಿಯಲ್ಲಿ ಆರಂಭಿಸಲಾದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕೇರಳದಲ್ಲೂ ಆರಂಭವಾಗಿದೆ. ಇದು ಬಿಹಾರದಂತೆಯೇ ಕೇರಳದಲ್ಲಿ ಕೂಡ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಕೇರಳದ ಜೊತೆಗೆ SIR ಅನ್ನು ಜಾರಿಗೊಳಿಸುತ್ತಿರುವ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 12 ರಾಜ್ಯಗಳಿಂದ ಕೆಟ್ಟ ಸುದ್ದಿ ಬರುತ್ತಿದೆ. ಅಂತಹ ಕೆಟ್ಟ ಸುದ್ದಿಗಳಲ್ಲೊಂದು ಪಯ್ಯನ್ನೂರಿನ ಕಂಕೋಲ್-ಆಲಪ್ಪಡಂಪ್ ಪಂಚಾಯತ್‌ನ ಎಟ್ಟುಕುಡುಕ್ಕ 18 ನೇ ಬೂತ್ ನ ಬೂತ್ ಮಟ್ಟದ ಅಧಿಕಾರಿ(ಬಿಎಲ್ಒ) 44 ವರ್ಷದ ಅನೀಶ್ ಜಾರ್ಜ್ ಅವರ ಆತ್ಮಹತ್ಯೆ. ಕುನ್ನಾರು AUP ಶಾಲೆಯ ಕಚೇರಿ ಪರಿಚಾರಕ ನವೆಂಬರ್ 16 ರ ಬೆಳಿಗ್ಗೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಅನೀಶ್ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಕಣ್ಣೂರು ಜಿಲ್ಲಾಧಿಕಾರಿ ತಮ್ಮ ಮೇಲಧಿಕಾರಿಗಳಿಗೆ ವರದಿ ಮಾಡಿದರೂ, ಅವರ ಮೇಲಧಿಕಾರಿಗಳು ಹೇರಿದ ಒತ್ತಡದ ಪುರಾವೆಗಳನ್ನು ಮಾಧ್ಯಮಗಳು ಬಿಡುಗಡೆ ಮಾಡಿದವು.
ಬಿಎಲ್‌ಒಗಳ ಪ್ರತಿಭಟನೆ
ಇದರಿಂದಾಗಿ ಕೇರಳದ ಬಿಎಲ್ಒಗಳು ಒಂದು ದಿನದ ಕೆಲಸ ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಬಿಎಲ್‌ಒಗಳು ನವೆಂಬರ್ 17ರಂದು ಕರ್ತವ್ಯ ಬಹಿಷ್ಕರಿಸಿದ್ದರೆ, ಕಾಸರಗೋಡಿನಲ್ಲಿ ಮತ್ತೊಬ್ಬ ಅಧಿಕಾರಿ ಕ್ಷೇತ್ರಕಾರ್ಯದಲ್ಲಿ ತೊಡಗಿಕೊಂಡಿದ್ದಾಗ ಕುಸಿದು ಬಿದ್ದರು. ಕಾನ್ಹಂಗಾಡ್ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 124 ರ ಬಿಎಲ್‌ಒ ಆಗಿಯೂ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಶ್ರೀಜಾ ಎಂ (45) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಗೆ ಸಂಬಂಧಿಸಿದ ಮನೆ ಭೇಟಿಯ ಸಮಯದಲ್ಲಿ ಕುಸಿದು ಬಿದ್ದರು.
ಇದನ್ನೂ ಓದಿ: ವಿಶ್ವಕಪ್ ಗೆದ್ದ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಿಗೆ ಸರ್ಕಾರಿ ಉದ್ಯೋಗ!
ಕೇರಳ ಮಾಧ್ಯಮಗಳು ಅನೀಶ್ ಜಾರ್ಜ್ ಅವರನ್ನು SIR ನ ಮೊದಲ ಹುತಾತ್ಮ ಎಂದು ಬಣ್ಣಿಸಿವೆ. ಚುನಾವಣಾ ಆಯೋಗದ ಅತಿಯಾದ ವರ್ತನೆ ಮತ್ತು ಅಮಾನವೀಯತೆಯಿಂದ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಕೆಲವು ಪತ್ರಿಕೆಗಳು ತಮ್ಮ ಸಂಪಾದಕೀಯಗಳಲ್ಲಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಅಪರಾಧಿಕ ಮುಖವೇ ಇದಕ್ಕೆ ಕಾರಣ ಎಂದು ಚುನಾವಣಾ ಆಯೋಗವನ್ನು ದೂಷಿಸಿವೆ. ಆದರೆ, ಅದೇಕೋ ಕೇಂದ್ರ ಸರ್ಕಾರದ ವಿಭಜಕ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುತ್ತಿರುವ ಚುನಾವಣಾ ಆಯೋಗವನ್ನು ಹೊಣೆಗಾರರನ್ನಾಗಿ ಮಾಡುವ ಕಲ್ಪನೆಯನ್ನು ಕೇರಳದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸಿನ
ನಾಯಕರು ಇಷ್ಟಪಡುವುದಿಲ್ಲ. ಕಾಂಗ್ರೆಸ್ ಪಕ್ಷದ ವಿ.ಡಿ. ಸತೀಶನ್ ಬಿಎಲ್ಒ ಆತ್ಮಹತ್ಯೆಗೆ ಅವರನ್ನೇ ದೂಷಿಸುವ ಮೂಲಕ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಮೋದಿ-ಅಮಿತ್ ಶಾ ಮೈತ್ರಿಕೂಟವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಸಹಜವಾಗಿ ಎದ್ದಿದೆ.
ಕೇರಳದಲ್ಲಿ ಮಾತ್ರವಲ್ಲದೆ, ಎಸ್ಐಆರ್ ಅನ್ನು ಜಾರಿಗೆ ತರಲಾಗುತ್ತಿರುವ ರಾಜಸ್ಥಾನದಲ್ಲಿಯೂ ಸಹ, ಶಾಲಾ ಶಿಕ್ಷಕನೊಬ್ಬ ಒತ್ತಡ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡರು. ಪಶ್ಚಿಮ ಬಂಗಾಳದಲ್ಲಿ ಇಬ್ಬರು ಬಿಎಲ್‌ಒಗಳು ಸಹ ಕುಸಿದು ಬಿದ್ದರು. ಅಧಿಕಾರಿಗಳಿಗೆ ಸಾಕಷ್ಟು ಸಮಯ ನೀಡದೆ ಎಸ್ ಐಆರ್ ಅನ್ನು ತರಾತುರಿಯಲ್ಲಿ ಜಾರಿಗೆ ತರಲಾಗುತ್ತಿದೆ, ಇದು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂಬುದನ್ನು ಇವೆಲ್ಲವೂ ಸೂಚಿಸುತ್ತವೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಮಯದಲ್ಲಿ!
ಮತದಾರರ ಪಟ್ಟಿಯನ್ನು ತೀವ್ರ ಪರಿಶೀಲನೆಗೆ ಒಳಪಡಿಸುವುದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ, ಅದನ್ನು ತರಾತುರಿಯಲ್ಲಿ ಜಾರಿಗೆ ತರುವುದನ್ನು ವಿರೋಧ ಪಕ್ಷಗಳು ವಿರೋಧಿಸುತ್ತಿವೆ. ಕೇರಳದ ಪ್ರಕರಣವನ್ನೇ ತೆಗೆದುಕೊಳ್ಳೋಣ. ರಾಜ್ಯವು ಚುನಾವಣೆಯ ಸಮಯದಲ್ಲಿದೆ. ಹೆಚ್ಚಿನ ಸಂಖ್ಯೆಯ ಜನರು ನೇರವಾಗಿ ಭಾಗವಹಿಸುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಡಿಸೆಂಬರ್ 9 ಮತ್ತು 11 ರಂದು ನಡೆಯುತ್ತಿವೆ. ಪ್ರಚಾರ ಮತ್ತು ಚುನಾವಣೆಯ ಸಿದ್ಧತೆಗಳನ್ನು ನಡೆಸುತ್ತಿರುವಾಗ ಈ ಎಸ್‌ಐಆರ್ ಅನ್ನು ನಡೆಸಲಾಗುತ್ತಿದೆ. ಇದಲ್ಲದೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ಕೇರಳ ವಿಧಾನಸಭಾ ಚುನಾವಣೆಗೆ ಹೋಗುತ್ತದೆ.
ಎಸ್‌ಐಆರ್ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ಒತ್ತಾಯಿಸಿ ಕೇರಳ ವಿಧಾನಸಭೆ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತು. ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಒಂದಕ್ಕಿಂತ ಹೆಚ್ಚು ಬಾರಿ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ, ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಮಯದಲ್ಲಿ ಎಸ್‌ಐಆರ್ ನಡೆಸಬಾರದು ಎಂದು ಒತ್ತಾಯಿಸಿದವು. ಸ್ಥಳೀಯ ಸಂಸ್ಥೆಗಳ ಚುನಾವಣಾ ಕರ್ತವ್ಯದಲ್ಲಿರುವವರು ಸಹ ಎಸ್ಐಆರ್ ಪ್ರಕ್ರಿಯೆಯ ಭಾಗವಾಗಿದ್ದಾರೆ. ಸ್ವಾಭಾವಿಕವಾಗಿ, ಈ ಅಧಿಕಾರಿಗಳು ಚುನಾವಣಾ ಕರ್ತವ್ಯ ಮತ್ತು ಎಸ್ ಐಆರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದು ಆಡಳಿತಾತ್ಮಕ ಅಡಚಣೆಗೆ ಕಾರಣವಾಗುತ್ತದೆ. ಇದನ್ನು ಸೂಚಿಸಿ, ರಾಜ್ಯ ಸರ್ಕಾರವು ಎಸ್ಐಆರ್ ಮುಂದೂಡುವಂತೆ ಕೋರಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದೆ. ಈ ಅರ್ಜಿಯನ್ನು ನವೆಂಬರ್ 28ರಂದು ಪರಿಗಣಿಸುವ ನಿರೀಕ್ಷೆಯಿದೆ.
ಸುಪ್ರೀಂ ಕೋರ್ಟ್ ಮೊರೆ ಹೋದ ಸಿಪಿಐ(ಎಂ)
ಸಿಪಿಐ(ಎಂ) ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದಾಗಿ ಮಹಾರಾಷ್ಟ್ರದಲ್ಲಿ ಎಸ್‌ಐಆರ್ ಅನ್ನು ಮುಂದೂಡಲು ಸಿದ್ಧವಾಗಿದ್ದ ಚುನಾವಣಾ ಆಯೋಗವು ಕೇರಳದಲ್ಲಿ ಹಾಗೆ ಮಾಡದಿರಲು ಯಾವ ಸಮರ್ಥನೆ ಇದೆ ಎಂದು ಕೇಳಲಾಗುತ್ತಿದೆ. ಇದಲ್ಲದೆ, ಕರಡು ಪಟ್ಟಿಯನ್ನು ಡಿಸೆಂಬರ್ 9 ರಂದು, ಕೇರಳದಲ್ಲಿ ಮೊದಲ ಹಂತದ ಮತದಾನದ ದಿನದಂದು ಪ್ರಕಟಿಸಲು ಆಯೋಗವು ದೃಢನಿಶ್ಚಯ ಮಾಡಿದಂತಿದೆ. ಚುನಾವಣಾ ಆಯೋಗ ಬಿಜೆಪಿ ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ, ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಪರಿಶೀಲಿಸಲು ಅದು ಮುಂದಾಗುತ್ತಿಲ್ಲ ಎಂಬ ಆರೋಪವನ್ನು ಎದುರಿಸುತ್ತಿದೆ. ಆಯೋಗದ ಇಂತಹ ನಡೆ ಪ್ರಜಾಪ್ರಭುತ್ವ ವಿರೋಧಿ ವಿಧಾನ ಮಾತ್ರವಲ್ಲ, ಅಮಾನವೀಯ ವಿಧಾನವೂ ಆಗಿದೆ. ರಾಜಕೀಯ ಪಕ್ಷಗಳ ಭಾವನೆಗಳನ್ನು ಗೌರವಿಸಲು ಸಾಮುಂದಾಗದ ಆಯೋಗವು ಪ್ರಜಾಪ್ರಭುತ್ವಕ್ಕೆ ಭೂಷಣವಲ್ಲ.
ಎಸ್‌ಐಆರ್ ಪ್ರಕ್ರಿಯೆಯಿಂದ ಅಧಿಕಾರಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದಡೆ ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬುದನ್ನು ಬಿಹಾರ ಸಾಬೀತುಪಡಿಸಿದೆ. ಬಿಹಾರದಲ್ಲಿ ಸುಮಾರು 68 ಲಕ್ಷ ಜನರ ಮತಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರ ಅಂದಾಜಿನ ಪ್ರಕಾರ, 80 ಲಕ್ಷ ಜನರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಮಹಿಳೆಯರು, ದುರ್ಬಲ ವರ್ಗಗಳು ಮತ್ತು ಅಲ್ಪಸಂಖ್ಯಾತರು. ಪಶ್ಚಿಮ ಬಂಗಾಳ ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ವಿಧಾನವನ್ನು ಪುನರಾವರ್ತಿಸಲು ಎಸ್ಐಆರ್ ಅನ್ನು ತರಾತುರಿಯಲ್ಲಿ ಜಾರಿಗೆ ತರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್‍ಐಆರ್ ನ ನಿಜವಾದ ಗುರಿ ವಿರೋಧ ಪಕ್ಷಗಳ ಸರ್ಕಾರಗಳೇ ಎಂಬ ವಿಶ್ಲೇಷಣೆಯನ್ನು ತಳ್ಳಿಹಾಕಲಾಗುವುದಿಲ್ಲ.
‘ರಾಷ್ಟ್ರೀಯ ಪೌರತ್ವ ನೋಂದಣಿ’ ಜಾರಿಗೆ ತರುವ ಪ್ರಯತ್ನ
1950 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 21 ರ ಪ್ರಕಾರ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕು ಮತ್ತು ಪರಿಷ್ಕರಿಸಬೇಕು. ಮಾಜಿ ಲೋಕಸಭಾ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ಬರೆದಂತೆ, ಮತದಾರರ ಪಟ್ಟಿಯ ಸಂಪೂರ್ಣ ಪರಿಶೀಲನೆಯು ಸಮಗ್ರ ಮತ್ತು ಸಮಯ ತೆಗೆದುಕೊಳ್ಳುವ ಕಾರ್ಯಕ್ರಮವಾಗಿದೆ. ಆದ್ದರಿಂದ ಚುನಾವಣೆಗಳೊಂದಿಗೆ ಅದನ್ನು ಜೋಡಿಸದೆ, ಸಾರ್ವತ್ರಿಕ ಚುನಾವಣೆಗಳು ಇಲ್ಲದ ವರ್ಷಗಳಲ್ಲಿ ಇದನ್ನು ನಡೆಸಬೇಕು. ಆಯೋಗವು ಇವುಗಳಲ್ಲಿ ಯಾವುದನ್ನೂ ಗೌರವಿಸದೆ, ಜನರ ಅಭಿಪ್ರಾಯಗಳನ್ನು ಮತ್ತು ಶಾಸಕಾಂಗ ಸಭೆಯ ಬೇಡಿಕೆಯನ್ನೂ ಪರಿಗಣಿಸದೆ ಎಸ್ಐಆರ್ ಅನ್ನು ಜಾರಿಗೊಳಿಸುತ್ತಿದೆ. ಇದರ ಮೂಲಕ, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಹಿಂದೆ ಜಾರಿಗೆ ತರಲು ಯೋಜಿಸಿದ್ದ ಮತ್ತು ಭಾರಿ ಪ್ರತಿಭಟನೆಯ ನಂತರ ಮುಂದೂಡಬೇಕಾದ ರಾಷ್ಟ್ರೀಯ ಪೌರತ್ವನೋಂದಣಿ(ಎನ್ ಆರ್ ಸಿ))ಯನ್ನು ಚುನಾವಣಾ ಆಯೋಗವನ್ನು ಬಳಸಿಕೊಂಡು ಜಾರಿಗೆ ತರಲು ಪ್ರಯತ್ನಿಸುತ್ತಿರುವಂತಿದೆ.
ಎಸ್ಐಆರ್ ಗಾಗಿ ಆಯೋಗವು ನೀಡಿದ ಗುರುತಿನ ಚೀಟಿ, ಪಡಿತರ ಚೀಟಿ, ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಅನ್ನು ಸ್ವೀಕರಿಸಲು ಆಯೋಗ ಸಿದ್ಧರಿರಲಿಲ್ಲ. ತಾನೇ ನೀಡಿದ ಕಾರ್ಡ್ ಬಗ್ಗೆ ಸಹ ಏಕೆ ಅದಕ್ಕೆ ಅಪನಂಬಿಕೆ ಎಂಬುದು ಅರ್ಥವಾಗುತ್ತಿಲ್ಲ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ 12 ನೇ ದಾಖಲೆಯಾಗಿ ಸೇರಿಸಿದ ನಂತರವೂ, ಪೌರತ್ವವನ್ನು ಸಾಬೀತುಪಡಿಸಲು ಆಧಾರ್ ಕಾರ್ಡ್ ಅನ್ನು ಬಳಸಲಾಗುವುದಿಲ್ಲ ಎಂದು ಆಯೋಗವು ಪದೇ ಪದೇ ವಾದಿಸುತ್ತಿರುವುದು ಏಕೆ? 2002 ರ ಮತದಾರರ ಪಟ್ಟಿಯಲ್ಲಿ ಮತದಾರರ ಅಥವಾ ಅವರ ಪೋಷಕರ ಹೆಸರು ಇದ್ದರೆ ಮಾತ್ರ ಎಸ್ಐಆರ್ ಅವಶ್ಯಕತೆಯನ್ನು ಪೂರೈಸಬಹುದು ಎಂದು ಹೇಳುವುದರ ಅರ್ಥವೇನು? 2002ರ ನಂತರ ನಡೆದ ಐದು ಲೋಕಸಭಾ ಚುನಾವಣೆಗಳು ಮತ್ತು ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಮತ ಚಲಾಯಿಸಿದ ಮತದಾರನನ್ನು 2002 ರ ಮತದಾರರ ಪಟ್ಟಿಯಲ್ಲಿ ಮತದಾರರೆಂದು ಹೇಗೆ ಪರಿಗಣಿಸಬಹುದು? 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಸಿದ್ಧಪಡಿಸಲಾದ ಮತದಾರರ ಪಟ್ಟಿಯನ್ನು ಏಕೆ ಆಧಾರವಾಗಿ ಬಳಸಲಾಗಿಲ್ಲ – ಆಯೋಗವು ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.
ಸಂವಿಧಾನದ 326 ನೇ ವಿಧಿಯ ಪ್ರಕಾರ, ಮತದಾರರು ಭಾರತೀಯ ನಾಗರಿಕರಾಗಿರಬೇಕು. ಆದರೆ, ನಾಗರಿಕರು ಯಾರು ಎಂಬುದನ್ನು ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ ದು ಸರ್ವೋಚ್ಚ ನ್ಯಾಯಾಲಯವೂ ಸೂಚಿಸಿದೆ.ಪೌರತ್ವವನ್ನು ನೋಂದಾಯಿಸುವ ಮತ್ತು ಅದನ್ನು ಪರಿಶೀಲಿಸುವ ಅಧಿಕಾರ ಕೇಂದ್ರ ಗೃಹ ಸಚಿವಾಲಯದ ಬಳಿ ಇದೆ. ಈ ಕಾರ್ಯವನ್ನು ಚುನಾವಣಾ ಆಯೋಗ ಏಕೆ ವಹಿಸಿಕೊಳ್ಳುತ್ತಿದೆ? ಚುನಾವಣಾ ಆಯೋಗ ಮತ್ತು ಗೃಹ ಸಚಿವಾಲಯದ ಇಂತಹ ನಡೆಗಳು ಅನುಮಾನಕ್ಕೆ ಕಾರಣವಾಗಿವೆ.
ಇದನ್ನೂ ನೋಡಿ: ನಾಟಕ| ಸಂಪತ್ತಿಗೆ ಸವಾಲ್ | ಮೀಡಿಯಾ ಕ್ಲಬ್ ಕೊಪ್ಪಳ |ಪಿ.ಬಿ. ಧುತ್ತರಗಿ Janashakthi Media
